ಶುಕ್ರವಾರ, ಫೆಬ್ರವರಿ 1, 2013

ವಿಜ್ಞಾನ ಭೈರವ ತಂತ್ರ



ಭೈರವರಾಧನೆಯು ಕೇವಲ ಆಧ್ಯಾತ್ಮಿಕ, ಧಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಸಂಬಂಧಿಸಿರದೇ, ಅದರ ಹರಹು ಇನ್ನಷ್ಟು ವಿಸ್ತಾರವಾಗಿದೆಯೆಂದು ತಿಳಿಯಲು ಆಶಿಸುವವರಿಗೆ ವಿಜ್ಞಾನ ಭೈರವ ತಂತ್ರವು ಹಲವಾರು ಸಾಧ್ಯತೆಗಳನ್ನು ತೆರೆದಿಡುತ್ತದೆ. ನಮ್ಮ ಎಲ್ಲ ಧಾರ್ಮಿಕ ಕ್ರಿಯೆಗಳ ಹಿಂದೆ, ಅಲೌಕಿಕವಾದುದನ್ನು ಸಾಧಿಸುವ ಉದ್ದೇಶವಿರುತ್ತದೆಯೆನ್ನುವುದು ಸತ್ಯವಾದರೂ, ಅವುಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ, ಅದರ ಆಂತರ್ಯವನ್ನು ಹೊರಗೆಡಹಲು ನಿರ್ಮಮಕಾರವಾದ ಅಧ್ಯಯನದ ಆವಶ್ಯಕತೆಯಿರುತ್ತದೆ. ಅದು ಎಲ್ಲ ಸಂದರ್ಭಗಳಲ್ಲೂ ಸಾಧ್ಯವಾಗಲಾರದು. ಧಾರ್ಮಿಕ ಆಚರಣೆಗಳ ಬಾಹ್ಯ ಸ್ವರೂಪವನ್ನು ಮಾತ್ರ ಅನುಸರಿಸುತ್ತಿರುವುದು ಈಗಿನ ಕ್ರಮ. ಈ ಕಾರಣದಿಂದಾಗಿ, ಆಚರಣೆಗಳಿಗಾದರೂ ಜೀವವಿದೆಯೆಂಬ ಸಮಾಧಾನ ತಳೆಯಬಹುದು. ಭೈರವನ ಆರಾಧನೆಯಲ್ಲಿ, ತಾಂತ್ರಿಕರು, ಅಘೋರಿಗಳು, ಶಿವಸಾಧಕರು ಅನೇಕ ಆಚರಣೆಗಳನ್ನು ಅನುಸರಿಸುತ್ತಿರುವರು. ಅವುಗಳ ಅಂತಃಸತ್ವವನ್ನು ಅರಿತವರು, ಅನುಸರಿಸುವವರು ಕಡಿಮೆಯೆಂದೇ ಹೇಳಬೇಕು. ಆದರೆ ಈಗಿನ ಅಂತರಜಾಲದ ಸೌಕರ್ಯದಲ್ಲಿ ಈ ಕುರಿತಾದ ಸಾಹಿತ್ಯ, ಚೆನ್ನಾಗಿಯೇ ಲಭ್ಯವಿದೆಯೆನ್ನುವುದು ಸಂತೋಷದ ಸಂಗತಿ. ಹೀಗಾಗಿ, ಭೈರವಾರಾಧನೆಯ ನೈಜ ಉದ್ದೇಶಗಳನ್ನು ಒಳಗೊಂಡ ವಿಜ್ಞಾನ ಭೈರವ ತಂತ್ರದ ಬಗ್ಗೆ ಒಂದು ಪ್ರಾತಿನಿಧಿಕ ಲೇಖನವನ್ನು ನಿಮ್ಮ ಓದಿಗೆಂದು ಈ ಸಂಚಿಕೆಯಲ್ಲಿ ನೀಡಲಾಗಿದೆ.  


ವಿಜ್ಞಾನ ಭೈರವ ತಂತ್ರವನ್ನು ಶಿವ ವಿಜ್ಞಾನ ಎಂದೂ ಕರೆಯುವರು. ಕ್ರಿ.ಪೂ. ೮೦೦ರ ಇತಿಹಾಸವುಳ್ಳ ತಂತ್ರಾಧಾರಿತ ವೇದ ಸಾಹಿತ್ಯವನ್ನು ಆಧರಿಸಿ ಇದನ್ನು ರಚಿಸಲಾಗಿದೆ. ಇದು ಕಾಶ್ಮೀರ ಶೈವಪಂಥಕ್ಕೆ ಸೇರಿದ್ದು. ಇದಕ್ಕೊಂದು ಬಲವಾದ ತಾತ್ತ್ವಿಕ ನೆಲಗಟ್ಟು ಇದ್ದರೂ, ವ್ಯಕ್ತಿಯ ಅಸ್ತಿತ್ವದ ಏಕೆ ಮತ್ತು ಹೇಗೆ - ಈ ಪ್ರಮುಖ ಪ್ರಶ್ನೆಗಳನ್ನು ಚರ್ಚಿಸುವ ರಹಸ್ಯ ವಿಜ್ಞಾನ ತಂತ್ರವಿದು. ಇದನ್ನು ಆತ್ಮ ಸಾಕ್ಷಾತ್ಕಾರದ ಸಂಹಿತೆಯೆಂದೂ ಪರಿಗಣಿಸಲಾಗಿದೆ. ಮಾನವ ಮನಸ್ಸಿನ ಆಂತರ್ಯವನ್ನು ಒಳಹೊಕ್ಕು ಅದರಲ್ಲಿ ಜಾಗೃತಿಯನ್ನು ಮೂಡಿಸುವ ಹಲವಾರು ತಂತ್ರವಿಧಾನಗಳನ್ನು ಇದರಲ್ಲಿ ಪ್ರಸ್ತಾಪಿಸಲಾಗಿದೆ. ಹೀಗಾಗಿ ಇದನ್ನು ಭಾರತೀಯ ಮಾನಸ ಶಾಸ್ತ್ರದ ಅಧ್ಯಯನದಲ್ಲಿ ಪ್ರಮುಖ ಕೃತಿಯೆಂದು ಹೆಸರಿಸಲಾಗಿದೆ. 

ಇದರ ತಂತ್ರ ವಿಧಾನಗಳಲ್ಲಿ ಯೋಗಕ್ಕೆ ಪ್ರಾಧಾನ್ಯ ನೀಡಲಾಗಿದೆ. ಯೋಗವೆಂದರೆ ಇಲ್ಲಿ ಹಠಯೋಗ ಆಧಾರಿತ ಶರೀರ ಭಂಗಿಗಳ ವ್ಯಾಯಾಮ ಎನ್ನಲಾಗದು. ಸಾಧಾರಣವಾಗಿ ಭಾರತೀಯ ವೇದಾಂತ ಮತ್ತು  ಯೋಗಿಕ ಸಾಹಿತ್ಯದಲ್ಲಿ ಮಾನವ ಜೀವನವೆನ್ನುವುದು ನಶ್ವರ, ಭೋಗವನ್ನು ತ್ಯಜಿಸಿದರೇ ಯೋಗಿಯಾಗಲು ಸಾಧ್ಯ ಮುಂತಾದ ಪರಿಕಲ್ಪನೆಗಳಿವೆ. ಇದಕ್ಕೆ ಪ್ರತಿಯಾಗಿ ಭೈರವ ವಿಜ್ಞಾನ ತಂತ್ರದಲ್ಲಿ ಜೀವನವನ್ನು ಅನುಭವಿಸುವುದು ಮತ್ತು ಆಧ್ಯಾತ್ಮಿಕ ಜಾಗೃತಿಗಳು ಬೇರೆ ಬೇರೆಯಲ್ಲ ಎಂದು ಸಾರಲಾಗಿದೆ. ಸಾಂಸಾರಿಕ ಕೋಟಲೆಗಳು ಎಲ್ಲರಿಗೂ ಇರುವುದು ಸಹಜ. ಅದೇ ರೀತಿ ಎಲ್ಲರೂ ಒಂದಲ್ಲ ಒಂದು ನೆಲೆಯಲ್ಲಿ ಆಧ್ಯಾತ್ಮಿಕ ಜ್ಞಾನದ ಅನ್ವೇಷಣೆಯಲ್ಲಿ ತೊಡಗಿರುತ್ತಾರೆ. ಅಂಥ ಎಲ್ಲರಿಗೂ ಈ ವಿಜ್ಞಾನ ಭೈರವ ತಂತ್ರವು ಒಂದು ಸೇತುವೆಯಂತೆ ಕೆಲಸ ಮಾಡುತ್ತದೆ.

ಇದರಲ್ಲಿ ವಿಜ್ಞಾನ ಮತ್ತು ಭೈರವ ಎಂಬೆರಡು ಪದಗಳಿವೆ. ವಿಶೇಷವಾದ ಜ್ಞಾನ ವಿಜ್ಞಾನವಾದರೆ, ಭೈರವನೆಂಬ ಪದಕ್ಕೆ ಭೀಕರ, ಭೀಷಣ ಎಂಬ ಅರ್ಥಗಳು ಸ್ಫುರಿಸಿದರೂ, ಅದರ ನೈಜ ನೆಲೆಯಿರುವುದು, ವ್ಯಕ್ತಿಯ ಅಜ್ಞಾನವನ್ನು ಕಳೆದು, ಮಾನಸಿಕ ಸ್ಥಿತಿಯನ್ನು ಹದಗೊಳಿಸುವ ಶಿವನ ಉಗ್ರರೂಪವಿದೆಂದು ಹೇಳಬಹುದು. ವಿಜ್ಞಾನ ಭೈರವ ತಂತ್ರವೆಂದರೆ ವ್ಯಕ್ತಿಯ ದೈನಂದಿನ ಜೀವನದಲ್ಲಿ ಮೂಲಭೂತ ಬದಲಾವಣೆ ಮತ್ತು ಜಾಗೃತಿಯನ್ನು ಮೂಡಿಸುವ ಧ್ಯಾನ ವಿಧಾನದ ಸಂಹಿತೆಯೆಂದು ಸಂಕ್ಷಿಪ್ತವಾಗಿ ವಿವರಿಸಬಹುದು.

ಮುಖ್ಯ ತತ್ತ್ವಗಳು

ಇದರ ಪ್ರಮುಖ ತತ್ತ್ವ ವೆಂದರೆ, ನಾವು ಯಾರೂ ಭೌತಿಕವಾಗಿ ಕಾಣುವಂತೆ ರಕ್ತ-ಮಾಂಸಗಳಿಂದ ಕೂಡಿದ ಬಾಹ್ಯ ಸ್ವರೂಪರಲ್ಲ. ಬದಲಾಗಿ ನಮ್ಮ ವೈಯುಕ್ತಿಕ ಸ್ವಭಾವವು ಸಂಸ್ಕೃತದಲ್ಲಿ ಹೇಳುವಂತೆ ಸ್ಪಂದನ ಎಂಬ ಅವಿನಾಶಿ ಶಕ್ತಿ. ಅದು ಹಿಂದೆಯೂ ಇದ್ದಿತು ಮತ್ತು ಮುಂದೆ ಕೂಡ ಇರುತ್ತದೆ. ಆಧುನಿಕ ವಿಜ್ಞಾನ ಕೂಡ ಇದನ್ನೇ ಹೇಳುತ್ತದೆ. ವಿಜ್ಞಾನ ಭೈರವ ತಂತ್ರದ ತಾಂತ್ರಿಕ ಭಾಗವು ಜಗತ್ತನ್ನು ಮಾಯೆ ಅಥವಾ ಭ್ರಮೆ ಎಂದು ಹೇಳುವುದಿಲ್ಲ, ಬದಲಾಗಿ ಅದು ಶಕ್ತಿಯನ್ನು ಆರಾಧಿಸುತ್ತದೆ ಮತ್ತು ಗೌರವಿಸುತ್ತದೆ. ಬ್ರಹ್ಮಾಂಡವೇ ಒಂದು ಶಕ್ತಿಯೆಂದು ಪರಿಭಾವಿಸುವವನಿಗೆ, ಅದು ಶಿವನ ಸ್ವರೂಪವಾಗಿಯೇ ಕಾಣುತ್ತದೆ. ತೆರೆದ ಕಣ್ಣುಗಳಿಂದ ಅವಲೋಕಿಸುವ ವಿಶಾಲ ದೃಷ್ಟಿಯನ್ನು ಅದು ಒದಗಿಸುತ್ತದೆ. ಹೀಗಾಗಿ ಆಂತರ್ಯದಲ್ಲಿ ಅದು ನಮ್ಮೆಲ್ಲರ ಪ್ರಜ್ಞೆಯ ಅಂಗವೇ ಆಗಿರುತ್ತದೆ. ಅದು ಗುಣಾತ್ಮಕವಾಗಿ ಶಕ್ತಿ ಮತ್ತು ವಸ್ತುಗಳಿಗಿಂತ ಭಿನ್ನವಾಗಿರುತ್ತದೆ. ನಾವು ನಮ್ಮ ಶಕ್ತಿಯನ್ನು ಪುನರುಜ್ಜೀವನಗೊಳಿಸಿಕೊಳ್ಳಲು ಬಯಸುವುದಾದರೆ, ಶಿವ ಸ್ವರೂಪವು ನಮ್ಮ ಅರಿವು, ಆನಂದಗಳನ್ನು ವೃದ್ಧಿಸಿ, ನಮ್ಮ ಪ್ರಜ್ಞೆಯ ಅಂತರ್ದರ್ಶನ ಮಾಡಿಸಬಲ್ಲ ವೇಗವರ್ಧಕವಾಗಿ ಕೆಲಸಮಾಡುತ್ತದೆ. 

ತಂತ್ರಗಳು

ಈ ಗ್ರಂಥದಲ್ಲಿ ಒಟ್ಟು ೧೧೨ ತಂತ್ರಗಳ ಪ್ರಸ್ತಾಪವಿದೆ. ಇವುಗಳಲ್ಲಿ ಪ್ರಾಪಂಚಿಕ ವಿಷಯಗಳೂ ಇವೆ. ಜೀವನದ ಪ್ರತಿಹಂತದಲ್ಲಿ ಯೋಗವನ್ನು ಮರೆಯದಂತೆ, ಅದರ ಅನುಸರಣೆಯಿಂದ ಜೀವನವನ್ನು ಪೂರ್ತಿಯಾಗಿ ಅನುಭವಿಸುವ, ನಮ್ಮತನವನ್ನು ಗಟ್ಟಿಗೊಳಿಸುವ ಬೋಧನೆಯನ್ನು ಅದು ಒಳಗೊಂಡಿದೆ.

ಈ ಎಲ್ಲ ತಂತ್ರ ಅಭ್ಯಾಸಗಳ ಮುಖ್ಯ ಉದ್ದೇಶವೆಂದರೆ, ಚಂಚಲ ಮನಸ್ಸನ್ನು ಶಾಂತಗೊಳಿಸಿ, ಅದನ್ನು ಪ್ರಸ್ತುತ ಸಮಯಕ್ಕೆ ನೆಲೆಗೊಳಿಸುವುದು ಮತ್ತು ಆಯಾ ಸಮಯದ ನಮ್ಮ ಕ್ರಿಯೆಗಳೇ ಭವಿಷ್ಯವನ್ನು ನಿರ್ಧರಿಸುತ್ತದೆಯಲ್ಲವೆ. ಹೀಗಾಗಿ ನಮ್ಮ ಕ್ರಿಯೆಗಳಿಗೆ ನಾವೇ ಬಾಧ್ಯಸ್ತರು ಎನ್ನುವುದನ್ನು ವಿಜ್ಞಾನ ಭೈರವ ತಂತ್ರವು ಪದೇ ಪದೇ ಶೃತಗೊಳಿಸುತ್ತದೆ. ಇಲ್ಲಿ ನೀಡಿರುವ ಬೋಧೆಗಳು ಯಾವುದೇ ಧರ್ಮ ಅಥವಾ ಜಾತಿ ಹಾಗೂ ನೈತಿಕ ಕಟ್ಟಪಾಡುಗಳನ್ನು ನಿರ್ದೇಶಿಸಿ ಹೇಳಿರುವುದಲ್ಲ. ಇಲ್ಲಿ ಯಾವುದೇ ತಾತ್ತ್ವಿಕ ನಿರೀಕ್ಷೆಗಳಿಲ್ಲ. ಬೌದ್ಧಿಕ ಕಸರತ್ತಿನ ಚಮತ್ಕಾರಿಕ ವಿವರಣೆಗಳಿಲ್ಲ. ಇಲ್ಲಿರುವುದು ಕೇವಲ ಆತ್ಮಾನುಸಂಧಾನದ ಮಾರ್ಗ ಮಾತ್ರ.

ಕೆಲವು ತಂತ್ರಗಳು ಉಸಿರಾಟಕ್ಕೆ ಸಂಬಂಧಿಸಿವೆ. ಮತ್ತು ಕೆಲವು ಭಾವನಾತ್ಮಕವಾದ ಸಂಗತಿಗಳಾದ ಪ್ರೀತಿ, ನಿರಾಶೆ ಮತ್ತು ಕೋಪಗಳಿಗೆ ಸಂಬಂಧಿಸಿವೆ. ಇದರಲ್ಲಿ ಮಾನವ ಮತ್ತು ಪ್ರಕೃತಿಗಳ ನಡುವಣ ಮಾನಸಿಕ ಸಂಬಂಧಗಳು ಇರುವಂತೆಯೇ. ಮತ್ತೆ ಕೆಲವು ಮಾನವ ಶರೀರವು ಅನುಭವಿಸುವ ಶಬ್ದ, ರೂಪ, ರಸ, ಗಂಧ ಮುಂತಾದ ಸ್ಪಂದನೆಗಳನ್ನು ಕುರಿತು ಹೇಳುತ್ತವೆ. ಅಂತಿಮವಾಗಿ ಇವೆಲ್ಲವೂ ಮಾನವನ ಪ್ರಜ್ಞಾ ಶಕ್ತಿಯನ್ನು ಮಾತ್ರವೇ ಆಧರಿಸಿದ್ದು, ಅವನು ಸಚೇತನವಾಗಿರಲು ಕಾರಣವಾಗುವ ಎಲ್ಲವನ್ನೂ ಒಳಗೊಂಡಿದೆ. ಆದರೆ ಯಾವುದೇ ಬಾಹ್ಯಶಕ್ತಿಗಳಿಂದ ಪ್ರೇರಿತನಾಗದಂತೆ, ಅಂತರಂಗದ ದನಿಯನ್ನು ಮಾತ್ರ ಗ್ರಹಿಸಲು ವ್ಯಕ್ತಿಯನ್ನು ಅಣಿಗೊಳಿಸುತ್ತದೆ. ಹೀಗಾಗಿ ವಿಜ್ಞಾನ ಭೈರವ ತಂತ್ರವು ಒಂದು ಪ್ರಜ್ಞಾ ಕೇಂದ್ರಿತ ತತ್ತ್ವ ವಿಚಾರವೆಂದು ಗಂಭೀರವಾಗಿ ಪರಿಗಣಿಸುವುದು ಅತ್ಯವಶ್ಯ.

ಈ ತಂತ್ರದ ಕೆಲವು ಶ್ಲೋಕಗಳು ಮತ್ತು ಅವುಗಳ ಕನ್ನಡ ಅನುವಾದವನ್ನು ಈ ಕೆಳಗೆ ನೀಡಲಾಗಿದೆ. ಇದನ್ನು ಗಮನಿಸಿದರೆ ವಿಜ್ಞಾನ ಭೈರವ ತಂತ್ರದ ಬಾಹ್ಯ ಸ್ವರೂಪ ತಿಳಿಯುತ್ತದೆ. ಹೆಚ್ಚಿನ ಅಧ್ಯಯನ ಬಯಸುವವರು, ವಿಸ್ತೃತ ಲೇಖನಗಳಿಗೆಂದು, ಅಂತರಜಾಲದ ನೆರವನ್ನು ಪಡೆಯಬಹುದು.  

ಆಕಾಶಮ್ ವಿಮಲಮ್ ಪಶ್ಯನ್ ಕೃತ್ವಾ ದೃಷ್ಟಿಮ್ ನಿರಂತರಂ |
ಸ್ತಬ್ಧಾತ್ಮಾ ತತ್ ಕ್ಷಣಾತ್ ದೇವಿ ಭೈರವಮ್ ವಪುರಾಪ್ನುಯಾತ್ ||

ಬಹಳ ಹೊತ್ತಿನ ವರೆಗೆ ನಿರಭ್ರ ಆಕಾಶವನ್ನೆ ಅವಲೋಕಿಸುತ್ತಿದ್ದ, ಪ್ರಜ್ನೆಯು ಆಕಾಶದೊಂದಿಗೆ ಮಿಲಿತವಾಗಿ ಭೈರವ ಅಥವಾ ಶೂನ್ಯ  ಸ್ಥಳದಲ್ಲಿ ಐಕ್ಯವಾಗುತ್ತಾನೆ. 

ಚಲಾಸನೇ ಸ್ಥಿತಾಸ್ಯಥಾ ಶನೈರವ ದೇಹಾಚಾಲನಾತ್ | 
ಪ್ರಶಂತೇ ಮಾನಸೇ ಭಾವೇ ದೇವೀ ದಿವ್ಯಯುಗಯಾಪ್ನುಯಾತ್ ||

ಚಲನೆಯೇ ದಿವ್ಯೌಷಧ, ಚಲನೆ ಭಾವನೆಗಳನ್ನು ಉದ್ದೀಪಿಸುತ್ತದೆ. ಈ ಕ್ಷೇತ್ರದಲ್ಲಿ ನಮಗೆ ಪರಿಚಿತವಿರುವ ಕೆಲವು ಚಲನೆಗಳನ್ನು ಹೆಸರಿಸಬಹುದೆಂದರೆ, ನರ್ತನ, ವ್ಯಾಯಾಮ ಮುಂತಾದ್ದನ್ನು ಸೇರಿಸಿಕೊಳ್ಳಬಹುದು. ನೀವು ಶರೀರವನ್ನು ಎಡಕ್ಕೆ, ಬಲಕ್ಕೆ, ಹಿಂದೆ, ಮುಂದೆ ಚಲಿಸುತ್ತಿದ್ದಂತೆ ಮನಸ್ಸು ಸ್ಥಿರಗೊಂಡು, ಅದು ನಮ್ಮ ಶರೀರದ ಚೇತನದ ಜತೆ ಸಂಲಗ್ನಗೊಳ್ಳುತ್ತದೆ. ದೇವಾಲಯಗಳಲ್ಲಿ ಬಳಸುವ ಡೋಲೋತ್ಸವದಲ್ಲಿ ದೇವರ ಮೂರ್ತಿಯನ್ನು ಉಯ್ಯಾಲೆಯಲ್ಲಿ ಚಲಿಸುವಂತೆ ಮಾಡಲಾಗಿರುವುದನ್ನು ನೀವು ಗಮನಿಸಿರುತ್ತೀರಿ. ಸೂಫಿಗಳು ತಮ್ಮ ಮಂತ್ರ ಪಠಣ ಕಾಲಕ್ಕೆ ಚಲನಯುಕ್ತ ಧ್ಯಾನ ಪದ್ಧತಿಯನ್ನು ಅನುಸರಿಸುವರು. ಭಜನೆ,  ಕಾಲದಲ್ಲಿ, ಉತ್ಸವ, ಕೋಲ, ಕಥಕ್ಕಳಿ ಮುಂತಾದ ದೇವತಾರಾಧನೆಗಳ ಸಂದರ್ಭಗಳಲ್ಲಿ  ನಮಗರಿವಿಲ್ಲದಂತೆ, ನಮ್ಮ ಶರೀರಕ್ಕೆ ಚಲನೆಯೊದಗುತ್ತದೆ. ಅದು ದೈವಿಕ ಶಕ್ತಿಯೊಂದಿಗೆ ಸಾಮೀಪ್ಯ ಸಾಧಿಸುವ ಸರಳ ವಿಧಾನ. 

ಆಸನೇ ಶಯನೇ ಸ್ಥಿತ್ವಾ ನಿರಾಧಾರಾಮ್ ವಿಭಾವಯಾನ್ | 
ಸ್ವದೇಹಂ ಮಾನಸಿ ಕ್ಷೀಣೇ ಕ್ಷಣಾತ್ ಕ್ಷೀಣಾಶಯೋರ್ಭವೇತ್ ||

ನಾವು ಕುಳಿತಿರುವಾಗ, ಮಲಗಿರುವಾಗ, ಶರೀರಕ್ಕೆ ಯಾವ ಆಧಾರವಿಲ್ಲದಂತೆ ಇದೆಯೆಂದು ಭಾವಿಸಿಕೊಳ್ಳಿ. ಈ ಸ್ಥಿತಿಯಲ್ಲಿ ನಮ್ಮ ಭಾವನೆಗಳೂ ನಿರಾಧಾರವಾಗುತ್ತವೆ. ನಿಮ್ಮ ಯೋಚನೆಯ ಸರಣಿಗೆ ಭಂಗ ಬಂದು, ಅದು ಸ್ಥಗಿತಗೊಳ್ಳುತ್ತದೆ. 

ಮಧ್ಯ ಜಿಹ್ವೇ ಸ್ಫರೀತಸ್ಯೇ ಮಧ್ಯೇ ನಿಕ್ಷಿಪ್ಯ ಚೇತನಾಮ್ | 
ಹೂಚ್ಛ್ರಂ ಮನಸಾ ಕುರ್ವಾಃ ತತಃ ಶಾಂತೇ ಪ್ರಲೀಯತೇ ||

ನಾಲಿಗೆ ತುದಿಯನ್ನು ಅಂಗುಳಿಗೆ ತಗುಲಿಸಿದಾಗ, ಆಜ್ಞಾಚಕ್ರ ಮತ್ತು ಸಹಸ್ರಾರಗಳಿಗೆ ಚೇತನ ಒದಗಿಸುವ ಸ್ಥಳಾವಕಾಶವು ಬಾಯಿಯಲ್ಲಿ ಉಂಟಾಗುತ್ತದೆ. ಖೇಚರೀ ಮುದ್ರೆಯನ್ನು ಹೋಲುವ ಈ ಭಂಗಿಯಲ್ಲಿದ್ದುಕೊಂಡು, ಹಾ ಎಂದು ಉಚ್ಚರಿಸುತ್ತ, ದೀರ್ಘಶ್ವಾಸವನ್ನು ಎಳೆದುಕೊಂಡಾಗ, ಮನಃಶಾಂತಿಯು ತಾನಾಗಿಯೇ ಲಭಿಸುತ್ತದೆ.

ಉಪವಿಶ್ಯಾಸನೇ ಸಮ್ಯಕ್ ಬಾಹು ಕೃತ್ವಾರ್ಧಾ ಕುಂಚಿತಹೌ | 
ಕಕ್ಷವ್ಯೋಮ್ನಿ ಮನಾಃ ಕುರ್ವನ್ ಶಮಮಾಯತಿ ತಲ್ಲಯಾತ್ ||

ಸೂಕ್ತ ಸ್ಥಿತಿಯಲ್ಲಿ ಕುಳಿತು ಕುತ್ತಿಗೆ ಮತ್ತು ತಲೆಗಳನ್ನು ನೇರವಾಗಿರುವಂತೆ ಇರಿಸಿಕೊಂಡು, ಬಾಹುಗಳನ್ನು ವೃತ್ತಾಕಾರವಾಗಿರುವಂತೆ ಮೇಲೆತ್ತಿ, ಹಿಡಿಯಿರಿ. ಆಗ ಮನಸ್ಸು ಈ ಸ್ಥಿತಿಯಲ್ಲಿ ಶಾಂತತೆಯನ್ನು ಹೊಂದುತ್ತದೆ. 

ಮೃದ್ವಾಸನೇ ಸ್ಥಿತೈಕೇನ ಹಸ್ತ ಪಾದೌ ನಿರಾಶ್ರಯಂ |
ನಿಧಾಯ ತತ್ ಪ್ರಸಂಗೇನ ಪರಾ ಪೂರ್ಣಾ ಮತಿರ್ಭವೇತ್ || 

ಮೃದುವಾದ ಪೃಷ್ಠದ ಒಂದು ಭಾಗವನ್ನಾಧರಿಸಿ ಕುಳಿತು, ಮತ್ತೊಂದನ್ನು ಸ್ವಲ್ಪ ಎತ್ತಿ, ಕೈ, ಕಾಲುಗಳನ್ನು ವಿರಾಮಸ್ಥಿತಿಯಲ್ಲಿ ಇಟ್ಟುಕೊಳ್ಳಿ. ಈ ಸ್ಥಿತಿಯಲ್ಲಿ ಚಿತ್ತವು ಏಕಾಗ್ರತೆಯನ್ನು ಹೊಂದಿ ಪರಬ್ರಹ್ಮದೊಂದಿಗೆ ಸಂಪರ್ಕ ಸಾಧಿಸುತ್ತದೆ. ನಮ್ಮ ಅನೇಕ ಯೋಗಿಕ ಆಸನಗಳು ತಿಳಿಸುವ ಕ್ರಮವೂ ಇದೇ ಆಗಿರುತ್ತದೆ. ಇಲ್ಲಿ ಶರೀರದ ಶಾಂತತೆಯೊಂದಿಗೆ ಮಾನಸಿಕ ಶಾಂತತೆಯನ್ನು ಸಮಾನವಾಗಿ ಸಾಧಿಸಲು ಈ ಬಗೆಯ ಆಸನಗಳು ನೆರವಾಗುತ್ತವೆ.

ಚಿತ್ರ ಕೃಪೆ : ಶ್ರೀ ಪುಟ್ಟಸ್ವಾಮಿ ಗುಡಿಗಾರ್ 
* * * * * * *

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ