ಸೋಮವಾರ, ಡಿಸೆಂಬರ್ 2, 2013

ಕೀರ್ತಿಪುರದ ಬಾಘ ಭೈರವ ಮಂದಿರ

ಭೈರವನ ವಿವಿಧ ರೂಪಗಳ ಚಿತ್ರಣ 

ಈ ದೇವಾಲಯದ ಹೆಸರನ್ನು ನನ್ನ ಹಿಂದಿನ ಲೇಖನಗಳಲ್ಲಿ ಭಗ ಭೈರವನೆಂದು ಪ್ರಸ್ತಾಪಿಸಿದ್ದೇನೆ. ಆದರೆ ಆ ಪ್ರಯೋಗ ತಪ್ಪು ಎಂದು ತಿಳಿದುದು ಇತ್ತೀಚೆಗೆ. ಅಂತರಜಾಲದಲ್ಲಿ ಲೇಖನವೊಂದನ್ನು ಓದುತ್ತಿದ್ದಾಗ ದೊರೆತ ಮಾಹಿತಿಗಳನ್ನು ನಿಮ್ಮ ಓದಿಗೆಂದು ಇಲ್ಲಿ ನೀಡಿದ್ದೇನೆ. ತುಂಬ ಆಸಕ್ತಿಕರ ಮತ್ತು ಐತಿಹಾಸಿಕ ಅಂಶಗಳನ್ನು ಒಳಗೊಂಡಿರುವ ಈ ಭಾಗ ನಿಮಗೆ ಇಷ್ಟವಾದೀತೆಂದು ಭಾವಿಸುತ್ತೇನೆ.


ವ್ಯಾಘ್ರ ಭೈರವ 
ಭಗ ಭೈರವನೆಂಬ ಪ್ರಯೋಗ ತಪ್ಪು ಏಕೆಂದರೆ, ಇಲ್ಲಿನ ಭೈರವ ಹುಲಿ ಭೈರವ. ಎಂದರೆ ಹಿಂದಿಯಲ್ಲಿ ಬಾಘ್ ಭೈರವ. ಇದು ನೇಪಾಳದ ಕೀರ್ತಿಪುರದಲ್ಲಿದೆ. ಇದು ಅಲ್ಲಿನ ಅತ್ಯಂತ ಪುರಾತನ ಮಂದಿರ. ಇದನ್ನು ಯಾರು, ಯಾವಾಗ, ಯಾವ ಉದ್ದೇಶಕ್ಕೆ ನಿರ್ಮಿಸಿದರೆಂಬ ಬಗ್ಗೆ ಮಾಹಿತಿ ಕಡಿಮೆ. ಆದರೂ ಅಂದಿನ ರಾಜರ ಐತಿಹಾಸಿಕ ವಂಶಾವಳಿಗಳನ್ನು ಅವಲೋಕಿಸಿದರೆ, ಕೀರ್ತಿಪುರದ ಅರಸು ಗೋಪಾಲರಾಜನ ವಂಶಾವಳಿಯಲ್ಲಿ ಬಂದ ಎರಡನೇ ಶಿವರಾಜನೆನ್ನುವವನು ಇದರ ನಿರ್ಮಾತೃವೆಂದು ಹೇಳಬಹುದು. ಈತನು ಕ್ರಿ.ಶ. ೧೦೯೯ರಿಂದ ೧೧೨೬ರವರೆಗೆ ಆಳ್ವಿಕೆ ನಡೆಸಿದನು. 

ಬಾಘ ಭೈರವ ಮೂರ್ತಿಯು ಶಿಲಾಮೂರ್ತಿಯಲ್ಲ. ಅದು ಜೇಡಿ ಮಣ್ಣಿನಿಂದ ತಯಾರಿಸಿದ್ದು. ಚತುರ್ಮಾನ ದ್ವಾರದ ನಾಗರಿಕನೊಬ್ಬನು, ಕ್ರಿ.ಶ. ೧೯೨೯ರವರೆಗೆ ಆಳಿದ ಚಂದ್ರ ಶುಂಸೇರನ ಆಳ್ವಿಕೆಯ ಕಾಲದಲ್ಲಿ ನೀಡಿದ ಬೆಳ್ಳಿಯ ಕವಚದಿಂದ ಈ ಮುಖವನ್ನು ಅಲಂಕರಿಸಲಾಗುತ್ತದೆ. ಜೇಡಿಯ ಮಣ್ಣಿನ ವಿಗ್ರಹವಾದ್ದರಿಂದ ಇದು ಆಗಾಗ್ಗೆ ವಿರೂಪಗೊಳ್ಳುವುದು ಸಹಜ. ಈ ದೇವನನ್ನು ಹಿಂದೂಗಳು, ಬೌದ್ಧರು ಸಮಾನವಾಗಿ ಆದರಿಸುವುದರಿಂದ, ಇದು ವಿರೂಪಗೊಂಡಾಗ ದುರಸ್ತಿಗೊಳಿಸುತ್ತಾರೆ. ಹೀಗೆ ನಿರ್ಮಿಸುವಾಗ ಇದಕ್ಕೆ ಬೇಕಿರುವ ಜೇಡಿಮಣ್ಣನ್ನು ಪಕನಜೋಗ್ ಸಮೀಪವಿರುವ ತಾಂತ್ರಿಕ ಮಂದಿರಗಳ ಆವರಣದಿಂದ, ನಿಗದಿಪಡಿಸಿದ ಏಳುಸ್ಥಳಗಳಿಂದ ಆಯ್ದುಕೊಳ್ಳಲಾಗುವುದು. ಈ ಪ್ರಕ್ರಿಯೆಯು ಪ್ರತಿ ೨೦ ಅಥವಾ ೩೦ ವರ್ಷಗಳಿಗೆ ಒಂದು ಬಾರಿಯಂತೆ ನಿರಂತರವಾಗಿ ನಡೆದುಬಂದಿದೆ. 

ಬಾಘ ಭೈರವನ ಆರಾಧನೆಯಲ್ಲಿ ಪಂಚ ಮ ಕಾರಗಳಿಗೆ ಮಹತ್ವವಿದೆ. ಅವೆಂದರೆ ಮದ್ಯ, ಮಾನಿನಿ, ಮುದ್ರಾ, ಮೈಥುನ  ಮತ್ತು  ಮಾಂಸ. ಈ ಎಲ್ಲ ನಿವೇದನೆಗಳನ್ನು ಗರ್ಭಗೃಹದಲ್ಲಿ ಮಾಡದೇ, ಪಕ್ಕದಲ್ಲಿ ಇರುವ ಕಿಟಕಿಯ ಪಕ್ಕದ ಬಲಿಪೀಠದಲ್ಲಿ ಮಾಡಲಾಗುವುದು. ಈ  ದೇವಾಲಯದ ಬಾಹ್ಯ ರಚನೆಯು ಬೌದ್ಧವಿಹಾರಗಳನ್ನು ಹೋಲುತ್ತದೆ. ಇದು ಮೂರು ಮಹಡಿಗಳನ್ನು ಒಳಗೊಂಡಿದ್ದು, ಮೊದಲ ಎರಡು ಮಹಡಿಗಳನ್ನು ಸುಟ್ಟ ಹೆಂಚಿನಿಂದ ಮುಚ್ಚಲಾಗಿದ್ದರೆ, ಮೇಲಿನ ಮಾಡು ಲೋಹದ ತಗಡುಗಳಿಂದ ಮುಚ್ಚಲ್ಪಟ್ಟಿದೆ. ಇವುಗಳ ಇಳಿಜಾರಾದ ಮಾಡುಗಳ ಅಂಚಿನಲ್ಲಿ ಅಷ್ಟಭೈರವರು, ಅಷ್ಟಮಾತೃಕೆಯರು ಮತ್ತು ಗರುಡನಾರಾಯಣ ಹಾಗೂ ಅವನ ಸಹವರ್ತಿಗಳ ವಿಗ್ರಹಗಳಿಂದ ಅಲಂಕರಿಸಲಾಗಿದೆ. ಭೈರವನ ಆರಾಧನೆಯಲ್ಲಿ ಎಂಟು ಮತ್ತು ಅದರ ಗುಣಕ ಸಂಖ್ಯೆಗಳಿಗೆ ಪ್ರಾಧಾನ್ಯವಿದೆ.

ನೇಪಾಳ ಕೀರ್ತಿಪುರದ ಬಾಘ್ ಭೈರವ ಮಂದಿರ 

ಈ ದೇವಾಲಯದ ಬಗ್ಗೆ ಐತಿಹಾಸಿಕ ಸಾಕ್ಷ್ಯಾಧಾರಗಳಿರುವುದು ತೀರ ಕಡಿಮೆ. ಇದರ ಜೀರ್ಣೋದ್ಧಾರದ ಮೊದಲ ದಾಖಲೆಯೆಂದರೆ, ಜಗತ್ ಪಾಲ ವರ್ಮನೆಂಬ ಮಹಾಪಾತ್ರರಿಗೆ ಸಂಬಂಧಿಸಿದೆ. ಈ ಶಾಸನದ ಅನ್ವಯ : "  ೬೩೫ನೇ ವರ್ಷದ ಕೃಷ್ಣಪಕ್ಷ ಚತುರ್ಥಿ, ಸೋಮವಾರ, ಪುನರ್ವಸು ನಕ್ಷತ್ರವಿರುವ ಈ ಶುಭದಿನದಂದು, ಸೂರ್ಯನು ಗುರುವಿನ ರಾಶಿಯಲ್ಲಿ ಮತ್ತು ಚಂದ್ರನು ಕರ್ಕಾಟಕ ರಾಶಿಯಲ್ಲಿರುವಾಗ ಈ ವ್ಯಾಘ್ರೇಶ್ವರನ ದೇವಾಲಯದ ಜೀರ್ಣೋದ್ಧಾರ ಕಾರ್ಯವು ನಡೆದುದು. ವೇದೋಕ್ತವಾದ ದಶಕರ್ಮಗಳು, ಪಿಂಡವಹಾರದ ಮುಂದೆ ದೀಪವನ್ನು ಬೆಳಗಲಾಯಿತು. . ಈ ಯಜ್ಞದ ಯಾಜಮಾನ್ಯವನ್ನು ಮಣಿಂಗಲದ ಜಗತ್ಪಾಲ ವರ್ಮ ಮಹಾಪಾತ್ರರು ನಿರ್ವಹಿಸಿದರು". 

೮೭೦ನೇ ಇಸವಿಯ ಮತ್ತೊಂದು ತಾಮ್ರ ಶಾಸನದಲ್ಲಿ, ದೇವಾಲಯದ ಉತ್ತರಭಾಗದ ಕಾಡನ್ನು ಯಾರೂ ಕಡಿಯಬಾರದೆಂದೂ, ಹಾಗೆ ಮಾಡಿದವರಿಗೆ ಹನ್ನೆರಡು ರೂಪಾಯಿಗಳ ದಂಡವನ್ನು ವಿಧಿಸುವ ಬಗ್ಗೆ ಉಲ್ಲೇಖವಿದೆ. ಈ ಮಂದಿರಕ್ಕೆ ಹಲವಾರು ಬಾರಿ ಚಿನ್ನದ ಲೇಪನವುಳ್ಳ ತಗಡುಗಳನ್ನು ಹೊದಿಸಿರುವ ಬಗ್ಗೆ, ಹಿತ್ತಾಳೆ, ತಾಮ್ರದ ಕವಚಗಳನ್ನು ನಗರದ ಅನೇಕ ನಾಗರಿಕರು ಮಾಡಿಸಿಕೊಟ್ಟಿರುವ ಬಗ್ಗೆ ಮಾಹಿತಿಗಳಿವೆ. ೧೯೬೭ರಲ್ಲಿ ಇಲ್ಲಿ ನೆಲಕ್ಕೆ ಹಾಸಿದ್ದ ಲೋಹದ ತಗಡುಗಳನ್ನು ತೆಗೆದು, ಗೋದಾವರೀ ಅಮೃತಶಿಲೆಯನ್ನು ಹಾಸಲಾಗಿರುವುದೇ ಕೊನೆಯ ಜೀರ್ಣೋದ್ಧಾರದ ಕಾರ್ಯ.

ಹುಲಿ ಭೈರವನಿಗೆ ಹುಲಿಗಳೇ ದ್ವಾರಪಾಲಕರು 

ಸಾಧಾರಣವಾಗಿ ಎಲ್ಲ ದೇಗುಲಗಳ ಗರ್ಭಗೃಹ ಚೌಕಾಕಾರದಲ್ಲಿರುತ್ತದೆ. ಆದರೆ ಭೈರವ ದೇವಾಲಯಗಳ ಗರ್ಭಗೃಹಗಳು ಆಯತಾಕಾರದಲ್ಲಿರುವುದೇ ಅದರ ವಿಶೇಷ ಲಕ್ಷಣ. ಭೈರವಿಯ ಮಂದಿರಗಳು ಚಚ್ಚೌಕದಲ್ಲೇ ಇರುತ್ತವೆ. ಈಗ ಬಾಘ ಭೈರವನೆಂಬ ಹೆಸರು ಬರಲು ಕಾರಣವಾದ ನೇಪಾಳದಲ್ಲಿ ಪ್ರಚಲಿತವಿರುವ ಕತೆಯನ್ನಿಷ್ಟು ಗಮನಿಸೋಣ. "ಒಂದಾನೊಂದು ಕಾಲದಲ್ಲಿ ಕೀರ್ತಿಪುರದ ಕುರಿಗಾಹಿ ಹೆಣ್ಣುಮಕ್ಕಳು ಊರಿನ ಸಮೀಪದ ಬೆಟ್ಟದ ತಪ್ಪಲಿನಲ್ಲಿ ಕುರಿ ಮೇಯಿಸುತ್ತಿದ್ದರು. ಅದರ ನಡುವೆ ಆಟಪಾಟಗಳೂ ಇರುತ್ತಿದ್ದವು.ಒಮ್ಮೆ ಜೇಡಿಮಣ್ಣಿನಿಂದ ಒಂದು ಹುಲಿಯ ಆಕೃತಿಯನ್ನು ತಯಾರಿಸಿದರು. ಅದಕ್ಕೆ ನಾಲಿಗೆಯನ್ನು ಅಂಟಿಸಲೆಂದು ಸೂಕ್ತವಾದ ಎಲೆಗಾಗಿ ಹುಡುಕಾಟ ನಡೆಸಲು ದೂರ ಹೋದರು. ಅವರು ಎಲೆಯೊಂದಿಗೆ ಹಿಂತಿರುಗಿದಾಗ, ಅವರ ಕುರಿಗಳೆಲ್ಲವೂ ಮಾಯವಾಗಿದ್ದವು.ಆಶ್ಚರ್ಯ ಮತ್ತು ದುಃಖಭರಿತರಾಗಿ ಅಕ್ಕಪಕ್ಕದವರನ್ನು ವಿಚಾರಿಸಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ಆಗ ತಾವೇ ರಚಿಸಿದ ಹುಲಿಯನ್ನು ಕುರಿತು ನೀನು ನಮ್ಮ ಕುರಿಗಳನ್ನು ತಿಂದೆಯಾ ಎಂದು ಕೇಳಿದ್ದಕ್ಕೆ ಅದು ಉತ್ತರರೂಪವಾಗಿ ತನ್ನ ಬಾಯನ್ನು ತೆರೆದು ತೋರಿತು. ಅದು ರಕ್ತಸಿಕ್ತವಾಗಿತ್ತು. ಕೋಪಗೊಂಡ ಅವರು ಹುಲಿಯ ಬಾಯಿಗೆ ನಾಲಿಗೆಯನ್ನು ಅಂಟಿಸದೇ ಅಳುತ್ತ ಮನೆಗಳಿಗೆ ತೆರಳಿದರು. ಅಂದಿನಿಂದ ಬಾಘ ಭೈರವನು ಬಾಯಿ ತೆರೆದುಕೊಂಡೇ ನಿಂತಿದ್ದಾನೆ. ತನಗೊಂದು ನಾಲಿಗೆ ಮಾಡಿಕೊಡಿ ಎಂದು ಎಲ್ಲರನ್ನೂ ಅಂಗಲಾಚುತ್ತಿದ್ದಾನೆ". ಇದು ಇಲ್ಲಿನ ಐತಿಹ್ಯ. ಇದಕ್ಕೆ ಪೂರಕವಾಗಿ ಬಾಘ ಭೈರವನನ್ನು ಅಜಾಜು ವ್ಯಾಘ್ರೇಶ್ವರನೆಂದು ಸ್ಥಳೀಯರು ಕರೆಯುವರು. ಅಜಾದ್ಯ ಎಂದರೆ ಅಜ್ಜಯ್ಯ. ಅಜಾಜು ಎಂದರೆ ಮುತ್ತಜ್ಜನೆಂದು ನೇಪಾಳಿಗರ ಅರ್ಥ. ಇವನನ್ನು ಭೀಮಸೇನ ಭಟ್ಟಾರಕ ಅಥವಾ ಭೀಮೇಶ್ವರನೆಂದೂ ಕರೆಯುವರು. ಭೈರವನ ೬೪ ರೂಪಗಳಲ್ಲದೇ, ಆತನು ಹುಲಿಯ ರೂಪದಲ್ಲಿ ಕಾಣಸಿಗುವುದು ಇಲ್ಲಿ ಮಾತ್ರವೇ. 

ಇದೆಲ್ಲದರಲ್ಲಿ ಸತ್ಯ-ಮಿಥ್ಯಗಳನ್ನು ಅರಸಿ ಹೋದರೆ, ಅದು ನಿರರ್ಥಕ. ಏಕೆಂದರೆ ನಿಜವಾದ ಸ್ವಾರಸ್ಯವಿರುವುದು ನಮ್ಮ ದೇಶದ ದೇವ-ದೇವತೆಯರಿಗೆ ಇರುವ ಇತಿಹಾಸ, ಕಥಾನಕಗಳು, ಆಚರಣೆಯ ವೈವಿಧ್ಯಗಳಲ್ಲಿ. ಅವುಗಳಲ್ಲಿ ರೋಚಕತೆಯಿದೆ, ಕುತೂಹಲವಿದೆ. ಇಂಥ ಪರಂಪರೆ ವಿಶ್ವದ ಇತರ ನಾಗರಿಕತೆಗಳಿಗೆ ಅಪರಿಚಿತ. ಅದು ನಮ್ಮ ದೇಶದ ವಿಶಿಷ್ಟತೆ.


* * * * * * *








ಮಂಗಳವಾರ, ಅಕ್ಟೋಬರ್ 1, 2013

ದೇವತೆಗಳೂ - ಶ್ವಾನ ಸಾಂಗತ್ಯವೂ


ದೇವತೆಗಳೂ - ಶ್ವಾನ ಸಾಂಗತ್ಯವೂ

ಹಿಂದಿನ ಸಂಚಿಕೆಯೊಂದರಲ್ಲಿ ಕಾಲಭೈರವನ ಜತೆಗೆ ನಾಯಿಯ ಸಾಂಗತ್ಯ ಹೇಗೆ ಬಂದಿತು ಎಂದು ಪ್ರಸ್ತಾಪಿಸಿದ್ದೆ. ಈ ವಿಷಯದ ಕುರಿತು ನನ್ನ ಅನ್ವೇಷಣೆ ಬೇರೊಂದೇ ದಿಕ್ಕಿಗೆ ಕರೆದೊಯ್ಯಿತು. ಕಾಲಭೈರವನಲ್ಲದೆ ನಮ್ಮ ಇತರ ದೇವತೆಗಳೂ ಪ್ರಾಣಿಗಳನ್ನು ವಾಹನವನ್ನಾಗಿ ಹೊಂದಿರುವರು. ಅಂಥ ಸಂಗತಿಯ ಬಗ್ಗೆ ಮೂಡಿದ ವಿಚಾರಗಳ ಸಂಗ್ರಹವನ್ನು ನಿಮ್ಮ ಓದಿಗೆಂದು ಇಲ್ಲಿ ನೀಡಿದ್ದೇನೆ. 

ಆರಂಭದಲ್ಲಿ ಗಣಪತಿಯನ್ನು ಸ್ಮರಿಸುವುದು ವಾಡಿಕೆ. ಹೀಗಾಗಿ ಗಣಪತಿಯ ವಾಹನ ಮೂಷಕ ಅಥವಾ ಇಲಿ. ಸಕಲ ಜೀವಗಳನ್ನು ಪೋಷಿಸುವ ದೇವತೆಗಳು, ಮನುಷ್ಯ, ಪ್ರಾಣಿ, ಸಸ್ಯವರ್ಗ ಎಂದೆಲ್ಲ ಭೇದ-ಭಾವ ಮಾಡಲಾಗದು. ಭಾರೀ ಕಾಯದ ಗಣೇಶ ಅದು ಹೇಗೆ ಒಂದು ಇಲಿಯನ್ನು ತನ್ನ ವಾಹನವನ್ನಾಗಿಸಿಕೊಳ್ಳಲು ಸಾಧ್ಯ ಎಂದೆಲ್ಲ ತರ್ಕಿಸಲಾಗದು. ಒಂದು ತರ್ಕದಂತೆ ಗಣೇಶನೇ ವಿನೋದದ ಸಂಕೇತವಾಗಿರುವಾಗ ಇಲಿ-ವಾಹನವೂ ಅದರ ಒಂದು ಅಂಗ ಎಂದು ತಿಳಿಯುವುದೇ ಸರಿಯಾದೀತು. ವನ ತಂದೆ ಶಿವ. ಆತನ ವಾಹನ ನಂದಿ. ಶಿವನ ಇನ್ನೋರ್ವ ಮಗ ಸ್ಕಂದ ಅಥವಾ ಷಣ್ಮುಖನ ವಾಹನ ನವಿಲು. ಶಿವನ ಪತ್ನಿಯ ವಾಹನ ಹುಲಿ. ತ್ರಿಮೂರ್ತಿಗಳಲ್ಲಿ ಓರ್ವನಾದ ವಿಷ್ಣುವಿನ ವಾಹನ ಗರುಡ. ಆತನ ಪತ್ನಿಯ ವಾಹನ ಗೂಬೆ. ಬಹಳ ಜನರಿಗೆ ತಿಳಿಯದ ಸಂಗತಿಯಿದು. ಬ್ರಹ್ಮನ ಪತ್ನಿ ಸರಸ್ವತಿ ಹಂಸವಾಹಿನಿ. ಎಲ್ಲರಿಗೂ ಜೀವಕಾರುಣ್ಯ ಮುಖ್ಯವೆನ್ನುವುದಷ್ಟೇ ಸಂದೇಶ.

ಹೀಗೆ ವಿವಿಧ ದೇವತೆಗಳು ಪ್ರಾಣಿಗಳನ್ನು ತಮ್ಮ ವಾಹನ ವನ್ನಾಗಿಸಿಕೊಂಡಿರುವಂತೆ, ಕಾಲಭೈರವನಿಗೆ ನಾಯಿಯ ಸಾಂಗತ್ಯವಿದೆ. ಇದನ್ನೇ ಅವನನ್ನು ಕುರಿತಾದ ಧ್ಯಾನಶ್ಲೋಕದಲ್ಲಿ ಹೀಗೆ ಹೇಳಲಾಗಿದೆ 

ನಗ್ನರೂಪಂ ತ್ರಿನೇತ್ರಂ ಚ ಸರ್ಪಾಭರಣ ಭೂಷಿತಂ |
ರತ್ನಕುಂಡಲ ಸಂಯುಕ್ತಂ ಶಿರೋಮಾಲಾ ವಿಭೂಷಿತಂ  ||
ಖಡ್ಗಂ ಶೂಲಂ ಕಪಾಲಂ ಚ ಡಮರುಂ ಭೀಮ ದಂಷ್ಟ್ರಕಂ |
ಬಿಭ್ರಾಣಂ ಶುನಕಾರೂಢಂ ಕ್ಷೇತ್ರಪಾಲಂ ಅಹಂ ಭಜೇ ||

ಇಲ್ಲಿ ಆತನು ಶುನಕಾರೂಢಂ, ಎಂದರೆ ನಾಯಿಯ ಮೇಲೆ ಕುಳಿತಿರುವವನು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹಾಗೊಮ್ಮೆ ನಾಯಿಯ ಮೇಲೆ ಕುಳಿತಿರದ ಕಾಲಭೈರವನ ಬಹುತೇಕ ಶಿಲ್ಪಗಳಲ್ಲಿ,  ಕಾಲಭೈರವನು ಹಿಡಿದಿರುವ ರುಂಡದಿಂದ ಹನಿಯುತ್ತಿರುವ ರಕ್ತವನ್ನು ನೆಕ್ಕಲು ಯತ್ನಿಸುತ್ತಿರುವ ನಾಯಿಯೊಂದು ಕಂಡುಬರುತ್ತದೆ.  ನಾಯಿಗಳ ಯೋಗಕ್ಷೇಮ ನೋಡಿಕೊಳ್ಳುವುದು ಕೂಡ ಕಾಲಭೈರವನ ಸೇವೆಮಾಡಿದಂತೆ ಎಂಬ ನಂಬಿಕೆಯಿದೆ. ಕಾಶಿಕ್ಷೇತ್ರದಲ್ಲಿ  ಶ್ರದ್ಧಾಳುಗಳು ವಿಶ್ವನಾಥ ಮಂದಿರದ ಆವರಣದಲ್ಲಿ ತಿರುಗುವ ೧೧ ನಾಯಿಗಳಿಗೆ ಸಿಹಿತಿಂಡಿಗಳನ್ನು ದಿನವೂ ಅರ್ಪಿಸುವ ಪರಿಪಾಠವನ್ನು ಇಂದಿಗೂ ಕಾಣಬಹುದು.  


ಶಿವನ ಇನ್ನೊಂದು ರೂಪ ಖಂಡೋಬಾ. ಈತನ ಪೂಜೆ, ಆರಾಧನೆಗಳು ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಚಲಿತವಿದೆ. ಖಂಡೋಬಾನ ವಾಹನ ಕೂಡ ನಾಯಿಯೇ. ಇದೇ ಪ್ರಭಾವಕ್ಕೆ ಒಳಗಾಗಿರುವ ಖಂಡೋಬಾನ ಕೆಲವು ಶಿಲ್ಪಗಳಲ್ಲಿ ಆತನು ಕುದುರೆಯ ಮೇಲೆ ಕುಳಿತಿರುವಂತೆಯೂ ಚಿತ್ರಿಸಲಾಗಿದೆ.  ಇದಕ್ಕೆ ಪೂರಕವಾದ ಒಂದು ವಿಸ್ತೃತ  ಲೇಖನ ಈ ಬ್ಲಾಗಿನ ಸಂಚಿಕೆಯಲ್ಲಿದೆ.   
ಕಾಲಭೈರವನ ಏಕೈಕ ದೊಡ್ಡ ಕ್ಷೇತ್ರವಾದ ಆದಿ ಚುಂಚನಗಿರಿಯಲ್ಲಿ ಹಿಂದಿನ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು, ಭೈರವನೊಂದಿಗಿನ ಶ್ವಾನ ಸಾಂಗತ್ಯವನ್ನು ಚೆನ್ನಾಗಿ ಗಮನಿಸಿದ್ದರು. ಅದನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ಎರಡು ಕಪ್ಪು ಬಣ್ಣದ ನಾಯಿಗಳನ್ನು ಬೆಳಸಿ, ಅವುಗಳನ್ನು ಪೂಜಾ ಕೈಂಕರ್ಯ ನಡೆಯುವ ವೇಳೆಗೆ ಭೈರವನ ಸನ್ನಿಧಿಗೆ ಕರೆತಂದು ಅವನೆದುರಿಗೆ ಅವು ನಮಸ್ಕರಿಸುವಂಥ  ವ್ಯವಸ್ಥೆಯನ್ನು ರೂಪಿಸಿದರು. ಇದು ದೇಶದ ಬೇರಾವ ಭೈರವ ದೇಗುಲಗಳಲ್ಲಿ ಕಾಣಲಾಗದ ಅಪರೂಪದ ಆಚರಣೆ.   

ಈಶ್ವರನ ಇತರ ಅವತಾರಗಳಾದ ವೀರಭದ್ರ ಮತ್ತು ರುದ್ರರೊಂದಿಗೆ ಕೂಡ ನಾಯಿಗಳ ಸಾಂಗತ್ಯವಿದೆ. ರುದ್ರಾಧ್ಯಾಯದಲ್ಲಿ ಶಿವನನ್ನು ಸ್ತುತಿಸುವಾಗ ಶ್ವಪತಿ, ಎಂದರೆ ನಾಯಿಗಳ ಒಡೆಯನೆಂದು ಸಂಬೋಧಿಸಲಾಗಿದೆ. ಮಹಾಭಾರತದ ಆರಂಭ ಹಾಗೂ ಅಂತ್ಯದಲ್ಲಿ ನಾಯಿಯ ಪ್ರಸ್ತಾಪವಿದೆ. ಆರಂಭದಲ್ಲಿ ಸುರಮೆಯೆಂಬ ದೇವಲೋಕದ ನಾಯಿಯು ಜನಮೇಜಯನು ಯಜ್ಞ ಮಾಡುತ್ತಿರುವಾಗ ಯಾಗಶಾಲೆಯನ್ನು ಪ್ರವೇಶಿಸಿ ಮಾತನಾಡತೊಡಗಿತು. ಚಕಿತನಾದ ಜನಮೇಜಯನು ಅದರ ಮಾತನ್ನು ಆಲಿಸಿದನು. ನಾಯಿ ಹೇಳಿತು -  "ಹಿಂದೊಮ್ಮೆ ಯಾಗ ನಡೆಯುತ್ತಿರುವಾಗ ನನ್ನ ಮಕ್ಕಳು ಯಾಗ ಮಂಟಪದದ ಬಳಿ ಸುತ್ತಾಡುತ್ತಿದ್ದರು. ಅವರು ಯಾಗ ಪದಾರ್ಥಗಳನ್ನು ಮುಟ್ಟಲಿಲ್ಲ, ಮಲಿನ ಮಾಡಲಿಲ್ಲ. ಆದರೂ ಋತ್ವಿಜರು ಅವುಗಳನ್ನು ಹೊಡೆದೋಡಿಸಿದರು. ಧರ್ಮವಂತನಾದವನು ಎಲ್ಲ ಜೀವಿಗಳನ್ನೂ ಸಮಾನ ದೃಷ್ಟಿಯಿಂದ ನೋಡುವನು. ನೀವು ಹಾಗೆ ಮಾಡಲಿಲ್ಲವಾದ್ದರಿಂದ ನಿಮ್ಮ ಯಾಗವು ಅಪೂರ್ಣವಾಗಲಿ" ಎಂದು ಶಪಿಸಿತು. ಅದೇ ರೀತಿ ಅಂತ್ಯದಲ್ಲಿ ಧರ್ಮರಾಯನು ನಾಯಿಯ ಸಂಗವನ್ನು ತೊರೆಯುವಂತೆ ಹೇಳಿದರೂ, ಅದನ್ನು ಮಾಡಲಿಲ್ಲ. ನಾಯಿಯೊಂದಿಗೇ ಸ್ವರ್ಗಾರೋಹಣ ಮಾಡಿದನು. ಇದರಲ್ಲಿ ಸಮಾನತೆಯನ್ನು ಕಾಪಾಡಿಕೊಳ್ಳಬೇಕೆಂಬ ಸಂದೇಶವಿದೆ.    


ದತ್ತಾತ್ರೇಯನ ಚಿತ್ರಗಳಲ್ಲಿ ನಾಲ್ಕುನಾಯಿಗಳು ಆತನನ್ನು ಸುತ್ತುವರೆದಿರುವುದನ್ನು ಕಾಣಬಹುದು. ಇವು ನಾಲ್ಕುವೇದಗಳಾದ ಋಕ್, ಯಜುರ್, ಅಥರ್ವ ಮತ್ತು ಸಾಮವೇದಗಳನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ. ಸತ್ಯದ ಸಂರಕ್ಷಕರೆಂದು ಹೇಳಲಾಗುವ ಈ ನಾಯಿಗಳು ಮನುಷ್ಯನ ಆತ್ಮವನ್ನು ಬೇಟೆಯಾಡುತ್ತವೆ ಎಂದು ತಿಳಿಯಲಾಗಿದೆ. 

ಯಮನ ವಾಹನ ಕೋಣವೆಂದು ಸಾಧಾರಣವಾಗಿ ತಿಳಿದಿದೆ.  ಆತನ ಬಳಿ ಇರುವ ಎರಡು ಭಯಂಕರ ನಾಯಿಗಳು ನರಮಾನವರ  ನಡುವೆ ತಿರುಗುತ್ತ, ಯಮನ ಸಂದೇಶವಾಹಕರಾಗಿ ಕೆಲಸ ಮಾಡುತ್ತವೆ ಮತ್ತು ಯಮಪುರಿಯ ರಸ್ತೆಯನ್ನು ಅವು ಕಾಯುತ್ತವೆ  ಎಂಬ ನಂಬಿಕೆಯಿದೆ

* * * * * * * 

ಭಾನುವಾರ, ಸೆಪ್ಟೆಂಬರ್ 1, 2013

ಮದ್ದೂರಿನ ಶ್ರೀ ಕಾಲಭೈರವೇಶ್ವರ ದೇವಾಲಯ




ಬೆಂಗಳೂರಿನಿಂದ ೮೦ ಕಿ.ಮೀ. ದೂರದಲ್ಲಿರುವ ಮದ್ದೂರಿನ ಸಮೀಪ ಚಿಕ್ಕ ಅರಸೀಕೆರೆಯೆಂಬ ಊರಿದೆ. ಅಲ್ಲಿರುವ ಕಾಲಭೈರವೇಶ್ವರನು ತಾನು ಸ್ವತಃ ಪ್ರಸಿದ್ಧಿ ಪಡೆದಿರುವುದಕ್ಕಿಂತ ಹೆಚ್ಚಾಗಿ, ಶಿವನ ವಾಹನವಾದ ನಂದಿಯ ಮೂಲಕ ಅಧಿಕ ಪ್ರಸಿದ್ಧನಾಗಿರುವುದು ಇಲ್ಲಿನ ವಿಶೇಷ. 

ಕಾಲಭೈರವನ ವಾಹನ ನಾಯಿ. ಆದರೆ ಇಲ್ಲಿ ಶಿವದೇವಾಲಯದಲ್ಲಿ ಶಿವನ ಎದುರಿಗೆ ನಂದಿಯಿರುವಂತೆ, ಕಾಲಭೈರವನ ಎದುರಿಗೆ ಇರುವ ಇಲ್ಲಿನ ನಂದಿಯ ವಿಗ್ರಹ ೧೬ ಅಡಿಗಳಷ್ಟು ಎತ್ತರವಿದ್ದೀತು. ಹಳ್ಳಿಗಳಲ್ಲಿ ದೇವರ ಹೆಸರಿನಲ್ಲಿ ಬಸವನನ್ನು ಬಿಡುವ ಪದ್ಧತಿ ಇಂದಿಗೂ ಇದೆ. ಇದಕ್ಕೆ ದೇವರಿಗೆ ಸಲ್ಲುವ ಎಲ್ಲ ಮರ್ಯಾದೆಗಳೂ ಸಲ್ಲುತ್ತವೆ. ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶಿವ ಮತ್ತು ಬಸವರಿಗೆ ಸಮಾನ ಪ್ರೀತ್ಯಾದರ, ಭಕ್ತಿಗಳಿವೆ. ರೈತರ ಪ್ರೀತಿಯ ನಂದಿಯು ಕಾಲಭೈರವನ ರೂಪದಲ್ಲಿ ಪಡೆದಿರುವ ಮಾನ್ಯತೆ ಮತ್ತು ಗೌರವಾದರಗಳನ್ನು ಈ ಕ್ಷೇತ್ರದಲ್ಲಿ ಕಂಡಾಗ, ಪ್ರಾಣಿಗಳನ್ನೂ ದೈವತ್ವಕ್ಕೆ ಏರಿಸಿರುವ ಭಕ್ತರು ದೊಡ್ಡವರೆನಿಸುತ್ತಾರೆ. ಅದು ಪ್ರಕೃತಿ ಮತ್ತು ಮಾನವರ ಸಂಬಂಧಗಳನ್ನು ಗಾಢವಾಗಿಸಲು, ಪ್ರೀತಿಸಲು ಸಹಕಾರಿಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜೀವಕಾರುಣ್ಯವನ್ನು ಅವರು ಎತ್ತಿಹಿಡಿದಿರುವರು. ಅದು ಇಂದಿನ ದಿನಗಳಲ್ಲಿ ಬೇಕಾಗಿರುವ ದೊಡ್ಡ ಮೌಲ್ಯವೇ ಸರಿ. 

 ಚಿಕ್ಕ ಅರಸೀಕೆರೆಯಲ್ಲಿ ಕಾಲಭೈರವನ ಜೀವಂತ ಸ್ವರೂಪವಾಗಿರುವ ನಂದಿ ಅಥವಾ ಬಸವ ಇಡೀ ಗ್ರಾಮದಲ್ಲಿ ಸ್ವೇಚ್ಛೆಯಾಗಿ ಸುತ್ತುತ್ತಿರುತ್ತದೆ. ಇದಕ್ಕೊಂದು ಕಥೆ ಪ್ರಚಲಿತವಿದೆ. ಅದು ಸರಿಸುಮಾರು ಯಡಿಯೂರು ಸಿದ್ಧಲಿಂಗೇಶ್ವರನ ಕಥೆಯನ್ನೇ ಹೋಲುತ್ತದೆ.  ಸುಮಾರು ೯೦೦ ವರ್ಷಗಳ  ಹಿಂದೆ ಪಕ್ಕದೆ ದೊಡ್ಡ ಅರಸೀಕೆರೆಯಲ್ಲಿನ ಒಂದು ಹಸು ಪ್ರತಿದಿನ ಒಂದು ಹುತ್ತದ ಮೇಲೆ ಹಾಲು ಸುರಿಸಿ ಬರುತ್ತಿತ್ತು. ಅದರ ಮಾಲಿಕನು ಈ ಬಗ್ಗೆ ಗಮನಿಸಿ, ಆ ಹಸು ಹಾಲು ಸುರಿಸುತ್ತಿದ್ದ ಹುತ್ತವನ್ನು ಅಗೆದಾಗ ಅಲ್ಲಿ ಕಾಲಭೈರವನ ಸುಂದರ ವಿಗ್ರಹ ದೊರಕಿತು. ಅದರ ಪೂಜಾ ಆರಾಧನೆಗಳು ಆರಂಭವಾದವು. ಆ ಹಸುವಿನ ಕರುವನ್ನು ಕಾಲಭೈರವನಿಗೆ ಸಮರ್ಪಿಸಲಾಯಿತು. ಮುಂದೆ ಒಂದು ಕರುವನ್ನು ಇದೇ ಉದ್ದೇಶಕ್ಕೆಂದು ನಿಯಮಿಸುವ ಪರಿಪಾಟವೂ ಬೆಳೆದುಬಂದು ಈಗ ಇರುವ ಬಸವ ಮೂವತ್ತಾರನೆಯದು ಎಂದು ಹೇಳುವರು. ಕಾಲಭೈರವನ ಕೃಪೆಗೆ ಪಾತ್ರವಾದ ಕರುವಿನ ಬಲ ಹಿಂಗಾಲಿಗೆ ಶಿವನ ಮುದ್ರೆಯನ್ನು ಹಾಕಲಾಗುತ್ತದೆ. 

ಈ ಕ್ಷೇತ್ರದಲ್ಲಿ ಅನ್ನದಾನ ನಿರಂತರವಾಗಿ ನಡೆಯುತ್ತಿದೆ. ಇದರ ಹಿಂದೆಯೂ ಇನ್ನೊಂದು ಕಥೆ ಪ್ರಚಲಿತವಿದೆ. ಅದರ ಅನ್ವಯ, ಪೂರ್ವದಲ್ಲಿ ನಂದಿಗೆ ಮೂರು ಕೊಂಬುಗಳಿದ್ದವಂತೆ. ಅದರಲ್ಲಿ ಒಂದು ಕೊಂಬನ್ನು ತೆಗೆದು ಹಾಕು ಎಂದು ಶಿವನು ಹೇಳಿದ್ದಕ್ಕೆ, ನಂದಿಯು ಅದನ್ನು ಒಪ್ಪಲಿಲ್ಲ. ಕೋಪಗೊಂಡ  ಶಿವನು ಮೂರನೆಯ ಕೊಂಬನ್ನು ಮುರಿದು ಭೂಮಿಯತ್ತ ಒಗೆದನಂತೆ. ಅದು ಭೂಲೋಕದಲ್ಲಿ ದುಂದುಭಿ ಎಂಬ ರಣವಾದ್ಯವಾಗಿ ಪ್ರಸಿದ್ಧಿಯಾಯಿತೆಂದು ಐತಿಹ್ಯ. ಕೊಂಬು ಮುರಿದುಕೊಂಡ ನಂದಿಯು ಪಶ್ಚಿಮ   ದಿಕ್ಕಿಗೆ ಮುಖಮಾಡಿ ನಿಂತು ಗಾಢವಾಗಿ ಯೋಚಿಸುತ್ತ ನಿಂತಿತ್ತು. ಯಾರು ಎಷ್ಟು ಹೇಳಿದರೂ ಕೇಳಲಿಲ್ಲ. ಆಗ ಓರ್ವ ಭಕ್ತನು ಈ ಕ್ಷೇತ್ರದಲ್ಲಿ ಅನ್ನದಾನ ಮಾಡಿದರೆ ನಿನಗೆ ಸಮಾಧಾನವುಂಟಾಗುವುದೋ ಎಂದು ಕೇಳಿದಾಗ, ನಂದಿಯು ತನ್ನ ಸಮ್ಮತಿ ನೀಡಿತಂತೆ. ಅಂದಿನಿಂದ ಅನ್ನದಾನದ ಪರಂಪರೆ ಮುಂದುವರೆದುಕೊಂಡು ಬಂದಿದೆ. 

ಬಸವನು ಅಧಿದೇವತೆಯಾಗಿ ಇರುವ ಕ್ಷೇತ್ರಗಳು ಕರ್ನಾಟಕದಲ್ಲಿ ಹಲವಾರಿವೆ. ಅಲ್ಲೆಲ್ಲ ನಡೆಯುವಂತೆ, ಇಲ್ಲಿಯೂ ಬಸವ ಅಪ್ಪಣೆಯನ್ನು ಪಡೆದು ಗ್ರಾಮಸ್ಥರು ತಮ್ಮ ಕೆಲಸಕಾರ್ಯಗಳನ್ನು ಕೈಗೊಳ್ಳುವರು. ರೋಗಿಗಳು ಬಸವ ನಡೆಯುವ ಹಾದಿಗೆ ಅಡ್ಡ ಮಲಗಿ, ಅದು ತಮ್ಮ ಮೇಲೆ ಹಾದುಹೋದರೆ, ತಮ್ಮ ರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇರಿಸಿಕೊಂಡಿದ್ದರೆ, ಸಂತಾನ ಭಾಗ್ಯ, ವಿವಾಹ ಮುಂತಾದ ಜೀವನದ ಸಮಸ್ಯೆಗಳಿಗೆ, ಬಸವನು ಬಲಗಾಲನ್ನು ಭಕ್ತನ ಅಂಗೈಮೇಲೆ ಇರಿಸಿದರೆ, ಅದು ಸಾಧಿಸುತ್ತದೆ ಎಂಬ ನಂಬಿಕೆಯೂ ಇದೆ. ಸಾಧಾರಣವಾಗಿ ಕಾಲಭೈರವನು ನಿಂತಿರುವ ಭಂಗಿಯಲ್ಲಿಯೇ ಬಹುತೇಕ ವಿಗ್ರಹಗಳು ಕಾಣುತ್ತವೆ. ಚಿಕ್ಕ ಅರಸೀಕೆರೆಯ ವಿಗ್ರಹವನ್ನು ಕುಳಿತಿರುವಂತೆ ಕಡೆಯಲಾಗಿದೆ. ತಮ್ಮ ಹರಕೆ ಯಶಸ್ವಿಯಾದರೆ ಬಸವನಿಗೆ ಹನ್ನೊಂದು ಬಾಳೆ ಹಣ್ಣುಗಳನ್ನು ಮತ್ತು ಕಾಲಭೈರವನಿಗೆ ಬೆಲ್ಲವನ್ನು ಸಮರ್ಪಿಸುವ ಪದ್ಧತಿಯಿದೆ. ದೇವಾಲಯದ ಕಟ್ಟಡ ಕಲ್ಲಿನಿಂದ ನಿರ್ಮಿತವಾಗಿದ್ದು ಗಾರೆಯ ಶಿಖರವಿದೆ. ಶಿವನ ಪರಿವಾರವಾದ ಸುಬ್ರಹ್ಮಣ್ಯ ಮತ್ತು ಗಣಪತಿಯ ವಿಗ್ರಹಗಳು ಕಾಣಸಿಗುತ್ತವೆ.  ಆರಾಧ್ಯ ದೈವಕ್ಕೆ ಜೈವಿಕ ಸ್ವರೂಪ ದೊರೆತಿರುವುದೇ ಇಲ್ಲಿನ ವಿಶೇಷ. 




* * * * * * *

ಗುರುವಾರ, ಆಗಸ್ಟ್ 1, 2013

ಶ್ರೀ ಭೈರವ ಕವಚಮ್

ಭೈರವನ ರೌದ್ರ ರೂಪವನ್ನು ಸಶಕ್ತವಾಗಿ ಸಾಹಿತ್ಯಕವಾಗಿ ತಿಳಿಸುವ ಈ ರಚನೆ ಓದುವಾಗಲೇ ಉತ್ಸಾಹ ಮೂಡಿಸುತ್ತದೆ. ಈ ರಚನೆಯು ವಾದ್ಯವೃಂದದ ಸಹಿತ ಅಂತರಜಾಲದಲ್ಲಿ ಲಭ್ಯವಿದೆ. ಈ ಕೆಳಗಿನ ಭೈರವನ ಚಿತ್ರ ಜೋಧಪುರ ಶೈಲಿಯದಾಗಿದ್ದು ಉತ್ತರ ಭಾರತದಲ್ಲಿನ ಆರಾಧನಾ ಲಕ್ಷಣಗಳನ್ನು ಇದರಲ್ಲಿ ಗಮನಿಸಬಹುದು.




ಯಂ ಯಂ ಯಂ ಯಕ್ಷರೂಪಂ ದಶದಿಶಿ ವಿದಿತಂ ಭೂಮಿ ಕಂಪಾಯಮಾನಂ |
ಸಂ ಸಂ ಸಂ ಸಂಹಾರಮೂರ್ತಿಂ ಶಿರ ಮುಕುಟ ಜಟಾ ಶೇಖರಂ ಚಂದ್ರಬಿಂಬಂ || 
ಡಂ ಡಂ ಡಂ ದೀರ್ಘಕಾಯಂ ವಿಕೃತ ನಖ ಮುಖಂ ಚ ಊರ್ಧ್ವರೋಮಂ ಕರಾಳಂ |
ಪಂ ಪಂ ಪಂ ಪಾಪನಾಶಂ ಪ್ರಣಮತ ಸತತಂ ಭೈರವಂ ಕ್ಷೇತ್ರಪಾಲಂ || ೧ ||


ರಂ ರಂ ರಂ ರಕ್ತವರ್ಣಂ ಕಟಿಕಟಿತ ತನುಂ ತೀಕ್ಷ್ಣ ದಂಷ್ಟ್ರಾ ಕರಾಳಂ | 
ಘಂ ಘಂ ಘಂ ಘೋಷ ಘೋಷಂ ಘ ಘ ಘ ಘಟಿತಂ ಘಜ್ಜರಂ ಘೋರನಾದಂ || 
ಕಂ ಕಂ ಕಂ ಕಾಲಪಾಶಂ ಧೃಕ ಧೃಕ ಧೃಥಿತಂ ಜ್ವಾಲಿತಂ ಕಾಮದೇಹಂ |    
ತಂ ತಂ ತಂ ದಿವ್ಯದೇಹಂ ಪ್ರಣಮತಂ ಸತತಂ ಭೈರವಂ ಕ್ಷೇತ್ರಪಾಲಂ || ೨||

ಲಂ ಲಂ ಲಂ ವದಂತಂ ಲ ಲ ಲ ಲಲಿತಂ ದೀರ್ಘಜಿಹ್ವಾ ಕರಾಳಂ |
ಧುಂ ಧುಂ ಧುಂ ಧೂಮ್ರವರ್ಣಂ ಸ್ಫುಟ ವಿಕಟ ಮುಖಂ ಭಾಸ್ಕರಂ ಭೀಮರೂಪಂ ||
ರುಂ ರುಂ ರುಂ ರುಂಡಮಾಲಂ ರವಿತನುಂ ನಿಯತಾಂ ತಾಮ್ರ ನೇತ್ರಂ ಕರಾಳಂ | 
ನಂ ನಂ ನಂ ನಗ್ನಭೂಷಂ ಪ್ರಣಮತಂ ಸತತಂ ಭೈರವಮ್ ಕ್ಷೇತ್ರಪಾಲಂ || ೩ ||

ವಂ ವಂ ವಂ ವಾಯುವೇಗಂ ನತಜನ ಸದಯಂ ಬ್ರಹ್ಮಸಾರಂ ಪರಂ ತಂ |
ಖಂ ಖಂ ಖಂ ಖಡ್ಗ ಹಸ್ತಂ ತ್ರಿಭುವನ ವಿಲಯಂ ಭಾಸ್ಕರಂ ಭೀಮರೂಪಂ ||
ಚಂ ಚಂ ಚಂ ಚಲಿತ್ವಾ ಚಲ ಚಲ ಚಲಿತಾ ಚಾಲಿತಂ ಭೂಮಿಚಕ್ರಂ | 
ಮಂ ಮಂ ಮಂ ಮಾಯಿರೂಪಂ ಪ್ರಣಮತಂ ಸತತಂ ಭೈರವಮ್ ಕ್ಷೇತ್ರಪಾಲಂ || ೪ ||

ಶಂ ಶಂ ಶಂ ಶಂಖಹಸ್ತಂ  ಶಶಿಕರಂ ಧವಲಂ ಮೋಕ್ಷ ಸಂಪೂರ್ಣ ತೇಜಂ | 
ಮಂ ಮಂ ಮಂ ಮಹಂತಂ ಕುಲಮಕುಲ ಕುಲಂ ಮಂತ್ರ ಗುಪ್ತಂ ಸುನಿತ್ಯಂ || 
ಯಂ ಯಂ ಯಂ ಭೂತನಾಥಂ ಕಿಲಿ ಕಿಲಿ ಕಿಲಿತಂ ಬಾಲಕೇಳಿ ಪ್ರಧಾನಂ |
ಅಂ ಅಂ ಅಂ ಅಂತರಿಕ್ಷಂ ಪ್ರಣಮತಂ ಸತತಂ ಭೈರವಮ್ ಕ್ಷೇತ್ರಪಾಲಂ || ೫ ||

ಖಂ ಖಂ ಖಂ ಖಡ್ಗಭೇದಂ ವಿಶ್ವಂ ಅಮೃತಮಯಂ ಕಾಲ ಕಾಲಂ ಕರಾಳಂ |
ಕ್ಷಂ ಕ್ಷಂ ಕ್ಷಂ ಕ್ಷಿಪ್ರ ವೇಗಂ ದಹ ದಹ ದಹನಂ ತಪ್ತ ಸಂದೀಪ್ಯಮಾನಂ || 
ಹೌಂ ಹೌಂ ಹೌಂ ಹೌಂಕಾರ ನಾದಂ ಪ್ರಕಟಿತ ಗಹನಂ ಘರ್ಜಿತೈ ಭೂಮಿಕಂಪಂ |
ವಂ ವಂ ವಂ ವಾಲ ಲೀಲಂ ಪ್ರಣಮತಂ ಸತತಂ ಭೈರವಮ್ ಕ್ಷೇತ್ರಪಾಲಂ || ೬ ||

ಸಂ ಸಂ ಸಂ ಸಿದ್ಧಿಯೋಗಂ ಸಕಲಗುಣಮಥಂ ದೇವ ದೇವಂ  ಪ್ರಸನ್ನಂ | 
ಪಂ ಪಂ ಪಂ ಪದ್ಮನಾಭಂ ಹರಿಹರಮಯಂ ಚಂದ್ರ ಸೂರ್ಯಾಗ್ನಿ ನೇತ್ರಂ || 
ಐಂ ಐಂ ಐಂ ಐಶ್ವರ್ಯನಾಥಂ ಸತತ ಭಯಹರಂ ಪೂರ್ವದೇವ ಸ್ವರೂಪಂ |
ರೌಂ ರೌಂ ರೌಂ ರೌದ್ರರೂಪಂ ಪ್ರಣಮತಂ ಸತತಂ ಭೈರವಮ್ ಕ್ಷೇತ್ರಪಾಲಂ || ೭ ||


ಹಂ ಹಂ ಹಂ ಹಂಸಯಾನಂ ಹಪಿತಕಲಹಕಂ ಮುಕ್ತಯೋಗಾಟ್ಟಹಾಸಂ |
ಧಂ ಧಂ ಧಂ ನೇತ್ರರೂಪಂ ಶಿರ ಮುಕುಟ ಜಟಾ ಬಂಧ ಬಂಧಾಗ್ರ ಹಸ್ತಂ ||
ತಂ ತಂ ತಂ ಕಾಲನಾಥಂ ತ್ರಿದಶ ಲಟ ಲಟಂ ಕಾಮಗರ್ವಾಪಹಾರಂ |
ಭ್ರುಂ ಭ್ರುಂ ಭ್ರುಂ ಭೂತನಾಥಂ ಪ್ರಣಮತಂ ಸತತಂ ಭೈರವಮ್ ಕ್ಷೇತ್ರಪಾಲಂ || ೮ ||


* * * * * * *

ಸುಭಾಷಿತ

ನ ಜಾತಿರ್ನಕುಲಂ ತಾತ ನ ಸ್ವಾಧ್ಯಾಯಾಯೋ ನ ಚ ಶ್ರುತಮ್ 
ಕಾರಣಾನಿ ದ್ವಿಜತ್ವಸ್ಯ ವೃತ್ತಮೇವ ಹಿ ಕಾರಣಮ್ ।- ಮಹಾಭಾರತ

ಜಾತಿಯಾಗಲೀ, ಕುಲವಾಗಲೀ, ಸ್ವಾಧ್ಯಾಯವಾಗಲೀ ಓರ್ವನು ದ್ವಿಜತ್ವವನ್ನು (ಶ್ರೇಷ್ಠತೆಯನ್ನು) ಹೊಂದಲು ಕಾರಣವಾಗುವುದಿಲ್ಲ. ಸನ್ನಡತೆ, ಸಚ್ಚಾರಿತ್ರ್ಯ, ಸದಭಿರುಚಿಯಂಥ ಮೌಲ್ಯಗಳ ಸತತ ಪ್ರಭಾವದಿಂದ ಮಾತ್ರ ಇದು ಸಾಧ್ಯವಾಗುತ್ತದೆ.

ಸೋಮವಾರ, ಜುಲೈ 1, 2013

ನೇಪಾಳದ ಆಕಾಶ ಭೈರವನ ವಿಚಿತ್ರ ಕಥಾನಕ

ಆತ್ಮೀಯರೇ, 

ಜೂನ್ 30 ನನ್ನ 60ನೇ ಜನ್ಮದಿನ, ಜತೆಗೆ ವೃತ್ತಿ ಜೀವನಕ್ಕೆ ವಿದಾಯ ಕೂಡ. ಮುಂದಿನ ವಿಶ್ರಾಂತ ಜೀವನದಲ್ಲಿ ಇ-ಚಟುವಟಿಕೆಗಳಲ್ಲಿ ಇನ್ನಷ್ಟು ಸಕ್ರಿಯನಾಗಿರಲು ಅವಕಾಶ !  ಸದ್ಯಕ್ಕೆ  ಸಕ್ರಿಯವಾಗಿಲ್ಲದ ನನ್ನ ಇನ್ನೊಂದು  ಬ್ಲಾಗ್ "ನಾನು-ನೀವು" - ಇದರಲ್ಲಿ ಮತ್ತಷ್ಟು ತೊಡಗಿಸಿಕೊಳ್ಳುವ ಇರಾದೆಯೂ ಇದೆ. ನಿಮ್ಮ  ಜತೆ ನನ್ನ ಪಯಣ ಮುಂದುವರೆಯುತ್ತಿರಲಿ ! 

ವಂದನೆಗಳೊಡನೆ,

ಶಂಕರ ಅಜ್ಜಂಪುರ



ನೇಪಾಳ ಜಗತ್ತಿನ ಏಕಮಾತ್ರ ಹಿಂದೂ ರಾಷ್ಟ್ರವಾಗಿತ್ತು. ಹೀಗಾಗಿ ಹಿಂದೂ ದೇವ ದೇವಿಯರ ಆರಾಧನೆ ಅಲ್ಲಿ ಎಂದಿನಿಂದಲೂ ನಡೆದುಬಂದಿದೆ. ಅಲ್ಲಿನ ಅತ್ಯಂತ ಜನಪ್ರಿಯ ದೇವನೆಂದರೆ ಆಕಾಶ ಭೈರವ. ಈತನ ಉಗಮ ಮತ್ತು ಅದರ ಉದ್ದೇಶಗಳು ಸ್ವಾರಸ್ಯಕರವಾಗಿದೆ. ನೇವಾರರು ನೇಪಾಳದ ಭೈರವನ ಆರಾಧಕರಲ್ಲಿ ಪ್ರಮುಖರು. ಇವರ ನೇತೃತ್ವದಲ್ಲೇ ಈ ದೇವನ ಆರಾಧನೆ ಆನೂಚಾನವಾಗಿ ನಡೆಯುತ್ತಿದೆ. ಇದು ಪುರಾತನ ಖಟ್ಮಂಡುವಿನ ನ್ಯಾಯಾಲಯವೂ ಹೌದು. ಇಲ್ಲಿ ನಿಂತು ಸುಳ್ಳಾಡಿದರೆ ಸಾವು ಖಚಿತವೆಂಬ ನಂಬಿಕೆ, ಅಲ್ಲಿನ ಜನರನ್ನು ಪ್ರಾಮಾಣಿಕರಾಗಿರುವಂತೆ ನೋಡಿಕೊಂಡಿದ್ದು ನಿಜ. 


18ನೇ ಶತಮಾನದಲ್ಲಿ ನೇಪಾಳಕ್ಕೆ ಭೇಟಿನೀಡಿದ ಆಂಗ್ಲರಲ್ಲಿ ಕರ್ನಲ್ ಕಿರ್ಕ್ ಪ್ಯಾಟ್ರಿಕಸನ್ ಮೊದಲನೆಯವ. ಆತ ಉತ್ಸಾಹಿ, ಕಲೆ ಸಂಸ್ಕೃತಿಗಳನ್ನು ಮೆಚ್ಚುವ ಮನಸ್ಸಿದ್ದಾತ. ಹೀಗಾಗಿಯೇ ನೇಪಾಳದ ಅವನ ಭೇಟಿಯ ವರದಿಯಲ್ಲಿ ಹೀಗೆ ನಮೂದಿಸಿದ್ದಾನೆ. ಇಲ್ಲಿ ಎಷ್ಟು ಮನೆಗಳಿವೆಯೋ ಅಷ್ಟೇ ದೇಗುಲಗಳಿವೆ. ಜನಸಂಖ್ಯೆಯನ್ನು ಮೀರಿದ ದೇವರ ಸಂಖ್ಯೆಯಿದೆ, ಇಲ್ಲಿನ ನದೀತೀರ, ಚಿಲುಮೆಗಳು, ಗುಡ್ಡ, ಪರ್ವತಗಳೆಲ್ಲವೂ ಹಿಂದೂ ದೇವ-ದೇವತೆಗಳಿಂದ ತುಂಬಿತುಳುಕುತ್ತಿವೆ. ಈತನೇನಾದರೂ 1763ರ ಫೆಬ್ರವರಿಯಲ್ಲಿ ನಡೆದ ಜಾತ್ರೆಯಲ್ಲಿ ಒಂದು ವಾರ ಇಲ್ಲಿರುವಂತಿದ್ದರೆ, ಇಲ್ಲಿನ ಜಾತ್ರಾ ಉತ್ನವ, ಹಬ್ಬ ಹರಿದಿನಗಳಲ್ಲಿ ಭಾಗವಹಿಸುವಂತಿದ್ದರೆ, ಇಲ್ಲಿನ ಎಲ್ಲ ದೇವ-ದೇವತೆಯರ ಬಗ್ಗೆ ಖಂಡಿತವಾಗಿ ವಿವರವಾಗಿ ದಾಖಲಿಸುತ್ತಿದ್ದ ಎಂದು ಸ್ಥಳೀಯ ಜಾನಪದ ವಿದ್ವಾಂಸ ಕೇಸರ ಲಾಲ್ ಹೇಳುತ್ತಾರೆ.

ಇಲ್ಲಿ ತಾಂತ್ರಿಕ ಆರಾಧನೆಗೆ ಹೆಚ್ಚು ಪ್ರಾಮುಖ್ಯತೆ. ಹೀಗಾಗಿ ಜನಸಾಮಾನ್ಯರ ಮೇಲೆ ದೇವರು ಆವಾಹನೆಗೊಳ್ಳುವ ಬಗ್ಗೆ ಇವರಿಗೆ ಅಪರಿಮಿತ ವಿಶ್ವಾಸ. ಫರ್ಪಿಂಕ್ ರಾಜ್ಯದ ಠಾಕೂರ ರಾಜನ ಹೆಸರು ಪಚಾಲಿ ಸಿಂಗ್. ಆತ ಈ ಪ್ರದೇಶದಲ್ಲಿ ಪಚಾಲಿ ಭೈರವನೆಂದೇ ಪ್ರಸಿದ್ಧ. ಅಲ್ಲಿನ ರಾಜಗುರುವಿನ ಮಗಳು ಭೈರವನ ಪತ್ನಿ. ಆಕೆ ವಿಜಯೇಶ್ವರಿ.

ನೇಪಾಳದಲ್ಲಿ 5ಲಕ್ಷ ಭೈರವನ ರೂಪಗಳಿವೆಯೆಂದರೆ ಆಶ್ಚರ್ಯವಾದೀತು. ಇವೆಲ್ಲಕ್ಕೂ ಹೊಂದಿಕೊಂಡಂತೆ ಪ್ರತ್ಯೇಕ ಕಥಾನಕಗಳಿವೆ. ಇದಕ್ಕೆ ಹಳೇ ಖಟ್ಮಂಡುವಿನ ಇಂದ್ರಚೌಕದಲ್ಲಿ ನೆಲೆಸಿರುವ ಆಕಾಶ ಭೈರವ ಹೊರತಲ್ಲ.

ಭೈರವನ ಈ ಕಥಾನಕಕ್ಕೆ ಮಹಾಭಾರತ ನಂಟಿದೆ, ಅದೂ ಯುದ್ಧಪೂರ್ವದಲ್ಲಿ. ಇದರ ಪಾತ್ರಧಾರಿಗಳು ಶಿವ ಮತ್ತು ಕೃಷ್ಣ. ಇವರಿಬ್ಬರೂ ನರ ರೂಪಿಗಳೇ. ಕೃಷ್ಣ ಇಲ್ಲಿ ಕುರಿಗಾಹಿಯಾದರೆ, ಶಿವನು ಯಲಂಬರನೆಂಬ ರಾಜ.  ಯಲಂಬರ ಕೇಳುತ್ತಾನೆ - ಮಹಾಭಾರತ ಯುದ್ಧ ಇನ್ನೂ ಏಕೆ ನಡೆದಿಲ್ಲ . ಈ ರಾಜನು ಕೃಷ್ಣನನ್ನು ಭೇಟಿಯಾದಾಗ ಕೇಳುವ ಪ್ರಶ್ನೆಯಿಂದ ಕೃಷ್ಣನಿಗೆ ಅಚ್ಚರಿಯಾಗುತ್ತದೆ. ಹುಲು ಮಾನವನಿಗೆ ಇಂಥ ದಿವ್ಯದೃಷ್ಟಿಯಿರಲಾರದು ಎಂದು ಎಣಿಸಿ, ಈತನು ಶಿವನಲ್ಲದೆ ಬೇರೆಯಲ್ಲ ಎಂದು ತೀರ್ಮಾನಿಸುತ್ತಾನೆ.  ಯುದ್ಧ ನಡೆಯುವ ಕಾಲಕ್ಕೆ ಈತ ಜೀವಂತವಾಗಿದ್ದರೆ ಯುದ್ಧವೆಂದೂ ನಡೆಯಲಾರದು ಎಂದು ಯೋಚಿಸಿ, ಯಲಂಬರನಿಗೆ ಒಂದು ಪಂದ್ಯದ ಆಮಿಷವೊಡ್ಡುತ್ತಾನೆ. ಅದರಂತೆ, ಕೃಷ್ಣನು ತನ್ನ ಹೆಬ್ಬೆರಳ ತುದಿಯಲ್ಲಿ ಯಲಂಬರನ ಜೀವವನ್ನು ಧರಿಸಿ, ಅದನ್ನು ಒಂದು ಎತ್ತರದ ಮರದ ತುದಿಯಲ್ಲಿಡುತ್ತಾನೆ. ಯಲಂಬರನು ಕೃಷ್ಣನ ಹೆಬ್ಬೆರಳನ್ನು ಕತ್ತರಿಸಲು ಬಾಣ ಹೂಡಿದಾಗ, ಕೃಷ್ಣನು ತನ್ನ ಸುದರ್ಶನ ಚಕ್ರದಿಂದ ಆತನನ್ನು ಸಂಹರಿಸುತ್ತಾನೆ. ತನ್ನೊಡನೆ ಮಾತನಾಡಲು ಬಂದವನ ಜೀವ ತೆಗೆದ ಬಗ್ಗೆ ಪಶ್ಚಾತ್ತಾಪ ಹೊಂದಿದ ಕೃಷ್ಣನು ದುಃಖಿತನಾಗುತ್ತಾನೆ. ಏಕೆಂದರೆ ಭಕ್ತರನ್ನು ಸಂರಕ್ಷಿಸಬೇಕಲ್ಲದೆ, ಅವರ ಜೀವ ತೆಗೆಯಬಾರದೆನ್ನುವ ನಿಲುವುಳ್ಳ ಕೃಷ್ಣನನ್ನು ಕಂಡು ಯಲಂಬರನೂ ಬೇಸರಗೊಳ್ಳುತ್ತಾನೆ. ಆಕಾಶದಲ್ಲಿದ್ದುಕೊಂಡು  ತನ್ನ ತಲೆಯ ಮೂಲಕವೇ ಮಹಾಭಾರತ ಯುದ್ಧವನ್ನು ನೋಡುವ ಅವಕಾಶಕೊಡು ಎಂದು ಬೇಡುತ್ತಾನೆ. ಅದಕ್ಕೆ ಸಮ್ಮತಿಸಿದ ಕೃಷ್ಣನಿಗೆ ವಂದಿಸಿ, ಯಲಂಬರ ರಾಜನು ಉತ್ತರದಿಕ್ಕಿಗೆ ಪ್ರಯಾಣಮಾಡಿ, ಹಿಮಾಲಯದಾಚೆಗೆ ಇರುವ ಖಟ್ಮಂಡುವಿನಲ್ಲಿ ಆಕಾಶ ಭೈರವನಾಗಿ ನೆಲೆಸುತ್ತಾನೆ. 

ಖಟ್ಮಂಡುವಿನ ಈ ಆಕಾಶ ಭೈರವನು ನೀಲ ಮೊಗದವ. ಅವನ ಕಣ್ಣುಗಳು ಬೆಳ್ಳಿಯವು. ತಲೆಬುರುಡೆಗಳ ಕಿರೀಟಕ್ಕೆ ಸರ್ಪಗಳ ಅಲಂಕಾರ. ಬೆಳ್ಳಿಯ ಸಿಂಹಾಸನದಲ್ಲಿ ಕುಳಿತಿರುವ ಈತನನ್ನು ಭಯಂಕರವಾದ ಸಿಂಹವು ಹೊತ್ತು ನಿಂತಿರುವಂತೆ ಚಿತ್ರಿಸಲಾಗಿದೆ. ಅವನ ಜತೆಯಲ್ಲಿ ಭೀಮಸೇನ ಮತ್ತು ಭದ್ರಕಾಳಿಯರಿದ್ದಾರೆ. ಶುಭಸೂಚನೆಗೆಂದು ಗಣಪತಿ ಮತ್ತು ಷಣ್ಮುಖರಿದ್ದಾರೆ. ಇದು ಯಲಂಬರ ರಾಜನು ಧರಿಸಿದ ಮುಖವಾಡದ ಸ್ವರೂಪವೆಂದು  ಹೇಳಲಾಗುತ್ತದೆ. 

ಈತನು ಮಹರ್ಜನ್ ಜಾತಿಗೆ ಸೇರಿದ ರೈತರ ಆರಾಧ್ಯ ದೈವ. ಆಕಾಶ ಭೈರವನ ಹಣೆಯ ಮಧ್ಯದಲ್ಲಿ ಬುದ್ಧನ ಬಿಂಬವಿದೆ. ಇದನ್ನು ಹಿಂದೂಗಳು ಬ್ರಹ್ಮನೆಂದು ಮಾನ್ಯ ಮಾಡುವರು. ಹಿಂದೂಗಳು, ಬೌದ್ಧರು ಸಮಾನವಾಗಿ ಆದರಿಸುವ ಈ ಆಕಾಶ ಬೈರವನಿಗೆ ತುಂಬ ಮಾನ್ಯತೆಯಿದೆ. 

ಈ ಕಥಾನಕದಲ್ಲಿ ಅಡಗಿರುವ ರೋಚಕತೆ ಮತ್ತು ಭಕ್ತಿಭಾವಗಳು ಮುಖ್ಯವೇ ವಿನಾ ಅದರ ತಾರ್ಕಿಕ ವಿಶ್ಲೇಷಣೆಯಲ್ಲ. ಅಂಥ ಭಾವಗಳು ನಮ್ಮನ್ನು ವಿನೀತರನ್ನಾಗಿಸುತ್ತವೆ, ದೈವತ್ವದ ಶಕ್ತಿಗೆ ಗೌರವ ನೀಡಲು ಪ್ರೇರಿಸುತ್ತವೆ. 


* * * * * * * 

ಶುಕ್ರವಾರ, ಮೇ 31, 2013

ವ್ಯಾಘ್ರ ನಗರಿಯ ಕಪ್ಪು-ಬಿಳಿ ಭೈರವರು




ಭೈರವನೆಂದರೆ ಕಪ್ಪು ಬಣ್ಣದವ ಎಂದು ನಮ್ಮ ನಂಬಿಕೆ. ಇದಕ್ಕೆ ಪೂರಕವಾಗಿ ಆತನನ್ನು ಚಿತ್ರಿಸಿರುವ ಶಿಲ್ಪಗಳೂ ಅದನ್ನೇ ಹೇಳುತ್ತವೆ. ಆದರೆ ವಸ್ತುಸ್ತಿತಿ ಹಾಗಿಲ್ಲ. ಭೈರವನಲ್ಲಿ ಬಿಳಿಯ ಬಣ್ಣದವನೂ ಇದ್ದಾನೆ. ಈ ಕಪ್ಪು-ಬಿಳುಪಿನ ಭೈರವರ ಜೋಡಿ ಕೇವಲ ಬಣ್ಣದ ದೃಷ್ಟಿಯಿಂದ ಬೇರೆ ಬೇರೆಯಾಗಿ ಕಾಣಿಸಿದರೂ, ಮೂಲತಃ ಅವರು ಸೋದರರು. ಸವಾಯ್ ಮಾಧೋಪುರವನ್ನು ವ್ಯಾಘ್ರ ನಗರಿ ಎಂದೂ ಕರೆಯುವರು. ರಾಜಾಸ್ಥಾನದ ರಣಥಂಬೋರ್ ನ ಸಮೀಪದಲ್ಲಿರುವ ಮಾಧೋಪುರದಲ್ಲಿ  ಈ ಭೈರವರ ಆರಾಧನೆಯು ಪ್ರಚಲಿತವಿದೆ. 

ಭೈರವನ ಆರಾಧನೆಯಲ್ಲಿ ತಾಂತ್ರಿಕ ಪೂಜೆಗೆ ಮಹತ್ವವಿದೆ. ಆದರೆ ಬದಲಾಗಿರುವ ಇಂದಿನ ಸನ್ನಿವೇಶದಲ್ಲಿ ಈ ತೆರನ ತಾಂತ್ರಿಕ ಆರಾಧನೆ ಹೆಚ್ಚು-ಕಡಿಮೆ ನಿಂತುಹೋಗಿರುವಂತೆ ಕಂಡರೂ, ರಣಥಂಬೋರ್ ನ ಕಾಲಾ-ಗೋರಾ ಭೈರವ ಮಂದಿರದಲ್ಲಿ ಇಂದಿಗೂ ತಾಂತ್ರಿಕ ವಿಧಾನಗಳಿಂದಲೇ ಪೂಜೆ ನಡೆಯುತ್ತಿರುವುದು ವಿಶೇಷ. ಈ ದೇವಾಲಯದಲ್ಲಿ ಯಾವ ಪೂಜೆ ಸಲ್ಲಿಸಿ, ಏನನ್ನು ಹರಸಿಕೊಂಡರೂ ಅದರಂತೆಯೇ ನಡೆಯುತ್ತದೆ ಎನ್ನುವ ವಿಶ್ವಾಸ ಇಲ್ಲಿನ ಜನರದು.  

ಸಾಧಾರಣವಾಗಿ ದೇವಾಲಯಗಳ ಪ್ರವೇಶ ದ್ವಾರದಲ್ಲಿ ಭೈರವನ ವಿಗ್ರಹಗಳನ್ನು, ಅದರಲ್ಲೂ ಈಶಾನ್ಯ ದಿಕ್ಕಿನಲ್ಲಿ ನಲ್ಲಿ ಆತನನ್ನು ಸ್ಥಾಪಿಸುವುದು ವಾಡಿಕೆ. ಕಾಲಾ-ಗೋರಾ ಭೈರವ ಮಂದಿರದಲ್ಲಿ, ಗರ್ಭಗುಡಿಯ ಮಧ್ಯದಲ್ಲಿ ಶಿವ ಮತ್ತು ದುರ್ಗೆಯರ ವಿಗ್ರಹಗಳಿವೆ. ಸಮೀಪದಲ್ಲೇ ತ್ರಿನೇತ್ರ ಗಣಪತಿ, ಹಾಗೂ ಬಲಭಾಗದಲ್ಲಿ ಕಪ್ಪು - ಬಿಳಿಯ ಭೈರವರ ವಿಗ್ರಹವಿದೆ. ಈ ಎರಡು ವಿಗ್ರಹಗಳನ್ನೂ ಇಲ್ಲಿನ ಜನ ಸಮಾನವಾಗಿ ಆದರಿಸುತ್ತಾರೆ, ಪೂಜಿಸುತ್ತಾರೆ. 

ದೇಶಾದ್ಯಂತದಿಂದ, ಊರಿನ ಅಥವಾ ಕುಟುಂಬದ ಶುಭಕಾರ್ಯಗಳ ಆಹ್ವಾನ ಪತ್ರಿಕೆಯನ್ನು ಇಲ್ಲಿನ ಮಂದಿರದ ಅರ್ಚಕರ ಹೆಸರಿಗೆ ಜನರು ಕಳಿಸುತ್ತಾರೆ. ಅದನ್ನು ಆಯಾ ದಿನಾಂಕದಂದು ಅರ್ಚಕರು ದೇವರ ಸನ್ನಿಧಿಯಲ್ಲಿ ಓದುವರು. ಹೀಗೆ ಮಾಡುವುದರಿಂದ ಆಯಾ ಶುಭಕಾರ್ಯಗಳಿಗೆ ಯಾವುದೇ ವಿಘ್ನ ಬಾರದೇ, ಸುಲಲಿತವಾಗಿ ನಡೆದುಹೋಗುತ್ತದೆ ಎಂದು ಜನರ ಭಾವನೆ. ಹೀಗೆ ಬಂದ  ಆಮಂತ್ರಣ ಪತ್ರಿಕೆಗಳ ರಾಶಿ ರಾಶಿಯೇ ಮಂದಿರದಲ್ಲಿ ತುಂಬಿಹೋಗಿದೆ. ತೀರ ಪುರಾತನವೇನೂ ಅಲ್ಲದ, ಆಧುನಿಕ ರಚನೆಗಳನ್ನು ಒಳಗೊಂಡ ಈ ಮಂದಿರದ ಗೋಡೆಗಳ ಮೇಲೆ, ಜಲವರ್ಣ, ತೈಲವರ್ಣಗಳ ಕೃತಿಗಳನ್ನು ಚಿತ್ರಿಸಲಾಗಿದೆ. ಎರಡು ಗುಡ್ಡಗಳು ಸೇರುವ ಸಂಧಿಸ್ಥಳದಲ್ಲಿರುವ ಈ ಮಂದಿರಕ್ಕೆ ಪ್ರಕೃತಿಯೇ ಸೂಕ್ತ ವಾತಾವರಣವನ್ನು ನಿರ್ಮಿಸಿದೆ. ದೇವಾಲಯದ ಪ್ರವೇಶದ್ವಾರದಲ್ಲಿರುವ ಎರಡು ಬೃಹತ್ ಆನೆಗಳ ಗಾರೆಯ ಶಿಲ್ಪ ಇದಕ್ಕೆ ವಿಶೇಷ ಮೆರುಗು ತಂದಿದೆ.

ಐತಿಹಾಸಿಕವಾಗಿ ಇಲ್ಲೊಂದು ಕಥೆ ಪ್ರಚಲಿತವಿದೆ. ಮುಘಲರ ಆಡಳಿತಕಾಲದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯು ರಣಥಂಬೋರಿನ ಮೇಲೆ ದಂಡೆತ್ತಿ ಬಂದನು. ಆಗ ರಾಜನಾಗಿದ್ದ ಹಮ್ಮೀರ ದೇವನಿಗೆ ಇಲ್ಲಿ ಕಪ್ರು-ಬಿಳಿಯ ಭೈರವರಲ್ಲಿ ಅಪರಿಮಿತ ನಂಬಿಕೆ. ತಾನು ಈ ಯುದ್ಧದಲ್ಲಿ ಜಯಶಾಲಿಯಾದರೆ ಸರ್ವಸ್ವವನ್ನೂ ಈ ಭೈರವರಿಗೆ ಅರ್ಪಿಸುತ್ತೇನೆಂದು ಸಂಕಲ್ಪಮಾಡಿ ಯುದ್ಧದಲ್ಲಿ ತೊಡಗಿದ. ಆದರೆ ಫಲಿತಾಂಶ ವಿರುದ್ಧವಾಗಿತ್ತು. ಅಲ್ಲಾವುದ್ದೀನನ ಕೈ ಮೇಲಾಗಿ, ಹಮ್ಮೀರದೇವ ಸೋತು ಸೆರೆ ಸಿಕ್ಕುವಂತಾಯಿತು. ಆದರೆ ಅಭಿಮಾನಧನನಾದ ಹಮ್ಮೀರದೇವ ಶತ್ರುಗಳಿಂದ ಹತನಾಗದಂತೆ ತಾನೇ ತನ್ನ ತಲೆಯನ್ನು ಕತ್ತರಿಸಿಕೊಂಡನಂತೆ. ಭೈರವರು ರಾಜನಿಗೆ ನೆರವಾಗಲಿಲ್ಲವೆನ್ನುವುದು ನಗಣ್ಯವಾಗಿ, ಸ್ವಾಭಿಮಾನವೇ ಮುಖ್ಯ ಎಂದು ಸಾರುವ ಜಾನಪದ ಗಾಥೆಯನ್ನು ಈ ಪ್ರದೇಶದ ಜಾನಪದ ಗಾಯಕರು ಇಂದಿಗೂ ಹಾಡುತ್ತಿದ್ದಾರೆ. ಇದು ಆ ರಾಜನಿಗೆ ಸಂದ ಅತಿ ಹೆಚ್ಚಿನ ಗೌರವವೇ ಸರಿ. 


* * * * * * * 

ಗುರುವಾರ, ಮೇ 2, 2013

ಜೈನರ ನಾಕೋಡಾ ಭೈರವ


ನಾಕೋಡಾ ಭೈರವನ ಸಮ ಭಂಗಿಯ ಮೂರ್ತಿ 

ಜೈನ ಧರ್ಮವು ಹಿಂದೂ ಧರ್ಮದಿಂದ ಮೂಡಿಬಂದ ಮತ್ತೊಂದು ಮತಧರ್ಮವೆನ್ನುವುದು ಸರ್ವವಿದಿತ. ಮಾತೃಧರ್ಮದ ಛಾಯೆಯಿಂದ ತಪ್ಪಿಸಿಕೊಳ್ಳುವುದು ಅದೆಷ್ಟು ಕಷ್ಟಕರವೆನ್ನಲು ಸ್ವಾರಸ್ಯಕರ ಉದಾಹರಣೆ ಇಲ್ಲಿದೆ. ಅದು ನಾಕೋಡಾ ಭೈರವನ ಕಥೆ. ಜೈನರಲ್ಲಿ ಶ್ವೇತಾಂಬರ ಪಂಥದವರು ರೂಢಿಯಲ್ಲಿಟ್ಟುಕೊಂಡಿರುವ ಭೈರವನ ಆರಾಧನೆಯಲ್ಲಿ ಒಂದು ವಿಧದ ಧರ್ಮಸಂಕಟವಿದೆ, ಲೌಕಿಕ ಆಕರ್ಷಣೆಯಿದೆ. ಹಾಗೆಯೇ ಇವೆರಡೂ ಇಲ್ಲದ ಜನವರ್ಗವೂ ಇದೆಯೆನ್ನುವುದು ಇಲ್ಲಿನ ಸ್ವಾರಸ್ಯ.

ನಾಕೋಡಾ ಎನ್ನುವುದು ರಾಜಾಸ್ಥಾನದ ಪಶ್ಚಿಮ ಭಾಗದಲ್ಲಿರುವ ಒಂದು ಗ್ರಾಮದ ಹೆಸರು.  ಕ್ರಿ.ಪೂ. ೨ನೇ ಶತಮಾನದಿಂದ, ಎಂದರೆ ಜೈನರ ೨೪ನೇ ತೀರ್ಥಂಕರ ಮಹಾವೀರನ ಪರಿನಿರ್ವಾಣದ ಕಾಲದಿಂದಲೂ ಅಲ್ಲಿ ಜೈನರ ವಸತಿಗಳಿದ್ದವು ಎನ್ನುವುದು ಇತಿಹಾಸ. ಜೈನ ಶ್ವೇತಾಂಬರ ಪಂಥದ ಲೆಕ್ಕಾಚಾರದಂತೆ  ಕ್ರಿ.ಪೂ. ೫೭೪ರ ಕಾಲದಿಂದಲೂ ದೇವಾಲಯಗಳ ನಿರ್ಮಾಣ, ವಿಗ್ರಹಾರಾಧನೆ, ಅಂದಿನ ಪ್ರಬಲ ಜೈನ ತತ್ವಜ್ಞಾನಿ ಹರಿಭದ್ರನಂಥ ಸಂತರ ದರ್ಶನಗಳಂಥ ಧಾರ್ಮಿಕ ಚಟುವಟಿಕೆಗಳು ನಡೆದುಬಂದಿದ್ದವು. ಸರಿಸುಮಾರು ಇದೇ ಅವಧಿಯಲ್ಲಿ ರಾಜಾಸ್ಥಾನದಲ್ಲಿ ಉಂಟಾದ ರಾಜಕೀಯ ವಿಪ್ಲವಗಳಿಂದಾಗಿ, ದುರುಳ ದೊರೆಗಳ ಆಡಳಿತದಿಂದ ಭಂಗಪಟ್ಟ ಜೈನ ಸಮುದಾಯವು ತಮ್ಮ ದೇವತೆಗಳನ್ನು ಸಂರಕ್ಷಿಸಲೆಂದು ವಿಗ್ರಹಗಳನ್ನು ನೆಲದಲ್ಲಿ ಹುಗಿದಿಟ್ಟರು. ಕಾಲಾಂತರದಲ್ಲಿ ಅವು ಅಲ್ಲೇ ಉಳಿದುಕೊಂಡವು. ಕ್ರಿ.ಶ. ೧೪೫೫ರಲ್ಲಿ ಈ ಪ್ರದೇಶದ ಉತ್ಖತನ ನಡೆದಾಗ, ನಾಕೋಡಾ ಪಾರ್ಶ್ವನಾಥನ ವಿಗ್ರಹ ದೊರಕಿತು. 

ಪ್ರಚಲಿತವಿರುವ ಒಂದು ಕಥಾನಕದಂತೆ, ಓರ್ವ ಸಾಮಾನ್ಯ ಜೈನ ನಾಗರಿಕನಿಗೆ ಪಾರ್ಶ್ವನಾಥನು ಸ್ವಪ್ನದಲ್ಲಿ ಕಾಣಿಸಿಕೊಂಡು ತಾನು ಇಂಥ ಎಡೆಯಲ್ಲಿ ಇರುವುದಾಗಿಯೂ, ತನ್ನನ್ನು ಹೊರಗೆ ತೆಗೆದು ಪೂಜಿಸುವಂತೆ ಆದೇಶಿಸಿದನು. ಅದನ್ನು ಶಿರಸಾ ವಹಿಸಿದ ಆ ನಾಗರಿಕನು, ಕರ್ತಾರಗಚ್ಛ ಮುನಿ ಕೀರ್ತಿರತ್ನಸೂರಿಯ ನೇತೃತ್ವದಲ್ಲಿ ಈ ಮೂರ್ತಿಯನ್ನು ಹೊರತೆಗೆದು, ಅದನ್ನು ಪ್ರತಿಷ್ಠಾಪಿಸಲು ಉದ್ದೇಶಿಸಿದನು. ನೋಡ ನೋಡುತ್ತಿದ್ದಂತೆ ಜನರು ಕೀರ್ತಿನಾಥಸೂರಿಯನ್ನು ಹಿಂಬಾಲಿಸುತ್ತ ನಡೆದಾಗ ಅದೊಂದು ದೊಡ್ಡ ಮೆರವಣಿಗೆಯ ರೂಪ ತಳೆಯಿತು. ಮೆರವಣಿಗೆಯ ಮುಂಭಾಗದಲ್ಲಿ ಓರ್ವ ತೇಜಸ್ವಿ ಬಾಲಕನು ನರ್ತಿಸುತ್ತ ಸಾಗುತ್ತಿದ್ದುದನ್ನು ಕೀರ್ತಿನಾಥಸೂರಿ ಗಮನಿಸಿದನು. ಅದು ಭೈರವನಲ್ಲದೆ ಬೇರೆ ಯಾರೂ ಅಲ್ಲವೆಂದು ತಿಳಿದು, ನಾಕೋಡಾದ ಪ್ರವೇಶದ್ವಾರದಲ್ಲಿ ಪಿಂಡಾಕಾರದ ಭೈರವನನ್ನು ಸ್ಥಾಪಿಸಿ, ನಂತರ ಪಾರ್ಶ್ವನಾಥನನ್ನು ಸ್ಥಾಪಿಸಿದನು. ಕಾಲ ಕಳೆದಂತೆ ಅಲ್ಲಿ ಜನಸಂಚಾರ ವಿರಳವಾಯಿತು. ೨೦ನೇ ಶತಮಾನದ ಆದಿಭಾಗದಲ್ಲಿ ಈ ಪ್ರದೇಶಕ್ಕೆ ಬಂದ ಜೈನ ಸನ್ಯಾಸಿನಿ ತಪಾಗಚ್ಛ ಸುಂದರಶ್ರೀ ಎಂಬಾಕೆಯು ತನ್ನ ಉಳಿದ ಜೀವಿತಾವಧಿಯನ್ನು ಇಲ್ಲಿನ ಗುಡಿ-ಗುಂಡಾರಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದಳು. ಹೀಗಾಗಿ ಪಾರ್ಶ್ವನಾಥ ಮತ್ತು ನಾಕೋಡಾ ಭೈರವರ ಪೂಜಾದಿಗಳು ನಡೆಯಲಾರಂಭಿಸಿದವು. 

ನಾಕೋಡಾ ಭೈರವನ ಮೂಲ ವಿಗ್ರಹವನ್ನು

 ಹೋಲುವ ಇತ್ತೀಚಿನ ಶಿಲ್ಪ

ನಾಕೋಡಾ ಭೈರವನ ಮೂರ್ತಿಯು ಈಗ ಕಾಣಿಸುತ್ತಿರುವಂತೆ ಮಾನವಾಕೃತಿಯನ್ನು ಹೊಂದಿರಲಿಲ್ಲ.  ತಪಾಗಚ್ಛ ಹಿಮಾಚಲಸೂರಿಯೆಂಬ ಜೈನ ಸಾಧುವು, ಈಗಿರುವ ಮೂರ್ತಿಯನ್ನು ಪಾರ್ಶ್ವನಾಥನ ಪಕ್ಕದಲ್ಲಿ ಸ್ಥಾಪಿಸಿದರು. ಈ ಭೈರವನು ಕೆಂಪು ಮುಖ, ಮೀಸೆ ಮತ್ತು ಭಾರತದಲ್ಲಿ ಪ್ರಚಲಿತವಿರುವ ಎಲ್ಲ ಭೈರವ ವಿಗ್ರಹಗಳ ಕೈಗಳಲ್ಲಿರುವಂತೆ ಕಪಾಲ, ಡಮರು, ಖಡ್ಗ ಮತ್ತು ತ್ರಿಶೂಲಗಳನ್ನು ಧರಿಸಿರುವನು. ಜೈನ ಶಿಲ್ಪಗಳಲ್ಲೂ ನಾಲ್ಕು ಕೈಗಳನ್ನು ಹೊಂದಿರುವ ವಿಗ್ರಹಗಳ ಆರಾಧನೆಯಿದೆ. ಭಾರತದ ಒಳಗೆ ಮತ್ತು ಹೊರಗೆ ಮೂಲ ಮಂದಿರದಂತೆಯೇ ಪೂಜಾದಿಗಳು ನಡೆಯುತ್ತಿರುವುದು ಆತನು ಎಲ್ಲೆಡೆ ಪ್ರಚಲಿತನಾಗಿರುವುದಕ್ಕೆ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಹುಬ್ಬಳ್ಳಿ, ಬೆಂಗಳೂರು, ಮೈಸೂರು, ರಾಮನಗರ, ದಾವಣಗೆರೆ ಮುಂತಾದ ಹಲವಾರು ಸ್ಥಳಗಲ್ಲಿ ನಾಕೋಡಾ ಭೈರವ ಮಂದಿರಗಳಿವೆ. ಇಷ್ಟೆಲ್ಲ ಇದ್ದರೂ ಶ್ವೇತಾಂಬರ ಪಂಥದಲ್ಲೇ ಕೆಲವರು ನಾಕೋಡಾ ಭೈರವನಿಗೆ ಎರಡನೆಯ ಸ್ಥಾನವನ್ನು ನೀಡಿದ್ದಾರೆ. ಅವರ ತರ್ಕ ಹೀಗಿದೆ. ಪಾರ್ಶ್ವನಾಥನು ಜೈನ ತೀರ್ಥಂಕರ. ಆತ ಜೀವನ್ಮುಕ್ತ. ಭೈರವನಾದರೋ ಜನ್ಮಚಕ್ರಕ್ಕೆ ಸಿಲುಕಿ, ಪದೇ ಪದೇ ಜನ್ಮವೆತ್ತುವನು. ಲೌಕಿಕ ಸುಖಸಾಧನಗಳನ್ನು ಆತ ನೀಡಬಲ್ಲನೇ ವಿನಾ ಜೀವನ್ಮುಕ್ತನಾದ ಪಾರ್ಶ್ವನಾಥನಲ್ಲ. ಇದೆಲ್ಲ ಏನಿದ್ದರೂ ಭಕ್ತರು ಲೌಕಿಕ ಸುಖ, ಸಂಪತ್ತು, ಆರೋಗ್ಯಗಳಿಗೆಂದು ನಾಕೋಡಾ ಭೈರವನನ್ನೇ ಆಶ್ರಯಿಸುವರು. 


ಹರಕೆಗಳನ್ನು ತೀರಿಸುವ ವಿಷಯದಲ್ಲೂ ವ್ಯತ್ಯಾಸವಿಲ್ಲ. ಅನೇಕ ಜೈನ ವರ್ತಕರ ಅಂಗಡಿಗಳಲ್ಲಿ ಪಾರ್ಶ್ವನಾಥನ ಜತೆಗೆ ಭೈರವನ ಚಿತ್ರಗಳಿರುವುದೂ ಸಾಮಾನ್ಯ.  ಕೆಲವು ವರ್ತಕರು ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಭೈರವನನ್ನು ತಮ್ಮ ವ್ಯಾಪಾರ-ವಹಿವಾಟಿನಲ್ಲಿ ಪಾಲುದಾರನನ್ನಾಗಿ ಮಾಡಿಕೊಂಡು, ವಾರ್ಷಿಕ ಆದಾಯದ ಪಾಲನ್ನು ಆತನ ದೇಗುಲಕ್ಕೆ ಸಲ್ಲಿಸುವ ಪದ್ಧತಿಯನ್ನೂ ಇರಿಸಿಕೊಂಡಿದ್ದಾರೆ.  ಭೈರವನಿಗೆ ಸಂಬಂಧಿಸಿದಂತೆ ಜೈನ ಧಾರ್ಮಿಕ ವಿಧಿಗಳು ಮಾನ್ಯಮಾಡದ ಎರಡು ಪದ್ಧತಿಗಳು ಹೀಗಿವೆ. ದೇವರು ಮೈಮೇಲೆ ಆವಾಹಿತನಾಗುತ್ತಾನೆ ಮತ್ತು ದೇವರ ಪ್ರಸಾದವನ್ನು ಗುಡಿಯೊಳಗೆ ಮಾತ್ರ ಸೇವಿಸಿದರೆ ಪುಣ್ಯ, ಹಾಗೆ ಮಾಡದಿರುವುದು ಪಾಪವೆಂಬ ಎರಡು ಗ್ರಹಿಕೆಗಳಿವೆ. 

ಪಾರ್ಶ್ವನಾಥ ವಿಗ್ರಹ 
ಪಾರ್ಶ್ವನಾಥ ಮತ್ತು ಭೈರವರ ಪೂಜೆಯಲ್ಲಿಯೂ ಒಂದು ವೈಶಿಷ್ಟ್ಯ ಕಂಡುಬರುತ್ತದೆ. ಅದೆಂದರೆ ಪಾರ್ಶ್ವನಾಥನಿಗೆ ಮೊದಲ ಪೂಜೆ ಸಲ್ಲುತ್ತದೆಯಾದರೆ, ನಂತರದ್ದು ಭೈರವನಿಗೆ. ನಾಕೋಡಾ ಭೈರವನ ಪೂಜೆಯ ಆರಂಭದೊಂದಿಗೆ, ಪಾರ್ಶ್ವನಾಥನು ಮರೆಯಾಗುವಂತೆ ಪೂಜಾರಿಯು ತೆರೆಯನ್ನು ಸರಿಸುತ್ತಾನೆ. ತೆರೆಹಾಕುವ ಸಂಪ್ರದಾಯ ಹಿಂದೂಗಳಲ್ಲಿ ಇದ್ದರೆ ಜೈನರಲ್ಲಿ ಅಂಥ ಪದ್ಧತಿಯಿಲ್ಲ. ಈ ಎಲ್ಲ ಪೂಜಾದಿಗಳನ್ನು ಹಿಂದೂ ಅರ್ಚಕರೇ ನಿರ್ವಹಿಸುವರು. ಪೂಜಾ ವಿಧಾನಗಳ ವಿವಿಧ ಭಾಗಗಳನ್ನು ಹರಾಜು ಹಾಕುವ ಮೂಲಕ ಭಕ್ತರ ಒಳಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲಾಗುತ್ತದೆ. ದೇವರಿಗೆ ಸ್ನಾನವಿಧಿಗಳನ್ನು ಪ್ರಕ್ಷಾಳನ ಪೂಜಾ, ಕೇಸರಿಯ ಸಮರ್ಪಣೆಯನ್ನು ಕೇಸರೀ ಪೂಜಾ, ಧೂಪ ಸಲ್ಲಿಸುವಿಕೆಯನ್ನು ಧೂಪ ಪೂಜಾ, ಸುಗಂಧ ದ್ರವ್ಯ ಲೇಪನವನ್ನು ಇತ್ರ್ ಪೂಜಾ, ಹೂವುಗಳ ಪುಷ್ಪಪೂಜಾ, ಮತ್ತು ದೀಪಾರಾಧನೆಯನ್ನು ಆರತಿ ಎಂದು ವಿಭಾಗಿಸಿ, ಸೇವಾದಾರರು ತಮ್ಮ ಇಷ್ಟದ ಸೇವೆಯನ್ನು ಮಾಡಲು ಅನುವು ಮಾಡಿಕೊಡಲಾಗುತ್ತದೆ. ಸುಗಂಧ ಲೇಪನ, ಪುಷ್ಪಪೂಜಾ ಮತ್ತು ಆರತಿಗಳನ್ನು ಹೆಚ್ಚು ಹಣ ಸಂದಾಯ ಮಾಡುವವರು ಮಾತ್ರ ಪಡೆಯಲು ಅವಕಾಶವಿದ್ದು, ಆರತಿಯ ಸೇವಾ ಸಂದರ್ಭದಲ್ಲಿ ಕಾಣಿಕೆಗಳನ್ನು ಅರ್ಪಿಸುವುದು ಮತ್ತು ಭೈರವನ ದರ್ಶನ ಪಡೆಯುವುದು ಶ್ರೇಷ್ಠವೆಂಬ ಭಾವನೆಯಿದೆ. ಸಂಜೆಯ ಆರತಿ ಮತ್ತು ವಿಶೇಷ ಸಂದರ್ಭಗಳ ಪೂಜಾ ಕೈಂಕರ್ಯದಲ್ಲಿ ಜನರು ಪಾರ್ಶ್ವನಾಥನನ್ನು ಮೊದಲು ನೋಡುವುದು ಉತ್ತಮವೋ, ಭೈರವನನ್ನು ಮೊದಲು ನೋಡುವುದು ಒಳಿತೋ ಎಂಬ ಜಿಜ್ಞಾಸೆಗೆ ಒಳಗಾಗುತ್ತಾರೆ. 

ಮಾರ್ಗಶಿರ ಮಾಸದ ಕಾಲಭೈರವಾಷ್ಟಮಿ, ಭೈರವನ ಜನ್ಮದಿನ. ಅಂಥ ಸಂದರ್ಭಗಳಲ್ಲಿ ಮತ್ತು ವಿಶೇಷತಃ ಭಾನುವಾರಗಳಂದು ಭಕ್ತರ ಮೈಮೇಲೆ ಭೈರವನು ಆವಾಹಿತನಾಗುತ್ತಾನೆ. ಭಕ್ತರು ತಮ್ಮ ಆರೋಗ್ಯ, ವಿವಾಹ, ಭವಿಷ್ಯ ಮುಂತಾದ ಪ್ರಶ್ನೆಗಳಿಗೆ ಆವಾಹಿತರನ್ನು ಕೇಳಿ ಪರಿಹಾರ ಪಡೆಯುವರು. ಇದರಲ್ಲಿ ಜೈನರು, ಜೈನರಲ್ಲದವರೂ ಭಾಗವಹಿಸುವರು. ಕೆಲವೊಮ್ಮೆ ಜೈನರ ಮೇಲೆ ಕೂಡಾ ಭೈರವನು ಆವಾಹಿತನಾಗುವುದುಂಟು.

ಹೀಗೆ ಭೈರವನ ಕಥಾನಕಗಳು, ಭೈರವ ದೇವರ ಸಂಬಂಧದ ಆಚರಣೆಗಳು, ಪದ್ಧತಿಗಳು ಆನೂಚಾನವಾಗಿ ನಮ್ಮ ದೇಶದಲ್ಲಿ ನಡೆಯುತ್ತ ಬಂದಿದೆ. ಉತ್ತರ ಭಾರತವಲ್ಲದೆ ದಕ್ಷಿಣ ಭಾರತದಲ್ಲಿಯೂ ಆತನ ಹಲವಾರು ದೇಗುಲಗಳು, ಮಂದಿರಗಳು ಪ್ರತಿಷ್ಠಾಪಿತವಾಗುತ್ತಿರುವುದು ಈ ಶತಮಾನದಲ್ಲಿ ನಡೆಯುತ್ತಿರುವ ಹೊಸ ಪ್ರಕ್ರಿಯೆಯೆನ್ನಬಹುದು.

* * * * * * *

ಸೋಮವಾರ, ಏಪ್ರಿಲ್ 1, 2013

ಬೇತಾಳ ಭೈರವಮಂದಿರದ ಜೀರ್ಣೋದ್ಧಾರಕರು ಮುಸ್ಲಿಮರು !



ರೇನ್ ವಾಡಿ ಕ್ರಿಯಾ ಸಮಿತಿಯ ಚಳವಳಿ 

ಸಾಮಾಜಿಕ ಜಾಲತಾಣ ಫೇಸ್ ಬುಕ್ ಈಗ ನಿಜವಾದ ಜನಧ್ವನಿಯಾಗಿ ಮಾರ್ಪಡುತ್ತಿರುವುದು ಇತ್ತೀಚಿನ ಉತ್ತಮ ಬೆಳವಣಿಗೆಗಳಲ್ಲೊಂದು. ಅದು ಅನೇಕ ಚಳವಳಿಗಳಿಗೆ ಪ್ರೇರಕವಾಗಿದೆ. ಭೈರವನಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಚಳವಳಿ ಅವನ ಮಂದಿರದ ಜೀರ್ಣೋದ್ಧಾರಕ್ಕೆ ನೆರವಾದ ವಿಶಿಷ್ಟ ಸಂಗತಿಯ ಕಿರುವರದಿ ಇಲ್ಲಿದೆ. ಇದಕ್ಕೆ ಪೂರಕವಾದ ವರದಿ/ಚಿತ್ರಗಳನ್ನು ಕೆಳಗೆ ನೀಡಿರುವ ಕೊಂಡಿಯನ್ನು ಬಳಸಿ ನೋಡಬಹುದು.

ಕಾಶ್ಮೀರವು ಶೈವ ಪಂಥದ ಪರಮ ಪವಿತ್ರ ಕ್ಷೇತ್ರವೆನ್ನುವುದು ಎಲ್ಲರಿಗೂ ತಿಳಿದಿದೆ. ಅಲ್ಲಿ ಶೈವ ಪಂಥಕ್ಕೆ ಸಂಬಂಧಿಸಿದಂತೆ ಅನೇಕ ಪ್ರಯೋಗಗಳು ನಡೆದವು. ಶಕ್ತಿ ಪೀಠಗಳು, ಶಿವಕ್ಷೇತ್ರಗಳು ಅಲ್ಲಿ ಇವೆ. ಕಾಪಾಲಿಕ, ಗಾಣಾಪತ್ಯ ಮುಂತಾದ ಶಕ್ತಿಪಂಥಗಳು ಅಲ್ಲಿಂದಲೇ ಬೆಳೆದು ಬಂದವು. ಈಗ ಕಾಶ್ಮೀರ ಒಂದು ವಿವಾದಿತ ಪ್ರದೇಶವಾಗುವಲ್ಲಿ ರಾಜಕಾರಣದ ಪ್ರಭಾವ ಹೆಚ್ಚಾಗಿದೆಯಾದರೂ, ಸಾಂಸ್ಕೃತಿಕ ದೃಷ್ಟಿಯಿಂದ, ದೇಶದ ಈ ಭಾಗವು ಭಾರತದ ಮುಕುಟವೇ ಸರಿ. ಕಾಶ್ಮೀರಿ ಪಂಡಿತರು ಇಲ್ಲಿನ ಪ್ರಮುಖ ಹಿಂದೂ ವರ್ಗ. ಅವರೀಗ ತಮ್ಮ ನೆಲೆ ಕಳೆದುಕೊಂಡು ದೂರದ ಸ್ಥಳಗಳಿಗೆ ವಲಸೆ ಹೋಗಿ ಜೀವಿಸುತ್ತಿದ್ದಾರೆ. ಅತಂತ್ರದ ಬದುಕು ಈಗ ಅವರದಾಗಿದೆ. ಇತ್ತೀಚೆಗೆ ಪ್ರಕಟವಾದ ಅಂತರಜಾಲದ ವರದಿಯೊಂದು ಅಲ್ಲಿನ ಕೆಲವು ಮುಸ್ಲಿಮರ ರಚನಾತ್ಮಕ ದೃಷ್ಟಿಕೋನವನ್ನು ಬಿಂಬಿಸುತ್ತದೆ. ಎಲ್ಲ ಮುಸ್ಲಿಮರೂ ಉಗ್ರವಾದಿಗಳಲ್ಲ ಎಂಬ ಜನಜನಿತ ಘೋಷಣೆಯನ್ನು ಸಾಕಾರಗೊಳಿಸುವಂತೆ ತೋರುವ ಈ ವರದಿಯ ವಿವರಗಳು ಹೀಗಿವೆ.

ಶ್ರೀನಗರದ ಸಮೀಪ ರೇನ್‌ವಾಡಿ ಎಂಬ ಕುಗ್ರಾಮವಿದೆ. ಅಲ್ಲಿರುವ ಬೇತಾಳ ಭೈರವ ಮಂದಿರ ಸುಮಾರು ನಾನ್ನೂರು ವರ್ಷಗಳಷ್ಟು ಹಳೆಯದು. ಅದು ಕಾಲದ ಆಘಾತಕ್ಕೆ ಸಿಲುಕಿ ನಶಿಸಿಹೋಗುವ ಹಂತದಲ್ಲಿತ್ತು. ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ, ಅಲ್ಲಿನ ಪಂಡಿತರು ತಮ್ಮ ಜೀವವನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿರುವಾಗ, ತಮ್ಮ ಆರಾಧ್ಯದೈವವಾದ ಬೇತಾಳ ಭೈರವನ ಬಗ್ಗೆ ಗಮನಹರಿಸಲು ಆಗಿರಲಿಲ್ಲ. ಇದರ ಲಾಭ ಪಡೆದ ಆ ದೇವಾಲಯದ ಮಹಂತರು ದೇವಾಲಯ ಪ್ರದೇಶವನ್ನು ಸ್ಥಳೀಯ ವರ್ತಕನೊಬ್ಬನಿಗೆ ಮಾರಾಟಮಾಡುವ ಹವಣಿಕೆಯಲ್ಲಿದ್ದರು. ಇದರ ಸುಳಿವನ್ನು ಅರಿತ ಈ ಪ್ರದೇಶದ ಮುಸ್ಲಿಮರು, ಮಹಂತರ ವಿರುದ್ಧ ಗುಲ್ಲು ಎಬ್ಬಿಸಿದರು. ಜತೆಗೇ ಸ್ಥಳೀಯ ಪಂಡಿತರ ಗಮನ ಸೆಳೆದರು. ಈ ಬಗ್ಗೆ ಅಂತರಜಾಲದ ಫೇಸ್‌ಬುಕ್‌ನಲ್ಲಿ ಚಳವಳಿ ಆರಂಭವಾಯಿತು. ಇದರಿಂದ ಜನರು ಸಂಘಟಿತರಾಗಿ ದೇವಾಲಯ ಜೀರ್ಣೋದ್ಧಾರಕ್ಕೆ ನಾಂದಿಯಾಯಿತು.


ನವೀಕರಣ ಕಾಮಗಾರಿ 

ಸ್ಥಳೀಯ ಮುಸ್ಲಿಮರು ದೇವಾಲಯದ ಪುನರ್‌ನಿರ್ಮಾಣಕ್ಕೆಂದು ನುರಿತ ಕಾರ್ಮಿಕರನ್ನು ನಿಯೋಜಿಸಿದರು. ಸ್ಥಳೀಯ ನಿವಾಸಿ ಗುಲ್ ಮುಹಮ್ಮದ್ ಭಟ್ ಹೇಳುವಂತೆ, ಪ್ರಾಥಮಿಕ ಹಂತದಲ್ಲಿ ಈ ದೇವಾಲಯದ ಹೊರ ಪೌಳಿಯನ್ನು ದುರಸ್ತಿಗೊಳಿಸಲಾಯಿತು. ಮುಸ್ಲಿಮರು ಮತ್ತು ಕಶ್ಮೀರೀ ಪಂಡಿತರ ಜಂಟಿ ಸಹಯೋಗದಲ್ಲಿ "ರೇನ್‌ವಾಡಿ ಕ್ರಿಯಾ ಸಮಿತಿ" ಆರಂಭವಾಯಿತು. ಮುಂದೆ ಈ ಪ್ರದೇಶದಲ್ಲಿರುವ ಪುರಾತನ ಮಂದಿರಗಳ ಸಂರಕ್ಷಣೆಯ ಕಾರ್ಯಗಳನ್ನು ಕೈಗೆತ್ತಿಕೊಂಡು ಮುನ್ನಡೆಯಿತು.


ಪುನರ್ ನಿರ್ಮಿತ ಬೇತಾಳ ಭೈರವ ಮಂದಿರ 

ದೇವಾಲಯವು ಎರಡು ಕೋಮುಗಳ ನಡುವಣ ಸೌಹಾರ್ದತೆಗೆ ಕಾರಣವಾಯಿತು. "೧೯೯೦ರಲ್ಲಿ ನಡೆದ ಕಶ್ಮೀರೀ ಪಂಡಿತರ ಹತ್ಯೆ ದುರದೃಷ್ಟಕರ. ಇದರಿಂದ ಅವರು ತಮ್ಮ ನೆಲವನ್ನು ಬಿಟ್ಟು ವಲಸೆ ಹೋಗುವಂತಾಯಿತು. ಅವರ ಸರಕಾರೀ ಆಶ್ರಯಸ್ಥಾನಗಳಲ್ಲಿರದೇ ತಮ್ಮ ಸ್ವಂತ ನೆಲದಲ್ಲಿ ಬದುಕುವಂತಾಗಬೇಕು ಎನ್ನುವುದು ನಮ್ಮ ಆಶಯ" ಎಂದು ರೇನ್‌ವಾಡಿಯ ನಿವಾಸಿ ಮುಹಮ್ಮದ್ ಗನಾಯ್‌ ಹೇಳುತ್ತಾರೆ. ಇಂದಿಗೂ ಈ ಪ್ರದೇಶದ ಅನೇಕ ಕಶ್ಮೀರೀ ಪಂಡಿತರ ಮನೆಗಳ ಕೀಲಿಕೈಗಳು ಸ್ಥಳೀಯ ಮುಸ್ಲಿಮರಲ್ಲೇ ಇವೆ. ಬೇಸಿಗೆಯಲ್ಲಿ ಅವರು ತಮ್ಮ ಮೂಲ ಮನೆಗಳಿಗೆ ಬಂದು ಕೆಲವಾರು ವಾರ ಇದ್ದು  ಜಮ್ಮುವಿಗೆ ಹೋಗುತ್ತಿದ್ದಾರೆ.  ಇದೆಲ್ಲ ಏನಿದ್ದರೂ, ೨೨ವರ್ಷಗಳ ನಂತರ ಜೀರ್ಣೋದ್ಧಾರ ಕಂಡಿರುವ ಬೇತಾಳ ಭೈರವ ಮಂದಿರದ ಸುಸ್ಥಿತಿಯ ಬಗ್ಗೆ ಇಲ್ಲಿನ ನಿವಾಸಿ ಸುನಿಲ್ ಪಂಡಿತರಿಗೆ ಸಂತಸವಿದೆ. ಏಕೆಂದರೆ ಕಶ್ಮೀರದ ಈ ಪ್ರದೇಶದ ಜನ ಬೇತಾಳ ಭೈರವನಲ್ಲಿ ಅಪಾರ ನಂಬಿಕೆ ಹೊಂದಿದ್ದಾರೆ. ಮತ ಧರ್ಮ ಮತ್ತು ಧಾರ್ಮಿಕ ನಂಬಿಕೆಗಳ ಕೊಂಡಿಯಾಗಿರುವ ಈ ಪುರಾತನ ಮಂದಿರ ಮತ್ತೆ ಪುನರುಜ್ಜೀವನಗೊಂಡಿರುವುದರಿಂದ, ತಮ್ಮ ನೆಲೆಯಿನ್ನೂ ಸುಭದ್ರವಾಗಿದೆ, ಮುಂದೊಮ್ಮೆ ಇಲ್ಲಿ ಬಂದು ನೆಲಸಬಹುದೆಂಬ ಆಸೆ ಮರುಕಳಿಸಲು, ಇದು ಸಹಾಯಕವಾಗಿದೆ ಎನ್ನುವುದು ಸುನಿಲ್ ಪಂಡಿತರ ಅಭಿಪ್ರಾಯ.


* * * * * * *

ಶುಕ್ರವಾರ, ಮಾರ್ಚ್ 1, 2013

ಡಣಾಯಕಪುರದ ಶ್ರೀ ಕ್ಷೇತ್ರಪಾಲ ಕಾಲಭೈರವ ಸ್ವಾಮಿ




ಡಣಾಯಕಪುರದ
ಶ್ರೀ ಕ್ಷೇತ್ರಪಾಲ ಕಾಲಭೈರವ ಸ್ವಾಮಿ




ಶಿರೋಮಾಲಾ ವಿಭೂಷಿತಂ 
ಇತ್ತೀಚೆಗೆ ಶಿವಮೊಗ್ಗಕ್ಕೆ ಹೋದಾಗ ಅಗರದ ಹಳ್ಳಿಯಲ್ಲಿರುವ ಮಿತ್ರರಾದ ಮುರಳಿ, ತಮ್ಮ ಗ್ರಾಮದ ಸಮೀಪ ಒಂದು ಕಾಲಭೈರವ ದೇವಾಲಯವಿದೆಯೆಂದು ತಿಳಿಸಿದ್ದರು. ಅದನ್ನು ಇತ್ತೀಚೆಗೆ ಸಂದರ್ಶಿಸಿದ ನಂತರ ಆ ಬಗ್ಗೆ ಇಲ್ಲಿ ಬರೆಯುತ್ತಿರುವೆ.

ಶಿವಮೊಗ್ಗ ಜಿಲ್ಲೆಯಲ್ಲಿರುವ ಹೊಳೆಹೊನ್ನೂರಿನಿಂದ ಸ್ವಲ್ಪ ಮುಂದೆ ಸಾಗಿದರೆ, ಡಣಾಯಕಪುರವೆಂಬ ಚಿಕ್ಕ ಗ್ರಾಮವಿದೆ. ಅಲ್ಲಿ ಊರಿನ ಅಂಚಿನಲ್ಲಿ ಒಂದು ಚಿಕ್ಕ ಗುಡ್ಡ. ಅದರ ಮೇಲೊಂದು ದೇಗುಲವಿದೆ. ಅಲ್ಲಿರುವುದು ಶ್ರೀ ಕ್ಷೇತ್ರಪಾಲ ಕಾಲಭೈರವ ಸ್ವಾಮಿಯ ದೇವಾಲಯ. ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಕಾಲಭೈರವ ಮಂದಿರದ ಬಗ್ಗೆ ಈ ಬ್ಲಾಗ್‌ನಲ್ಲಿ ಒಂದು ಲೇಖನವಿದೆ. ಅದರಲ್ಲಿ ಪ್ರಸ್ತಾಪಿಸಿದ್ದಂತೆ, ಹಳೆಗಾಲದ ಮಂದಿರಗಳು ನಶಿಸಿಹೋದಾಗ,  ಮಂದಿರದ, ಅಲ್ಲಿನ ವಿಗ್ರಹಗಳ ಬಗ್ಗೆ ಆಸ್ಥೆಯುಳ್ಳ ಸ್ಥಳೀಕರು ಹೊಂದಿರುವ ಭಕ್ತಿ ಗೌರವಗಳಿಂದಾಗಿ, ಅವನ್ನು ಈಗ ಲಭ್ಯವಿರುವ ವಸ್ತುಗಳಿಂದ ಕಾಪಾಡಲು ಮುಂದಾಗುತ್ತಾರೆ. ಎಂದರೆ ಕಾಂಕ್ರೀಟ್ ಕಟ್ಟಡದಲ್ಲಿ ಪುರಾತನ ಶಿಲ್ಪಗಳು ಆಶ್ರಯ ಪಡೆಯುತ್ತವೆ. ಕೆಲವೇ ಅದೃಷ್ಟವಂತ ಪುರಾತನ ದೇವಾಲಯಗಳು, ಪುರಾತತ್ವ ಇಲಾಖೆಯ ಕಾಳಜಿಯಿಂದಾಗಿ ಮರುಹುಟ್ಟು ಪಡೆಯುತ್ತವೆ. ತೀರ ಭಗ್ನಗೊಂಡಿರುವ ದೇವಾಲಯಗಳು ಕುಸಿದು ಬೀಳುತ್ತವೆ. ಹಾಗೆ ಆಧುನಿಕ ಕಟ್ಟಡದಲ್ಲಿ ಪುರಾತನ ಶಿಲ್ಪಗಳನ್ನು ನೋಡಿದಾಗ ಅದು ಅಸಮಂಜಸವೆಂದು ತೋರುತ್ತದೆ.

ಸುಂದರ ಹೊಯ್ಸಳ ವಿಗ್ರಹ 
ಆದರೆ ಇದೆಲ್ಲ ಅನಿವಾರ್ಯ. ಡಣಾಯಕ ಪುರದ ದೇವಾಲಯದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಸಖರಾಯಪಟ್ಟಣಕ್ಕೂ ಇಲ್ಲಿಗೂ ಒಂದು ವ್ಯತ್ಯಾಸವಿದೆ. ಎರಡು ಸ್ಥಳಗಳಲ್ಲಿ ಇಟ್ಟಿಗೆ ಮರಳಿನ ದೇವಾಲಯವಿದ್ದರೂ, ಡಣಾಯಕಪುರದ ಮಂದಿರದ ಗರ್ಭಗುಡಿಯಲ್ಲಿ ಹಳೆಗಾಲದ ವಿಗ್ರಹವಿದೆ. ಶಿಲ್ಪಕಲೆಯ ದೃಷ್ಟಿಯಿಂದ ಅದೇನೂ ಗಮನ ಸೆಳೆಯುವಂತಿಲ್ಲ. ಆದರೆ ಆವರಣದಲ್ಲಿರುವ ಕಾಲಭೈರವನ ಭಗ್ನಮೂರ್ತಿ ಮತ್ತು ದೇವಾಲಯದ ಇತರ ಬಿಡಿಭಾಗಗಳು ಅಲ್ಲೊಂದು ಹೊಯ್ಸಳರ ದೇವಾಲಯವಿತ್ತು ಎನ್ನುವುದನ್ನು ಸಮರ್ಥಿಸುತ್ತವೆ. ಚಿತ್ರದಲ್ಲಿ ಕಾಣುವ ಈ ಸುಂದರ ಮೂರ್ತಿಯು ತನ್ನ ಶಿರೋ ಅಲಂಕಾರ ಮತ್ತು ನಿಂತಿರುವ ತ್ರಿಭಂಗಿಗಳಿಂದ ಗಮನಸೆಳೆಯುತ್ತದೆ. ಆಭರಣಗಳು ಮತ್ತು ಮುಖಭಾವಗಳು ಅದ್ಭುತವಾಗಿವೆ. ಈ ಶಿಲ್ಪವಲ್ಲದೆ ಇತರ ಚಿಕ್ಕರಚನೆಗಳು ಈಗಿರುವ ದೇವಾಲಯವನ್ನು ನಿರ್ಮಿಸುವ ಕಾಲಕ್ಕೆ ದೊರೆಯಿತು ಎಂದು ಅಲ್ಲಿನ ಅರ್ಚಕರಾದ ಶ್ರೀ ವೆಂಕಟೇಶ ಭಟ್ಟರು ತಿಳಿಸಿದರು. ದೇವಾಲಯದ ಬಲಭಾಗಕ್ಕೆ ಒಂದು ಧ್ವಜಸ್ಥಂಭವಿದೆ. ಪೂರ್ವಕ್ಕೆ ಎದುರಾಗಿರುವಂತೆ ನಿರ್ಮಿತವಾದ ಒಂದು ದೇವಾಲಯ ಅಲ್ಲಿತ್ತು.  ಹೊಯ್ಸಳರ ಕಾಲದ ಆ ದೇವಾಲಯ ಭಗ್ನಗೊಂಡ ನಂತರ, ಸ್ಥಳೀಯ ಐತಿಹ್ಯದಂತೆ ಅಲ್ಲೊಂದು ನೂತನ ದೇವಾಲಯವನ್ನೂ, ಮತ್ತೊಂದು ಮೂರ್ತಿಯನ್ನೂ ಪ್ರತಿಷ್ಠಾಪಿಸಲಾಯಿತು. ಈ ದೇವಾಲಯವೀಗ ಜೀರ್ಣೋದ್ಧಾರಗೊಳ್ಳುತ್ತಿದೆ. ಸದ್ಯದಲ್ಲೇ ಅಷ್ಟ ಭೈರವವಿಗ್ರಹಗಳಿರುವ ಆಧುನಿಕ ದೇವಾಲಯ ಅಲ್ಲಿ ತಲೆಯೆತ್ತಲಿದೆ.
ಈಗಿರುವ ವಿಗ್ರಹ 
ಈ ದೇವಾಲಯವನ್ನು ಕುರಿತಂತೆ ಸ್ಥಳೀಯ ಭಕ್ತಮಂಡಲಿಯು ಒಂದು ಕಿರುಪುಸ್ತಕವನ್ನು ಹೊರ ತಂದಿದೆ. ಅದರಲ್ಲಿ ಐತಿಹಾಸಿಕ ಅಂಶಗಳ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲವಾದರೂಪೌರಾಣಿಕ ಮಹತ್ವವನ್ನು ಕುರಿತು ವಿಸ್ತಾರವಾಗಿ ಹೇಳಲಾಗಿದೆ. ಸಮೀಪದ ಶ್ರೀ ಕ್ಷೇತ್ರ ಕೂಡಲಿಯ ಪುರೋಹಿತರಾದ ಶ್ರೀ ಸೋಮಸುಂದರ ಭಟ್ಟರು ಸಂಪಾದಿಸಿದ ಸಂಸ್ಕೃತ ಕೃತಿಯನ್ನು ಆಧರಿಸಿದ ಈ ಮಾಹಿತಿಯನ್ನು ವಿದ್ವಾನ್ ಕೂಡಲಿ ಜಗನ್ನಾಥ ಶಾಸ್ತ್ರಿಗಳು ಕನ್ನಡ ದಲ್ಲಿ ಅನುವಾದಿಸಿದ್ದಾರೆ. ಸಾಧಾರಣವಾಗಿ ಕಾಲಭೈರವ ದೇವಾಲಯಗಳಲ್ಲಿ ಆ ದೇವರಿಗೆ ಸಂಬಂಧಿಸಿದ ಸ್ತೋತ್ರಗಳು, ಮಂತ್ರಗಳು ಪ್ರಚಲಿತವಿಲ್ಲವಾಗಿ, ಶಿವಾರಾಧನೆಯ ಸಾಹಿತ್ಯವನ್ನೇ ಅವಲಂಬಿಸಬೇಕಾಗಿದೆ. ಆದರೆ ಇಲ್ಲಿ ಹಾಗಾಗದೆ ಕಾಲಭೈರವ ಅಷ್ಟೋತ್ತರವು ಚಾಲ್ತಿಯಲ್ಲಿದೆ.

ಬೆಟ್ಟದ ಹಾದಿ 
ಪೌರಾಣಿಕ ವಿವರಗಳಂತೆ ಈ ಗುಡ್ಡಕ್ಕೆ ದ್ರೋಣ ಪರ್ವತವೆಂಬ ಹೆಸರಿತ್ತು. ತುಂಗಾ ಭದ್ರಾ ನದಿಗಳ ಸಂಗಮ ಕ್ಷೇತ್ರವಾದ ಕೂಡಲಿಯಲ್ಲಿ ಬ್ರಹ್ಮೇಶ್ವರ, ನರಸಿಂಹ, ರಾಮೇಶ್ವರ ದೇವತೆಗಳನ್ನು ಸಂದರ್ಶಿಸಿದ ನಂತರ ದ್ರೋಣ ಪರ್ವತದ ಕಾಲಭೈರವ ನನ್ನು ನೋಡಬೇಕು. ಇದಕ್ಕೆ ಸಂಬಂಧಿ ಸಿದಂತೆ ಒಂದು ಪೌರಾಣಿಕ ಕತೆಯನ್ನೂ ನೀಡಿದ್ದಾರೆ. ಇಲ್ಲಿ ಶಿವನ ಜತೆಗೆ ವಿಷ್ಣುವಿನ ಪಾತ್ರವೂ ಇರುವುದೊಂದು ವಿಶೇಷ. ದೇವ-ದಾನವ ಯುದ್ಧದ ಕಾಲದಲ್ಲಿ ದಾನವರೇ ಗೆದ್ದು ಹಿಂಸಾಚಾರದಲ್ಲಿ ತೊಡಗಿದಾಗ, ದೇವತೆಗಳು ವಿಷ್ಣುವಿನ ಮೊರೆ ಹೋದರು. ಮಂದರ ಪರ್ವತದ ಮಥನ ಸಮಯದಲ್ಲಿ ಉದ್ಭವಿಸಿದ ಅಮೃತಕಲಶವನ್ನು ಧನ್ವಂತರಿಯಿಂದ ಅಪಹರಿಸಿದಾಗ, ವಿಷ್ಣುವು ಸ್ತ್ರೀ ರೂಪ ತಳೆದು ಅವರನ್ನು ಆಕರ್ಷಿಸಿದನು.  ದಾನವರು ಮೈಮರೆತದ್ದರಿಂದ ಅಮೃತಕಲಶವು ದೇವತೆಗಳಿಗೆ ದೊರೆಯಿತು.  ದೇವತೆಗಳ ಅಮೃತಪಾನದ ನಂತರವೂ ಬರಿದಾಗದ ಆ ಕಲಶವನ್ನು ಈಗ ದ್ರೋಣಪರ್ವತವೆಂದು ಕರೆಯಲಾಗುವ ಈ ಪ್ರದೇಶದಲ್ಲಿ ಹುಗಿದಿಟ್ಟರು.  ಅದರ ಕಾವಲಿಗೆ ಓರ್ವನನ್ನು ನೇಮಿಸಬೇಕೆಂಬ ಕೋರಿಕೆ ಬಂದಾಗ ವಿಷ್ಣುವು ವಸಂತ ಸಹಿತ ಶ್ರೀ ಕಾಲಭೈರವನನ್ನು ಬೆಟ್ಟದ ತುದಿಯಲ್ಲಿ ಸ್ಥಾಪಿಸಿದನು. ಅಂದಿನಿಂದ ಈ ಕ್ಷೇತ್ರವು ಕಾಲಭೈರವನ ನೆಲೆಯಾಯಿತು ಎನ್ನುತ್ತದೆ ಈ ಕಥಾನಕ. ಇನ್ನೂ ವಿಶೇಷವೆಂದರೆ ಕಾಲಭೈರವಾಷ್ಟಮಿ, ಚತುರ್ದಶೀ ಮುಂತಾದ ಪರ್ವದಿನಗಳಂದು, ಸೂರ್ಯನು ಕರ್ಕಾಟಕ ರಾಶಿಯಲ್ಲಿದ್ದಾಗ ಇಲ್ಲಿನ .ಕಾಲಭೈರವ ನನ್ನು ಸಂದರ್ಶಿಸುವುದು ವಿಶೇಷ ಫಲನೀಡುತ್ತದೆಯೆಂಬುದು ಐತಿಹ್ಯ
ಬಲಿಪೀಠದ ಸಮೀಪ  ಕೆತ್ತನೆ
ದೇವಾಲಯದ ಎದುರಿಗಿರುವ ಬಲಿಪೀಠದ ಸಮೀಪ ಒಂದು ಕೆತ್ತನೆಯಿದೆ. ಅದರಲ್ಲಿನ ಮಾನವ ಶರೀರಗಳ ತಲೆಗಳು ಕಾಣುತ್ತಿಲ್ಲ. ಇದರ ಬಗ್ಗೆ ಸೂಕ್ತ ವಿವರಣೆಯೂ ದೊರೆಯಲಿಲ್ಲವಾಗಿ, ಓದುಗರಲ್ಲಿ ಯಾರಿಗಾದರೂ ಮಾಹಿತಿಯಿದ್ದರೆ ತಿಳಿಸಲು ಕೋರಿಕೆ. 

ಒಂದು ಭಗ್ನ ಶಿಲ್ಪ 
ಒಟ್ಟಿನಲ್ಲಿ ಇಲ್ಲಿರುವ ಹೊಯ್ಸಳ ವಿಗ್ರಹದ ಸೌಂದರ್ಯ ಮತ್ತು ಭವ್ಯತೆಯನ್ನು ನೋಡುವ ಯಾರಿಗೂ, ಉತ್ಖತನ ಕೈಗೊಂಡರೆ ಸುಂದರ ಪುರಾತನ ದೇವಾಲಯವೊಂದು ಕಾಣಸಿಗುತ್ತದೆಯೆಂಬ ವಿಶ್ವಾಸವಂತೂ ಬರುತ್ತದೆ. ವಿಗ್ರಹವೇ ಇಷ್ಟು ಸುಂದರ ವಾಗಿರುವಾಗ ಮಂದಿರವೂ ಅದ್ಭುತ ವಾಗಿರಬೇಕು ಎಂಬ ಕಲ್ಪನೆ ಗರಿಗೆದರುತ್ತದೆ. ಸ್ಥಳೀಯರ ಸಹಕಾರದೊಂದಿಗೆ, ಪುರಾತತ್ವ ಇಲಾಖೆ ಶ್ರಮವಹಿಸಿದರೆ ಆ ಕಾರ್ಯ ನಡೆದೀತು. ಹಾಗಾಗಲಿ ಎನ್ನುವುದಷ್ಟೇ ಜನರ ಆಶಯ.

* * * * * * *