ಗುರುವಾರ, ಡಿಸೆಂಬರ್ 22, 2011

ದಕ್ಷಿಣದಲ್ಲೊಂದು ಕಾಲಭೈರವನ ಭವ್ಯ ನೆಲೆ


ಆದಿಚುಂಚನಗಿರಿಯ ಶ್ರೀ ಕಾಲಭೈರವೇಶ್ವರ ಮಂದಿರ


ದೇವಾಲಯದ ಮುಂಭಾಗ

ಆದಿಚುಂಚನಗಿರಿ ಕ್ಷೇತ್ರವು ಇತ್ತೀಚೆಗೆ ಪ್ರಸಿದ್ಧಿಗೆ ಬಂದಿದ್ದರೂ, ಅದು ಪುರಾತನ ಭೈರವ ಕ್ಷೇತ್ರ. ಈ ಪ್ರದೇಶದಲ್ಲಿ ಬಹಳ ಹಿಂದಿನಿಂದಲೂ ನಾಥಪಂಥದವರು ನೆಲೆಸಿದ್ದರು.ಈ ಬಗ್ಗೆ ಸ್ಪಷ್ಟ ಕುರುಹುಗಳನ್ನು ನೀಡಬಲ್ಲ ಅನೇಕ ಗುಹೆಗಳು, ಮಂದಿರಗಳು ಈ ಪ್ರದೇಶದ ಸುತ್ತಮುತ್ತಲೂ ದೊರೆಯುತ್ತವೆ. ೧೯೩೯ರ ಒಂದು ದಾಖಲೆಯಂತೆ ಇದು ಪುರಾತನ ಶಿವಬಾಲಗಂಗಾಧರೇಶ್ವರನ ನೆಲೆಯೆಂದು ಹೇಳಲು ಆಧಾರಗಳನ್ನು ನೀಡಲಾಗಿದೆ. ಅದರಂತೆ ಇದು ಅಧ್ಯಾತ್ಮ ಸಾಧಕರ ವಾಸಸ್ಧಾನವಾದ್ದರಿಂದ ಶೈವಪಂಥದ ಪ್ರಬಲಕೇಂದ್ರವೆಂದು ಹೇಳಬಹುದು.

 ಆದಿಚುಂಚನಗಿರಿ ಕ್ಷೇತ್ರವು ಈ ಕ್ಷೇತ್ರದ ೭೧ನೇ ಪೀಠಾಧಿಪತಿ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ನೇತೃತ್ವದಲ್ಲಿ ಅಭಿವೃದ್ಧಿಗೊಂಡಿತು. ಶೈವಪಂಥದಲ್ಲಿ ಉಲ್ಲೇಖಿತವಾಗಿರುವ ಅನೇಕ ಆಚರಣೆಗಳು, ವಿಧಿಗಳು ಮತ್ತು ಗ್ರಾಮೀಣ ಪದ್ಧತಿಗಳನ್ನು ಅವರು ಪುನರುಜ್ಜೀವನಗೊಳಿಸಿದರು. ಅಂಥದೊಂದು ಕಾರ್ಯವನ್ನು ಕೈಗೊಳ್ಳುವಾಗ, ಜನರ ನಂಬಿಕೆ ಮತ್ತು ಶ್ರದ್ಧೆಗಳಿಗೊಂದು ಉತ್ತಮ ನೆಲೆ ಹಾಗೂ ಈ ಎಲ್ಲ ಚಟುವಟಿಕೆಗಳೂ ಸಾರೋದ್ಧಾರವಾಗಿ ಮುನ್ನಡೆದುಕೊಂಡು ಹೋಗಬೇಕೆಂಬ ವಿಸ್ತೃತ ದೃಷ್ಟಿಕೋನದೊಂದಿಗೆ ಇಲ್ಲಿ ನೂತನ ಶ್ರೀ ಕಾಲಭೈರವೇಶ್ವರ ಸ್ವಾಮಿಯ ದೇವಾಲಯದ ನಿರ್ಮಾಣ ಹಾಗೂ ಪುರಾತನ ನಾಥಪಂಥದ ಆಚರಣೆಗಳಿಗೆ ಅನುಕೂಲವಾಗುವಂಥ ವಾತಾವರಣವನ್ನು ರೂಪಿಸಿದರು. 
ಭೈರವ ತನ್ನ ವಾಹನದೊಂದಿಗೆ
ಇದರ ಫಲವಾಗಿ ನಿರ್ಮಿತವಾಗಿರುವ ಆದಿಚುಂಚನಗಿರಿಯ ಶ್ರೀ ಕಾಲಭೈರವೇಶ್ವರ ಮಂದಿರವು ದಕ್ಷಿಣ ಭಾರತದಲ್ಲೇ  ಈ ದೇವರಿಗೆ ಸಂಬಂಧಿಸಿದಂತೆ ಅತ್ಯಂತ ದೊಡ್ಡ ಹಾಗೂ ಪ್ರಸಿದ್ಧ ಯಾತ್ರಾಸ್ಥಳವಾಗಿ ಮಾರ್ಪಟ್ಟಿದೆ. ಸಾಧಾರಣವಾಗಿ ಕಾಲಭೈರವನೆಂದರೆ ಕಾಶಿಯ ನೆನಪಾಗುತ್ತದೆ, ಉಜ್ಜಯಿನಿಯ ಕಾಲಭೈರವನೂ ಪ್ರಸಿದ್ಧನೇ ಸರಿ. ದಕ್ಷಿಣದಲ್ಲಿ ಈ ದೇವತೆಯ ದೇಗುಲಕ್ಕೆ ಇದ್ದ ಕೊರತೆಯು ಆದಿಚುಂಚನಗಿರಿಯ ಮಂದಿರದ ಮೂಲಕ ತುಂಬಿದಂತಾಗಿದೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸುಮಾರು ೧೧೦ ಕಿ.ಮೀ.ಗಳ ದೂರದಲ್ಲಿ ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿಗೆ ಸೇರಿದ ಬೆಳ್ಳೂರು ಸಮೀಪ ಈ ದೇವಾಲಯವಿದೆ. ಇದು ೨೦೦೮ರ ಫೆಬ್ರವರಿಯಲ್ಲಿ ಸ್ಥಾಪಿತವಾಯಿತು. ಪ್ರಕೃತಿಯ ಸಿರಿಮಡಿಲಲ್ಲಿರುವ, ಬೃಹತ್ ಬಂಡೆಗಳ ಹಿನ್ನೆಲೆಯಲ್ಲಿ ಪಡಿಮೂಡಿರುವ ಈ ಮಂದಿರವು ಆಧುನಿಕ ಮತ್ತು ಪುರಾತನ ಶೈಲಿಗಳೆರಡನ್ನೂ ಸಮವಾಗಿ ಬಳಸಿಕೊಂಡಿದೆ. 

ಆದಿಚುಂಚನಗಿರಿಯ ಈ ದೇವಾಲಯವನ್ನು ತಲುಪಲು ಬೆಟ್ಟದ ಪಶ್ಚಿಮ ದಿಕ್ಕಿನಲ್ಲಿರುವ ಮೆಟ್ಟಿಲುಗಳ ಮೂಲಕ ಸಾಗಬೇಕು. ಬೆಟ್ಟದ ತಪ್ಪಲಿನಲ್ಲಿ ಬೃಹತ್ ಪುಷ್ಕರಣಿಯನ್ನು ರಚಿಸಲಾಗಿದೆ. ಬೆಟ್ಟದ ಮೇಲೆ ಏರುವಾಗ ಅನೇಕ ಮಹಾದ್ವಾರಗಳು ಕಾಣಸಿಗುತ್ತವೆ. ಇವುಗಳ ಇಕ್ಕೆಲಗಳಲ್ಲಿ ಆಶ್ರಮದ ಕಟ್ಟಡಗಳಿವೆ. ಮಧ್ಯದಲ್ಲಿ ಭದ್ರವಾದ, ವಿಸ್ತಾರವಾದ ಬುನಾದಿಯ ಮೇಲೆ ಪೂರ್ವಾಭಿಮುಖವಾಗಿ ನಿಂತಿರುವ ಭವ್ಯ ದೇವಾಲಯವಿದೆ. 

ಈ ದೇವಾಲಯದ ಕಾರ್ಯವು ೧೯೯೩ರಷ್ಟು ಹಿಂದೆಯೇ ಆರಂಭವಾಯಿತು. ಇದನ್ನು ಸರಿಸುಮಾರು ೧೨೦೦ ಶಿಲ್ಪಿಗಳು ಹದಿನೈದು ವರ್ಷಗಳ ಶ್ರಮದಿಂದ ನಿರ್ಮಿಸಿದರು. ಇದರ ರಾಜಗೋಪುರವು ೯೦ ಅಡಿ ಎತ್ತರವಿದ್ದು, ದೇವಾಲಯವು ಪೂರ್ವ ಪಶ್ಟಿಮವಾಗಿ ೨೮೫ ಅಡಿ ಹಾಗೂ ದಕ್ಷಿಣೋತ್ತರವಾಗಿ ೧೮೦ಅಡಿಗಳ ವಿಸ್ತಾರವಾಗಿದೆ. ಉತ್ತರ, ದಕ್ಷಿಣ ಮತ್ತು ಪಶ್ಚಿಮಕ್ಕೆ ಮೂರು ಗೋಪುರಗಳಿದ್ದು ಅವು ಒಂದೊಂದೂ ೫೦ ಅಡಿಗಳಷ್ಟು ಎತ್ತರವಿವೆ. ಇಡೀ ದೇವಾಲಯದಲ್ಲಿ ೧೭೨ ಸ್ಥಂಭಗಳಿವೆ. ತಮಿಳುನಾಡಿನ ಕಾಂಚೀಪುರಂ ಸಮೀಪದಲ್ಲಿ ದೊರೆಯುವ ಕೃಷ್ಣಶಿಲೆಗಳಿಂದ ಇಲ್ಲಿನ ವಿಗ್ರಹಗಳನ್ನು ಕಡೆಯಲಾಗಿದೆ. ಮಧ್ಯದಲ್ಲಿ ಸ್ಥಳದ ಅಧಿದೇವತೆ ಕಾಲಭೈರವ, ಈಶಾನ್ಯಕ್ಕೆ ಸ್ತಂಭಾಂಬಿಕೆ, ಆಗ್ನೇಯಕ್ಕೆ ನಾಗಲಿಂಗೇಶ್ವರಸ್ವಾಮಿ, ಗಣಪತಿ, ಕಾರ್ತಿಕೇಯ, ಹೀಗೆ ೫ ಮಂದಿರಗಳಿವೆ. ದೇವಾಲಯದ ಪ್ರಮುಖ ರಚನೆಗಳಿಗೆ ಸ್ಥಳೀಯವಾಗಿ ಸಿಕ್ಕುವ ಬಿಳಿಯ ಗ್ರಾನೈಟ್‌ ಕಲ್ಲನ್ನು ಬಳಸಲಾಗಿದೆ. ಇಲ್ಲಿನ ಶಿಲ್ಪಶೈಲಿಯಲ್ಲಿ ಕೆಲವೊಂದು ರಚನೆಗಳು ಆಧುನಿಕ ಕಲೆಯನ್ನು ಬಿಂಬಿಸಿದರೆ ಮತ್ತೆ ಕೆಲವು ೧೬-೧೮ನೇ ಶತಮಾನಗಳಲ್ಲಿ ಪ್ರಚಲಿತವಿದ್ದ ವಿಜಯನಗರದ ನಾಯಕರ ಶೈಲಿಯನ್ನು ನೆನಪಿಸುವಂತಿವೆ. ತಮಿಳುನಾಡಿನ ಶಿಲ್ಪಿಗಳೇ ಇದರ ನಿರ್ಮಾಣಕಾರ್ಯದಲ್ಲಿದ್ದುದರಿಂದ ಅಲ್ಲಿನ ಪ್ರಭಾವವೂ ಗೋಚರವಾಗುತ್ತದೆ. 

ಧ್ವಜಸ್ತಂಭ ಮತ್ತು ಗರ್ಭ ಗೃಹ 

ಭೈರವನು ರುದ್ರ-ಶಿವ-ಈಶಾನ ಸ್ವರೂಪನಾದ್ದರಿಂದ ಈತನು ದೇವಮೂಲೆಯೆಂದು ಕರೆಯುವ ಈಶಾನ್ಯದ ಅಧಿಪತಿ. ಸಾಧಾರಣವಾಗಿ ಅಷ್ಟಭೈರವರ ಉಲ್ಲೇಖ ಎಲ್ಲೆಡೆಯೂ ಪ್ರಚಲಿತವಿದೆ. ಆದರೆ ಇಲ್ಲಿ ೮೮ ಭೈರವರ ವಿವಿಧ ರೂಪಗಳನ್ನು ಕಂಡರಿಸಲಾಗಿದ್ದು, ಅವುಗಳನ್ನು ಶುಭ್ರ ಬಿಳಿಯ ಕಂಬಗಳ ಹಿನ್ನೆಲೆಯಲ್ಲಿ ಅಳವಡಿಸಲಾಗಿದೆ. ಅಷ್ಟಭೈರವರೆಂದರೆ ಅಷ್ಟದಿಕ್ಪಾಲಕರು. ಆದರೆ ಕೆಲವು ಶಿವಮಂದಿರಗಳಲ್ಲಿ ಈಶಾನ್ಯದಲ್ಲಿ ಕ್ಷೇತ್ರಪಾಲನನ್ನು ಸ್ಥಾಪಿಸಿರುವುದು ಸಾಧಾರಣವಾಗಿ ಕಂಡುಬರುತ್ತದೆ. ಶಿವನ ಶಕ್ತಿ ಮತ್ತು ತತ್ವಗಳು ದೀಕ್ಷೆ ಮತ್ತು ಉಪದೇಶಗಳ ಮೂಲಕ ಸಾಗಿಬಂದಿರುವ ಉದಾಹರಣೆಗಳಿವೆ. ಆದಿಚುಂಚನಗಿರಿಯ ಈ ದೇಗುಲವು ಬ್ರಹ್ಮಾಂಡದ ಪರಿಕಲ್ಪನೆಯ ಸ್ಥಂಭ ಮತ್ತು ಜಲಸ್ಥಾನವಾದ ಬಾವಿಗಳ ಪರಿಕಲ್ಪನೆಯನ್ನು ಹೊಂದಿದೆ. ವಾರಾಣಸಿಯಲ್ಲಿ ಇದು ಸಾಂಕೇತಿಕವಾಗಿ ಸ್ಥಂಭ ಭೈರವ (ಇದನ್ನು ಹಿಂದಿಯಲ್ಲಿ ಲಾತ್ ಎಂದು ಕರೆಯುವರು) ಮತ್ತು ಕಪಾಲಮೋಚನ ಬಾವಿಗಳೆಂದು ನಿರ್ದೇಶಿಸಲಾಗಿದೆ. ಅದೇ ಪದ್ಧತಿಯು ದಕ್ಷಿಣದಲ್ಲಿ ಮುಂದುವರೆದು ಇಲ್ಲಿ ಅಂಬಿಕೆಯು ಸ್ತ್ರೀ ರೂಪವನ್ನು ಪಡೆದಳೆಂದೂ, ಹೀಗಾಗಿ ಆಕೆಯನ್ನು ಸ್ಥಂಭಾಂಬಿಕೆಯೆಂದೂ ಹೆಸರಿಸಲಾಗಿದೆ. (ಸ್ಥಳೀಯವಾಗಿ ಇದನ್ನೇ ಕಂಬದಮ್ಮನೆಂದು ಕರೆಯುವ ರೂಢಿಯಿದೆ).

ಅಶ್ವಾರೂಢ ರಜತ ಭೈರವ
ಆದಿಚುಂಚನಗಿರಿಯ ಮೂಲವಿಗ್ರಹ ಅನೇಕ ಶತಮಾನಗಳಿಂದ ಪೂಜೆಗೊಳ್ಳುತ್ತಿದೆ. ಅದಕ್ಕೆ ಅನೇಕ ವಿಶಿಷ್ಟ ಲಕ್ಷಣಗಳಿವೆ. ಇಲ್ಲಿ ಆತನು ಬಾಲರೂಪಿ, ಎಂದರೆ ವಟುಕ ಭೈರವ. ಭೈರವನ ವಿಷಯದಲ್ಲಿ ರೂಪನಿಷ್ಪತ್ತಿಯನ್ನು ವಿವರಿಸುವಂಥ ನಿಗದಿತ ಶಿಲ್ಪ ಸಾಹಿತ್ಯ ಲಭ್ಯವಿಲ್ಲದಿರುವುದರಿಂದ, ಕೆಲವೊಂದು ಸ್ಥೂಲ ಲಕ್ಷಣಗಳನ್ನು ಮಾತ್ರ ಗ್ರಹಿಸಿ, ಇತರ ಅಂಗಾಂಗ, ಆಯುಧಗಳಿಗೆ ಸಂಬಂಧಿಸಿದಂತೆ, ಅವುಗಳ ಕೆತ್ತನೆಯು ಭೈರವನ ಆರಾಧಕರ ಇಲ್ಲವೇ ಶಿಲ್ಪಿಗಳ ಮೇಲೆ ಆಧಾರಿತವಾಗಿರುತ್ತದೆಂದು ಈ ವಿಷಯದ ಬಗ್ಗೆ ವಿಶೇಷ ಅಧ್ಯಯನಮಾಡಿರುವ ಕರೈನ್ ಲ್ಯಾಡ್ರೆಕ್‌ ಹೇಳಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಇಟಗಿಯ ಕಾಲಭೈರವನ ವಿಷಯದಲ್ಲಿ ಅವರು ನೀಡಿರುವ ವಿವರಣೆಯನ್ನು ಈ ಹಿಂದೆ ಚರ್ಚಿಸಲಾಗಿದೆ.

ಆದಿಚುಂಚನಗಿರಿಯಲ್ಲಿನ ಕಾಲಭೈರವನ ವಿಗ್ರಹದ ಲಕ್ಷಣಗಳು ಹೀಗಿವೆ : ಇಲ್ಲಿನ ವಿಗ್ರಹಕ್ಕೆ ನಾಲ್ಕು ಕೈಗಳಿದ್ದು, ಮೇಲಿನ ಬಲಗೈಯಲ್ಲಿ ತ್ರಿಶೂಲ, ಕೆಳ ಬಲಗೈನಲ್ಲಿ ಖಡ್ಗಗಳಿವೆ. ಕೆಳ ಎಡಗೈನಲ್ಲಿ ಕಪಾಲ ಮತ್ತು ಬ್ರಹ್ಮನ ಶಿರಗಳಿವೆ. ಈ ಶಿರದ ಕೆಳಗೆ ಕಾಲಭೈರವನ ವಾಹನ ನಾಯಿಯಿದ್ದು ಇದು ಬ್ರಹ್ಮನ ಶಿರದಿಂದ ತೊಟ್ಟಿಕ್ಕುತ್ತಿರುವ ರಕ್ತವನ್ನು ಹೀರುತ್ತಿದೆ. ಅದರ ಹಿಂಗಾಲುಗಳು ಕತ್ತರಿಸಲ್ಪಟ್ಟ ಇನ್ನೊಂದು ಶಿರದ ಮೇಲೆ ಊರಿ ನಿಂತಿವೆ. ಕಾಲಭೈರವನ ವಿಗ್ರಹವನ್ನು ಗುರುತಿಸುವಾಗ ಬ್ರಹ್ಮಶಿರ ಮತ್ತು ಕಪಾಲಗಳು ಮುಖ್ಯವಾಗುತ್ತವೆ. ಏಕೆಂದರೆ ಡಮರು ಮತ್ತು ತ್ರಿಶೂಲಗಳು ಸಾಧಾರಣವಾಗಿ ಎಲ್ಲ ಶಿವ ಶಿಲ್ಪಗಳಲ್ಲಿ ಕಂಡಬರುತ್ತವೆ. ಆದಿ ಚುಂಚನಗಿರಿಯಲ್ಲಿರುವ ಕಾಲಭೈರವನ ವಿಗ್ರಹದಲ್ಲಿನ ವಿಶೇಷವೆಂದರೆ ಆತನು ಸೊಂಟದಲ್ಲಿ ಕಿರುಗತ್ತಿಯನ್ನು ಧರಿಸಿದ್ದಾನೆ. ಅವನ ಜಟೆಯ ಕೂದಲುಗಳು ಹಿಂದಕ್ಕೆ ಬಾಚಿದಂತಿದ್ದು, ಅವು ಕುತ್ತಿಗೆಯ ಹಿಂಭಾಗದಲ್ಲಿ ಹರಡಿಕೊಂಡಿದೆ. ಉಬ್ಬಿದ ಕಣ್ಣುಗಳು, ಕೋರೆದಾಡೆಗಳು, ದೊಡ್ಡ ಕುಂಡಲಗಳು, ದೀರ್ಘವಾದ ಸರ್ಪಮಾಲೆ, ಅಗಲವಾದ ಮುತ್ತಿನ ಮಣಿಗಳ ಹಾರ, ಎತ್ತರವಾದ ಹಾವುಗೆ (ಪಾದುಕೆ)ಗಳು ಸುಂದರವಾಗಿ ಮೂಡಿಬಂದಿವೆ. 





ರಾಮೇಶ್ವರ ದೇವಾಲಯವನ್ನು ನೆನಪಿಸುವ ಅಧುನಿಕ ರಚನೆಗಳು


 ಗರ್ಭಗೃಹದ ಬದಿಯಲ್ಲಿ ೧೦ ಅಡಿ ಎತ್ತರದ ಭವ್ಯವಾದ ಕಪ್ಪುಕಲ್ಲಿನ ಭದ್ರಕಾಳಿಯ ವಿಗ್ರಹವಿದೆ. ಜನಸಂದಣಿಯಿಂದ ಕಾಪಾಡಲು, ಗಾಜಿನ ಕಪಾಟುಗಳಲ್ಲಿ ಇಡಲಾಗಿದೆ. ಶೈವ ತಂತ್ರಾಗಮದ ಅಧಿದೇವತೆಯೇ ಭೈರವ. ಆತನ ವಿಗ್ರಹಗಳು ಉತ್ತರದ ವಾರಾಣಸಿಯಲ್ಲಿ, ಉಜ್ಜಯನಿಯಲ್ಲಿ  ಯೋಗಿನಿಯರ ಮಂದಿರಗಳಲ್ಲಿ, ವಿಶೇಷತಃ ಶಿವನ ಪ್ರಥಮ ಪತ್ನಿಯಾದ ಸತಿಯ ಶರೀರದ ಭಾಗಗಳು ಬಿದ್ದ ಎಡೆಗಳಾದ ಶಕ್ತಿಪೀಠಗಳಲ್ಲಿ, ಹೀಗೆ ವಿವಿಧೆಡೆಗಳಲ್ಲಿ ಕಂಡುಬರುತ್ತವೆ. ಆದರೆ ದಕ್ಷಿಣ ಭಾರತದಲ್ಲಿ ಆದಿಚುಂಚನಗಿರಿಯ ದೇವಾಲಯವನ್ನು ಮೀರಿಸಿದ ಬೇರೆ ಮಂದಿರ ಕಾಣಲಾರದು.  

ಪುರಾತನ ಆಚರಣೆಗಳ ವೈಭವೀಕೃತ ಮುಂದುವರಿಕೆಯೊಂದಿಗೆ, ಆಧುನಿಕ ಶಿಲ್ಪಶೈಲಿ ಮತ್ತು ವಿಗ್ರಹಾರಾಧನೆಗಳು ಮೇಳೈಸಿರುವ ಈ ಕ್ಷೇತ್ರಕ್ಕೆ ತನ್ನ ಹಿಂದಿನ ವೈಭವ ಮರಳಿ ಬಂದಿರುವುದು ಸಂತಸದ ಸಂಗತಿ.

ಚಿತ್ರ ಕೃಪೆ - ಪವನ್ ಕುಮಾರ್ 
* * * * * * * 

ಮಂಗಳವಾರ, ಡಿಸೆಂಬರ್ 13, 2011

ಬೆಟ್ಟದ ನೆಲ್ಲಿಕಾಯಿ ಮತ್ತು ಸಮುದ್ರದ ಉಪ್ಪು


ಕಾಲಭೈರವ ಮತ್ತು ಕರೈನ್ ಲ್ಯಾಡ್ರೆಕ್‌





ಎಲ್ಲರಿಗೂ ನೂತನ ವರ್ಷದ ಶುಭಾಶಯಗಳು !

ಕಾಲಭೈರವನ ಬಗ್ಗೆ ಅರಿಯಲು, ಬರೆಯಲೆಂದೇ ಈ ಬ್ಲಾಗ್ ಆರಂಭವಾಯಿತಲ್ಲವೆ. ಆ ಆಸಕ್ತಿ ನನ್ನಲ್ಲೇಕೆ ಮೂಡಿತು? ಮುಂದೆ ಹುಡುಕಿಕೊಂಡು ಹೋದಂತೆಲ್ಲ, ಅದು ನನ್ನನ್ನು ಎಲ್ಲೆಲ್ಲಿಗೆ ಕರೆದೊಯ್ದಿತು? ಎಂಬ ವಿಷಯಗಳ ಬಗ್ಗೆ ವಿವರ ಇಲ್ಲಿದೆ. ನಾನು ಕಾಲಭೈರವನತ್ತ ಆಕರ್ಷಿತನಾಗಲು ಆತ ನಮ್ಮ ಕುಲದೇವರೆಂಬ ಭಕ್ತಿ ಕಾರಣವೆಂದರೆ ನನಗೆ ನಾನೇ ಮೋಸ ಮಾಡಿಕೊಂಡಂತಾದೀತು. ನನ್ನ ಬಾಲ್ಯದಲ್ಲಿ ದೇವರುಗಳ ವರ್ಗೀಕರಣದ ಬಗ್ಗೆ ನನಗೇನೂ ತಿಳಿದಿರಲಿಲ್ಲ. ಬಹುತೇಕ ನಮ್ಮ ಆಸಕ್ತಿಯಲ್ಲಿ ಭೈರವನ ಬಗ್ಗೆ ಭಕ್ತಿ ಭಾವವೇ ಹೆಚ್ಚು. ಅದು ಸ್ವಾಭಾವಿಕವೂ ಕೂಡಹಿಂದೂ ಧರ್ಮದ ದೇವತೆಗಳ ಸಂಖ್ಯೆ ಮೂವತ್ತಮೂರು ಕೋಟಿಗಳೆನ್ನುವುದು ಪ್ರಚಲಿತ ಸಂಗತಿ. ಇಷ್ಟೊಂದು ಸಂಖ್ಯೆಗಳಲ್ಲಿರುವ ನಮ್ಮ ದೇವ ದೇವಿಯರ ಬಹಿರ್‌  ರೂಪಗಳು ಬೇರೆ ಬೇರೆಯಾದರೂ ದೈವವೆನ್ನುವುದು ಒಂದೇ ಎನ್ನುವುದು ಸರ್ವವಿದಿತಶೈವ, ವೈಷ್ಣವ ಪಂಥಗಳ ಬಗ್ಗೆ ಗೊತ್ತಿರಲಿಲ್ಲ. ಅದು ಎಲ್ಲರಿಗೂ ಹಾಗೆಯೇ. ದೇವನೊಬ್ಬ, ನಾಮ ಹಲವು. ದೇವರು ವಿವಿಧ ರೂಪಗಳಲ್ಲಿದ್ದರೂ, ಆತನಿಗೆ ಒಂದೇ ರೂಪ. ಇದನ್ನು ಎಲ್ಲ ಹಿರಿಯರೂ ಕಿರಿಯರಿಗೆ ತಿಳಿಸಿಯೇ ಇರುತ್ತಾರೆ. ಆದರೆ ಈ ಸಾಮಾನ್ಯೀಕರಣ ಸಾರ್ವತ್ರಿಕವಾಗುವುದಿಲ್ಲ. ಮುಂದೆ ಬೆಳೆದಂತೆಲ್ಲ, ವಿವಿಧ ಆಚಾರಗಳು, ಆಕಾರಗಳು, ಉತ್ಸವಗಳು, ಆಚರಣೆಗಳು ತೋರಲು ಆರಂಭವಾಗುತ್ತವೆ. ಆಗ ಭೇದ ಕಾಣಿಸಲು ಆರಂಭವಾಗುತ್ತದೆ. ಈ ವ್ಯತ್ಯಾಸಗಳು ಗೋಚರವಾದಂತೆ ಹಲವಾರು ಪಂಥಗಳ, ಆಚಾರ್ಯರ, ಸಿದ್ಧಾಂತಗಳ ಪರಿಚಯವಾಗುತ್ತ ಹೋಗುತ್ತದೆ. ಅದು ಬಾಲಕನನ್ನು ಚಿಂತಿಸುವಂತೆ ಪ್ರೇರಿಸುತ್ತದೆ. ಯುವಕನಾದಂತೆ ಹಲವು ಆಕರ್ಷಣೆಗಳು, ಅಗತ್ಯಗಳು, ಅನಿವಾರ್ಯತೆಗಳಿಂದಾಗಿ ಅವನ ಆಸ್ಥೆಗಳು ಚದುರಿಹೋಗುತ್ತವೆ. ಅದಕ್ಕೂ ಮುಂದೆ, ಸಾಂಸಾರಿಕ ಜೀವನದಲ್ಲಿ, ಹಿರಿಯರು ಆಚರಿಸುತ್ತ ಬಂದುದನ್ನು ಅಲ್ಲಲ್ಲಿ ಹ್ರಸ್ವಗೊಳಿಸಿಕೊಂಡು ಅಗತ್ಯವಿರುವಷ್ಟನ್ನು ಮಾತ್ರ ರೂಢಿಸಿಕೊಳ್ಳುತ್ತೇವೆ. ಮುಂದೆ ಅದೊಂದು ಕ್ರಮವೇ ಆಗಿಹೋಗಿ, ಅದನ್ನು ಮುಂದಿನ ಕಿರಿಯರು ಅನುಸರಿಸುತ್ತಾರೆ. ಇದು ಎಲ್ಲ ಕಾಲದಲ್ಲಿ ನಡೆದುಬಂದಿರುವ ಮಾರ್ಗ. ನಾನು ಕೂಡ ಇದಕ್ಕೆ ಹೊರತಾದವನೇನಲ್ಲ. ಆದರೆ ಹಿರಿಯರು ಬೆಳೆಸಿದ ಅಭ್ಯಾಸಕ್ರಮದ ಬಗ್ಗೆ ಚಿಂತನೆ ಮುಂದುವರೆದಂತೆ, ನನ್ನ ಆಸಕ್ತಿ, ಅಧ್ಯಯನಗಳು ಹೆಚ್ಚಿದಂತೆಲ್ಲ, ಅವು ಈ ವಿಷಯದ ಬಗ್ಗೆ ಹೊಸ ಬಾಗಿಲನ್ನೇ ತೆರೆಯಿತು. ಕಾಲಭೈರವನು ನನ್ನ ಮನೆದೇವರಾದ್ದರಿಂದ, ಆತನ ವಿವರಗಳನ್ನು ನಾನು ಸಂಗ್ರಹಿಸುವಂತಾದುದು ವಿಶೇಷವೇನಲ್ಲ. ಆದರೆ ಈ ದೇವನ ಬಗ್ಗೆ ವಿದೇಶೀಯರು ಮಾಡಿರುವ ಅಧ್ಯಯನವನ್ನು ಕಾಲಕ್ರಮದಲ್ಲಿ ಮುಂದೆ ನೋಡುತ್ತ ಬಂದಾಗ, ನನ್ನದಿನ್ನೂ ಅಂಬೆಗಾಲು ಎನ್ನಿಸಿದ್ದು ಸುಳ್ಳಲ್ಲ. ನಮ್ಮ ಅನೇಕ ಧಾರ್ಮಿಕ, ಸಾಮಾಜಿಕ ಚಿಂತನೆಗಳ ವಿಷಯದಲ್ಲಿ ಹೀಗೇ ಆಗಿದೆ. ಕಾಲಭೈರವನ ಬಗ್ಗೆ ನನ್ನ ಆಸ್ಥೆ ಮೊಳೆತುದೂ ಇಂತಹ ಒಂದು ಚಿಂತನೆಯಿಂದಲೇ.

ನನ್ನ ಮನೆದೇವರು ವೆಂಕಟೇಶ್ವರನೋ, ಈಶ್ವರನೋ, ರಾಮನೋ ಆಗಿದ್ದಲ್ಲಿ, ಇಷ್ಟು ಕುತೂಹಲಕ್ಕೆ ಕಾರಣವಿರುತ್ತಿರಲಿಲ್ಲ. ಈ ಎಲ್ಲ ದೇವರ ಬಗ್ಗೆ ಸಾಕಷ್ಟು ಸಾಮಗ್ರಿ ಎಲ್ಲೆಡೆ ಲಭ್ಯವಿದೆ. ದೇಶಾದ್ಯಂತ ದೇವಾಲಯಗಳು, ಮಂದಿರಗಳಿವೆ, ಭಜನೆ, ಸ್ತೋತ್ರಗಳು, ಉತ್ಸವಗಳು ಸುತ್ತಲೂ ನಡೆಯುತ್ತವೆ. ಹೀಗಾಗಿ ಅವರ ಬಗ್ಗೆ ತಿಳಿಯಬೇಕೆನ್ನುವವನಿಗೆ ಯಾವ ಕಷ್ಟವೂ ಇರಲಾರದು. ಕಾಲಭೈರವನ ವಿಷಯದಲ್ಲಿ ಹೀಗಾಗಲಿಲ್ಲ. ಆತ ಉತ್ತರದವ, ದಕ್ಷಿಣ ಪ್ರಾಂತಕ್ಕೆ ಬರಬೇಕಾದರೆ, ಬಹಳ ಸಮಯವೇ ಹಿಡಿಯಿತು. ಅವನನ್ನ ಅಲ್ಪಸಂಖ್ಯಾತನೆನ್ನಲಾಗದಾದರೂ, ಅವನ ಭಕ್ತರಂತೂ ಅಲ್ಪಸಂಖ್ಯಾತರು. ಆತನಿಗೆ ಇಲ್ಲಿರುವ ಭಕ್ತರ ಸಂಖ್ಯೆ ಕಡಿಮೆ. ಲಭ್ಯವಿರುವಷ್ಟು ಸಾಹಿತ್ಯವನ್ನು ಆಧರಿಸಿ, ಅವನನ್ನು ಪೂಜಿಸಿದರು, ಅದೂ ದೊರೆಯಲಿಲ್ಲವೆಂದಾಗ ಶಿವಾರಾಧನೆಯ ಪಠ್ಯಗಳನ್ನೇ ಬಳಸಿದರು. ದೇವರೊಬ್ಬನೇ, ನಾಮ ಹಲವು, ನಿಜ. ಹಲವು ನಾಮಗಳೆಂದು ಹೇಳಿದವರು ನಾವೇ ಆಗಿರುವಾಗ, ಕೆಲವಾದರೂ ನಾಮಗಳನ್ನು ತಿಳಿದಿರಬೇಕಾದುದು ಅಗತ್ಯವಲ್ಲವೇ. ಇದರಿಂದಾಗಿ ಕಾಲಭೈರವನ ಬಗ್ಗೆ ಇರುವ ಸಾಹಿತ್ಯವನ್ನು ಹುಡುಕಾಡುವ ಅನಿವಾರ್ಯತೆ ಒದಗಿತು.

ಈ ಹಿಂದೆ ಕರೈನ್ ಲ್ಯಾಡ್ರೆಕ್‌ರ ಬಗ್ಗೆ ಬರೆದಿದ್ದೆ. ನನ್ನ ತಮ್ಮ ಚಿ. ರಾಮಚೆಂದಿರನು ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ಕರೈನ್ ಲ್ಯಾಡ್ರೆಕ್‌ರ ಪರಿಚಯವಾಯಿತು. ಅವನು ಬರೆದ ಪತ್ರಕ್ಕೆ ಕೂಡಲೇ ಉತ್ತರಿಸಿದ ಅವರು ಮುಂದೆ, ಅವನು ಕಾಲಭೈರವನ ಕುರಿತಾದ ಸಾಹಿತ್ಯದ ಬಗ್ಗೆ ಕೇಳಿದಾಗ ಕೋರಿಕೆಯನ್ನು ಮನ್ನಿಸಿ ಅವರು ೬೦-೭೦ ಪುಟಗಳಷ್ಟು ವಿಸ್ತಾರದ ಕಾಲಭೈರವನ ಕುರಿತಾದ ಸಾಹಿತ್ಯವನ್ನು ಕಳಿಸಿದ್ದಲ್ಲದೆ, ಆಯಾ ಸಹಸ್ರನಾಮಗಳು, ಶ್ಲೋಕಗಳು, ಕವಚಗಳು, ಸ್ತೋತ್ರಗಳು ಯಾವ ಕಾಲಘಟ್ಟದಲ್ಲಿ ಯಾರು ಇದನ್ನು ರಚಿಸಿದರೆಂಬ ಆಕರ ವಿವರಗಳನ್ನೂ ನೀಡಿದರು. ಅವರು ಅದನ್ನು ರೋಮನ್ ಇಂಗ್ಲಿಷ್‌ ಲಿಪಿಯಲ್ಲಿ ಬರೆದಿದ್ದರು. ಇದನ್ನು ಈಗ ಅವರ ಚಿತ್ರ ಮತ್ತು ಹೆಚ್ಚಿನ ವಿವರಗಳು ದೊರಕಿರುವುದರಿಂದ ಮತ್ತೆ ಅವರ ಬಗ್ಗೆ ಪ್ರಸ್ತಾಪಿಸುತ್ತಿರುವೆ.

ಲ್ಯಾಡ್ರೆಕ್ ಈ ದೇವರ ಬಗ್ಗೆಯೇ ಏಕೆ ಆಸ್ಥೆ ತಳೆದರೆಂಬ ಕುತೂಹಲವಿತ್ತು. ಒಂದರ್ಥದಲ್ಲಿ ಕಾಲಭೈರವನನ್ನು ಕುರಿತಾದ ನನ್ನ ಆಸಕ್ತಿಗೆ, ನನ್ನಂತೆಯೇ ಆಸಕ್ತಿ ಹೊಂದಿರುವ ಎಲ್ಲರಿಗೂ ಅವರು, ಈ ವಿಷಯದ ಬಗ್ಗೆ ಆಕರ ವ್ಯಕ್ತಿಕಾಲಭೈರವನ ವಿಷಯದಲ್ಲಿ ಲ್ಯಾಡ್ರೆಕ್‌ರಿಗೆ ಭಕ್ತಿಯೇನೂ ಇರಲಾರದು, ಆದರೆ  ಈ ದೈವದ ಬಗ್ಗೆ ಅವರಿಗೆ ಕುತೂಹಲವಿತ್ತು. ಅವರ ದೇಶದಲ್ಲಿ, ನಮ್ಮ ದೇಶದಲ್ಲಿ ಇರುವಂತೆಯೆ, ವಿಶ್ವವಿದ್ಯಾಲಯಗಳು ಯಾವುದಾದರೊಂದು ಅವರ ಆಸಕ್ತಿಯ ವಿಷಯದಲ್ಲಿ ಆಳವಾದ ಅಧ್ಯಯನ ಮಾಡಲು ಅದಕ್ಕೆ ಬೇಕಿರುವ ಶಿಷ್ಯವೇತನ ಮತ್ತು ಇತರ ಅನುಕೂಲಗಳನ್ನು ಮಾಡಿಕೊಡುವ ಪದ್ಧತಿಯಿದೆ. ಅದರಂತೆ ಲ್ಯಾಡ್ರೆಕ್‌ ರು ಶಿವನ ಘೋರರೂಪವಾದ ಕಾಲಭೈರವನ ವಿಷಯದಲ್ಲಿ ಅಧ್ಯಯನಕ್ಕೆ ತೊಡಗಿದರು. ಕಾಲಭೈರವನ ಪ್ರತಿಮೆಗಳು, ವಿಗ್ರಹಗಳು ದಕ್ಷಿಣ ಭಾರತದಲ್ಲಿ ಹರಡಿದ ಕಾಲ ಮತ್ತು ಅದಕ್ಕೆ ಕಾರಣವಾಗಿರಬಹುದಾದ ಐತಿಹಾಸಿಕ ಅಂಶಗಳ ವಿಶ್ಲೇಷಣೆಗೆ ತೊಡಗಿದರು.  ಅವರು ಇರುವುದು ಪ್ಯಾರಿಸ್‌ನಲ್ಲಿ. ಅವರು ಇತಿಹಾಸದ ವಿದ್ಯಾರ್ಥಿ. ಪ್ಯಾರಿಸ್‌ನ ಸೋರ್ಬಾನ್‌ ವಿಶ್ವವಿದ್ಯಾಲಯದ ಕಲೆ, ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದಲ್ಲಿ ಭಾರತೀಯ ಕಲಾ ಇತಿಹಾಸದ ಪ್ರೊಫೆಸರರಾಗಿ ಕೆಲಸಮಾಡುತ್ತಾರೆಅವರು ಎಂ.. ಓದುತ್ತಿರುವಾಗ ಭಾರತೀಯ ಕಲಾ ಇತಿಹಾಸವನ್ನು ಆಯ್ಕೆ ಮಾಡಿಕೊಂಡರು. ಆಗ ಕಾಲಭೈರವನ ಉಗ್ರರೂಪ ಅವರನ್ನು ಆಕರ್ಷಿಸಿತು. ಏಕೆಂದರೆ ಮೃದು ಸ್ವಭಾವದ, ದೇವತಾ ಗುಣಗಳನ್ನು ಹೊಂದಿರುವ ಅನೇಕ ದೇವ-ದೇವಿಯರನ್ನು ಬಿಟ್ಟು, ಭಾರತದಲ್ಲಿ ದೇವರ ಉಗ್ರರೂಪವನ್ನು ಏಕೆ ಆರಾಧಿಸುತ್ತಾರೆ ಎಂಬ ಚಿಂತನೆ ಭೈರವನ ಅಧ್ಯಯನಕ್ಕೆ ಪ್ರೇರಣೆ ನೀಡಿತಂತೆ. ಅನೇಕ ಶಿಲ್ಪಿಗಳು, ಭೈರವನ ದೇವಮಂದಿರಗಳಲ್ಲಿ ಈ ಉಗ್ರರೂಪಕ್ಕೆ ಪ್ರಾತಿನಿಧ್ಯ ನೀಡಿರುವುದರ ವಿಶೇಷವೇನು ಎಂಬ ಅಂಶಗಳ ಜತೆಗೆ, ಈ ವಿಷಯವು ಸವಾಲು ಕೂಡ ಆಗಿತ್ತು. ಇದಕ್ಕೆಂದು ಅವರು ಅನೇಕ ಸಂಸ್ಕೃತ ಗ್ರಂಥಗಳನ್ನು, ಶಿಲ್ಪಗಳನ್ನು ಅಧ್ಯಯನಮಾಡಲು ಆರಂಭಿಸಿದರು. ಇಂಥ ಚಟುವಟಿಕೆಯ ಭಾಗವಾಗಿ ಅವರು ಹೊರತಂದಿರುವ ಸಹಸ್ರಪ್ರತಿಮಾವಳಿ ಎಂಬ ಸಿ.ಡಿ.ಯಲ್ಲಿ ದಕ್ಷಿಣ ಭಾರತದ ಎಲ್ಲ ಭೈರವನ ವಿಗ್ರಹಗಳು, ಅವು ಇರುವ ಸ್ಥಳಗಳ ವಿವರಗಳು, ಶಿಲ್ಪಶೈಲಿ, ಅವುಗಳನ್ನು ನಿರ್ಮಿಸಿದ ಕಾಲ, ಮುಂತಾಗಿ ಯಥೇಚ್ಛ ದಾಖಲೆಗಳು ದೊರೆಯುತ್ತವೆ. ಪಿ.ಎಚ್.ಡಿ. ಪದವಿಗೆಂದು ಅವರು ಮಾಡಿರುವ ಈ ಯೋಜನಾ ಕಾರ್ಯವು ಕಾಲಭೈರವನ ಆಸಕ್ತರಿಗೆ ಬೇಕಿರುವ ಎಲ್ಲ ಮಾಹಿತಿಗಳನ್ನೂ ಒದಗಿಸುತ್ತದೆ. ೨೦೧೦ರಲ್ಲಿ ಕಪಾಲ ಮತ್ತು ಖಡ್ಗ  : ದಕ್ಷಿಣ ಭಾರತದಲ್ಲಿ ಭೈರವನ ಪ್ರಾತಿನಿಧಿಕ ಅಂಶಗಳು (೮ರಿಂದ ೧೩ನೇ ಶತಮಾನಗಳಲ್ಲಿ) ಎಂಬ ವಿಷಯದ ಬಗ್ಗೆ ಪಿ.ಎಚ್.ಡಿ. ಯ ಪ್ರೌಢ ಪ್ರಬಂಧವನ್ನು ರಚಿಸಿ ಡಾಕ್ಟೋರೇಟ್ ಪದವಿಯನ್ನು ಪಡೆದ ಈಕೆ ಇದನ್ನು ಸ್ಪಾನಿಷ್ ಭಾಷೆಯಲ್ಲಿ ರಚಿಸಿರುವರು. ಇದೇ ಗ್ರಂಥದ ಇಂಗ್ಲಿಷ್ ಆವೃತ್ತಿ ಸದ್ಯದಲ್ಲೇ ಹೊರಬರಲಿದೆ. ನಾನು ಅದಕ್ಕಾಗಿ ಕಾಯುತ್ತಿದ್ದೇನೆ. ಇದೊಂದು ಗ್ರಂಥ ಹೊರಬಂದು ಕನ್ನಡದ ಓದುಗರನ್ನು ತಲುಪುವಂತಾದರೆ, ಕಾಲಭೈರವನ ಬಗೆಗಿನ ನಮ್ಮೆಲ್ಲರ ಹುಡುಕಾಟ ಕೊನೆಯಾಯಿತೆಂದು ಹೇಳಬಹುದು.

ಇದು ಲ್ಯಾಡ್ರೆಕ್‌ರ ಅಧ್ಯಯನಶೀಲತೆಗೆ ಸಾಕ್ಷಿ. ಅವರೇನೂ ಈ ಎಲ್ಲ ಸ್ತೋತ್ರಗಳನ್ನೋ, ಸಹಸ್ರನಾಮಗಳನ್ನೋ ಬರೆದವರಲ್ಲ. ಅದೆಲ್ಲವೂ ನಮ್ಮ ದೇಶದಲ್ಲೇ ಇದ್ದವು. ನಾವು ಯಾರೂ ಆ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳದೆ, ಅವುಗಳ ಬಗ್ಗೆ ಹುಡುಕಾಟ ನಡೆಸದೆ, ನಮ್ಮ ಕೈಯಳವಿನಲ್ಲಿ ದೊರತಷ್ಟಕ್ಕೆ ಮಾತ್ರ ತೃಪ್ತಿ ಪಟ್ಟೆವು. ಹೀಗಾಗಿ ಅವನ್ನು ಬೇರೆ ಯಾರೋ ದೇಶದವರು, ಯಾವುದೋ ಉದ್ದೇಶಕ್ಕೆಂದು ಬೆಳಕಿಗೆ ತಂದಾಗ ಅವರ ಬಗ್ಗೆ ಅಭಿಮಾನ ತಳೆದೆವು. ವಿದೇಶೀಯರಾಗಿ ಅವರಿಗೆ ಇದು ಸಾಧ್ಯವಾಯಿತೇ ಎಂದು ಆಶ್ಚರ್ಯಪಟ್ಟೆವು, ಅವರ ಅಧ್ಯಯನಶೀಲತೆ ಕಂಡು ಬೆರಗಾದೆವು. ಒಬ್ಬ ಹಿಂದೂ ದೇವತೆಯ ಬಗ್ಗೆ ಹಿಂದೂಗಳಿಗೆ ತಿಳಿದಿರುವುದೇ ಕಡಿಮೆ, ವಿದೇಶೀಯರು ಹಠಹಿಡಿದು ಮಾಡಿದ ಸಾಧನೆಯಿದು ಎಂಬ ಪ್ರಶಂಸೆಗೆ ಲ್ಯಾಡ್ರೆಕ್‌ರೇನೂ ಕಾಯುತ್ತಿಲ್ಲ. ಆದರೆ ಅವರಂತೆ ಅಧ್ಯಯನವನ್ನು ಕೈಗೊಂಡು, ಅದರ ಆಂತರ್ಯವನ್ನೆಲ್ಲ ಶೋಧಿಸಿ ತೆಗೆಯಲು ಬೇಕಾದ ಸಮಯ, ಆಸಕ್ತಿ, ಅನುಕೂಲತೆಗಳು ನಮಗಿಲ್ಲವೆನ್ನುವುದೇ ಸರಿಯಾದ ಮಾತಿರಬಹುದು. ಹೀಗಾಗಿಯೇ ಕಾಲಭೈರವನ ಕುರಿತಾಗಿ ಇರುವ ಸಾಹಿತ್ಯ ತೀರ ಕಡಿಮೆಯೆನ್ನಬೇಕು. ಬಹುತೇಕ ಕಾಲಭೈರವನ ದೇವಾಲಯಗಳಲ್ಲಿ, ಶಂಕರಾಚಾರ್ಯ ವಿರಚಿತ ಕಾಲಭೈರವಾಷ್ಟಕವೊಂದನ್ನು ಹೊರತು ಪಡಿಸಿದರೆ, ಬೇರೆ ಅಷ್ಟೋತ್ತರಗಳಾಗಲೀ, ಸಹಸ್ರನಾಮಗಳಾಗಲೀ ಪ್ರಚಲಿತವಿಲ್ಲ. ಇದಕ್ಕೆ ಪರ್ಯಾಯವಾಗಿ ಶಿವಾಷ್ಟೋತ್ತರವನ್ನು ಹೇಳುವುದು ರೂಢಿಯಲ್ಲಿದೆ.

ಭೈರವಪಂಥವನ್ನು ನಾಥಪಂಥವೆಂದೂ ಕರೆಯುವರು. ಇದು ಇತಿಹಾಸದ ಕಾಲಘಟ್ಟದಲ್ಲಿ ಪ್ರಮುಖವಾಗಿದ್ದ ದಿನಗಳಿದ್ದವು. ಬಹುಶಃ ಶೈವ ಮತ್ತು ವೈಷ್ಣವ ಪಂಥಗಳ ನಡುವೆ ಜಟಾಪಟಿ ನಡೆಯುತ್ತಿದ್ದ ಕಾಲಕ್ಕೆ, ತಾವು ಉಗ್ರದೇವತೆಯ ಆರಾಧಕರಾಗಿರುವುದರಿಂದ  ಭೈರವ ಪಂಥದ ಮೂಲಕ ತಮ್ಮದೇ ಪ್ರಬಲಗುಂಪು ಎಂಬ ಭಾವನೆಯನ್ನೂ ಮೂಡಿಸಿರುವ ಸಾಧ್ಯತೆಗಳಿವೆ. ಇದಕ್ಕೆ ಉದಾಹರಣೆಯಾಗಿ ಶಿವರಹಸ್ಯವೆಂಬ ಗ್ರಂಥದ ಶಿವಗೌರೀ ಸಂವಾದದಲ್ಲಿ ಉಲ್ಲೇಖಿತವಾಗಿರುವ ಕಾಶೀ ಮಾಹಾತ್ಮ್ಯದ ೧೧ನೇ ಅಧ್ಯಾಯದಲ್ಲಿ ಕಾಲಭೈರವ ಮಾಹಾತ್ಮ್ಯವೆಂಬ ಅಧ್ಯಾಯವಿದೆ. ಅದರಲ್ಲಿ  ಪ್ರಸ್ತಾಪಿತವಾಗಿರುವ ಕಾಲಭೈರವ ಸಹಸ್ರನಾಮಾವಳಿಯ ಸಾಹಿತ್ಯವನ್ನಿಷ್ಟು ಗಮನಿಸಬಹುದು. ಇದರಲ್ಲಿ ಕೆಲವು ಶ್ಲೋಕಗಳು ಹೀಗಿದೆ.

        ಸಾಂಬೋ ಪ್ರಸಿದ್ಧ ದೇವೇಶ ಕ್ಲೇಶಂ ದೂರೀ ಕುರುಷ್ವಮೇ |
        ಅಶೈವಂ ಸಂಹಾರಸ್ಯಮೇನಮಧರ್ಮಸ್ಯ ಪ್ರವರ್ತಕಮ್ || ೪೪ ||

        ಅಧರ್ಮವದ್ಧ್ಯಾ ಸರ್ವೇಪಿ ಯಾಸ್ಯಂತಿ ನರಕಮ್ ಧ್ರುವಮ್ |
        ಕೃಪಾಲುರಸಿ ದೇವೇಶ ವಿಧಿಮೇನಂ ವಿನಾಶಯ || ೪೫ ||

        ಅಶೈವಂ ದುರಾಚಾರಃ ಸ್ಥಾಪನೀಯೋ ನ ಸರ್ವಥಾ |
        ಅಶೈವಂ ಶಿಕ್ಷಾ ಕರ್ತವ್ಯಾ ದೇವೇಶಸ್ಯ ಪುರಾಂತಕ || ೪೬ ||

ಅರ್ಥವೆಂದರೆ ಶೈವನಲ್ಲದವನನ್ನು ನಾಶಮಾಡು ಎಂಬ ಬೋಧೆ ಅಲ್ಲಿದೆಈ ಪರಿಸ್ಥಿತಿ ಕೂಡ ಹಾಗೆಯೇ ಉಳಿಯಲಿಲ್ಲ.  ಕಾಲ ಬದಲಾದಂತೆ ಚಿಂತನೆಗಳೂ ಬದಲಾಗಿರುವುದನ್ನು ನಾವು ಅದೇ ರೂಪದ ಶ್ಲೋಕಗಳಲ್ಲಿ ಕಾಣುತ್ತೇವೆ

        ಶಿವಾಯ ವಿಷ್ಣು ರೂಪಾಯ ಶಿವರೂಪಾಯ ವಿಷ್ಣವೇ |
        ಶಿವಶ್ಚ ಹೃದಯಂ ವಿಷ್ಣುಃ ವಿಷ್ಣೋಶ್ಚ ಹೃದಯಂ ಶಿವಃ ||  

        ಯಥಾ ಶಿವ ಮಯಂ ವಿಷ್ಣುಃ ಏವಂ ವಿಷ್ಣು ಮಯಂ ಶಿವಃ |
        ಯಥಾಂತರ ನ ಪಶ್ಯಾಮಿ ತಥಾಮೇ ಸ್ವಸ್ತಿರಾಯುಷಿ ||
 
ಶೈವ ವೈಷ್ಣವ ಪಂಥಗಳ ನಡುವಣ ಹೋರಾಟ ಅರ್ಥಹೀನ, ಹರಿ-ಹರರಿಬ್ಬರೂ ಬೇರೆಯಲ್ಲ  ಎಂಬ ತಿಳುವಳಿಕೆ ಬಂದ ಕಾಲಕ್ಕೆ ಇಂಥ ಶ್ಲೋಕಗಳು ರಚಿತವಾದವು. ಇದೇ ಕಾರಣಕ್ಕೆ ನಾನು ಇಂಥ ಅಂಶಗಳಿಲ್ಲದ ಒಂದು ಸಹಸ್ರನಾಮವನ್ನು ಸಂಗ್ರಹಿಸಿದೆನೇ ವಿನಾ, ಭೇದ ಭಾವವನ್ನು ತೋರುವಂಥ ಸಾಹಿತ್ಯವನ್ನು ಆದರಿಸಲಿಲ್ಲ.

ನಾನು ಹೋದೆಡೆಯಲ್ಲಿ ದೊರಕುವ ಕಾಲಭೈರವನ ಚಿತ್ರಗಳನ್ನು ಸಂಗ್ರಹಿಸುವುದು ನನ್ನ ಅಭ್ಯಾಸವೇ ಆಯಿತು. ಇತ್ತೀಚೆಗೆ ಕೊಪ್ಪಳ ಜಿಲ್ಲೆ, ಯಲಬುರ್ಗಾ ತಾಲೂಕಿನ ಇಟಗಿಯ ಮಹಾಮಾಯೀ ಮಂದಿರವನ್ನು ಸಂದರ್ಶಿಸುತ್ತಿದ್ದಾಗ, ಅಲ್ಲೊಂದು ತೀರ ಅಪರೂಪದ ವಿಗ್ರಹ ಕಾಣಿಸಿತು. ಅದರ ಬಗ್ಗೆ ಈಗಾಗಲೇ ಪ್ರಸ್ತಾಪಿಸಿರುವೆನಾದರೂ, ಈ ಚಿತ್ರವನ್ನು ಲ್ಯಾಡ್ರೆಕ್‌ರಿಗೆ ತಲುಪಿಸಿದಾಗ, ಅವರಿಂದ ಬಂದ ಪ್ರತಿಕ್ರಿಯೆಯನ್ನು ಇಲ್ಲಿ ನಮೂದಿಸುತ್ತಿರುವೆ. ಅವರು ಹೇಳಿದರು. "ನಿಜಕ್ಕೂ ಇದೊಂದು ಅಪರೂಪದ ವಿಗ್ರಹವೇ ಸರಿ.  ನನಗೆ ತಿಳಿದಂತೆ ಆದಿಚುಂಚನಗಿರಿಯಲ್ಲಿ ನೂತನವಾಗಿ ನಿರ್ಮಿತವಾಗಿರುವ ಮಂದಿರದಲ್ಲಿ ಬೆಳ್ಳಿಯಲ್ಲಿ ಮಾಡಿರುವ ಒಂದು ವಿಗ್ರಹವಿದೆ. ಅಲ್ಲಿ ಕಾಲಭೈರವನನ್ನು ಕುದುರೆಯ ಮೇಲೆ ಕುಳ್ಳಿರಿಸಿದ್ದಾರೆ. ಇದನ್ನು ಹೊರತುಪಡಿಸಿದರೆ ನನಗೆ ಈ ಬಗ್ಗೆ ತಿಳಿದಿರಲಿಲ್ಲ. ಈ ವಿಗ್ರಹಕ್ಕೆ ಒಂದು ವಿಶೇಷವಿದೆ. ಏನೆಂದರೆ ಇದು ಮಣಿ ಮತ್ತು ಮಲ್ಲಾಸುರರೆಂಬ ರಕ್ಕಸರನ್ನು ಕೊಲ್ಲಲು ಖಂಡೋಬಾ ಅಥವಾ ಮೈಲಾರನೆಂಬ ಶಿವನರೂಪದಲ್ಲಿ ಕಾಣಿಸುತ್ತಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಮೈಲಾರೇಶ್ವರ ಆರಾಧನೆ ನಡೆಯುತ್ತದೆ. ಇವನನ್ನು ಮಾರ್ತಾಂಡ ಭೈರವನೆಂದೂ ಅಶ್ವಾರೋಹಿಯಾದ ಯೋಧನಂತೆ ಚಿತ್ರಿಸಲಾಗಿರುವುದು ಕಂಡುಬರುತ್ತದೆ. ಇಟಗಿಯ ವಿಗ್ರಹದಲ್ಲಿ ಕಂಡುಬರುವಂತೆ ಕುದುರೆಯ ಕಾಲುಗಳು ರಾಕ್ಷಸರ ತಲೆಗಳನ್ನು ಮೆಟ್ಟಿರುವಂತೆ, ಕೆಲವೊಮ್ಮೆ ಆತನನ್ನು ನಾಯಿಗಳು  ಸುತ್ತುವರೆದಿರುವಂತೆ ಚಿತ್ರಿಸಲಾಗಿರುತ್ತದೆ. ಅದರಲ್ಲೂ ಕಾಲಭೈರವನ ಲಕ್ಷಣಗಳಾದ ಖಡ್ಗ, ಡಮರು, ಶೂಲ, ಕಪಾಲಗಳನ್ನು ಹೊಂದಿರುವನು".

ಹೀಗೇ ಇನ್ನೊಂದು ಪ್ರಸಂಗ. ಈ ಹಿಂದಿನ ಸಂಚಿಕೆಯಲ್ಲಿ ಪ್ರಕಟವಾಗಿರುವ ಕಾಲಭೈರವ ಧ್ಯಾನಶ್ಲೋಕವನ್ನು ಅವರಿಗೆ ಕಳಿಸಿ, ಈ ವಿವರಣೆಗೆ ಹೊಂದುವ ಶಿಲ್ಪಗಳಿವೆಯೇ ಎಂದು ಕೇಳಿದ್ದೆ. ಆಗ ಅವರಿಂದ ಬಂದ ಉತ್ತರವೂ ಆಸಕ್ತಿದಾಯಕವಾಗಿತ್ತು. ಅವರು ಬರೆದಿದ್ದರು. "ನೀವು ಕಳಿಸಿರುವ ಶ್ಲೋಕದ ಅನ್ವಯ ಇರಬಹುದಾದ ಚಿತ್ರಗಳಿಗೆಂದು ಶೋಧಿಸಿದೆ. ಆಶ್ಚರ್ಯವೆಂದರೆ ಅಂಥ ಯಾವುದೇ ಶಿಲ್ಪಗಳು ದೊರೆತಿಲ್ಲ. ಆದರೆ ನಾಯಿ/ನಾಯಿಗಳು ಆತನ ಸಮೀಪವಿರುವ ಕೆಲವು ಚಿತ್ರಗಳನ್ನು ಕಳಿಸಿರುವೆ. ಇಲ್ಲಿರುವ ಎರಡು ಶಿಲ್ಪಗಳು ಹೊಯ್ಸಳರ ಕಾಲದವು. ಅವುಗಳಲ್ಲಿ ಒಂದು ಹಳೇಬೀಡಿನ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲದಲ್ಲಿದ್ದರೆ, ಮತ್ತೊಂದು ಬೇಲೂರಿನ ಚನ್ನಕೇಶವ ದೇವಾಲಯದಲ್ಲಿದೆ. ಮೂರನೆಯ ಚಿತ್ರವು ಆಂಧ್ರಪ್ರದೇಶದ ಪುಷ್ಪಗಿರಿಯ ವೈದ್ಯನಾಥ ಮಂದಿರದಲ್ಲಿದೆ".

ಲ್ಯಾಡ್ರೆಕ್‌ರಿಂದ ಇಷ್ಟು ವಿಪುಲ ಸಾಹಿತ್ಯವನ್ನು ಪಡೆದ ನಂತರ, ಇವೆಲ್ಲವನ್ನೂ ಕನ್ನಡಲಿಪಿಯಲ್ಲಿ ಬರೆದು, ಕಂಪ್ಯೂಟರ್‌ಗೆ ಅಳವಡಿಸಿ, ಕಾಲಭೈರವ ಪೂಜಾ ವಿಧಾನವೆಂಬ ಪುಸ್ತಕವನ್ನು ರೂಪಿಸಿದೆ. ಇದರಲ್ಲಿ ನಾಲ್ಕು ಅಷ್ಟೋತ್ತರಗಳು, ಒಂದು ಸಹಸ್ರನಾಮ, ಕ್ಷಮಾಪರಾಧ ಸ್ತೋತ್ರ, ಸ್ವರ್ಣಾಕರ್ಷಣ ಭೈರವ ಸ್ತೋತ್ರ, ಭೈರವ ಕವಚ ಮುಂತಾಗಿ ೧೦ ಸ್ತುತಿಗಳನ್ನು ಸಂಗ್ರಹಿಸಲಾಗಿದೆ. ಇದರ ಪುಟಗಳನ್ನು ಮುಂದಿನ ಸಂಚಿಕೆಗಳಲ್ಲಿ ಕ್ರಮವಾಗಿ ಪ್ರಕಟಿಸುವ ಇರಾದೆಯಿದೆ. ಆಸಕ್ತರು ಸಂಗ್ರಹಿಸಿಕೊಂಡು ಭೈರವ ಪೂಜೆಯನ್ನು ಕ್ರಮಬದ್ಧವಾಗಿ ಮಾಡುವಂತಾಗಲಿ ಎಂಬುದು ಆಶಯ.


* * * * * * *


ಭಾನುವಾರ, ನವೆಂಬರ್ 27, 2011

"ಭೈರವ ದೇವರ ಅವತರಣ"


ಈ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನ "ಭೈರವ ದೇವರ ಅವತರಣ". ಈ ವಿಷಯದ ಬಗ್ಗೆ ಅನೇಕ ಕಥಾನಕಗಳು ಪ್ರಚಲಿತವಿದೆಯಾದರೂ, ಇಲ್ಲಿರುವ ಬರಹವನ್ನು ವಾರಾಣಸಿಯ ದೇಹಾತ್ ಪ್ರಕಾಶನ ಸಂಸ್ಥೆಯವರು ಪ್ರಕಟಿಸಿರುವ "ಭೈರವ ಪೂಜಾ ವಿಧಾನ" ಗ್ರಂಥದಿಂದ ಆಯ್ದುಕೊಳ್ಳಲಾಗಿದೆ. ಇತರ ಕಥಾನಕಗಳಲ್ಲೂ ಹೆಚ್ಚು ಕಡಿಮೆ ಇದೇ ಅಂಶಗಳು ಪ್ರಸ್ತಾಪಿತವಾಗಿದ್ದು, ಅಲ್ಲಲ್ಲಿ ಅಲ್ಪ ಸ್ಪಲ್ಪ ಬದಲಾವಣೆಗಳು ಕಂಡುಬರುತ್ತವೆ. ಏನಿದ್ದರೂ ಪುರಾಣ ಕಥಾನಕಗಳು ಜನರ ಬಾಯಿಂದ ಬಾಯಿಗೆ ಹರಿದು ಬರುವಾಗ ಇಂತಹ ವ್ಯತ್ಯಾಸಗಳು ಸ್ವಾಭಾವಿಕ. ನಮ್ಮ ಅನೇಕ ಶಿಲ್ಪಗಳಲ್ಲಿ, ಚಿತ್ರಗಳಲ್ಲಿ  ಬ್ರಹ್ಮನು ಚತುರ್ಮುಖನಾಗಿಯೇ ಚಿತ್ರಿತನಾಗಿರುವನಷ್ಟೇ. ಆದರೆ ವಸ್ತುಸ್ಥಿತಿ ಹಾಗಿಲ್ಲ.  ತಾನೇ ಅತಿ ಶ್ರೇಷ್ಠನೆಂದು ಬ್ರಹ್ಮನಂಥ ಪಿತಾಮಹನೇ ಗಳಹಲು ಆರಂಭಿಸಿದಾಗ,ಪಂಚಮುಖನಾದ ಆತನು ಅನಿವಾರ್ಯವಾಗಿ ತನ್ನ ಒಂದು ಶಿರವನ್ನು ಕಳೆದುಕೊಂಡು ಚತುರ್ಮುಖ ಬ್ರಹ್ಮನಾದನು. ಈ ಕಾರಣದಿಂದ ಕಾಲಭೈರವನ ಉತ್ಪತ್ತಿಯೂ ಆಯಿತು. ಇದರಲ್ಲಿ ಅಹಂಕಾರವು ಯಾರಿಗೂ ಸಲ್ಲದೆಂಬ ಒಂದು ನೀತಿಯೂ ಇದೆ. ವಿಸ್ತೃತ ಬರಹ ನಿಮ್ಮ ಮುಂದಿದೆ. ಓದಿ.







ಮಂಗಳವಾರ, ನವೆಂಬರ್ 1, 2011

"ಭಿಭ್ರಾಣಂ ಶುನಕಾರೂಢಂ........."



"ಭಿಭ್ರಾಣಂ ಶುನಕಾರೂಢಂ........."

ಈಗಾಗಲೇ ಪ್ರಸ್ತಾಪಿಸಿರುವಂತೆ, ಕಾಲಭೈರವ ಶುನಕಾರೂಢ, ಎಂದರೆ, ನಾಯಿಯನ್ನು ವಾಹನವಾಗಿ ಉಳ್ಳವ.  ಮೊತ್ತ ಮೊದಲು, ನಮ್ಮ ಕುಲದೇವತೆ ನನ್ನನ್ನು ಆಕರ್ಷಿಸಲಿಲ್ಲ, ಬದಲಾಗಿ ಚಿಕ್ಕಂದಿನಲ್ಲಿ ಆತನ ಅಚ್ಚ ಬಿಳಿಯ ವಾಹನ "ನಾಯಿ"  ನನ್ನ ಗಮನ ಸೆಳೆಯಿತಂದರೆ ಅದು ಸ್ವಾಭಾವಿವೂ ಇರಬಹುದು. ದೊಡ್ಡ ಗಾತ್ರದ ಗೋಲ್ಡನ್ ರಿಟ್ರೀವರ್ ಹೋಲುವ ಈ ಬಿಳಿಯ ನಾಯಿಯ ಜೋಲು ಕಿವಿಗಳು, ಸೂಕ್ಷ್ಮ ಕಣ್ಣುಗಳು ಮತ್ತು ಮನುಷ್ಯನನ್ನು ಹೊರಬಲ್ಲ ಅದರ ತ್ರಾಣವನ್ನು ಕಲಾವಿದರು ಸಮರ್ಥವಾಗಿ ಚಿತ್ರಿಸಿದ್ದಾರೆ. ಈ ಚಿತ್ರವನ್ನು ಹಿಂದೆ ಪ್ರಕಟಿಸಲಾಗಿದೆ.


ನಮ್ಮ ಪುರಾಣಕತೆಗಳಲ್ಲಿ ನಾಯಿಯ ಪ್ರಸ್ತಾಪ ಅನೇಕ ಸಂದರ್ಭಗಳಲ್ಲಿ ಬಂದಿದೆ.  ಮಹಾಭಾರತದಲ್ಲಿ ಧರ್ಮರಾಯ ವೃಷೋತ್ಸರ್ಗ ಮಾಡುವ ಕಾಲಕ್ಕೆ ಆತನನ್ನು ಹಿಂಬಾಲಿಸಿದ್ದು ಒಂದು ನಾಯಿ.  ದತ್ತಾತ್ರೇಯನ ಚಿತ್ರದಲ್ಲಿ ಆತನು ಹಸುವೊಂದಕ್ಕೆ ಒರಗಿ ನಿಂತಿದ್ದರೆ, ಬಳಿಯಲ್ಲಿ ನಾಲ್ಕು ನಾಯಿಗಳು ಸುತ್ತಾಡುತ್ತಿರುವಂತೆ ಚಿತ್ರಿಸಲಾಗಿದೆ. ಈ ನಾಲ್ಕು ನಾಯಿಗಳು, ನಾಲ್ಕು ವೇದಗಳನ್ನು ಪ್ರತಿನಿಧಿಸುತ್ತದೆ ಎಂದೂ ಹೇಳಲಾಗಿದೆ.


ಕಾಲಭೈರವ ಧ್ಯಾನ ಶ್ಲೋಕವನ್ನು ಇಲ್ಲಿ ಇನ್ನೊಮ್ಮೆ ಅರ್ಥ ಸಹಿತ ನೀಡಿದ್ದೇನೆ. ಕಾಲಭೈರವನ ಆರಾಧಕರು ಇದನ್ನು  ಮಕ್ಕಳಿಗೂ ಕಲಿಸುವಂತಾಗಲಿ ಎನ್ನುವುದು ಆಶಯ.






ಕರಕಲಿತ ಕಪಾಲೀ, ಕುಂಡಲೀ ದಂಡಪಾಣಿ |
(ಕರದಲ್ಲಿ ಕಪಾಲವನ್ನು ಹಿಡಿದಿರುವ, ಕಿವಿಗಳಿಗೆ ಕುಂಡಲಗಳನ್ನು ಧರಿಸಿ, ಕೈಯಲ್ಲಿ ದಂಡವನ್ನು ಹಿಡಿದಿರುವ)

ತರುಣ ತಿಮಿರ ನೀಲೋ, ವ್ಯಾಲಯಜ್ಞೋಪವೀತಿ ||
(ಆತನ ಬಣ್ಣ ಮುಸ್ಸಂಜೆಯ ಕತ್ತಲಿನ ನೀಲಿಯ ಬಣ್ಣ, ಸರ್ಪದ ಜನಿವಾರವನ್ನು ಧರಿಸಿರುವ)

ಕೃತ ಸಮಯ ಪರ್ಯಾ ವಿಘ್ನವಿಚ್ಛೇದ ಹೇತುಃ |
(ನಿಶ್ಚಿತ ಸಮಯದಲ್ಲಿ ವಿಘ್ನಗಳನ್ನು ನಿವಾರಿಸಲು ಕಾರಣವಾಗುವ)

ಜಯತು ವಟುಕನಾಥಃ ಸಿದ್ಧಿದಃ ಸಾಧಕಾನಾಂ ||
(ಸಾಧಕರಿಗೆ ಒಲಿಯುವಂಥ ವಟು ಸ್ವರೂಪಿಯಾದ ಕಾಲಭೈರವನಿಗೆ ಜಯವಾಗಲಿ)

ಅದೇ ರೀತಿ ಮತ್ತೊಂದು ಪ್ರಚಲಿತ ಧ್ಯಾನ ಶ್ಲೋಕ ಹೀಗಿದೆ :


ನಗ್ನ ರೂಪಂ ತ್ರಿನೇತ್ರಂ ಚ ಸರ್ಪಾಭರಣ ಭೂಷಿತಮ್ |
(ಈತನು ನಗ್ನರೂಪಿ, ಮೂರು ಕಣ್ಣುಗಳುಳ್ಳವ, ಸರ್ಪಗಳನ್ನು ಆಭರಣಗಳನ್ನಾಗಿ ಧರಿಸಿರುವನು)

ರತ್ನ ಕುಂಡಲ ಸಂಯುಕ್ತಂ ಶಿರೋಮಾಲಾ ವಿಭೂಷಿತಂ |
(ಕಿವಿಗೆ ರತ್ನ ಕುಂಡಲಗಳನ್ನು ಧರಿಸಿ, ರುಂಡಮಾಲೆಗಳಿಂದ ಸುಶೋಭಿತನಾಗಿರುವವನು)

ಖಡ್ಗಂ ಶೂಲಂ ಕಪಾಲಂ ಚ ಡಮರುಂ ಭೀಮ ದಂಷ್ಟ್ರಕಂ |
(ಕೈಗಳಲ್ಲಿ ಖಡ್ಗ, ಶೂಲ, ಕಪಾಲ ಮತ್ತು ಡಮರುಗಳನ್ನು ಧರಿಸಿರುವ ಈತನು ಭೀಮ ಬಲವುಳ್ಳವನು)

ಭಿಭ್ರಾಣಂ ಶುನಕಾರೂಢಂ ಕ್ಷೇತ್ರಪಾಲಂ ಅಹಂ ಭಜೇ ||
(ನಾಯಿಯನ್ನು ವಾಹನವಾಗಿ ಹೊಂದಿ ಅದರ ಮೇಲೆ ಕುಳಿತಿರುವ ಕ್ಷೇತ್ರಪಾಲನನ್ನು ನಾನು ಭಜಿಸುತ್ತೇನೆ.

ಈ ವರೆಗೆ ಪ್ರಕಟವಾಗಿರುವ ಕಾಲಭೈರವ ಶಿಲ್ಪಗಳನ್ನು ಗಮನಿಸಿ. ಈ ಎಲ್ಲ ಶಿಲ್ಪಗಳಲ್ಲೂ ಮೇಲೆ ನೀಡಿರುವ ವಿವರಗಳು ಕಂಡುಬರುತ್ತವೆ. ಇದನ್ನು ಧ್ಯಾನಶ್ಲೋಕ ಎಂದು ಹೇಳಲಾಗಿದ್ದು, ಇದರ ಅನ್ವಯವೇ ಶಿಲ್ಪಿಗಳು ಕಾಲಭೈರವನನ್ನು ಕಂಡರಿಸಿರುವುದು ಗೋಚರಿಸುತ್ತದೆ.  ಸ್ವಾರಸ್ಯದ ಸಂಗತಿಯೆಂದರೆ ವಿಪುಲ ಸಾಹಿತ್ಯನನ್ನು ಹೊಂದಿರುವ ಈ ದೇವನ ಇತರ ಸ್ತುತಿಗಳಲ್ಲಿ ಎಲ್ಲಿಯೂ ಆತನು ಶುನಕಾರೂಢನೆಂದು ಹೇಳಲಾಗಿಲ್ಲ ! ಇದೊಂದು ಶ್ಲೋಕದಲ್ಲಿ ಮಾತ್ರ ಈ ವಿವರಣೆ ಇದ್ದು,  ನಾವು ಕಾಣುವ ಬಹುತೇಕ ಭೈರವ ವಿಗ್ರಹಗಳಲ್ಲಿ ಕಾಣಿಸಿರುವ ನಾಯಿಯು, ಆತನ ಕರದಲ್ಲಿರುವ ತಲೆಬುರುಡೆಯಿಂದ ಸೋರುತ್ತಿರುವ ರಕ್ತವನ್ನು ನೆಕ್ಕಲು ಹವಣಿಸುತ್ತಿರುವಂತೆ ಮಾತ್ರ ಚಿತ್ರಿಸಲಾಗಿದೆಯೇ ವಿನಾ, ನಾಯಿಯ ಮೇಲೆ ಕುಳಿತಿರುವಂಥ ಶಿಲ್ಪಗಳಾಗಲೀ, ಚಿತ್ರಗಳಾಗಲೀ ತೀರ ವಿರಳವೆಂದೇ ಕಾಣುತ್ತದೆ.  ಏನಿದ್ದರೂ ಕಾಲಭೈರವ ಮತ್ತು ನಾಯಿಗಳ ಸಾಂಗತ್ಯವಂತೂ ಎಲ್ಲೆಡೆ ಕಂಡುಬರುತ್ತಿದೆಯೆನ್ನಲು ಅಡ್ಡಿಯಿಲ್ಲ.

* * * * * * *

ಭಾನುವಾರ, ಅಕ್ಟೋಬರ್ 9, 2011


"ಭೈರವ  -  ಕಾಲಭೈರವ"

       ಭೈರವನೆಂಬ ಪದಕ್ಕೆ ಹಲವು ನಿಷ್ಪತ್ತಿಗಳಿವೆ.  ಈ ಶಬ್ದದ ಸಾಹಿತ್ಯಕ ಅರ್ಥವನ್ನಷ್ಟೇ ಬೆಂಬೆತ್ತಿ ಹೋದರೆ "ಭೈ" ಎಂಬ ಧಾತುವಿನಿಂದ "ಭಯ", "ಭೀತಿ" ಎಂದು ತಿಳಿಯಬಹುದು.  ಅದೇಕೆ ಭಯ - ಬೀತಿಗಳೆಂದರೆ - ಅತನು ಉಂಟುಮಾಡುವ "ರವ" ಅಥವಾ ಶಬ್ದ. ಭಯಂಕರ ಶಬ್ದವನ್ನು ಉತ್ಪತ್ತಿ ಮಾಡುವುದರಿಂದ ಅತ "ಭೈರವ".  ಕಾಶ್ಮೀ ರದ ಶೈವ ಪಂಥದಲ್ಲಿ ಇನ್ನೊಂದು ಬಗೆಯ ವಿವರಣೆ ದೊರಕುತ್ತದೆ.  ಅದರಂತೆ ಭ=ಭರಣ (ಸಾಕುವವನು, ಭರಿಸುವವನು), ರ=ನಿರ್ವಾಣ (ಮುಕ್ತಿದಾತ) , ವ=ವಮನ (ಸೃಷ್ಟಿಕಾರ್ಯ) ಎಂದಿದೆ. ಇದೆಲ್ಲ  ಏನೇ ಇದ್ದರೂ  ಭೈರವ ದೇವತೆಯ ಸ್ವಾರಸ್ಯವೆಂದರೆ, ಶಿವನ ಸಾತ್ವಿಕ ರೂಪಕ್ಕೆ ತದ್ವಿರುದ್ಧವಾದ ಉಗ್ರ ಸ್ವರೂಪ,  ಈ  ಉಗ್ರತೆಯಾದರೋ ಭಯಪಡಿಸುವ ಉದ್ದೇಶದಿಂದ ತಳೆದುದಲ್ಲ.  ಬದಲಾಗಿ ತಪ್ಪುಮಾಡಿದರನ್ನು ಶಿಕ್ಷಿಸುವ ರೂಪವಿದು.   ಇದಕ್ಕೆ ಪೂರಕವೆನ್ನುವಂತೆ ನೇಪಾಳದ ಹನೂಮಾನ್ ಧೋಕಾದಲ್ಲಿ ಇರುವ ಭೈರವ ಮಂದಿರವು  ಅಲ್ಲಿನ ನ್ಯಾಯಾಲಯವೆಂದೇ ಪ್ರಸಿದ್ಧವಾಗಿದೆ.  17ನೇ ಶತಮಾನದ ಈ ಮಂದಿರದಲ್ಲಿ 12 ಅಡಿ ಎತ್ತರದ ಭವ್ಯ ಭೈರವ ಮೂರ್ತಿಯಿದೆ.  ಈ ಭೈರವ ಮೂರ್ತಿಯೆದರು ಸುಳ್ಳಾಡಿದರೆ ಸಾವು ನಿಶ್ಚಯವೆಂಬ ನಂಬಿಕೆಯಿದೆ.  

ಭೈರವ ದೇವತೆಯ ಅವತರಣ ಕತೆಯಲ್ಲಿ ಬರುವಂತೆ ಆತನು ವಟುಕ ಭೈರವ ಅಥವಾ ಬಾಲ ಭೈರವ.  ಆದರೆ ಆತನು ಕಾಲಭೈರವನೆಂದು ಪ್ರಚುರಗೊಂಡಿದ್ದು ಹೇಗೆ ?

        ಈ ವಿಷಯದಲ್ಲಿ ಅಂತರ್ಜಾಲದಲ್ಲಿ ಒಬ್ಬರು ತಮ್ಮ ಅನುಮಾನವನ್ನು ಹೀಗೆ ವ್ಯಕ್ತಪಡಿಸಿದ್ದಾರೆ.  ಭೈರವನು ತನಗೆ ಒದಗಿದ ಬ್ರಹ್ಮ ಹತ್ಯಾ ದೋಷವನ್ನು ಕಳೆದುಕೊಳ್ಳಲು ವ್ರತ ನಿಷ್ಠನಾಗಿ ಅಲೆದನು ಎನ್ನುವುದಕ್ಕೂ, ಕಾಲನೆಂಬ ಪ್ರತ್ಯಯವು ಅವನಿಗೆ ತಳುಕು ಹಾಕಿಕೊಡಿದ್ದಕ್ಕೂ ಎಲ್ಲಿಯ ಸಂಬಂಧ ಎಂದು ಪ್ರಶ್ನಿಸಿರುವರು. ಈ ಪ್ರಶ್ನೆಗೆ ಇನ್ನೋರ್ವರು ನೀಡಿರುವ ಸಮಾಧಾನ ಹೀಗಿದೆ. "ಸಂಸ್ಕೃತ ಶಬ್ದ "ಕಾಲ"  ಎನ್ನುವುದಕ್ಕೆ ಸಮಯ, ಯಮ ಹಾಗೂ ಕಪ್ಪು ಎಂಬೆಲ್ಲ ಅರ್ಥಗಳಿವೆ.  ಸಂದರ್ಭಾನುಸಾರ ಇದರ ಅನ್ವಯ ಮಾಡಿದಾಗ ಸೂಕ್ತ ಅರ್ಥಗಳು ದೊರೆಯುತ್ತವೆ ಅಲ್ಲದೆ ಭೈರವನ್ನು "ಮಹಾಕಾಲ" ಎಂದು ನಿರ್ದೇಶಿಸಲಾಗಿದೆ. ಈ ಪದವನ್ನು "ಕಡುಗಪ್ಪು" ಎಂದು ಅರ್ಥೈಸಬಹುದು.  ಹೀಗಾಗಿ ಕಾಲಭೈರವನೆಂದರೆ ಕಡುಗಪ್ಪು ಬಣ್ಣದ ಭೈರವ ಎಂದು ಗ್ರಹಿಸುವುದೇ ಸೂಕ್ತವೆನುವುದು ನನ್ನ ಅಭಿಮತ," ಎಂದು ತಿಳಿಸಿದ್ದಾರೆ.  ಈ ಚರ್ಚೆಗಳಲ್ಲಿ ತಾವು ನಂಬಿದ ದೇವನ ಆಂತರ್ಯವನ್ನು  ಅರಿಯಲು ನಡೆಸಿರುವ ಯತ್ನಗಳು ಮೆಚ್ಚುವಂತಿದೆಯಲ್ಲವೆ?


ಶಂಕರಾಚಾರ್ಯಕೃತ "ಕಾಲಭೈರವಾಷ್ಟಕ" ತುಂಬ ಜನಪ್ರಿಯ.  ಇದರ 8 ಶ್ಲೋಕಗಳಲ್ಲಿ ಎಲ್ಲಿಯೂ ಕಾಲನ/ಕಾಲದ ಪ್ರಸ್ತಾಪವಿಲ್ಲದಿವುದು ವಿಶೇಷ.  ಇದೇ ರೀತಿ ಮುಂದಿನ ಪ್ರಕಟಣೆಗಳಲ್ಲಿ ಬರಲಿರುವ ಸಾಹಿತ್ಯವನ್ನಿಷ್ಟು ಗಮನದಿಂದ ಅವಲೋಕಿಸಿ, ಅಲ್ಲಿ ಎಲ್ಲಿಯೂ ಕಾಲ ಅಥವಾ ಸಮಯವೆಂಬ ಅರ್ಥದಲ್ಲಿ ಭೈರವನ ಹೆಸರು ಬಳಕೆಯಾಗಿಲ್ಲ. ಆದರೂ ಭೈರವನು "ಕಾಲಭೈರವ"ನೆಂದೇ ಜನಪ್ರಿಯನಾಗಿರುವುದು ಮತ್ತೊಂದು ವಿಶೇಷ.

ಇಂಥದೇ ವಿಶೇಷವು ಆತನ ವಾಹನ ನಾಯಿಯನ್ನು ಕುರಿತಾಗಿದೆ.  ಆದನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸುವೆ.

ಶನಿವಾರ, ಸೆಪ್ಟೆಂಬರ್ 10, 2011

ಜಾನಪದದಲ್ಲಿ ಭೈರವ


    ಔತ್ತರೇಯನಾದ ಭೈರವನು ದಕ್ಷಿಣ ಭಾರತ, ಅದರಲ್ಲೂ ಕರ್ನಾಟಕವನ್ನು ಯಾವಾಗ ಮತ್ತು ಹೇಗೆ ಪ್ರವೇಶಮಾಡಿದನೆಂಬ ಸಂಗತಿಯ ಬಗ್ಗೆ ತಿಳಿಯಬೇಕೆಂಬ ಕುತೂಹಲವಿತ್ತು. ಡಾ| ಶಿವರಾಮಕಾರಂತರು ಬರೆದಿರುವ ಜಾನಪದ ವಿಷಯಕವಾದ ಲೇಖನವನ್ನು ಓದುವಾಗ ಅದರಲ್ಲಿನ ಅನೇಕ ಸಂಗತಿಗಳು ಸ್ವಾರಸ್ಯಕರವಾಗಿದ್ದವು. ಒಂದು ಅಂದಾಜಿನಂತೆ ನಾಥ ಪಂಥವೆನ್ನುವ ಭೈರವನ ಆರಾಧಕರು ಕಾಶ್ಮೀರದಲ್ಲಿ ನೆಲೆಗೊಂಡಿದ್ದರು. ಸುಮಾರು ೧೫ನೇ ಶತಮಾನದಲ್ಲಿ ಅವರು ದಕ್ಷಿಣ ಭಾರತವನ್ನು ಪ್ರವೇಶಿಸಿದರು. ಇದಲ್ಲದೆ ಕರ್ನಾಟಕದಲ್ಲಿ ಹಳೆ ಮೈಸೂರಿನ ಪ್ರಾಂತಗಳು, ಮಲೆನಾಡು, ಬಯಲುಸೀಮೆ ಮತ್ತು ಕರಾವಳಿಯ ಕದ್ರಿಯಲ್ಲಿ ನಾಥಪಂಥದ ಶೈವರು ವಾಸಿಸಿದರು.  ಕಾರಂತರು ಜಾನಪದ ನೆಲೆಯಲ್ಲಿ ಭೈರವನ ಆರಾಧನೆಯು ಚುಂಚನಗಿರಿ ಪ್ರದೇಶದಲ್ಲಿ ಹೇಗೆ ರೂಢಿಗೆ ಬಂದಿತೆಂಬುದನ್ನು, ಜಾನಪದ ಹಾಡುಗಳ ಸಂಗ್ರಾಹಕ ಶ್ರೀ ಕ.ರಾ.ಕೃ. ರವರ ಚುಂಚನಗಿರಿ ಜಾನಪದ ಗೀತ ಸಂಗ್ರಹವೆಂಬ ಕೃತಿಯನ್ನು ಆಧರಿಸಿ ವಿವೇಚಿಸಿರುವರು.

    ನಮ್ಮ ಶಿಷ್ಠ ದೇವತೆಗಳೆಲ್ಲರೂ ಬಹುತೇಕ ನಮಗೆ ಸಂಸ್ಕೃತದಿಂದಲೇ ಪರಿಚಯವಾದವರು. ಹರಿ, ರುದ್ರ, ವಿರಿಂಚಿಗಳು ಕೂಡ ಭೂಲೋಕದ ಸಾಂಗತ್ಯವನ್ನು ಹೊಂದಬೇಕಾಗಿ ಬಂದ ಅನೇಕ ಐತಿಹ್ಯಗಳು ಪುರಾಣಗಳಲ್ಲಿ ಲಭ್ಯವಿವೆ. ಪೌರಾಣಿಕದೇವತೆಗಳು ದೇವಲೋಕದಿಂದ ಧರೆಗಿಳಿದು ಗ್ರಾಮೀಣರಿಂದ ಪೂಜೆಗೊಂಡು ಸ್ಥಳೀಯ ಗುಡಿಗಳಲ್ಲಿ ಕುಳಿತರು. ಅವರೆಲ್ಲರಿಗೂ ಧರ್ಮಪತ್ನಿಯಿದ್ದರೂ, ಭೂಲೋಕದ ಸಂಸರ್ಗಕ್ಕೆ ಬಂದ ಕಾರಣ ಇಲ್ಲಿನ ಕನ್ಯೆಯರನ್ನು ವರಿಸಬೇಕಾದ ಸಂದರ್ಭಗಳು ಬಂದುದೂ ಸಹಜ. ಅಂಥ ವೈವಾಹಿಕ ಕಥಾನಕಗಳು ಜಾನಪದದಲ್ಲಿ ಹೇರಳವಾಗಿವೆ. ಈ ದೈವಿಕ ವಿವಾಹಗಳಲ್ಲೂ ಜಾತಿ, ಮತ, ಪಂಥಗಳ, ಬಡತನ-ಸಿರಿತನಗಳ ತಾಕಲಾಟವೂ ಕಂಡುಬರುತ್ತದೆ.

    ಭೈರವನ ವೈವಾಹಿಕ ಕಥಾನಕದಲ್ಲೂ ಇದೇ ಛಾಯೆಯಿದೆ.
             "ಜೋಗಿ ಸಿಂಗನಾಥ, ಬೆರಳಲ್ಲಿ ಗೋರಖನಾಥ |
            ಮೇಗಳ ಗುಡಿಯಲ್ಲಿ ಹರಕೆಯ ಕೇಳೋರು" ||

ಎಂಬ ವಿರೂಪಗೊಂಡ ತ್ರಿಪದಿಯ ತುಣುಕಿನಲ್ಲಿ - ಜೋಗಿ ಎಂದರೆ ಸಂಸ್ಕೃತದ ಯೋಗಿ, ಆತ ಅಲೆಮಾರಿ, ಹಠಯೋಗಿ. ಅವನು ಉತ್ತರದ ಗೋರಖನಾಥ ಅಥವಾ ಭೈರವ.  ಆತನಿಗೆ ಪತ್ನಿಯಿದ್ದಾಳೆ. ಆಕೆ  ಪಾರ್ವತಿ. ಭೂಲೋಕಕ್ಕೆ ಭೈರವನು ಬಂದಾಗ ಅವನಲ್ಲಿ ಅನುರಕ್ತಳಾದವಳು ಮಾಳವ್ವ. ಆಕೆ ಕುರುಬಿತಿ. ಆಕೆಯನ್ನು ಭೈರವ ವರಿಸಿದ. ದೈವಭಕ್ತೆಯಾದ ಮಾಳವ್ವನು

            "ಕನಸಿನಲಿ ಕಂಡೇನು ಮನವೀಗ ದೊಡ್ಡವ ತೊಳಸೀಯ ಮಾಡಿ ಬಳಿದಂತೆ |
            ಚುಂಚನಗಿರಿ ಭೈರವನೆ ಬಾ ನನ್ನ ಸ್ವಪುನಕೆ" ||
ಎಂದು ಕೇಳಿಕೊಂಡಳು, ಅವಳು ಮಾತ್ರವಲ್ಲ, ಆಕೆಯ ತಂದೆ ಕೂಡ
            "ಆಧಾರವಾಗೋ ಆದೀಯ ಭೈರವನೇ |
            ಆಧಾರವಿಲ್ಲದ ಬಡವರ ಮಗಳೀಗೆ ಆಧಾರವಾಗೋ ಭೈರವನೇ" ||
ಎಂದು ಬೇಡುತ್ತಾನೆ.
    ಚುಂಚನಗಿರಿಯ ಪ್ರದೇಶಕ್ಕೆ ನಾಥಪಂಥದವರ ನಂತರ ಬಂದಿರಬಹುದಾದ ವೀರಶೈವರ ಪ್ರಭಾವವು ಈ ಜಾನಪದಿಯ ಕವಿಯ ಮೇಲೆ ಉಂಟಾಗಿದೆಯೆನ್ನಲು ಈ ತ್ರಿಪದಿಯನ್ನು ನೋಡಿ :
            ಅಪ್ಪ ಭೈರವಗೆ ತುಪ್ಪ ಬಾಳೆಯ ಹಣ್ಣು | ಇಪ್ಪತ್ತು ವರಹ ಶಿವದಾರ |
            ಚಿನ್ನದಿ ಒಪ್ಪುವ ಗೆಜ್ಜೆ ಗುರುವಿಂಗೆ ||
ಹೀಗೆ ಶಿವದಾರ, ಗೆಜ್ಜೆಗಳಿಂದ ಅಲಂಕೃತನಾದ ಭೈರವನು ತನ್ನ ಪ್ರೇಯಸಿಗಾಗಿ ತೊಳಲಿದನು. ಈ ವಿರಹ ವೇದನೆಯಲ್ಲಿ ಆತ ಹೊಂಚುಹಾಕಿ, ಕೈಯಲ್ಲಿ ಕಂಚಿನ ಗುರಾಣಿಯಿದ್ದೂ ಹುಲಿಯನ್ನು ಹೊಡೆಯಲಾರದ ಅಸಮರ್ಥನಾಗುತ್ತಾನೆ.
        ಹಂಚಿ ಹುಲ್ಲೆಲಿ ಹೊಂಚಾಡುವನಿವನ್ಯಾರೇ |
            ಕಂಚೀನ ಗುರಾಣಿ ಕೈಯಲ್ಲಿ ಹಿಡಕೊಂಡು |
            ಹೊಂಚಾಡಿ ಹುಲಿನ ಹೊಡಿಲಿಲ್ಲ ||

ಹುಲಿಯ ಹೊಡೆಯಲಾಗದ ಭೈರವ ಮುಂದೇನು ಮಾಡಿದ !
            ಅಗಸೇ ಮರದಡಿಯಲ್ಲಿ ಮುತ್ತಿನ ಕಂಬಳಿ ಹಾಸಿ |
            ಸೊಗಸಮಾಡವರೆ ನಮ್ಮ ಗುರು |
            ಬೆಟ್ಟದ ಅಗಡೀಯ ನೆರಳೀಗೆ ||
    ಭೈರವನನ್ನು ನೋಡುತ್ತ ಮಾಳವ್ವ ಉಯ್ಯಾಲೆಯಾಡಿದಳು. ಭೈರವ ಅವಳಿಗಾಗಿ ಕುರಿಗಾಹಿಯಾದನು. ಇದೆಲ್ಲದರಿಂದ ಭೈರವನ ಮೂಲಪತ್ನಿ ಪಾರ್ವತಿ ವ್ಯಗ್ರಳಾದಳು. ಇಬ್ಬರು ಹೆಂಡಿರನ್ನು ಕಟ್ಟಿಕೊಂಡ ಭೈರವನ ಬಾಳುವೆಯೇನೂ ಬಂಗಾರವಾಗಲಿಲ್ಲ. ಈರ್ವರನ್ನೂ ಸಮಾನವಾಗಿ ನೋಡಿಕೊಳ್ಳಲು, ಸಂತೋಷಪಡಿಸಲು ಹೆಣಗಿದ. ಇಷ್ಟಾಗಿಯೂ ಅದೊಂದು ಸಂದರ್ಭದಲ್ಲಿ ಪಾರ್ವತಿಯ ಕೈಯಡುಗೆಗಿಂತ ಮಾಳವ್ವನ ಕೈರುಚಿಗೆ ಮನಸೋತ. ಕುರುಬಿತಿಯಾದ ಅವಳ ಸೀರೆಯ ಜಡ್ಡುವಾಸನೆ ಶಿವನಿಗೆ ಸಿರಿಗಂಧವಾಯಿತು.
ನಮ್ಮ ದೇವಾನುದೇವತೆಗಳು ಹುಲುಮಾನವರಂತೆಯೇ ಕಷ್ಟ-ಸುಖಗಳನ್ನು ಅನುಭವಿಸಿದ ಬಗೆಯನ್ನು ನಮ್ಮ ಜಾನಪದ ಕಥೆಗಳು ವಿವರವಾಗಿ ವರ್ಣಿಸಿವೆ. ಶಿಷ್ಟರ ವರ್ಣನೆ ಒಂದು ಬಗೆಯದಾದರೆ, ಅಶಿಷ್ಟರ ವರ್ಣನೆ ಮತ್ತೊಂದು ಬಗೆಯದು. ಹಾಗೆ ನೋಡಿದರೆ ಅಶಿಷ್ಟರ ವರ್ಣನೆಯಲ್ಲಿ ನೈಜತೆಯಿದೆ, ಆತ್ಮೀಯತೆಯಿದೆ, ಹಾಗಾಗಿ ಅದು ಮನಸ್ಸಿಗೆ ಹತ್ತಿರವಾಗುತ್ತದೆ.
 
* * * * * * *

ಶುಕ್ರವಾರ, ಜುಲೈ 1, 2011

ಬಳ್ಳಾರೇಶ್ವರ ದೇಗುಲದ ಕಾಲಭೈರವ

 ಬಳ್ಳಾರೇಶ್ವರ ದೇಗುಲದ ಕಾಲಭೈರವ
    ನೀವು ಚಿತ್ರದಲ್ಲಿ ಕಾಣುತ್ತಿರುವ ಶ್ರೀ ಕಾಲಭೈರವನ ಭವ್ಯಮೂರ್ತಿ ಇರುವುದು ಚಿಕ್ಕಮಗಳೂರು ಜಿಲ್ಲೆಯ ಕಡೂರು ಸಮೀಪವಿರುವ ಸಖರಾಯಪಟ್ಟಣದಲ್ಲಿ.  
 
ಹೊಟ್ಟೆಯ ಭಾಗದಲ್ಲಿ ಮುಕ್ಕಾಗಿರುವ ಗಣಪತಿ

ಒಂದು ಕಾಲದಲ್ಲಿ ಹೊಯ್ಸಳ ಇತರ ದೇವಾಲಯಗಳಂತೆ ಇತರ ಭವ್ಯವಾಗಿದ್ದಿರಬಹುದಾದ ಈ ದೇಗುಲ ಇಂದು ವಿಚಿತ್ರ ರೂಪ ತಳೆದಿದೆ. ಸಾಧಾರಣವಾಗಿ ಎಲ್ಲ ಹೊಯ್ಸಳ ದೇಗುಲಗಳೂ ನಕ್ಷತ್ರಾಕಾರದ ಜಗುಲಿಯ ಮೇಲೆ ಕಟ್ಟಲ್ಪಟ್ಟಿರುತ್ತವೆ. ಈ ದೇವಾಲಯದಲ್ಲಿ ಇಂದು ಕೇವಲ ಪೂಜಾವಿಗ್ರಹಗಳು ಮಾತ್ರ ಉಳಿದಿವೆ. ಅವೂ ಮುಕ್ಕಾಗಿ ಹೋಗಿದ್ದರೂ ತಮ್ಮ ಭವ್ಯತೆ ಮತ್ತು ಕಲಾಕುಶಲತೆಗೆ ಸ್ಥಳೀಯರು ಮನಸೋತು ಸಂರಕ್ಷಿಸಿರುವುದರಿಂದ ಹಾಗೆ ಉಳಿದಿವೆ.  ಸುಪ್ರಸಿದ್ಧ ಅಯ್ಯನಕೆರೆ ದಂಡೆಯಲ್ಲಿ ಇರುವ ಈ ದೇವಾಲಯದ ಭಗ್ನ ಭಾಗಗಳು, ಇಲ್ಲಿಂದ 5  ಕಿ.ಮೀ ದೂರದಲ್ಲಿರುವ ಮನೆಯ ಅಂಗಳಗಳಲ್ಲಿ, ಹಾದಿಗಳಲ್ಲಿ ಕಾಂಪೌಡ್ ಗಳಲ್ಲಿ ಸೇರಿಹೋಗಿವೆ.  ಪ್ರಾಚ್ಯವಸ್ತು ಇಲಾಖೆಯ ದಿವ್ಯ ನಿರ್ಲಕ್ಷದಿಂದಾಗಿ ಈ ಸ್ಥಿತಿ ಒದಗಿದೆ.  ದೇವಾಲಯದ ನೆಲಗಟ್ಟಿನಲ್ಲಿ ಇನ್ನೂ ಹಳೆಗಾಲದ ಕಲ್ಲುಗಳು ಹಾಗೇ ಉಳಿದಿವೆ.  ಅದನ್ನೇ ಆಧರಿಸಿ, ಸಿಮೆಂಟಿನ ಕಟ್ಟಡವನ್ನು ಕಟ್ಟಲಾಗಿದೆ,  ಗರ್ಭಗುಡಿಯಲ್ಲಿ ಶಿವಲಿಂಗ ಮತ್ತು ನಂದಿಯ ವಿಗ್ರಹಗಳಿವೆ. ನಂದಿಯ ವಿಗ್ರಹ ಮುಕ್ಕಾಗದೇ ಹಾಗೇ ತನ್ನ ಸೌಂದರ್ಯವನ್ನು ಉಳಿಸಿಕೊಂಡಿದೆ.  ಅಕ್ಕಪಕ್ಕಗಳಲ್ಲಿ ಕಾರ್ತಿಕೇಯ ಮತ್ತು ಚಾಮುಂಡೇಶ್ವರಿಯ ವಿಗ್ರಹಗಳಿವೆ.

    ಹೊರಭಾಗದಲ್ಲಿ ಗಣೇಶ ಮತ್ತು ಮಹಿಷಾಸುರಮರ್ದಿನಿಯ ಶಿಲ್ಪಗಳಿವೆ. ಅತ್ಯಂತ ಕಲಾತ್ಮಕವಾಗಿರುವ ದೇವಿಯ ವಿಗ್ರಹದ ಕೈಗಳನ್ನು ಮುರಿದು ವಿರೂಪಗೊಳಿಸಲಾಗಿದೆ.  ಗಣಪತಿಯ ಹೊಟ್ಟೆಯನ್ನು ಬಗೆದಿರುವುದರಿಂದ ಅ ಭಾಗಕ್ಕೆ ಸಿಮೆಂಟ್ ತುಂಬಿಸಿ ಇಡಲಾಗಿದೆ.

    ದೇವಾಲಯದ ಬಲಭಾಗದಲ್ಲಿ ವಿಷ್ಣು ಮತ್ತು ಕಾಲಭೈರವರ 8 ಅಡಿ ಎತ್ತರದ ಭವ್ಯ ಮೂರ್ತಿಗಳಿವೆ.  ಇಲ್ಲಿನ ಕಾಲಭೈರವ ಶಿಲ್ಪದ ವಿಶೇಷತೆಯಂದೆರೆ, ಶಿಲ್ಪಶಾಸ್ತ್ರದಲ್ಲಿ ಈ ವಿಗ್ರಹದ ಬಗ್ಗೆ ಹೇಳಿರುವ ಎಲ್ಲ ಲಕ್ಷಣಗಳನ್ನು ಗಮನಿಸಿ ಕಡೆಯಲಾಗಿದೆ.  ತಲೆಯ ಮೇಲೊಂದು ಸೂರು ಇಲ್ಲದೆ ಗಾಳಿ ಮಳೆಗಳಿಗೆ ಸಿಲುಕಿರುವ ಈ ವಿಗ್ರಹವನ್ನು ಭಿನ್ನವಾಗಿದೆ ಎಂಬ ಕಾರಣಕ್ಕೆ ಪೂಜಿಸಲಾಗುತ್ತಿಲ್ಲ.   ಆದರೆ  ಅದರ ಶಿಲ್ಪ ಸೌಂದರ್ಯವನ್ನು ಗಮನಿಸುವ ಯಾರಿಗೂ ಭಕ್ತಿ ಮೂಡದೇ ಇರಲು ಸಾಧ್ಯವಿಲ್ಲ.  ಸಾಧಾರಣವಾಗಿ ಕಂಡುಬರುವ ಕಾಲಭೈರವನ ಶಿಲ್ಪಗಳಲ್ಲೆಲ್ಲಾ ಸೌಂದರ್ಯ ಮತ್ತು ಗಾತ್ರದಲ್ಲಿ ಗಮನ ಸೆಳೆಯುವ ಈ ಶಿಲ್ಪಕ್ಕೆ ಒದಗಿರುವ ದುರ್ಗತಿ  ಕನಿಕರ ಹುಟ್ಟಿಸುವಂತಿದೆ.
ಮಹಿಷಾಸುರಮರ್ದಿನಿಯ ಸುಂದರ ಶಿಲ್ಪವೂ ಭಗ್ನಗೊಂಡಿದೆ
ಕಾಲಭೈರವನ ಆಳೆತ್ತರದ ಭವ್ಯ ಮೂರ್ತಿ
 ನಂದಿಯ ವಿಗ್ರಹ ಚಿಕ್ಕದಾಗಿದ್ದರೂ
ಅದರಲ್ಲಿರುವ ಕುಸುರಿ ಕೆಲಸ ಗಮನಾರ್ಹ
         ಪಕ್ಕದಲ್ಲಿರುವ ವಿಷ್ಣು ಮೂರ್ತಿಯೂ ಸೌಂದರ್ಯ ಮತ್ತು ಶಿಲ್ಪಮೌಲ್ಯದಲ್ಲಿ ಕಳಪೆಯದೇನಲ್ಲ.  ವಿಷ್ಣುವಿನ ಮೊಗದ  ಮಂದಹಾಸ ನಿಬ್ಬೆರಗುಗೊಳಿಸುವಂತಿದೆ.  ಎಡಭಾಗದಲಿ ಶ್ರೀ ಕೃಷ್ಣನ ವಿಗ್ರಹಕ್ಕೆ ಒಂದು ಕಟ್ಟಡ ಕಟ್ಟಿ, ಭಿನ್ನವಾದ ಭಾಗವನ್ನು ಸಿಮೆಂಟಿನಿಂದ ಸಂರಕ್ಷಿಸಲಾಗಿದೆ. ಒಂದು ವಿಧದಲ್ಲಿ  ನೋಡಿದರೆ, ಈಗ ಬಂದಿರುವ ತಂತ್ರಜ್ಞಾನ ಮತ್ತು ಪರಿಕರಗಳಿಂದ ಇಂಥ ಭಗ್ನ ಶಿಲ್ಪಗಳನ್ನು ಪುನರುಜ್ಜೀವನಗೊಳಿಸಿ ಇನ್ನಷ್ಟು ಕಾಲ ಕಾಪಾಡಬಹುದು. 

    ಸುಂದರ ಪ್ರಕೃತಿಯ ಮಡಿಲಲ್ಲಿ ಇರುವ ಈ ದೇಗುಲವನ್ನು ಪ್ರಾಚ್ಚವಸ್ತು ಇಲಾಖೆ, ಬಹಳಷ್ಟು ವರ್ಷಗಳ ಹಿಂದೆ ಆಸ್ಠೆವಹಿಸಿದ್ದರೆ, ಅಥವಾ ಈಗಲೂ ಈ ದೇಗುಲದ ಆವರಣದಲ್ಲಿ ಮತ್ತು ಊರಿನಲ್ಲಿ ಚದುರಿ ಬಿದ್ದಿರುವ  ಶಿಲ್ಪಭಾಗಗಳನ್ನು ಪುನರ್ ಜೋಡಣೆ ಮಾಡಿದರೆ, ಅಲ್ಲಿ ಮತ್ತೊಮ್ಮ ಆ ಮಂದಿರದ ಭವ್ಯತೆ ಮರಳಬಹುದು.  ಆ ಮಟ್ಟಿಗಿನ ಆಸ್ಠೆಯನ್ನು ಸ್ಠಳೀಯರು ತೋರಿದರೆ ಇದು ಅಗಲಾರದ ಕೆಲಸವೇನೂ ಅಲ್ಲ.   
* * * * * *