ಸೋಮವಾರ, ಜುಲೈ 1, 2013

ನೇಪಾಳದ ಆಕಾಶ ಭೈರವನ ವಿಚಿತ್ರ ಕಥಾನಕ

ಆತ್ಮೀಯರೇ, 

ಜೂನ್ 30 ನನ್ನ 60ನೇ ಜನ್ಮದಿನ, ಜತೆಗೆ ವೃತ್ತಿ ಜೀವನಕ್ಕೆ ವಿದಾಯ ಕೂಡ. ಮುಂದಿನ ವಿಶ್ರಾಂತ ಜೀವನದಲ್ಲಿ ಇ-ಚಟುವಟಿಕೆಗಳಲ್ಲಿ ಇನ್ನಷ್ಟು ಸಕ್ರಿಯನಾಗಿರಲು ಅವಕಾಶ !  ಸದ್ಯಕ್ಕೆ  ಸಕ್ರಿಯವಾಗಿಲ್ಲದ ನನ್ನ ಇನ್ನೊಂದು  ಬ್ಲಾಗ್ "ನಾನು-ನೀವು" - ಇದರಲ್ಲಿ ಮತ್ತಷ್ಟು ತೊಡಗಿಸಿಕೊಳ್ಳುವ ಇರಾದೆಯೂ ಇದೆ. ನಿಮ್ಮ  ಜತೆ ನನ್ನ ಪಯಣ ಮುಂದುವರೆಯುತ್ತಿರಲಿ ! 

ವಂದನೆಗಳೊಡನೆ,

ಶಂಕರ ಅಜ್ಜಂಪುರನೇಪಾಳ ಜಗತ್ತಿನ ಏಕಮಾತ್ರ ಹಿಂದೂ ರಾಷ್ಟ್ರವಾಗಿತ್ತು. ಹೀಗಾಗಿ ಹಿಂದೂ ದೇವ ದೇವಿಯರ ಆರಾಧನೆ ಅಲ್ಲಿ ಎಂದಿನಿಂದಲೂ ನಡೆದುಬಂದಿದೆ. ಅಲ್ಲಿನ ಅತ್ಯಂತ ಜನಪ್ರಿಯ ದೇವನೆಂದರೆ ಆಕಾಶ ಭೈರವ. ಈತನ ಉಗಮ ಮತ್ತು ಅದರ ಉದ್ದೇಶಗಳು ಸ್ವಾರಸ್ಯಕರವಾಗಿದೆ. ನೇವಾರರು ನೇಪಾಳದ ಭೈರವನ ಆರಾಧಕರಲ್ಲಿ ಪ್ರಮುಖರು. ಇವರ ನೇತೃತ್ವದಲ್ಲೇ ಈ ದೇವನ ಆರಾಧನೆ ಆನೂಚಾನವಾಗಿ ನಡೆಯುತ್ತಿದೆ. ಇದು ಪುರಾತನ ಖಟ್ಮಂಡುವಿನ ನ್ಯಾಯಾಲಯವೂ ಹೌದು. ಇಲ್ಲಿ ನಿಂತು ಸುಳ್ಳಾಡಿದರೆ ಸಾವು ಖಚಿತವೆಂಬ ನಂಬಿಕೆ, ಅಲ್ಲಿನ ಜನರನ್ನು ಪ್ರಾಮಾಣಿಕರಾಗಿರುವಂತೆ ನೋಡಿಕೊಂಡಿದ್ದು ನಿಜ. 


18ನೇ ಶತಮಾನದಲ್ಲಿ ನೇಪಾಳಕ್ಕೆ ಭೇಟಿನೀಡಿದ ಆಂಗ್ಲರಲ್ಲಿ ಕರ್ನಲ್ ಕಿರ್ಕ್ ಪ್ಯಾಟ್ರಿಕಸನ್ ಮೊದಲನೆಯವ. ಆತ ಉತ್ಸಾಹಿ, ಕಲೆ ಸಂಸ್ಕೃತಿಗಳನ್ನು ಮೆಚ್ಚುವ ಮನಸ್ಸಿದ್ದಾತ. ಹೀಗಾಗಿಯೇ ನೇಪಾಳದ ಅವನ ಭೇಟಿಯ ವರದಿಯಲ್ಲಿ ಹೀಗೆ ನಮೂದಿಸಿದ್ದಾನೆ. ಇಲ್ಲಿ ಎಷ್ಟು ಮನೆಗಳಿವೆಯೋ ಅಷ್ಟೇ ದೇಗುಲಗಳಿವೆ. ಜನಸಂಖ್ಯೆಯನ್ನು ಮೀರಿದ ದೇವರ ಸಂಖ್ಯೆಯಿದೆ, ಇಲ್ಲಿನ ನದೀತೀರ, ಚಿಲುಮೆಗಳು, ಗುಡ್ಡ, ಪರ್ವತಗಳೆಲ್ಲವೂ ಹಿಂದೂ ದೇವ-ದೇವತೆಗಳಿಂದ ತುಂಬಿತುಳುಕುತ್ತಿವೆ. ಈತನೇನಾದರೂ 1763ರ ಫೆಬ್ರವರಿಯಲ್ಲಿ ನಡೆದ ಜಾತ್ರೆಯಲ್ಲಿ ಒಂದು ವಾರ ಇಲ್ಲಿರುವಂತಿದ್ದರೆ, ಇಲ್ಲಿನ ಜಾತ್ರಾ ಉತ್ನವ, ಹಬ್ಬ ಹರಿದಿನಗಳಲ್ಲಿ ಭಾಗವಹಿಸುವಂತಿದ್ದರೆ, ಇಲ್ಲಿನ ಎಲ್ಲ ದೇವ-ದೇವತೆಯರ ಬಗ್ಗೆ ಖಂಡಿತವಾಗಿ ವಿವರವಾಗಿ ದಾಖಲಿಸುತ್ತಿದ್ದ ಎಂದು ಸ್ಥಳೀಯ ಜಾನಪದ ವಿದ್ವಾಂಸ ಕೇಸರ ಲಾಲ್ ಹೇಳುತ್ತಾರೆ.

ಇಲ್ಲಿ ತಾಂತ್ರಿಕ ಆರಾಧನೆಗೆ ಹೆಚ್ಚು ಪ್ರಾಮುಖ್ಯತೆ. ಹೀಗಾಗಿ ಜನಸಾಮಾನ್ಯರ ಮೇಲೆ ದೇವರು ಆವಾಹನೆಗೊಳ್ಳುವ ಬಗ್ಗೆ ಇವರಿಗೆ ಅಪರಿಮಿತ ವಿಶ್ವಾಸ. ಫರ್ಪಿಂಕ್ ರಾಜ್ಯದ ಠಾಕೂರ ರಾಜನ ಹೆಸರು ಪಚಾಲಿ ಸಿಂಗ್. ಆತ ಈ ಪ್ರದೇಶದಲ್ಲಿ ಪಚಾಲಿ ಭೈರವನೆಂದೇ ಪ್ರಸಿದ್ಧ. ಅಲ್ಲಿನ ರಾಜಗುರುವಿನ ಮಗಳು ಭೈರವನ ಪತ್ನಿ. ಆಕೆ ವಿಜಯೇಶ್ವರಿ.

ನೇಪಾಳದಲ್ಲಿ 5ಲಕ್ಷ ಭೈರವನ ರೂಪಗಳಿವೆಯೆಂದರೆ ಆಶ್ಚರ್ಯವಾದೀತು. ಇವೆಲ್ಲಕ್ಕೂ ಹೊಂದಿಕೊಂಡಂತೆ ಪ್ರತ್ಯೇಕ ಕಥಾನಕಗಳಿವೆ. ಇದಕ್ಕೆ ಹಳೇ ಖಟ್ಮಂಡುವಿನ ಇಂದ್ರಚೌಕದಲ್ಲಿ ನೆಲೆಸಿರುವ ಆಕಾಶ ಭೈರವ ಹೊರತಲ್ಲ.

ಭೈರವನ ಈ ಕಥಾನಕಕ್ಕೆ ಮಹಾಭಾರತ ನಂಟಿದೆ, ಅದೂ ಯುದ್ಧಪೂರ್ವದಲ್ಲಿ. ಇದರ ಪಾತ್ರಧಾರಿಗಳು ಶಿವ ಮತ್ತು ಕೃಷ್ಣ. ಇವರಿಬ್ಬರೂ ನರ ರೂಪಿಗಳೇ. ಕೃಷ್ಣ ಇಲ್ಲಿ ಕುರಿಗಾಹಿಯಾದರೆ, ಶಿವನು ಯಲಂಬರನೆಂಬ ರಾಜ.  ಯಲಂಬರ ಕೇಳುತ್ತಾನೆ - ಮಹಾಭಾರತ ಯುದ್ಧ ಇನ್ನೂ ಏಕೆ ನಡೆದಿಲ್ಲ . ಈ ರಾಜನು ಕೃಷ್ಣನನ್ನು ಭೇಟಿಯಾದಾಗ ಕೇಳುವ ಪ್ರಶ್ನೆಯಿಂದ ಕೃಷ್ಣನಿಗೆ ಅಚ್ಚರಿಯಾಗುತ್ತದೆ. ಹುಲು ಮಾನವನಿಗೆ ಇಂಥ ದಿವ್ಯದೃಷ್ಟಿಯಿರಲಾರದು ಎಂದು ಎಣಿಸಿ, ಈತನು ಶಿವನಲ್ಲದೆ ಬೇರೆಯಲ್ಲ ಎಂದು ತೀರ್ಮಾನಿಸುತ್ತಾನೆ.  ಯುದ್ಧ ನಡೆಯುವ ಕಾಲಕ್ಕೆ ಈತ ಜೀವಂತವಾಗಿದ್ದರೆ ಯುದ್ಧವೆಂದೂ ನಡೆಯಲಾರದು ಎಂದು ಯೋಚಿಸಿ, ಯಲಂಬರನಿಗೆ ಒಂದು ಪಂದ್ಯದ ಆಮಿಷವೊಡ್ಡುತ್ತಾನೆ. ಅದರಂತೆ, ಕೃಷ್ಣನು ತನ್ನ ಹೆಬ್ಬೆರಳ ತುದಿಯಲ್ಲಿ ಯಲಂಬರನ ಜೀವವನ್ನು ಧರಿಸಿ, ಅದನ್ನು ಒಂದು ಎತ್ತರದ ಮರದ ತುದಿಯಲ್ಲಿಡುತ್ತಾನೆ. ಯಲಂಬರನು ಕೃಷ್ಣನ ಹೆಬ್ಬೆರಳನ್ನು ಕತ್ತರಿಸಲು ಬಾಣ ಹೂಡಿದಾಗ, ಕೃಷ್ಣನು ತನ್ನ ಸುದರ್ಶನ ಚಕ್ರದಿಂದ ಆತನನ್ನು ಸಂಹರಿಸುತ್ತಾನೆ. ತನ್ನೊಡನೆ ಮಾತನಾಡಲು ಬಂದವನ ಜೀವ ತೆಗೆದ ಬಗ್ಗೆ ಪಶ್ಚಾತ್ತಾಪ ಹೊಂದಿದ ಕೃಷ್ಣನು ದುಃಖಿತನಾಗುತ್ತಾನೆ. ಏಕೆಂದರೆ ಭಕ್ತರನ್ನು ಸಂರಕ್ಷಿಸಬೇಕಲ್ಲದೆ, ಅವರ ಜೀವ ತೆಗೆಯಬಾರದೆನ್ನುವ ನಿಲುವುಳ್ಳ ಕೃಷ್ಣನನ್ನು ಕಂಡು ಯಲಂಬರನೂ ಬೇಸರಗೊಳ್ಳುತ್ತಾನೆ. ಆಕಾಶದಲ್ಲಿದ್ದುಕೊಂಡು  ತನ್ನ ತಲೆಯ ಮೂಲಕವೇ ಮಹಾಭಾರತ ಯುದ್ಧವನ್ನು ನೋಡುವ ಅವಕಾಶಕೊಡು ಎಂದು ಬೇಡುತ್ತಾನೆ. ಅದಕ್ಕೆ ಸಮ್ಮತಿಸಿದ ಕೃಷ್ಣನಿಗೆ ವಂದಿಸಿ, ಯಲಂಬರ ರಾಜನು ಉತ್ತರದಿಕ್ಕಿಗೆ ಪ್ರಯಾಣಮಾಡಿ, ಹಿಮಾಲಯದಾಚೆಗೆ ಇರುವ ಖಟ್ಮಂಡುವಿನಲ್ಲಿ ಆಕಾಶ ಭೈರವನಾಗಿ ನೆಲೆಸುತ್ತಾನೆ. 

ಖಟ್ಮಂಡುವಿನ ಈ ಆಕಾಶ ಭೈರವನು ನೀಲ ಮೊಗದವ. ಅವನ ಕಣ್ಣುಗಳು ಬೆಳ್ಳಿಯವು. ತಲೆಬುರುಡೆಗಳ ಕಿರೀಟಕ್ಕೆ ಸರ್ಪಗಳ ಅಲಂಕಾರ. ಬೆಳ್ಳಿಯ ಸಿಂಹಾಸನದಲ್ಲಿ ಕುಳಿತಿರುವ ಈತನನ್ನು ಭಯಂಕರವಾದ ಸಿಂಹವು ಹೊತ್ತು ನಿಂತಿರುವಂತೆ ಚಿತ್ರಿಸಲಾಗಿದೆ. ಅವನ ಜತೆಯಲ್ಲಿ ಭೀಮಸೇನ ಮತ್ತು ಭದ್ರಕಾಳಿಯರಿದ್ದಾರೆ. ಶುಭಸೂಚನೆಗೆಂದು ಗಣಪತಿ ಮತ್ತು ಷಣ್ಮುಖರಿದ್ದಾರೆ. ಇದು ಯಲಂಬರ ರಾಜನು ಧರಿಸಿದ ಮುಖವಾಡದ ಸ್ವರೂಪವೆಂದು  ಹೇಳಲಾಗುತ್ತದೆ. 

ಈತನು ಮಹರ್ಜನ್ ಜಾತಿಗೆ ಸೇರಿದ ರೈತರ ಆರಾಧ್ಯ ದೈವ. ಆಕಾಶ ಭೈರವನ ಹಣೆಯ ಮಧ್ಯದಲ್ಲಿ ಬುದ್ಧನ ಬಿಂಬವಿದೆ. ಇದನ್ನು ಹಿಂದೂಗಳು ಬ್ರಹ್ಮನೆಂದು ಮಾನ್ಯ ಮಾಡುವರು. ಹಿಂದೂಗಳು, ಬೌದ್ಧರು ಸಮಾನವಾಗಿ ಆದರಿಸುವ ಈ ಆಕಾಶ ಬೈರವನಿಗೆ ತುಂಬ ಮಾನ್ಯತೆಯಿದೆ. 

ಈ ಕಥಾನಕದಲ್ಲಿ ಅಡಗಿರುವ ರೋಚಕತೆ ಮತ್ತು ಭಕ್ತಿಭಾವಗಳು ಮುಖ್ಯವೇ ವಿನಾ ಅದರ ತಾರ್ಕಿಕ ವಿಶ್ಲೇಷಣೆಯಲ್ಲ. ಅಂಥ ಭಾವಗಳು ನಮ್ಮನ್ನು ವಿನೀತರನ್ನಾಗಿಸುತ್ತವೆ, ದೈವತ್ವದ ಶಕ್ತಿಗೆ ಗೌರವ ನೀಡಲು ಪ್ರೇರಿಸುತ್ತವೆ. 


* * * * * * *