ಶನಿವಾರ, ಸೆಪ್ಟೆಂಬರ್ 10, 2011

ಜಾನಪದದಲ್ಲಿ ಭೈರವ


    ಔತ್ತರೇಯನಾದ ಭೈರವನು ದಕ್ಷಿಣ ಭಾರತ, ಅದರಲ್ಲೂ ಕರ್ನಾಟಕವನ್ನು ಯಾವಾಗ ಮತ್ತು ಹೇಗೆ ಪ್ರವೇಶಮಾಡಿದನೆಂಬ ಸಂಗತಿಯ ಬಗ್ಗೆ ತಿಳಿಯಬೇಕೆಂಬ ಕುತೂಹಲವಿತ್ತು. ಡಾ| ಶಿವರಾಮಕಾರಂತರು ಬರೆದಿರುವ ಜಾನಪದ ವಿಷಯಕವಾದ ಲೇಖನವನ್ನು ಓದುವಾಗ ಅದರಲ್ಲಿನ ಅನೇಕ ಸಂಗತಿಗಳು ಸ್ವಾರಸ್ಯಕರವಾಗಿದ್ದವು. ಒಂದು ಅಂದಾಜಿನಂತೆ ನಾಥ ಪಂಥವೆನ್ನುವ ಭೈರವನ ಆರಾಧಕರು ಕಾಶ್ಮೀರದಲ್ಲಿ ನೆಲೆಗೊಂಡಿದ್ದರು. ಸುಮಾರು ೧೫ನೇ ಶತಮಾನದಲ್ಲಿ ಅವರು ದಕ್ಷಿಣ ಭಾರತವನ್ನು ಪ್ರವೇಶಿಸಿದರು. ಇದಲ್ಲದೆ ಕರ್ನಾಟಕದಲ್ಲಿ ಹಳೆ ಮೈಸೂರಿನ ಪ್ರಾಂತಗಳು, ಮಲೆನಾಡು, ಬಯಲುಸೀಮೆ ಮತ್ತು ಕರಾವಳಿಯ ಕದ್ರಿಯಲ್ಲಿ ನಾಥಪಂಥದ ಶೈವರು ವಾಸಿಸಿದರು.  ಕಾರಂತರು ಜಾನಪದ ನೆಲೆಯಲ್ಲಿ ಭೈರವನ ಆರಾಧನೆಯು ಚುಂಚನಗಿರಿ ಪ್ರದೇಶದಲ್ಲಿ ಹೇಗೆ ರೂಢಿಗೆ ಬಂದಿತೆಂಬುದನ್ನು, ಜಾನಪದ ಹಾಡುಗಳ ಸಂಗ್ರಾಹಕ ಶ್ರೀ ಕ.ರಾ.ಕೃ. ರವರ ಚುಂಚನಗಿರಿ ಜಾನಪದ ಗೀತ ಸಂಗ್ರಹವೆಂಬ ಕೃತಿಯನ್ನು ಆಧರಿಸಿ ವಿವೇಚಿಸಿರುವರು.

    ನಮ್ಮ ಶಿಷ್ಠ ದೇವತೆಗಳೆಲ್ಲರೂ ಬಹುತೇಕ ನಮಗೆ ಸಂಸ್ಕೃತದಿಂದಲೇ ಪರಿಚಯವಾದವರು. ಹರಿ, ರುದ್ರ, ವಿರಿಂಚಿಗಳು ಕೂಡ ಭೂಲೋಕದ ಸಾಂಗತ್ಯವನ್ನು ಹೊಂದಬೇಕಾಗಿ ಬಂದ ಅನೇಕ ಐತಿಹ್ಯಗಳು ಪುರಾಣಗಳಲ್ಲಿ ಲಭ್ಯವಿವೆ. ಪೌರಾಣಿಕದೇವತೆಗಳು ದೇವಲೋಕದಿಂದ ಧರೆಗಿಳಿದು ಗ್ರಾಮೀಣರಿಂದ ಪೂಜೆಗೊಂಡು ಸ್ಥಳೀಯ ಗುಡಿಗಳಲ್ಲಿ ಕುಳಿತರು. ಅವರೆಲ್ಲರಿಗೂ ಧರ್ಮಪತ್ನಿಯಿದ್ದರೂ, ಭೂಲೋಕದ ಸಂಸರ್ಗಕ್ಕೆ ಬಂದ ಕಾರಣ ಇಲ್ಲಿನ ಕನ್ಯೆಯರನ್ನು ವರಿಸಬೇಕಾದ ಸಂದರ್ಭಗಳು ಬಂದುದೂ ಸಹಜ. ಅಂಥ ವೈವಾಹಿಕ ಕಥಾನಕಗಳು ಜಾನಪದದಲ್ಲಿ ಹೇರಳವಾಗಿವೆ. ಈ ದೈವಿಕ ವಿವಾಹಗಳಲ್ಲೂ ಜಾತಿ, ಮತ, ಪಂಥಗಳ, ಬಡತನ-ಸಿರಿತನಗಳ ತಾಕಲಾಟವೂ ಕಂಡುಬರುತ್ತದೆ.

    ಭೈರವನ ವೈವಾಹಿಕ ಕಥಾನಕದಲ್ಲೂ ಇದೇ ಛಾಯೆಯಿದೆ.
             "ಜೋಗಿ ಸಿಂಗನಾಥ, ಬೆರಳಲ್ಲಿ ಗೋರಖನಾಥ |
            ಮೇಗಳ ಗುಡಿಯಲ್ಲಿ ಹರಕೆಯ ಕೇಳೋರು" ||

ಎಂಬ ವಿರೂಪಗೊಂಡ ತ್ರಿಪದಿಯ ತುಣುಕಿನಲ್ಲಿ - ಜೋಗಿ ಎಂದರೆ ಸಂಸ್ಕೃತದ ಯೋಗಿ, ಆತ ಅಲೆಮಾರಿ, ಹಠಯೋಗಿ. ಅವನು ಉತ್ತರದ ಗೋರಖನಾಥ ಅಥವಾ ಭೈರವ.  ಆತನಿಗೆ ಪತ್ನಿಯಿದ್ದಾಳೆ. ಆಕೆ  ಪಾರ್ವತಿ. ಭೂಲೋಕಕ್ಕೆ ಭೈರವನು ಬಂದಾಗ ಅವನಲ್ಲಿ ಅನುರಕ್ತಳಾದವಳು ಮಾಳವ್ವ. ಆಕೆ ಕುರುಬಿತಿ. ಆಕೆಯನ್ನು ಭೈರವ ವರಿಸಿದ. ದೈವಭಕ್ತೆಯಾದ ಮಾಳವ್ವನು

            "ಕನಸಿನಲಿ ಕಂಡೇನು ಮನವೀಗ ದೊಡ್ಡವ ತೊಳಸೀಯ ಮಾಡಿ ಬಳಿದಂತೆ |
            ಚುಂಚನಗಿರಿ ಭೈರವನೆ ಬಾ ನನ್ನ ಸ್ವಪುನಕೆ" ||
ಎಂದು ಕೇಳಿಕೊಂಡಳು, ಅವಳು ಮಾತ್ರವಲ್ಲ, ಆಕೆಯ ತಂದೆ ಕೂಡ
            "ಆಧಾರವಾಗೋ ಆದೀಯ ಭೈರವನೇ |
            ಆಧಾರವಿಲ್ಲದ ಬಡವರ ಮಗಳೀಗೆ ಆಧಾರವಾಗೋ ಭೈರವನೇ" ||
ಎಂದು ಬೇಡುತ್ತಾನೆ.
    ಚುಂಚನಗಿರಿಯ ಪ್ರದೇಶಕ್ಕೆ ನಾಥಪಂಥದವರ ನಂತರ ಬಂದಿರಬಹುದಾದ ವೀರಶೈವರ ಪ್ರಭಾವವು ಈ ಜಾನಪದಿಯ ಕವಿಯ ಮೇಲೆ ಉಂಟಾಗಿದೆಯೆನ್ನಲು ಈ ತ್ರಿಪದಿಯನ್ನು ನೋಡಿ :
            ಅಪ್ಪ ಭೈರವಗೆ ತುಪ್ಪ ಬಾಳೆಯ ಹಣ್ಣು | ಇಪ್ಪತ್ತು ವರಹ ಶಿವದಾರ |
            ಚಿನ್ನದಿ ಒಪ್ಪುವ ಗೆಜ್ಜೆ ಗುರುವಿಂಗೆ ||
ಹೀಗೆ ಶಿವದಾರ, ಗೆಜ್ಜೆಗಳಿಂದ ಅಲಂಕೃತನಾದ ಭೈರವನು ತನ್ನ ಪ್ರೇಯಸಿಗಾಗಿ ತೊಳಲಿದನು. ಈ ವಿರಹ ವೇದನೆಯಲ್ಲಿ ಆತ ಹೊಂಚುಹಾಕಿ, ಕೈಯಲ್ಲಿ ಕಂಚಿನ ಗುರಾಣಿಯಿದ್ದೂ ಹುಲಿಯನ್ನು ಹೊಡೆಯಲಾರದ ಅಸಮರ್ಥನಾಗುತ್ತಾನೆ.
        ಹಂಚಿ ಹುಲ್ಲೆಲಿ ಹೊಂಚಾಡುವನಿವನ್ಯಾರೇ |
            ಕಂಚೀನ ಗುರಾಣಿ ಕೈಯಲ್ಲಿ ಹಿಡಕೊಂಡು |
            ಹೊಂಚಾಡಿ ಹುಲಿನ ಹೊಡಿಲಿಲ್ಲ ||

ಹುಲಿಯ ಹೊಡೆಯಲಾಗದ ಭೈರವ ಮುಂದೇನು ಮಾಡಿದ !
            ಅಗಸೇ ಮರದಡಿಯಲ್ಲಿ ಮುತ್ತಿನ ಕಂಬಳಿ ಹಾಸಿ |
            ಸೊಗಸಮಾಡವರೆ ನಮ್ಮ ಗುರು |
            ಬೆಟ್ಟದ ಅಗಡೀಯ ನೆರಳೀಗೆ ||
    ಭೈರವನನ್ನು ನೋಡುತ್ತ ಮಾಳವ್ವ ಉಯ್ಯಾಲೆಯಾಡಿದಳು. ಭೈರವ ಅವಳಿಗಾಗಿ ಕುರಿಗಾಹಿಯಾದನು. ಇದೆಲ್ಲದರಿಂದ ಭೈರವನ ಮೂಲಪತ್ನಿ ಪಾರ್ವತಿ ವ್ಯಗ್ರಳಾದಳು. ಇಬ್ಬರು ಹೆಂಡಿರನ್ನು ಕಟ್ಟಿಕೊಂಡ ಭೈರವನ ಬಾಳುವೆಯೇನೂ ಬಂಗಾರವಾಗಲಿಲ್ಲ. ಈರ್ವರನ್ನೂ ಸಮಾನವಾಗಿ ನೋಡಿಕೊಳ್ಳಲು, ಸಂತೋಷಪಡಿಸಲು ಹೆಣಗಿದ. ಇಷ್ಟಾಗಿಯೂ ಅದೊಂದು ಸಂದರ್ಭದಲ್ಲಿ ಪಾರ್ವತಿಯ ಕೈಯಡುಗೆಗಿಂತ ಮಾಳವ್ವನ ಕೈರುಚಿಗೆ ಮನಸೋತ. ಕುರುಬಿತಿಯಾದ ಅವಳ ಸೀರೆಯ ಜಡ್ಡುವಾಸನೆ ಶಿವನಿಗೆ ಸಿರಿಗಂಧವಾಯಿತು.
ನಮ್ಮ ದೇವಾನುದೇವತೆಗಳು ಹುಲುಮಾನವರಂತೆಯೇ ಕಷ್ಟ-ಸುಖಗಳನ್ನು ಅನುಭವಿಸಿದ ಬಗೆಯನ್ನು ನಮ್ಮ ಜಾನಪದ ಕಥೆಗಳು ವಿವರವಾಗಿ ವರ್ಣಿಸಿವೆ. ಶಿಷ್ಟರ ವರ್ಣನೆ ಒಂದು ಬಗೆಯದಾದರೆ, ಅಶಿಷ್ಟರ ವರ್ಣನೆ ಮತ್ತೊಂದು ಬಗೆಯದು. ಹಾಗೆ ನೋಡಿದರೆ ಅಶಿಷ್ಟರ ವರ್ಣನೆಯಲ್ಲಿ ನೈಜತೆಯಿದೆ, ಆತ್ಮೀಯತೆಯಿದೆ, ಹಾಗಾಗಿ ಅದು ಮನಸ್ಸಿಗೆ ಹತ್ತಿರವಾಗುತ್ತದೆ.
 
* * * * * * *