ಬೆಂಗಳೂರಿನಿಂದ
೮೦ ಕಿ.ಮೀ. ದೂರದಲ್ಲಿರುವ ಮದ್ದೂರಿನ ಸಮೀಪ ಚಿಕ್ಕ ಅರಸೀಕೆರೆಯೆಂಬ ಊರಿದೆ. ಅಲ್ಲಿರುವ
ಕಾಲಭೈರವೇಶ್ವರನು ತಾನು ಸ್ವತಃ ಪ್ರಸಿದ್ಧಿ ಪಡೆದಿರುವುದಕ್ಕಿಂತ ಹೆಚ್ಚಾಗಿ, ಶಿವನ
ವಾಹನವಾದ ನಂದಿಯ ಮೂಲಕ ಅಧಿಕ ಪ್ರಸಿದ್ಧನಾಗಿರುವುದು ಇಲ್ಲಿನ ವಿಶೇಷ.
ಕಾಲಭೈರವನ
ವಾಹನ ನಾಯಿ. ಆದರೆ ಇಲ್ಲಿ ಶಿವದೇವಾಲಯದಲ್ಲಿ ಶಿವನ ಎದುರಿಗೆ ನಂದಿಯಿರುವಂತೆ, ಕಾಲಭೈರವನ
ಎದುರಿಗೆ ಇರುವ ಇಲ್ಲಿನ ನಂದಿಯ ವಿಗ್ರಹ ೧೬ ಅಡಿಗಳಷ್ಟು ಎತ್ತರವಿದ್ದೀತು. ಹಳ್ಳಿಗಳಲ್ಲಿ ದೇವರ
ಹೆಸರಿನಲ್ಲಿ ಬಸವನನ್ನು ಬಿಡುವ ಪದ್ಧತಿ ಇಂದಿಗೂ ಇದೆ. ಇದಕ್ಕೆ ದೇವರಿಗೆ ಸಲ್ಲುವ ಎಲ್ಲ
ಮರ್ಯಾದೆಗಳೂ ಸಲ್ಲುತ್ತವೆ. ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶಿವ ಮತ್ತು ಬಸವರಿಗೆ ಸಮಾನ
ಪ್ರೀತ್ಯಾದರ, ಭಕ್ತಿಗಳಿವೆ. ರೈತರ ಪ್ರೀತಿಯ ನಂದಿಯು
ಕಾಲಭೈರವನ ರೂಪದಲ್ಲಿ ಪಡೆದಿರುವ ಮಾನ್ಯತೆ ಮತ್ತು ಗೌರವಾದರಗಳನ್ನು ಈ ಕ್ಷೇತ್ರದಲ್ಲಿ ಕಂಡಾಗ, ಪ್ರಾಣಿಗಳನ್ನೂ
ದೈವತ್ವಕ್ಕೆ ಏರಿಸಿರುವ ಭಕ್ತರು ದೊಡ್ಡವರೆನಿಸುತ್ತಾರೆ. ಅದು ಪ್ರಕೃತಿ ಮತ್ತು ಮಾನವರ
ಸಂಬಂಧಗಳನ್ನು ಗಾಢವಾಗಿಸಲು, ಪ್ರೀತಿಸಲು ಸಹಕಾರಿಯಾಗಿದೆ. ಎಲ್ಲಕ್ಕಿಂತ
ಹೆಚ್ಚಾಗಿ ಜೀವಕಾರುಣ್ಯವನ್ನು ಅವರು ಎತ್ತಿಹಿಡಿದಿರುವರು. ಅದು ಇಂದಿನ ದಿನಗಳಲ್ಲಿ ಬೇಕಾಗಿರುವ
ದೊಡ್ಡ ಮೌಲ್ಯವೇ ಸರಿ.
ಚಿಕ್ಕ
ಅರಸೀಕೆರೆಯಲ್ಲಿ ಕಾಲಭೈರವನ ಜೀವಂತ ಸ್ವರೂಪವಾಗಿರುವ ನಂದಿ ಅಥವಾ ಬಸವ ಇಡೀ ಗ್ರಾಮದಲ್ಲಿ
ಸ್ವೇಚ್ಛೆಯಾಗಿ ಸುತ್ತುತ್ತಿರುತ್ತದೆ. ಇದಕ್ಕೊಂದು ಕಥೆ ಪ್ರಚಲಿತವಿದೆ. ಅದು ಸರಿಸುಮಾರು
ಯಡಿಯೂರು ಸಿದ್ಧಲಿಂಗೇಶ್ವರನ ಕಥೆಯನ್ನೇ ಹೋಲುತ್ತದೆ. ಸುಮಾರು ೯೦೦ ವರ್ಷಗಳ ಹಿಂದೆ ಪಕ್ಕದೆ ದೊಡ್ಡ ಅರಸೀಕೆರೆಯಲ್ಲಿನ ಒಂದು ಹಸು ಪ್ರತಿದಿನ ಒಂದು ಹುತ್ತದ
ಮೇಲೆ ಹಾಲು ಸುರಿಸಿ ಬರುತ್ತಿತ್ತು. ಅದರ ಮಾಲಿಕನು ಈ ಬಗ್ಗೆ ಗಮನಿಸಿ, ಆ
ಹಸು ಹಾಲು ಸುರಿಸುತ್ತಿದ್ದ ಹುತ್ತವನ್ನು ಅಗೆದಾಗ ಅಲ್ಲಿ ಕಾಲಭೈರವನ ಸುಂದರ ವಿಗ್ರಹ ದೊರಕಿತು.
ಅದರ ಪೂಜಾ ಆರಾಧನೆಗಳು ಆರಂಭವಾದವು. ಆ ಹಸುವಿನ ಕರುವನ್ನು ಕಾಲಭೈರವನಿಗೆ ಸಮರ್ಪಿಸಲಾಯಿತು.
ಮುಂದೆ ಒಂದು ಕರುವನ್ನು ಇದೇ ಉದ್ದೇಶಕ್ಕೆಂದು ನಿಯಮಿಸುವ ಪರಿಪಾಟವೂ ಬೆಳೆದುಬಂದು ಈಗ ಇರುವ ಬಸವ ಮೂವತ್ತಾರನೆಯದು
ಎಂದು ಹೇಳುವರು. ಕಾಲಭೈರವನ ಕೃಪೆಗೆ ಪಾತ್ರವಾದ ಕರುವಿನ ಬಲ ಹಿಂಗಾಲಿಗೆ ಶಿವನ ಮುದ್ರೆಯನ್ನು
ಹಾಕಲಾಗುತ್ತದೆ.
ಈ
ಕ್ಷೇತ್ರದಲ್ಲಿ ಅನ್ನದಾನ ನಿರಂತರವಾಗಿ ನಡೆಯುತ್ತಿದೆ. ಇದರ ಹಿಂದೆಯೂ ಇನ್ನೊಂದು ಕಥೆ
ಪ್ರಚಲಿತವಿದೆ. ಅದರ ಅನ್ವಯ, ಪೂರ್ವದಲ್ಲಿ ನಂದಿಗೆ ಮೂರು
ಕೊಂಬುಗಳಿದ್ದವಂತೆ. ಅದರಲ್ಲಿ ಒಂದು ಕೊಂಬನ್ನು ತೆಗೆದು ಹಾಕು ಎಂದು ಶಿವನು ಹೇಳಿದ್ದಕ್ಕೆ, ನಂದಿಯು
ಅದನ್ನು ಒಪ್ಪಲಿಲ್ಲ. ಕೋಪಗೊಂಡ ಶಿವನು ಮೂರನೆಯ ಕೊಂಬನ್ನು ಮುರಿದು ಭೂಮಿಯತ್ತ ಒಗೆದನಂತೆ. ಅದು
ಭೂಲೋಕದಲ್ಲಿ ದುಂದುಭಿ ಎಂಬ ರಣವಾದ್ಯವಾಗಿ ಪ್ರಸಿದ್ಧಿಯಾಯಿತೆಂದು ಐತಿಹ್ಯ. ಕೊಂಬು ಮುರಿದುಕೊಂಡ
ನಂದಿಯು ಪಶ್ಚಿಮ ದಿಕ್ಕಿಗೆ ಮುಖಮಾಡಿ ನಿಂತು ಗಾಢವಾಗಿ ಯೋಚಿಸುತ್ತ ನಿಂತಿತ್ತು. ಯಾರು ಎಷ್ಟು
ಹೇಳಿದರೂ ಕೇಳಲಿಲ್ಲ. ಆಗ ಓರ್ವ ಭಕ್ತನು ಈ ಕ್ಷೇತ್ರದಲ್ಲಿ ಅನ್ನದಾನ ಮಾಡಿದರೆ ನಿನಗೆ
ಸಮಾಧಾನವುಂಟಾಗುವುದೋ ಎಂದು ಕೇಳಿದಾಗ, ನಂದಿಯು
ತನ್ನ ಸಮ್ಮತಿ ನೀಡಿತಂತೆ. ಅಂದಿನಿಂದ ಅನ್ನದಾನದ ಪರಂಪರೆ ಮುಂದುವರೆದುಕೊಂಡು ಬಂದಿದೆ.
ಬಸವನು
ಅಧಿದೇವತೆಯಾಗಿ ಇರುವ ಕ್ಷೇತ್ರಗಳು ಕರ್ನಾಟಕದಲ್ಲಿ ಹಲವಾರಿವೆ. ಅಲ್ಲೆಲ್ಲ ನಡೆಯುವಂತೆ, ಇಲ್ಲಿಯೂ
ಬಸವ ಅಪ್ಪಣೆಯನ್ನು ಪಡೆದು ಗ್ರಾಮಸ್ಥರು ತಮ್ಮ ಕೆಲಸಕಾರ್ಯಗಳನ್ನು ಕೈಗೊಳ್ಳುವರು. ರೋಗಿಗಳು ಬಸವ
ನಡೆಯುವ ಹಾದಿಗೆ ಅಡ್ಡ ಮಲಗಿ, ಅದು ತಮ್ಮ ಮೇಲೆ ಹಾದುಹೋದರೆ, ತಮ್ಮ
ರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇರಿಸಿಕೊಂಡಿದ್ದರೆ, ಸಂತಾನ
ಭಾಗ್ಯ, ವಿವಾಹ ಮುಂತಾದ ಜೀವನದ ಸಮಸ್ಯೆಗಳಿಗೆ, ಬಸವನು
ಬಲಗಾಲನ್ನು ಭಕ್ತನ ಅಂಗೈಮೇಲೆ ಇರಿಸಿದರೆ, ಅದು
ಸಾಧಿಸುತ್ತದೆ ಎಂಬ ನಂಬಿಕೆಯೂ ಇದೆ. ಸಾಧಾರಣವಾಗಿ ಕಾಲಭೈರವನು ನಿಂತಿರುವ ಭಂಗಿಯಲ್ಲಿಯೇ ಬಹುತೇಕ
ವಿಗ್ರಹಗಳು ಕಾಣುತ್ತವೆ. ಚಿಕ್ಕ ಅರಸೀಕೆರೆಯ ವಿಗ್ರಹವನ್ನು ಕುಳಿತಿರುವಂತೆ ಕಡೆಯಲಾಗಿದೆ. ತಮ್ಮ
ಹರಕೆ ಯಶಸ್ವಿಯಾದರೆ ಬಸವನಿಗೆ ಹನ್ನೊಂದು ಬಾಳೆ ಹಣ್ಣುಗಳನ್ನು ಮತ್ತು ಕಾಲಭೈರವನಿಗೆ ಬೆಲ್ಲವನ್ನು
ಸಮರ್ಪಿಸುವ ಪದ್ಧತಿಯಿದೆ. ದೇವಾಲಯದ ಕಟ್ಟಡ ಕಲ್ಲಿನಿಂದ ನಿರ್ಮಿತವಾಗಿದ್ದು ಗಾರೆಯ ಶಿಖರವಿದೆ.
ಶಿವನ ಪರಿವಾರವಾದ ಸುಬ್ರಹ್ಮಣ್ಯ ಮತ್ತು ಗಣಪತಿಯ ವಿಗ್ರಹಗಳು ಕಾಣಸಿಗುತ್ತವೆ. ಆರಾಧ್ಯ
ದೈವಕ್ಕೆ ಜೈವಿಕ ಸ್ವರೂಪ ದೊರೆತಿರುವುದೇ ಇಲ್ಲಿನ ವಿಶೇಷ.
* * * * * * *
ಬೆಂಗಳೂರಿನಿಂದ ೮೦ ಕಿ.ಮೀ. ದೂರದಲ್ಲಿರುವ ಮದ್ದೂರಿನ ಸಮೀಪ ಚಿಕ್ಕ ಅರಸೀಕೆರೆಯೆಂಬ ಊರಿದೆ. ಅಲ್ಲಿರುವ ಕಾಲಭೈರವೇಶ್ವರನು ತಾನು ಸ್ವತಃ ಪ್ರಸಿದ್ಧಿ ಪಡೆದಿರುವುದಕ್ಕಿಂತ ಹೆಚ್ಚಾಗಿ, ಶಿವನ ವಾಹನವಾದ ನಂದಿಯ ಮೂಲಕ ಅಧಿಕ ಪ್ರಸಿದ್ಧನಾಗಿರುವುದು ಇಲ್ಲಿನ ವಿಶೇಷ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ