ಶುಕ್ರವಾರ, ನವೆಂಬರ್ 2, 2012

ಅಧಿಯಮನ್ ಕೋಟೆಯ ಕಾಲಭೈರವ ಮಂದಿರ


ಅಧಿಯಮನ್ ಕೋಟೆಯ ಕಾಲಭೈರವ ಮಂದಿರ

ಆತ್ಮೀಯ ಓದುಗರೆಲ್ಲರಿಗೂ ಐವತ್ತೇಳನೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಕಾಲಭೈರವನ ಮಂದಿರಗಳು ದಕ್ಷಿಣ ಭಾರತದಲ್ಲಿ ತೀರ ಅಪರೂಪವೆನ್ನಬೇಕು. ಏಕೆಂದರೆ ಬಹುತೇಕ ಶಿವದೇವಾಲಯಗಳ ಈಶಾನ್ಯದಲ್ಲಿ ಚಂಡೇಶ್ವರ ಅಥವಾ ಕಾಲಭೈರವನನ್ನು ಸ್ಥಾಪಿಸಿ, ಆತನು ಕ್ಷೇತ್ರರಕ್ಷಕನಾಗಿರಬೇಕೆಂಬುದೇ ಮುಖ್ಯ ಆಶಯ. ಆದರೆ ಕಾಲಭೈರವನಿಗೆಂದೇ ಪ್ರತ್ಯೇಕ ದೇವಾಲಯವು ಬೆಂಗಳೂರಿಗೆ ಸಮೀಪದಲ್ಲಿದೆ. ಬೆಂಗಳೂರಿಗೆ ೧೨೦ ಕಿ.ಮೀ ದೂರದಲ್ಲಿದೆ ಧರ್ಮಪುರಿ. ಇಲ್ಲಿಂದ ಏಳು ಕಿ.ಮೀ. ದೂರದಲ್ಲಿರುವುದು ಅಧಿಯಮನ ಕೋಟೆ. ಇದು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೇವಾಲಯವೆಂಬುದು ಸ್ಥಳೀಯ ಐತಿಹ್ಯ. 

ತಮಿಳುನಾಡಿನ ಅನೇಕ ಬೃಹತ್ ದೇಗುಲಗಳಂತೆ ಇದೇನೂ ಶಿಲ್ಪಕಲೆಯಿಂದ ಜನರನ್ನು ಸೆಳೆದುದಲ್ಲ. ಬದಲಾಗಿ ಜನರ ನಂಬಿಕೆ ಮತ್ತು ಅಲ್ಲಿ ನಡೆಯುವ ವಿಶಿಷ್ಟ ಪೂಜಾವಿಧಾನಗಳಿಂದ ಸ್ಥಳೀಯರಿಗಿಂತ ಹೊರರಾಜ್ಯದವರನ್ನು ಆಕರ್ಷಿಸುತ್ತಿದೆ. ವಿಶೇಷತಃ ಬೆಂಗಳೂರು ಮತ್ತು ಆಂಧ್ರ ಪ್ರದೇಶಗಳ ಭಕ್ತರು ಇಲ್ಲಿನ ಕಾಲಭೈರವನಿಗೆ ನಡೆದುಕೊಳ್ಳುವರು. ಈ ಊರನ್ನು ಹಿಂದೆ ಅಧಿಯಮನೆಂಬ ಅರಸನು ಆಳುತ್ತಿದ್ದನಂತೆ. ಆತನ ಕಾಲಭೈರವನ ಪರಮಭಕ್ತ. ಅವನು ಯುದ್ಧಕ್ಕೆ ಹೊರಡುವ ಮೊದಲು ಮತ್ತು ವಿಜಯಶಾಲಿಯಾಗಿ ಬಂದನಂತರ ಭೈರವನ ದರ್ಶನ ಪಡೆಯುತ್ತಿದ್ದನಂತೆ. ತನ್ನ ಆಯುಧಗಳನ್ನು ಭೈರವನ ಮಂದಿರದಲ್ಲಿ ಇರಿಸುತ್ತಿದ್ದನಂತೆ. ಭೈರವನ ಎಲ್ಲ ವಿಗ್ರಹಗಳಲ್ಲಿ ತ್ರಿಶೂಲವು ಅವನ ಆಯುಧವಾಗಿರುವುದನ್ನು ಕಾಣಬಹುದಾದರೆ, ಇಲ್ಲಿ ಮಾತ್ರ ತ್ರಿಶೂಲದ ಬದಲು ನೀಳವಾದ ಕತ್ತಿಯನ್ನು ಇರಿಸಲಾಗಿದೆ. ಈ ಖಡ್ಗವನ್ನು ಅಧಿಯಮನ್ ರಾಜನು ಅರ್ಪಿಸಿದ್ದಾದುದರಿಂದ ಇಂದಿಗೂ ಅದಕ್ಕೆ ಅಲ್ಲಿ ಪೂಜೆ ಸಲ್ಲುತ್ತಿದೆ. 

ಪ್ರತಿ ತಿಂಗಳ ಬಹುಳ ಅಷ್ಟಮಿಯು ಅಧಿಯಮನ್ ಕೋಟೆಯ ಕಾಲಭೈರವನ ಪೂಜೆಗೆ ಪ್ರಶಸ್ತವೆಂದು ಹೇಳಲಾಗುತ್ತದೆ. ಆ ಸಂದರ್ಭಗಳಲ್ಲಿ ಅಲ್ಲಿ ಕುಂಬಳಕಾಯಿನ ವ್ಯಾಪಾರಿಗಳು ಹೆಚ್ಚು ಸೇರುತ್ತಾರೆ. ಭರಪೂರ ವ್ಯಾಪಾರ ನಡೆಸುತ್ತಾರೆ.  ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ರಾಹುಕಾಲದ ಪೂಜೆಯೆಂಬ ವಿಶಿಷ್ಠ ಪದ್ಧತಿಯಿದೆ. ರಾಹುಕಾಲವಿರುವಾಗ ನಿಂಬೆಹಣ್ಣುಗಳನ್ನು ಅರ್ಧಕ್ಕೆ ಕತ್ತರಿಸಿ, ಅದರ ರಸವನ್ನು ಹೊರತೆಗೆದು, ಸಿಪ್ಪೆಯನ್ನು ಹಿಂದಕ್ಕೆ ಮಡಿಸಿ, ಅದರಲ್ಲಿ ಎಣ್ಣೆ ಬತ್ತಿಗಳನ್ನು ಬಳಸಿ ದೀಪಾರಾಧನೆ ಮಾಡುವರು. 

ಅಧಿಯಮನಕೋಟೆಯಲ್ಲಿ ಇದೇ ಪದ್ಧತಿ ಇನ್ನೊಂದು ರೂಪ ತಳೆದಿದೆ. ಅದೆಂದರೆ, ಇಲ್ಲಿ ಬೂದುಕುಂಬಳಕಾಯಿಯನ್ನು ಅರ್ಧಕ್ಕೆ ಕತ್ತರಿಸಿ, ಅದನ್ನು ತೊಳೆದು ಶುಚಿಗೊಳಿಸಿ, ಅದನ್ನು ಅರಿಶಿನ-ಕುಂಕುಮದಿಂದ ಅಲಂಕರಿಸುವರು.   ಮಧ್ಯಭಾಗದ ತಿರುಳನ್ನು ಸ್ವಲ್ಪತೆಗೆದು, ಹಣತೆಯಂತಾಗಿಸಿ, ಅದರಲ್ಲಿ ಎಳ್ಳೆಣ್ಣೆಯಲ್ಲಿ  ಕೆಂಪು ಬತ್ತಿಯನ್ನು ಇಟ್ಟು ದೀಪದಂತೆ ಹಚ್ಚುವರು. ಇದಲ್ಲದೆ ಇದರ ಜತೆಗೆ ತೆಂಗಿನಕಾಯಿ ಮತ್ತು ನಿಂಬೆಹಣ್ಣುಗಳನ್ನು ದೀಪದಂತೆ ಬಳಸುವರು. ಈ ಪದ್ಧತಿಯಲ್ಲಿ ಬಳಸಲಾಗುವ ಮೂರು ವಿಧದ ದೀಪಗಳಿಗೆ ಮೂರು ಮಹತ್ವಗಳಿವೆಯೆಂದು ಅಲ್ಲಿನ ಸ್ಥಳೀಕರು ಹೇಳುತ್ತಾರೆ. ಅದೆಂದರೆ ಕುಂಬಳಕಾಯಿನ ದೀಪಾರಾಧನೆಯಿಂದ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತವೆ. ತೆಂಗಿನಕಾಯಿನ ದೀಪದಿಂದ ವೈವಾಹಿಕ ಸಮಸ್ಯೆಗಳು, ವಿವಾಹದಲ್ಲಿ ವಿಳಂಬ ಮುಂತಾದ ಸಮಸ್ಯೆಗಳಿಗೆ ಪರಿಹಾರವಿರುವಂತೆಯೇ, ನಿಂಬೆ ಹಣ್ಣಿನಿಂದ ಹಚ್ಚಲಾಗುವ ದೀಪವು ಮಕ್ಕಳಲ್ಲಿ ವಿದ್ಯಾಭ್ಯಾಸದ ಕೊರತೆಗಳನ್ನು ನೀಗಿಸುವುದೆಂದು ನಂಬಿಕೆ. 

ಭೈರವನ ಹಲವು ರೂಪಗಳಲ್ಲಿ ಸ್ವರ್ಣಾಕರ್ಷಣ ಭೈರವನೆನ್ನುವುದೂ ಒಂದು ರೂಪ. ಇದರ ಮಹತ್ವವೆಂದರೆ, ಲೌಕಿಕ ಸಂಪತ್ತುಗಳಿಗೆ ಸಾಧನವಾದ ಬಂಗಾರವನ್ನು ಭೈರವನು ದಯಪಾಲಿಸುವನು. ಅದರ ಮೂರ್ತಸ್ವರೂಪವನ್ನು ಅಧಿಯಮನಕೋಟೆಯ ದೇಗುಲದಲ್ಲಿ ಕಾಣಬಹುದು. ಕೃಷ್ಣ ಅಷ್ಟಮಿಯಂದು ಪ್ರತಿ ತಿಂಗಳೂ ಜರುಗುವ ಪೂಜೆಯಲ್ಲಿ,  ಹಣಕಾಸು ವಿಷಯ ಸಂಬಂಧವಾಗಿ ಭೈರವನ ಕೃಪೆಗೆಂದು ಅಲ್ಲಿ ಭಕ್ತರು ಸೇರುತ್ತಾರೆ. ದೀಪಗಳನ್ನು ಹಿಡಿದು ಪ್ರದಕ್ಷಿಣೆ ಬರುವರು. ದೇವಾಲಯದ ಒಳ ಭಾಗದ ಪ್ರಾಂಗಣ ಅಷ್ಟೇನೂ ವಿಶಾಲವಾಗಿಲ್ಲವಾದ್ದರಿಂದ, ಹಾಗೂ ಬರುವ ಭಕ್ತರ ಸಂಖ್ಯೆ ಅಧಿಕವಾಗುತ್ತ ನಡೆದಿರುವುದರಿಂದ, ಹೊರ ಭಾಗದ ಅಂಗಳದಲ್ಲಿ ಭೈರವನಿಗೆ ಭಕ್ತರ ಸಾಮೂಹಿಕ ಆರತಿಯ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಸೇರಿದ ಭಕ್ತರು ನಿಗದಿತ ಸಮಯದಲ್ಲಿ ಒಂದು ತಟ್ಟೆಯಲ್ಲಿಟ್ಟುಕೊಂಡ ಬೂದುಕುಂಬಳಕಾಯಿಯ ದೀಪ, ನಿಂಬೆಹಣ್ಣು ಮತ್ತು ತೆಂಗಿನಕಾಯಿಗಳ ದೀಪಗಳನ್ನು ಹಿಡಿದು, ಮನದಲ್ಲೇ ತಮ್ಮ ಇಷ್ಟಾರ್ಥಗಳನ್ನು ಹೇಳಿಕೊಳ್ಳುತ್ತ, ಭೈರವನಿಗೆ ಆರತಿ ಬೆಳಗುವರು. ಜತೆಯಲ್ಲೇ ದೃಷ್ಟಿ ಪರಿಹಾರಕ್ಕೆಂದು ಮೆಣಸಿನಕಾಯಿಗಳನ್ನೂ ಅರ್ಪಿಸುವರು. ದೇವಾಲಯದ ನಾಲ್ಕು ದಿಕ್ಕುಗಳೂ ದೀಪಗಳ ತಟ್ಟೆಗಳಿಂದ ತುಂಬಿಹೋಗಿರುತ್ತದೆ. ಸ್ಥಳೀಯ ಜ್ಯೋತಿಷಿಗಳು ಹೇಳುವಂತೆ ರವಿದಶೆಯ ಚಂದ್ರ ಭುಕ್ತಿಯಲ್ಲಿ, ರಾಹುದಶೆಯ ಕೇತು ಭುಕ್ತಿಯಲ್ಲಿ ಇಲ್ಲಿ ನಡೆಸುವ ದೀಪಾರಾಧನೆ ತುಂಬ ಫಲಕೊಡುತ್ತದೆ. ಏಕೆಂದರೆ ಇಲ್ಲಿ ೨೭ ನಕ್ಷತ್ರಗಳು, ೧೨ ರಾಶಿಗಳು ಮತ್ತು ನವಗ್ರಹಗಳು ಈ ಭೈರವನಲ್ಲಿ ಸನ್ನಿಹಿತವಾಗಿರುವುದು ವಿಶೇಷತೆಯೆನ್ನಲಾಗಿದೆ. 

ಮದರಾಸು, ಕೊಯಮತ್ತೂರು, ಪಾಂಡಿಚೇರಿ, ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರು ಮತ್ತು ಆಂಧ್ರಪ್ರದೇಶಗಳ ಭಕ್ತರು ಪ್ರತಿ ತಿಂಗಳೂ ಹೆಚ್ಚು ಹೆಚ್ಚಿಗೆ ಬರುತ್ತಿರುವುದರಿಂದ ದೇವಾಲಯ ಆಡಳಿತ ಮಂಡಲಿಯು  ಅವರ ವಸತಿಗೆಂದು ಇತ್ತೀಚೆಗೆ ವ್ಯವಸ್ಥೆಮಾಡುತ್ತಿದೆ. ಹಣ ಎಲ್ಲರಿಗೂ ಅವಶ್ಯವೇ ಸರಿ. ಅದರ ಅಧಿದೇವತೆ ಲಕ್ಷ್ಮಿಯೆಂದಾದರೂ, ಭೈರವನ ಸ್ವರ್ಣಾಕರ್ಷಣ ಶಕ್ತಿಯ ಪ್ರತೀಕವಿಲ್ಲಿದೆ. ಅದರ ಆರಾಧಕರು ತಮ್ಮ ನಂಬಿಕೆಯಿಂದ ಫಲಪಡೆದಿದ್ದೇವೆಂದು ಹೇಳುವ ಅನೇಕ ಉದಾಹರಣೆಗಳು ಅಲ್ಲಿ ಕಾಣಸಿಗುತ್ತವೆ. ಹೆಣ್ಣುದೇವರಲ್ಲಿ ಭದ್ರಕಾಳಿಗೆ ಇರುವ ಶಕ್ತಿ, ಸಾಮರ್ಥ್ಯಗಳು ಭೈರವನಿಗೆ ಈ ಕ್ಷೇತ್ರದಲ್ಲಿದೆಯೆಂದು ಹೇಳಲಾಗುತ್ತದೆ.  

* * * * * * *

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ