ಬುಧವಾರ, ಆಗಸ್ಟ್ 1, 2012


ಕಾಶಿಯ ಕೊತ್ವಾಲ :  ಕಾಲಭೈರವ


ಭೈರವನನ್ನು ಕಾಶಿಯ ಕೊತ್ವಾಲನೆಂದು ಕರೆಯುವರಷ್ಟೆ.  ಆ ಪದದ ನಿಷ್ಪತ್ತಿ ಹೀಗಿದೆ. ಈ ಪದವು ಉರ್ದುಮೂಲದ್ದಾಗಿದ್ದರೂ, ಸಂಸ್ಕೃತದಲ್ಲಿ ಕೋಟ ಅಥವಾ ಕೋಷ್ಠ, ಪಾಲ ಎಂದರೆ ರಕ್ಷಕ ಎಂದಾಗುತ್ತದೆ. ಎಂದರೆ ಕೋಷ್ಠ - ಧನ ಕೋಶವನ್ನು ಪಾಲನೆಮಾಡುವವನು ಎಂದು ಅರ್ಥ. ಇದಕ್ಕೆ ಸಂವಾದಿಯಾಗಿ ಕೊತ್ವಾಲನೆಂಬ ಪದಕ್ಕೆ, ನಗರ ರಕ್ಷಕ ಅಥವಾ ನಗರ ನ್ಯಾಯಾಧೀಶ ಎಂದೂ ಅರ್ಥವಿದೆ. ಕಾಲಭೈರವನ ಈ ಕೊತ್ವಾಲ ಸ್ವರೂಪವನ್ನು ಆರಾಧಿಸುವ ಸಂತರನ್ನು ದಶನಾಮಿ ಸನ್ಯಾಸಿಗಳು ಮತ್ತು ಅವರ ಗುಂಪನ್ನು ಅಖಾಡಾ ಎಂದು ಕರೆಯಲಾಗುತ್ತದೆ. ಕಾಶಿಯಲ್ಲಿ ಕಾಲಭೈರವನು ಈಗಿರುವ ನೆಲೆಯನ್ನು ಕೊತ್ವಾಲ್‌ಪುರಿ ಎಂದು ಹೆಸರಿಸಲಾಗಿದೆ. ಇದಕ್ಕೆ ಪೂರಕವಾಗಿ ಕಾಲಭೈರವನ ಅಷ್ಟೋತ್ತರದಲ್ಲಿ ಆತನನ್ನು ದಂಡಪಾಣೀ ಎಂದು ಹೆಸರಿಸಿರುವುದನ್ನು ಸ್ಮರಿಸಿದರೆ, ದಂಡಧಾರಿಯೇ ಕೊತ್ವಾಲನೆಂದು ಅರ್ಥವಾಗುತ್ತದೆ ಮತ್ತು ಆತನು ಕಾಶೀ ಕ್ಷೇತ್ರಾಧಿಪತಿ ವಿಶ್ವನಾಥನಿಂದ ನಿಯುಕ್ತನಾದ ದೈವ ಸ್ವರೂಪ. ಹೀಗೆ ವಿಶ್ವನಾಥನಿಂದ ತನಗೊದಗಿದ ಪದವಿಯನ್ನು ಒಪ್ಪಿಕೊಂಡ ಭೈರವನಿಗೆ ಇಡೀ ಕಾಶೀನಗರವೇ ಬೃಹತ್ತಾದ ಶಿವಲಿಂಗದಂತೆ ಗೋಚರಿಸಿತು. ಎತ್ತ ಸಂಚರಿಸಬೇಕೆಂದು ತಿಳಿಯದಾದ ಭೈರವನು ಒಂದು ನಾಯಿಯನ್ನು ತನ್ನ ವಾಹನವಾಗಿ ಮಾಡಿಕೊಂಡು ಹೊರಟನು. 

ಇದೆಲ್ಲ ಏನಿದ್ದರೂ ೧೬ನೇ ಶತಮಾನದಲ್ಲಿ ವಿಶ್ವನಾಥನಿಗೆಂದು ನಿರ್ಮಿತವಾದ ದೇವಾಲಯದ ಅಷ್ಟದಿಕ್ಪಾಲಕರಲ್ಲಿ ಭೈರವನಿಗೆ ಒಬ್ಬನಾಗಿ ಮೆರೆಯುವ ಗೌರವವಂತೂ ದಕ್ಕಿತು. ವಿಶ್ವನಾಥನು ಮೃದು ಸ್ವಭಾವದವನೆಂದೂ, ಭೈರವನು ಉಗ್ರರೂಪಿಯೆಂದೂ, ಅವರ ಗುಣಸ್ವಭಾವಗಳಿಂದ ತಿಳಿಯಬಹುದಾದರೆ, ಭೈರವನ ಆರಾಧಕರು ಉಗ್ರತೆಯನ್ನು ಮೆಚ್ಚುವವರು ಎಂದು ಅದರ ಅರ್ಥವಲ್ಲ. ಭೈರವನು ಕೇವಲ ದಿಕ್ಪಾಲಕರಲ್ಲಿ ಓರ್ವನಾದುದರಿಂದ ಆತನ ಮಹತ್ವವೇನೂ ಕಡಿಮೆಯಾಗಿದೆ ಎಂದು ಭಾವಿಸುವವರಿಗೆ ಆತನ ಹೆಸರಿನಲ್ಲಿ ದೇಶಾದ್ಯಂತ ಸ್ಥಾಪಿತವಾಗಿರುವ ದೇವಾಲಯಗಳೇ ಸಾಕ್ಷಿಯಾಗಿವೆ. 

ಕಾಶಿಯಲ್ಲಿ ಪಚಾಲಿ ಭೈರವನೆಂಬ ರಾಜನಿದ್ದನು. ಭಾಗಮತಿ ಅಥವಾ ಗಂಗಾನದಿಯ ತೀರದ ಸ್ಮಶಾನಗಳಿಗೆ ಆತನೇ ಅಧಿಪತಿ. ಕಾಲಭೈರವ ಅಥವಾ ಕಾಶೀ ವಿಶ್ವನಾಥನು ವಾರಾಣಸಿಯಲ್ಲಿ ನಡಯುವ ಭಕ್ತಪುರದ ಜಾತ್ರೆಯನ್ನು ವೀಕ್ಷಿಸಲು ಕುತೂಹಲದಿಂದ ಗುಪ್ತವಾಗಿ ಬರುತ್ತಿದ್ದನೆಂದು ಐತಿಹ್ಯ. ಆದರೆ ಅಲ್ಲಿನ ತಾಂತ್ರಿಕ ಪೂಜಾರಿಯೊಬ್ಬನು ಆತನನ್ನು ಗುರುತಿಸಿ, ಅವನ ತಲೆಯನ್ನು ಕತ್ತರಿಸಿ, ಕಾಶಿಗೆ ಓಡಿಹೋಗುವ ಹವಣಿಕೆಯಲ್ಲಿದ್ದನು. ಆಕಾಶ ಭೈರವನೆನ್ನುವವನು ಭೈರವನ ಸಹಚರ. ಯಾವಾಗಲೂ ಆತನೊಡನೇ ಇರುತ್ತಿದ್ದವನು. ಈಗಲೂ ಈ ಉತ್ಸವದಲ್ಲಿ ಶಿರವೊಂದನ್ನು ಪ್ರದರ್ಶಿಸಿ, ಅದು ಕಾಲಭೈರವನದು ಎಂದು ಭಕ್ತಪುರದ ಮಂದಿ ಈಗಲೂ ಹೇಳಿಕೊಳ್ಳುತ್ತಾರಾದರೂ, ಅದು ನಿಜವಾಗಿ ಕಾಲಭೈರವನಿಗೆ ಸಂಬಂಧಿಸಿದ್ದಲ್ಲ. 

ಇದಲ್ಲದೆ ಆತನನ್ನು ಕ್ಷೇತ್ರಪಾಲಕನೆಂದೂ ಕರೆದಿರುವುದರಿಂದ ಆಯಾ ಶಿವ ದೇವಾಲಯಗಳಿಗೆ ಸಂರಕ್ಷಕನಾಗಿ ಭೈರವನಿಗೆ ಪ್ರಾಶಸ್ತ್ಯವನ್ನೂ ನೀಡಲಾಗಿದೆ.  ಭೈರವನ ದೇವಾಲಯಗಳು ಮಹಾರಾಷ್ಟ್ರದ ಜಾವಳಿ, ಬೋರ್ಬಾನ್, ಸೋನಾರಿ ಮುಂತಾದ ಸ್ಥಳಗಳಲ್ಲಿ ಸ್ಥಾಪಿತವಾಗಿತ್ತು.

ಕಾಶೀ ವಿಶ್ವನಾಥ ದೇವಾಲಯ
 ಉಜ್ಜಯನಿ, ವೀರ್ ಮುಂತಾದ ಸ್ಥಳಗಳಲ್ಲೂ ಅವುಗಳ ಕುರುಹುಗಳಿವೆ. ಕಾಶೀಕ್ಷೇತ್ರವು ತೀರ್ಥವೆಂದೇ ಪ್ರಸಿದ್ಧಿಯಾಗಿದ್ದು, ಇಲ್ಲಿಯೇ ಕಾಲಭೈರವನು ಬ್ರಹ್ಮಹತ್ಯಾದೋಷದಿಂದ ವಿಮುಕ್ತನಾದನೆಂದು ಹೇಳಲಾಗುತ್ತದೆ. ಇಂತಹ ಮಹತ್ವವು ಉಜ್ಜಯನಿಗೆ ಅನ್ವಯಿಸುವುದಿಲ್ಲ. ಕಾಶೀ ವಿಶ್ವನಾಥನಿಗೆ ಸಾತ್ವಿಕ ಆಹಾರವನ್ನು ನಿವೇದನೆ ಮಾಡಿದರೆ, ಭೈರವ ಅಥವಾ ಚಂಡ ಇವರಿಗೆ ಅರ್ಪಿಸುವ ನೈವೇದ್ಯವು ತಾಮಸಿಕ ಸ್ವರೂಪದ್ದಾಗಿರುತ್ತದೆ. ಆದ್ದರಿಂದಲೇ ಭೈರವ ಅಷ್ಟೋತ್ತರ ಶತನಾಮದಲ್ಲಿ ಆತನನ್ನು ಸ್ಮಶಾನ ವಾಸೀ, ಮಾಂಸಾಶೀ, ರಕ್ತಪಃ ಪಾನಪಃ ಎಂದೆಲ್ಲ ವರ್ಣಿಸಲಾಗಿದೆ. 

ಉಜ್ಜಯನಿ ಕಾಲಭೈರವ ದೇಗುಲ

ಆಧುನಿಕ ಪೂರ್ವ ಕಾಶೀ ಮತ್ತು ಮೈದಾಗಿನ್ ಪಾರ್ಕ್ ಇವುಗಳ ನಡುವಣ ಚೌಖಂಬಾ ಓಣಿಯಲ್ಲಿರುವ ಕಾಲಭೈರವನನ್ನು ಭೈರೋನಾಥ್ ಎಂದು ಕರೆಯುವರು. ಪೂರ್ವಕಾಲದಲ್ಲಿ ಕಾಶಿಯ ಈ ಸ್ಧಳವು ಶೈವ ಸಂತರು ಮತ್ತು ಉಗ್ರ ಕಾಪಾಲಿಕರ ಅಧ್ಯಾತ್ಮಕೇಂದ್ರವಾಗಿತ್ತು. ಇವರ ಮುಂದಿನ ಸಂತತಿಯನ್ನು ಗೋರಖನಾಥ್ ಮತ್ತು ಗಾಣಾಪತ್ಯ ಯೋಗಿಗಳೆಂದು ಗುರ್ತಿಸುತ್ತಾರೆ.  ಇವರಿಗೆ ಸಾಂಪ್ರದಾಯಕ ಜಾತಿ ಮತಗಳ ಯಾವುದೇ ಹಂಗು ಇರುವುದಿಲ್ಲ. ಇಂದು ಭೈರವನ ದೇಗುಲಗಳು ಇಂಥ ಉಗ್ರ ಧಾರ್ಮಿಕ ವಾದಿಗಳ ನೆಲೆಯಾಗಿಲ್ಲವಾದರೂ, ಸಾಧಾರಣ ಗೃಹಸ್ಥರು ಈ ದೇವನನ್ನು ಒಪ್ಪಿಕೊಂಡು ಸಾತ್ವಿಕ ಆಹಾರದ ನಿವೇದನೆಯನ್ನು ಮಾಡುತ್ತಾರೆ. ಇದೇ ಪರಂಪರೆಯು ಮುಂದುವರೆದು ಭಾರತ ಉಪಖಂಡದಲ್ಲಿ ವಿಶ್ವನಾಥನ ದೇವಾಲಯಗಳಿಗಿಂತಲೂ ಭೈರವನ ದೇವಾಲಯಗಳೇ ಅಧಿಕವಾಗಲು ಕಾರಣವಾಯಿತು. 

* * * * * * *



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ