ಮಂಗಳವಾರ, ಆಗಸ್ಟ್ 2, 2011

ಕಾಲಭೈರವನೆಂಬ ಹೆಸರು

ಕಾಲಭೈರವನೆಂಬ ಹೆಸರು



    ಕಾಲಬದಲಾದಂತೆಲ್ಲಾ, ಮನುಷ್ಯನ ಅಭಿರುಚಿಗಳೂ ಬದಲಾಗುವುದು ಸಹಜ.  ಈ ಪ್ರಕ್ರಿಯೆಯಲ್ಲಿ ಹೆಸರು ಇಡುವುದರಲ್ಲಿ ಬಂದಿರುವ ಬದಲಾವಣೆಗಳು ಢಾಳಾಗಿ ವ್ಯಕ್ತವಾಗುತ್ತದೆ.  ಕೆಲವೊಂದು ಹೆಸರುಗಳಲ್ಲಿ ವ್ಯಕ್ತಿಯು ಪುಲ್ಲಿಂಗವೋ ಸ್ತ್ರೀಲಿಂಗವೋ ತಿಳಿಯದಂತಿರುತ್ತದೆ. ಆಕಾರಾಂತ ಸ್ತ್ರೀಲಿಂಗ ವೆಂಬ ಪರಿಹಾರವು ವ್ಯಾಕರಣದ ಅನುಸಾರ ಇದೆಯಾದರೂ, ಅವುಗಳನ್ನು ಇಂಗ್ಲೀಷಿನಲ್ಲಿ ಬರೆದಾಗ ವ್ಯತ್ಯಾಸ ಪತ್ತೆಯಾಗದು. ಹಿಂದೆಲ್ಲ ನಾಮಕರಣ ಮಾಡುವಾಗ  ಮನೆಯಲ್ಲಿ ಒಬ್ಬರಿಗಾದರೂ ಕುಲದೇವರ ಹೆಸರನ್ನು ಇಡುವ ರೂಢಿಯಲ್ಲಿತ್ತು.   ಈ ಕಾರಣದಿಂದಾದರೂ ಮನೆ ದೇವರನ್ನು ಮರೆಯದಂತಿರಲಿ ಎನ್ನುವುದು ಅದರ ಉದ್ದೇಶ.  ಇತಿಹಾಸದಲ್ಲಿ ಒಂದನೇ ಪುಲಕೇಶಿ, ಎರಡನೇ ಪುಲಕೇಶಿ ಎಂದು  ಗುರ್ತಿಸುವಂತೆ ನಮ್ಮ ಕುಟುಂಬದಲ್ಲಿ ಅಂಥ ಗುರ್ತಿಸುವಿಕೆಗೆ ವಿಪುಲ ಅವಕಾಶಗಳಿವೆ.   ಏಕೆಂದರೆ ಅಜ್ಜಂಪುರದ ಜೋಯಿಸ ಮನೆತನಕ್ಕೆ ಸೇರಿದವರಲ್ಲಿ ಬಹುತೇಕ ಪೂರ್ವಿಕರ ಹೆಸರುಗಳು ಭೈರಾಭಟ್ಟ, ಭೈರಾ ಜೋಯಿಸ ಇಲ್ಲವೇ ಶಂಕರ ಭಟ್ಟ, ಶಂಕರ ಜೋಯಿಸ ಎಂದೇ ಇರುತ್ತಿದ್ದುದು ವಾಡಿಕೆ. ಇತ್ತೀಚಿನ ತಲೆಮಾರಿನವನೆಂದರೆ "ಕ್ಷೇತ್ರಪ್ರಸಾದ್" ನೆಂಬ ಸದಸ್ಯ.

   
ಕ್ಷೇತ್ರಪಾಲನೆಂಬುವ ಹೆಸರು ಅಷ್ಟೊಂದು ಈಗೀಗ ಬಳಕೆಯಲ್ಲಿ ಇಲ್ಲದ ಹೆಸರು. ನನ್ನ ತಂದೆ ಕ್ಷೇತ್ರಪಾಲಯ್ಯನವರ ಹೆಸರನ್ನು ತಪ್ಪು-ತಪ್ಪಾಗಿ ಉಚ್ಛರಿಸುವುದೂ, ಇಂಗ್ಲೀಷ್ ಮತ್ತು ಕನ್ನಡದಲ್ಲಿ ಆ ಹೆಸರನ್ನು ಬರೆಯುವಾಗ ತಪ್ಪು ಮಾಡುವುದನ್ನು ನಾನೇ ಹಲವು ಬಾರಿ ನೋಡಿದ್ದೇನೆ. ಇತ್ತೀಚೆಗೆ ಚುನಾವಣಾ ಆಯೋಗದವರು ಗುರುತು ಚೀಟಿ ಹಂಚುವಾಗ ಮಾಡಿರುವ ಈ ಹೆಸರಿನ ಅಪಭ್ರಂಶತೆಯ ಪಾರಮ್ಯ, ನಗುತರಿಸುವುದರ ಜೊತೆಗೇ, ನಮ್ಮ ಭಾಷಾ ಶುದ್ಧತೆ ಕಳೆದು ಹೋಗಿದೆಯೇ ಎಂಬ ಕವಳವನ್ನು ಮೂಡಿಸುತ್ತದೆ.  ನಾನು ಚುನಾವಣಾ ಆಯೋಗದ ಸಿಬ್ಬಂದಿಗೆ, ವೈಯುಕ್ತಿಕ ವಿವರಗಳನ್ನು ನೀಡುವಾಗ ಹೀಗೆ ಬರೆದಿದ್ದೆ.
                         ಹೆಸರು : ಶಂಕರ ಅಜ್ಜಂಪುರ
                         ತಂದೆ : ಎ.ಕ್ಷೇತ್ರಪಾಲಯ್ಯ.
ಇದನ್ನು ಕಂಪ್ಯೂಟರಿಗೆ ವರ್ಗಾವಣೆ ಮಾಡಿದ ಮಹಾನುಭಾವನು ಕ್ಷೇತ್ರ ಎಂಬ ಪದಕ್ಕೆ 'constituency' ಎಂದೂ, ಉಳಿದುದನ್ನು ಪಾಲಯ್ಯ ಎಂದೂ ತರ್ಜಮೆ ಮಾಡಿಹಾಕಿದ್ದ
ನು! ಈ ಬಗ್ಗೆ ಸಂಬಂಧಿಸಿದವರನ್ನು ಕೇಳಿದಾಗ ಕಂಪ್ಯೂಟರಿನಲ್ಲಿ ಬರುವುದು ಹಾಗೇ ಎಂದು ಘನವಾದ ಉತ್ತರವನ್ನು ನೀಡಿದರು!

    ಹಾಗೆ ನೋಡಿದರೆ ತಮ್ಮ ಕುಲದೇವತೆ ಕಾಲಭೈರವನ ಹೆಸರನ್ನು ಮಕ್ಕಳಿಗೆ ಇಡಬೇಕೆಂದು ಭಾ
ವಿಸುವವರಿಗೆ "ಭೈರವ ಸಹಸ್ರನಾಮ"ದಲ್ಲಿ ಅನೇಕ ಹೆಸರುಗಳು ದೊರೆಯುತ್ತವೆ.  ಮುಂದೊಮ್ಮೆ ಸಹಸ್ರನಾಮ ಪಠ್ಯ ಪ್ರಕಟವಾಗುತ್ತದೆ.  ಅದರಲ್ಲಿನ ಸೂಕ್ತ ಹೆಸರುಗಳನ್ನು ಆಯ್ಕೆ ಮಾಡುವ ಅವಕಾಶಗಳಿವೆ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ