ಗುರುವಾರ, ಜುಲೈ 2, 2015

ಕಾಲಿಂಜರ್ ದುರ್ಗದ ಭೈರವ


ಆತ್ಮೀಯರೇ,

ಅಜ್ಜಂಪುರದ ನನ್ನ ಪೂರ್ವಜರು ನಂಬಿ ನಡೆದುಕೊಂಡು ಬಂದ ದೈವದ ಬಗ್ಗೆ ನನ್ನ ಆಸಕ್ತಿ ಮೂಡಿದ್ದು ಹೇಗೆಂಬುದನ್ನು ಆರಂಭಿಕ ಲೇಖನದಲ್ಲಿ ಹೇಳಿದ್ದೇನೆ. ಹೀಗೆ ಆರಂಭಗೊಂಡ ಲೇಖನಮಾಲೆಯನ್ನು ಇದೀಗ ದೂರದ ಅಮೆರಿಕೆಯಲ್ಲಿ ಕುಳಿತು ಅಂತ್ಯಗೊಳಿಸುತ್ತಿದ್ದೇನೆ. ಇದು ಈ ಸಂಗ್ರಹದಲ್ಲಿ ಭೈರವನನ್ನು ಕುರಿತಾದ ಐವತ್ತನೆಯ ಲೇಖನ. ಬಹುಶಃ ಇದರೊಂದಿಗೆ ಈ ಮಾಲಿಕೆಯನ್ನು ಮುಗಿಸಬಹುದೆಂದು ತೋರುತ್ತಿದೆ. ಹಾಗಿದ್ದೂ ವಿಶೇಷ ಮಾಹಿತಿಗಳು, ಉತ್ಸವದ ವಿವರಗಳನ್ನು ಓದುಗರು ಕಳಿಸುವುದಾದಲ್ಲಿ ಅದನ್ನು ಪ್ರಕಟಿಸುವ, ಅಲ್ಲದೆ ನನಗೆ ದೊರೆಯಬಹುದಾದ ಮಾಹಿತಿಗಳನ್ನು ಅವು ದೊರೆತಂತೆಲ್ಲ ಪ್ರಕಟಿಸುವ ಸಾಧ್ಯತೆಯಂತೂ ತೆರೆದಿರುತ್ತದೆ. ನಾಲ್ಕು ವರ್ಷಗಳಿಂದ ಮೂಡಿಬರುತ್ತಿರುವ ಈ ಮಾಲಿಕೆಗೆ ಓದುಗರು ತೋರಿದ ಆಸಕ್ತಿ ಮತ್ತು ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. 

ಭೈರವನು ನನ್ನ ಮನೆದೇವರೆಂಬ ಕಾರಣಕ್ಕೆ, ಆತನ ವಿಶೇಷತೆಗಳ ಬಗ್ಗೆ ತಿಳಿಯಲು ಮೂಡಿದ ಆಸಕ್ತಿಯೇ ಈ ಬ್ಲಾಗ್ ನ ರಚನೆಗೆ ಕಾರಣವಾಯಿತು.  ಆತನ ಬಗ್ಗೆ ಹೆಚ್ಚು ತಿಳುವಳಿಕೆ, ಸಾಹಿತ್ಯಗಳು ಲಭ್ಯವಿಲ್ಲದಿದ್ದಾಗ, ಅಂತರಜಾಲದಲ್ಲಿ ದೊರೆತ ಮಾಹಿತಿಗಳು ಅದರ ಕೊರತೆಯನ್ನು ನೀಗಿದವು. ಅಂತೆಯೇ ಭೈರವನ ಆರಾಧಕರಾದ ಅನೇಕ ವ್ಯಕ್ತಿಗಳು, ಸಂಘ-ಸಂಸ್ಥೆಗಳು ಲೇಖನ-ಚಿತ್ರ-ಮಾಹಿತಿಗಳ ತಮ್ಮ ಕೊಡುಗೆಯನ್ನು ನೀಡುವುದರ ಮೂಲಕ ಈ ಬ್ಲಾಗನ್ನು ಶ್ರೀಮಂತಗೊಳಿಸಿದ್ದಾರೆ. ಎಲ್ಲರಿಗೂ ಧನ್ಯವಾದಗಳು. 
---------------------------------------------------------------------------------

ಕಾಲಿಂಜರ ಕೋಟೆ

ಕಾಲಿಂಜರ ಕೋಟೆಯು ಉತ್ತರಪ್ರದೇಶದ ಬುಂದೇಲ್ ಖಂಡದಲ್ಲಿರುವ ಒಂದು ಪುರಾತನ ದುರ್ಗ. ಇದರ ಹೆಸರು ಮಹಾಭಾರತದಲ್ಲಿಯೂ ಪ್ರಸ್ತಾಪಗೊಂಡಿದೆ. ಕಾಲಿಂಜರ ಎಂದರೆ ಕಾಲ ನಾಶಕ ಎಂದು ಅರ್ಥ. ಪೌರಾಣಿಕ ಸಮುದ್ರ ಮಂಥನ ಕಾಲಕ್ಕೆ ಉತ್ಪನ್ನವಾದ ವಿಷವನ್ನು ಶಿವನು ಕುಡಿದು, ತನ್ನ ಗಂಟಲಿನಲ್ಲಿ ಧರಿಸಿದನು. ಹೀಗಾಗಿ ಕಾಲಿಂಜರ ಕೋಟೆಯಲ್ಲಿರುವ ಶಿವನನ್ನು ನೀಲಕಂಠ ಎಂದೇ ಕರೆಯುವರು. ಪರ್ವತ ಶ್ರೇಣಿಗಳಿರುವ ಈ ಪ್ರದೇಶವು ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವುದರ ಜತೆಗೇ,  ಧ್ಯಾನ, ತಪಸ್ಸುಗಳಿಗೂ ಪ್ರೇರಕವಾಗಿದೆ. 
ಭೈರವ ಸಾಧಕರು ಪೂಜಿಸಿದ ವಿಗ್ರಹಗಳು

ಭೈರವನ ಮತ್ತೊಂದು ಬೃಹತ್ ಗಾತ್ರದ ವಿಗ್ರಹ.
ಎಡ ಪಕ್ಕದಲ್ಲಿರುವ ವ್ಯಕ್ತಿಯನ್ನು ನೋಡಿದಾಗ
ಈ ವಿಗ್ರಹದ ಗಾತ್ರ ತಿಳಿಯುತ್ತದೆ.


ಈ ಕೋಟೆಯನ್ನು ಯಾರು ಯಾವ ಉದ್ದೇಶಕ್ಕೆ ರಚಿಸಿದರೆಂಬುದು ಇಂದಿಗೂ ನಿಗೂಢ. ಆದರೆ ಕ್ರಿ.ಪೂ. ೫೦೦ರಿಂದ ೧೫೦೦ರ ಅವಧಿಯಲ್ಲಿ ಗುಜ್ಜರ ಪ್ರತೀಹಾರರು ಇದನ್ನು ಬಳಸಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡರು. ಚಂದೇಲ ರಜಪೂತರಿಗೆ ಒಲಿದ ಈ ಕೋಟೆ ಮತ್ತಾರಿಗೂ ಶಾಶ್ವತ ನೆಲೆ ಕಲ್ಪಿಸಲು ಅವಕಾಶ ನೀಡಲಿಲ್ಲವೆನ್ನುವುದು ಆಶ್ಚರ್ಯವೇ ಸರಿ. ಏಕೆಂದರೆ ಅನೇಕ ಹಿಂದೂ, ಮುಸಲ್ಮಾನರು ಈ ಕೋಟೆಯನ್ನು ವಶಪಡಿಸಿಕೊಳ್ಳಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.

ಕೋಟೆಯ ಸುತ್ತಮುತ್ತಣ ಪ್ರದೇಶದಲ್ಲಿ ಭೈರವ ಪಂಥದ ಸಾಧಕರು ನೆಲೆಸಿದ್ದರೆನ್ನಲು ಹಾಗೂ ಅವರು ತಮ್ಮ ಸಾಧನೆಗೆ ಬಳಸುತ್ತಿದ್ದ ಪೂಜಾ ವಿಗ್ರಹಗಳ ದೊಡ್ಡ ಸಂಗ್ರಹವೇ ಇಲ್ಲಿದೆ. ಕಾಪಾಲಿಕರು, ಮಾಂತ್ರಿಕರು ಭೈರವ ಸಾಧನೆ ಮಾಡಿದ ಕುರುಹುಗಳು ಹೇರಳವಾಗಿವೆ. ಇಲ್ಲಿರುವ ೨೪ ಅಡಿ ಎತ್ತರದ ೧೭ ಅಡಿ ವಿಸ್ತಾರ ಬೃಹತ್ ಭವ್ಯ ಭೈರವನ ಉಬ್ಬುಶಿಲ್ಪ ತನ್ನ ಕಲಾ ಸೌಂದರ್ಯದ ಜತೆಗೆ ಅದರ ಗಾತ್ರದಿಂದಲೂ ಗಮನ ಸೆಳೆಯುತ್ತದೆ. ಊರ್ಧ್ವ ಲಿಂಗವುಳ್ಳ ಈ ಭೈರವನಿಗೆ ೧೮ ಕೈಗಳಿವೆ. ವಿವಿಧ ಆಯುಧಗಳು, ರುಂಡಮಾಲೆ ಹಾಗೂ ೪ ಅಡಿ ಎತ್ತರದ ಭೈರವಿಯೂ ಜತೆಗಿದ್ದಾಳೆ. ಈ ವಿಗ್ರಹದಿಂದ ನೈಋತ್ಯಕ್ಕೆ ಭೈರವ ಭಾವಿಯಿದೆ.  ಕ್ರಿ.ಶ. 1138ರಲ್ಲಿ ರಚಿಸಲಾಗಿರುವ ಒಂದು ಶಾಸನ ಲಭ್ಯವಿದ್ದು, ಇದರ ಸಮೀಪ ಕಾವಡಿಯಿಂದ ನೀರುತರುತ್ತಿರುವ ವ್ಯಕ್ತಿಯೋರ್ವನ ಚಿತ್ರವಿದೆ. ಇದರ ಮುಂದೆ ಇರುವ ಭವ್ಯ ಭೈರವ ವಿಗ್ರಹವನ್ನು ಮಂಡೂಕ ಭೈರವನೆಂದು ಸ್ಥಳೀಯರು ಕರೆಯುತ್ತಾರೆ.

ಐತಿಹಾಸಿಕತೆಯೊಂದಿಗೆ ಪ್ರಾಕೃತಿಕ ಸೌಂದರ್ಯವೂ ಮೇಳೈಸಿರುವ ಈ ಭೈರವನ ಸನ್ನಿಧಿ ತನ್ನ ಪುರಾತನತ್ವದ ಜತೆಗೆ ನಿಗೂಢತೆಯನ್ನು ಉಳಿಸಿಕೊಂಡಿದೆ.


ಚಿತ್ರಕೃಪೆ - ಅಂತರಜಾಲ

* * * * * * *