ಸೋಮವಾರ, ಏಪ್ರಿಲ್ 1, 2013

ಬೇತಾಳ ಭೈರವಮಂದಿರದ ಜೀರ್ಣೋದ್ಧಾರಕರು ಮುಸ್ಲಿಮರು !



ರೇನ್ ವಾಡಿ ಕ್ರಿಯಾ ಸಮಿತಿಯ ಚಳವಳಿ 

ಸಾಮಾಜಿಕ ಜಾಲತಾಣ ಫೇಸ್ ಬುಕ್ ಈಗ ನಿಜವಾದ ಜನಧ್ವನಿಯಾಗಿ ಮಾರ್ಪಡುತ್ತಿರುವುದು ಇತ್ತೀಚಿನ ಉತ್ತಮ ಬೆಳವಣಿಗೆಗಳಲ್ಲೊಂದು. ಅದು ಅನೇಕ ಚಳವಳಿಗಳಿಗೆ ಪ್ರೇರಕವಾಗಿದೆ. ಭೈರವನಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಚಳವಳಿ ಅವನ ಮಂದಿರದ ಜೀರ್ಣೋದ್ಧಾರಕ್ಕೆ ನೆರವಾದ ವಿಶಿಷ್ಟ ಸಂಗತಿಯ ಕಿರುವರದಿ ಇಲ್ಲಿದೆ. ಇದಕ್ಕೆ ಪೂರಕವಾದ ವರದಿ/ಚಿತ್ರಗಳನ್ನು ಕೆಳಗೆ ನೀಡಿರುವ ಕೊಂಡಿಯನ್ನು ಬಳಸಿ ನೋಡಬಹುದು.

ಕಾಶ್ಮೀರವು ಶೈವ ಪಂಥದ ಪರಮ ಪವಿತ್ರ ಕ್ಷೇತ್ರವೆನ್ನುವುದು ಎಲ್ಲರಿಗೂ ತಿಳಿದಿದೆ. ಅಲ್ಲಿ ಶೈವ ಪಂಥಕ್ಕೆ ಸಂಬಂಧಿಸಿದಂತೆ ಅನೇಕ ಪ್ರಯೋಗಗಳು ನಡೆದವು. ಶಕ್ತಿ ಪೀಠಗಳು, ಶಿವಕ್ಷೇತ್ರಗಳು ಅಲ್ಲಿ ಇವೆ. ಕಾಪಾಲಿಕ, ಗಾಣಾಪತ್ಯ ಮುಂತಾದ ಶಕ್ತಿಪಂಥಗಳು ಅಲ್ಲಿಂದಲೇ ಬೆಳೆದು ಬಂದವು. ಈಗ ಕಾಶ್ಮೀರ ಒಂದು ವಿವಾದಿತ ಪ್ರದೇಶವಾಗುವಲ್ಲಿ ರಾಜಕಾರಣದ ಪ್ರಭಾವ ಹೆಚ್ಚಾಗಿದೆಯಾದರೂ, ಸಾಂಸ್ಕೃತಿಕ ದೃಷ್ಟಿಯಿಂದ, ದೇಶದ ಈ ಭಾಗವು ಭಾರತದ ಮುಕುಟವೇ ಸರಿ. ಕಾಶ್ಮೀರಿ ಪಂಡಿತರು ಇಲ್ಲಿನ ಪ್ರಮುಖ ಹಿಂದೂ ವರ್ಗ. ಅವರೀಗ ತಮ್ಮ ನೆಲೆ ಕಳೆದುಕೊಂಡು ದೂರದ ಸ್ಥಳಗಳಿಗೆ ವಲಸೆ ಹೋಗಿ ಜೀವಿಸುತ್ತಿದ್ದಾರೆ. ಅತಂತ್ರದ ಬದುಕು ಈಗ ಅವರದಾಗಿದೆ. ಇತ್ತೀಚೆಗೆ ಪ್ರಕಟವಾದ ಅಂತರಜಾಲದ ವರದಿಯೊಂದು ಅಲ್ಲಿನ ಕೆಲವು ಮುಸ್ಲಿಮರ ರಚನಾತ್ಮಕ ದೃಷ್ಟಿಕೋನವನ್ನು ಬಿಂಬಿಸುತ್ತದೆ. ಎಲ್ಲ ಮುಸ್ಲಿಮರೂ ಉಗ್ರವಾದಿಗಳಲ್ಲ ಎಂಬ ಜನಜನಿತ ಘೋಷಣೆಯನ್ನು ಸಾಕಾರಗೊಳಿಸುವಂತೆ ತೋರುವ ಈ ವರದಿಯ ವಿವರಗಳು ಹೀಗಿವೆ.

ಶ್ರೀನಗರದ ಸಮೀಪ ರೇನ್‌ವಾಡಿ ಎಂಬ ಕುಗ್ರಾಮವಿದೆ. ಅಲ್ಲಿರುವ ಬೇತಾಳ ಭೈರವ ಮಂದಿರ ಸುಮಾರು ನಾನ್ನೂರು ವರ್ಷಗಳಷ್ಟು ಹಳೆಯದು. ಅದು ಕಾಲದ ಆಘಾತಕ್ಕೆ ಸಿಲುಕಿ ನಶಿಸಿಹೋಗುವ ಹಂತದಲ್ಲಿತ್ತು. ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ, ಅಲ್ಲಿನ ಪಂಡಿತರು ತಮ್ಮ ಜೀವವನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿರುವಾಗ, ತಮ್ಮ ಆರಾಧ್ಯದೈವವಾದ ಬೇತಾಳ ಭೈರವನ ಬಗ್ಗೆ ಗಮನಹರಿಸಲು ಆಗಿರಲಿಲ್ಲ. ಇದರ ಲಾಭ ಪಡೆದ ಆ ದೇವಾಲಯದ ಮಹಂತರು ದೇವಾಲಯ ಪ್ರದೇಶವನ್ನು ಸ್ಥಳೀಯ ವರ್ತಕನೊಬ್ಬನಿಗೆ ಮಾರಾಟಮಾಡುವ ಹವಣಿಕೆಯಲ್ಲಿದ್ದರು. ಇದರ ಸುಳಿವನ್ನು ಅರಿತ ಈ ಪ್ರದೇಶದ ಮುಸ್ಲಿಮರು, ಮಹಂತರ ವಿರುದ್ಧ ಗುಲ್ಲು ಎಬ್ಬಿಸಿದರು. ಜತೆಗೇ ಸ್ಥಳೀಯ ಪಂಡಿತರ ಗಮನ ಸೆಳೆದರು. ಈ ಬಗ್ಗೆ ಅಂತರಜಾಲದ ಫೇಸ್‌ಬುಕ್‌ನಲ್ಲಿ ಚಳವಳಿ ಆರಂಭವಾಯಿತು. ಇದರಿಂದ ಜನರು ಸಂಘಟಿತರಾಗಿ ದೇವಾಲಯ ಜೀರ್ಣೋದ್ಧಾರಕ್ಕೆ ನಾಂದಿಯಾಯಿತು.


ನವೀಕರಣ ಕಾಮಗಾರಿ 

ಸ್ಥಳೀಯ ಮುಸ್ಲಿಮರು ದೇವಾಲಯದ ಪುನರ್‌ನಿರ್ಮಾಣಕ್ಕೆಂದು ನುರಿತ ಕಾರ್ಮಿಕರನ್ನು ನಿಯೋಜಿಸಿದರು. ಸ್ಥಳೀಯ ನಿವಾಸಿ ಗುಲ್ ಮುಹಮ್ಮದ್ ಭಟ್ ಹೇಳುವಂತೆ, ಪ್ರಾಥಮಿಕ ಹಂತದಲ್ಲಿ ಈ ದೇವಾಲಯದ ಹೊರ ಪೌಳಿಯನ್ನು ದುರಸ್ತಿಗೊಳಿಸಲಾಯಿತು. ಮುಸ್ಲಿಮರು ಮತ್ತು ಕಶ್ಮೀರೀ ಪಂಡಿತರ ಜಂಟಿ ಸಹಯೋಗದಲ್ಲಿ "ರೇನ್‌ವಾಡಿ ಕ್ರಿಯಾ ಸಮಿತಿ" ಆರಂಭವಾಯಿತು. ಮುಂದೆ ಈ ಪ್ರದೇಶದಲ್ಲಿರುವ ಪುರಾತನ ಮಂದಿರಗಳ ಸಂರಕ್ಷಣೆಯ ಕಾರ್ಯಗಳನ್ನು ಕೈಗೆತ್ತಿಕೊಂಡು ಮುನ್ನಡೆಯಿತು.


ಪುನರ್ ನಿರ್ಮಿತ ಬೇತಾಳ ಭೈರವ ಮಂದಿರ 

ದೇವಾಲಯವು ಎರಡು ಕೋಮುಗಳ ನಡುವಣ ಸೌಹಾರ್ದತೆಗೆ ಕಾರಣವಾಯಿತು. "೧೯೯೦ರಲ್ಲಿ ನಡೆದ ಕಶ್ಮೀರೀ ಪಂಡಿತರ ಹತ್ಯೆ ದುರದೃಷ್ಟಕರ. ಇದರಿಂದ ಅವರು ತಮ್ಮ ನೆಲವನ್ನು ಬಿಟ್ಟು ವಲಸೆ ಹೋಗುವಂತಾಯಿತು. ಅವರ ಸರಕಾರೀ ಆಶ್ರಯಸ್ಥಾನಗಳಲ್ಲಿರದೇ ತಮ್ಮ ಸ್ವಂತ ನೆಲದಲ್ಲಿ ಬದುಕುವಂತಾಗಬೇಕು ಎನ್ನುವುದು ನಮ್ಮ ಆಶಯ" ಎಂದು ರೇನ್‌ವಾಡಿಯ ನಿವಾಸಿ ಮುಹಮ್ಮದ್ ಗನಾಯ್‌ ಹೇಳುತ್ತಾರೆ. ಇಂದಿಗೂ ಈ ಪ್ರದೇಶದ ಅನೇಕ ಕಶ್ಮೀರೀ ಪಂಡಿತರ ಮನೆಗಳ ಕೀಲಿಕೈಗಳು ಸ್ಥಳೀಯ ಮುಸ್ಲಿಮರಲ್ಲೇ ಇವೆ. ಬೇಸಿಗೆಯಲ್ಲಿ ಅವರು ತಮ್ಮ ಮೂಲ ಮನೆಗಳಿಗೆ ಬಂದು ಕೆಲವಾರು ವಾರ ಇದ್ದು  ಜಮ್ಮುವಿಗೆ ಹೋಗುತ್ತಿದ್ದಾರೆ.  ಇದೆಲ್ಲ ಏನಿದ್ದರೂ, ೨೨ವರ್ಷಗಳ ನಂತರ ಜೀರ್ಣೋದ್ಧಾರ ಕಂಡಿರುವ ಬೇತಾಳ ಭೈರವ ಮಂದಿರದ ಸುಸ್ಥಿತಿಯ ಬಗ್ಗೆ ಇಲ್ಲಿನ ನಿವಾಸಿ ಸುನಿಲ್ ಪಂಡಿತರಿಗೆ ಸಂತಸವಿದೆ. ಏಕೆಂದರೆ ಕಶ್ಮೀರದ ಈ ಪ್ರದೇಶದ ಜನ ಬೇತಾಳ ಭೈರವನಲ್ಲಿ ಅಪಾರ ನಂಬಿಕೆ ಹೊಂದಿದ್ದಾರೆ. ಮತ ಧರ್ಮ ಮತ್ತು ಧಾರ್ಮಿಕ ನಂಬಿಕೆಗಳ ಕೊಂಡಿಯಾಗಿರುವ ಈ ಪುರಾತನ ಮಂದಿರ ಮತ್ತೆ ಪುನರುಜ್ಜೀವನಗೊಂಡಿರುವುದರಿಂದ, ತಮ್ಮ ನೆಲೆಯಿನ್ನೂ ಸುಭದ್ರವಾಗಿದೆ, ಮುಂದೊಮ್ಮೆ ಇಲ್ಲಿ ಬಂದು ನೆಲಸಬಹುದೆಂಬ ಆಸೆ ಮರುಕಳಿಸಲು, ಇದು ಸಹಾಯಕವಾಗಿದೆ ಎನ್ನುವುದು ಸುನಿಲ್ ಪಂಡಿತರ ಅಭಿಪ್ರಾಯ.


* * * * * * *

ಶುಕ್ರವಾರ, ಮಾರ್ಚ್ 1, 2013

ಡಣಾಯಕಪುರದ ಶ್ರೀ ಕ್ಷೇತ್ರಪಾಲ ಕಾಲಭೈರವ ಸ್ವಾಮಿ




ಡಣಾಯಕಪುರದ
ಶ್ರೀ ಕ್ಷೇತ್ರಪಾಲ ಕಾಲಭೈರವ ಸ್ವಾಮಿ




ಶಿರೋಮಾಲಾ ವಿಭೂಷಿತಂ 
ಇತ್ತೀಚೆಗೆ ಶಿವಮೊಗ್ಗಕ್ಕೆ ಹೋದಾಗ ಅಗರದ ಹಳ್ಳಿಯಲ್ಲಿರುವ ಮಿತ್ರರಾದ ಮುರಳಿ, ತಮ್ಮ ಗ್ರಾಮದ ಸಮೀಪ ಒಂದು ಕಾಲಭೈರವ ದೇವಾಲಯವಿದೆಯೆಂದು ತಿಳಿಸಿದ್ದರು. ಅದನ್ನು ಇತ್ತೀಚೆಗೆ ಸಂದರ್ಶಿಸಿದ ನಂತರ ಆ ಬಗ್ಗೆ ಇಲ್ಲಿ ಬರೆಯುತ್ತಿರುವೆ.

ಶಿವಮೊಗ್ಗ ಜಿಲ್ಲೆಯಲ್ಲಿರುವ ಹೊಳೆಹೊನ್ನೂರಿನಿಂದ ಸ್ವಲ್ಪ ಮುಂದೆ ಸಾಗಿದರೆ, ಡಣಾಯಕಪುರವೆಂಬ ಚಿಕ್ಕ ಗ್ರಾಮವಿದೆ. ಅಲ್ಲಿ ಊರಿನ ಅಂಚಿನಲ್ಲಿ ಒಂದು ಚಿಕ್ಕ ಗುಡ್ಡ. ಅದರ ಮೇಲೊಂದು ದೇಗುಲವಿದೆ. ಅಲ್ಲಿರುವುದು ಶ್ರೀ ಕ್ಷೇತ್ರಪಾಲ ಕಾಲಭೈರವ ಸ್ವಾಮಿಯ ದೇವಾಲಯ. ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಕಾಲಭೈರವ ಮಂದಿರದ ಬಗ್ಗೆ ಈ ಬ್ಲಾಗ್‌ನಲ್ಲಿ ಒಂದು ಲೇಖನವಿದೆ. ಅದರಲ್ಲಿ ಪ್ರಸ್ತಾಪಿಸಿದ್ದಂತೆ, ಹಳೆಗಾಲದ ಮಂದಿರಗಳು ನಶಿಸಿಹೋದಾಗ,  ಮಂದಿರದ, ಅಲ್ಲಿನ ವಿಗ್ರಹಗಳ ಬಗ್ಗೆ ಆಸ್ಥೆಯುಳ್ಳ ಸ್ಥಳೀಕರು ಹೊಂದಿರುವ ಭಕ್ತಿ ಗೌರವಗಳಿಂದಾಗಿ, ಅವನ್ನು ಈಗ ಲಭ್ಯವಿರುವ ವಸ್ತುಗಳಿಂದ ಕಾಪಾಡಲು ಮುಂದಾಗುತ್ತಾರೆ. ಎಂದರೆ ಕಾಂಕ್ರೀಟ್ ಕಟ್ಟಡದಲ್ಲಿ ಪುರಾತನ ಶಿಲ್ಪಗಳು ಆಶ್ರಯ ಪಡೆಯುತ್ತವೆ. ಕೆಲವೇ ಅದೃಷ್ಟವಂತ ಪುರಾತನ ದೇವಾಲಯಗಳು, ಪುರಾತತ್ವ ಇಲಾಖೆಯ ಕಾಳಜಿಯಿಂದಾಗಿ ಮರುಹುಟ್ಟು ಪಡೆಯುತ್ತವೆ. ತೀರ ಭಗ್ನಗೊಂಡಿರುವ ದೇವಾಲಯಗಳು ಕುಸಿದು ಬೀಳುತ್ತವೆ. ಹಾಗೆ ಆಧುನಿಕ ಕಟ್ಟಡದಲ್ಲಿ ಪುರಾತನ ಶಿಲ್ಪಗಳನ್ನು ನೋಡಿದಾಗ ಅದು ಅಸಮಂಜಸವೆಂದು ತೋರುತ್ತದೆ.

ಸುಂದರ ಹೊಯ್ಸಳ ವಿಗ್ರಹ 
ಆದರೆ ಇದೆಲ್ಲ ಅನಿವಾರ್ಯ. ಡಣಾಯಕ ಪುರದ ದೇವಾಲಯದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಸಖರಾಯಪಟ್ಟಣಕ್ಕೂ ಇಲ್ಲಿಗೂ ಒಂದು ವ್ಯತ್ಯಾಸವಿದೆ. ಎರಡು ಸ್ಥಳಗಳಲ್ಲಿ ಇಟ್ಟಿಗೆ ಮರಳಿನ ದೇವಾಲಯವಿದ್ದರೂ, ಡಣಾಯಕಪುರದ ಮಂದಿರದ ಗರ್ಭಗುಡಿಯಲ್ಲಿ ಹಳೆಗಾಲದ ವಿಗ್ರಹವಿದೆ. ಶಿಲ್ಪಕಲೆಯ ದೃಷ್ಟಿಯಿಂದ ಅದೇನೂ ಗಮನ ಸೆಳೆಯುವಂತಿಲ್ಲ. ಆದರೆ ಆವರಣದಲ್ಲಿರುವ ಕಾಲಭೈರವನ ಭಗ್ನಮೂರ್ತಿ ಮತ್ತು ದೇವಾಲಯದ ಇತರ ಬಿಡಿಭಾಗಗಳು ಅಲ್ಲೊಂದು ಹೊಯ್ಸಳರ ದೇವಾಲಯವಿತ್ತು ಎನ್ನುವುದನ್ನು ಸಮರ್ಥಿಸುತ್ತವೆ. ಚಿತ್ರದಲ್ಲಿ ಕಾಣುವ ಈ ಸುಂದರ ಮೂರ್ತಿಯು ತನ್ನ ಶಿರೋ ಅಲಂಕಾರ ಮತ್ತು ನಿಂತಿರುವ ತ್ರಿಭಂಗಿಗಳಿಂದ ಗಮನಸೆಳೆಯುತ್ತದೆ. ಆಭರಣಗಳು ಮತ್ತು ಮುಖಭಾವಗಳು ಅದ್ಭುತವಾಗಿವೆ. ಈ ಶಿಲ್ಪವಲ್ಲದೆ ಇತರ ಚಿಕ್ಕರಚನೆಗಳು ಈಗಿರುವ ದೇವಾಲಯವನ್ನು ನಿರ್ಮಿಸುವ ಕಾಲಕ್ಕೆ ದೊರೆಯಿತು ಎಂದು ಅಲ್ಲಿನ ಅರ್ಚಕರಾದ ಶ್ರೀ ವೆಂಕಟೇಶ ಭಟ್ಟರು ತಿಳಿಸಿದರು. ದೇವಾಲಯದ ಬಲಭಾಗಕ್ಕೆ ಒಂದು ಧ್ವಜಸ್ಥಂಭವಿದೆ. ಪೂರ್ವಕ್ಕೆ ಎದುರಾಗಿರುವಂತೆ ನಿರ್ಮಿತವಾದ ಒಂದು ದೇವಾಲಯ ಅಲ್ಲಿತ್ತು.  ಹೊಯ್ಸಳರ ಕಾಲದ ಆ ದೇವಾಲಯ ಭಗ್ನಗೊಂಡ ನಂತರ, ಸ್ಥಳೀಯ ಐತಿಹ್ಯದಂತೆ ಅಲ್ಲೊಂದು ನೂತನ ದೇವಾಲಯವನ್ನೂ, ಮತ್ತೊಂದು ಮೂರ್ತಿಯನ್ನೂ ಪ್ರತಿಷ್ಠಾಪಿಸಲಾಯಿತು. ಈ ದೇವಾಲಯವೀಗ ಜೀರ್ಣೋದ್ಧಾರಗೊಳ್ಳುತ್ತಿದೆ. ಸದ್ಯದಲ್ಲೇ ಅಷ್ಟ ಭೈರವವಿಗ್ರಹಗಳಿರುವ ಆಧುನಿಕ ದೇವಾಲಯ ಅಲ್ಲಿ ತಲೆಯೆತ್ತಲಿದೆ.
ಈಗಿರುವ ವಿಗ್ರಹ 
ಈ ದೇವಾಲಯವನ್ನು ಕುರಿತಂತೆ ಸ್ಥಳೀಯ ಭಕ್ತಮಂಡಲಿಯು ಒಂದು ಕಿರುಪುಸ್ತಕವನ್ನು ಹೊರ ತಂದಿದೆ. ಅದರಲ್ಲಿ ಐತಿಹಾಸಿಕ ಅಂಶಗಳ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲವಾದರೂಪೌರಾಣಿಕ ಮಹತ್ವವನ್ನು ಕುರಿತು ವಿಸ್ತಾರವಾಗಿ ಹೇಳಲಾಗಿದೆ. ಸಮೀಪದ ಶ್ರೀ ಕ್ಷೇತ್ರ ಕೂಡಲಿಯ ಪುರೋಹಿತರಾದ ಶ್ರೀ ಸೋಮಸುಂದರ ಭಟ್ಟರು ಸಂಪಾದಿಸಿದ ಸಂಸ್ಕೃತ ಕೃತಿಯನ್ನು ಆಧರಿಸಿದ ಈ ಮಾಹಿತಿಯನ್ನು ವಿದ್ವಾನ್ ಕೂಡಲಿ ಜಗನ್ನಾಥ ಶಾಸ್ತ್ರಿಗಳು ಕನ್ನಡ ದಲ್ಲಿ ಅನುವಾದಿಸಿದ್ದಾರೆ. ಸಾಧಾರಣವಾಗಿ ಕಾಲಭೈರವ ದೇವಾಲಯಗಳಲ್ಲಿ ಆ ದೇವರಿಗೆ ಸಂಬಂಧಿಸಿದ ಸ್ತೋತ್ರಗಳು, ಮಂತ್ರಗಳು ಪ್ರಚಲಿತವಿಲ್ಲವಾಗಿ, ಶಿವಾರಾಧನೆಯ ಸಾಹಿತ್ಯವನ್ನೇ ಅವಲಂಬಿಸಬೇಕಾಗಿದೆ. ಆದರೆ ಇಲ್ಲಿ ಹಾಗಾಗದೆ ಕಾಲಭೈರವ ಅಷ್ಟೋತ್ತರವು ಚಾಲ್ತಿಯಲ್ಲಿದೆ.

ಬೆಟ್ಟದ ಹಾದಿ 
ಪೌರಾಣಿಕ ವಿವರಗಳಂತೆ ಈ ಗುಡ್ಡಕ್ಕೆ ದ್ರೋಣ ಪರ್ವತವೆಂಬ ಹೆಸರಿತ್ತು. ತುಂಗಾ ಭದ್ರಾ ನದಿಗಳ ಸಂಗಮ ಕ್ಷೇತ್ರವಾದ ಕೂಡಲಿಯಲ್ಲಿ ಬ್ರಹ್ಮೇಶ್ವರ, ನರಸಿಂಹ, ರಾಮೇಶ್ವರ ದೇವತೆಗಳನ್ನು ಸಂದರ್ಶಿಸಿದ ನಂತರ ದ್ರೋಣ ಪರ್ವತದ ಕಾಲಭೈರವ ನನ್ನು ನೋಡಬೇಕು. ಇದಕ್ಕೆ ಸಂಬಂಧಿ ಸಿದಂತೆ ಒಂದು ಪೌರಾಣಿಕ ಕತೆಯನ್ನೂ ನೀಡಿದ್ದಾರೆ. ಇಲ್ಲಿ ಶಿವನ ಜತೆಗೆ ವಿಷ್ಣುವಿನ ಪಾತ್ರವೂ ಇರುವುದೊಂದು ವಿಶೇಷ. ದೇವ-ದಾನವ ಯುದ್ಧದ ಕಾಲದಲ್ಲಿ ದಾನವರೇ ಗೆದ್ದು ಹಿಂಸಾಚಾರದಲ್ಲಿ ತೊಡಗಿದಾಗ, ದೇವತೆಗಳು ವಿಷ್ಣುವಿನ ಮೊರೆ ಹೋದರು. ಮಂದರ ಪರ್ವತದ ಮಥನ ಸಮಯದಲ್ಲಿ ಉದ್ಭವಿಸಿದ ಅಮೃತಕಲಶವನ್ನು ಧನ್ವಂತರಿಯಿಂದ ಅಪಹರಿಸಿದಾಗ, ವಿಷ್ಣುವು ಸ್ತ್ರೀ ರೂಪ ತಳೆದು ಅವರನ್ನು ಆಕರ್ಷಿಸಿದನು.  ದಾನವರು ಮೈಮರೆತದ್ದರಿಂದ ಅಮೃತಕಲಶವು ದೇವತೆಗಳಿಗೆ ದೊರೆಯಿತು.  ದೇವತೆಗಳ ಅಮೃತಪಾನದ ನಂತರವೂ ಬರಿದಾಗದ ಆ ಕಲಶವನ್ನು ಈಗ ದ್ರೋಣಪರ್ವತವೆಂದು ಕರೆಯಲಾಗುವ ಈ ಪ್ರದೇಶದಲ್ಲಿ ಹುಗಿದಿಟ್ಟರು.  ಅದರ ಕಾವಲಿಗೆ ಓರ್ವನನ್ನು ನೇಮಿಸಬೇಕೆಂಬ ಕೋರಿಕೆ ಬಂದಾಗ ವಿಷ್ಣುವು ವಸಂತ ಸಹಿತ ಶ್ರೀ ಕಾಲಭೈರವನನ್ನು ಬೆಟ್ಟದ ತುದಿಯಲ್ಲಿ ಸ್ಥಾಪಿಸಿದನು. ಅಂದಿನಿಂದ ಈ ಕ್ಷೇತ್ರವು ಕಾಲಭೈರವನ ನೆಲೆಯಾಯಿತು ಎನ್ನುತ್ತದೆ ಈ ಕಥಾನಕ. ಇನ್ನೂ ವಿಶೇಷವೆಂದರೆ ಕಾಲಭೈರವಾಷ್ಟಮಿ, ಚತುರ್ದಶೀ ಮುಂತಾದ ಪರ್ವದಿನಗಳಂದು, ಸೂರ್ಯನು ಕರ್ಕಾಟಕ ರಾಶಿಯಲ್ಲಿದ್ದಾಗ ಇಲ್ಲಿನ .ಕಾಲಭೈರವ ನನ್ನು ಸಂದರ್ಶಿಸುವುದು ವಿಶೇಷ ಫಲನೀಡುತ್ತದೆಯೆಂಬುದು ಐತಿಹ್ಯ
ಬಲಿಪೀಠದ ಸಮೀಪ  ಕೆತ್ತನೆ
ದೇವಾಲಯದ ಎದುರಿಗಿರುವ ಬಲಿಪೀಠದ ಸಮೀಪ ಒಂದು ಕೆತ್ತನೆಯಿದೆ. ಅದರಲ್ಲಿನ ಮಾನವ ಶರೀರಗಳ ತಲೆಗಳು ಕಾಣುತ್ತಿಲ್ಲ. ಇದರ ಬಗ್ಗೆ ಸೂಕ್ತ ವಿವರಣೆಯೂ ದೊರೆಯಲಿಲ್ಲವಾಗಿ, ಓದುಗರಲ್ಲಿ ಯಾರಿಗಾದರೂ ಮಾಹಿತಿಯಿದ್ದರೆ ತಿಳಿಸಲು ಕೋರಿಕೆ. 

ಒಂದು ಭಗ್ನ ಶಿಲ್ಪ 
ಒಟ್ಟಿನಲ್ಲಿ ಇಲ್ಲಿರುವ ಹೊಯ್ಸಳ ವಿಗ್ರಹದ ಸೌಂದರ್ಯ ಮತ್ತು ಭವ್ಯತೆಯನ್ನು ನೋಡುವ ಯಾರಿಗೂ, ಉತ್ಖತನ ಕೈಗೊಂಡರೆ ಸುಂದರ ಪುರಾತನ ದೇವಾಲಯವೊಂದು ಕಾಣಸಿಗುತ್ತದೆಯೆಂಬ ವಿಶ್ವಾಸವಂತೂ ಬರುತ್ತದೆ. ವಿಗ್ರಹವೇ ಇಷ್ಟು ಸುಂದರ ವಾಗಿರುವಾಗ ಮಂದಿರವೂ ಅದ್ಭುತ ವಾಗಿರಬೇಕು ಎಂಬ ಕಲ್ಪನೆ ಗರಿಗೆದರುತ್ತದೆ. ಸ್ಥಳೀಯರ ಸಹಕಾರದೊಂದಿಗೆ, ಪುರಾತತ್ವ ಇಲಾಖೆ ಶ್ರಮವಹಿಸಿದರೆ ಆ ಕಾರ್ಯ ನಡೆದೀತು. ಹಾಗಾಗಲಿ ಎನ್ನುವುದಷ್ಟೇ ಜನರ ಆಶಯ.

* * * * * * *

ಶುಕ್ರವಾರ, ಫೆಬ್ರವರಿ 1, 2013

ವಿಜ್ಞಾನ ಭೈರವ ತಂತ್ರ



ಭೈರವರಾಧನೆಯು ಕೇವಲ ಆಧ್ಯಾತ್ಮಿಕ, ಧಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಸಂಬಂಧಿಸಿರದೇ, ಅದರ ಹರಹು ಇನ್ನಷ್ಟು ವಿಸ್ತಾರವಾಗಿದೆಯೆಂದು ತಿಳಿಯಲು ಆಶಿಸುವವರಿಗೆ ವಿಜ್ಞಾನ ಭೈರವ ತಂತ್ರವು ಹಲವಾರು ಸಾಧ್ಯತೆಗಳನ್ನು ತೆರೆದಿಡುತ್ತದೆ. ನಮ್ಮ ಎಲ್ಲ ಧಾರ್ಮಿಕ ಕ್ರಿಯೆಗಳ ಹಿಂದೆ, ಅಲೌಕಿಕವಾದುದನ್ನು ಸಾಧಿಸುವ ಉದ್ದೇಶವಿರುತ್ತದೆಯೆನ್ನುವುದು ಸತ್ಯವಾದರೂ, ಅವುಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ, ಅದರ ಆಂತರ್ಯವನ್ನು ಹೊರಗೆಡಹಲು ನಿರ್ಮಮಕಾರವಾದ ಅಧ್ಯಯನದ ಆವಶ್ಯಕತೆಯಿರುತ್ತದೆ. ಅದು ಎಲ್ಲ ಸಂದರ್ಭಗಳಲ್ಲೂ ಸಾಧ್ಯವಾಗಲಾರದು. ಧಾರ್ಮಿಕ ಆಚರಣೆಗಳ ಬಾಹ್ಯ ಸ್ವರೂಪವನ್ನು ಮಾತ್ರ ಅನುಸರಿಸುತ್ತಿರುವುದು ಈಗಿನ ಕ್ರಮ. ಈ ಕಾರಣದಿಂದಾಗಿ, ಆಚರಣೆಗಳಿಗಾದರೂ ಜೀವವಿದೆಯೆಂಬ ಸಮಾಧಾನ ತಳೆಯಬಹುದು. ಭೈರವನ ಆರಾಧನೆಯಲ್ಲಿ, ತಾಂತ್ರಿಕರು, ಅಘೋರಿಗಳು, ಶಿವಸಾಧಕರು ಅನೇಕ ಆಚರಣೆಗಳನ್ನು ಅನುಸರಿಸುತ್ತಿರುವರು. ಅವುಗಳ ಅಂತಃಸತ್ವವನ್ನು ಅರಿತವರು, ಅನುಸರಿಸುವವರು ಕಡಿಮೆಯೆಂದೇ ಹೇಳಬೇಕು. ಆದರೆ ಈಗಿನ ಅಂತರಜಾಲದ ಸೌಕರ್ಯದಲ್ಲಿ ಈ ಕುರಿತಾದ ಸಾಹಿತ್ಯ, ಚೆನ್ನಾಗಿಯೇ ಲಭ್ಯವಿದೆಯೆನ್ನುವುದು ಸಂತೋಷದ ಸಂಗತಿ. ಹೀಗಾಗಿ, ಭೈರವಾರಾಧನೆಯ ನೈಜ ಉದ್ದೇಶಗಳನ್ನು ಒಳಗೊಂಡ ವಿಜ್ಞಾನ ಭೈರವ ತಂತ್ರದ ಬಗ್ಗೆ ಒಂದು ಪ್ರಾತಿನಿಧಿಕ ಲೇಖನವನ್ನು ನಿಮ್ಮ ಓದಿಗೆಂದು ಈ ಸಂಚಿಕೆಯಲ್ಲಿ ನೀಡಲಾಗಿದೆ.  


ವಿಜ್ಞಾನ ಭೈರವ ತಂತ್ರವನ್ನು ಶಿವ ವಿಜ್ಞಾನ ಎಂದೂ ಕರೆಯುವರು. ಕ್ರಿ.ಪೂ. ೮೦೦ರ ಇತಿಹಾಸವುಳ್ಳ ತಂತ್ರಾಧಾರಿತ ವೇದ ಸಾಹಿತ್ಯವನ್ನು ಆಧರಿಸಿ ಇದನ್ನು ರಚಿಸಲಾಗಿದೆ. ಇದು ಕಾಶ್ಮೀರ ಶೈವಪಂಥಕ್ಕೆ ಸೇರಿದ್ದು. ಇದಕ್ಕೊಂದು ಬಲವಾದ ತಾತ್ತ್ವಿಕ ನೆಲಗಟ್ಟು ಇದ್ದರೂ, ವ್ಯಕ್ತಿಯ ಅಸ್ತಿತ್ವದ ಏಕೆ ಮತ್ತು ಹೇಗೆ - ಈ ಪ್ರಮುಖ ಪ್ರಶ್ನೆಗಳನ್ನು ಚರ್ಚಿಸುವ ರಹಸ್ಯ ವಿಜ್ಞಾನ ತಂತ್ರವಿದು. ಇದನ್ನು ಆತ್ಮ ಸಾಕ್ಷಾತ್ಕಾರದ ಸಂಹಿತೆಯೆಂದೂ ಪರಿಗಣಿಸಲಾಗಿದೆ. ಮಾನವ ಮನಸ್ಸಿನ ಆಂತರ್ಯವನ್ನು ಒಳಹೊಕ್ಕು ಅದರಲ್ಲಿ ಜಾಗೃತಿಯನ್ನು ಮೂಡಿಸುವ ಹಲವಾರು ತಂತ್ರವಿಧಾನಗಳನ್ನು ಇದರಲ್ಲಿ ಪ್ರಸ್ತಾಪಿಸಲಾಗಿದೆ. ಹೀಗಾಗಿ ಇದನ್ನು ಭಾರತೀಯ ಮಾನಸ ಶಾಸ್ತ್ರದ ಅಧ್ಯಯನದಲ್ಲಿ ಪ್ರಮುಖ ಕೃತಿಯೆಂದು ಹೆಸರಿಸಲಾಗಿದೆ. 

ಇದರ ತಂತ್ರ ವಿಧಾನಗಳಲ್ಲಿ ಯೋಗಕ್ಕೆ ಪ್ರಾಧಾನ್ಯ ನೀಡಲಾಗಿದೆ. ಯೋಗವೆಂದರೆ ಇಲ್ಲಿ ಹಠಯೋಗ ಆಧಾರಿತ ಶರೀರ ಭಂಗಿಗಳ ವ್ಯಾಯಾಮ ಎನ್ನಲಾಗದು. ಸಾಧಾರಣವಾಗಿ ಭಾರತೀಯ ವೇದಾಂತ ಮತ್ತು  ಯೋಗಿಕ ಸಾಹಿತ್ಯದಲ್ಲಿ ಮಾನವ ಜೀವನವೆನ್ನುವುದು ನಶ್ವರ, ಭೋಗವನ್ನು ತ್ಯಜಿಸಿದರೇ ಯೋಗಿಯಾಗಲು ಸಾಧ್ಯ ಮುಂತಾದ ಪರಿಕಲ್ಪನೆಗಳಿವೆ. ಇದಕ್ಕೆ ಪ್ರತಿಯಾಗಿ ಭೈರವ ವಿಜ್ಞಾನ ತಂತ್ರದಲ್ಲಿ ಜೀವನವನ್ನು ಅನುಭವಿಸುವುದು ಮತ್ತು ಆಧ್ಯಾತ್ಮಿಕ ಜಾಗೃತಿಗಳು ಬೇರೆ ಬೇರೆಯಲ್ಲ ಎಂದು ಸಾರಲಾಗಿದೆ. ಸಾಂಸಾರಿಕ ಕೋಟಲೆಗಳು ಎಲ್ಲರಿಗೂ ಇರುವುದು ಸಹಜ. ಅದೇ ರೀತಿ ಎಲ್ಲರೂ ಒಂದಲ್ಲ ಒಂದು ನೆಲೆಯಲ್ಲಿ ಆಧ್ಯಾತ್ಮಿಕ ಜ್ಞಾನದ ಅನ್ವೇಷಣೆಯಲ್ಲಿ ತೊಡಗಿರುತ್ತಾರೆ. ಅಂಥ ಎಲ್ಲರಿಗೂ ಈ ವಿಜ್ಞಾನ ಭೈರವ ತಂತ್ರವು ಒಂದು ಸೇತುವೆಯಂತೆ ಕೆಲಸ ಮಾಡುತ್ತದೆ.

ಇದರಲ್ಲಿ ವಿಜ್ಞಾನ ಮತ್ತು ಭೈರವ ಎಂಬೆರಡು ಪದಗಳಿವೆ. ವಿಶೇಷವಾದ ಜ್ಞಾನ ವಿಜ್ಞಾನವಾದರೆ, ಭೈರವನೆಂಬ ಪದಕ್ಕೆ ಭೀಕರ, ಭೀಷಣ ಎಂಬ ಅರ್ಥಗಳು ಸ್ಫುರಿಸಿದರೂ, ಅದರ ನೈಜ ನೆಲೆಯಿರುವುದು, ವ್ಯಕ್ತಿಯ ಅಜ್ಞಾನವನ್ನು ಕಳೆದು, ಮಾನಸಿಕ ಸ್ಥಿತಿಯನ್ನು ಹದಗೊಳಿಸುವ ಶಿವನ ಉಗ್ರರೂಪವಿದೆಂದು ಹೇಳಬಹುದು. ವಿಜ್ಞಾನ ಭೈರವ ತಂತ್ರವೆಂದರೆ ವ್ಯಕ್ತಿಯ ದೈನಂದಿನ ಜೀವನದಲ್ಲಿ ಮೂಲಭೂತ ಬದಲಾವಣೆ ಮತ್ತು ಜಾಗೃತಿಯನ್ನು ಮೂಡಿಸುವ ಧ್ಯಾನ ವಿಧಾನದ ಸಂಹಿತೆಯೆಂದು ಸಂಕ್ಷಿಪ್ತವಾಗಿ ವಿವರಿಸಬಹುದು.

ಮುಖ್ಯ ತತ್ತ್ವಗಳು

ಇದರ ಪ್ರಮುಖ ತತ್ತ್ವ ವೆಂದರೆ, ನಾವು ಯಾರೂ ಭೌತಿಕವಾಗಿ ಕಾಣುವಂತೆ ರಕ್ತ-ಮಾಂಸಗಳಿಂದ ಕೂಡಿದ ಬಾಹ್ಯ ಸ್ವರೂಪರಲ್ಲ. ಬದಲಾಗಿ ನಮ್ಮ ವೈಯುಕ್ತಿಕ ಸ್ವಭಾವವು ಸಂಸ್ಕೃತದಲ್ಲಿ ಹೇಳುವಂತೆ ಸ್ಪಂದನ ಎಂಬ ಅವಿನಾಶಿ ಶಕ್ತಿ. ಅದು ಹಿಂದೆಯೂ ಇದ್ದಿತು ಮತ್ತು ಮುಂದೆ ಕೂಡ ಇರುತ್ತದೆ. ಆಧುನಿಕ ವಿಜ್ಞಾನ ಕೂಡ ಇದನ್ನೇ ಹೇಳುತ್ತದೆ. ವಿಜ್ಞಾನ ಭೈರವ ತಂತ್ರದ ತಾಂತ್ರಿಕ ಭಾಗವು ಜಗತ್ತನ್ನು ಮಾಯೆ ಅಥವಾ ಭ್ರಮೆ ಎಂದು ಹೇಳುವುದಿಲ್ಲ, ಬದಲಾಗಿ ಅದು ಶಕ್ತಿಯನ್ನು ಆರಾಧಿಸುತ್ತದೆ ಮತ್ತು ಗೌರವಿಸುತ್ತದೆ. ಬ್ರಹ್ಮಾಂಡವೇ ಒಂದು ಶಕ್ತಿಯೆಂದು ಪರಿಭಾವಿಸುವವನಿಗೆ, ಅದು ಶಿವನ ಸ್ವರೂಪವಾಗಿಯೇ ಕಾಣುತ್ತದೆ. ತೆರೆದ ಕಣ್ಣುಗಳಿಂದ ಅವಲೋಕಿಸುವ ವಿಶಾಲ ದೃಷ್ಟಿಯನ್ನು ಅದು ಒದಗಿಸುತ್ತದೆ. ಹೀಗಾಗಿ ಆಂತರ್ಯದಲ್ಲಿ ಅದು ನಮ್ಮೆಲ್ಲರ ಪ್ರಜ್ಞೆಯ ಅಂಗವೇ ಆಗಿರುತ್ತದೆ. ಅದು ಗುಣಾತ್ಮಕವಾಗಿ ಶಕ್ತಿ ಮತ್ತು ವಸ್ತುಗಳಿಗಿಂತ ಭಿನ್ನವಾಗಿರುತ್ತದೆ. ನಾವು ನಮ್ಮ ಶಕ್ತಿಯನ್ನು ಪುನರುಜ್ಜೀವನಗೊಳಿಸಿಕೊಳ್ಳಲು ಬಯಸುವುದಾದರೆ, ಶಿವ ಸ್ವರೂಪವು ನಮ್ಮ ಅರಿವು, ಆನಂದಗಳನ್ನು ವೃದ್ಧಿಸಿ, ನಮ್ಮ ಪ್ರಜ್ಞೆಯ ಅಂತರ್ದರ್ಶನ ಮಾಡಿಸಬಲ್ಲ ವೇಗವರ್ಧಕವಾಗಿ ಕೆಲಸಮಾಡುತ್ತದೆ. 

ತಂತ್ರಗಳು

ಈ ಗ್ರಂಥದಲ್ಲಿ ಒಟ್ಟು ೧೧೨ ತಂತ್ರಗಳ ಪ್ರಸ್ತಾಪವಿದೆ. ಇವುಗಳಲ್ಲಿ ಪ್ರಾಪಂಚಿಕ ವಿಷಯಗಳೂ ಇವೆ. ಜೀವನದ ಪ್ರತಿಹಂತದಲ್ಲಿ ಯೋಗವನ್ನು ಮರೆಯದಂತೆ, ಅದರ ಅನುಸರಣೆಯಿಂದ ಜೀವನವನ್ನು ಪೂರ್ತಿಯಾಗಿ ಅನುಭವಿಸುವ, ನಮ್ಮತನವನ್ನು ಗಟ್ಟಿಗೊಳಿಸುವ ಬೋಧನೆಯನ್ನು ಅದು ಒಳಗೊಂಡಿದೆ.

ಈ ಎಲ್ಲ ತಂತ್ರ ಅಭ್ಯಾಸಗಳ ಮುಖ್ಯ ಉದ್ದೇಶವೆಂದರೆ, ಚಂಚಲ ಮನಸ್ಸನ್ನು ಶಾಂತಗೊಳಿಸಿ, ಅದನ್ನು ಪ್ರಸ್ತುತ ಸಮಯಕ್ಕೆ ನೆಲೆಗೊಳಿಸುವುದು ಮತ್ತು ಆಯಾ ಸಮಯದ ನಮ್ಮ ಕ್ರಿಯೆಗಳೇ ಭವಿಷ್ಯವನ್ನು ನಿರ್ಧರಿಸುತ್ತದೆಯಲ್ಲವೆ. ಹೀಗಾಗಿ ನಮ್ಮ ಕ್ರಿಯೆಗಳಿಗೆ ನಾವೇ ಬಾಧ್ಯಸ್ತರು ಎನ್ನುವುದನ್ನು ವಿಜ್ಞಾನ ಭೈರವ ತಂತ್ರವು ಪದೇ ಪದೇ ಶೃತಗೊಳಿಸುತ್ತದೆ. ಇಲ್ಲಿ ನೀಡಿರುವ ಬೋಧೆಗಳು ಯಾವುದೇ ಧರ್ಮ ಅಥವಾ ಜಾತಿ ಹಾಗೂ ನೈತಿಕ ಕಟ್ಟಪಾಡುಗಳನ್ನು ನಿರ್ದೇಶಿಸಿ ಹೇಳಿರುವುದಲ್ಲ. ಇಲ್ಲಿ ಯಾವುದೇ ತಾತ್ತ್ವಿಕ ನಿರೀಕ್ಷೆಗಳಿಲ್ಲ. ಬೌದ್ಧಿಕ ಕಸರತ್ತಿನ ಚಮತ್ಕಾರಿಕ ವಿವರಣೆಗಳಿಲ್ಲ. ಇಲ್ಲಿರುವುದು ಕೇವಲ ಆತ್ಮಾನುಸಂಧಾನದ ಮಾರ್ಗ ಮಾತ್ರ.

ಕೆಲವು ತಂತ್ರಗಳು ಉಸಿರಾಟಕ್ಕೆ ಸಂಬಂಧಿಸಿವೆ. ಮತ್ತು ಕೆಲವು ಭಾವನಾತ್ಮಕವಾದ ಸಂಗತಿಗಳಾದ ಪ್ರೀತಿ, ನಿರಾಶೆ ಮತ್ತು ಕೋಪಗಳಿಗೆ ಸಂಬಂಧಿಸಿವೆ. ಇದರಲ್ಲಿ ಮಾನವ ಮತ್ತು ಪ್ರಕೃತಿಗಳ ನಡುವಣ ಮಾನಸಿಕ ಸಂಬಂಧಗಳು ಇರುವಂತೆಯೇ. ಮತ್ತೆ ಕೆಲವು ಮಾನವ ಶರೀರವು ಅನುಭವಿಸುವ ಶಬ್ದ, ರೂಪ, ರಸ, ಗಂಧ ಮುಂತಾದ ಸ್ಪಂದನೆಗಳನ್ನು ಕುರಿತು ಹೇಳುತ್ತವೆ. ಅಂತಿಮವಾಗಿ ಇವೆಲ್ಲವೂ ಮಾನವನ ಪ್ರಜ್ಞಾ ಶಕ್ತಿಯನ್ನು ಮಾತ್ರವೇ ಆಧರಿಸಿದ್ದು, ಅವನು ಸಚೇತನವಾಗಿರಲು ಕಾರಣವಾಗುವ ಎಲ್ಲವನ್ನೂ ಒಳಗೊಂಡಿದೆ. ಆದರೆ ಯಾವುದೇ ಬಾಹ್ಯಶಕ್ತಿಗಳಿಂದ ಪ್ರೇರಿತನಾಗದಂತೆ, ಅಂತರಂಗದ ದನಿಯನ್ನು ಮಾತ್ರ ಗ್ರಹಿಸಲು ವ್ಯಕ್ತಿಯನ್ನು ಅಣಿಗೊಳಿಸುತ್ತದೆ. ಹೀಗಾಗಿ ವಿಜ್ಞಾನ ಭೈರವ ತಂತ್ರವು ಒಂದು ಪ್ರಜ್ಞಾ ಕೇಂದ್ರಿತ ತತ್ತ್ವ ವಿಚಾರವೆಂದು ಗಂಭೀರವಾಗಿ ಪರಿಗಣಿಸುವುದು ಅತ್ಯವಶ್ಯ.

ಈ ತಂತ್ರದ ಕೆಲವು ಶ್ಲೋಕಗಳು ಮತ್ತು ಅವುಗಳ ಕನ್ನಡ ಅನುವಾದವನ್ನು ಈ ಕೆಳಗೆ ನೀಡಲಾಗಿದೆ. ಇದನ್ನು ಗಮನಿಸಿದರೆ ವಿಜ್ಞಾನ ಭೈರವ ತಂತ್ರದ ಬಾಹ್ಯ ಸ್ವರೂಪ ತಿಳಿಯುತ್ತದೆ. ಹೆಚ್ಚಿನ ಅಧ್ಯಯನ ಬಯಸುವವರು, ವಿಸ್ತೃತ ಲೇಖನಗಳಿಗೆಂದು, ಅಂತರಜಾಲದ ನೆರವನ್ನು ಪಡೆಯಬಹುದು.  

ಆಕಾಶಮ್ ವಿಮಲಮ್ ಪಶ್ಯನ್ ಕೃತ್ವಾ ದೃಷ್ಟಿಮ್ ನಿರಂತರಂ |
ಸ್ತಬ್ಧಾತ್ಮಾ ತತ್ ಕ್ಷಣಾತ್ ದೇವಿ ಭೈರವಮ್ ವಪುರಾಪ್ನುಯಾತ್ ||

ಬಹಳ ಹೊತ್ತಿನ ವರೆಗೆ ನಿರಭ್ರ ಆಕಾಶವನ್ನೆ ಅವಲೋಕಿಸುತ್ತಿದ್ದ, ಪ್ರಜ್ನೆಯು ಆಕಾಶದೊಂದಿಗೆ ಮಿಲಿತವಾಗಿ ಭೈರವ ಅಥವಾ ಶೂನ್ಯ  ಸ್ಥಳದಲ್ಲಿ ಐಕ್ಯವಾಗುತ್ತಾನೆ. 

ಚಲಾಸನೇ ಸ್ಥಿತಾಸ್ಯಥಾ ಶನೈರವ ದೇಹಾಚಾಲನಾತ್ | 
ಪ್ರಶಂತೇ ಮಾನಸೇ ಭಾವೇ ದೇವೀ ದಿವ್ಯಯುಗಯಾಪ್ನುಯಾತ್ ||

ಚಲನೆಯೇ ದಿವ್ಯೌಷಧ, ಚಲನೆ ಭಾವನೆಗಳನ್ನು ಉದ್ದೀಪಿಸುತ್ತದೆ. ಈ ಕ್ಷೇತ್ರದಲ್ಲಿ ನಮಗೆ ಪರಿಚಿತವಿರುವ ಕೆಲವು ಚಲನೆಗಳನ್ನು ಹೆಸರಿಸಬಹುದೆಂದರೆ, ನರ್ತನ, ವ್ಯಾಯಾಮ ಮುಂತಾದ್ದನ್ನು ಸೇರಿಸಿಕೊಳ್ಳಬಹುದು. ನೀವು ಶರೀರವನ್ನು ಎಡಕ್ಕೆ, ಬಲಕ್ಕೆ, ಹಿಂದೆ, ಮುಂದೆ ಚಲಿಸುತ್ತಿದ್ದಂತೆ ಮನಸ್ಸು ಸ್ಥಿರಗೊಂಡು, ಅದು ನಮ್ಮ ಶರೀರದ ಚೇತನದ ಜತೆ ಸಂಲಗ್ನಗೊಳ್ಳುತ್ತದೆ. ದೇವಾಲಯಗಳಲ್ಲಿ ಬಳಸುವ ಡೋಲೋತ್ಸವದಲ್ಲಿ ದೇವರ ಮೂರ್ತಿಯನ್ನು ಉಯ್ಯಾಲೆಯಲ್ಲಿ ಚಲಿಸುವಂತೆ ಮಾಡಲಾಗಿರುವುದನ್ನು ನೀವು ಗಮನಿಸಿರುತ್ತೀರಿ. ಸೂಫಿಗಳು ತಮ್ಮ ಮಂತ್ರ ಪಠಣ ಕಾಲಕ್ಕೆ ಚಲನಯುಕ್ತ ಧ್ಯಾನ ಪದ್ಧತಿಯನ್ನು ಅನುಸರಿಸುವರು. ಭಜನೆ,  ಕಾಲದಲ್ಲಿ, ಉತ್ಸವ, ಕೋಲ, ಕಥಕ್ಕಳಿ ಮುಂತಾದ ದೇವತಾರಾಧನೆಗಳ ಸಂದರ್ಭಗಳಲ್ಲಿ  ನಮಗರಿವಿಲ್ಲದಂತೆ, ನಮ್ಮ ಶರೀರಕ್ಕೆ ಚಲನೆಯೊದಗುತ್ತದೆ. ಅದು ದೈವಿಕ ಶಕ್ತಿಯೊಂದಿಗೆ ಸಾಮೀಪ್ಯ ಸಾಧಿಸುವ ಸರಳ ವಿಧಾನ. 

ಆಸನೇ ಶಯನೇ ಸ್ಥಿತ್ವಾ ನಿರಾಧಾರಾಮ್ ವಿಭಾವಯಾನ್ | 
ಸ್ವದೇಹಂ ಮಾನಸಿ ಕ್ಷೀಣೇ ಕ್ಷಣಾತ್ ಕ್ಷೀಣಾಶಯೋರ್ಭವೇತ್ ||

ನಾವು ಕುಳಿತಿರುವಾಗ, ಮಲಗಿರುವಾಗ, ಶರೀರಕ್ಕೆ ಯಾವ ಆಧಾರವಿಲ್ಲದಂತೆ ಇದೆಯೆಂದು ಭಾವಿಸಿಕೊಳ್ಳಿ. ಈ ಸ್ಥಿತಿಯಲ್ಲಿ ನಮ್ಮ ಭಾವನೆಗಳೂ ನಿರಾಧಾರವಾಗುತ್ತವೆ. ನಿಮ್ಮ ಯೋಚನೆಯ ಸರಣಿಗೆ ಭಂಗ ಬಂದು, ಅದು ಸ್ಥಗಿತಗೊಳ್ಳುತ್ತದೆ. 

ಮಧ್ಯ ಜಿಹ್ವೇ ಸ್ಫರೀತಸ್ಯೇ ಮಧ್ಯೇ ನಿಕ್ಷಿಪ್ಯ ಚೇತನಾಮ್ | 
ಹೂಚ್ಛ್ರಂ ಮನಸಾ ಕುರ್ವಾಃ ತತಃ ಶಾಂತೇ ಪ್ರಲೀಯತೇ ||

ನಾಲಿಗೆ ತುದಿಯನ್ನು ಅಂಗುಳಿಗೆ ತಗುಲಿಸಿದಾಗ, ಆಜ್ಞಾಚಕ್ರ ಮತ್ತು ಸಹಸ್ರಾರಗಳಿಗೆ ಚೇತನ ಒದಗಿಸುವ ಸ್ಥಳಾವಕಾಶವು ಬಾಯಿಯಲ್ಲಿ ಉಂಟಾಗುತ್ತದೆ. ಖೇಚರೀ ಮುದ್ರೆಯನ್ನು ಹೋಲುವ ಈ ಭಂಗಿಯಲ್ಲಿದ್ದುಕೊಂಡು, ಹಾ ಎಂದು ಉಚ್ಚರಿಸುತ್ತ, ದೀರ್ಘಶ್ವಾಸವನ್ನು ಎಳೆದುಕೊಂಡಾಗ, ಮನಃಶಾಂತಿಯು ತಾನಾಗಿಯೇ ಲಭಿಸುತ್ತದೆ.

ಉಪವಿಶ್ಯಾಸನೇ ಸಮ್ಯಕ್ ಬಾಹು ಕೃತ್ವಾರ್ಧಾ ಕುಂಚಿತಹೌ | 
ಕಕ್ಷವ್ಯೋಮ್ನಿ ಮನಾಃ ಕುರ್ವನ್ ಶಮಮಾಯತಿ ತಲ್ಲಯಾತ್ ||

ಸೂಕ್ತ ಸ್ಥಿತಿಯಲ್ಲಿ ಕುಳಿತು ಕುತ್ತಿಗೆ ಮತ್ತು ತಲೆಗಳನ್ನು ನೇರವಾಗಿರುವಂತೆ ಇರಿಸಿಕೊಂಡು, ಬಾಹುಗಳನ್ನು ವೃತ್ತಾಕಾರವಾಗಿರುವಂತೆ ಮೇಲೆತ್ತಿ, ಹಿಡಿಯಿರಿ. ಆಗ ಮನಸ್ಸು ಈ ಸ್ಥಿತಿಯಲ್ಲಿ ಶಾಂತತೆಯನ್ನು ಹೊಂದುತ್ತದೆ. 

ಮೃದ್ವಾಸನೇ ಸ್ಥಿತೈಕೇನ ಹಸ್ತ ಪಾದೌ ನಿರಾಶ್ರಯಂ |
ನಿಧಾಯ ತತ್ ಪ್ರಸಂಗೇನ ಪರಾ ಪೂರ್ಣಾ ಮತಿರ್ಭವೇತ್ || 

ಮೃದುವಾದ ಪೃಷ್ಠದ ಒಂದು ಭಾಗವನ್ನಾಧರಿಸಿ ಕುಳಿತು, ಮತ್ತೊಂದನ್ನು ಸ್ವಲ್ಪ ಎತ್ತಿ, ಕೈ, ಕಾಲುಗಳನ್ನು ವಿರಾಮಸ್ಥಿತಿಯಲ್ಲಿ ಇಟ್ಟುಕೊಳ್ಳಿ. ಈ ಸ್ಥಿತಿಯಲ್ಲಿ ಚಿತ್ತವು ಏಕಾಗ್ರತೆಯನ್ನು ಹೊಂದಿ ಪರಬ್ರಹ್ಮದೊಂದಿಗೆ ಸಂಪರ್ಕ ಸಾಧಿಸುತ್ತದೆ. ನಮ್ಮ ಅನೇಕ ಯೋಗಿಕ ಆಸನಗಳು ತಿಳಿಸುವ ಕ್ರಮವೂ ಇದೇ ಆಗಿರುತ್ತದೆ. ಇಲ್ಲಿ ಶರೀರದ ಶಾಂತತೆಯೊಂದಿಗೆ ಮಾನಸಿಕ ಶಾಂತತೆಯನ್ನು ಸಮಾನವಾಗಿ ಸಾಧಿಸಲು ಈ ಬಗೆಯ ಆಸನಗಳು ನೆರವಾಗುತ್ತವೆ.

ಚಿತ್ರ ಕೃಪೆ : ಶ್ರೀ ಪುಟ್ಟಸ್ವಾಮಿ ಗುಡಿಗಾರ್ 
* * * * * * *

ಮಂಗಳವಾರ, ಜನವರಿ 1, 2013

ಹೀಗೊಬ್ಬ ಭೈರವ ಭಕ್ತ


ಆತ್ಮೀಯ ಓದುಗರೆಲ್ಲರಿಗೂ ನೂತನ ವರ್ಷದ ಶುಭಾಶಯಗಳು 


ಸಿದ್ಧರಾಮಪುರದ ಕಾಲಭೈರವ ಮಂದಿರ



ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ಬುಕ್ಕರಾಯಸಮುದ್ರ ಮಂಡಲದಲ್ಲಿ ಒಂದು ಪುಟ್ಟ ಗ್ರಾಮವಿದೆ. ಅದರ ಹೆಸರು ಸಿದ್ಧರಾಮಪುರ. ಅಲ್ಲಿ ಒಂದು ಭೈರವನ ಚಿಕ್ಕ ದೇವಾಲಯವಿದೆ. ಅದು ತನ್ನ ಐತಿಹಾಸಿಕತೆಯಿಂದಲಾಗಲೀ, ಶಿಲ್ಪಕಲಾವೈಭವದಿಂದಾಗಲೀ ಪ್ರಸಿದ್ಧವಾಗಲಿಲ್ಲ. ಬದಲಾಗಿ ಭೈರವನ ಪರಮ ಭಕ್ತನೊಬ್ಬ ಮಾಡಿದ ಸಾಧನೆ ಮತ್ತು ಅವರ ಜನೋಪಯೋಗೀ ಕೆಲಸಗಳಿಂದ ಅದೀಗ ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದೆ. ಇದರ ನಿರ್ಮಾತೃ ಇದೇ ಗ್ರಾಮದ ನಿವಾಸಿಯಾಗಿದ್ದ ಶ್ರೀ ತಿಪ್ಪಲೂರು ಪೆದ್ದ ವೆಂಕಟರೆಡ್ಡಿ. ಅವರು ಭೈರವನ ಪರಮಭಕ್ತರಾಗಿದ್ದರು. ಭೈರವನ ಸಾಧಕರು ಪಡೆದ ಫಲಗಳು ಸಾಮಾಜಿಕವಾಗಿ ಮಾತ್ರವಲ್ಲದೆ, ಮೂಕಪಶುಗಳ ನೆರವಿಗೆ ಹೇಗೆ ಒದಗಿ ಬಂದಿತೆನ್ನುವುದನ್ನು ಹೇಳುವ ಉದ್ದೇಶದಿಂದ ಇಲ್ಲಿ ಆ ಬಗ್ಗೆ ಒಂದು ಪ್ರಸ್ತಾಪವಿದೆ. ಭೈರವನ ಬಗ್ಗೆ ಅಪಾರ ಶ್ರದ್ಧೆ ಗೌರವಗಳನ್ನು ಹೊಂದಿದ್ದ ಅವರಿಗೆ ಭೈರವನ ಕೃಪೆಯಾಗಿತ್ತೆಂದು ಇಲ್ಲಿನ ಹಲವು ನಿವಾಸಿಗಳು ನಂಬಿದ್ದಾರೆ. ಅದರಂತೆ ಪೆದ್ದ ವೆಂಕಟರೆಡ್ಡಿಯವರ ಜೀವನದಲ್ಲಿ ನಡೆದ ಅನೇಕ ಘಟನೆಗಳು ಇದನ್ನು ಪುಷ್ಟೀಕರಿಸುತ್ತವೆ. 


ರೆಡ್ಡಿಯವರು ಪಶುವೈದ್ಯವನ್ನು ಅರಿತಿದ್ದರು. ಅವರದು ಆಯುರ್ವೇದ ಪದ್ಧತಿ. ತಮ್ಮ ಗ್ರಾಮದ ಆಸುಪಾಸಿನಲ್ಲಿ ಯಾವುದೇ ಜಾನುವಾರುಗಳು ರೋಗಕ್ಕೆ ತುತ್ತಾಗಿದ್ದರೂ, ಅವುಗಳನ್ನು ಸೂಕ್ತವಾಗಿ ಉಪಚರಿಸುತ್ತಿದ್ದರು. ಇದಕ್ಕೆಂದು ಅವರು ಪಡೆಯುತ್ತಿದ್ದ ಸಂಭಾವನೆಯೆಂದರೆ ಒಂದು ತೆಂಗಿನ ಕಾಯಿಯ ಬೆಲೆ ಮಾತ್ರ. ಅದನ್ನೂ ಅವರು ಭೈರವನ ನಿವೇದನೆಗೆಂದೇ ಬಳಸುತ್ತಿದ್ದರು. ತಮ್ಮ ಅಲೌಕಿಕ ಸಾಧನೆಯಿಂದಾಗಿ ಅವರಿಗೆ ಎಲ್ಲ ಪಶುಗಳ ರೋಗಗಳು ತಾನಾಗಿಯೇ ತಿಳಿಯುತ್ತಿತ್ತು. ಅವುಗಳ ವೇದನೆಯನ್ನು ನಿವಾರಿಸಲು ಗಂಟೆಗಟ್ಟಲೆ ಸಾಧನೆ ಮಾಡಿ ಶಕ್ತಿಯನ್ನು ಪಡೆಯುತ್ತಿದ್ದರು. ಅದೆಲ್ಲದರ ಮೂಲ ಶಕ್ತಿ ಭೈರವನೇ ಎಂದು ನಂಬಿದ್ದರು. ಶ್ರೀ ರೆಡ್ಡಿಯವರು ತಮ್ಮ ತೊಂಭತ್ತನೆಯ ವಯಸ್ಸಿನಲ್ಲಿ ತೀರಿಕೊಂಡರು. ಅವರ ಸಮಾಧಿಯನ್ನು ದೇವಾಲಯದ ಸಮೀಪವೇ ನಿರ್ಮಿಸಿ, ಯೋಗಿಗಳು, ಸನ್ಯಾಸಿಗಳಿಗೆ ನಡೆಸುವ ಮರಣೋತ್ತರ ವಿಧಿಗಳನ್ನು ಆಚರಿಸಿ, ಗೌರವ ಸಲ್ಲಿಸಲಾಯಿತು. ಗ್ರಾಮದ ಹೊರವಲಯದಲ್ಲಿ ಕಳೆದ ೨೯ರ ಏಪ್ರಿಲ್‌ನಲ್ಲಿ ಇಲ್ಲಿದ್ದ ಭೈರವನ ಚಿಕ್ಕ ಗುಡಿಯನ್ನು ಪುನರ್ ನಿರ್ಮಾಣಗೊಳಿಸಿ ಲೋಕಾರ್ಪಣೆ ಮಾಡಲಾಯಿತು. 

* * * * * * *

ಭಾನುವಾರ, ಡಿಸೆಂಬರ್ 2, 2012

ಭೈರವನ ಲಾಕ್ಷಣಿಕ ಸ್ವರೂಪಗಳು




ಭೈರವನ ಅಷ್ಟರೂಪಗಳು

ಈ ಹಿಂದಿನ ಸಂಚಿಕೆಗಳಲ್ಲಿ ಭೈರವನ ಅಷ್ಟರೂಪಗಳ ಬಗ್ಗೆ ಬರೆದಿದ್ದೆ. ಈಗ ಅವುಗಳ ಲಾಕ್ಷಣಿಕ ಸ್ವರೂಪಗಳನ್ನು ವಿವರಿಸುವ ಸಾಹಿತ್ಯ ದೊರಕಿದೆಯಾಗಿ ಅದನ್ನು ಇಲ್ಲಿ ನೀಡಿದ್ದೇನೆ. ಇದೇಕೆ ಮುಖ್ಯವಾಗುತ್ತದೆಯೆಂದರೆ, ಯಾವದೇ ದೇವತೆಯ ಮೂರ್ತಿಗಳನ್ನು ಕಡೆಯುವಾಗ ಶಿಲ್ಪಿಗೆ ಒಂದು ಸರಿಯಾದ ಆಧಾರ ಬೇಕಾಗುತ್ತದೆ. ಅಂಥ ವ್ಯವಸ್ಥೆಯನ್ನು ಪೂರ್ವಿಕರು ಧ್ಯಾನಶ್ಲೋಕವೆಂಬ ಕ್ರಮದಲ್ಲಿ ಒದಗಿಸಿರುತ್ತಾರೆ. ಅವುಗಳನ್ನು ಆಧರಿಸಿ ನಿರ್ಮಿಸಿದ ಮೂರ್ತಿಯು ಸರ್ವಾಂಗ ಸುಂದರವಾಗಿ ಮೂಡಿಬರಲು, ಆಯಾ ದೇವತೆಯ ಲಕ್ಷಣ, ಸ್ವರೂಪಗಳನ್ನು ಸವಿವರವಾಗಿ ಅವುಗಳಲ್ಲಿ ನೀಡಿರುತ್ತಾರೆ. ಇಂಥ ಒಂದು ಉತ್ತಮ ವ್ಯವಸ್ಥೆಯಿರುವ ಕಾರಣದಿಂದಲೇ, ದೇವ ವಿಗ್ರಹಗಳು ವಿರೂಪವಾಗದೇ, ಶಿಲ್ಪಿಯು ತನ್ನ ವೈಯುಕ್ತಿಕ ಅಭಿಪ್ರಾಯಗಳನ್ನು ಅದರಲ್ಲಿ ಮೂಡಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಗಣಪತಿಯ ವಿಗ್ರಹಗಳು ಇತ್ತೀಚೆಗೆ ತಳೆಯುತ್ತಿರುವ ಅವತಾರಗಳ ಹಿನ್ನೆಲೆಯಲ್ಲಿ ಈ ಪುರಾತನ ಕ್ರಮವನ್ನು ಪರಿಶೀಲಿಸಿದರೆ ಅದರ ಮಹತ್ವ ಅರಿವಾಗುತ್ತದೆ.

ಭೈರವನ ಮೂಲರೂಪವಾದ ಕ್ಷೇತ್ರಪಾಲ ಭೈರವನ ಲಕ್ಷಣಗಳೊಂದಿಗೆ ಆರಂಭವಾಗುವ ಈ ಸಾಹಿತ್ಯದಲ್ಲಿ ಆತನ ಇನ್ನಿತರ ಎಂಟು ರೂಪಗಳ ವಿವರಗಳಿವೆ. ಅದೇ ರೀತಿ, ಭೈರವನ ಆರಾಧನೆಯು ಆತನ ಸ್ತ್ರೀಪಾಲುದಾರರಿಲ್ಲದೆ ಪರಿಪೂರ್ಣವಾಗದು ಎಂಬ ಹಿನ್ನೆಲೆಯಲ್ಲಿ ಗಮನಿಸಿದರೆ, ಇಲ್ಲಿ ವಾರಾಹಿ, ಚಾಮುಂಡಾದಿ ಸಪ್ತ ಮಾತೃಕೆಯರ ಶಕ್ತಿ ಸಹಿತನಾಗಿರುವಂತೆ ಭೈರವನನ್ನು ವರ್ಣಿಸಲಾಗಿದೆ. 

ಈ ಶ್ಲೋಕಗಳು ಶೈವ, ವೈಷ್ಣವ ಪಾರಮ್ಯಗಳನ್ನು ಬಿಂಬಿಸುವ ಪರಿಪಾಠವಿದ್ದ ಕಾಲಕ್ಕಿಂತ ಹಿಂದಿನದು ಅಥವಾ ಆ ನಂತರದ ಸುಧಾರಣೆಯ ದಿನಗಳ ನಂತರ ಬಂದಿರಬಹುದೆಂದು ಊಹಿಸಲು ಸಮಾನ ಅವಕಾಶಗಳಿವೆ. ಏಕೆಂದರೆ ಈ ರಚನೆಯಲ್ಲಿ ಲಕ್ಷ್ಮೀ, ಗರುಡ, ಶಂಖ, ಚಕ್ರಗಳ ಪ್ರಸ್ತಾಪವಿದೆ. ಶೈವ ಪಾರಮ್ಯವನ್ನೇ ಬಿಂಬಿಸುವ ಇನ್ನೊಂದು ಭೈರವ ಸಹಸ್ರನಾಮದ ಪಠ್ಯವಿದೆ. ಅದನ್ನು ಅನುವಾದಿಸುತ್ತಿರುವಾಗ ಮೂಡಿದ ಭಾವಗಳನ್ನು ಪ್ರತ್ಯೇಕವಾಗಿ ಇನ್ನೊಂದು ಲೇಖನದಲ್ಲಿ ಮುಂದೆ ವಿವರಿಸುತ್ತೇನೆ. 


ಕ್ಷೇತ್ರಪಾಲ ಭೈರವ

      ರಕ್ತಜ್ವಾಲಾ ಜಟಾಧರಂ ಶಶಿ ಧಾರಣ ರಕ್ತಾಂಗ ತೇಜೋಮಯಂ |
      ಢಕ್ಕಾ ಶೂಲ ಕಪಾಲ ಪಾಶ ಗದಾ ಧಾರಣಂ ಭೈರವಂ ||
      ನಿರ್ವಾಣಂ ಗತವಾಹನಂ ತ್ರಿನಯನಂ ಚ ಆನಂದ ಕೋಲಾಹಲಂ |
      ವಂದೇ ಭೂತ ಪಿಶಾಚನಾಥ ವಟುಕಂ ಕ್ಷೇತ್ರಸ್ಯ ಪಾಲಂ ಶುಭಮ್ 

1. ಅಸಿತಾಂಗ ಭೈರವ

    ತ್ರಿನೇತ್ರಂ ವರದಂ ಶಾಂತಂ ಮುಂಡಮಾಲಾ ವಿಭೂಷಿತಮ್ |
    ಶ್ವೇತವರ್ಣಂ ಕೃಪಾಮೂರ್ತಿಂ ಭೈರವಂ ಕುಂಡಲೋಜ್ವಲಂ ||
    ಗದಾ ಕಪಾಲ ಸಂಯುಕ್ತಂ ಕುಮಾರಸ್ಯ ದಿಗಂಬರಂ |
    ಬಾಣಪಾತ್ರಂ ಚ ಶಂಖಂ ಚ ಅಕ್ಷಮಾಲಾಂ ಚ ಕುಂಡಲಂ |
    ನಾಗಯಜ್ಞೋಪವೀತಂ ಚ ಧಾರಿಣಂ ಸುವಿಭೂಷಿತಂ ||
    ಬ್ರಹ್ಮಣಿ ಶಕ್ತಿಸಹಿತಂ ಹಂಸಾರೂಢಂ ಸುರೂಪಿತಮ್ |
    ಸರ್ವಾಭೀಷ್ಟದಾತಂ ನಿತ್ಯಂ ಅಸಿತಾಂಗ ಭೈರವಂ ಭಜಾಮ್ಯಹಂ ||

2. ಕ್ರೋಧ ಭೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ಗದಂ ಶಂಖಂ ಚ ಚಕ್ರಂ ಚ ಕಪಾಲ ಪಾತ್ರಂ ಚ ಧಾರಿಣಂ ||
    ಲಕ್ಷ್ಶಾ ಚ ಸಹಿತಂ ವಾಮೇ ಗರುಡಾಸನ ಸುಸ್ಥಿತಂ |
   ನೀಲವರ್ಣಂ ಮಹಾದೇವಂ ವಂದೇ ಶ್ರೀ ಕ್ರೋಧ ಭೈರವಂ ||

3. ಉನ್ಮತ್ತ ಭೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ಹೇಮವರ್ಣಂ ಮಹಾದೇವಂ ಹಸ್ತಿವಾಹನ ಸುಸ್ಥಿತಮ್ ||
    ಗದಂ, ಕಪಾಲಂ, ಮುಸಲಂ ದಧಂತಂ ಖಡ್ಗಂ ತಥಾ |
    ವಾರಾಹೀ ಶಕ್ತಿ ಸಹಿತಂ ವಂದೇ ಉನ್ಮತ್ತ ಭೈರವಂ  ||

4. ರುರು (ಗುರು) ಭೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ದಂಡಂ ಕೃಷ್ಣ ಮೃಗಂ ಪಾತ್ರಂ ಬಿಭ್ರಾಣಂ ಚಕ್ರಪಾನಕಮ್ ||
    ಮಾಹೇಶ್ವರ್ಯಾಯುಧಂ ದೇವಂ ವೃಷಾರೂಢ ಸ್ಥಿತವಾಹನಮ್ |
    ಶುದ್ಧ ಸ್ಫಟಿಕಂ ಶಂಕರಮ್ ತಂ ನಮಾಮಿ ರುರು ಭೈರವಮ್ ||

5. ಕಪಾಲ ಭೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ಪಾಶಂ, ವಜ್ರಂ  ತಥಾ ಗದಾ ಪಾನ ಪಾತ್ರಂ ಚ ಧಾರಿಣಮ್ ||
    ಇಂದ್ರಾಣೀ ಶಕ್ತಿ ಸಹಿತಂ ಗಜವಾಹನ ಸಂಸ್ಥಿತಂ |
    ಕಪಾಲ ಭೈರವಂ ವಂದೇ ಪದ್ಮರಾಗ ಪ್ರಭಾಂ ಶುಭಮ್ ||

6. ಚಂಡ ಭೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ಧನುರ್ಬಾಣಂ ಚ ಬಿಭ್ರಾಣಂ ಗದಾ ಪಾತ್ರಂ ತಥೈವ ಚ ||
    ಕೌಮಾರೀ ಶಕ್ತಿ ಸಹಿತಂ ಶಿಖಿ ವಾಹನ ಸುಸ್ಥಿತಮ್ ||
    ಗೌರೀವರ್ಣಾಯುಧಂ ದೇವಂ ವಂದೇ ಶ್ರೀ ಚಂಡ ಭೈರವಮ್ ||

7. ಭೀಷಣ ಬೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ಗದಾ ಶೂಲಂ ಕಪಾಲಂ ಚ ಧಾರಿಣಂ ಮುಸಲಮ್ ತಥಾ ||
    ಚಾಮುಂಡಾ ಶಕ್ತಿ ಸಹಿತಂ ಪ್ರೇತವಾಹನ ಸಂಸ್ಥಿತಮ್ ||
    ರಕ್ತವರ್ಣಂ ಮಹಾದೇವಂ ವಂದೇ ಭೀಷಣ ಭೈರವಮ್ ||

8. ಸಂಹಾರ ಭೈರವ

    ದಶಬಾಹುಂ ತ್ರಿನೇತ್ರಂ ಚ ಸರ್ಪಯಜ್ಞೋಪವೀತಿನಂ |
    ದಂಷ್ಟ್ರ ಕರಾಳವದನಂ ಅಷ್ಟೈಶ್ವರ್ಯ ಪ್ರದಾಯಕಮ್ || 
    ದಿಗಂಬರಂ ಕುಮಾರಂ ಚ ಸಿಂಹವಾಹನ ಸಂಸ್ಥಿತಮ್ |
    ಶೂಲಂ ಡಮರುಗಂ ಶಂಖಂ ಗದಾ ಚಕ್ರಾಂ ಚ ಧಾರಿಣಮ್ ||
    ಪಾನ ಪಾತ್ರಂ ಚ ಖಟ್ವಾಂಗಂ ಪಾಶಮಂಕುಶಮೇವ  ಚ |
    ಉಗ್ರರೂಪಂ ಮದೋನ್ಮತ್ತಂ ಶಿರೋಮಾಲಾ ವಿಭೂಷಿತಮ್ ||
    ಚಂಡಿಕಾ ಶಕ್ತಿ ಸಹಿತಂ ಧ್ಯಾಯೇತ್ ಸಂಹಾರ ಭೈರವಮ್ ||

* * * * * * *


ಶುಕ್ರವಾರ, ನವೆಂಬರ್ 2, 2012

ಅಧಿಯಮನ್ ಕೋಟೆಯ ಕಾಲಭೈರವ ಮಂದಿರ


ಅಧಿಯಮನ್ ಕೋಟೆಯ ಕಾಲಭೈರವ ಮಂದಿರ

ಆತ್ಮೀಯ ಓದುಗರೆಲ್ಲರಿಗೂ ಐವತ್ತೇಳನೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಕಾಲಭೈರವನ ಮಂದಿರಗಳು ದಕ್ಷಿಣ ಭಾರತದಲ್ಲಿ ತೀರ ಅಪರೂಪವೆನ್ನಬೇಕು. ಏಕೆಂದರೆ ಬಹುತೇಕ ಶಿವದೇವಾಲಯಗಳ ಈಶಾನ್ಯದಲ್ಲಿ ಚಂಡೇಶ್ವರ ಅಥವಾ ಕಾಲಭೈರವನನ್ನು ಸ್ಥಾಪಿಸಿ, ಆತನು ಕ್ಷೇತ್ರರಕ್ಷಕನಾಗಿರಬೇಕೆಂಬುದೇ ಮುಖ್ಯ ಆಶಯ. ಆದರೆ ಕಾಲಭೈರವನಿಗೆಂದೇ ಪ್ರತ್ಯೇಕ ದೇವಾಲಯವು ಬೆಂಗಳೂರಿಗೆ ಸಮೀಪದಲ್ಲಿದೆ. ಬೆಂಗಳೂರಿಗೆ ೧೨೦ ಕಿ.ಮೀ ದೂರದಲ್ಲಿದೆ ಧರ್ಮಪುರಿ. ಇಲ್ಲಿಂದ ಏಳು ಕಿ.ಮೀ. ದೂರದಲ್ಲಿರುವುದು ಅಧಿಯಮನ ಕೋಟೆ. ಇದು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೇವಾಲಯವೆಂಬುದು ಸ್ಥಳೀಯ ಐತಿಹ್ಯ. 

ತಮಿಳುನಾಡಿನ ಅನೇಕ ಬೃಹತ್ ದೇಗುಲಗಳಂತೆ ಇದೇನೂ ಶಿಲ್ಪಕಲೆಯಿಂದ ಜನರನ್ನು ಸೆಳೆದುದಲ್ಲ. ಬದಲಾಗಿ ಜನರ ನಂಬಿಕೆ ಮತ್ತು ಅಲ್ಲಿ ನಡೆಯುವ ವಿಶಿಷ್ಟ ಪೂಜಾವಿಧಾನಗಳಿಂದ ಸ್ಥಳೀಯರಿಗಿಂತ ಹೊರರಾಜ್ಯದವರನ್ನು ಆಕರ್ಷಿಸುತ್ತಿದೆ. ವಿಶೇಷತಃ ಬೆಂಗಳೂರು ಮತ್ತು ಆಂಧ್ರ ಪ್ರದೇಶಗಳ ಭಕ್ತರು ಇಲ್ಲಿನ ಕಾಲಭೈರವನಿಗೆ ನಡೆದುಕೊಳ್ಳುವರು. ಈ ಊರನ್ನು ಹಿಂದೆ ಅಧಿಯಮನೆಂಬ ಅರಸನು ಆಳುತ್ತಿದ್ದನಂತೆ. ಆತನ ಕಾಲಭೈರವನ ಪರಮಭಕ್ತ. ಅವನು ಯುದ್ಧಕ್ಕೆ ಹೊರಡುವ ಮೊದಲು ಮತ್ತು ವಿಜಯಶಾಲಿಯಾಗಿ ಬಂದನಂತರ ಭೈರವನ ದರ್ಶನ ಪಡೆಯುತ್ತಿದ್ದನಂತೆ. ತನ್ನ ಆಯುಧಗಳನ್ನು ಭೈರವನ ಮಂದಿರದಲ್ಲಿ ಇರಿಸುತ್ತಿದ್ದನಂತೆ. ಭೈರವನ ಎಲ್ಲ ವಿಗ್ರಹಗಳಲ್ಲಿ ತ್ರಿಶೂಲವು ಅವನ ಆಯುಧವಾಗಿರುವುದನ್ನು ಕಾಣಬಹುದಾದರೆ, ಇಲ್ಲಿ ಮಾತ್ರ ತ್ರಿಶೂಲದ ಬದಲು ನೀಳವಾದ ಕತ್ತಿಯನ್ನು ಇರಿಸಲಾಗಿದೆ. ಈ ಖಡ್ಗವನ್ನು ಅಧಿಯಮನ್ ರಾಜನು ಅರ್ಪಿಸಿದ್ದಾದುದರಿಂದ ಇಂದಿಗೂ ಅದಕ್ಕೆ ಅಲ್ಲಿ ಪೂಜೆ ಸಲ್ಲುತ್ತಿದೆ. 

ಪ್ರತಿ ತಿಂಗಳ ಬಹುಳ ಅಷ್ಟಮಿಯು ಅಧಿಯಮನ್ ಕೋಟೆಯ ಕಾಲಭೈರವನ ಪೂಜೆಗೆ ಪ್ರಶಸ್ತವೆಂದು ಹೇಳಲಾಗುತ್ತದೆ. ಆ ಸಂದರ್ಭಗಳಲ್ಲಿ ಅಲ್ಲಿ ಕುಂಬಳಕಾಯಿನ ವ್ಯಾಪಾರಿಗಳು ಹೆಚ್ಚು ಸೇರುತ್ತಾರೆ. ಭರಪೂರ ವ್ಯಾಪಾರ ನಡೆಸುತ್ತಾರೆ.  ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ರಾಹುಕಾಲದ ಪೂಜೆಯೆಂಬ ವಿಶಿಷ್ಠ ಪದ್ಧತಿಯಿದೆ. ರಾಹುಕಾಲವಿರುವಾಗ ನಿಂಬೆಹಣ್ಣುಗಳನ್ನು ಅರ್ಧಕ್ಕೆ ಕತ್ತರಿಸಿ, ಅದರ ರಸವನ್ನು ಹೊರತೆಗೆದು, ಸಿಪ್ಪೆಯನ್ನು ಹಿಂದಕ್ಕೆ ಮಡಿಸಿ, ಅದರಲ್ಲಿ ಎಣ್ಣೆ ಬತ್ತಿಗಳನ್ನು ಬಳಸಿ ದೀಪಾರಾಧನೆ ಮಾಡುವರು. 

ಅಧಿಯಮನಕೋಟೆಯಲ್ಲಿ ಇದೇ ಪದ್ಧತಿ ಇನ್ನೊಂದು ರೂಪ ತಳೆದಿದೆ. ಅದೆಂದರೆ, ಇಲ್ಲಿ ಬೂದುಕುಂಬಳಕಾಯಿಯನ್ನು ಅರ್ಧಕ್ಕೆ ಕತ್ತರಿಸಿ, ಅದನ್ನು ತೊಳೆದು ಶುಚಿಗೊಳಿಸಿ, ಅದನ್ನು ಅರಿಶಿನ-ಕುಂಕುಮದಿಂದ ಅಲಂಕರಿಸುವರು.   ಮಧ್ಯಭಾಗದ ತಿರುಳನ್ನು ಸ್ವಲ್ಪತೆಗೆದು, ಹಣತೆಯಂತಾಗಿಸಿ, ಅದರಲ್ಲಿ ಎಳ್ಳೆಣ್ಣೆಯಲ್ಲಿ  ಕೆಂಪು ಬತ್ತಿಯನ್ನು ಇಟ್ಟು ದೀಪದಂತೆ ಹಚ್ಚುವರು. ಇದಲ್ಲದೆ ಇದರ ಜತೆಗೆ ತೆಂಗಿನಕಾಯಿ ಮತ್ತು ನಿಂಬೆಹಣ್ಣುಗಳನ್ನು ದೀಪದಂತೆ ಬಳಸುವರು. ಈ ಪದ್ಧತಿಯಲ್ಲಿ ಬಳಸಲಾಗುವ ಮೂರು ವಿಧದ ದೀಪಗಳಿಗೆ ಮೂರು ಮಹತ್ವಗಳಿವೆಯೆಂದು ಅಲ್ಲಿನ ಸ್ಥಳೀಕರು ಹೇಳುತ್ತಾರೆ. ಅದೆಂದರೆ ಕುಂಬಳಕಾಯಿನ ದೀಪಾರಾಧನೆಯಿಂದ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತವೆ. ತೆಂಗಿನಕಾಯಿನ ದೀಪದಿಂದ ವೈವಾಹಿಕ ಸಮಸ್ಯೆಗಳು, ವಿವಾಹದಲ್ಲಿ ವಿಳಂಬ ಮುಂತಾದ ಸಮಸ್ಯೆಗಳಿಗೆ ಪರಿಹಾರವಿರುವಂತೆಯೇ, ನಿಂಬೆ ಹಣ್ಣಿನಿಂದ ಹಚ್ಚಲಾಗುವ ದೀಪವು ಮಕ್ಕಳಲ್ಲಿ ವಿದ್ಯಾಭ್ಯಾಸದ ಕೊರತೆಗಳನ್ನು ನೀಗಿಸುವುದೆಂದು ನಂಬಿಕೆ. 

ಭೈರವನ ಹಲವು ರೂಪಗಳಲ್ಲಿ ಸ್ವರ್ಣಾಕರ್ಷಣ ಭೈರವನೆನ್ನುವುದೂ ಒಂದು ರೂಪ. ಇದರ ಮಹತ್ವವೆಂದರೆ, ಲೌಕಿಕ ಸಂಪತ್ತುಗಳಿಗೆ ಸಾಧನವಾದ ಬಂಗಾರವನ್ನು ಭೈರವನು ದಯಪಾಲಿಸುವನು. ಅದರ ಮೂರ್ತಸ್ವರೂಪವನ್ನು ಅಧಿಯಮನಕೋಟೆಯ ದೇಗುಲದಲ್ಲಿ ಕಾಣಬಹುದು. ಕೃಷ್ಣ ಅಷ್ಟಮಿಯಂದು ಪ್ರತಿ ತಿಂಗಳೂ ಜರುಗುವ ಪೂಜೆಯಲ್ಲಿ,  ಹಣಕಾಸು ವಿಷಯ ಸಂಬಂಧವಾಗಿ ಭೈರವನ ಕೃಪೆಗೆಂದು ಅಲ್ಲಿ ಭಕ್ತರು ಸೇರುತ್ತಾರೆ. ದೀಪಗಳನ್ನು ಹಿಡಿದು ಪ್ರದಕ್ಷಿಣೆ ಬರುವರು. ದೇವಾಲಯದ ಒಳ ಭಾಗದ ಪ್ರಾಂಗಣ ಅಷ್ಟೇನೂ ವಿಶಾಲವಾಗಿಲ್ಲವಾದ್ದರಿಂದ, ಹಾಗೂ ಬರುವ ಭಕ್ತರ ಸಂಖ್ಯೆ ಅಧಿಕವಾಗುತ್ತ ನಡೆದಿರುವುದರಿಂದ, ಹೊರ ಭಾಗದ ಅಂಗಳದಲ್ಲಿ ಭೈರವನಿಗೆ ಭಕ್ತರ ಸಾಮೂಹಿಕ ಆರತಿಯ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಸೇರಿದ ಭಕ್ತರು ನಿಗದಿತ ಸಮಯದಲ್ಲಿ ಒಂದು ತಟ್ಟೆಯಲ್ಲಿಟ್ಟುಕೊಂಡ ಬೂದುಕುಂಬಳಕಾಯಿಯ ದೀಪ, ನಿಂಬೆಹಣ್ಣು ಮತ್ತು ತೆಂಗಿನಕಾಯಿಗಳ ದೀಪಗಳನ್ನು ಹಿಡಿದು, ಮನದಲ್ಲೇ ತಮ್ಮ ಇಷ್ಟಾರ್ಥಗಳನ್ನು ಹೇಳಿಕೊಳ್ಳುತ್ತ, ಭೈರವನಿಗೆ ಆರತಿ ಬೆಳಗುವರು. ಜತೆಯಲ್ಲೇ ದೃಷ್ಟಿ ಪರಿಹಾರಕ್ಕೆಂದು ಮೆಣಸಿನಕಾಯಿಗಳನ್ನೂ ಅರ್ಪಿಸುವರು. ದೇವಾಲಯದ ನಾಲ್ಕು ದಿಕ್ಕುಗಳೂ ದೀಪಗಳ ತಟ್ಟೆಗಳಿಂದ ತುಂಬಿಹೋಗಿರುತ್ತದೆ. ಸ್ಥಳೀಯ ಜ್ಯೋತಿಷಿಗಳು ಹೇಳುವಂತೆ ರವಿದಶೆಯ ಚಂದ್ರ ಭುಕ್ತಿಯಲ್ಲಿ, ರಾಹುದಶೆಯ ಕೇತು ಭುಕ್ತಿಯಲ್ಲಿ ಇಲ್ಲಿ ನಡೆಸುವ ದೀಪಾರಾಧನೆ ತುಂಬ ಫಲಕೊಡುತ್ತದೆ. ಏಕೆಂದರೆ ಇಲ್ಲಿ ೨೭ ನಕ್ಷತ್ರಗಳು, ೧೨ ರಾಶಿಗಳು ಮತ್ತು ನವಗ್ರಹಗಳು ಈ ಭೈರವನಲ್ಲಿ ಸನ್ನಿಹಿತವಾಗಿರುವುದು ವಿಶೇಷತೆಯೆನ್ನಲಾಗಿದೆ. 

ಮದರಾಸು, ಕೊಯಮತ್ತೂರು, ಪಾಂಡಿಚೇರಿ, ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರು ಮತ್ತು ಆಂಧ್ರಪ್ರದೇಶಗಳ ಭಕ್ತರು ಪ್ರತಿ ತಿಂಗಳೂ ಹೆಚ್ಚು ಹೆಚ್ಚಿಗೆ ಬರುತ್ತಿರುವುದರಿಂದ ದೇವಾಲಯ ಆಡಳಿತ ಮಂಡಲಿಯು  ಅವರ ವಸತಿಗೆಂದು ಇತ್ತೀಚೆಗೆ ವ್ಯವಸ್ಥೆಮಾಡುತ್ತಿದೆ. ಹಣ ಎಲ್ಲರಿಗೂ ಅವಶ್ಯವೇ ಸರಿ. ಅದರ ಅಧಿದೇವತೆ ಲಕ್ಷ್ಮಿಯೆಂದಾದರೂ, ಭೈರವನ ಸ್ವರ್ಣಾಕರ್ಷಣ ಶಕ್ತಿಯ ಪ್ರತೀಕವಿಲ್ಲಿದೆ. ಅದರ ಆರಾಧಕರು ತಮ್ಮ ನಂಬಿಕೆಯಿಂದ ಫಲಪಡೆದಿದ್ದೇವೆಂದು ಹೇಳುವ ಅನೇಕ ಉದಾಹರಣೆಗಳು ಅಲ್ಲಿ ಕಾಣಸಿಗುತ್ತವೆ. ಹೆಣ್ಣುದೇವರಲ್ಲಿ ಭದ್ರಕಾಳಿಗೆ ಇರುವ ಶಕ್ತಿ, ಸಾಮರ್ಥ್ಯಗಳು ಭೈರವನಿಗೆ ಈ ಕ್ಷೇತ್ರದಲ್ಲಿದೆಯೆಂದು ಹೇಳಲಾಗುತ್ತದೆ.  

* * * * * * *

ಬುಧವಾರ, ಅಕ್ಟೋಬರ್ 3, 2012

ಕಾಲಭೈರವ ಅಷ್ಟೋತ್ತರ ಶತನಾಮಾವಳಿ


ಶ್ರೀ ಕಾಲಭೈರವ ಅಷ್ಟೋತ್ತರ ಶತನಾಮಾವಳಿಯ ಸ್ತೋತ್ರ ರೂಪ ಮತ್ತು ಪದ

 ರೂಪಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಇದೇ ರೀತಿ ಮುಂದೆ, ಲಭ್ಯವಿರುವ ಇತರ

 ಸ್ತೋತ್ರ ಮತ್ತು ಸಹಸ್ರನಾಮಗಳನ್ನೂ ಪ್ರಕಟಿಸುವೆ. ಈ ಎಲ್ಲ ಸಾಹಿತ್ಯಗಳನ್ನು 

ಒದಗಿಸಿದವರು ಈ ಹಿಂದಿನ ಸಂಚಿಕೆಗಳಲ್ಲಿ ಪ್ರಸ್ತಾಪಿಸಲಾಗಿರುವ ಶ್ರೀಮತಿ ಕರೈನ್ 

ಲ್ಯಾಡ್ರೆಕ್‌ ರವರು. ಅವರು ರೋಮನ್ ಇಂಗ್ಲಿಷ್ ಲಿಪಿಯಲ್ಲಿ ಒದಗಿಸಿದ 

ಸಾಹಿತ್ಯವನ್ನು ಕನ್ನಡ ಲಿಪಿಗೆ ಪರಿವರ್ತನೆ ಮಾಡಿ ಪ್ರಕಟಿಸಿರುವೆ. ಇವುಗಳನ್ನು 

ಪೂಜಾ  ಕಾಲದಲ್ಲಿ ದಲ್ಲಿ ಯಥೋಚಿತವಾಗಿ ಬಳಸಬಹುದು.