ಗುರುವಾರ, ಡಿಸೆಂಬರ್ 22, 2011

ದಕ್ಷಿಣದಲ್ಲೊಂದು ಕಾಲಭೈರವನ ಭವ್ಯ ನೆಲೆ


ಆದಿಚುಂಚನಗಿರಿಯ ಶ್ರೀ ಕಾಲಭೈರವೇಶ್ವರ ಮಂದಿರ


ದೇವಾಲಯದ ಮುಂಭಾಗ

ಆದಿಚುಂಚನಗಿರಿ ಕ್ಷೇತ್ರವು ಇತ್ತೀಚೆಗೆ ಪ್ರಸಿದ್ಧಿಗೆ ಬಂದಿದ್ದರೂ, ಅದು ಪುರಾತನ ಭೈರವ ಕ್ಷೇತ್ರ. ಈ ಪ್ರದೇಶದಲ್ಲಿ ಬಹಳ ಹಿಂದಿನಿಂದಲೂ ನಾಥಪಂಥದವರು ನೆಲೆಸಿದ್ದರು.ಈ ಬಗ್ಗೆ ಸ್ಪಷ್ಟ ಕುರುಹುಗಳನ್ನು ನೀಡಬಲ್ಲ ಅನೇಕ ಗುಹೆಗಳು, ಮಂದಿರಗಳು ಈ ಪ್ರದೇಶದ ಸುತ್ತಮುತ್ತಲೂ ದೊರೆಯುತ್ತವೆ. ೧೯೩೯ರ ಒಂದು ದಾಖಲೆಯಂತೆ ಇದು ಪುರಾತನ ಶಿವಬಾಲಗಂಗಾಧರೇಶ್ವರನ ನೆಲೆಯೆಂದು ಹೇಳಲು ಆಧಾರಗಳನ್ನು ನೀಡಲಾಗಿದೆ. ಅದರಂತೆ ಇದು ಅಧ್ಯಾತ್ಮ ಸಾಧಕರ ವಾಸಸ್ಧಾನವಾದ್ದರಿಂದ ಶೈವಪಂಥದ ಪ್ರಬಲಕೇಂದ್ರವೆಂದು ಹೇಳಬಹುದು.

 ಆದಿಚುಂಚನಗಿರಿ ಕ್ಷೇತ್ರವು ಈ ಕ್ಷೇತ್ರದ ೭೧ನೇ ಪೀಠಾಧಿಪತಿ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ನೇತೃತ್ವದಲ್ಲಿ ಅಭಿವೃದ್ಧಿಗೊಂಡಿತು. ಶೈವಪಂಥದಲ್ಲಿ ಉಲ್ಲೇಖಿತವಾಗಿರುವ ಅನೇಕ ಆಚರಣೆಗಳು, ವಿಧಿಗಳು ಮತ್ತು ಗ್ರಾಮೀಣ ಪದ್ಧತಿಗಳನ್ನು ಅವರು ಪುನರುಜ್ಜೀವನಗೊಳಿಸಿದರು. ಅಂಥದೊಂದು ಕಾರ್ಯವನ್ನು ಕೈಗೊಳ್ಳುವಾಗ, ಜನರ ನಂಬಿಕೆ ಮತ್ತು ಶ್ರದ್ಧೆಗಳಿಗೊಂದು ಉತ್ತಮ ನೆಲೆ ಹಾಗೂ ಈ ಎಲ್ಲ ಚಟುವಟಿಕೆಗಳೂ ಸಾರೋದ್ಧಾರವಾಗಿ ಮುನ್ನಡೆದುಕೊಂಡು ಹೋಗಬೇಕೆಂಬ ವಿಸ್ತೃತ ದೃಷ್ಟಿಕೋನದೊಂದಿಗೆ ಇಲ್ಲಿ ನೂತನ ಶ್ರೀ ಕಾಲಭೈರವೇಶ್ವರ ಸ್ವಾಮಿಯ ದೇವಾಲಯದ ನಿರ್ಮಾಣ ಹಾಗೂ ಪುರಾತನ ನಾಥಪಂಥದ ಆಚರಣೆಗಳಿಗೆ ಅನುಕೂಲವಾಗುವಂಥ ವಾತಾವರಣವನ್ನು ರೂಪಿಸಿದರು. 
ಭೈರವ ತನ್ನ ವಾಹನದೊಂದಿಗೆ
ಇದರ ಫಲವಾಗಿ ನಿರ್ಮಿತವಾಗಿರುವ ಆದಿಚುಂಚನಗಿರಿಯ ಶ್ರೀ ಕಾಲಭೈರವೇಶ್ವರ ಮಂದಿರವು ದಕ್ಷಿಣ ಭಾರತದಲ್ಲೇ  ಈ ದೇವರಿಗೆ ಸಂಬಂಧಿಸಿದಂತೆ ಅತ್ಯಂತ ದೊಡ್ಡ ಹಾಗೂ ಪ್ರಸಿದ್ಧ ಯಾತ್ರಾಸ್ಥಳವಾಗಿ ಮಾರ್ಪಟ್ಟಿದೆ. ಸಾಧಾರಣವಾಗಿ ಕಾಲಭೈರವನೆಂದರೆ ಕಾಶಿಯ ನೆನಪಾಗುತ್ತದೆ, ಉಜ್ಜಯಿನಿಯ ಕಾಲಭೈರವನೂ ಪ್ರಸಿದ್ಧನೇ ಸರಿ. ದಕ್ಷಿಣದಲ್ಲಿ ಈ ದೇವತೆಯ ದೇಗುಲಕ್ಕೆ ಇದ್ದ ಕೊರತೆಯು ಆದಿಚುಂಚನಗಿರಿಯ ಮಂದಿರದ ಮೂಲಕ ತುಂಬಿದಂತಾಗಿದೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸುಮಾರು ೧೧೦ ಕಿ.ಮೀ.ಗಳ ದೂರದಲ್ಲಿ ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿಗೆ ಸೇರಿದ ಬೆಳ್ಳೂರು ಸಮೀಪ ಈ ದೇವಾಲಯವಿದೆ. ಇದು ೨೦೦೮ರ ಫೆಬ್ರವರಿಯಲ್ಲಿ ಸ್ಥಾಪಿತವಾಯಿತು. ಪ್ರಕೃತಿಯ ಸಿರಿಮಡಿಲಲ್ಲಿರುವ, ಬೃಹತ್ ಬಂಡೆಗಳ ಹಿನ್ನೆಲೆಯಲ್ಲಿ ಪಡಿಮೂಡಿರುವ ಈ ಮಂದಿರವು ಆಧುನಿಕ ಮತ್ತು ಪುರಾತನ ಶೈಲಿಗಳೆರಡನ್ನೂ ಸಮವಾಗಿ ಬಳಸಿಕೊಂಡಿದೆ. 

ಆದಿಚುಂಚನಗಿರಿಯ ಈ ದೇವಾಲಯವನ್ನು ತಲುಪಲು ಬೆಟ್ಟದ ಪಶ್ಚಿಮ ದಿಕ್ಕಿನಲ್ಲಿರುವ ಮೆಟ್ಟಿಲುಗಳ ಮೂಲಕ ಸಾಗಬೇಕು. ಬೆಟ್ಟದ ತಪ್ಪಲಿನಲ್ಲಿ ಬೃಹತ್ ಪುಷ್ಕರಣಿಯನ್ನು ರಚಿಸಲಾಗಿದೆ. ಬೆಟ್ಟದ ಮೇಲೆ ಏರುವಾಗ ಅನೇಕ ಮಹಾದ್ವಾರಗಳು ಕಾಣಸಿಗುತ್ತವೆ. ಇವುಗಳ ಇಕ್ಕೆಲಗಳಲ್ಲಿ ಆಶ್ರಮದ ಕಟ್ಟಡಗಳಿವೆ. ಮಧ್ಯದಲ್ಲಿ ಭದ್ರವಾದ, ವಿಸ್ತಾರವಾದ ಬುನಾದಿಯ ಮೇಲೆ ಪೂರ್ವಾಭಿಮುಖವಾಗಿ ನಿಂತಿರುವ ಭವ್ಯ ದೇವಾಲಯವಿದೆ. 

ಈ ದೇವಾಲಯದ ಕಾರ್ಯವು ೧೯೯೩ರಷ್ಟು ಹಿಂದೆಯೇ ಆರಂಭವಾಯಿತು. ಇದನ್ನು ಸರಿಸುಮಾರು ೧೨೦೦ ಶಿಲ್ಪಿಗಳು ಹದಿನೈದು ವರ್ಷಗಳ ಶ್ರಮದಿಂದ ನಿರ್ಮಿಸಿದರು. ಇದರ ರಾಜಗೋಪುರವು ೯೦ ಅಡಿ ಎತ್ತರವಿದ್ದು, ದೇವಾಲಯವು ಪೂರ್ವ ಪಶ್ಟಿಮವಾಗಿ ೨೮೫ ಅಡಿ ಹಾಗೂ ದಕ್ಷಿಣೋತ್ತರವಾಗಿ ೧೮೦ಅಡಿಗಳ ವಿಸ್ತಾರವಾಗಿದೆ. ಉತ್ತರ, ದಕ್ಷಿಣ ಮತ್ತು ಪಶ್ಚಿಮಕ್ಕೆ ಮೂರು ಗೋಪುರಗಳಿದ್ದು ಅವು ಒಂದೊಂದೂ ೫೦ ಅಡಿಗಳಷ್ಟು ಎತ್ತರವಿವೆ. ಇಡೀ ದೇವಾಲಯದಲ್ಲಿ ೧೭೨ ಸ್ಥಂಭಗಳಿವೆ. ತಮಿಳುನಾಡಿನ ಕಾಂಚೀಪುರಂ ಸಮೀಪದಲ್ಲಿ ದೊರೆಯುವ ಕೃಷ್ಣಶಿಲೆಗಳಿಂದ ಇಲ್ಲಿನ ವಿಗ್ರಹಗಳನ್ನು ಕಡೆಯಲಾಗಿದೆ. ಮಧ್ಯದಲ್ಲಿ ಸ್ಥಳದ ಅಧಿದೇವತೆ ಕಾಲಭೈರವ, ಈಶಾನ್ಯಕ್ಕೆ ಸ್ತಂಭಾಂಬಿಕೆ, ಆಗ್ನೇಯಕ್ಕೆ ನಾಗಲಿಂಗೇಶ್ವರಸ್ವಾಮಿ, ಗಣಪತಿ, ಕಾರ್ತಿಕೇಯ, ಹೀಗೆ ೫ ಮಂದಿರಗಳಿವೆ. ದೇವಾಲಯದ ಪ್ರಮುಖ ರಚನೆಗಳಿಗೆ ಸ್ಥಳೀಯವಾಗಿ ಸಿಕ್ಕುವ ಬಿಳಿಯ ಗ್ರಾನೈಟ್‌ ಕಲ್ಲನ್ನು ಬಳಸಲಾಗಿದೆ. ಇಲ್ಲಿನ ಶಿಲ್ಪಶೈಲಿಯಲ್ಲಿ ಕೆಲವೊಂದು ರಚನೆಗಳು ಆಧುನಿಕ ಕಲೆಯನ್ನು ಬಿಂಬಿಸಿದರೆ ಮತ್ತೆ ಕೆಲವು ೧೬-೧೮ನೇ ಶತಮಾನಗಳಲ್ಲಿ ಪ್ರಚಲಿತವಿದ್ದ ವಿಜಯನಗರದ ನಾಯಕರ ಶೈಲಿಯನ್ನು ನೆನಪಿಸುವಂತಿವೆ. ತಮಿಳುನಾಡಿನ ಶಿಲ್ಪಿಗಳೇ ಇದರ ನಿರ್ಮಾಣಕಾರ್ಯದಲ್ಲಿದ್ದುದರಿಂದ ಅಲ್ಲಿನ ಪ್ರಭಾವವೂ ಗೋಚರವಾಗುತ್ತದೆ. 

ಧ್ವಜಸ್ತಂಭ ಮತ್ತು ಗರ್ಭ ಗೃಹ 

ಭೈರವನು ರುದ್ರ-ಶಿವ-ಈಶಾನ ಸ್ವರೂಪನಾದ್ದರಿಂದ ಈತನು ದೇವಮೂಲೆಯೆಂದು ಕರೆಯುವ ಈಶಾನ್ಯದ ಅಧಿಪತಿ. ಸಾಧಾರಣವಾಗಿ ಅಷ್ಟಭೈರವರ ಉಲ್ಲೇಖ ಎಲ್ಲೆಡೆಯೂ ಪ್ರಚಲಿತವಿದೆ. ಆದರೆ ಇಲ್ಲಿ ೮೮ ಭೈರವರ ವಿವಿಧ ರೂಪಗಳನ್ನು ಕಂಡರಿಸಲಾಗಿದ್ದು, ಅವುಗಳನ್ನು ಶುಭ್ರ ಬಿಳಿಯ ಕಂಬಗಳ ಹಿನ್ನೆಲೆಯಲ್ಲಿ ಅಳವಡಿಸಲಾಗಿದೆ. ಅಷ್ಟಭೈರವರೆಂದರೆ ಅಷ್ಟದಿಕ್ಪಾಲಕರು. ಆದರೆ ಕೆಲವು ಶಿವಮಂದಿರಗಳಲ್ಲಿ ಈಶಾನ್ಯದಲ್ಲಿ ಕ್ಷೇತ್ರಪಾಲನನ್ನು ಸ್ಥಾಪಿಸಿರುವುದು ಸಾಧಾರಣವಾಗಿ ಕಂಡುಬರುತ್ತದೆ. ಶಿವನ ಶಕ್ತಿ ಮತ್ತು ತತ್ವಗಳು ದೀಕ್ಷೆ ಮತ್ತು ಉಪದೇಶಗಳ ಮೂಲಕ ಸಾಗಿಬಂದಿರುವ ಉದಾಹರಣೆಗಳಿವೆ. ಆದಿಚುಂಚನಗಿರಿಯ ಈ ದೇಗುಲವು ಬ್ರಹ್ಮಾಂಡದ ಪರಿಕಲ್ಪನೆಯ ಸ್ಥಂಭ ಮತ್ತು ಜಲಸ್ಥಾನವಾದ ಬಾವಿಗಳ ಪರಿಕಲ್ಪನೆಯನ್ನು ಹೊಂದಿದೆ. ವಾರಾಣಸಿಯಲ್ಲಿ ಇದು ಸಾಂಕೇತಿಕವಾಗಿ ಸ್ಥಂಭ ಭೈರವ (ಇದನ್ನು ಹಿಂದಿಯಲ್ಲಿ ಲಾತ್ ಎಂದು ಕರೆಯುವರು) ಮತ್ತು ಕಪಾಲಮೋಚನ ಬಾವಿಗಳೆಂದು ನಿರ್ದೇಶಿಸಲಾಗಿದೆ. ಅದೇ ಪದ್ಧತಿಯು ದಕ್ಷಿಣದಲ್ಲಿ ಮುಂದುವರೆದು ಇಲ್ಲಿ ಅಂಬಿಕೆಯು ಸ್ತ್ರೀ ರೂಪವನ್ನು ಪಡೆದಳೆಂದೂ, ಹೀಗಾಗಿ ಆಕೆಯನ್ನು ಸ್ಥಂಭಾಂಬಿಕೆಯೆಂದೂ ಹೆಸರಿಸಲಾಗಿದೆ. (ಸ್ಥಳೀಯವಾಗಿ ಇದನ್ನೇ ಕಂಬದಮ್ಮನೆಂದು ಕರೆಯುವ ರೂಢಿಯಿದೆ).

ಅಶ್ವಾರೂಢ ರಜತ ಭೈರವ
ಆದಿಚುಂಚನಗಿರಿಯ ಮೂಲವಿಗ್ರಹ ಅನೇಕ ಶತಮಾನಗಳಿಂದ ಪೂಜೆಗೊಳ್ಳುತ್ತಿದೆ. ಅದಕ್ಕೆ ಅನೇಕ ವಿಶಿಷ್ಟ ಲಕ್ಷಣಗಳಿವೆ. ಇಲ್ಲಿ ಆತನು ಬಾಲರೂಪಿ, ಎಂದರೆ ವಟುಕ ಭೈರವ. ಭೈರವನ ವಿಷಯದಲ್ಲಿ ರೂಪನಿಷ್ಪತ್ತಿಯನ್ನು ವಿವರಿಸುವಂಥ ನಿಗದಿತ ಶಿಲ್ಪ ಸಾಹಿತ್ಯ ಲಭ್ಯವಿಲ್ಲದಿರುವುದರಿಂದ, ಕೆಲವೊಂದು ಸ್ಥೂಲ ಲಕ್ಷಣಗಳನ್ನು ಮಾತ್ರ ಗ್ರಹಿಸಿ, ಇತರ ಅಂಗಾಂಗ, ಆಯುಧಗಳಿಗೆ ಸಂಬಂಧಿಸಿದಂತೆ, ಅವುಗಳ ಕೆತ್ತನೆಯು ಭೈರವನ ಆರಾಧಕರ ಇಲ್ಲವೇ ಶಿಲ್ಪಿಗಳ ಮೇಲೆ ಆಧಾರಿತವಾಗಿರುತ್ತದೆಂದು ಈ ವಿಷಯದ ಬಗ್ಗೆ ವಿಶೇಷ ಅಧ್ಯಯನಮಾಡಿರುವ ಕರೈನ್ ಲ್ಯಾಡ್ರೆಕ್‌ ಹೇಳಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಇಟಗಿಯ ಕಾಲಭೈರವನ ವಿಷಯದಲ್ಲಿ ಅವರು ನೀಡಿರುವ ವಿವರಣೆಯನ್ನು ಈ ಹಿಂದೆ ಚರ್ಚಿಸಲಾಗಿದೆ.

ಆದಿಚುಂಚನಗಿರಿಯಲ್ಲಿನ ಕಾಲಭೈರವನ ವಿಗ್ರಹದ ಲಕ್ಷಣಗಳು ಹೀಗಿವೆ : ಇಲ್ಲಿನ ವಿಗ್ರಹಕ್ಕೆ ನಾಲ್ಕು ಕೈಗಳಿದ್ದು, ಮೇಲಿನ ಬಲಗೈಯಲ್ಲಿ ತ್ರಿಶೂಲ, ಕೆಳ ಬಲಗೈನಲ್ಲಿ ಖಡ್ಗಗಳಿವೆ. ಕೆಳ ಎಡಗೈನಲ್ಲಿ ಕಪಾಲ ಮತ್ತು ಬ್ರಹ್ಮನ ಶಿರಗಳಿವೆ. ಈ ಶಿರದ ಕೆಳಗೆ ಕಾಲಭೈರವನ ವಾಹನ ನಾಯಿಯಿದ್ದು ಇದು ಬ್ರಹ್ಮನ ಶಿರದಿಂದ ತೊಟ್ಟಿಕ್ಕುತ್ತಿರುವ ರಕ್ತವನ್ನು ಹೀರುತ್ತಿದೆ. ಅದರ ಹಿಂಗಾಲುಗಳು ಕತ್ತರಿಸಲ್ಪಟ್ಟ ಇನ್ನೊಂದು ಶಿರದ ಮೇಲೆ ಊರಿ ನಿಂತಿವೆ. ಕಾಲಭೈರವನ ವಿಗ್ರಹವನ್ನು ಗುರುತಿಸುವಾಗ ಬ್ರಹ್ಮಶಿರ ಮತ್ತು ಕಪಾಲಗಳು ಮುಖ್ಯವಾಗುತ್ತವೆ. ಏಕೆಂದರೆ ಡಮರು ಮತ್ತು ತ್ರಿಶೂಲಗಳು ಸಾಧಾರಣವಾಗಿ ಎಲ್ಲ ಶಿವ ಶಿಲ್ಪಗಳಲ್ಲಿ ಕಂಡಬರುತ್ತವೆ. ಆದಿ ಚುಂಚನಗಿರಿಯಲ್ಲಿರುವ ಕಾಲಭೈರವನ ವಿಗ್ರಹದಲ್ಲಿನ ವಿಶೇಷವೆಂದರೆ ಆತನು ಸೊಂಟದಲ್ಲಿ ಕಿರುಗತ್ತಿಯನ್ನು ಧರಿಸಿದ್ದಾನೆ. ಅವನ ಜಟೆಯ ಕೂದಲುಗಳು ಹಿಂದಕ್ಕೆ ಬಾಚಿದಂತಿದ್ದು, ಅವು ಕುತ್ತಿಗೆಯ ಹಿಂಭಾಗದಲ್ಲಿ ಹರಡಿಕೊಂಡಿದೆ. ಉಬ್ಬಿದ ಕಣ್ಣುಗಳು, ಕೋರೆದಾಡೆಗಳು, ದೊಡ್ಡ ಕುಂಡಲಗಳು, ದೀರ್ಘವಾದ ಸರ್ಪಮಾಲೆ, ಅಗಲವಾದ ಮುತ್ತಿನ ಮಣಿಗಳ ಹಾರ, ಎತ್ತರವಾದ ಹಾವುಗೆ (ಪಾದುಕೆ)ಗಳು ಸುಂದರವಾಗಿ ಮೂಡಿಬಂದಿವೆ. 





ರಾಮೇಶ್ವರ ದೇವಾಲಯವನ್ನು ನೆನಪಿಸುವ ಅಧುನಿಕ ರಚನೆಗಳು


 ಗರ್ಭಗೃಹದ ಬದಿಯಲ್ಲಿ ೧೦ ಅಡಿ ಎತ್ತರದ ಭವ್ಯವಾದ ಕಪ್ಪುಕಲ್ಲಿನ ಭದ್ರಕಾಳಿಯ ವಿಗ್ರಹವಿದೆ. ಜನಸಂದಣಿಯಿಂದ ಕಾಪಾಡಲು, ಗಾಜಿನ ಕಪಾಟುಗಳಲ್ಲಿ ಇಡಲಾಗಿದೆ. ಶೈವ ತಂತ್ರಾಗಮದ ಅಧಿದೇವತೆಯೇ ಭೈರವ. ಆತನ ವಿಗ್ರಹಗಳು ಉತ್ತರದ ವಾರಾಣಸಿಯಲ್ಲಿ, ಉಜ್ಜಯನಿಯಲ್ಲಿ  ಯೋಗಿನಿಯರ ಮಂದಿರಗಳಲ್ಲಿ, ವಿಶೇಷತಃ ಶಿವನ ಪ್ರಥಮ ಪತ್ನಿಯಾದ ಸತಿಯ ಶರೀರದ ಭಾಗಗಳು ಬಿದ್ದ ಎಡೆಗಳಾದ ಶಕ್ತಿಪೀಠಗಳಲ್ಲಿ, ಹೀಗೆ ವಿವಿಧೆಡೆಗಳಲ್ಲಿ ಕಂಡುಬರುತ್ತವೆ. ಆದರೆ ದಕ್ಷಿಣ ಭಾರತದಲ್ಲಿ ಆದಿಚುಂಚನಗಿರಿಯ ದೇವಾಲಯವನ್ನು ಮೀರಿಸಿದ ಬೇರೆ ಮಂದಿರ ಕಾಣಲಾರದು.  

ಪುರಾತನ ಆಚರಣೆಗಳ ವೈಭವೀಕೃತ ಮುಂದುವರಿಕೆಯೊಂದಿಗೆ, ಆಧುನಿಕ ಶಿಲ್ಪಶೈಲಿ ಮತ್ತು ವಿಗ್ರಹಾರಾಧನೆಗಳು ಮೇಳೈಸಿರುವ ಈ ಕ್ಷೇತ್ರಕ್ಕೆ ತನ್ನ ಹಿಂದಿನ ವೈಭವ ಮರಳಿ ಬಂದಿರುವುದು ಸಂತಸದ ಸಂಗತಿ.

ಚಿತ್ರ ಕೃಪೆ - ಪವನ್ ಕುಮಾರ್ 
* * * * * * * 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ