ಸೋಮವಾರ, ಜುಲೈ 2, 2012

ಭೈರವ - ಪದ ನಿಷ್ಪತ್ತಿ



ಭೈರ, ಭೈರವ ಇತ್ಯಾದಿ..........

ಪದಗಳ ನಿಷ್ಪತ್ತಿಯನ್ನು ತಿಳಿಯುವುದೆಂದರೆ, ಅವುಗಳ ಮೂಲವನ್ನು ಅರಸಿದಂತೆ. ಇಂತಹ ಕುತೂಹಲಗಳು ಶೋಧಕನಿಗೆ ಆ ಪದದ ಹಲವು ಮಗ್ಗುಲುಗಳನ್ನು ಪರಿಚಯಿಸುತ್ತದೆ. ಐತಿಹಾಸಿಕ ದೃಷ್ಟಿಯಿಂದ ಪದದ ಮೂಲವನ್ನು ಅರಸಿ ಹೋದವನಿಗೆ ಇದಕ್ಕೆ ಇಷ್ಟೊಂದು ದೀರ್ಘ ಇತಿಹಾಸವಿದೆಯೇ ಎಂದು ಬೆರಗು ಹುಟ್ಟಿಸುವುದರ ಮೂಲಕ, ಆ ಪದವು ಸಂಸ್ಕೃತಿಯಲ್ಲಿ ಬೆರೆತು ಹೋದ ಬಗೆಯನ್ನೂ ತಿಳಿಸುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆಯಾಗಿ ಪಾವೆಂ ಆಚಾರ್ಯರ ಪದಾರ್ಥ ಚಿಂತಾಮಣಿಯನ್ನು ಹೆಸರಿಸಬಹುದು. 

ಇದರ ಪ್ರಸ್ತಾಪವೇಕೆಂದರೆ, ಪ್ರಸ್ತುತ ಬ್ಲಾಗಿನ ವಿಷಯವಾದ ಕಾಲಭೈರವನ ಅರಸಾಟದಲ್ಲಿ ಆ ಶಬ್ದದ ಮೂಲ ಮತ್ತು ಅದರ ವ್ಯಾಪ್ತಿಗಳನ್ನು ನೋಡಬೇಕೆನಿಸಿತು. ಇದಕ್ಕೆ ಪೂರಕವಾಗಿ ಮಿತ್ರರಾದ ಕಡೂರಿನ ಕುಮಾರಸ್ವಾಮಿಯವರು, ಭೈರವ ಶಬ್ದವು ಜಾತಿಸೂಚಕವಾಗಿ ಬಳಕೆಯಾಗುತ್ತಿರುವುದರ ಬಗ್ಗೆ ಗಮನ ಸೆಳೆದಿದ್ದರು. ಇದನ್ನೇ ಅವಲೋಕಿಸುತ್ತಿದ್ದಾಗ, ಭೈರ, ಬೈರ ಮುಂತಾದ ಹೆಸರುಗಳು ಆ ದೇವರನ್ನು ಕುರಿತಾದ ಆರಾಧನಾ ಸಂಪ್ರದಾಯದ ಮುಂದುವರಿಕೆಯಾಗಿ ಬಂದಿರಬೇಕು ಎನ್ನಿಸಿತು. ಬೈರವನ ಆರಾಧನೆಯು ಉತ್ತರ ಭಾರತದಲ್ಲಿರುವಂತೆ, ದಕ್ಷಿಣದಲ್ಲೂ ಪ್ರಚಲಿತವಿದೆ. ವಿಶೇಷತಃ ಕರಾವಳಿ ಪ್ರದೇಶದಲ್ಲಿ, ಪಂಜುರ್ಲಿ, ಬೊಬ್ಬರ್ಯಗಳಂತೆಯೇ ತುಳುನಾಡಿನಲ್ಲಿ ಭೈರವನ ಹೆಸರಿನ ಒಂದು ಭೂತವಿದೆ. ಇದರ ಆರಾಧನೆಯು ಮುಂದೆ ಪ್ರಚಲಿತವಾದಂತೆಲ್ಲ, ಆದಿರುವ ನೆಲೆಯಲ್ಲಿ ತ್ರಿಶೂಲ, ವಿಭೂತಿ, ಡಮರು ಮುಂತಾದ ಶೈವ ಸಂಕೇತಗಳನ್ನು ಸ್ಥಾಪಿಸಿ ತಮ್ಮ ಶೈವ ಸಂಪ್ರದಾಯವನ್ನು ಬಲಗೊಳಿಸಿಕೊಂಡಿದ್ದಾರೆ. “ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ-ಗಿರಿಜನ ಸಾಮಾಜಿಕ ಇತಿಹಾಸ” ಎಂಬ ಕೃತಿಯಲ್ಲಿ, ಪಿ.ಕಮಲಾಕ್ಷ ಅವರುಭೈರವರಾರಾಧನೆಯ ವಿಷಯವನ್ನು ತಿಳಿಸುತ್ತಾ, ಪೂರ್ವದಲ್ಲಿ ಶಿವನು ಕಾಲಭೈರವನ ರೂಪತಾಳಿ ಅವತಾರಕ್ಕೆ ಬಂದು ಜನತೆಯಲ್ಲಿ ದೈವಭಕ್ತಿಯನ್ನು ಹಾಗೂ ದೇವರ ಭಯವನ್ನು, ಧರ್ಮವನ್ನು ಸ್ಥಾಪಿಸುವ ಕಾಲದಲ್ಲಿ ಈ ವರ್ಗದ ಜನರು ಶಿವನ, ಕಾಲಭೈರವ ಅವತಾರದ ದೈವಿಕಶಕ್ತಿಗೆ ಬೆರಗಾಗಿ ಕಾಲಭೈರವನ ದೈವಿಕಶಕ್ತಿಯನ್ನು ನಂಬಿ, ಪೂಜೆ-ಪುನಸ್ಕಾರ ಕೊಟ್ಟು ಆರಾಧನೆ ಮಾಡಿಕೊಂಡು ಬಂದ ಕಾರಣ ಕಾಲಭೈರವನ ಆರಾಧಕರಾದ ಇವರನ್ನು “ಭೈರವರು” ಎಂಬುದಾಗಿಯೂ ಕರೆಯತೊಡಗಿದರು ಎಂಬ ಹಿರಿಯರ ಮಾತಿದೆ, ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮತ್ತೆ ಕೆಲವರು ಭೈರ ಅರಸರ ಪಾಳೆಯಗಾರರಾದ ಕಾರಣ ತಮಗೆ ಭೈರರೆಂದು ಕರೆಯಲಾಯಿತು ಎಂಬ ಅಭಿಪ್ರಾಯ ವನ್ನೂ ವ್ಯಕ್ತಪಡಿಸುತ್ತಾರೆ.

 ಭೈರವ ಪದವು "ಭೇರಿ" ಯಿಂದ ಬಂದಿರಬಹುದೆಂದು ಊಹಿಸಲಾಗಿದೆ. ಸಿ.ಡಿ. ಮ್ಯಾಕ್ಲನ್ ಯೆಂಬ ಆಂಗ್ಲ  ವಿದ್ವಾಂಸರು ತಮ್ಮ ಗ್ಲೋಸರಿ ಆಫ್ ದಿ ಮದ್ರಾಸ್ ಪ್ರೆಸಿಡೆನ್ಸಿ ಎಂಬ ನಿಘಂಟನ್ನು ರಚಿಸಿದ್ದಾರೆ. ಅದರಲ್ಲಿ ಕೆಳಜಾತಿಯ ಜನರು ದೇವಾಲಯಗಳಲ್ಲಿ ಭೇರಿಯನ್ನು ಬಡಿಯುವ ಸೇವೆಗೆಂದು ನಿಯುಕ್ತರಾಗಿದ್ದರು. ಅವರಿಗೆ ದೇವಾಲಯದ ಆದಾಯದಲ್ಲಿ ಸ್ವಲ್ಪ ಭಾಗವನ್ನು ಸಂಬಳವಾಗಿ ನೀಡಲಾಗುತ್ತಿತ್ತು. ಇದಲ್ಲದೆ ಅವರು ವೃತ್ತಿಯಿಂದ ಸೈನಿಕರಾಗಿದ್ದರು. ಅಲ್ಲಿಯೂ ಭೇರಿ ಬಡಿಯುವ ಕೆಲಸ ಅವರಿಗೆ ಇರುತ್ತಿತ್ತು. ಹೀಗಾಗಿ ತಮ್ಮ ಪರಿಣತಿಯಿಂದ ಅವರು ದೇವಾಲಯದ ಸೇವೆಗೂ ನಿಯುಕ್ತರಾಗಿರಬಹುದು ಮತ್ತು ಭೇರಿ ಬಾರಿಸುವವನನ್ನು ಭೇರ ಅಥವಾ ಭೈರ ಎಂದು ಕರೆಯಲಾಗುತ್ತಿತ್ತು. 

ನಮ್ಮ ಜಾನಪದ ಸಾಹಿತ್ಯದಲ್ಲಿ ಭೈರವನನ್ನು ಭೈರುವ, ಭೈರೂವ, ಭೈಯರೂಪ ಎಂದೆಲ್ಲ ಹೆಸರಿಸಲಾಗಿದೆ. ಇವರೆಲ್ಲರೂ ಶಿವನ ಭಯಕಂರ ರೂಪವಾದ ಭೈರವ ಆರಾಧಕರೇ ಆಗಿದ್ದಾರೆ. ಬೋರಯ್ಯ ಎನ್ನುವ ಹೆಸರು ಕೂಡ ಭೈರವಯ್ಯ ಎಂಬ ಹೆಸರಿನ ಅಪಭ್ರಂಶ ಅಥವಾ ಗ್ರಾಮೀಣ ರೂಪವೇ ಸರಿ. 

ಹಿಂದಿದ್ದ ಸಾಮಾಜಿಕ ವ್ಯವಸ್ಥೆಯಲ್ಲಿ ಜನರು ಜಾತಿ ಅಂತಸ್ಥುಗಳ ಆಧಾರದ ಮೇಲೆ ತಮ್ಮ ತಮ್ಮ ಕೇರಿ, ಬೀದಿಗಳಲ್ಲಿ ವಾಸಿಸುತ್ತಿದ್ದರು. ಅಥವಾ  ಬಹುಸಂಖ್ಯಾತ ಜಾತಿಯ ಜನರ ಒಕ್ಕಲನ್ನು ಆಯಾ ಜಾತಿಯ ಹೆಸರಿನಿಂದಲೇ ಗುರುತಿಸುವ ಪದ್ಧತಿಯಿತ್ತು. ಬ್ರಾಹ್ಮಣರು ಹೆಚ್ಚಾಗಿರುವ ಸ್ಥಳವು ಅಗ್ರಹಾರವಾದರೆ, ಕುರುಬರ ಎಡೆಯನ್ನು ಕುರುಬರ ಹಟ್ಟಿ ಎಂದು ಕರೆಯಲಾಗುತ್ತಿತ್ತು. ಭೈರರು ವಾಸಿಸುವ ನೆಲೆಗಳಲ್ಲಿನ ಬ್ರಾಹ್ಮಣರು ನೀಡಿದ ನಿಷ್ಪತ್ತಿಯು  ವ್ಯಾಕರಣಾತ್ಮಕವಾಗಿ ಸರಿಯಿದ್ದೀತು ಎಂದೆನಿಸುತ್ತದೆ. ಏಕೆಂದರೆ ಈ ವರ್ಗದ ಜನ, ಊರ ಹೊರಗಿರುತ್ತಿದ್ದರು, ಅವರನ್ನು ಬಾಹಿರರು ಎಂದು ಕರೆಯುತ್ತಿದ್ದರು. ಅದೇ ಮುಂದೆ ಬಹಿರರು, ಬಯಿರ, ಬೈರ ಮುಂತಾಗಿ ಆಡುಮಾತಿನ ಪರಿವರ್ತಗೆ ಒಳಗಾಗಿ, ಕೊನೆಗೆ ಬೈರರೆಂಬ ಪದವೇ ಉಳಿದುಕೊಂಡಿತು. ನಮ್ಮ ಅನೇಕ ಪದಗಳು ತಮ್ಮ ಮೂಲರೂಪವನ್ನು ಕಳೆದುಕೊಂಡಿರುವ ಬಗೆ ಇಂತಹುದೇ ಆದ್ದರಿಂದ  ತಾರ್ಕಿಕವಾಗಿಯೂ ಇದು ಸರಿಯಾಗಿ ಕಾಣುತ್ತದೆ. 

* * * * * * * 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ