ರೇನ್ ವಾಡಿ ಕ್ರಿಯಾ ಸಮಿತಿಯ ಚಳವಳಿ |
ಕಾಶ್ಮೀರವು ಶೈವ ಪಂಥದ ಪರಮ ಪವಿತ್ರ ಕ್ಷೇತ್ರವೆನ್ನುವುದು ಎಲ್ಲರಿಗೂ ತಿಳಿದಿದೆ. ಅಲ್ಲಿ ಶೈವ ಪಂಥಕ್ಕೆ ಸಂಬಂಧಿಸಿದಂತೆ ಅನೇಕ ಪ್ರಯೋಗಗಳು ನಡೆದವು. ಶಕ್ತಿ ಪೀಠಗಳು, ಶಿವಕ್ಷೇತ್ರಗಳು ಅಲ್ಲಿ ಇವೆ. ಕಾಪಾಲಿಕ, ಗಾಣಾಪತ್ಯ ಮುಂತಾದ ಶಕ್ತಿಪಂಥಗಳು ಅಲ್ಲಿಂದಲೇ ಬೆಳೆದು ಬಂದವು. ಈಗ ಕಾಶ್ಮೀರ ಒಂದು ವಿವಾದಿತ ಪ್ರದೇಶವಾಗುವಲ್ಲಿ ರಾಜಕಾರಣದ ಪ್ರಭಾವ ಹೆಚ್ಚಾಗಿದೆಯಾದರೂ, ಸಾಂಸ್ಕೃತಿಕ ದೃಷ್ಟಿಯಿಂದ, ದೇಶದ ಈ ಭಾಗವು ಭಾರತದ ಮುಕುಟವೇ ಸರಿ. ಕಾಶ್ಮೀರಿ ಪಂಡಿತರು ಇಲ್ಲಿನ ಪ್ರಮುಖ ಹಿಂದೂ ವರ್ಗ. ಅವರೀಗ ತಮ್ಮ ನೆಲೆ ಕಳೆದುಕೊಂಡು ದೂರದ ಸ್ಥಳಗಳಿಗೆ ವಲಸೆ ಹೋಗಿ ಜೀವಿಸುತ್ತಿದ್ದಾರೆ. ಅತಂತ್ರದ ಬದುಕು ಈಗ ಅವರದಾಗಿದೆ. ಇತ್ತೀಚೆಗೆ ಪ್ರಕಟವಾದ ಅಂತರಜಾಲದ ವರದಿಯೊಂದು ಅಲ್ಲಿನ ಕೆಲವು ಮುಸ್ಲಿಮರ ರಚನಾತ್ಮಕ ದೃಷ್ಟಿಕೋನವನ್ನು ಬಿಂಬಿಸುತ್ತದೆ. ಎಲ್ಲ ಮುಸ್ಲಿಮರೂ ಉಗ್ರವಾದಿಗಳಲ್ಲ ಎಂಬ ಜನಜನಿತ ಘೋಷಣೆಯನ್ನು ಸಾಕಾರಗೊಳಿಸುವಂತೆ ತೋರುವ ಈ ವರದಿಯ ವಿವರಗಳು ಹೀಗಿವೆ.
ಶ್ರೀನಗರದ ಸಮೀಪ ರೇನ್‌ವಾಡಿ ಎಂಬ ಕುಗ್ರಾಮವಿದೆ. ಅಲ್ಲಿರುವ ಬೇತಾಳ ಭೈರವ ಮಂದಿರ ಸುಮಾರು ನಾನ್ನೂರು ವರ್ಷಗಳಷ್ಟು ಹಳೆಯದು. ಅದು ಕಾಲದ ಆಘಾತಕ್ಕೆ ಸಿಲುಕಿ ನಶಿಸಿಹೋಗುವ ಹಂತದಲ್ಲಿತ್ತು. ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ, ಅಲ್ಲಿನ ಪಂಡಿತರು ತಮ್ಮ ಜೀವವನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿರುವಾಗ, ತಮ್ಮ ಆರಾಧ್ಯದೈವವಾದ ಬೇತಾಳ ಭೈರವನ ಬಗ್ಗೆ ಗಮನಹರಿಸಲು ಆಗಿರಲಿಲ್ಲ. ಇದರ ಲಾಭ ಪಡೆದ ಆ ದೇವಾಲಯದ ಮಹಂತರು ದೇವಾಲಯ ಪ್ರದೇಶವನ್ನು ಸ್ಥಳೀಯ ವರ್ತಕನೊಬ್ಬನಿಗೆ ಮಾರಾಟಮಾಡುವ ಹವಣಿಕೆಯಲ್ಲಿದ್ದರು. ಇದರ ಸುಳಿವನ್ನು ಅರಿತ ಈ ಪ್ರದೇಶದ ಮುಸ್ಲಿಮರು, ಮಹಂತರ ವಿರುದ್ಧ ಗುಲ್ಲು ಎಬ್ಬಿಸಿದರು. ಜತೆಗೇ ಸ್ಥಳೀಯ ಪಂಡಿತರ ಗಮನ ಸೆಳೆದರು. ಈ ಬಗ್ಗೆ ಅಂತರಜಾಲದ ಫೇಸ್‌ಬುಕ್‌ನಲ್ಲಿ ಚಳವಳಿ ಆರಂಭವಾಯಿತು. ಇದರಿಂದ ಜನರು ಸಂಘಟಿತರಾಗಿ ದೇವಾಲಯ ಜೀರ್ಣೋದ್ಧಾರಕ್ಕೆ ನಾಂದಿಯಾಯಿತು.
ನವೀಕರಣ ಕಾಮಗಾರಿ |
ದೇವಾಲಯವು ಎರಡು ಕೋಮುಗಳ ನಡುವಣ ಸೌಹಾರ್ದತೆಗೆ ಕಾರಣವಾಯಿತು. "೧೯೯೦ರಲ್ಲಿ ನಡೆದ ಕಶ್ಮೀರೀ ಪಂಡಿತರ ಹತ್ಯೆ ದುರದೃಷ್ಟಕರ. ಇದರಿಂದ ಅವರು ತಮ್ಮ ನೆಲವನ್ನು ಬಿಟ್ಟು ವಲಸೆ ಹೋಗುವಂತಾಯಿತು. ಅವರ ಸರಕಾರೀ ಆಶ್ರಯಸ್ಥಾನಗಳಲ್ಲಿರದೇ ತಮ್ಮ ಸ್ವಂತ ನೆಲದಲ್ಲಿ ಬದುಕುವಂತಾಗಬೇಕು ಎನ್ನುವುದು ನಮ್ಮ ಆಶಯ" ಎಂದು ರೇನ್‌ವಾಡಿಯ ನಿವಾಸಿ ಮುಹಮ್ಮದ್ ಗನಾಯ್ ಹೇಳುತ್ತಾರೆ. ಇಂದಿಗೂ ಈ ಪ್ರದೇಶದ ಅನೇಕ ಕಶ್ಮೀರೀ ಪಂಡಿತರ ಮನೆಗಳ ಕೀಲಿಕೈಗಳು ಸ್ಥಳೀಯ ಮುಸ್ಲಿಮರಲ್ಲೇ ಇವೆ. ಬೇಸಿಗೆಯಲ್ಲಿ ಅವರು ತಮ್ಮ ಮೂಲ ಮನೆಗಳಿಗೆ ಬಂದು ಕೆಲವಾರು ವಾರ ಇದ್ದು ಜಮ್ಮುವಿಗೆ ಹೋಗುತ್ತಿದ್ದಾರೆ. ಇದೆಲ್ಲ ಏನಿದ್ದರೂ, ೨೨ವರ್ಷಗಳ ನಂತರ ಜೀರ್ಣೋದ್ಧಾರ ಕಂಡಿರುವ ಬೇತಾಳ ಭೈರವ ಮಂದಿರದ ಸುಸ್ಥಿತಿಯ ಬಗ್ಗೆ ಇಲ್ಲಿನ ನಿವಾಸಿ ಸುನಿಲ್ ಪಂಡಿತರಿಗೆ ಸಂತಸವಿದೆ. ಏಕೆಂದರೆ ಕಶ್ಮೀರದ ಈ ಪ್ರದೇಶದ ಜನ ಬೇತಾಳ ಭೈರವನಲ್ಲಿ ಅಪಾರ ನಂಬಿಕೆ ಹೊಂದಿದ್ದಾರೆ. ಮತ ಧರ್ಮ ಮತ್ತು ಧಾರ್ಮಿಕ ನಂಬಿಕೆಗಳ ಕೊಂಡಿಯಾಗಿರುವ ಈ ಪುರಾತನ ಮಂದಿರ ಮತ್ತೆ ಪುನರುಜ್ಜೀವನಗೊಂಡಿರುವುದರಿಂದ, ತಮ್ಮ ನೆಲೆಯಿನ್ನೂ ಸುಭದ್ರವಾಗಿದೆ, ಮುಂದೊಮ್ಮೆ ಇಲ್ಲಿ ಬಂದು ನೆಲಸಬಹುದೆಂಬ ಆಸೆ ಮರುಕಳಿಸಲು, ಇದು ಸಹಾಯಕವಾಗಿದೆ ಎನ್ನುವುದು ಸುನಿಲ್ ಪಂಡಿತರ ಅಭಿಪ್ರಾಯ.
* * * * * * *
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ