ಮಂಗಳವಾರ, ಏಪ್ರಿಲ್ 1, 2014

ಶ್ರೀ ಕಾಲಭೈರವ ದೇವಕಾರ್ಯ ಪೂಜಾ ವಿಧಾನ ಭಾಗ - 2

ಆತ್ಮೀಯ ಓದುಗರೇ,

ಶ್ರೀ ಕಾಲಭೈರವ ದೇವಕಾರ್ಯ ಪೂಜಾ ವಿಧಾನದ ಎರಡನೇ ಕಂತು ಇಲ್ಲಿದೆ. 

ಋಣ ತ್ರಯಗಳು ಎಂಬ ಬಗ್ಗೆ ಕೇಳಿರುತ್ತೀರಿ. ಆ ಋಣಗಳೆಂದರೆ ದೇವ ಋಣ, ಪಿತೃ ಋಣ ಮತ್ತು  ಆಚಾರ್ಯ ಋಣ. ದೇವ ಋಣದ ಸಲ್ಲಿಕೆಗಾಗಿ ಎಂದು ಹಲವಾರು ಪೂಜಾ ವಿಧಾನಗಳಿವೆ. ಪಿತೃ ಋಣವನ್ನು ಅದರ ಅಧಿಕಾರಿಗಳಾದವರು ಯಥಾರೀತಿ ಆಚರಿಸುವುದರ ಮೂಲಕ ಸಲ್ಲಿಸುವರು. ಆಚಾರ್ಯ ಋಣದ ಸಲ್ಲಿಕೆಗೆಂದು ಇರುವ ನಿರ್ದಿಷ್ಟ ಕಾಲ ಉಪಾಕರ್ಮ ವಿಧಿ. ಇದರಲ್ಲಿ ಕರ್ತನು ತನ್ನ ಸ್ವಶಾಖೆಯನ್ನು ಗಮನದಲ್ಲಿರಿಸಿಕೊಂಡು ಋಷಿ ತರ್ಪಣಾದಿಗಳು, ಋಷಿ ಪೂಜೆ ಮುಂತಾದ ಕ್ರಿಯೆಗಳಿಂದ, ವೇದಪುರುಷನಿಗೆ ಹಾಗೂ ಋಷಿವರೇಣ್ಯರಿಗೆ ತನ್ನ ಕೃತಜ್ಞತೆಯನ್ನು ಸಲ್ಲಿಸುವ ಪದ್ಧತಿಯಿದೆ.

ಶ್ರೀ ಕಾಲಭೈರವನಿಗೆಂದೇ ನಿರ್ದಿಷ್ಟವಾದ ಪೂಜಾ ಕ್ರಮದ ಸಂಗ್ರಹ ಇಲ್ಲಿದೆ. ಇದನ್ನು ಹಲವಾರು ಗ್ರಂಥಗಳಿಂದ ಆಯ್ದು ಕ್ರೋಢೀಕರಿಸಲಾಗಿದೆ. ಈಗಾಗಲೇ ತಿಳಿಸಿರುವಂತೆ ಇದನ್ನು ಅನುಕ್ರಮವಾಗಿ ಸಂಗ್ರಹಿಸಿ, ಮುದ್ರಿಸಿಕೊಂಡು ನಿತ್ಯಪೂಜಾ ವಿಧಾನದಲ್ಲಿ ಶ್ರೀ ಕಾಲಭೈರವನ ಆರಾಧಕರು ಬಳಸುವಂತಾದರೆ, ವಹಿಸಿದ ಶ್ರಮ ಸಾರ್ಥಕವಾದೀತೆಂದು ಭಾವಿಸುತ್ತೇನೆ. 

ಇದಲ್ಲದೆ ಶ್ರೀ ಕಾಲಭೈರವನಿಗೆ ಸಂಬಂಧಿಸಿದಂತೆ ಇರುವ ಪಠ್ಯಗಳು, ಮಂತ್ರಗಳು, ಚಿತ್ರಗಳು, ಮಾಹಿತಿಗಳು ತಮ್ಮಲ್ಲಿ ಇರುವುದಾದಲ್ಲಿ, ನನ್ನ ಈ-ಮೇಲ್ ವಿಳಾಸಕ್ಕೆ ಕಳಿಸಿಕೊಡಲು ವಿನಂತಿ. ಅವುಗಳನ್ನು ಈ ಬ್ಲಾಗ್ ನಲ್ಲಿ ಪ್ರಕಟಿಸಲು ಅನುಕೂಲವಾಗುತ್ತದೆ. 








ಶನಿವಾರ, ಮಾರ್ಚ್ 1, 2014

ಶ್ರೀ ಕಾಲಭೈರವ ದೇವಕಾರ್ಯ ಪೂಜಾ ವಿಧಾನ - ಭಾಗ 1



ಇದುವರೆಗೆ  ದೇಶದ ಅನೇಕ ಭಾಗಗಳಲ್ಲಿರುವ ಶ್ರೀ ಕಾಲಭೈರವ ಮಂದಿರಗಳ ಬಗ್ಗೆ, ಅವುಗಳ ಇತಿಹಾಸ ಮತ್ತು ವೈಶಿಷ್ಟ್ಯಗಳನ್ನು ಕುರಿತಂತೆ ಲೇಖನಗಳನ್ನು ಪ್ರಕಟಿಸಿರುವೆ. ಓದುಗರಲ್ಲಿ ಅನೇಕರು ಭೈರವನ ಪೂಜಾ ವಿಧಾನದ ಬಗ್ಗೆ ಬರೆಯಬೇಕೆಂದು ಕೋರಿದ್ದರು. ಹೀಗಾಗಿ ಸಂಚಿಕೆಯಲ್ಲಿ ಶ್ರೀ ಕಾಲಭೈರವನ ಪೂಜಾ ವಿಧಾನವನ್ನು ಒಳಗೊಂಡಿರುವ ಲೇಖನ ಮಾಲೆಯಿದೆ. ಇದರಲ್ಲಿ ಭೈರವ ದೇವರ ಅವತರಣ ಎಂಬ ಭಾಗವು ಹಿಂದೆ ಪ್ರಕಟವಾಗಿದೆಯಾದರೂ, ಇಡೀ ಪುಸ್ತಕದ ಪುಟಗಳನ್ನು ಇಲ್ಲಿ ನೀಡಲಾಗಿದೆ.  ಇವನ್ನು ಅನುಕ್ರಮವಾಗಿ ಪ್ರತಿ ತಿಂಗಳೂ ಪ್ರಕಟಿಸಲಾಗುವುದು. ಇವುಗಳನ್ನು ಗಮನಿಸಿ ಒಂದೆಡೆ ಸಂಗ್ರಹಿಸಿ ಮುದ್ರಿಸಿ ಇಟ್ಟುಕೊಂಡಲ್ಲಿ ಭೈರವನ ಪೂಜಾವಿಧಾನವು ನಿಮಗೆ ದೊರೆತಂತಾಗುತ್ತದೆ

ಕಾಲಭೈರವನಿಗೆ ಸಂಬಂಧಿಸಿದಂತೆ ಪೂಜಾ ಸಾಹಿತ್ಯವು ದಕ್ಷಿಣ ಭಾರತದಲ್ಲಿ ತೀರ ಕಡಿಮೆಯಿದೆ ಎನ್ನಬೇಕು. ಏಕೆಂದರೆ ಆತನ ಭಕ್ತರ ಸಂಖ್ಯೆ ವಿರಳವಾಗಿದೆ. ಆದರೂ ಭೈರವನನ್ನು ಆರಾಧಿಸುವವರು, ಆತನು ಶಿವನ ಮತ್ತೊಂದು ರೂಪವೆಂಬುದನ್ನು ಗ್ರಹಿಸಿ, ಶಿವಾಷ್ಟೋತ್ತರ ಮುಂತಾದ ಸಾಹಿತ್ಯಗಳಿಂದ ಅರ್ಚಿಸುತ್ತಿದ್ದರು. ನಾನು ಗಮನಿಸಿದಂತೆ, ಕಾಲಭೈರವ ಸಹಸ್ರನಾಮದ ಅನೇಕ ಪಾಠಗಳು ಲಭ್ಯವಿದ್ದು, ಅದರಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳು ಇರುವುದನ್ನು ಗಮನಿಸಿದ್ದೇನೆ

ಇಲ್ಲಿ ಸಂಗ್ರಹಿಸಿರುವ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಪಡೆಯಲಾಗಿದ್ದು, ಎಲ್ಲ ಕರ್ತೃಗಳಿಗೆ, ವಿದ್ವಾಂಸರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ವಿಶೇಷತಃ ಕರೈನ್ ಲ್ಯಾಡ್ರೆಕ್, (ಇವರ ಬಗ್ಗೆ ಒಂದು ವಿವರಣಾತ್ಮಕ ಲೇಖನವು ಹಿಂದಿನ ಸಂಚಿಕೆಗಳಲ್ಲಿ ಪ್ರಕಟವಾಗಿದೆ) ಕಾಲಭೈರವನ ಬಗ್ಗೆ ಸಂಶೋಧನೆ ನಡೆಸಿರುವವರಲ್ಲಿ ಅಗ್ರಗಣ್ಯರು. ಅವರು ನಾನು ಬಗ್ಗೆ ತಳೆದ ಆಸಕ್ತಿಯನ್ನು ಗಮನಿಸಿ ಪುಸ್ತಕದಲ್ಲಿರುವ ಹೆಚ್ಚಿನ ಭಾಗವನ್ನು ನನಗೆ ಕಳಿಸಿದ್ದರು. ಆಂಗ್ಲೋ-ರೋಮನ್ ಲಿಪಿಯಲ್ಲಿದ್ದ ಅವರ ಸಂಗ್ರಹಿತ ಸಾಹಿತ್ಯವನ್ನು ಕನ್ನಡಕ್ಕೆ ಲಿಪ್ಯಂತರಣ ಮಾಡಿ, ಪುಸ್ತಕವನ್ನು ಪ್ರಕಟಿಸಿದೆ. ಹೀಗಾಗಿ ಅವರಿಗೆ ವಿಶೇಷ ಕೃತಜ್ಞತೆಗಳು ಸಲ್ಲುತ್ತವೆ

ಇದಲ್ಲದೆ, ಓದುಗರಲ್ಲಿ ಇರಬಹುದಾದ ಸಾಹಿತ್ಯವನ್ನು ನನಗೆ ಕಳಿಸಿದರೆ, ಅದನ್ನೂ ಪ್ರಕಟಿಸಲಾಗುವುದು. ಇಂಥ ಒಂದು ಕ್ರಮದಿಂದ ಕಾಲಭೈರವನಿಗೆ ಸಂಬಂಧಿಸಿದ ಸಾಹಿತ್ಯವನ್ನು ಒಂದೆಡೆ ಕ್ರೋಢೀಕರಿಸಲು ಅನುಕೂಲವಾಗುತ್ತದೆ. ಇದನ್ನು ತಾವು ಗಮನಿಸಿ, ಸಹಕರಿಸುವಿರೆಂದು ಭಾವಿಸುತ್ತೇನೆ.

ಬ್ಲಾಗ್  ಅಂಕಿ-ಅಂಶಗಳ ವಿಭಾಗದಲ್ಲಿ ಕಂಡುಬಂದ ಒಂದು ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ಅದೆಂದರೆ ಕಾಲಭೈರವನ ಬ್ಲಾಗ್ ನ್ನು ಓದುವವರು ವಿಶ್ವದ ಹಲವೆಡೆಯಿದ್ದಾರೆ. ಅಂಥವರು ಬೆಲಾರೆಸ್, ಕೆನಡಾ, ಅಮೆರಿಕಾ, ದಕ್ಷಿಣ ಆಫ್ರಿಕಾ, ಚೀನಾ,  ರಷಿಯಾ, ಉಕ್ರೇನ್ ಮುಂತಾದ ದೇಶಗಳಲ್ಲಿ ಹರಡಿದ್ದಾರೆಂಬುದು ಇದರ ವ್ಯಾಪ್ತಿಯನ್ನು ನೋಡಿದಾಗ ತಿಳಿಯಿತು. 

ಸಂಚಿಕೆಯಲ್ಲಿ ರಕ್ಷಾಪುಟದಿಂದ ಆರಂಭಿಸಿ ಐದನೇ ಪುಟದ ವರೆಗಿನ ಪಠ್ಯವನ್ನು ಪ್ರಕಟಿಸಲಾಗಿದೆ. 






* * * * * * *

  

ಶನಿವಾರ, ಫೆಬ್ರವರಿ 1, 2014

ಯಾಣದ " ಭೈರವ ಶಿಖರ "


ನಮ್ಮ ಬಹುತೇಕ ದೇವರುಗಳು ನೆಲಸಿರುವುದು ಬೆಟ್ಟದ ತುದಿಯಲ್ಲಿ. ಅಂಥ ಪರಿಕಲ್ಪನೆಯ ಹಿಂದೆ ವಿಶೇಷವಾದ ಒಂದು ಉದ್ದೇಶವಿದೆ. ದೇವರನ್ನು ಸಂದರ್ಶಿಸುವುದು ಅಷ್ಟು ಸುಲಭಸಾಧ್ಯವಲ್ಲ, ಅದಕ್ಕೆ ಶ್ರಮ, ಆಸಕ್ತಿ ಮತ್ತು ಭಕ್ತಿಗಳು ಬೇಕು ಎನ್ನುವುದು ಒಂದು ಉದ್ದೇಶವಾದರೆ, ಪ್ರಕೃತಿಯಲ್ಲೇ ಲೀನನಾಗಿರುವ ಆತನನ್ನು ಅಂಥಲ್ಲೇ ನೋಡಬೇಕು, ಇದರಿಂದ ಮನಸ್ಸಿಗೆ ಮುದ, ಎತ್ತರದ ಬೆಟ್ಟವನ್ನು ಹತ್ತಿಬಂದು ಸಾಧಿಸಿದಾಗಿನ ಹೆಮ್ಮೆಗಳು ವ್ಯಕ್ತಿಯ ಆತ್ಮವಿಶ್ವಾಸವನ್ನು ದೃಢಗೊಳಿಸುತ್ತವೆ. ಹೆಚ್ಚಿನಂಶದ ಕಾಲಭೈರವನ ಮಂದಿರಗಳೂ  ಬೆಟ್ಟದ ಮೇಲೆಯೇ ಇರುತ್ತವೆ. ಹೀಗಾಗಿ "ಬೆಟ್ಟಭೈರವ"ನೆಂಬ ಪದವೂ ರೂಢಿಯಲ್ಲಿದೆ.
ಹೀಗೆಯೇ ಕರ್ನಾಟಕದಲ್ಲಿ ಅತ್ಯಂತ ಎತ್ತರದಲ್ಲಿ ನೆಲೆಸಿರುವ ಭೈರವ ಸ್ಥಾನ ಶಿರಸಿಯ ಸಮೀಪದಲ್ಲಿರುವ "ಯಾಣ" ದಲ್ಲಿದೆ. ಯಾಣವು ಚಾರಣಕ್ಕೆ ಪ್ರಸಿದ್ಧವಾದದ್ದು ತೀರ ಇತ್ತೀಚೆಗೆನ್ನಬೇಕು. ಮಾನವನ ಕರ್ತೃತ್ವ ಶಕ್ತಿಗೆ ಸವಾಲೆಂಬ ರೂಪದಲ್ಲಿರುವ ಈ ಪ್ರದೇಶಕ್ಕೆ ಭೇಟಿ ನೀಡುವ ಯಾರಿಗೂ, ಅದು ಪ್ರಕೃತಿಯ ರುದ್ರ ರಮಣೀಯತೆಯನ್ನು ತೋರುವುದರ ಜತೆಗೇ, ದೈವಭಕ್ತಿಯ ಪರೀಕ್ಷೆಗೂ ಸೂಕ್ತ ಸ್ಥಳವೆಂಬ ಭಾವನೆ ಮೂಡುತ್ತದೆ. ಅಲ್ಲಿ ಭೈರವನ ನೆಲೆಯಿರುವುದು ಕೂಡ ಸಾಂಕೇತಿಕ ದೃಷ್ಟಿಯಿಂದ ಮಹತ್ವಪೂರ್ಣವಾದುದು. ಏಕೆಂದರೆ, ಅಲ್ಲಿನ ನಿಸರ್ಗದ ರುದ್ರತೆ, ಕಾಠಿಣ್ಯಗಳ ಸಂಕೇತವನ್ನು ಬಹುಶಃ  ಭೈರವನ ರೂಪವಲ್ಲದೇ ಮತ್ತಾವ ದೇವ ದೇವಿಯರೂ ಸಮರ್ಥವಾಗಿ ಪ್ರತಿನಿಧಿಸಲಾರರು. ಸುಮಾರು 350 ಅಡಿಗಳಷ್ಟು ಎತ್ತರದ ಕಪ್ಪು ಬಂಡೆಗಲ್ಲುಗಳ ತುದಿಯಲ್ಲಿ ಸೀಳು ಗುಹೆಯಾಗಿ ಮಾರ್ಪಾಡಾಗಿದೆ. ಇದೇ ಭೈರವ ಶಿಖರ. ಈ ಗುಹೆಯಲ್ಲಿ ಒಡಮೂಡಿರುವ ಲಿಂಗದ ಮೇಲೆ ನಿರಂತರವಾಗಿ ಜಲಧಾರೆ ಹರಿಯುತ್ತಿದೆ. ನೀರಿನ ಸ್ರೋತವನ್ನು ಕಲ್ಲುಬಂಡೆಗಳ ಯಾವಭಾಗದಲ್ಲೂ ಗುರುತಿಸಲು ಸಾಧ್ಯವಾಗದು. ನಿಸರ್ಗದ ವೈಚಿತ್ರ್ಯಗಳಿಗೆ ಇನ್ನೊಂದು ಉತ್ತಮ ಉದಾಹರಣೆಯಾಗಿ ಯಾಣದ ಕಲ್ಲು ಶಿಖರಗಳು ಆಗಸವನ್ನು ಚುಚ್ಚುವಂತೆ ಅನಾದಿಕಾಲದಿಂದ ನಿಂತಿವೆ.
ಯಾಣಕ್ಕೆ ಪೌರಾಣಿಕ ಮಹತ್ವವೂ ಇದೆ. ಇಲ್ಲಿ ಮೋಹಿನಿ ಭಸ್ಮಾಸುರರ ಕಥೆಯ ವಿವರಣೆಯಿದೆ. ಭಸ್ಮಾಸುರ ಶಿವನಿಂದ ವರಪಡೆದು, ತಾನು ಯಾರ ತಲೆಯ ಮೇಲೆ ಕೈಯಿಡುತ್ತಾನೋ ಅವರಿಗೆ ಸಾವು ನಿಶ್ಚಯವೆಂಬ ವರವನ್ನು ಭಸ್ಮಾಸುರ ಶಿವನಿಂದ ಪಡೆದನಷ್ಟೆ. ಇಲ್ಲಿ ಪ್ರಚಲಿತವಿರುವ ಕಥಾನಕದ ಅನ್ವಯ, ವರ ನೀಡಿದವ ಶಿವ. ಭಸ್ಮಾಸುರನ ವರ ಪ್ರಯೋಗಕ್ಕೆ ಬಲಿಪಶುವಾದದ್ದು "ಭೈರವೇಶ್ವರ"ನೆಂಬ ಶಿವನ ಇನ್ನೊಂದು ರೂಪ. ಆಗ ಮೋಹಿನಿಯ ರೂಪದಲ್ಲಿ ಬಂದು ಅವನನ್ನು ರಕ್ಷಿಸಿದ್ದು ಮಹಾವಿಷ್ಣು. ಕೊನೆಗೂ ಭಸ್ಮಾಸುರ ಭಸ್ಮವಾದ. ಅದರ ಕುರುಹು ಆ ಪ್ರದೇಶದಲ್ಲಿ ಇನ್ನೂ ಇದೆಯೆನ್ನಲು ಸಾಕ್ಷಿಯಾಗಿ ಸುತ್ತಮುತ್ತಲಿನ ವನಪ್ರದೇಶವೆಲ್ಲ ಕಪ್ಪುಬಣ್ಣದ ಬೂದಿಮಣ್ಣಿನಿಂದಲೇ ತುಂಬಿದೆ. ಈ ಎರಡು ಪಾತ್ರಗಳಾದ ಭೈರವ ಮತ್ತು  ಮೋಹಿನಿಯ ಸ್ಮಾರಕವಾಗಿ ಈ ಪ್ರದೇಶದಲ್ಲಿನ ಎರಡು ಎತ್ತರವಾದ ಶಿಖರಗಳನ್ನು "ಭೈರವ ಶಿಖರ" ಮತ್ತು "ಮೋಹಿನಿ ಶಿಖರ"ಗಳೆಂದು ಹೆಸರಿಸಲಾಗಿದೆ. ಒಂದು ಕಾಲಕ್ಕೆ ಹತ್ತುಸಾವಿರ ಜನಸಂಖ್ಯೆಯಿದ್ದ ಎಪ್ಪತ್ತು ಹಳ್ಳಿಗಳ ಯಾಣದಲ್ಲೀಗ ಕೇವಲ ಕೆಲವು ನೂರುಗಳಷ್ಟು ಜನವಸತಿಯಿದೆ. ಅದರಲ್ಲೂ ಪೂಜಾರಿಗಳ ವಂಶಸ್ಧರು ಅಲ್ಲಿ ಸ್ಥಿರವಾಗಿ ಉಳಿದುಕೊಂಡದ್ದನ್ನು ಗಮನಿಸಿದರೆ, ಭೈರವನ ಆರಾಧನೆ ಈ ಪ್ರದೇಶದಲ್ಲಿ ತುಂಬ ಹಿಂದಿನ ಕಾಲದಿಂದಲೂ ನಡೆದದ್ದು ಗೋಚರಿಸುತ್ತದೆ.
ಪ್ರತಿವರ್ಷ ಶಿವರಾತ್ರಿಯಂದು ಅಲ್ಲಿ ವಿಶೇಷ ಉತ್ಸವ ಜರುಗುತ್ತದೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ. ಶಿವನು ಆವಾಸಸ್ಥಳವಾದ ಇಲ್ಲಿ ಪಾದರಕ್ಷೆಗಳನ್ನು ಧರಿಸಿ ನಡೆಯುವುದು ಶಿವನಿಗೆ ಅಪಚಾರ ಮಾಡಿದಂತೆ ಎಂಬ ಭಾವನೆಯಿರುವುದರಿಂದ ಭಕ್ತಾದಿಗಳು ಬರಿಗಾಲಿನಲ್ಲೇ ಬಂದು ತಮ್ಮ ಸೇವೆ ಸಲ್ಲಿಸುತ್ತಾರೆ.  ಶಿವರಾತ್ರಿಯ ದಿನ ಇಲ್ಲಿನ ಭೈರವನ ಅರ್ಚನೆ ಮಾಡಿ, ಸಮೀಪದಲ್ಲೇ ಇರುವ ದಂಡಿತೀರ್ಥದಿಂದ ನೀರನ್ನು ತಂದು ಗೋಕರ್ಣದ ಮಹಾಬಲೇಶ್ವರನಿಗೆ ಅಭಿಷೇಕಮಾಡಿದರೆ ನಿಶೇಷ ಪುಣ್ಯ ಲಭ್ಯವೆಂಬ ನಂಬಿಕೆಯಿದೆ.
"ರೊಕ್ಕ ಇದ್ದರೆ ಗೋಕರ್ಣ, ಸೊಕ್ಕು ಇದ್ದರೆ ಯಾಣ" - ಯಾಣದ ಕುರಿತು ಅನಾದಿಕಾಲದಿಂದ ಇರುವ ಗಾದೆಯು ಅದರ ದುರ್ಗಮತೆಯನ್ನು ಕುರಿತು ಹೇಳುತ್ತದೆ.  ಈಗೇನೋ ಪರಿಸ್ಥಿತಿ ಸುಧಾರಿಸಿರುವುದರಿಂದ ಯಾಣವನ್ನು ತಲುಪಲು ಬಸ್ಸು ಕಾರುಗಳ ಸೌಲಭ್ಯವಿದೆ. ಆದರೆ ದುರ್ಗಮ ಶಿಲಾ ಶಿಖರಗಳನ್ನು ಕಾಲ್ನಡಿಗೆಯಲ್ಲೇ ಹತ್ತಿ ಸಾಗಬೇಕಾಗಿರುವುದರಿಂದ, ಗಾದೆಯ ಮಾತು ಸುಳ್ಳಾಗಿಲ್ಲ ಮತ್ತು ಎಂದಿಗೂ ಸುಳ್ಳಾಗದು ಕೂಡ!.
ಚಿತ್ರಕೃಪೆ : ಇಂಟರ್ನೆಟ್ 

* * * * * * * 

ಬುಧವಾರ, ಜನವರಿ 1, 2014

ಮೂಪೂರಿನ ಭೈರವೇಶ್ವರ ದೇವಾಲಯ

ನಿರಾಕಾರ ಭೈರವೇಶ್ವರ

ಆತ್ಮೀಯ ಓದುಗರೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು 

ಇದುವರೆಗೆ ಪರಿಚಯಿಸಿರುವ ದೇಗುಲಗಳೆಲ್ಲಕ್ಕಿಂತ ವಿಶಿಷ್ಟವಾದುದು ಈ ಮಂದಿರ.  ಇಲ್ಲಿ ಭವ್ಯವಾದ ಶಿಲ್ಪ ಸೌಂದರ್ಯವಾಗಲೀ, ಬೃಹದಾಕಾರದ ವಿಗ್ರಹಗಳಾಗಲೀ ಇಲ್ಲ. ಭೈರವನ ಶಿಲ್ಪವೂ ಇಲ್ಲದ, ನಿರಾಕಾರದ ಸಂಕೇತವಾಗಿರುವ ಇಲ್ಲಿನ ಭೈರವೇಶ್ವರನು ಬಂಡೆಯ ರೂಪದಲ್ಲಿ ಆರಾಧಿತನಾಗುತ್ತಿರುವುದೇ ಇಲ್ಲಿನ ವಿಶೇಷ.  ಆಂಧ್ರ ಪ್ರದೇಶದ ರಾಯಲಸೀಮಾ ಪ್ರಾಂತದಲ್ಲಿರುವ ಈ ದೇವಾಲಯದ ಐತಿಹ್ಯವೂ, ಭೈರವನ ಕುರಿತಾಗಿ ಇರುವ ಕಥಾನಕಗಳಿಗಿಂತ ಭಿನ್ನವಾಗಿದೆ. ೧೩ನೇ ಶತಮಾನದಲ್ಲಿ ಈ ಪ್ರದೇಶವನ್ನು ಕಾಕತೀಯರು ಆಳುತ್ತಿದ್ದರು. ಅವರು ಈ ಭೈರವೇಶ್ವರನ ಉಪಾಸನೆಯನ್ನು ಮಾಡುತ್ತಿದ್ದರೆಂಬುದಕ್ಕೆ ಶಿಲಾಶಾಸನಗಳ ದಾಖಲೆಗಳಿವೆ. 


ಶಿವನು ಭಸ್ಮಾಸುರನ ತಪಸ್ಸಿಗೆ ಮೆಚ್ಚಿ ವರನೀಡಿದ. ಆ ಕೃತಜ್ಞತೆಯ ಸಂಕೇತವಾಗಿ ಭಸ್ಮಾಸುರನು ಈ ಸ್ಥಳದಲ್ಲಿ ಭೈರವೇಶ್ವರನೆಂಬ ಹೆಸರಿನಲ್ಲಿ ಸ್ವಲ್ಪಕಾಲ ಇಲ್ಲಿ ನೆಲೆಸಿದನಂತೆ. ಮುಂದೆ ಇದೇ ಸ್ಥಳದಲ್ಲಿ ಭಸ್ಮಾಸುರನ ಅಂತ್ಯವಾಗುತ್ತದೆಂದು ತಿಳಿದಿದ್ದ ವಿಷ್ಣುವು ಮೋಹಿನಿಯ ಅವತಾರ ತಳೆದು ಆತನನ್ನು ಸಂಹರಿಸಿದನು. ಹೀಗಾಗಿ ಬೆಟ್ಟದ ಮೇಲಿರುವ ಈ ಸ್ಥಳವು ಮೋಹನಗಿರಿ ಎಂದು ಪ್ರಸಿದ್ಧವಾದರೂ, ಆಡುಮಾತಿನಲ್ಲಿ ಅಪಭ್ರಂಶಗೊಂಡು ಇದೀಗ ಮೂಪೂರಿ ಎಂದು ಬದಲಾಗಿದೆ.

ಬಂಡೆಯ ರೂಪದಲ್ಲಿದ್ದ ಭಸ್ಮಾಸುರನು ಪ್ರತೀ ವರ್ಷವೂ ಬೆಳೆಯುತ್ತಿದ್ದನಂತೆ. ಆತನಿಗೊಬ್ಬ ಸೋದರಿ. ಅವಳ ಹೆಸರು ಅಕ್ಕ ಪಪ್ಪೂರಮ್ಮ ಎಂದಿತ್ತು. ಆಕೆಯು ಈ ಅಸುರನು ಹೀಗೇ ಬೆಳೆದು ಲೋಕ ಕಂಟಕನಾಗುತ್ತಾನೆಂದು ತಿಳಿದು, ಅವನ ಬೆಳವಣಿಗೆಯನ್ನು ಮೊಟಕುಗೊಳಿಸಲು ಆತನ ತಲೆಯಮೇಲೆ ಕೈಯಿಟ್ಟಳು. ಇದರಿಂದ ಕ್ರುದ್ಧನಾದ ಭೈರವರೂಪೀ ಭಸ್ಮಾಸುರನು ಆಕೆಯನ್ನು ಸ್ಥಳಬಿಟ್ಟು ಹೋಗುವಂತೆ ಆದೇಶಿಸಿದನು. ನಂತರ ಆಕೆಯು ಬೆಟ್ಟದ ತಪ್ಪಲಿನಲ್ಲಿ ನೆಲೆಗೊಂಡಳು. ಇಂದಿಗೂ ಆಕೆಯ ದರ್ಶನ ಪಡೆಯದೇ ಭೈರವನನ್ನು ದರ್ಶಿಸುವುದು ಫಲ ನೀಡುವುದಿಲ್ಲವೆಂಬ ನಂಬಿಕೆ ಆಚರಣೆಯಲ್ಲಿದೆ. ಇತ್ತೀಚೆಗೆ ನಡೆದ ಮೌಢ್ಯ ತಡೆ ವಿಧೇಯಕದ ಹಿನ್ನೆಲೆಯಲ್ಲಿ ಇಂಥ ಕಥೆಗಳನ್ನು ವಿಶ್ಲೇಷಿಸಲು ಹೊರಟರೆ, ಇದು ಮೌಢ್ಯವೆಂದೇ ಕಂಡೀತು. ಆದರೆ ಇವೆಲ್ಲ ಯಾವ ವಿಶ್ಲೇಷಣೆಯನ್ನೂ, ಸಾಬೀತನ್ನೂ ನಿರೀಕ್ಷಿಸುವುದಿಲ್ಲ. ಜನಮಾನಸದಲ್ಲಿ ನೆಲೆ ನಿಂತ ಇಂಥ ಕಥಾನಕಗಳೇ ಅಲ್ಲಿನ ದೇಗುಲಗಳನ್ನು ಶ್ರದ್ಧಾಕೇಂದ್ರಗಳನ್ನಾಗಿ ಮಾಡಿವೆ, ಪರಂಪರೆಯಂತೆ ಮುಂದುವರೆಯುತ್ತಿವೆ.

ಕಡಪಾ ಜಿಲ್ಲೆಯ ವೇಮುಲ ಮಂಡಲಕ್ಕೆ ಸೇರಿದ ಈ ಪ್ರದೇಶವು ನದಿಯಿಂದ ಸುತ್ತುವರೆದ ಗುಡ್ಡದ ಮೇಲಿದೆ. ತಪ್ಪಲಿನಲ್ಲಿ ನಲ್ಲಚಿರುವಪಲ್ಲಿ, ಕೊಂಡಾರೆಡ್ಡಿಪಲ್ಲಿ ಮುಂತಾದ ಹಳ್ಳಿಗಳಿವೆ. ಇವುಗಳನ್ನು ಪುಲಿವೆಂದುಲ ಪಟ್ಟಣದಿಂದ ಬಸ್ ಮೂಲಕ ತಲುಪಬಹುದು. ಮೊಯಿಲ್ ಚೆರುವ ಅಥವಾ ನರೇಪಲ್ಲಿಯೆಂಬ ಗ್ರಾಮಗಳ ಮೂಲಕವೂ ೩-೪ ಕಿ.ಮೀ. ಹಾದಿಯನ್ನು ನಡೆದು ತಲುಪಬಹುದು. ಗುಡ್ಡದ ಮೇಲೆ ಬಸ್ ಸಂಚರಿಸುವಂತೆ ರಸ್ತೆಯನ್ನೂ ಮಾಡಲಾಗಿದೆ. ಶತಮಾನಗಳ ಹಿಂದಿನಿಂದಲೂ ಆಂಧ್ರ ಮತ್ತು ತಮಿಳುನಾಡಿನ ಭಕ್ತರು ಈ ದೇಗುಲವನ್ನು ಸಂದರ್ಶಿಸುತ್ತಿದ್ದಾರೆ. ವಿಷ್ಣುವಿನ ಕಥಾನಕದ ಹಿನ್ನೆಲೆಯಿರುವುದರಿಂದಲೋ ಏನೋ, ಕೇರಳದ ಶಬರಿಮಲೆಯ ಯಾತ್ರಿಕರು ಇಲ್ಲಿಂದ ಇರುಮುಡಿ ಹೊತ್ತು ಸಾಗುವ ಹರಕೆಯ ಸಂಪ್ರದಾಯವು ಹಿಂದಿನಿಂದಲೂ ರೂಢಿಯಲ್ಲಿದೆ. ಆಂಧ್ರಪ್ರದೇಶದ ಸರಕಾರದ ನೆರೆವಿನಿಂದ ಇತ್ತೀಚೆಗೆ ದೇಗುಲವನ್ನು ನವೀಕರಿಸಲಾಗಿದ್ದು, ಗಾಳಿಗೋಪುರ, ಕಲ್ಯಾಣಮಂಟಪಗಳ ನಿರ್ಮಾಣವನ್ನು ಕೈಗೊಳ್ಳಲಾಗಿದೆ. ಇತ್ತೀಚೆಗೆ ಭೈರವೇಶ್ವರನ ಕಥಾನಕವನ್ನು ವಿವರಿಸುವ ಸುಪ್ರಭಾತದ ಧ್ವನಿಮುದ್ರಿಕೆಯನ್ನೂ ಬಿಡುಗಡೆಮಾಡಲಾಗಿದೆ.

* * * * * * *





ಸೋಮವಾರ, ಡಿಸೆಂಬರ್ 2, 2013

ಕೀರ್ತಿಪುರದ ಬಾಘ ಭೈರವ ಮಂದಿರ

ಭೈರವನ ವಿವಿಧ ರೂಪಗಳ ಚಿತ್ರಣ 

ಈ ದೇವಾಲಯದ ಹೆಸರನ್ನು ನನ್ನ ಹಿಂದಿನ ಲೇಖನಗಳಲ್ಲಿ ಭಗ ಭೈರವನೆಂದು ಪ್ರಸ್ತಾಪಿಸಿದ್ದೇನೆ. ಆದರೆ ಆ ಪ್ರಯೋಗ ತಪ್ಪು ಎಂದು ತಿಳಿದುದು ಇತ್ತೀಚೆಗೆ. ಅಂತರಜಾಲದಲ್ಲಿ ಲೇಖನವೊಂದನ್ನು ಓದುತ್ತಿದ್ದಾಗ ದೊರೆತ ಮಾಹಿತಿಗಳನ್ನು ನಿಮ್ಮ ಓದಿಗೆಂದು ಇಲ್ಲಿ ನೀಡಿದ್ದೇನೆ. ತುಂಬ ಆಸಕ್ತಿಕರ ಮತ್ತು ಐತಿಹಾಸಿಕ ಅಂಶಗಳನ್ನು ಒಳಗೊಂಡಿರುವ ಈ ಭಾಗ ನಿಮಗೆ ಇಷ್ಟವಾದೀತೆಂದು ಭಾವಿಸುತ್ತೇನೆ.


ವ್ಯಾಘ್ರ ಭೈರವ 
ಭಗ ಭೈರವನೆಂಬ ಪ್ರಯೋಗ ತಪ್ಪು ಏಕೆಂದರೆ, ಇಲ್ಲಿನ ಭೈರವ ಹುಲಿ ಭೈರವ. ಎಂದರೆ ಹಿಂದಿಯಲ್ಲಿ ಬಾಘ್ ಭೈರವ. ಇದು ನೇಪಾಳದ ಕೀರ್ತಿಪುರದಲ್ಲಿದೆ. ಇದು ಅಲ್ಲಿನ ಅತ್ಯಂತ ಪುರಾತನ ಮಂದಿರ. ಇದನ್ನು ಯಾರು, ಯಾವಾಗ, ಯಾವ ಉದ್ದೇಶಕ್ಕೆ ನಿರ್ಮಿಸಿದರೆಂಬ ಬಗ್ಗೆ ಮಾಹಿತಿ ಕಡಿಮೆ. ಆದರೂ ಅಂದಿನ ರಾಜರ ಐತಿಹಾಸಿಕ ವಂಶಾವಳಿಗಳನ್ನು ಅವಲೋಕಿಸಿದರೆ, ಕೀರ್ತಿಪುರದ ಅರಸು ಗೋಪಾಲರಾಜನ ವಂಶಾವಳಿಯಲ್ಲಿ ಬಂದ ಎರಡನೇ ಶಿವರಾಜನೆನ್ನುವವನು ಇದರ ನಿರ್ಮಾತೃವೆಂದು ಹೇಳಬಹುದು. ಈತನು ಕ್ರಿ.ಶ. ೧೦೯೯ರಿಂದ ೧೧೨೬ರವರೆಗೆ ಆಳ್ವಿಕೆ ನಡೆಸಿದನು. 

ಬಾಘ ಭೈರವ ಮೂರ್ತಿಯು ಶಿಲಾಮೂರ್ತಿಯಲ್ಲ. ಅದು ಜೇಡಿ ಮಣ್ಣಿನಿಂದ ತಯಾರಿಸಿದ್ದು. ಚತುರ್ಮಾನ ದ್ವಾರದ ನಾಗರಿಕನೊಬ್ಬನು, ಕ್ರಿ.ಶ. ೧೯೨೯ರವರೆಗೆ ಆಳಿದ ಚಂದ್ರ ಶುಂಸೇರನ ಆಳ್ವಿಕೆಯ ಕಾಲದಲ್ಲಿ ನೀಡಿದ ಬೆಳ್ಳಿಯ ಕವಚದಿಂದ ಈ ಮುಖವನ್ನು ಅಲಂಕರಿಸಲಾಗುತ್ತದೆ. ಜೇಡಿಯ ಮಣ್ಣಿನ ವಿಗ್ರಹವಾದ್ದರಿಂದ ಇದು ಆಗಾಗ್ಗೆ ವಿರೂಪಗೊಳ್ಳುವುದು ಸಹಜ. ಈ ದೇವನನ್ನು ಹಿಂದೂಗಳು, ಬೌದ್ಧರು ಸಮಾನವಾಗಿ ಆದರಿಸುವುದರಿಂದ, ಇದು ವಿರೂಪಗೊಂಡಾಗ ದುರಸ್ತಿಗೊಳಿಸುತ್ತಾರೆ. ಹೀಗೆ ನಿರ್ಮಿಸುವಾಗ ಇದಕ್ಕೆ ಬೇಕಿರುವ ಜೇಡಿಮಣ್ಣನ್ನು ಪಕನಜೋಗ್ ಸಮೀಪವಿರುವ ತಾಂತ್ರಿಕ ಮಂದಿರಗಳ ಆವರಣದಿಂದ, ನಿಗದಿಪಡಿಸಿದ ಏಳುಸ್ಥಳಗಳಿಂದ ಆಯ್ದುಕೊಳ್ಳಲಾಗುವುದು. ಈ ಪ್ರಕ್ರಿಯೆಯು ಪ್ರತಿ ೨೦ ಅಥವಾ ೩೦ ವರ್ಷಗಳಿಗೆ ಒಂದು ಬಾರಿಯಂತೆ ನಿರಂತರವಾಗಿ ನಡೆದುಬಂದಿದೆ. 

ಬಾಘ ಭೈರವನ ಆರಾಧನೆಯಲ್ಲಿ ಪಂಚ ಮ ಕಾರಗಳಿಗೆ ಮಹತ್ವವಿದೆ. ಅವೆಂದರೆ ಮದ್ಯ, ಮಾನಿನಿ, ಮುದ್ರಾ, ಮೈಥುನ  ಮತ್ತು  ಮಾಂಸ. ಈ ಎಲ್ಲ ನಿವೇದನೆಗಳನ್ನು ಗರ್ಭಗೃಹದಲ್ಲಿ ಮಾಡದೇ, ಪಕ್ಕದಲ್ಲಿ ಇರುವ ಕಿಟಕಿಯ ಪಕ್ಕದ ಬಲಿಪೀಠದಲ್ಲಿ ಮಾಡಲಾಗುವುದು. ಈ  ದೇವಾಲಯದ ಬಾಹ್ಯ ರಚನೆಯು ಬೌದ್ಧವಿಹಾರಗಳನ್ನು ಹೋಲುತ್ತದೆ. ಇದು ಮೂರು ಮಹಡಿಗಳನ್ನು ಒಳಗೊಂಡಿದ್ದು, ಮೊದಲ ಎರಡು ಮಹಡಿಗಳನ್ನು ಸುಟ್ಟ ಹೆಂಚಿನಿಂದ ಮುಚ್ಚಲಾಗಿದ್ದರೆ, ಮೇಲಿನ ಮಾಡು ಲೋಹದ ತಗಡುಗಳಿಂದ ಮುಚ್ಚಲ್ಪಟ್ಟಿದೆ. ಇವುಗಳ ಇಳಿಜಾರಾದ ಮಾಡುಗಳ ಅಂಚಿನಲ್ಲಿ ಅಷ್ಟಭೈರವರು, ಅಷ್ಟಮಾತೃಕೆಯರು ಮತ್ತು ಗರುಡನಾರಾಯಣ ಹಾಗೂ ಅವನ ಸಹವರ್ತಿಗಳ ವಿಗ್ರಹಗಳಿಂದ ಅಲಂಕರಿಸಲಾಗಿದೆ. ಭೈರವನ ಆರಾಧನೆಯಲ್ಲಿ ಎಂಟು ಮತ್ತು ಅದರ ಗುಣಕ ಸಂಖ್ಯೆಗಳಿಗೆ ಪ್ರಾಧಾನ್ಯವಿದೆ.

ನೇಪಾಳ ಕೀರ್ತಿಪುರದ ಬಾಘ್ ಭೈರವ ಮಂದಿರ 

ಈ ದೇವಾಲಯದ ಬಗ್ಗೆ ಐತಿಹಾಸಿಕ ಸಾಕ್ಷ್ಯಾಧಾರಗಳಿರುವುದು ತೀರ ಕಡಿಮೆ. ಇದರ ಜೀರ್ಣೋದ್ಧಾರದ ಮೊದಲ ದಾಖಲೆಯೆಂದರೆ, ಜಗತ್ ಪಾಲ ವರ್ಮನೆಂಬ ಮಹಾಪಾತ್ರರಿಗೆ ಸಂಬಂಧಿಸಿದೆ. ಈ ಶಾಸನದ ಅನ್ವಯ : "  ೬೩೫ನೇ ವರ್ಷದ ಕೃಷ್ಣಪಕ್ಷ ಚತುರ್ಥಿ, ಸೋಮವಾರ, ಪುನರ್ವಸು ನಕ್ಷತ್ರವಿರುವ ಈ ಶುಭದಿನದಂದು, ಸೂರ್ಯನು ಗುರುವಿನ ರಾಶಿಯಲ್ಲಿ ಮತ್ತು ಚಂದ್ರನು ಕರ್ಕಾಟಕ ರಾಶಿಯಲ್ಲಿರುವಾಗ ಈ ವ್ಯಾಘ್ರೇಶ್ವರನ ದೇವಾಲಯದ ಜೀರ್ಣೋದ್ಧಾರ ಕಾರ್ಯವು ನಡೆದುದು. ವೇದೋಕ್ತವಾದ ದಶಕರ್ಮಗಳು, ಪಿಂಡವಹಾರದ ಮುಂದೆ ದೀಪವನ್ನು ಬೆಳಗಲಾಯಿತು. . ಈ ಯಜ್ಞದ ಯಾಜಮಾನ್ಯವನ್ನು ಮಣಿಂಗಲದ ಜಗತ್ಪಾಲ ವರ್ಮ ಮಹಾಪಾತ್ರರು ನಿರ್ವಹಿಸಿದರು". 

೮೭೦ನೇ ಇಸವಿಯ ಮತ್ತೊಂದು ತಾಮ್ರ ಶಾಸನದಲ್ಲಿ, ದೇವಾಲಯದ ಉತ್ತರಭಾಗದ ಕಾಡನ್ನು ಯಾರೂ ಕಡಿಯಬಾರದೆಂದೂ, ಹಾಗೆ ಮಾಡಿದವರಿಗೆ ಹನ್ನೆರಡು ರೂಪಾಯಿಗಳ ದಂಡವನ್ನು ವಿಧಿಸುವ ಬಗ್ಗೆ ಉಲ್ಲೇಖವಿದೆ. ಈ ಮಂದಿರಕ್ಕೆ ಹಲವಾರು ಬಾರಿ ಚಿನ್ನದ ಲೇಪನವುಳ್ಳ ತಗಡುಗಳನ್ನು ಹೊದಿಸಿರುವ ಬಗ್ಗೆ, ಹಿತ್ತಾಳೆ, ತಾಮ್ರದ ಕವಚಗಳನ್ನು ನಗರದ ಅನೇಕ ನಾಗರಿಕರು ಮಾಡಿಸಿಕೊಟ್ಟಿರುವ ಬಗ್ಗೆ ಮಾಹಿತಿಗಳಿವೆ. ೧೯೬೭ರಲ್ಲಿ ಇಲ್ಲಿ ನೆಲಕ್ಕೆ ಹಾಸಿದ್ದ ಲೋಹದ ತಗಡುಗಳನ್ನು ತೆಗೆದು, ಗೋದಾವರೀ ಅಮೃತಶಿಲೆಯನ್ನು ಹಾಸಲಾಗಿರುವುದೇ ಕೊನೆಯ ಜೀರ್ಣೋದ್ಧಾರದ ಕಾರ್ಯ.

ಹುಲಿ ಭೈರವನಿಗೆ ಹುಲಿಗಳೇ ದ್ವಾರಪಾಲಕರು 

ಸಾಧಾರಣವಾಗಿ ಎಲ್ಲ ದೇಗುಲಗಳ ಗರ್ಭಗೃಹ ಚೌಕಾಕಾರದಲ್ಲಿರುತ್ತದೆ. ಆದರೆ ಭೈರವ ದೇವಾಲಯಗಳ ಗರ್ಭಗೃಹಗಳು ಆಯತಾಕಾರದಲ್ಲಿರುವುದೇ ಅದರ ವಿಶೇಷ ಲಕ್ಷಣ. ಭೈರವಿಯ ಮಂದಿರಗಳು ಚಚ್ಚೌಕದಲ್ಲೇ ಇರುತ್ತವೆ. ಈಗ ಬಾಘ ಭೈರವನೆಂಬ ಹೆಸರು ಬರಲು ಕಾರಣವಾದ ನೇಪಾಳದಲ್ಲಿ ಪ್ರಚಲಿತವಿರುವ ಕತೆಯನ್ನಿಷ್ಟು ಗಮನಿಸೋಣ. "ಒಂದಾನೊಂದು ಕಾಲದಲ್ಲಿ ಕೀರ್ತಿಪುರದ ಕುರಿಗಾಹಿ ಹೆಣ್ಣುಮಕ್ಕಳು ಊರಿನ ಸಮೀಪದ ಬೆಟ್ಟದ ತಪ್ಪಲಿನಲ್ಲಿ ಕುರಿ ಮೇಯಿಸುತ್ತಿದ್ದರು. ಅದರ ನಡುವೆ ಆಟಪಾಟಗಳೂ ಇರುತ್ತಿದ್ದವು.ಒಮ್ಮೆ ಜೇಡಿಮಣ್ಣಿನಿಂದ ಒಂದು ಹುಲಿಯ ಆಕೃತಿಯನ್ನು ತಯಾರಿಸಿದರು. ಅದಕ್ಕೆ ನಾಲಿಗೆಯನ್ನು ಅಂಟಿಸಲೆಂದು ಸೂಕ್ತವಾದ ಎಲೆಗಾಗಿ ಹುಡುಕಾಟ ನಡೆಸಲು ದೂರ ಹೋದರು. ಅವರು ಎಲೆಯೊಂದಿಗೆ ಹಿಂತಿರುಗಿದಾಗ, ಅವರ ಕುರಿಗಳೆಲ್ಲವೂ ಮಾಯವಾಗಿದ್ದವು.ಆಶ್ಚರ್ಯ ಮತ್ತು ದುಃಖಭರಿತರಾಗಿ ಅಕ್ಕಪಕ್ಕದವರನ್ನು ವಿಚಾರಿಸಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ಆಗ ತಾವೇ ರಚಿಸಿದ ಹುಲಿಯನ್ನು ಕುರಿತು ನೀನು ನಮ್ಮ ಕುರಿಗಳನ್ನು ತಿಂದೆಯಾ ಎಂದು ಕೇಳಿದ್ದಕ್ಕೆ ಅದು ಉತ್ತರರೂಪವಾಗಿ ತನ್ನ ಬಾಯನ್ನು ತೆರೆದು ತೋರಿತು. ಅದು ರಕ್ತಸಿಕ್ತವಾಗಿತ್ತು. ಕೋಪಗೊಂಡ ಅವರು ಹುಲಿಯ ಬಾಯಿಗೆ ನಾಲಿಗೆಯನ್ನು ಅಂಟಿಸದೇ ಅಳುತ್ತ ಮನೆಗಳಿಗೆ ತೆರಳಿದರು. ಅಂದಿನಿಂದ ಬಾಘ ಭೈರವನು ಬಾಯಿ ತೆರೆದುಕೊಂಡೇ ನಿಂತಿದ್ದಾನೆ. ತನಗೊಂದು ನಾಲಿಗೆ ಮಾಡಿಕೊಡಿ ಎಂದು ಎಲ್ಲರನ್ನೂ ಅಂಗಲಾಚುತ್ತಿದ್ದಾನೆ". ಇದು ಇಲ್ಲಿನ ಐತಿಹ್ಯ. ಇದಕ್ಕೆ ಪೂರಕವಾಗಿ ಬಾಘ ಭೈರವನನ್ನು ಅಜಾಜು ವ್ಯಾಘ್ರೇಶ್ವರನೆಂದು ಸ್ಥಳೀಯರು ಕರೆಯುವರು. ಅಜಾದ್ಯ ಎಂದರೆ ಅಜ್ಜಯ್ಯ. ಅಜಾಜು ಎಂದರೆ ಮುತ್ತಜ್ಜನೆಂದು ನೇಪಾಳಿಗರ ಅರ್ಥ. ಇವನನ್ನು ಭೀಮಸೇನ ಭಟ್ಟಾರಕ ಅಥವಾ ಭೀಮೇಶ್ವರನೆಂದೂ ಕರೆಯುವರು. ಭೈರವನ ೬೪ ರೂಪಗಳಲ್ಲದೇ, ಆತನು ಹುಲಿಯ ರೂಪದಲ್ಲಿ ಕಾಣಸಿಗುವುದು ಇಲ್ಲಿ ಮಾತ್ರವೇ. 

ಇದೆಲ್ಲದರಲ್ಲಿ ಸತ್ಯ-ಮಿಥ್ಯಗಳನ್ನು ಅರಸಿ ಹೋದರೆ, ಅದು ನಿರರ್ಥಕ. ಏಕೆಂದರೆ ನಿಜವಾದ ಸ್ವಾರಸ್ಯವಿರುವುದು ನಮ್ಮ ದೇಶದ ದೇವ-ದೇವತೆಯರಿಗೆ ಇರುವ ಇತಿಹಾಸ, ಕಥಾನಕಗಳು, ಆಚರಣೆಯ ವೈವಿಧ್ಯಗಳಲ್ಲಿ. ಅವುಗಳಲ್ಲಿ ರೋಚಕತೆಯಿದೆ, ಕುತೂಹಲವಿದೆ. ಇಂಥ ಪರಂಪರೆ ವಿಶ್ವದ ಇತರ ನಾಗರಿಕತೆಗಳಿಗೆ ಅಪರಿಚಿತ. ಅದು ನಮ್ಮ ದೇಶದ ವಿಶಿಷ್ಟತೆ.


* * * * * * *








ಮಂಗಳವಾರ, ಅಕ್ಟೋಬರ್ 1, 2013

ದೇವತೆಗಳೂ - ಶ್ವಾನ ಸಾಂಗತ್ಯವೂ


ದೇವತೆಗಳೂ - ಶ್ವಾನ ಸಾಂಗತ್ಯವೂ

ಹಿಂದಿನ ಸಂಚಿಕೆಯೊಂದರಲ್ಲಿ ಕಾಲಭೈರವನ ಜತೆಗೆ ನಾಯಿಯ ಸಾಂಗತ್ಯ ಹೇಗೆ ಬಂದಿತು ಎಂದು ಪ್ರಸ್ತಾಪಿಸಿದ್ದೆ. ಈ ವಿಷಯದ ಕುರಿತು ನನ್ನ ಅನ್ವೇಷಣೆ ಬೇರೊಂದೇ ದಿಕ್ಕಿಗೆ ಕರೆದೊಯ್ಯಿತು. ಕಾಲಭೈರವನಲ್ಲದೆ ನಮ್ಮ ಇತರ ದೇವತೆಗಳೂ ಪ್ರಾಣಿಗಳನ್ನು ವಾಹನವನ್ನಾಗಿ ಹೊಂದಿರುವರು. ಅಂಥ ಸಂಗತಿಯ ಬಗ್ಗೆ ಮೂಡಿದ ವಿಚಾರಗಳ ಸಂಗ್ರಹವನ್ನು ನಿಮ್ಮ ಓದಿಗೆಂದು ಇಲ್ಲಿ ನೀಡಿದ್ದೇನೆ. 

ಆರಂಭದಲ್ಲಿ ಗಣಪತಿಯನ್ನು ಸ್ಮರಿಸುವುದು ವಾಡಿಕೆ. ಹೀಗಾಗಿ ಗಣಪತಿಯ ವಾಹನ ಮೂಷಕ ಅಥವಾ ಇಲಿ. ಸಕಲ ಜೀವಗಳನ್ನು ಪೋಷಿಸುವ ದೇವತೆಗಳು, ಮನುಷ್ಯ, ಪ್ರಾಣಿ, ಸಸ್ಯವರ್ಗ ಎಂದೆಲ್ಲ ಭೇದ-ಭಾವ ಮಾಡಲಾಗದು. ಭಾರೀ ಕಾಯದ ಗಣೇಶ ಅದು ಹೇಗೆ ಒಂದು ಇಲಿಯನ್ನು ತನ್ನ ವಾಹನವನ್ನಾಗಿಸಿಕೊಳ್ಳಲು ಸಾಧ್ಯ ಎಂದೆಲ್ಲ ತರ್ಕಿಸಲಾಗದು. ಒಂದು ತರ್ಕದಂತೆ ಗಣೇಶನೇ ವಿನೋದದ ಸಂಕೇತವಾಗಿರುವಾಗ ಇಲಿ-ವಾಹನವೂ ಅದರ ಒಂದು ಅಂಗ ಎಂದು ತಿಳಿಯುವುದೇ ಸರಿಯಾದೀತು. ವನ ತಂದೆ ಶಿವ. ಆತನ ವಾಹನ ನಂದಿ. ಶಿವನ ಇನ್ನೋರ್ವ ಮಗ ಸ್ಕಂದ ಅಥವಾ ಷಣ್ಮುಖನ ವಾಹನ ನವಿಲು. ಶಿವನ ಪತ್ನಿಯ ವಾಹನ ಹುಲಿ. ತ್ರಿಮೂರ್ತಿಗಳಲ್ಲಿ ಓರ್ವನಾದ ವಿಷ್ಣುವಿನ ವಾಹನ ಗರುಡ. ಆತನ ಪತ್ನಿಯ ವಾಹನ ಗೂಬೆ. ಬಹಳ ಜನರಿಗೆ ತಿಳಿಯದ ಸಂಗತಿಯಿದು. ಬ್ರಹ್ಮನ ಪತ್ನಿ ಸರಸ್ವತಿ ಹಂಸವಾಹಿನಿ. ಎಲ್ಲರಿಗೂ ಜೀವಕಾರುಣ್ಯ ಮುಖ್ಯವೆನ್ನುವುದಷ್ಟೇ ಸಂದೇಶ.

ಹೀಗೆ ವಿವಿಧ ದೇವತೆಗಳು ಪ್ರಾಣಿಗಳನ್ನು ತಮ್ಮ ವಾಹನ ವನ್ನಾಗಿಸಿಕೊಂಡಿರುವಂತೆ, ಕಾಲಭೈರವನಿಗೆ ನಾಯಿಯ ಸಾಂಗತ್ಯವಿದೆ. ಇದನ್ನೇ ಅವನನ್ನು ಕುರಿತಾದ ಧ್ಯಾನಶ್ಲೋಕದಲ್ಲಿ ಹೀಗೆ ಹೇಳಲಾಗಿದೆ 

ನಗ್ನರೂಪಂ ತ್ರಿನೇತ್ರಂ ಚ ಸರ್ಪಾಭರಣ ಭೂಷಿತಂ |
ರತ್ನಕುಂಡಲ ಸಂಯುಕ್ತಂ ಶಿರೋಮಾಲಾ ವಿಭೂಷಿತಂ  ||
ಖಡ್ಗಂ ಶೂಲಂ ಕಪಾಲಂ ಚ ಡಮರುಂ ಭೀಮ ದಂಷ್ಟ್ರಕಂ |
ಬಿಭ್ರಾಣಂ ಶುನಕಾರೂಢಂ ಕ್ಷೇತ್ರಪಾಲಂ ಅಹಂ ಭಜೇ ||

ಇಲ್ಲಿ ಆತನು ಶುನಕಾರೂಢಂ, ಎಂದರೆ ನಾಯಿಯ ಮೇಲೆ ಕುಳಿತಿರುವವನು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹಾಗೊಮ್ಮೆ ನಾಯಿಯ ಮೇಲೆ ಕುಳಿತಿರದ ಕಾಲಭೈರವನ ಬಹುತೇಕ ಶಿಲ್ಪಗಳಲ್ಲಿ,  ಕಾಲಭೈರವನು ಹಿಡಿದಿರುವ ರುಂಡದಿಂದ ಹನಿಯುತ್ತಿರುವ ರಕ್ತವನ್ನು ನೆಕ್ಕಲು ಯತ್ನಿಸುತ್ತಿರುವ ನಾಯಿಯೊಂದು ಕಂಡುಬರುತ್ತದೆ.  ನಾಯಿಗಳ ಯೋಗಕ್ಷೇಮ ನೋಡಿಕೊಳ್ಳುವುದು ಕೂಡ ಕಾಲಭೈರವನ ಸೇವೆಮಾಡಿದಂತೆ ಎಂಬ ನಂಬಿಕೆಯಿದೆ. ಕಾಶಿಕ್ಷೇತ್ರದಲ್ಲಿ  ಶ್ರದ್ಧಾಳುಗಳು ವಿಶ್ವನಾಥ ಮಂದಿರದ ಆವರಣದಲ್ಲಿ ತಿರುಗುವ ೧೧ ನಾಯಿಗಳಿಗೆ ಸಿಹಿತಿಂಡಿಗಳನ್ನು ದಿನವೂ ಅರ್ಪಿಸುವ ಪರಿಪಾಠವನ್ನು ಇಂದಿಗೂ ಕಾಣಬಹುದು.  


ಶಿವನ ಇನ್ನೊಂದು ರೂಪ ಖಂಡೋಬಾ. ಈತನ ಪೂಜೆ, ಆರಾಧನೆಗಳು ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಚಲಿತವಿದೆ. ಖಂಡೋಬಾನ ವಾಹನ ಕೂಡ ನಾಯಿಯೇ. ಇದೇ ಪ್ರಭಾವಕ್ಕೆ ಒಳಗಾಗಿರುವ ಖಂಡೋಬಾನ ಕೆಲವು ಶಿಲ್ಪಗಳಲ್ಲಿ ಆತನು ಕುದುರೆಯ ಮೇಲೆ ಕುಳಿತಿರುವಂತೆಯೂ ಚಿತ್ರಿಸಲಾಗಿದೆ.  ಇದಕ್ಕೆ ಪೂರಕವಾದ ಒಂದು ವಿಸ್ತೃತ  ಲೇಖನ ಈ ಬ್ಲಾಗಿನ ಸಂಚಿಕೆಯಲ್ಲಿದೆ.   
ಕಾಲಭೈರವನ ಏಕೈಕ ದೊಡ್ಡ ಕ್ಷೇತ್ರವಾದ ಆದಿ ಚುಂಚನಗಿರಿಯಲ್ಲಿ ಹಿಂದಿನ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು, ಭೈರವನೊಂದಿಗಿನ ಶ್ವಾನ ಸಾಂಗತ್ಯವನ್ನು ಚೆನ್ನಾಗಿ ಗಮನಿಸಿದ್ದರು. ಅದನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ಎರಡು ಕಪ್ಪು ಬಣ್ಣದ ನಾಯಿಗಳನ್ನು ಬೆಳಸಿ, ಅವುಗಳನ್ನು ಪೂಜಾ ಕೈಂಕರ್ಯ ನಡೆಯುವ ವೇಳೆಗೆ ಭೈರವನ ಸನ್ನಿಧಿಗೆ ಕರೆತಂದು ಅವನೆದುರಿಗೆ ಅವು ನಮಸ್ಕರಿಸುವಂಥ  ವ್ಯವಸ್ಥೆಯನ್ನು ರೂಪಿಸಿದರು. ಇದು ದೇಶದ ಬೇರಾವ ಭೈರವ ದೇಗುಲಗಳಲ್ಲಿ ಕಾಣಲಾಗದ ಅಪರೂಪದ ಆಚರಣೆ.   

ಈಶ್ವರನ ಇತರ ಅವತಾರಗಳಾದ ವೀರಭದ್ರ ಮತ್ತು ರುದ್ರರೊಂದಿಗೆ ಕೂಡ ನಾಯಿಗಳ ಸಾಂಗತ್ಯವಿದೆ. ರುದ್ರಾಧ್ಯಾಯದಲ್ಲಿ ಶಿವನನ್ನು ಸ್ತುತಿಸುವಾಗ ಶ್ವಪತಿ, ಎಂದರೆ ನಾಯಿಗಳ ಒಡೆಯನೆಂದು ಸಂಬೋಧಿಸಲಾಗಿದೆ. ಮಹಾಭಾರತದ ಆರಂಭ ಹಾಗೂ ಅಂತ್ಯದಲ್ಲಿ ನಾಯಿಯ ಪ್ರಸ್ತಾಪವಿದೆ. ಆರಂಭದಲ್ಲಿ ಸುರಮೆಯೆಂಬ ದೇವಲೋಕದ ನಾಯಿಯು ಜನಮೇಜಯನು ಯಜ್ಞ ಮಾಡುತ್ತಿರುವಾಗ ಯಾಗಶಾಲೆಯನ್ನು ಪ್ರವೇಶಿಸಿ ಮಾತನಾಡತೊಡಗಿತು. ಚಕಿತನಾದ ಜನಮೇಜಯನು ಅದರ ಮಾತನ್ನು ಆಲಿಸಿದನು. ನಾಯಿ ಹೇಳಿತು -  "ಹಿಂದೊಮ್ಮೆ ಯಾಗ ನಡೆಯುತ್ತಿರುವಾಗ ನನ್ನ ಮಕ್ಕಳು ಯಾಗ ಮಂಟಪದದ ಬಳಿ ಸುತ್ತಾಡುತ್ತಿದ್ದರು. ಅವರು ಯಾಗ ಪದಾರ್ಥಗಳನ್ನು ಮುಟ್ಟಲಿಲ್ಲ, ಮಲಿನ ಮಾಡಲಿಲ್ಲ. ಆದರೂ ಋತ್ವಿಜರು ಅವುಗಳನ್ನು ಹೊಡೆದೋಡಿಸಿದರು. ಧರ್ಮವಂತನಾದವನು ಎಲ್ಲ ಜೀವಿಗಳನ್ನೂ ಸಮಾನ ದೃಷ್ಟಿಯಿಂದ ನೋಡುವನು. ನೀವು ಹಾಗೆ ಮಾಡಲಿಲ್ಲವಾದ್ದರಿಂದ ನಿಮ್ಮ ಯಾಗವು ಅಪೂರ್ಣವಾಗಲಿ" ಎಂದು ಶಪಿಸಿತು. ಅದೇ ರೀತಿ ಅಂತ್ಯದಲ್ಲಿ ಧರ್ಮರಾಯನು ನಾಯಿಯ ಸಂಗವನ್ನು ತೊರೆಯುವಂತೆ ಹೇಳಿದರೂ, ಅದನ್ನು ಮಾಡಲಿಲ್ಲ. ನಾಯಿಯೊಂದಿಗೇ ಸ್ವರ್ಗಾರೋಹಣ ಮಾಡಿದನು. ಇದರಲ್ಲಿ ಸಮಾನತೆಯನ್ನು ಕಾಪಾಡಿಕೊಳ್ಳಬೇಕೆಂಬ ಸಂದೇಶವಿದೆ.    


ದತ್ತಾತ್ರೇಯನ ಚಿತ್ರಗಳಲ್ಲಿ ನಾಲ್ಕುನಾಯಿಗಳು ಆತನನ್ನು ಸುತ್ತುವರೆದಿರುವುದನ್ನು ಕಾಣಬಹುದು. ಇವು ನಾಲ್ಕುವೇದಗಳಾದ ಋಕ್, ಯಜುರ್, ಅಥರ್ವ ಮತ್ತು ಸಾಮವೇದಗಳನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ. ಸತ್ಯದ ಸಂರಕ್ಷಕರೆಂದು ಹೇಳಲಾಗುವ ಈ ನಾಯಿಗಳು ಮನುಷ್ಯನ ಆತ್ಮವನ್ನು ಬೇಟೆಯಾಡುತ್ತವೆ ಎಂದು ತಿಳಿಯಲಾಗಿದೆ. 

ಯಮನ ವಾಹನ ಕೋಣವೆಂದು ಸಾಧಾರಣವಾಗಿ ತಿಳಿದಿದೆ.  ಆತನ ಬಳಿ ಇರುವ ಎರಡು ಭಯಂಕರ ನಾಯಿಗಳು ನರಮಾನವರ  ನಡುವೆ ತಿರುಗುತ್ತ, ಯಮನ ಸಂದೇಶವಾಹಕರಾಗಿ ಕೆಲಸ ಮಾಡುತ್ತವೆ ಮತ್ತು ಯಮಪುರಿಯ ರಸ್ತೆಯನ್ನು ಅವು ಕಾಯುತ್ತವೆ  ಎಂಬ ನಂಬಿಕೆಯಿದೆ

* * * * * * * 

ಭಾನುವಾರ, ಸೆಪ್ಟೆಂಬರ್ 1, 2013

ಮದ್ದೂರಿನ ಶ್ರೀ ಕಾಲಭೈರವೇಶ್ವರ ದೇವಾಲಯ




ಬೆಂಗಳೂರಿನಿಂದ ೮೦ ಕಿ.ಮೀ. ದೂರದಲ್ಲಿರುವ ಮದ್ದೂರಿನ ಸಮೀಪ ಚಿಕ್ಕ ಅರಸೀಕೆರೆಯೆಂಬ ಊರಿದೆ. ಅಲ್ಲಿರುವ ಕಾಲಭೈರವೇಶ್ವರನು ತಾನು ಸ್ವತಃ ಪ್ರಸಿದ್ಧಿ ಪಡೆದಿರುವುದಕ್ಕಿಂತ ಹೆಚ್ಚಾಗಿ, ಶಿವನ ವಾಹನವಾದ ನಂದಿಯ ಮೂಲಕ ಅಧಿಕ ಪ್ರಸಿದ್ಧನಾಗಿರುವುದು ಇಲ್ಲಿನ ವಿಶೇಷ. 

ಕಾಲಭೈರವನ ವಾಹನ ನಾಯಿ. ಆದರೆ ಇಲ್ಲಿ ಶಿವದೇವಾಲಯದಲ್ಲಿ ಶಿವನ ಎದುರಿಗೆ ನಂದಿಯಿರುವಂತೆ, ಕಾಲಭೈರವನ ಎದುರಿಗೆ ಇರುವ ಇಲ್ಲಿನ ನಂದಿಯ ವಿಗ್ರಹ ೧೬ ಅಡಿಗಳಷ್ಟು ಎತ್ತರವಿದ್ದೀತು. ಹಳ್ಳಿಗಳಲ್ಲಿ ದೇವರ ಹೆಸರಿನಲ್ಲಿ ಬಸವನನ್ನು ಬಿಡುವ ಪದ್ಧತಿ ಇಂದಿಗೂ ಇದೆ. ಇದಕ್ಕೆ ದೇವರಿಗೆ ಸಲ್ಲುವ ಎಲ್ಲ ಮರ್ಯಾದೆಗಳೂ ಸಲ್ಲುತ್ತವೆ. ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶಿವ ಮತ್ತು ಬಸವರಿಗೆ ಸಮಾನ ಪ್ರೀತ್ಯಾದರ, ಭಕ್ತಿಗಳಿವೆ. ರೈತರ ಪ್ರೀತಿಯ ನಂದಿಯು ಕಾಲಭೈರವನ ರೂಪದಲ್ಲಿ ಪಡೆದಿರುವ ಮಾನ್ಯತೆ ಮತ್ತು ಗೌರವಾದರಗಳನ್ನು ಈ ಕ್ಷೇತ್ರದಲ್ಲಿ ಕಂಡಾಗ, ಪ್ರಾಣಿಗಳನ್ನೂ ದೈವತ್ವಕ್ಕೆ ಏರಿಸಿರುವ ಭಕ್ತರು ದೊಡ್ಡವರೆನಿಸುತ್ತಾರೆ. ಅದು ಪ್ರಕೃತಿ ಮತ್ತು ಮಾನವರ ಸಂಬಂಧಗಳನ್ನು ಗಾಢವಾಗಿಸಲು, ಪ್ರೀತಿಸಲು ಸಹಕಾರಿಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜೀವಕಾರುಣ್ಯವನ್ನು ಅವರು ಎತ್ತಿಹಿಡಿದಿರುವರು. ಅದು ಇಂದಿನ ದಿನಗಳಲ್ಲಿ ಬೇಕಾಗಿರುವ ದೊಡ್ಡ ಮೌಲ್ಯವೇ ಸರಿ. 

 ಚಿಕ್ಕ ಅರಸೀಕೆರೆಯಲ್ಲಿ ಕಾಲಭೈರವನ ಜೀವಂತ ಸ್ವರೂಪವಾಗಿರುವ ನಂದಿ ಅಥವಾ ಬಸವ ಇಡೀ ಗ್ರಾಮದಲ್ಲಿ ಸ್ವೇಚ್ಛೆಯಾಗಿ ಸುತ್ತುತ್ತಿರುತ್ತದೆ. ಇದಕ್ಕೊಂದು ಕಥೆ ಪ್ರಚಲಿತವಿದೆ. ಅದು ಸರಿಸುಮಾರು ಯಡಿಯೂರು ಸಿದ್ಧಲಿಂಗೇಶ್ವರನ ಕಥೆಯನ್ನೇ ಹೋಲುತ್ತದೆ.  ಸುಮಾರು ೯೦೦ ವರ್ಷಗಳ  ಹಿಂದೆ ಪಕ್ಕದೆ ದೊಡ್ಡ ಅರಸೀಕೆರೆಯಲ್ಲಿನ ಒಂದು ಹಸು ಪ್ರತಿದಿನ ಒಂದು ಹುತ್ತದ ಮೇಲೆ ಹಾಲು ಸುರಿಸಿ ಬರುತ್ತಿತ್ತು. ಅದರ ಮಾಲಿಕನು ಈ ಬಗ್ಗೆ ಗಮನಿಸಿ, ಆ ಹಸು ಹಾಲು ಸುರಿಸುತ್ತಿದ್ದ ಹುತ್ತವನ್ನು ಅಗೆದಾಗ ಅಲ್ಲಿ ಕಾಲಭೈರವನ ಸುಂದರ ವಿಗ್ರಹ ದೊರಕಿತು. ಅದರ ಪೂಜಾ ಆರಾಧನೆಗಳು ಆರಂಭವಾದವು. ಆ ಹಸುವಿನ ಕರುವನ್ನು ಕಾಲಭೈರವನಿಗೆ ಸಮರ್ಪಿಸಲಾಯಿತು. ಮುಂದೆ ಒಂದು ಕರುವನ್ನು ಇದೇ ಉದ್ದೇಶಕ್ಕೆಂದು ನಿಯಮಿಸುವ ಪರಿಪಾಟವೂ ಬೆಳೆದುಬಂದು ಈಗ ಇರುವ ಬಸವ ಮೂವತ್ತಾರನೆಯದು ಎಂದು ಹೇಳುವರು. ಕಾಲಭೈರವನ ಕೃಪೆಗೆ ಪಾತ್ರವಾದ ಕರುವಿನ ಬಲ ಹಿಂಗಾಲಿಗೆ ಶಿವನ ಮುದ್ರೆಯನ್ನು ಹಾಕಲಾಗುತ್ತದೆ. 

ಈ ಕ್ಷೇತ್ರದಲ್ಲಿ ಅನ್ನದಾನ ನಿರಂತರವಾಗಿ ನಡೆಯುತ್ತಿದೆ. ಇದರ ಹಿಂದೆಯೂ ಇನ್ನೊಂದು ಕಥೆ ಪ್ರಚಲಿತವಿದೆ. ಅದರ ಅನ್ವಯ, ಪೂರ್ವದಲ್ಲಿ ನಂದಿಗೆ ಮೂರು ಕೊಂಬುಗಳಿದ್ದವಂತೆ. ಅದರಲ್ಲಿ ಒಂದು ಕೊಂಬನ್ನು ತೆಗೆದು ಹಾಕು ಎಂದು ಶಿವನು ಹೇಳಿದ್ದಕ್ಕೆ, ನಂದಿಯು ಅದನ್ನು ಒಪ್ಪಲಿಲ್ಲ. ಕೋಪಗೊಂಡ  ಶಿವನು ಮೂರನೆಯ ಕೊಂಬನ್ನು ಮುರಿದು ಭೂಮಿಯತ್ತ ಒಗೆದನಂತೆ. ಅದು ಭೂಲೋಕದಲ್ಲಿ ದುಂದುಭಿ ಎಂಬ ರಣವಾದ್ಯವಾಗಿ ಪ್ರಸಿದ್ಧಿಯಾಯಿತೆಂದು ಐತಿಹ್ಯ. ಕೊಂಬು ಮುರಿದುಕೊಂಡ ನಂದಿಯು ಪಶ್ಚಿಮ   ದಿಕ್ಕಿಗೆ ಮುಖಮಾಡಿ ನಿಂತು ಗಾಢವಾಗಿ ಯೋಚಿಸುತ್ತ ನಿಂತಿತ್ತು. ಯಾರು ಎಷ್ಟು ಹೇಳಿದರೂ ಕೇಳಲಿಲ್ಲ. ಆಗ ಓರ್ವ ಭಕ್ತನು ಈ ಕ್ಷೇತ್ರದಲ್ಲಿ ಅನ್ನದಾನ ಮಾಡಿದರೆ ನಿನಗೆ ಸಮಾಧಾನವುಂಟಾಗುವುದೋ ಎಂದು ಕೇಳಿದಾಗ, ನಂದಿಯು ತನ್ನ ಸಮ್ಮತಿ ನೀಡಿತಂತೆ. ಅಂದಿನಿಂದ ಅನ್ನದಾನದ ಪರಂಪರೆ ಮುಂದುವರೆದುಕೊಂಡು ಬಂದಿದೆ. 

ಬಸವನು ಅಧಿದೇವತೆಯಾಗಿ ಇರುವ ಕ್ಷೇತ್ರಗಳು ಕರ್ನಾಟಕದಲ್ಲಿ ಹಲವಾರಿವೆ. ಅಲ್ಲೆಲ್ಲ ನಡೆಯುವಂತೆ, ಇಲ್ಲಿಯೂ ಬಸವ ಅಪ್ಪಣೆಯನ್ನು ಪಡೆದು ಗ್ರಾಮಸ್ಥರು ತಮ್ಮ ಕೆಲಸಕಾರ್ಯಗಳನ್ನು ಕೈಗೊಳ್ಳುವರು. ರೋಗಿಗಳು ಬಸವ ನಡೆಯುವ ಹಾದಿಗೆ ಅಡ್ಡ ಮಲಗಿ, ಅದು ತಮ್ಮ ಮೇಲೆ ಹಾದುಹೋದರೆ, ತಮ್ಮ ರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇರಿಸಿಕೊಂಡಿದ್ದರೆ, ಸಂತಾನ ಭಾಗ್ಯ, ವಿವಾಹ ಮುಂತಾದ ಜೀವನದ ಸಮಸ್ಯೆಗಳಿಗೆ, ಬಸವನು ಬಲಗಾಲನ್ನು ಭಕ್ತನ ಅಂಗೈಮೇಲೆ ಇರಿಸಿದರೆ, ಅದು ಸಾಧಿಸುತ್ತದೆ ಎಂಬ ನಂಬಿಕೆಯೂ ಇದೆ. ಸಾಧಾರಣವಾಗಿ ಕಾಲಭೈರವನು ನಿಂತಿರುವ ಭಂಗಿಯಲ್ಲಿಯೇ ಬಹುತೇಕ ವಿಗ್ರಹಗಳು ಕಾಣುತ್ತವೆ. ಚಿಕ್ಕ ಅರಸೀಕೆರೆಯ ವಿಗ್ರಹವನ್ನು ಕುಳಿತಿರುವಂತೆ ಕಡೆಯಲಾಗಿದೆ. ತಮ್ಮ ಹರಕೆ ಯಶಸ್ವಿಯಾದರೆ ಬಸವನಿಗೆ ಹನ್ನೊಂದು ಬಾಳೆ ಹಣ್ಣುಗಳನ್ನು ಮತ್ತು ಕಾಲಭೈರವನಿಗೆ ಬೆಲ್ಲವನ್ನು ಸಮರ್ಪಿಸುವ ಪದ್ಧತಿಯಿದೆ. ದೇವಾಲಯದ ಕಟ್ಟಡ ಕಲ್ಲಿನಿಂದ ನಿರ್ಮಿತವಾಗಿದ್ದು ಗಾರೆಯ ಶಿಖರವಿದೆ. ಶಿವನ ಪರಿವಾರವಾದ ಸುಬ್ರಹ್ಮಣ್ಯ ಮತ್ತು ಗಣಪತಿಯ ವಿಗ್ರಹಗಳು ಕಾಣಸಿಗುತ್ತವೆ.  ಆರಾಧ್ಯ ದೈವಕ್ಕೆ ಜೈವಿಕ ಸ್ವರೂಪ ದೊರೆತಿರುವುದೇ ಇಲ್ಲಿನ ವಿಶೇಷ. 




* * * * * * *