ಗುರುವಾರ, ಮೇ 5, 2011

ಕುಕನೂರಿನ ಕಾಲಭೈರವ ವಿಗ್ರಹ

ಕುಕನೂರಿನ ಕಾಲಭೈರವ ವಿಗ್ರಹ

    ರಾಯಚೂರು ಜಿಲ್ಲೆಯ ಇಟಗಿ ಸಮೀಪದಲ್ಲಿ ಕುಕನೂರು ಎಂಬ ಗ್ರಾಮ.  ಇಲ್ಲಿ ಎರಡು  ಪುರಾತನ ಮಂದಿರಗಳಿವೆ.   ಒಂದು ಮಹಾಮಾಯಿ ಮಂದಿರ, ಇನ್ನೊಂದು ನವಲಿಂಗ ದೇವಾಲಯ. 


    

        ಮಹಾಮಾಯಿ ದೇವಿಯ ಗರ್ಭಗುಡಿಯ ಬಲಕ್ಕೆ ನೀವೀಗ ನೋಡುತ್ತಿರುವ ಕಾಲಭೈರವನ ವಿಶಿಷ್ಟ ಶಿಲ್ಪವಿದೆ.  ಕಾಲಭೈರವನು "ಶುನಕಾ ರೂಢಂ" ಎಂದು ಧ್ಯಾನ ಶ್ಲೋಕದಲ್ಲಿ ವಿವರಣೆ ಇದೆ.  ಆದರೆ ಬಹುತೇಕ ಶಿಲ್ಪಗಳಲ್ಲಿ ಕಾಲಭೈರವನ ಅಕ್ಕ ಪಕ್ಕಗಳಲ್ಲಿ ನಾಯಿಯು ಇರುವಂತೆ, ಇಲ್ಲವೇ ಕಪಾಲದಿಂದ ಸುರಿಯುತ್ತಿರುವ ರಕ್ತವನ್ನು ನಾಯಿಯು ನಕ್ಕಲು ಹವಣಿಸಿತ್ತಿರುವಂತೆ ಚಿತ್ರಿಸಲಾಗಿದೆ, ಕುಕನೂರಿನಲ್ಲಿನ ಈ ಶಿಲ್ಪ ವಿಶಿಷ್ಟ ಎಂದದ್ದು ಈ ಕಾರಣಕ್ಕೆ.  ಅಲ್ಲಿ ಆತನು ಶುನಕಾರೂಢನಾಗಿರುವ ಬದಲು, ಅಶ್ವಾರೂಢನಾಗಿರುವನು.  ಇದೇಕೆ ಹೀಗೆ ಎಂದು ಚಿಂತಿಸಿದರೆ ಉತ್ತರವೇನೂ ಹೊಳೆಯಲಿಲ್ಲ. 

    ಕಾಲಭೈರವನ ಬಗ್ಗೆ ಸಮಗ್ರ ಅಧ್ಯಯನ ಮಾಡಿರುವ, ಮಾಡುತ್ತಿರುವ ಫ್ರೆಂಚ್  ವಿದ್ವಾಂಸೆ, ಕೆರೈನ್  ಲ್ಯಾಡ್ರೆಕ್ ರನ್ನೆ  ಉತ್ತರಕ್ಕೆಂದು ಅಶ್ರಯಿಸಬೇಕಾಯಿತು.  ಆಕೆ ನೀಡಿದ ಉತ್ತರ ತಿಳಿದ ನಂತರ, ಶಿಲ್ಪಗಳನ್ನು  ಅವಲೋಕಿಸುವಲ್ಲಿ ಹಲವು ಮಗ್ಗಲುಗಳನ್ನು ಗಮನಿಸಬೇಕಾದುದು ಅತ್ಯಗತ್ಯವೆಂದು ಅರಿವಾಯಿತು.  ನನ್ನ ಪ್ರಶ್ನೆಗೆ ಲ್ಯಾಡ್ರೆಕ್ ರವರು ಹೀಗೆ ಉತ್ತರ ಬರೆದಿದ್ದರು. " ನೀವು ಕುಕನೂರಿನಲ್ಲಿ ಕಂಡ ವಿಗ್ರಹವು, ಅದನ್ನು ಕಡೆದ ಶಿಲ್ಪಿಯು ಸ್ಠಳೀಯ ಪ್ರಭಾವಕ್ಕೆ ಹೇಗೆ ಒಳಗಾಗಿರುವನೆಂದು ನಿರೂಪಿಸಲು ಅತ್ಯುತ್ತಮ ಉದಾಹರಣೆ, ಏಕೆಂದರೆ ಉತ್ತರ ಕರ್ನಾಟಕದ ಈ ಭಾಗಗಳಲ್ಲಿ ಮೈಲಾರಿ ಅಥವಾ ಮಲ್ಲಾರಿ ಎಂಬ ದೇವತೆಯ ಆರಾಧನೆ ನಡೆಯುತ್ತದೆ.  ಮಲ್ಲಾಸುರನೆಂಬ ದೈತ್ಯನನ್ನು ಅಶ್ವಾರೂಢನಾದ ಶಿವನು ಸಂಹರಿಸಿದ ಎಂಬ ಐತಿಹ್ಯವಿದೆ.  ಈ ಪ್ರದೇಶದಲ್ಲಿನ ಮೈಲಾರೇಶ್ವರನ ಎಲ್ಲಾ ಬಿಂಬಗಳು ಕುದುರೆಯ ಮೇಲೆ ತನ್ನ ಪತ್ನಿ ಮಾಲ್ಹಸಾಳೊಂದಿಗೆ ಕುಳಿತು ದೈತ್ಯ ಸಂಹಾರ ನಡೆಸುತ್ತಿರುವಂತೆ ಚಿತ್ರಿಸಲಾಗಿದೆ.  ಸಾಧಾರಣವಾಗಿ ಎಲ್ಲಾ ಶಿವ ದೇವಾಲಯಗಳ ಒಂದು ಭಾಗದಲ್ಲಿ ಕಾಲಭೈರವ, ಅಥವಾ ಚಂಡೇಶ್ವರನ ಶಿಲ್ಪಗಳು ಇರುತ್ತವೆ.  ಸ್ಠಳೀಯ ದೇವತೆಯ ಪ್ರಭಾವದಿಂದ ಪ್ರೇರಿತನಾದ ಶಿಲ್ಪಿಯು ಇಲ್ಲಿನ ಕಾಲಭೈರವನನ್ನು ಕುದುರೆಯ ಮೇಲೆ ಕೂಡಿಸಿರುವನು" ಎಂದು ಮಾರುತ್ತರ ನೀಡಿದರು. 

        ಶಿಲ್ಪ ಶಾಸ್ತ್ರಜ್ಞರು ತಾವು ವಾಸ ಮಾಡಿದ ಸ್ಠಳದ, ಇಲ್ಲವೇ ಆಶ್ರಯ ನೀಡಿದ ರಾಜ ಮಹಾರಾಜರ ಆಶ್ರಯಗಳ ಅನುಗುಣವಾಗಿ ಇಂಥ ಕೆಲವೊಂದು ಚಿಕ್ಕ ಪುಟ್ಟ ಬದಲಾವಣೆ ಮಾಡಿಕೊಂಡಿರುವರು.  ಅದನ್ನು ಸೂಕ್ಷ್ಮವಾಗಿ ಗಮನಿಸುತ್ತ ಹೊರಟರೆ ಸ್ವಾರಸ್ಯಕರ ಮಾಹಿತಿಗಳು ಹೊರಬೀಳುತ್ತವೆ.