ಸೋಮವಾರ, ಡಿಸೆಂಬರ್ 2, 2013

ಕೀರ್ತಿಪುರದ ಬಾಘ ಭೈರವ ಮಂದಿರ

ಭೈರವನ ವಿವಿಧ ರೂಪಗಳ ಚಿತ್ರಣ 

ಈ ದೇವಾಲಯದ ಹೆಸರನ್ನು ನನ್ನ ಹಿಂದಿನ ಲೇಖನಗಳಲ್ಲಿ ಭಗ ಭೈರವನೆಂದು ಪ್ರಸ್ತಾಪಿಸಿದ್ದೇನೆ. ಆದರೆ ಆ ಪ್ರಯೋಗ ತಪ್ಪು ಎಂದು ತಿಳಿದುದು ಇತ್ತೀಚೆಗೆ. ಅಂತರಜಾಲದಲ್ಲಿ ಲೇಖನವೊಂದನ್ನು ಓದುತ್ತಿದ್ದಾಗ ದೊರೆತ ಮಾಹಿತಿಗಳನ್ನು ನಿಮ್ಮ ಓದಿಗೆಂದು ಇಲ್ಲಿ ನೀಡಿದ್ದೇನೆ. ತುಂಬ ಆಸಕ್ತಿಕರ ಮತ್ತು ಐತಿಹಾಸಿಕ ಅಂಶಗಳನ್ನು ಒಳಗೊಂಡಿರುವ ಈ ಭಾಗ ನಿಮಗೆ ಇಷ್ಟವಾದೀತೆಂದು ಭಾವಿಸುತ್ತೇನೆ.


ವ್ಯಾಘ್ರ ಭೈರವ 
ಭಗ ಭೈರವನೆಂಬ ಪ್ರಯೋಗ ತಪ್ಪು ಏಕೆಂದರೆ, ಇಲ್ಲಿನ ಭೈರವ ಹುಲಿ ಭೈರವ. ಎಂದರೆ ಹಿಂದಿಯಲ್ಲಿ ಬಾಘ್ ಭೈರವ. ಇದು ನೇಪಾಳದ ಕೀರ್ತಿಪುರದಲ್ಲಿದೆ. ಇದು ಅಲ್ಲಿನ ಅತ್ಯಂತ ಪುರಾತನ ಮಂದಿರ. ಇದನ್ನು ಯಾರು, ಯಾವಾಗ, ಯಾವ ಉದ್ದೇಶಕ್ಕೆ ನಿರ್ಮಿಸಿದರೆಂಬ ಬಗ್ಗೆ ಮಾಹಿತಿ ಕಡಿಮೆ. ಆದರೂ ಅಂದಿನ ರಾಜರ ಐತಿಹಾಸಿಕ ವಂಶಾವಳಿಗಳನ್ನು ಅವಲೋಕಿಸಿದರೆ, ಕೀರ್ತಿಪುರದ ಅರಸು ಗೋಪಾಲರಾಜನ ವಂಶಾವಳಿಯಲ್ಲಿ ಬಂದ ಎರಡನೇ ಶಿವರಾಜನೆನ್ನುವವನು ಇದರ ನಿರ್ಮಾತೃವೆಂದು ಹೇಳಬಹುದು. ಈತನು ಕ್ರಿ.ಶ. ೧೦೯೯ರಿಂದ ೧೧೨೬ರವರೆಗೆ ಆಳ್ವಿಕೆ ನಡೆಸಿದನು. 

ಬಾಘ ಭೈರವ ಮೂರ್ತಿಯು ಶಿಲಾಮೂರ್ತಿಯಲ್ಲ. ಅದು ಜೇಡಿ ಮಣ್ಣಿನಿಂದ ತಯಾರಿಸಿದ್ದು. ಚತುರ್ಮಾನ ದ್ವಾರದ ನಾಗರಿಕನೊಬ್ಬನು, ಕ್ರಿ.ಶ. ೧೯೨೯ರವರೆಗೆ ಆಳಿದ ಚಂದ್ರ ಶುಂಸೇರನ ಆಳ್ವಿಕೆಯ ಕಾಲದಲ್ಲಿ ನೀಡಿದ ಬೆಳ್ಳಿಯ ಕವಚದಿಂದ ಈ ಮುಖವನ್ನು ಅಲಂಕರಿಸಲಾಗುತ್ತದೆ. ಜೇಡಿಯ ಮಣ್ಣಿನ ವಿಗ್ರಹವಾದ್ದರಿಂದ ಇದು ಆಗಾಗ್ಗೆ ವಿರೂಪಗೊಳ್ಳುವುದು ಸಹಜ. ಈ ದೇವನನ್ನು ಹಿಂದೂಗಳು, ಬೌದ್ಧರು ಸಮಾನವಾಗಿ ಆದರಿಸುವುದರಿಂದ, ಇದು ವಿರೂಪಗೊಂಡಾಗ ದುರಸ್ತಿಗೊಳಿಸುತ್ತಾರೆ. ಹೀಗೆ ನಿರ್ಮಿಸುವಾಗ ಇದಕ್ಕೆ ಬೇಕಿರುವ ಜೇಡಿಮಣ್ಣನ್ನು ಪಕನಜೋಗ್ ಸಮೀಪವಿರುವ ತಾಂತ್ರಿಕ ಮಂದಿರಗಳ ಆವರಣದಿಂದ, ನಿಗದಿಪಡಿಸಿದ ಏಳುಸ್ಥಳಗಳಿಂದ ಆಯ್ದುಕೊಳ್ಳಲಾಗುವುದು. ಈ ಪ್ರಕ್ರಿಯೆಯು ಪ್ರತಿ ೨೦ ಅಥವಾ ೩೦ ವರ್ಷಗಳಿಗೆ ಒಂದು ಬಾರಿಯಂತೆ ನಿರಂತರವಾಗಿ ನಡೆದುಬಂದಿದೆ. 

ಬಾಘ ಭೈರವನ ಆರಾಧನೆಯಲ್ಲಿ ಪಂಚ ಮ ಕಾರಗಳಿಗೆ ಮಹತ್ವವಿದೆ. ಅವೆಂದರೆ ಮದ್ಯ, ಮಾನಿನಿ, ಮುದ್ರಾ, ಮೈಥುನ  ಮತ್ತು  ಮಾಂಸ. ಈ ಎಲ್ಲ ನಿವೇದನೆಗಳನ್ನು ಗರ್ಭಗೃಹದಲ್ಲಿ ಮಾಡದೇ, ಪಕ್ಕದಲ್ಲಿ ಇರುವ ಕಿಟಕಿಯ ಪಕ್ಕದ ಬಲಿಪೀಠದಲ್ಲಿ ಮಾಡಲಾಗುವುದು. ಈ  ದೇವಾಲಯದ ಬಾಹ್ಯ ರಚನೆಯು ಬೌದ್ಧವಿಹಾರಗಳನ್ನು ಹೋಲುತ್ತದೆ. ಇದು ಮೂರು ಮಹಡಿಗಳನ್ನು ಒಳಗೊಂಡಿದ್ದು, ಮೊದಲ ಎರಡು ಮಹಡಿಗಳನ್ನು ಸುಟ್ಟ ಹೆಂಚಿನಿಂದ ಮುಚ್ಚಲಾಗಿದ್ದರೆ, ಮೇಲಿನ ಮಾಡು ಲೋಹದ ತಗಡುಗಳಿಂದ ಮುಚ್ಚಲ್ಪಟ್ಟಿದೆ. ಇವುಗಳ ಇಳಿಜಾರಾದ ಮಾಡುಗಳ ಅಂಚಿನಲ್ಲಿ ಅಷ್ಟಭೈರವರು, ಅಷ್ಟಮಾತೃಕೆಯರು ಮತ್ತು ಗರುಡನಾರಾಯಣ ಹಾಗೂ ಅವನ ಸಹವರ್ತಿಗಳ ವಿಗ್ರಹಗಳಿಂದ ಅಲಂಕರಿಸಲಾಗಿದೆ. ಭೈರವನ ಆರಾಧನೆಯಲ್ಲಿ ಎಂಟು ಮತ್ತು ಅದರ ಗುಣಕ ಸಂಖ್ಯೆಗಳಿಗೆ ಪ್ರಾಧಾನ್ಯವಿದೆ.

ನೇಪಾಳ ಕೀರ್ತಿಪುರದ ಬಾಘ್ ಭೈರವ ಮಂದಿರ 

ಈ ದೇವಾಲಯದ ಬಗ್ಗೆ ಐತಿಹಾಸಿಕ ಸಾಕ್ಷ್ಯಾಧಾರಗಳಿರುವುದು ತೀರ ಕಡಿಮೆ. ಇದರ ಜೀರ್ಣೋದ್ಧಾರದ ಮೊದಲ ದಾಖಲೆಯೆಂದರೆ, ಜಗತ್ ಪಾಲ ವರ್ಮನೆಂಬ ಮಹಾಪಾತ್ರರಿಗೆ ಸಂಬಂಧಿಸಿದೆ. ಈ ಶಾಸನದ ಅನ್ವಯ : "  ೬೩೫ನೇ ವರ್ಷದ ಕೃಷ್ಣಪಕ್ಷ ಚತುರ್ಥಿ, ಸೋಮವಾರ, ಪುನರ್ವಸು ನಕ್ಷತ್ರವಿರುವ ಈ ಶುಭದಿನದಂದು, ಸೂರ್ಯನು ಗುರುವಿನ ರಾಶಿಯಲ್ಲಿ ಮತ್ತು ಚಂದ್ರನು ಕರ್ಕಾಟಕ ರಾಶಿಯಲ್ಲಿರುವಾಗ ಈ ವ್ಯಾಘ್ರೇಶ್ವರನ ದೇವಾಲಯದ ಜೀರ್ಣೋದ್ಧಾರ ಕಾರ್ಯವು ನಡೆದುದು. ವೇದೋಕ್ತವಾದ ದಶಕರ್ಮಗಳು, ಪಿಂಡವಹಾರದ ಮುಂದೆ ದೀಪವನ್ನು ಬೆಳಗಲಾಯಿತು. . ಈ ಯಜ್ಞದ ಯಾಜಮಾನ್ಯವನ್ನು ಮಣಿಂಗಲದ ಜಗತ್ಪಾಲ ವರ್ಮ ಮಹಾಪಾತ್ರರು ನಿರ್ವಹಿಸಿದರು". 

೮೭೦ನೇ ಇಸವಿಯ ಮತ್ತೊಂದು ತಾಮ್ರ ಶಾಸನದಲ್ಲಿ, ದೇವಾಲಯದ ಉತ್ತರಭಾಗದ ಕಾಡನ್ನು ಯಾರೂ ಕಡಿಯಬಾರದೆಂದೂ, ಹಾಗೆ ಮಾಡಿದವರಿಗೆ ಹನ್ನೆರಡು ರೂಪಾಯಿಗಳ ದಂಡವನ್ನು ವಿಧಿಸುವ ಬಗ್ಗೆ ಉಲ್ಲೇಖವಿದೆ. ಈ ಮಂದಿರಕ್ಕೆ ಹಲವಾರು ಬಾರಿ ಚಿನ್ನದ ಲೇಪನವುಳ್ಳ ತಗಡುಗಳನ್ನು ಹೊದಿಸಿರುವ ಬಗ್ಗೆ, ಹಿತ್ತಾಳೆ, ತಾಮ್ರದ ಕವಚಗಳನ್ನು ನಗರದ ಅನೇಕ ನಾಗರಿಕರು ಮಾಡಿಸಿಕೊಟ್ಟಿರುವ ಬಗ್ಗೆ ಮಾಹಿತಿಗಳಿವೆ. ೧೯೬೭ರಲ್ಲಿ ಇಲ್ಲಿ ನೆಲಕ್ಕೆ ಹಾಸಿದ್ದ ಲೋಹದ ತಗಡುಗಳನ್ನು ತೆಗೆದು, ಗೋದಾವರೀ ಅಮೃತಶಿಲೆಯನ್ನು ಹಾಸಲಾಗಿರುವುದೇ ಕೊನೆಯ ಜೀರ್ಣೋದ್ಧಾರದ ಕಾರ್ಯ.

ಹುಲಿ ಭೈರವನಿಗೆ ಹುಲಿಗಳೇ ದ್ವಾರಪಾಲಕರು 

ಸಾಧಾರಣವಾಗಿ ಎಲ್ಲ ದೇಗುಲಗಳ ಗರ್ಭಗೃಹ ಚೌಕಾಕಾರದಲ್ಲಿರುತ್ತದೆ. ಆದರೆ ಭೈರವ ದೇವಾಲಯಗಳ ಗರ್ಭಗೃಹಗಳು ಆಯತಾಕಾರದಲ್ಲಿರುವುದೇ ಅದರ ವಿಶೇಷ ಲಕ್ಷಣ. ಭೈರವಿಯ ಮಂದಿರಗಳು ಚಚ್ಚೌಕದಲ್ಲೇ ಇರುತ್ತವೆ. ಈಗ ಬಾಘ ಭೈರವನೆಂಬ ಹೆಸರು ಬರಲು ಕಾರಣವಾದ ನೇಪಾಳದಲ್ಲಿ ಪ್ರಚಲಿತವಿರುವ ಕತೆಯನ್ನಿಷ್ಟು ಗಮನಿಸೋಣ. "ಒಂದಾನೊಂದು ಕಾಲದಲ್ಲಿ ಕೀರ್ತಿಪುರದ ಕುರಿಗಾಹಿ ಹೆಣ್ಣುಮಕ್ಕಳು ಊರಿನ ಸಮೀಪದ ಬೆಟ್ಟದ ತಪ್ಪಲಿನಲ್ಲಿ ಕುರಿ ಮೇಯಿಸುತ್ತಿದ್ದರು. ಅದರ ನಡುವೆ ಆಟಪಾಟಗಳೂ ಇರುತ್ತಿದ್ದವು.ಒಮ್ಮೆ ಜೇಡಿಮಣ್ಣಿನಿಂದ ಒಂದು ಹುಲಿಯ ಆಕೃತಿಯನ್ನು ತಯಾರಿಸಿದರು. ಅದಕ್ಕೆ ನಾಲಿಗೆಯನ್ನು ಅಂಟಿಸಲೆಂದು ಸೂಕ್ತವಾದ ಎಲೆಗಾಗಿ ಹುಡುಕಾಟ ನಡೆಸಲು ದೂರ ಹೋದರು. ಅವರು ಎಲೆಯೊಂದಿಗೆ ಹಿಂತಿರುಗಿದಾಗ, ಅವರ ಕುರಿಗಳೆಲ್ಲವೂ ಮಾಯವಾಗಿದ್ದವು.ಆಶ್ಚರ್ಯ ಮತ್ತು ದುಃಖಭರಿತರಾಗಿ ಅಕ್ಕಪಕ್ಕದವರನ್ನು ವಿಚಾರಿಸಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ಆಗ ತಾವೇ ರಚಿಸಿದ ಹುಲಿಯನ್ನು ಕುರಿತು ನೀನು ನಮ್ಮ ಕುರಿಗಳನ್ನು ತಿಂದೆಯಾ ಎಂದು ಕೇಳಿದ್ದಕ್ಕೆ ಅದು ಉತ್ತರರೂಪವಾಗಿ ತನ್ನ ಬಾಯನ್ನು ತೆರೆದು ತೋರಿತು. ಅದು ರಕ್ತಸಿಕ್ತವಾಗಿತ್ತು. ಕೋಪಗೊಂಡ ಅವರು ಹುಲಿಯ ಬಾಯಿಗೆ ನಾಲಿಗೆಯನ್ನು ಅಂಟಿಸದೇ ಅಳುತ್ತ ಮನೆಗಳಿಗೆ ತೆರಳಿದರು. ಅಂದಿನಿಂದ ಬಾಘ ಭೈರವನು ಬಾಯಿ ತೆರೆದುಕೊಂಡೇ ನಿಂತಿದ್ದಾನೆ. ತನಗೊಂದು ನಾಲಿಗೆ ಮಾಡಿಕೊಡಿ ಎಂದು ಎಲ್ಲರನ್ನೂ ಅಂಗಲಾಚುತ್ತಿದ್ದಾನೆ". ಇದು ಇಲ್ಲಿನ ಐತಿಹ್ಯ. ಇದಕ್ಕೆ ಪೂರಕವಾಗಿ ಬಾಘ ಭೈರವನನ್ನು ಅಜಾಜು ವ್ಯಾಘ್ರೇಶ್ವರನೆಂದು ಸ್ಥಳೀಯರು ಕರೆಯುವರು. ಅಜಾದ್ಯ ಎಂದರೆ ಅಜ್ಜಯ್ಯ. ಅಜಾಜು ಎಂದರೆ ಮುತ್ತಜ್ಜನೆಂದು ನೇಪಾಳಿಗರ ಅರ್ಥ. ಇವನನ್ನು ಭೀಮಸೇನ ಭಟ್ಟಾರಕ ಅಥವಾ ಭೀಮೇಶ್ವರನೆಂದೂ ಕರೆಯುವರು. ಭೈರವನ ೬೪ ರೂಪಗಳಲ್ಲದೇ, ಆತನು ಹುಲಿಯ ರೂಪದಲ್ಲಿ ಕಾಣಸಿಗುವುದು ಇಲ್ಲಿ ಮಾತ್ರವೇ. 

ಇದೆಲ್ಲದರಲ್ಲಿ ಸತ್ಯ-ಮಿಥ್ಯಗಳನ್ನು ಅರಸಿ ಹೋದರೆ, ಅದು ನಿರರ್ಥಕ. ಏಕೆಂದರೆ ನಿಜವಾದ ಸ್ವಾರಸ್ಯವಿರುವುದು ನಮ್ಮ ದೇಶದ ದೇವ-ದೇವತೆಯರಿಗೆ ಇರುವ ಇತಿಹಾಸ, ಕಥಾನಕಗಳು, ಆಚರಣೆಯ ವೈವಿಧ್ಯಗಳಲ್ಲಿ. ಅವುಗಳಲ್ಲಿ ರೋಚಕತೆಯಿದೆ, ಕುತೂಹಲವಿದೆ. ಇಂಥ ಪರಂಪರೆ ವಿಶ್ವದ ಇತರ ನಾಗರಿಕತೆಗಳಿಗೆ ಅಪರಿಚಿತ. ಅದು ನಮ್ಮ ದೇಶದ ವಿಶಿಷ್ಟತೆ.


* * * * * * *








1 ಕಾಮೆಂಟ್‌: