ಕಾಲಭೈರವನ ಬಗ್ಗೆ ಅರಿಯಲು, ಬರೆಯಲೆಂದೇ ಈ ಬ್ಲಾಗ್ ಆರಂಭವಾಯಿತಲ್ಲವೆ.
ಆ ಆಸಕ್ತಿ ನನ್ನಲ್ಲೇಕೆ ಮೂಡಿತು? ಮುಂದೆ
ಹುಡುಕಿಕೊಂಡು ಹೋದಂತೆಲ್ಲ, ಅದು ನನ್ನನ್ನು ಎಲ್ಲೆಲ್ಲಿಗೆ
ಕರೆದೊಯ್ದಿತು? ಎಂಬ ವಿಷಯಗಳ ಬಗ್ಗೆ ವಿವರ ಇಲ್ಲಿದೆ. ನಾನು ಕಾಲಭೈರವನತ್ತ ಆಕರ್ಷಿತನಾಗಲು ಆತ ನಮ್ಮ ಕುಲದೇವರೆಂಬ ಭಕ್ತಿ ಕಾರಣವೆಂದರೆ ನನಗೆ
ನಾನೇ ಮೋಸ ಮಾಡಿಕೊಂಡಂತಾದೀತು. ನನ್ನ ಬಾಲ್ಯದಲ್ಲಿ ದೇವರುಗಳ
ವರ್ಗೀಕರಣದ ಬಗ್ಗೆ ನನಗೇನೂ ತಿಳಿದಿರಲಿಲ್ಲ. ಬಹುತೇಕ ನಮ್ಮ
ಆಸಕ್ತಿಯಲ್ಲಿ ಭೈರವನ ಬಗ್ಗೆ ಭಕ್ತಿ ಭಾವವೇ ಹೆಚ್ಚು. ಅದು
ಸ್ವಾಭಾವಿಕವೂ ಕೂಡ. ಹಿಂದೂ
ಧರ್ಮದ ದೇವತೆಗಳ ಸಂಖ್ಯೆ ಮೂವತ್ತಮೂರು ಕೋಟಿಗಳೆನ್ನುವುದು ಪ್ರಚಲಿತ ಸಂಗತಿ. ಇಷ್ಟೊಂದು ಸಂಖ್ಯೆಗಳಲ್ಲಿರುವ ನಮ್ಮ ದೇವ ದೇವಿಯರ ಬಹಿರ್ ರೂಪಗಳು ಬೇರೆ ಬೇರೆಯಾದರೂ ದೈವವೆನ್ನುವುದು ಒಂದೇ
ಎನ್ನುವುದು ಸರ್ವವಿದಿತ. ಶೈವ, ವೈಷ್ಣವ ಪಂಥಗಳ ಬಗ್ಗೆ ಗೊತ್ತಿರಲಿಲ್ಲ. ಅದು ಎಲ್ಲರಿಗೂ ಹಾಗೆಯೇ. ದೇವನೊಬ್ಬ, ನಾಮ ಹಲವು. ದೇವರು ವಿವಿಧ ರೂಪಗಳಲ್ಲಿದ್ದರೂ, ಆತನಿಗೆ ಒಂದೇ ರೂಪ. ಇದನ್ನು ಎಲ್ಲ ಹಿರಿಯರೂ ಕಿರಿಯರಿಗೆ
ತಿಳಿಸಿಯೇ ಇರುತ್ತಾರೆ. ಆದರೆ ಈ ಸಾಮಾನ್ಯೀಕರಣ
ಸಾರ್ವತ್ರಿಕವಾಗುವುದಿಲ್ಲ. ಮುಂದೆ ಬೆಳೆದಂತೆಲ್ಲ, ವಿವಿಧ ಆಚಾರಗಳು, ಆಕಾರಗಳು, ಉತ್ಸವಗಳು,
ಆಚರಣೆಗಳು ತೋರಲು ಆರಂಭವಾಗುತ್ತವೆ. ಆಗ ಭೇದ ಕಾಣಿಸಲು
ಆರಂಭವಾಗುತ್ತದೆ. ಈ ವ್ಯತ್ಯಾಸಗಳು ಗೋಚರವಾದಂತೆ ಹಲವಾರು ಪಂಥಗಳ,
ಆಚಾರ್ಯರ, ಸಿದ್ಧಾಂತಗಳ ಪರಿಚಯವಾಗುತ್ತ ಹೋಗುತ್ತದೆ.
ಅದು ಬಾಲಕನನ್ನು ಚಿಂತಿಸುವಂತೆ ಪ್ರೇರಿಸುತ್ತದೆ. ಯುವಕನಾದಂತೆ
ಹಲವು ಆಕರ್ಷಣೆಗಳು, ಅಗತ್ಯಗಳು, ಅನಿವಾರ್ಯತೆಗಳಿಂದಾಗಿ
ಅವನ ಆಸ್ಥೆಗಳು ಚದುರಿಹೋಗುತ್ತವೆ. ಅದಕ್ಕೂ ಮುಂದೆ, ಸಾಂಸಾರಿಕ ಜೀವನದಲ್ಲಿ, ಹಿರಿಯರು ಆಚರಿಸುತ್ತ ಬಂದುದನ್ನು
ಅಲ್ಲಲ್ಲಿ ಹ್ರಸ್ವಗೊಳಿಸಿಕೊಂಡು ಅಗತ್ಯವಿರುವಷ್ಟನ್ನು ಮಾತ್ರ ರೂಢಿಸಿಕೊಳ್ಳುತ್ತೇವೆ. ಮುಂದೆ ಅದೊಂದು ಕ್ರಮವೇ ಆಗಿಹೋಗಿ, ಅದನ್ನು ಮುಂದಿನ ಕಿರಿಯರು
ಅನುಸರಿಸುತ್ತಾರೆ. ಇದು ಎಲ್ಲ ಕಾಲದಲ್ಲಿ ನಡೆದುಬಂದಿರುವ ಮಾರ್ಗ.
ನಾನು ಕೂಡ ಇದಕ್ಕೆ ಹೊರತಾದವನೇನಲ್ಲ. ಆದರೆ ಹಿರಿಯರು
ಬೆಳೆಸಿದ ಅಭ್ಯಾಸಕ್ರಮದ ಬಗ್ಗೆ ಚಿಂತನೆ ಮುಂದುವರೆದಂತೆ, ನನ್ನ ಆಸಕ್ತಿ,
ಅಧ್ಯಯನಗಳು ಹೆಚ್ಚಿದಂತೆಲ್ಲ, ಅವು ಈ ವಿಷಯದ ಬಗ್ಗೆ
ಹೊಸ ಬಾಗಿಲನ್ನೇ ತೆರೆಯಿತು. ಕಾಲಭೈರವನು ನನ್ನ ಮನೆದೇವರಾದ್ದರಿಂದ, ಆತನ
ವಿವರಗಳನ್ನು ನಾನು ಸಂಗ್ರಹಿಸುವಂತಾದುದು ವಿಶೇಷವೇನಲ್ಲ. ಆದರೆ ಈ ದೇವನ ಬಗ್ಗೆ ವಿದೇಶೀಯರು
ಮಾಡಿರುವ ಅಧ್ಯಯನವನ್ನು ಕಾಲಕ್ರಮದಲ್ಲಿ ಮುಂದೆ ನೋಡುತ್ತ ಬಂದಾಗ, ನನ್ನದಿನ್ನೂ
ಅಂಬೆಗಾಲು ಎನ್ನಿಸಿದ್ದು ಸುಳ್ಳಲ್ಲ. ನಮ್ಮ ಅನೇಕ ಧಾರ್ಮಿಕ, ಸಾಮಾಜಿಕ ಚಿಂತನೆಗಳ ವಿಷಯದಲ್ಲಿ ಹೀಗೇ ಆಗಿದೆ.
ಕಾಲಭೈರವನ ಬಗ್ಗೆ ನನ್ನ ಆಸ್ಥೆ ಮೊಳೆತುದೂ ಇಂತಹ ಒಂದು ಚಿಂತನೆಯಿಂದಲೇ.
ನನ್ನ ಮನೆದೇವರು ವೆಂಕಟೇಶ್ವರನೋ, ಈಶ್ವರನೋ, ರಾಮನೋ ಆಗಿದ್ದಲ್ಲಿ, ಇಷ್ಟು
ಕುತೂಹಲಕ್ಕೆ ಕಾರಣವಿರುತ್ತಿರಲಿಲ್ಲ. ಈ ಎಲ್ಲ ದೇವರ ಬಗ್ಗೆ ಸಾಕಷ್ಟು
ಸಾಮಗ್ರಿ ಎಲ್ಲೆಡೆ ಲಭ್ಯವಿದೆ. ದೇಶಾದ್ಯಂತ ದೇವಾಲಯಗಳು, ಮಂದಿರಗಳಿವೆ, ಭಜನೆ, ಸ್ತೋತ್ರಗಳು,
ಉತ್ಸವಗಳು ಸುತ್ತಲೂ ನಡೆಯುತ್ತವೆ. ಹೀಗಾಗಿ ಅವರ
ಬಗ್ಗೆ ತಿಳಿಯಬೇಕೆನ್ನುವವನಿಗೆ ಯಾವ ಕಷ್ಟವೂ ಇರಲಾರದು. ಕಾಲಭೈರವನ
ವಿಷಯದಲ್ಲಿ ಹೀಗಾಗಲಿಲ್ಲ. ಆತ ಉತ್ತರದವ, ದಕ್ಷಿಣ
ಪ್ರಾಂತಕ್ಕೆ ಬರಬೇಕಾದರೆ, ಬಹಳ ಸಮಯವೇ ಹಿಡಿಯಿತು. ಅವನನ್ನ ಅಲ್ಪಸಂಖ್ಯಾತನೆನ್ನಲಾಗದಾದರೂ, ಅವನ ಭಕ್ತರಂತೂ
ಅಲ್ಪಸಂಖ್ಯಾತರು. ಆತನಿಗೆ ಇಲ್ಲಿರುವ ಭಕ್ತರ ಸಂಖ್ಯೆ ಕಡಿಮೆ. ಲಭ್ಯವಿರುವಷ್ಟು ಸಾಹಿತ್ಯವನ್ನು ಆಧರಿಸಿ, ಅವನನ್ನು
ಪೂಜಿಸಿದರು, ಅದೂ ದೊರೆಯಲಿಲ್ಲವೆಂದಾಗ ಶಿವಾರಾಧನೆಯ ಪಠ್ಯಗಳನ್ನೇ
ಬಳಸಿದರು. ದೇವರೊಬ್ಬನೇ, ನಾಮ ಹಲವು,
ನಿಜ. ಹಲವು ನಾಮಗಳೆಂದು ಹೇಳಿದವರು ನಾವೇ ಆಗಿರುವಾಗ,
ಕೆಲವಾದರೂ ನಾಮಗಳನ್ನು ತಿಳಿದಿರಬೇಕಾದುದು ಅಗತ್ಯವಲ್ಲವೇ. ಇದರಿಂದಾಗಿ ಕಾಲಭೈರವನ ಬಗ್ಗೆ ಇರುವ ಸಾಹಿತ್ಯವನ್ನು ಹುಡುಕಾಡುವ ಅನಿವಾರ್ಯತೆ ಒದಗಿತು.
ಈ ಹಿಂದೆ ಕರೈನ್ ಲ್ಯಾಡ್ರೆಕ್‌ರ ಬಗ್ಗೆ ಬರೆದಿದ್ದೆ. ನನ್ನ
ತಮ್ಮ ಚಿ. ರಾಮಚೆಂದಿರನು ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ಕರೈನ್ ಲ್ಯಾಡ್ರೆಕ್‌ರ
ಪರಿಚಯವಾಯಿತು. ಅವನು ಬರೆದ ಪತ್ರಕ್ಕೆ ಕೂಡಲೇ ಉತ್ತರಿಸಿದ ಅವರು ಮುಂದೆ, ಅವನು ಕಾಲಭೈರವನ ಕುರಿತಾದ ಸಾಹಿತ್ಯದ ಬಗ್ಗೆ ಕೇಳಿದಾಗ ಕೋರಿಕೆಯನ್ನು
ಮನ್ನಿಸಿ ಅವರು ೬೦-೭೦
ಪುಟಗಳಷ್ಟು ವಿಸ್ತಾರದ ಕಾಲಭೈರವನ ಕುರಿತಾದ ಸಾಹಿತ್ಯವನ್ನು
ಕಳಿಸಿದ್ದಲ್ಲದೆ, ಆಯಾ
ಸಹಸ್ರನಾಮಗಳು, ಶ್ಲೋಕಗಳು, ಕವಚಗಳು,
ಸ್ತೋತ್ರಗಳು ಯಾವ ಕಾಲಘಟ್ಟದಲ್ಲಿ ಯಾರು ಇದನ್ನು ರಚಿಸಿದರೆಂಬ ಆಕರ ವಿವರಗಳನ್ನೂ
ನೀಡಿದರು. ಅವರು ಅದನ್ನು ರೋಮನ್ ಇಂಗ್ಲಿಷ್ ಲಿಪಿಯಲ್ಲಿ ಬರೆದಿದ್ದರು.
ಇದನ್ನು ಈಗ ಅವರ ಚಿತ್ರ ಮತ್ತು ಹೆಚ್ಚಿನ
ವಿವರಗಳು ದೊರಕಿರುವುದರಿಂದ ಮತ್ತೆ ಅವರ ಬಗ್ಗೆ ಪ್ರಸ್ತಾಪಿಸುತ್ತಿರುವೆ.
ಲ್ಯಾಡ್ರೆಕ್ ಈ ದೇವರ ಬಗ್ಗೆಯೇ ಏಕೆ ಆಸ್ಥೆ ತಳೆದರೆಂಬ ಕುತೂಹಲವಿತ್ತು. ಒಂದರ್ಥದಲ್ಲಿ ಕಾಲಭೈರವನನ್ನು
ಕುರಿತಾದ ನನ್ನ ಆಸಕ್ತಿಗೆ, ನನ್ನಂತೆಯೇ ಆಸಕ್ತಿ ಹೊಂದಿರುವ ಎಲ್ಲರಿಗೂ ಅವರು,
ಈ ವಿಷಯದ ಬಗ್ಗೆ ಆಕರ ವ್ಯಕ್ತಿ.
ಕಾಲಭೈರವನ ವಿಷಯದಲ್ಲಿ ಲ್ಯಾಡ್ರೆಕ್‌ರಿಗೆ
ಭಕ್ತಿಯೇನೂ ಇರಲಾರದು, ಆದರೆ ಈ ದೈವದ ಬಗ್ಗೆ ಅವರಿಗೆ ಕುತೂಹಲವಿತ್ತು. ಅವರ
ದೇಶದಲ್ಲಿ, ನಮ್ಮ ದೇಶದಲ್ಲಿ ಇರುವಂತೆಯೆ, ವಿಶ್ವವಿದ್ಯಾಲಯಗಳು
ಯಾವುದಾದರೊಂದು ಅವರ ಆಸಕ್ತಿಯ ವಿಷಯದಲ್ಲಿ ಆಳವಾದ ಅಧ್ಯಯನ ಮಾಡಲು ಅದಕ್ಕೆ ಬೇಕಿರುವ ಶಿಷ್ಯವೇತನ
ಮತ್ತು ಇತರ ಅನುಕೂಲಗಳನ್ನು ಮಾಡಿಕೊಡುವ ಪದ್ಧತಿಯಿದೆ. ಅದರಂತೆ
ಲ್ಯಾಡ್ರೆಕ್ ರು ಶಿವನ ಘೋರರೂಪವಾದ ಕಾಲಭೈರವನ ವಿಷಯದಲ್ಲಿ ಅಧ್ಯಯನಕ್ಕೆ ತೊಡಗಿದರು. ಕಾಲಭೈರವನ ಪ್ರತಿಮೆಗಳು, ವಿಗ್ರಹಗಳು ದಕ್ಷಿಣ ಭಾರತದಲ್ಲಿ
ಹರಡಿದ ಕಾಲ ಮತ್ತು ಅದಕ್ಕೆ ಕಾರಣವಾಗಿರಬಹುದಾದ ಐತಿಹಾಸಿಕ ಅಂಶಗಳ ವಿಶ್ಲೇಷಣೆಗೆ ತೊಡಗಿದರು.
ಅವರು ಇರುವುದು ಪ್ಯಾರಿಸ್‌ನಲ್ಲಿ. ಅವರು ಇತಿಹಾಸದ
ವಿದ್ಯಾರ್ಥಿ. ಪ್ಯಾರಿಸ್‌ನ
ಸೋರ್ಬಾನ್ ವಿಶ್ವವಿದ್ಯಾಲಯದ ಕಲೆ, ಇತಿಹಾಸ ಮತ್ತು ಪುರಾತತ್ವಶಾಸ್ತ್ರ
ವಿಭಾಗದಲ್ಲಿ ಭಾರತೀಯ ಕಲಾ ಇತಿಹಾಸದ ಪ್ರೊಫೆಸರರಾಗಿ ಕೆಲಸಮಾಡುತ್ತಾರೆ. ಅವರು ಎಂ.ಎ.
ಓದುತ್ತಿರುವಾಗ ಭಾರತೀಯ ಕಲಾ ಇತಿಹಾಸವನ್ನು ಆಯ್ಕೆ ಮಾಡಿಕೊಂಡರು. ಆಗ ಕಾಲಭೈರವನ ಉಗ್ರರೂಪ ಅವರನ್ನು ಆಕರ್ಷಿಸಿತು. ಏಕೆಂದರೆ
ಮೃದು ಸ್ವಭಾವದ, ದೇವತಾ ಗುಣಗಳನ್ನು ಹೊಂದಿರುವ ಅನೇಕ ದೇವ-ದೇವಿಯರನ್ನು ಬಿಟ್ಟು, ಭಾರತದಲ್ಲಿ ದೇವರ ಉಗ್ರರೂಪವನ್ನು ಏಕೆ
ಆರಾಧಿಸುತ್ತಾರೆ ಎಂಬ ಚಿಂತನೆ ಭೈರವನ ಅಧ್ಯಯನಕ್ಕೆ ಪ್ರೇರಣೆ ನೀಡಿತಂತೆ. ಅನೇಕ ಶಿಲ್ಪಿಗಳು, ಭೈರವನ ದೇವಮಂದಿರಗಳಲ್ಲಿ ಈ ಉಗ್ರರೂಪಕ್ಕೆ
ಪ್ರಾತಿನಿಧ್ಯ ನೀಡಿರುವುದರ ವಿಶೇಷವೇನು ಎಂಬ ಅಂಶಗಳ ಜತೆಗೆ, ಈ ವಿಷಯವು
ಸವಾಲು ಕೂಡ ಆಗಿತ್ತು. ಇದಕ್ಕೆಂದು ಅವರು ಅನೇಕ ಸಂಸ್ಕೃತ ಗ್ರಂಥಗಳನ್ನು,
ಶಿಲ್ಪಗಳನ್ನು ಅಧ್ಯಯನಮಾಡಲು ಆರಂಭಿಸಿದರು. ಇಂಥ
ಚಟುವಟಿಕೆಯ ಭಾಗವಾಗಿ ಅವರು ಹೊರತಂದಿರುವ ಸಹಸ್ರಪ್ರತಿಮಾವಳಿ ಎಂಬ ಸಿ.ಡಿ.ಯಲ್ಲಿ ದಕ್ಷಿಣ ಭಾರತದ ಎಲ್ಲ ಭೈರವನ ವಿಗ್ರಹಗಳು, ಅವು ಇರುವ
ಸ್ಥಳಗಳ ವಿವರಗಳು, ಶಿಲ್ಪಶೈಲಿ, ಅವುಗಳನ್ನು
ನಿರ್ಮಿಸಿದ ಕಾಲ, ಮುಂತಾಗಿ ಯಥೇಚ್ಛ ದಾಖಲೆಗಳು ದೊರೆಯುತ್ತವೆ.
ಪಿ.ಎಚ್.ಡಿ. ಪದವಿಗೆಂದು ಅವರು ಮಾಡಿರುವ ಈ ಯೋಜನಾ ಕಾರ್ಯವು ಕಾಲಭೈರವನ ಆಸಕ್ತರಿಗೆ ಬೇಕಿರುವ ಎಲ್ಲ
ಮಾಹಿತಿಗಳನ್ನೂ ಒದಗಿಸುತ್ತದೆ. ೨೦೧೦ರಲ್ಲಿ ಕಪಾಲ ಮತ್ತು ಖಡ್ಗ : ದಕ್ಷಿಣ ಭಾರತದಲ್ಲಿ ಭೈರವನ ಪ್ರಾತಿನಿಧಿಕ ಅಂಶಗಳು
(೮ರಿಂದ ೧೩ನೇ ಶತಮಾನಗಳಲ್ಲಿ) ಎಂಬ ವಿಷಯದ ಬಗ್ಗೆ ಪಿ.ಎಚ್.ಡಿ. ಯ ಪ್ರೌಢ ಪ್ರಬಂಧವನ್ನು ರಚಿಸಿ
ಡಾಕ್ಟೋರೇಟ್ ಪದವಿಯನ್ನು ಪಡೆದ ಈಕೆ ಇದನ್ನು ಸ್ಪಾನಿಷ್ ಭಾಷೆಯಲ್ಲಿ ರಚಿಸಿರುವರು. ಇದೇ ಗ್ರಂಥದ
ಇಂಗ್ಲಿಷ್ ಆವೃತ್ತಿ ಸದ್ಯದಲ್ಲೇ ಹೊರಬರಲಿದೆ. ನಾನು ಅದಕ್ಕಾಗಿ ಕಾಯುತ್ತಿದ್ದೇನೆ. ಇದೊಂದು ಗ್ರಂಥ ಹೊರಬಂದು ಕನ್ನಡದ ಓದುಗರನ್ನು ತಲುಪುವಂತಾದರೆ, ಕಾಲಭೈರವನ ಬಗೆಗಿನ ನಮ್ಮೆಲ್ಲರ ಹುಡುಕಾಟ ಕೊನೆಯಾಯಿತೆಂದು ಹೇಳಬಹುದು.
ಇದು ಲ್ಯಾಡ್ರೆಕ್‌ರ ಅಧ್ಯಯನಶೀಲತೆಗೆ ಸಾಕ್ಷಿ. ಅವರೇನೂ ಈ ಎಲ್ಲ ಸ್ತೋತ್ರಗಳನ್ನೋ, ಸಹಸ್ರನಾಮಗಳನ್ನೋ ಬರೆದವರಲ್ಲ. ಅದೆಲ್ಲವೂ ನಮ್ಮ ದೇಶದಲ್ಲೇ
ಇದ್ದವು. ನಾವು ಯಾರೂ ಆ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳದೆ, ಅವುಗಳ ಬಗ್ಗೆ ಹುಡುಕಾಟ ನಡೆಸದೆ, ನಮ್ಮ ಕೈಯಳವಿನಲ್ಲಿ
ದೊರತಷ್ಟಕ್ಕೆ ಮಾತ್ರ ತೃಪ್ತಿ ಪಟ್ಟೆವು. ಹೀಗಾಗಿ ಅವನ್ನು ಬೇರೆ ಯಾರೋ
ದೇಶದವರು, ಯಾವುದೋ ಉದ್ದೇಶಕ್ಕೆಂದು ಬೆಳಕಿಗೆ ತಂದಾಗ ಅವರ ಬಗ್ಗೆ
ಅಭಿಮಾನ ತಳೆದೆವು. ವಿದೇಶೀಯರಾಗಿ ಅವರಿಗೆ ಇದು ಸಾಧ್ಯವಾಯಿತೇ ಎಂದು
ಆಶ್ಚರ್ಯಪಟ್ಟೆವು, ಅವರ ಅಧ್ಯಯನಶೀಲತೆ ಕಂಡು ಬೆರಗಾದೆವು. ಒಬ್ಬ ಹಿಂದೂ ದೇವತೆಯ ಬಗ್ಗೆ ಹಿಂದೂಗಳಿಗೆ ತಿಳಿದಿರುವುದೇ ಕಡಿಮೆ, ವಿದೇಶೀಯರು ಹಠಹಿಡಿದು ಮಾಡಿದ ಸಾಧನೆಯಿದು ಎಂಬ ಪ್ರಶಂಸೆಗೆ ಲ್ಯಾಡ್ರೆಕ್‌ರೇನೂ
ಕಾಯುತ್ತಿಲ್ಲ. ಆದರೆ ಅವರಂತೆ ಅಧ್ಯಯನವನ್ನು ಕೈಗೊಂಡು, ಅದರ ಆಂತರ್ಯವನ್ನೆಲ್ಲ ಶೋಧಿಸಿ ತೆಗೆಯಲು ಬೇಕಾದ ಸಮಯ, ಆಸಕ್ತಿ,
ಅನುಕೂಲತೆಗಳು ನಮಗಿಲ್ಲವೆನ್ನುವುದೇ ಸರಿಯಾದ ಮಾತಿರಬಹುದು. ಹೀಗಾಗಿಯೇ ಕಾಲಭೈರವನ ಕುರಿತಾಗಿ ಇರುವ ಸಾಹಿತ್ಯ ತೀರ ಕಡಿಮೆಯೆನ್ನಬೇಕು. ಬಹುತೇಕ ಕಾಲಭೈರವನ ದೇವಾಲಯಗಳಲ್ಲಿ, ಶಂಕರಾಚಾರ್ಯ ವಿರಚಿತ
ಕಾಲಭೈರವಾಷ್ಟಕವೊಂದನ್ನು ಹೊರತು ಪಡಿಸಿದರೆ, ಬೇರೆ ಅಷ್ಟೋತ್ತರಗಳಾಗಲೀ,
ಸಹಸ್ರನಾಮಗಳಾಗಲೀ ಪ್ರಚಲಿತವಿಲ್ಲ. ಇದಕ್ಕೆ
ಪರ್ಯಾಯವಾಗಿ ಶಿವಾಷ್ಟೋತ್ತರವನ್ನು ಹೇಳುವುದು ರೂಢಿಯಲ್ಲಿದೆ.
ಭೈರವಪಂಥವನ್ನು ನಾಥಪಂಥವೆಂದೂ ಕರೆಯುವರು. ಇದು ಇತಿಹಾಸದ ಕಾಲಘಟ್ಟದಲ್ಲಿ ಪ್ರಮುಖವಾಗಿದ್ದ
ದಿನಗಳಿದ್ದವು. ಬಹುಶಃ ಶೈವ ಮತ್ತು ವೈಷ್ಣವ ಪಂಥಗಳ ನಡುವೆ ಜಟಾಪಟಿ
ನಡೆಯುತ್ತಿದ್ದ ಕಾಲಕ್ಕೆ, ತಾವು ಉಗ್ರದೇವತೆಯ ಆರಾಧಕರಾಗಿರುವುದರಿಂದ ಭೈರವ ಪಂಥದ ಮೂಲಕ ತಮ್ಮದೇ ಪ್ರಬಲಗುಂಪು ಎಂಬ
ಭಾವನೆಯನ್ನೂ ಮೂಡಿಸಿರುವ ಸಾಧ್ಯತೆಗಳಿವೆ. ಇದಕ್ಕೆ ಉದಾಹರಣೆಯಾಗಿ ಶಿವರಹಸ್ಯವೆಂಬ ಗ್ರಂಥದ ಶಿವಗೌರೀ ಸಂವಾದದಲ್ಲಿ ಉಲ್ಲೇಖಿತವಾಗಿರುವ ಕಾಶೀ ಮಾಹಾತ್ಮ್ಯದ ೧೧ನೇ
ಅಧ್ಯಾಯದಲ್ಲಿ ಕಾಲಭೈರವ ಮಾಹಾತ್ಮ್ಯವೆಂಬ ಅಧ್ಯಾಯವಿದೆ. ಅದರಲ್ಲಿ ಪ್ರಸ್ತಾಪಿತವಾಗಿರುವ ಕಾಲಭೈರವ ಸಹಸ್ರನಾಮಾವಳಿಯ ಸಾಹಿತ್ಯವನ್ನಿಷ್ಟು ಗಮನಿಸಬಹುದು. ಇದರಲ್ಲಿ ಕೆಲವು ಶ್ಲೋಕಗಳು ಹೀಗಿದೆ.
ಸಾಂಬೋ ಪ್ರಸಿದ್ಧ ದೇವೇಶ ಕ್ಲೇಶಂ ದೂರೀ ಕುರುಷ್ವಮೇ |
ಅಶೈವಂ ಸಂಹಾರಸ್ಯಮೇನಮಧರ್ಮಸ್ಯ ಪ್ರವರ್ತಕಮ್ || ೪೪ ||
ಅಧರ್ಮವದ್ಧ್ಯಾ ಸರ್ವೇಪಿ ಯಾಸ್ಯಂತಿ ನರಕಮ್ ಧ್ರುವಮ್ |
ಕೃಪಾಲುರಸಿ ದೇವೇಶ ವಿಧಿಮೇನಂ ವಿನಾಶಯ || ೪೫ ||
ಅಶೈವಂ ದುರಾಚಾರಃ ಸ್ಥಾಪನೀಯೋ ನ ಸರ್ವಥಾ |
ಅಶೈವಂ ಶಿಕ್ಷಾ ಕರ್ತವ್ಯಾ ದೇವೇಶಸ್ಯ ಪುರಾಂತಕ || ೪೬ ||
ಅರ್ಥವೆಂದರೆ ಶೈವನಲ್ಲದವನನ್ನು ನಾಶಮಾಡು ಎಂಬ ಬೋಧೆ ಅಲ್ಲಿದೆ. ಈ
ಪರಿಸ್ಥಿತಿ ಕೂಡ ಹಾಗೆಯೇ ಉಳಿಯಲಿಲ್ಲ. ಕಾಲ
ಬದಲಾದಂತೆ ಚಿಂತನೆಗಳೂ ಬದಲಾಗಿರುವುದನ್ನು ನಾವು ಅದೇ ರೂಪದ ಶ್ಲೋಕಗಳಲ್ಲಿ ಕಾಣುತ್ತೇವೆ.
ಶಿವಾಯ ವಿಷ್ಣು ರೂಪಾಯ ಶಿವರೂಪಾಯ ವಿಷ್ಣವೇ |
ಶಿವಶ್ಚ ಹೃದಯಂ ವಿಷ್ಣುಃ ವಿಷ್ಣೋಶ್ಚ ಹೃದಯಂ ಶಿವಃ ||
ಯಥಾ ಶಿವ ಮಯಂ ವಿಷ್ಣುಃ ಏವಂ ವಿಷ್ಣು ಮಯಂ ಶಿವಃ |
ಯಥಾಂತರ ನ ಪಶ್ಯಾಮಿ ತಥಾಮೇ ಸ್ವಸ್ತಿರಾಯುಷಿ ||
ಶೈವ ವೈಷ್ಣವ ಪಂಥಗಳ ನಡುವಣ ಹೋರಾಟ ಅರ್ಥಹೀನ, ಹರಿ-ಹರರಿಬ್ಬರೂ ಬೇರೆಯಲ್ಲ ಎಂಬ ತಿಳುವಳಿಕೆ ಬಂದ ಕಾಲಕ್ಕೆ ಇಂಥ ಶ್ಲೋಕಗಳು
ರಚಿತವಾದವು. ಇದೇ ಕಾರಣಕ್ಕೆ ನಾನು ಇಂಥ ಅಂಶಗಳಿಲ್ಲದ ಒಂದು ಸಹಸ್ರನಾಮವನ್ನು ಸಂಗ್ರಹಿಸಿದೆನೇ
ವಿನಾ, ಭೇದ ಭಾವವನ್ನು ತೋರುವಂಥ ಸಾಹಿತ್ಯವನ್ನು ಆದರಿಸಲಿಲ್ಲ.
ನಾನು ಹೋದೆಡೆಯಲ್ಲಿ ದೊರಕುವ ಕಾಲಭೈರವನ ಚಿತ್ರಗಳನ್ನು
ಸಂಗ್ರಹಿಸುವುದು ನನ್ನ ಅಭ್ಯಾಸವೇ ಆಯಿತು. ಇತ್ತೀಚೆಗೆ ಕೊಪ್ಪಳ ಜಿಲ್ಲೆ, ಯಲಬುರ್ಗಾ ತಾಲೂಕಿನ ಇಟಗಿಯ ಮಹಾಮಾಯೀ ಮಂದಿರವನ್ನು
ಸಂದರ್ಶಿಸುತ್ತಿದ್ದಾಗ, ಅಲ್ಲೊಂದು ತೀರ ಅಪರೂಪದ ವಿಗ್ರಹ ಕಾಣಿಸಿತು. ಅದರ ಬಗ್ಗೆ ಈಗಾಗಲೇ ಪ್ರಸ್ತಾಪಿಸಿರುವೆನಾದರೂ, ಈ ಚಿತ್ರವನ್ನು
ಲ್ಯಾಡ್ರೆಕ್‌ರಿಗೆ ತಲುಪಿಸಿದಾಗ, ಅವರಿಂದ ಬಂದ ಪ್ರತಿಕ್ರಿಯೆಯನ್ನು
ಇಲ್ಲಿ ನಮೂದಿಸುತ್ತಿರುವೆ. ಅವರು ಹೇಳಿದರು. "ನಿಜಕ್ಕೂ ಇದೊಂದು ಅಪರೂಪದ ವಿಗ್ರಹವೇ ಸರಿ. ನನಗೆ ತಿಳಿದಂತೆ ಆದಿಚುಂಚನಗಿರಿಯಲ್ಲಿ ನೂತನವಾಗಿ
ನಿರ್ಮಿತವಾಗಿರುವ ಮಂದಿರದಲ್ಲಿ ಬೆಳ್ಳಿಯಲ್ಲಿ ಮಾಡಿರುವ ಒಂದು ವಿಗ್ರಹವಿದೆ. ಅಲ್ಲಿ
ಕಾಲಭೈರವನನ್ನು ಕುದುರೆಯ ಮೇಲೆ ಕುಳ್ಳಿರಿಸಿದ್ದಾರೆ. ಇದನ್ನು ಹೊರತುಪಡಿಸಿದರೆ ನನಗೆ ಈ ಬಗ್ಗೆ
ತಿಳಿದಿರಲಿಲ್ಲ. ಈ ವಿಗ್ರಹಕ್ಕೆ ಒಂದು ವಿಶೇಷವಿದೆ. ಏನೆಂದರೆ ಇದು ಮಣಿ ಮತ್ತು ಮಲ್ಲಾಸುರರೆಂಬ
ರಕ್ಕಸರನ್ನು ಕೊಲ್ಲಲು ಖಂಡೋಬಾ ಅಥವಾ ಮೈಲಾರನೆಂಬ ಶಿವನರೂಪದಲ್ಲಿ ಕಾಣಿಸುತ್ತಿದೆ. ವಿಶೇಷವಾಗಿ
ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಮೈಲಾರೇಶ್ವರ ಆರಾಧನೆ ನಡೆಯುತ್ತದೆ. ಇವನನ್ನು
ಮಾರ್ತಾಂಡ ಭೈರವನೆಂದೂ ಅಶ್ವಾರೋಹಿಯಾದ ಯೋಧನಂತೆ ಚಿತ್ರಿಸಲಾಗಿರುವುದು ಕಂಡುಬರುತ್ತದೆ. ಇಟಗಿಯ ವಿಗ್ರಹದಲ್ಲಿ
ಕಂಡುಬರುವಂತೆ ಕುದುರೆಯ ಕಾಲುಗಳು ರಾಕ್ಷಸರ ತಲೆಗಳನ್ನು ಮೆಟ್ಟಿರುವಂತೆ, ಕೆಲವೊಮ್ಮೆ ಆತನನ್ನು ನಾಯಿಗಳು ಸುತ್ತುವರೆದಿರುವಂತೆ ಚಿತ್ರಿಸಲಾಗಿರುತ್ತದೆ. ಅದರಲ್ಲೂ
ಕಾಲಭೈರವನ ಲಕ್ಷಣಗಳಾದ ಖಡ್ಗ, ಡಮರು, ಶೂಲ,
ಕಪಾಲಗಳನ್ನು ಹೊಂದಿರುವನು".
ಹೀಗೇ ಇನ್ನೊಂದು ಪ್ರಸಂಗ. ಈ ಹಿಂದಿನ ಸಂಚಿಕೆಯಲ್ಲಿ ಪ್ರಕಟವಾಗಿರುವ
ಕಾಲಭೈರವ ಧ್ಯಾನಶ್ಲೋಕವನ್ನು ಅವರಿಗೆ ಕಳಿಸಿ, ಈ ವಿವರಣೆಗೆ ಹೊಂದುವ ಶಿಲ್ಪಗಳಿವೆಯೇ ಎಂದು ಕೇಳಿದ್ದೆ. ಆಗ ಅವರಿಂದ ಬಂದ ಉತ್ತರವೂ
ಆಸಕ್ತಿದಾಯಕವಾಗಿತ್ತು. ಅವರು ಬರೆದಿದ್ದರು. "ನೀವು ಕಳಿಸಿರುವ ಶ್ಲೋಕದ ಅನ್ವಯ ಇರಬಹುದಾದ
ಚಿತ್ರಗಳಿಗೆಂದು ಶೋಧಿಸಿದೆ. ಆಶ್ಚರ್ಯವೆಂದರೆ ಅಂಥ ಯಾವುದೇ ಶಿಲ್ಪಗಳು ದೊರೆತಿಲ್ಲ. ಆದರೆ
ನಾಯಿ/ನಾಯಿಗಳು ಆತನ ಸಮೀಪವಿರುವ ಕೆಲವು ಚಿತ್ರಗಳನ್ನು ಕಳಿಸಿರುವೆ. ಇಲ್ಲಿರುವ ಎರಡು ಶಿಲ್ಪಗಳು
ಹೊಯ್ಸಳರ ಕಾಲದವು. ಅವುಗಳಲ್ಲಿ ಒಂದು ಹಳೇಬೀಡಿನ ಪುರಾತತ್ವ ಇಲಾಖೆಯ ವಸ್ತು
ಸಂಗ್ರಹಾಲದಲ್ಲಿದ್ದರೆ, ಮತ್ತೊಂದು ಬೇಲೂರಿನ ಚನ್ನಕೇಶವ
ದೇವಾಲಯದಲ್ಲಿದೆ. ಮೂರನೆಯ ಚಿತ್ರವು ಆಂಧ್ರಪ್ರದೇಶದ ಪುಷ್ಪಗಿರಿಯ ವೈದ್ಯನಾಥ ಮಂದಿರದಲ್ಲಿದೆ".
ಲ್ಯಾಡ್ರೆಕ್‌ರಿಂದ ಇಷ್ಟು ವಿಪುಲ ಸಾಹಿತ್ಯವನ್ನು ಪಡೆದ ನಂತರ, ಇವೆಲ್ಲವನ್ನೂ ಕನ್ನಡಲಿಪಿಯಲ್ಲಿ ಬರೆದು, ಕಂಪ್ಯೂಟರ್‌ಗೆ ಅಳವಡಿಸಿ, ಕಾಲಭೈರವ ಪೂಜಾ ವಿಧಾನವೆಂಬ
ಪುಸ್ತಕವನ್ನು ರೂಪಿಸಿದೆ. ಇದರಲ್ಲಿ ನಾಲ್ಕು ಅಷ್ಟೋತ್ತರಗಳು, ಒಂದು ಸಹಸ್ರನಾಮ, ಕ್ಷಮಾಪರಾಧ ಸ್ತೋತ್ರ, ಸ್ವರ್ಣಾಕರ್ಷಣ ಭೈರವ ಸ್ತೋತ್ರ, ಭೈರವ ಕವಚ ಮುಂತಾಗಿ ೧೦ ಸ್ತುತಿಗಳನ್ನು
ಸಂಗ್ರಹಿಸಲಾಗಿದೆ. ಇದರ ಪುಟಗಳನ್ನು ಮುಂದಿನ ಸಂಚಿಕೆಗಳಲ್ಲಿ ಕ್ರಮವಾಗಿ
ಪ್ರಕಟಿಸುವ ಇರಾದೆಯಿದೆ. ಆಸಕ್ತರು ಸಂಗ್ರಹಿಸಿಕೊಂಡು ಭೈರವ ಪೂಜೆಯನ್ನು
ಕ್ರಮಬದ್ಧವಾಗಿ ಮಾಡುವಂತಾಗಲಿ ಎಂಬುದು ಆಶಯ.
* * * * * * *
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ