|
ನಾಕೋಡಾ ಭೈರವನ ಸಮ ಭಂಗಿಯ ಮೂರ್ತಿ |
ಜೈನ ಧರ್ಮವು ಹಿಂದೂ ಧರ್ಮದಿಂದ ಮೂಡಿಬಂದ ಮತ್ತೊಂದು ಮತಧರ್ಮವೆನ್ನುವುದು ಸರ್ವವಿದಿತ. ಮಾತೃಧರ್ಮದ ಛಾಯೆಯಿಂದ ತಪ್ಪಿಸಿಕೊಳ್ಳುವುದು ಅದೆಷ್ಟು ಕಷ್ಟಕರವೆನ್ನಲು ಸ್ವಾರಸ್ಯಕರ ಉದಾಹರಣೆ ಇಲ್ಲಿದೆ. ಅದು ನಾಕೋಡಾ ಭೈರವನ ಕಥೆ. ಜೈನರಲ್ಲಿ ಶ್ವೇತಾಂಬರ ಪಂಥದವರು ರೂಢಿಯಲ್ಲಿಟ್ಟುಕೊಂಡಿರುವ ಭೈರವನ ಆರಾಧನೆಯಲ್ಲಿ ಒಂದು ವಿಧದ ಧರ್ಮಸಂಕಟವಿದೆ, ಲೌಕಿಕ ಆಕರ್ಷಣೆಯಿದೆ. ಹಾಗೆಯೇ ಇವೆರಡೂ ಇಲ್ಲದ ಜನವರ್ಗವೂ ಇದೆಯೆನ್ನುವುದು ಇಲ್ಲಿನ ಸ್ವಾರಸ್ಯ.
ನಾಕೋಡಾ ಎನ್ನುವುದು ರಾಜಾಸ್ಥಾನದ ಪಶ್ಚಿಮ ಭಾಗದಲ್ಲಿರುವ ಒಂದು ಗ್ರಾಮದ ಹೆಸರು. ಕ್ರಿ.ಪೂ. ೨ನೇ ಶತಮಾನದಿಂದ, ಎಂದರೆ ಜೈನರ ೨೪ನೇ ತೀರ್ಥಂಕರ ಮಹಾವೀರನ ಪರಿನಿರ್ವಾಣದ ಕಾಲದಿಂದಲೂ ಅಲ್ಲಿ ಜೈನರ ವಸತಿಗಳಿದ್ದವು ಎನ್ನುವುದು ಇತಿಹಾಸ. ಜೈನ ಶ್ವೇತಾಂಬರ ಪಂಥದ ಲೆಕ್ಕಾಚಾರದಂತೆ ಕ್ರಿ.ಪೂ. ೫೭೪ರ ಕಾಲದಿಂದಲೂ ದೇವಾಲಯಗಳ ನಿರ್ಮಾಣ, ವಿಗ್ರಹಾರಾಧನೆ, ಅಂದಿನ ಪ್ರಬಲ ಜೈನ ತತ್ವಜ್ಞಾನಿ ಹರಿಭದ್ರನಂಥ ಸಂತರ ದರ್ಶನಗಳಂಥ ಧಾರ್ಮಿಕ ಚಟುವಟಿಕೆಗಳು ನಡೆದುಬಂದಿದ್ದವು. ಸರಿಸುಮಾರು ಇದೇ ಅವಧಿಯಲ್ಲಿ ರಾಜಾಸ್ಥಾನದಲ್ಲಿ ಉಂಟಾದ ರಾಜಕೀಯ ವಿಪ್ಲವಗಳಿಂದಾಗಿ, ದುರುಳ ದೊರೆಗಳ ಆಡಳಿತದಿಂದ ಭಂಗಪಟ್ಟ ಜೈನ ಸಮುದಾಯವು ತಮ್ಮ ದೇವತೆಗಳನ್ನು ಸಂರಕ್ಷಿಸಲೆಂದು ವಿಗ್ರಹಗಳನ್ನು ನೆಲದಲ್ಲಿ ಹುಗಿದಿಟ್ಟರು. ಕಾಲಾಂತರದಲ್ಲಿ ಅವು ಅಲ್ಲೇ ಉಳಿದುಕೊಂಡವು. ಕ್ರಿ.ಶ. ೧೪೫೫ರಲ್ಲಿ ಈ ಪ್ರದೇಶದ ಉತ್ಖತನ ನಡೆದಾಗ, ನಾಕೋಡಾ ಪಾರ್ಶ್ವನಾಥನ ವಿಗ್ರಹ ದೊರಕಿತು.
ಪ್ರಚಲಿತವಿರುವ ಒಂದು ಕಥಾನಕದಂತೆ, ಓರ್ವ ಸಾಮಾನ್ಯ ಜೈನ ನಾಗರಿಕನಿಗೆ ಪಾರ್ಶ್ವನಾಥನು ಸ್ವಪ್ನದಲ್ಲಿ ಕಾಣಿಸಿಕೊಂಡು ತಾನು ಇಂಥ ಎಡೆಯಲ್ಲಿ ಇರುವುದಾಗಿಯೂ, ತನ್ನನ್ನು ಹೊರಗೆ ತೆಗೆದು ಪೂಜಿಸುವಂತೆ ಆದೇಶಿಸಿದನು. ಅದನ್ನು ಶಿರಸಾ ವಹಿಸಿದ ಆ ನಾಗರಿಕನು, ಕರ್ತಾರಗಚ್ಛ ಮುನಿ ಕೀರ್ತಿರತ್ನಸೂರಿಯ ನೇತೃತ್ವದಲ್ಲಿ ಈ ಮೂರ್ತಿಯನ್ನು ಹೊರತೆಗೆದು, ಅದನ್ನು ಪ್ರತಿಷ್ಠಾಪಿಸಲು ಉದ್ದೇಶಿಸಿದನು. ನೋಡ ನೋಡುತ್ತಿದ್ದಂತೆ ಜನರು ಕೀರ್ತಿನಾಥಸೂರಿಯನ್ನು ಹಿಂಬಾಲಿಸುತ್ತ ನಡೆದಾಗ ಅದೊಂದು ದೊಡ್ಡ ಮೆರವಣಿಗೆಯ ರೂಪ ತಳೆಯಿತು. ಮೆರವಣಿಗೆಯ ಮುಂಭಾಗದಲ್ಲಿ ಓರ್ವ ತೇಜಸ್ವಿ ಬಾಲಕನು ನರ್ತಿಸುತ್ತ ಸಾಗುತ್ತಿದ್ದುದನ್ನು ಕೀರ್ತಿನಾಥಸೂರಿ ಗಮನಿಸಿದನು. ಅದು ಭೈರವನಲ್ಲದೆ ಬೇರೆ ಯಾರೂ ಅಲ್ಲವೆಂದು ತಿಳಿದು, ನಾಕೋಡಾದ ಪ್ರವೇಶದ್ವಾರದಲ್ಲಿ ಪಿಂಡಾಕಾರದ ಭೈರವನನ್ನು ಸ್ಥಾಪಿಸಿ, ನಂತರ ಪಾರ್ಶ್ವನಾಥನನ್ನು ಸ್ಥಾಪಿಸಿದನು. ಕಾಲ ಕಳೆದಂತೆ ಅಲ್ಲಿ ಜನಸಂಚಾರ ವಿರಳವಾಯಿತು. ೨೦ನೇ ಶತಮಾನದ ಆದಿಭಾಗದಲ್ಲಿ ಈ ಪ್ರದೇಶಕ್ಕೆ ಬಂದ ಜೈನ ಸನ್ಯಾಸಿನಿ ತಪಾಗಚ್ಛ ಸುಂದರಶ್ರೀ ಎಂಬಾಕೆಯು ತನ್ನ ಉಳಿದ ಜೀವಿತಾವಧಿಯನ್ನು ಇಲ್ಲಿನ ಗುಡಿ-ಗುಂಡಾರಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದಳು. ಹೀಗಾಗಿ ಪಾರ್ಶ್ವನಾಥ ಮತ್ತು ನಾಕೋಡಾ ಭೈರವರ ಪೂಜಾದಿಗಳು ನಡೆಯಲಾರಂಭಿಸಿದವು.
|
ನಾಕೋಡಾ ಭೈರವನ ಮೂಲ ವಿಗ್ರಹವನ್ನು
ಹೋಲುವ ಇತ್ತೀಚಿನ ಶಿಲ್ಪ
|
ನಾಕೋಡಾ ಭೈರವನ ಮೂರ್ತಿಯು ಈಗ ಕಾಣಿಸುತ್ತಿರುವಂತೆ ಮಾನವಾಕೃತಿಯನ್ನು ಹೊಂದಿರಲಿಲ್ಲ. ತಪಾಗಚ್ಛ ಹಿಮಾಚಲಸೂರಿಯೆಂಬ ಜೈನ ಸಾಧುವು, ಈಗಿರುವ ಮೂರ್ತಿಯನ್ನು ಪಾರ್ಶ್ವನಾಥನ ಪಕ್ಕದಲ್ಲಿ ಸ್ಥಾಪಿಸಿದರು. ಈ ಭೈರವನು ಕೆಂಪು ಮುಖ, ಮೀಸೆ ಮತ್ತು ಭಾರತದಲ್ಲಿ ಪ್ರಚಲಿತವಿರುವ ಎಲ್ಲ ಭೈರವ ವಿಗ್ರಹಗಳ ಕೈಗಳಲ್ಲಿರುವಂತೆ ಕಪಾಲ, ಡಮರು, ಖಡ್ಗ ಮತ್ತು ತ್ರಿಶೂಲಗಳನ್ನು ಧರಿಸಿರುವನು. ಜೈನ ಶಿಲ್ಪಗಳಲ್ಲೂ ನಾಲ್ಕು ಕೈಗಳನ್ನು ಹೊಂದಿರುವ ವಿಗ್ರಹಗಳ ಆರಾಧನೆಯಿದೆ. ಭಾರತದ ಒಳಗೆ ಮತ್ತು ಹೊರಗೆ ಮೂಲ ಮಂದಿರದಂತೆಯೇ ಪೂಜಾದಿಗಳು ನಡೆಯುತ್ತಿರುವುದು ಆತನು ಎಲ್ಲೆಡೆ ಪ್ರಚಲಿತನಾಗಿರುವುದಕ್ಕೆ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಹುಬ್ಬಳ್ಳಿ, ಬೆಂಗಳೂರು, ಮೈಸೂರು, ರಾಮನಗರ, ದಾವಣಗೆರೆ ಮುಂತಾದ ಹಲವಾರು ಸ್ಥಳಗಲ್ಲಿ ನಾಕೋಡಾ ಭೈರವ ಮಂದಿರಗಳಿವೆ. ಇಷ್ಟೆಲ್ಲ ಇದ್ದರೂ ಶ್ವೇತಾಂಬರ ಪಂಥದಲ್ಲೇ ಕೆಲವರು ನಾಕೋಡಾ ಭೈರವನಿಗೆ ಎರಡನೆಯ ಸ್ಥಾನವನ್ನು ನೀಡಿದ್ದಾರೆ. ಅವರ ತರ್ಕ ಹೀಗಿದೆ. ಪಾರ್ಶ್ವನಾಥನು ಜೈನ ತೀರ್ಥಂಕರ. ಆತ ಜೀವನ್ಮುಕ್ತ. ಭೈರವನಾದರೋ ಜನ್ಮಚಕ್ರಕ್ಕೆ ಸಿಲುಕಿ, ಪದೇ ಪದೇ ಜನ್ಮವೆತ್ತುವನು. ಲೌಕಿಕ ಸುಖಸಾಧನಗಳನ್ನು ಆತ ನೀಡಬಲ್ಲನೇ ವಿನಾ ಜೀವನ್ಮುಕ್ತನಾದ ಪಾರ್ಶ್ವನಾಥನಲ್ಲ. ಇದೆಲ್ಲ ಏನಿದ್ದರೂ ಭಕ್ತರು ಲೌಕಿಕ ಸುಖ, ಸಂಪತ್ತು, ಆರೋಗ್ಯಗಳಿಗೆಂದು ನಾಕೋಡಾ ಭೈರವನನ್ನೇ ಆಶ್ರಯಿಸುವರು.
ಹರಕೆಗಳನ್ನು ತೀರಿಸುವ ವಿಷಯದಲ್ಲೂ ವ್ಯತ್ಯಾಸವಿಲ್ಲ. ಅನೇಕ ಜೈನ ವರ್ತಕರ ಅಂಗಡಿಗಳಲ್ಲಿ ಪಾರ್ಶ್ವನಾಥನ ಜತೆಗೆ ಭೈರವನ ಚಿತ್ರಗಳಿರುವುದೂ ಸಾಮಾನ್ಯ. ಕೆಲವು ವರ್ತಕರು ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಭೈರವನನ್ನು ತಮ್ಮ ವ್ಯಾಪಾರ-ವಹಿವಾಟಿನಲ್ಲಿ ಪಾಲುದಾರನನ್ನಾಗಿ ಮಾಡಿಕೊಂಡು, ವಾರ್ಷಿಕ ಆದಾಯದ ಪಾಲನ್ನು ಆತನ ದೇಗುಲಕ್ಕೆ ಸಲ್ಲಿಸುವ ಪದ್ಧತಿಯನ್ನೂ ಇರಿಸಿಕೊಂಡಿದ್ದಾರೆ. ಭೈರವನಿಗೆ ಸಂಬಂಧಿಸಿದಂತೆ ಜೈನ ಧಾರ್ಮಿಕ ವಿಧಿಗಳು ಮಾನ್ಯಮಾಡದ ಎರಡು ಪದ್ಧತಿಗಳು ಹೀಗಿವೆ. ದೇವರು ಮೈಮೇಲೆ ಆವಾಹಿತನಾಗುತ್ತಾನೆ ಮತ್ತು ದೇವರ ಪ್ರಸಾದವನ್ನು ಗುಡಿಯೊಳಗೆ ಮಾತ್ರ ಸೇವಿಸಿದರೆ ಪುಣ್ಯ, ಹಾಗೆ ಮಾಡದಿರುವುದು ಪಾಪವೆಂಬ ಎರಡು ಗ್ರಹಿಕೆಗಳಿವೆ.
|
ಪಾರ್ಶ್ವನಾಥ ವಿಗ್ರಹ |
ಪಾರ್ಶ್ವನಾಥ ಮತ್ತು ಭೈರವರ ಪೂಜೆಯಲ್ಲಿಯೂ ಒಂದು ವೈಶಿಷ್ಟ್ಯ ಕಂಡುಬರುತ್ತದೆ. ಅದೆಂದರೆ ಪಾರ್ಶ್ವನಾಥನಿಗೆ ಮೊದಲ ಪೂಜೆ ಸಲ್ಲುತ್ತದೆಯಾದರೆ, ನಂತರದ್ದು ಭೈರವನಿಗೆ. ನಾಕೋಡಾ ಭೈರವನ ಪೂಜೆಯ ಆರಂಭದೊಂದಿಗೆ, ಪಾರ್ಶ್ವನಾಥನು ಮರೆಯಾಗುವಂತೆ ಪೂಜಾರಿಯು ತೆರೆಯನ್ನು ಸರಿಸುತ್ತಾನೆ. ತೆರೆಹಾಕುವ ಸಂಪ್ರದಾಯ ಹಿಂದೂಗಳಲ್ಲಿ ಇದ್ದರೆ ಜೈನರಲ್ಲಿ ಅಂಥ ಪದ್ಧತಿಯಿಲ್ಲ. ಈ ಎಲ್ಲ ಪೂಜಾದಿಗಳನ್ನು ಹಿಂದೂ ಅರ್ಚಕರೇ ನಿರ್ವಹಿಸುವರು. ಪೂಜಾ ವಿಧಾನಗಳ ವಿವಿಧ ಭಾಗಗಳನ್ನು ಹರಾಜು ಹಾಕುವ ಮೂಲಕ ಭಕ್ತರ ಒಳಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲಾಗುತ್ತದೆ. ದೇವರಿಗೆ ಸ್ನಾನವಿಧಿಗಳನ್ನು ಪ್ರಕ್ಷಾಳನ ಪೂಜಾ, ಕೇಸರಿಯ ಸಮರ್ಪಣೆಯನ್ನು ಕೇಸರೀ ಪೂಜಾ, ಧೂಪ ಸಲ್ಲಿಸುವಿಕೆಯನ್ನು ಧೂಪ ಪೂಜಾ, ಸುಗಂಧ ದ್ರವ್ಯ ಲೇಪನವನ್ನು ಇತ್ರ್ ಪೂಜಾ, ಹೂವುಗಳ ಪುಷ್ಪಪೂಜಾ, ಮತ್ತು ದೀಪಾರಾಧನೆಯನ್ನು ಆರತಿ ಎಂದು ವಿಭಾಗಿಸಿ, ಸೇವಾದಾರರು ತಮ್ಮ ಇಷ್ಟದ ಸೇವೆಯನ್ನು ಮಾಡಲು ಅನುವು ಮಾಡಿಕೊಡಲಾಗುತ್ತದೆ. ಸುಗಂಧ ಲೇಪನ, ಪುಷ್ಪಪೂಜಾ ಮತ್ತು ಆರತಿಗಳನ್ನು ಹೆಚ್ಚು ಹಣ ಸಂದಾಯ ಮಾಡುವವರು ಮಾತ್ರ ಪಡೆಯಲು ಅವಕಾಶವಿದ್ದು, ಆರತಿಯ ಸೇವಾ ಸಂದರ್ಭದಲ್ಲಿ ಕಾಣಿಕೆಗಳನ್ನು ಅರ್ಪಿಸುವುದು ಮತ್ತು ಭೈರವನ ದರ್ಶನ ಪಡೆಯುವುದು ಶ್ರೇಷ್ಠವೆಂಬ ಭಾವನೆಯಿದೆ. ಸಂಜೆಯ ಆರತಿ ಮತ್ತು ವಿಶೇಷ ಸಂದರ್ಭಗಳ ಪೂಜಾ ಕೈಂಕರ್ಯದಲ್ಲಿ ಜನರು ಪಾರ್ಶ್ವನಾಥನನ್ನು ಮೊದಲು ನೋಡುವುದು ಉತ್ತಮವೋ, ಭೈರವನನ್ನು ಮೊದಲು ನೋಡುವುದು ಒಳಿತೋ ಎಂಬ ಜಿಜ್ಞಾಸೆಗೆ ಒಳಗಾಗುತ್ತಾರೆ.
ಮಾರ್ಗಶಿರ ಮಾಸದ ಕಾಲಭೈರವಾಷ್ಟಮಿ, ಭೈರವನ ಜನ್ಮದಿನ. ಅಂಥ ಸಂದರ್ಭಗಳಲ್ಲಿ ಮತ್ತು ವಿಶೇಷತಃ ಭಾನುವಾರಗಳಂದು ಭಕ್ತರ ಮೈಮೇಲೆ ಭೈರವನು ಆವಾಹಿತನಾಗುತ್ತಾನೆ. ಭಕ್ತರು ತಮ್ಮ ಆರೋಗ್ಯ, ವಿವಾಹ, ಭವಿಷ್ಯ ಮುಂತಾದ ಪ್ರಶ್ನೆಗಳಿಗೆ ಆವಾಹಿತರನ್ನು ಕೇಳಿ ಪರಿಹಾರ ಪಡೆಯುವರು. ಇದರಲ್ಲಿ ಜೈನರು, ಜೈನರಲ್ಲದವರೂ ಭಾಗವಹಿಸುವರು. ಕೆಲವೊಮ್ಮೆ ಜೈನರ ಮೇಲೆ ಕೂಡಾ ಭೈರವನು ಆವಾಹಿತನಾಗುವುದುಂಟು.
ಹೀಗೆ ಭೈರವನ ಕಥಾನಕಗಳು, ಭೈರವ ದೇವರ ಸಂಬಂಧದ ಆಚರಣೆಗಳು, ಪದ್ಧತಿಗಳು ಆನೂಚಾನವಾಗಿ ನಮ್ಮ ದೇಶದಲ್ಲಿ ನಡೆಯುತ್ತ ಬಂದಿದೆ. ಉತ್ತರ ಭಾರತವಲ್ಲದೆ ದಕ್ಷಿಣ ಭಾರತದಲ್ಲಿಯೂ ಆತನ ಹಲವಾರು ದೇಗುಲಗಳು, ಮಂದಿರಗಳು ಪ್ರತಿಷ್ಠಾಪಿತವಾಗುತ್ತಿರುವುದು ಈ ಶತಮಾನದಲ್ಲಿ ನಡೆಯುತ್ತಿರುವ ಹೊಸ ಪ್ರಕ್ರಿಯೆಯೆನ್ನಬಹುದು.
* * * * * * *