ಇದುವರೆಗೆ ದೇಶದ ಅನೇಕ ಭಾಗಗಳಲ್ಲಿರುವ ಶ್ರೀ ಕಾಲಭೈರವ ಮಂದಿರಗಳ ಬಗ್ಗೆ, ಅವುಗಳ ಇತಿಹಾಸ ಮತ್ತು ವೈಶಿಷ್ಟ್ಯಗಳನ್ನು ಕುರಿತಂತೆ ಲೇಖನಗಳನ್ನು ಪ್ರಕಟಿಸಿರುವೆ. ಓದುಗರಲ್ಲಿ ಅನೇಕರು ಭೈರವನ ಪೂಜಾ ವಿಧಾನದ ಬಗ್ಗೆ ಬರೆಯಬೇಕೆಂದು ಕೋರಿದ್ದರು. ಹೀಗಾಗಿ ಈ ಸಂಚಿಕೆಯಲ್ಲಿ ಶ್ರೀ ಕಾಲಭೈರವನ ಪೂಜಾ ವಿಧಾನವನ್ನು ಒಳಗೊಂಡಿರುವ ಲೇಖನ ಮಾಲೆಯಿದೆ. ಇದರಲ್ಲಿ ಭೈರವ ದೇವರ ಅವತರಣ ಎಂಬ ಭಾಗವು ಈ ಹಿಂದೆ ಪ್ರಕಟವಾಗಿದೆಯಾದರೂ, ಇಡೀ ಪುಸ್ತಕದ ಪುಟಗಳನ್ನು ಇಲ್ಲಿ ನೀಡಲಾಗಿದೆ. ಇವನ್ನು ಅನುಕ್ರಮವಾಗಿ ಪ್ರತಿ ತಿಂಗಳೂ ಪ್ರಕಟಿಸಲಾಗುವುದು.
ಇವುಗಳನ್ನು ಗಮನಿಸಿ ಒಂದೆಡೆ ಸಂಗ್ರಹಿಸಿ ಮುದ್ರಿಸಿ ಇಟ್ಟುಕೊಂಡಲ್ಲಿ ಭೈರವನ ಪೂಜಾವಿಧಾನವು ನಿಮಗೆ ದೊರೆತಂತಾಗುತ್ತದೆ.
ಕಾಲಭೈರವನಿಗೆ ಸಂಬಂಧಿಸಿದಂತೆ ಪೂಜಾ ಸಾಹಿತ್ಯವು ದಕ್ಷಿಣ ಭಾರತದಲ್ಲಿ ತೀರ ಕಡಿಮೆಯಿದೆ ಎನ್ನಬೇಕು. ಏಕೆಂದರೆ ಆತನ ಭಕ್ತರ ಸಂಖ್ಯೆ ವಿರಳವಾಗಿದೆ. ಆದರೂ ಭೈರವನನ್ನು ಆರಾಧಿಸುವವರು, ಆತನು ಶಿವನ ಮತ್ತೊಂದು ರೂಪವೆಂಬುದನ್ನು ಗ್ರಹಿಸಿ, ಶಿವಾಷ್ಟೋತ್ತರ ಮುಂತಾದ ಸಾಹಿತ್ಯಗಳಿಂದ ಅರ್ಚಿಸುತ್ತಿದ್ದರು. ನಾನು ಗಮನಿಸಿದಂತೆ, ಕಾಲಭೈರವ ಸಹಸ್ರನಾಮದ ಅನೇಕ ಪಾಠಗಳು ಲಭ್ಯವಿದ್ದು, ಅದರಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳು ಇರುವುದನ್ನು ಗಮನಿಸಿದ್ದೇನೆ.
ಇಲ್ಲಿ ಸಂಗ್ರಹಿಸಿರುವ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಪಡೆಯಲಾಗಿದ್ದು, ಅ ಎಲ್ಲ ಕರ್ತೃಗಳಿಗೆ, ವಿದ್ವಾಂಸರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ವಿಶೇಷತಃ ಕರೈನ್ ಲ್ಯಾಡ್ರೆಕ್, (ಇವರ ಬಗ್ಗೆ ಒಂದು ವಿವರಣಾತ್ಮಕ ಲೇಖನವು ಹಿಂದಿನ ಸಂಚಿಕೆಗಳಲ್ಲಿ ಪ್ರಕಟವಾಗಿದೆ) ಕಾಲಭೈರವನ ಬಗ್ಗೆ ಸಂಶೋಧನೆ ನಡೆಸಿರುವವರಲ್ಲಿ ಅಗ್ರಗಣ್ಯರು. ಅವರು ನಾನು ಈ ಬಗ್ಗೆ ತಳೆದ ಆಸಕ್ತಿಯನ್ನು ಗಮನಿಸಿ ಈ ಪುಸ್ತಕದಲ್ಲಿರುವ ಹೆಚ್ಚಿನ ಭಾಗವನ್ನು ನನಗೆ ಕಳಿಸಿದ್ದರು. ಆಂಗ್ಲೋ-ರೋಮನ್ ಲಿಪಿಯಲ್ಲಿದ್ದ ಅವರ ಸಂಗ್ರಹಿತ ಸಾಹಿತ್ಯವನ್ನು ಕನ್ನಡಕ್ಕೆ ಲಿಪ್ಯಂತರಣ ಮಾಡಿ, ಈ ಪುಸ್ತಕವನ್ನು ಪ್ರಕಟಿಸಿದೆ. ಹೀಗಾಗಿ ಅವರಿಗೆ ವಿಶೇಷ ಕೃತಜ್ಞತೆಗಳು ಸಲ್ಲುತ್ತವೆ.
ಇದಲ್ಲದೆ, ಓದುಗರಲ್ಲಿ ಇರಬಹುದಾದ ಸಾಹಿತ್ಯವನ್ನು ನನಗೆ ಕಳಿಸಿದರೆ, ಅದನ್ನೂ ಪ್ರಕಟಿಸಲಾಗುವುದು. ಇಂಥ ಒಂದು ಕ್ರಮದಿಂದ ಕಾಲಭೈರವನಿಗೆ ಸಂಬಂಧಿಸಿದ ಸಾಹಿತ್ಯವನ್ನು ಒಂದೆಡೆ ಕ್ರೋಢೀಕರಿಸಲು ಅನುಕೂಲವಾಗುತ್ತದೆ. ಇದನ್ನು ತಾವು ಗಮನಿಸಿ, ಸಹಕರಿಸುವಿರೆಂದು ಭಾವಿಸುತ್ತೇನೆ.
ಬ್ಲಾಗ್ ನ ಅಂಕಿ-ಅಂಶಗಳ ವಿಭಾಗದಲ್ಲಿ ಕಂಡುಬಂದ ಒಂದು ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ಅದೆಂದರೆ ಕಾಲಭೈರವನ ಬ್ಲಾಗ್ ನ್ನು ಓದುವವರು ವಿಶ್ವದ ಹಲವೆಡೆಯಿದ್ದಾರೆ. ಅಂಥವರು ಬೆಲಾರೆಸ್, ಕೆನಡಾ, ಅಮೆರಿಕಾ, ದಕ್ಷಿಣ ಆಫ್ರಿಕಾ, ಚೀನಾ, ರಷಿಯಾ, ಉಕ್ರೇನ್ ಮುಂತಾದ ದೇಶಗಳಲ್ಲಿ ಹರಡಿದ್ದಾರೆಂಬುದು ಇದರ ವ್ಯಾಪ್ತಿಯನ್ನು ನೋಡಿದಾಗ ತಿಳಿಯಿತು.
ಈ ಸಂಚಿಕೆಯಲ್ಲಿ ರಕ್ಷಾಪುಟದಿಂದ ಆರಂಭಿಸಿ ಐದನೇ ಪುಟದ ವರೆಗಿನ ಪಠ್ಯವನ್ನು ಪ್ರಕಟಿಸಲಾಗಿದೆ.
* * * * * * *