ಈ ಸಂಚಿಕೆಯಲ್ಲಿ ಪ್ರಕಟವಾಗಿರುವ
ಲೇಖನ "ಭೈರವ ದೇವರ ಅವತರಣ". ಈ ವಿಷಯದ ಬಗ್ಗೆ ಅನೇಕ ಕಥಾನಕಗಳು ಪ್ರಚಲಿತವಿದೆಯಾದರೂ, ಇಲ್ಲಿರುವ ಬರಹವನ್ನು ವಾರಾಣಸಿಯ ದೇಹಾತ್ ಪ್ರಕಾಶನ ಸಂಸ್ಥೆಯವರು ಪ್ರಕಟಿಸಿರುವ "ಭೈರವ
ಪೂಜಾ ವಿಧಾನ" ಗ್ರಂಥದಿಂದ ಆಯ್ದುಕೊಳ್ಳಲಾಗಿದೆ. ಇತರ ಕಥಾನಕಗಳಲ್ಲೂ ಹೆಚ್ಚು ಕಡಿಮೆ ಇದೇ ಅಂಶಗಳು
ಪ್ರಸ್ತಾಪಿತವಾಗಿದ್ದು, ಅಲ್ಲಲ್ಲಿ ಅಲ್ಪ ಸ್ಪಲ್ಪ ಬದಲಾವಣೆಗಳು ಕಂಡುಬರುತ್ತವೆ.
ಏನಿದ್ದರೂ ಪುರಾಣ ಕಥಾನಕಗಳು ಜನರ ಬಾಯಿಂದ ಬಾಯಿಗೆ ಹರಿದು ಬರುವಾಗ ಇಂತಹ ವ್ಯತ್ಯಾಸಗಳು ಸ್ವಾಭಾವಿಕ.
ನಮ್ಮ ಅನೇಕ ಶಿಲ್ಪಗಳಲ್ಲಿ, ಚಿತ್ರಗಳಲ್ಲಿ ಬ್ರಹ್ಮನು ಚತುರ್ಮುಖನಾಗಿಯೇ ಚಿತ್ರಿತನಾಗಿರುವನಷ್ಟೇ. ಆದರೆ
ವಸ್ತುಸ್ಥಿತಿ ಹಾಗಿಲ್ಲ. ತಾನೇ ಅತಿ ಶ್ರೇಷ್ಠನೆಂದು
ಬ್ರಹ್ಮನಂಥ ಪಿತಾಮಹನೇ ಗಳಹಲು ಆರಂಭಿಸಿದಾಗ,ಪಂಚಮುಖನಾದ ಆತನು ಅನಿವಾರ್ಯವಾಗಿ
ತನ್ನ ಒಂದು ಶಿರವನ್ನು ಕಳೆದುಕೊಂಡು ಚತುರ್ಮುಖ ಬ್ರಹ್ಮನಾದನು. ಈ ಕಾರಣದಿಂದ ಕಾಲಭೈರವನ ಉತ್ಪತ್ತಿಯೂ
ಆಯಿತು. ಇದರಲ್ಲಿ ಅಹಂಕಾರವು ಯಾರಿಗೂ ಸಲ್ಲದೆಂಬ ಒಂದು ನೀತಿಯೂ ಇದೆ. ವಿಸ್ತೃತ ಬರಹ ನಿಮ್ಮ ಮುಂದಿದೆ.
ಓದಿ.
ಭಾನುವಾರ, ನವೆಂಬರ್ 27, 2011
ಮಂಗಳವಾರ, ನವೆಂಬರ್ 1, 2011
"ಭಿಭ್ರಾಣಂ ಶುನಕಾರೂಢಂ........."
"ಭಿಭ್ರಾಣಂ ಶುನಕಾರೂಢಂ........."
ಈಗಾಗಲೇ ಪ್ರಸ್ತಾಪಿಸಿರುವಂತೆ, ಕಾಲಭೈರವ ಶುನಕಾರೂಢ, ಎಂದರೆ, ನಾಯಿಯನ್ನು ವಾಹನವಾಗಿ ಉಳ್ಳವ. ಮೊತ್ತ ಮೊದಲು, ನಮ್ಮ ಕುಲದೇವತೆ ನನ್ನನ್ನು ಆಕರ್ಷಿಸಲಿಲ್ಲ, ಬದಲಾಗಿ ಚಿಕ್ಕಂದಿನಲ್ಲಿ ಆತನ ಅಚ್ಚ ಬಿಳಿಯ ವಾಹನ "ನಾಯಿ" ನನ್ನ ಗಮನ ಸೆಳೆಯಿತಂದರೆ ಅದು ಸ್ವಾಭಾವಿವೂ ಇರಬಹುದು. ದೊಡ್ಡ ಗಾತ್ರದ ಗೋಲ್ಡನ್ ರಿಟ್ರೀವರ್ ಹೋಲುವ ಈ ಬಿಳಿಯ ನಾಯಿಯ ಜೋಲು ಕಿವಿಗಳು, ಸೂಕ್ಷ್ಮ ಕಣ್ಣುಗಳು ಮತ್ತು ಮನುಷ್ಯನನ್ನು ಹೊರಬಲ್ಲ ಅದರ ತ್ರಾಣವನ್ನು ಕಲಾವಿದರು ಸಮರ್ಥವಾಗಿ ಚಿತ್ರಿಸಿದ್ದಾರೆ. ಈ ಚಿತ್ರವನ್ನು ಹಿಂದೆ ಪ್ರಕಟಿಸಲಾಗಿದೆ.
ನಮ್ಮ ಪುರಾಣಕತೆಗಳಲ್ಲಿ ನಾಯಿಯ ಪ್ರಸ್ತಾಪ ಅನೇಕ ಸಂದರ್ಭಗಳಲ್ಲಿ ಬಂದಿದೆ. ಮಹಾಭಾರತದಲ್ಲಿ ಧರ್ಮರಾಯ ವೃಷೋತ್ಸರ್ಗ ಮಾಡುವ ಕಾಲಕ್ಕೆ ಆತನನ್ನು ಹಿಂಬಾಲಿಸಿದ್ದು ಒಂದು ನಾಯಿ. ದತ್ತಾತ್ರೇಯನ ಚಿತ್ರದಲ್ಲಿ ಆತನು ಹಸುವೊಂದಕ್ಕೆ ಒರಗಿ ನಿಂತಿದ್ದರೆ, ಬಳಿಯಲ್ಲಿ ನಾಲ್ಕು ನಾಯಿಗಳು ಸುತ್ತಾಡುತ್ತಿರುವಂತೆ ಚಿತ್ರಿಸಲಾಗಿದೆ. ಈ ನಾಲ್ಕು ನಾಯಿಗಳು, ನಾಲ್ಕು ವೇದಗಳನ್ನು ಪ್ರತಿನಿಧಿಸುತ್ತದೆ ಎಂದೂ ಹೇಳಲಾಗಿದೆ.
ಕಾಲಭೈರವ ಧ್ಯಾನ ಶ್ಲೋಕವನ್ನು ಇಲ್ಲಿ ಇನ್ನೊಮ್ಮೆ ಅರ್ಥ ಸಹಿತ ನೀಡಿದ್ದೇನೆ. ಕಾಲಭೈರವನ ಆರಾಧಕರು ಇದನ್ನು ಮಕ್ಕಳಿಗೂ ಕಲಿಸುವಂತಾಗಲಿ ಎನ್ನುವುದು ಆಶಯ.
ಕರಕಲಿತ ಕಪಾಲೀ, ಕುಂಡಲೀ ದಂಡಪಾಣಿ |
(ಕರದಲ್ಲಿ ಕಪಾಲವನ್ನು ಹಿಡಿದಿರುವ, ಕಿವಿಗಳಿಗೆ ಕುಂಡಲಗಳನ್ನು ಧರಿಸಿ, ಕೈಯಲ್ಲಿ ದಂಡವನ್ನು ಹಿಡಿದಿರುವ)
ತರುಣ ತಿಮಿರ ನೀಲೋ, ವ್ಯಾಲಯಜ್ಞೋಪವೀತಿ ||
(ಆತನ ಬಣ್ಣ ಮುಸ್ಸಂಜೆಯ ಕತ್ತಲಿನ ನೀಲಿಯ ಬಣ್ಣ, ಸರ್ಪದ ಜನಿವಾರವನ್ನು ಧರಿಸಿರುವ)
ಕೃತ ಸಮಯ ಪರ್ಯಾ ವಿಘ್ನವಿಚ್ಛೇದ ಹೇತುಃ |
(ನಿಶ್ಚಿತ ಸಮಯದಲ್ಲಿ ವಿಘ್ನಗಳನ್ನು ನಿವಾರಿಸಲು ಕಾರಣವಾಗುವ)
ಜಯತು ವಟುಕನಾಥಃ ಸಿದ್ಧಿದಃ ಸಾಧಕಾನಾಂ ||
(ಸಾಧಕರಿಗೆ ಒಲಿಯುವಂಥ ವಟು ಸ್ವರೂಪಿಯಾದ ಕಾಲಭೈರವನಿಗೆ ಜಯವಾಗಲಿ)
ಅದೇ ರೀತಿ ಮತ್ತೊಂದು ಪ್ರಚಲಿತ ಧ್ಯಾನ ಶ್ಲೋಕ ಹೀಗಿದೆ :
ನಗ್ನ ರೂಪಂ ತ್ರಿನೇತ್ರಂ ಚ ಸರ್ಪಾಭರಣ ಭೂಷಿತಮ್ |
(ಈತನು ನಗ್ನರೂಪಿ, ಮೂರು ಕಣ್ಣುಗಳುಳ್ಳವ, ಸರ್ಪಗಳನ್ನು ಆಭರಣಗಳನ್ನಾಗಿ ಧರಿಸಿರುವನು)
ರತ್ನ ಕುಂಡಲ ಸಂಯುಕ್ತಂ ಶಿರೋಮಾಲಾ ವಿಭೂಷಿತಂ |
(ಕಿವಿಗೆ ರತ್ನ ಕುಂಡಲಗಳನ್ನು ಧರಿಸಿ, ರುಂಡಮಾಲೆಗಳಿಂದ ಸುಶೋಭಿತನಾಗಿರುವವನು)
ಖಡ್ಗಂ ಶೂಲಂ ಕಪಾಲಂ ಚ ಡಮರುಂ ಭೀಮ ದಂಷ್ಟ್ರಕಂ |
(ಕೈಗಳಲ್ಲಿ ಖಡ್ಗ, ಶೂಲ, ಕಪಾಲ ಮತ್ತು ಡಮರುಗಳನ್ನು ಧರಿಸಿರುವ ಈತನು ಭೀಮ ಬಲವುಳ್ಳವನು)
ಭಿಭ್ರಾಣಂ ಶುನಕಾರೂಢಂ ಕ್ಷೇತ್ರಪಾಲಂ ಅಹಂ ಭಜೇ ||
(ನಾಯಿಯನ್ನು ವಾಹನವಾಗಿ ಹೊಂದಿ ಅದರ ಮೇಲೆ ಕುಳಿತಿರುವ ಕ್ಷೇತ್ರಪಾಲನನ್ನು ನಾನು ಭಜಿಸುತ್ತೇನೆ.
ಈ ವರೆಗೆ ಪ್ರಕಟವಾಗಿರುವ ಕಾಲಭೈರವ ಶಿಲ್ಪಗಳನ್ನು ಗಮನಿಸಿ. ಈ ಎಲ್ಲ ಶಿಲ್ಪಗಳಲ್ಲೂ ಮೇಲೆ ನೀಡಿರುವ ವಿವರಗಳು ಕಂಡುಬರುತ್ತವೆ. ಇದನ್ನು ಧ್ಯಾನಶ್ಲೋಕ ಎಂದು ಹೇಳಲಾಗಿದ್ದು, ಇದರ ಅನ್ವಯವೇ ಶಿಲ್ಪಿಗಳು ಕಾಲಭೈರವನನ್ನು ಕಂಡರಿಸಿರುವುದು ಗೋಚರಿಸುತ್ತದೆ. ಸ್ವಾರಸ್ಯದ ಸಂಗತಿಯೆಂದರೆ ವಿಪುಲ ಸಾಹಿತ್ಯನನ್ನು ಹೊಂದಿರುವ ಈ ದೇವನ ಇತರ ಸ್ತುತಿಗಳಲ್ಲಿ ಎಲ್ಲಿಯೂ ಆತನು ಶುನಕಾರೂಢನೆಂದು ಹೇಳಲಾಗಿಲ್ಲ ! ಇದೊಂದು ಶ್ಲೋಕದಲ್ಲಿ ಮಾತ್ರ ಈ ವಿವರಣೆ ಇದ್ದು, ನಾವು ಕಾಣುವ ಬಹುತೇಕ ಭೈರವ ವಿಗ್ರಹಗಳಲ್ಲಿ ಕಾಣಿಸಿರುವ ನಾಯಿಯು, ಆತನ ಕರದಲ್ಲಿರುವ ತಲೆಬುರುಡೆಯಿಂದ ಸೋರುತ್ತಿರುವ ರಕ್ತವನ್ನು ನೆಕ್ಕಲು ಹವಣಿಸುತ್ತಿರುವಂತೆ ಮಾತ್ರ ಚಿತ್ರಿಸಲಾಗಿದೆಯೇ ವಿನಾ, ನಾಯಿಯ ಮೇಲೆ ಕುಳಿತಿರುವಂಥ ಶಿಲ್ಪಗಳಾಗಲೀ, ಚಿತ್ರಗಳಾಗಲೀ ತೀರ ವಿರಳವೆಂದೇ ಕಾಣುತ್ತದೆ. ಏನಿದ್ದರೂ ಕಾಲಭೈರವ ಮತ್ತು ನಾಯಿಗಳ ಸಾಂಗತ್ಯವಂತೂ ಎಲ್ಲೆಡೆ ಕಂಡುಬರುತ್ತಿದೆಯೆನ್ನಲು ಅಡ್ಡಿಯಿಲ್ಲ.
* * * * * * *
ಭಾನುವಾರ, ಅಕ್ಟೋಬರ್ 9, 2011
"ಭೈರವ - ಕಾಲಭೈರವ"
ಭೈರವನೆಂಬ ಪದಕ್ಕೆ ಹಲವು ನಿಷ್ಪತ್ತಿಗಳಿವೆ. ಈ ಶಬ್ದದ ಸಾಹಿತ್ಯಕ ಅರ್ಥವನ್ನಷ್ಟೇ ಬೆಂಬೆತ್ತಿ ಹೋದರೆ "ಭೈ" ಎಂಬ ಧಾತುವಿನಿಂದ "ಭಯ", "ಭೀತಿ" ಎಂದು ತಿಳಿಯಬಹುದು. ಅದೇಕೆ ಭಯ - ಬೀತಿಗಳೆಂದರೆ - ಅತನು ಉಂಟುಮಾಡುವ "ರವ" ಅಥವಾ ಶಬ್ದ. ಭಯಂಕರ ಶಬ್ದವನ್ನು ಉತ್ಪತ್ತಿ ಮಾಡುವುದರಿಂದ ಅತ "ಭೈರವ". ಕಾಶ್ಮೀ ರದ ಶೈವ ಪಂಥದಲ್ಲಿ ಇನ್ನೊಂದು ಬಗೆಯ ವಿವರಣೆ ದೊರಕುತ್ತದೆ. ಅದರಂತೆ ಭ=ಭರಣ (ಸಾಕುವವನು, ಭರಿಸುವವನು), ರ=ನಿರ್ವಾಣ (ಮುಕ್ತಿದಾತ) , ವ=ವಮನ (ಸೃಷ್ಟಿಕಾರ್ಯ) ಎಂದಿದೆ. ಇದೆಲ್ಲ ಏನೇ ಇದ್ದರೂ ಭೈರವ ದೇವತೆಯ ಸ್ವಾರಸ್ಯವೆಂದರೆ, ಶಿವನ ಸಾತ್ವಿಕ ರೂಪಕ್ಕೆ ತದ್ವಿರುದ್ಧವಾದ ಉಗ್ರ ಸ್ವರೂಪ, ಈ ಉಗ್ರತೆಯಾದರೋ ಭಯಪಡಿಸುವ ಉದ್ದೇಶದಿಂದ ತಳೆದುದಲ್ಲ. ಬದಲಾಗಿ ತಪ್ಪುಮಾಡಿದರನ್ನು ಶಿಕ್ಷಿಸುವ ರೂಪವಿದು. ಇದಕ್ಕೆ ಪೂರಕವೆನ್ನುವಂತೆ ನೇಪಾಳದ ಹನೂಮಾನ್ ಧೋಕಾದಲ್ಲಿ ಇರುವ ಭೈರವ ಮಂದಿರವು ಅಲ್ಲಿನ ನ್ಯಾಯಾಲಯವೆಂದೇ ಪ್ರಸಿದ್ಧವಾಗಿದೆ. 17ನೇ ಶತಮಾನದ ಈ ಮಂದಿರದಲ್ಲಿ 12 ಅಡಿ ಎತ್ತರದ ಭವ್ಯ ಭೈರವ ಮೂರ್ತಿಯಿದೆ. ಈ ಭೈರವ ಮೂರ್ತಿಯೆದರು ಸುಳ್ಳಾಡಿದರೆ ಸಾವು ನಿಶ್ಚಯವೆಂಬ ನಂಬಿಕೆಯಿದೆ.
ಭೈರವ ದೇವತೆಯ ಅವತರಣ ಕತೆಯಲ್ಲಿ ಬರುವಂತೆ ಆತನು ವಟುಕ ಭೈರವ ಅಥವಾ ಬಾಲ ಭೈರವ. ಆದರೆ ಆತನು ಕಾಲಭೈರವನೆಂದು ಪ್ರಚುರಗೊಂಡಿದ್ದು ಹೇಗೆ ?
ಈ ವಿಷಯದಲ್ಲಿ ಅಂತರ್ಜಾಲದಲ್ಲಿ ಒಬ್ಬರು ತಮ್ಮ ಅನುಮಾನವನ್ನು ಹೀಗೆ ವ್ಯಕ್ತಪಡಿಸಿದ್ದಾರೆ. ಭೈರವನು ತನಗೆ ಒದಗಿದ ಬ್ರಹ್ಮ ಹತ್ಯಾ ದೋಷವನ್ನು ಕಳೆದುಕೊಳ್ಳಲು ವ್ರತ ನಿಷ್ಠನಾಗಿ ಅಲೆದನು ಎನ್ನುವುದಕ್ಕೂ, ಕಾಲನೆಂಬ ಪ್ರತ್ಯಯವು ಅವನಿಗೆ ತಳುಕು ಹಾಕಿಕೊಡಿದ್ದಕ್ಕೂ ಎಲ್ಲಿಯ ಸಂಬಂಧ ಎಂದು ಪ್ರಶ್ನಿಸಿರುವರು. ಈ ಪ್ರಶ್ನೆಗೆ ಇನ್ನೋರ್ವರು ನೀಡಿರುವ ಸಮಾಧಾನ ಹೀಗಿದೆ. "ಸಂಸ್ಕೃತ ಶಬ್ದ "ಕಾಲ" ಎನ್ನುವುದಕ್ಕೆ ಸಮಯ, ಯಮ ಹಾಗೂ ಕಪ್ಪು ಎಂಬೆಲ್ಲ ಅರ್ಥಗಳಿವೆ. ಸಂದರ್ಭಾನುಸಾರ ಇದರ ಅನ್ವಯ ಮಾಡಿದಾಗ ಸೂಕ್ತ ಅರ್ಥಗಳು ದೊರೆಯುತ್ತವೆ ಅಲ್ಲದೆ ಭೈರವನ್ನು "ಮಹಾಕಾಲ" ಎಂದು ನಿರ್ದೇಶಿಸಲಾಗಿದೆ. ಈ ಪದವನ್ನು "ಕಡುಗಪ್ಪು" ಎಂದು ಅರ್ಥೈಸಬಹುದು. ಹೀಗಾಗಿ ಕಾಲಭೈರವನೆಂದರೆ ಕಡುಗಪ್ಪು ಬಣ್ಣದ ಭೈರವ ಎಂದು ಗ್ರಹಿಸುವುದೇ ಸೂಕ್ತವೆನುವುದು ನನ್ನ ಅಭಿಮತ," ಎಂದು ತಿಳಿಸಿದ್ದಾರೆ. ಈ ಚರ್ಚೆಗಳಲ್ಲಿ ತಾವು ನಂಬಿದ ದೇವನ ಆಂತರ್ಯವನ್ನು ಅರಿಯಲು ನಡೆಸಿರುವ ಯತ್ನಗಳು ಮೆಚ್ಚುವಂತಿದೆಯಲ್ಲವೆ?
ಶಂಕರಾಚಾರ್ಯಕೃತ "ಕಾಲಭೈರವಾಷ್ಟಕ" ತುಂಬ ಜನಪ್ರಿಯ. ಇದರ 8 ಶ್ಲೋಕಗಳಲ್ಲಿ ಎಲ್ಲಿಯೂ ಕಾಲನ/ಕಾಲದ ಪ್ರಸ್ತಾಪವಿಲ್ಲದಿವುದು ವಿಶೇಷ. ಇದೇ ರೀತಿ ಮುಂದಿನ ಪ್ರಕಟಣೆಗಳಲ್ಲಿ ಬರಲಿರುವ ಸಾಹಿತ್ಯವನ್ನಿಷ್ಟು ಗಮನದಿಂದ ಅವಲೋಕಿಸಿ, ಅಲ್ಲಿ ಎಲ್ಲಿಯೂ ಕಾಲ ಅಥವಾ ಸಮಯವೆಂಬ ಅರ್ಥದಲ್ಲಿ ಭೈರವನ ಹೆಸರು ಬಳಕೆಯಾಗಿಲ್ಲ. ಆದರೂ ಭೈರವನು "ಕಾಲಭೈರವ"ನೆಂದೇ ಜನಪ್ರಿಯನಾಗಿರುವುದು ಮತ್ತೊಂದು ವಿಶೇಷ.
ಇಂಥದೇ ವಿಶೇಷವು ಆತನ ವಾಹನ ನಾಯಿಯನ್ನು ಕುರಿತಾಗಿದೆ. ಆದನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸುವೆ.
ಶನಿವಾರ, ಸೆಪ್ಟೆಂಬರ್ 10, 2011
ಜಾನಪದದಲ್ಲಿ ಭೈರವ
ಔತ್ತರೇಯನಾದ ಭೈರವನು ದಕ್ಷಿಣ ಭಾರತ, ಅದರಲ್ಲೂ ಕರ್ನಾಟಕವನ್ನು ಯಾವಾಗ ಮತ್ತು ಹೇಗೆ ಪ್ರವೇಶಮಾಡಿದನೆಂಬ ಸಂಗತಿಯ ಬಗ್ಗೆ ತಿಳಿಯಬೇಕೆಂಬ ಕುತೂಹಲವಿತ್ತು. ಡಾ| ಶಿವರಾಮಕಾರಂತರು ಬರೆದಿರುವ ಜಾನಪದ ವಿಷಯಕವಾದ ಲೇಖನವನ್ನು ಓದುವಾಗ ಅದರಲ್ಲಿನ ಅನೇಕ ಸಂಗತಿಗಳು ಸ್ವಾರಸ್ಯಕರವಾಗಿದ್ದವು. ಒಂದು ಅಂದಾಜಿನಂತೆ ನಾಥ ಪಂಥವೆನ್ನುವ ಭೈರವನ ಆರಾಧಕರು ಕಾಶ್ಮೀರದಲ್ಲಿ ನೆಲೆಗೊಂಡಿದ್ದರು. ಸುಮಾರು ೧೫ನೇ ಶತಮಾನದಲ್ಲಿ ಅವರು ದಕ್ಷಿಣ ಭಾರತವನ್ನು ಪ್ರವೇಶಿಸಿದರು. ಇದಲ್ಲದೆ ಕರ್ನಾಟಕದಲ್ಲಿ ಹಳೆ ಮೈಸೂರಿನ ಪ್ರಾಂತಗಳು, ಮಲೆನಾಡು, ಬಯಲುಸೀಮೆ ಮತ್ತು ಕರಾವಳಿಯ ಕದ್ರಿಯಲ್ಲಿ ನಾಥಪಂಥದ ಶೈವರು ವಾಸಿಸಿದರು. ಕಾರಂತರು ಜಾನಪದ ನೆಲೆಯಲ್ಲಿ ಭೈರವನ ಆರಾಧನೆಯು ಚುಂಚನಗಿರಿ ಪ್ರದೇಶದಲ್ಲಿ ಹೇಗೆ ರೂಢಿಗೆ ಬಂದಿತೆಂಬುದನ್ನು, ಜಾನಪದ ಹಾಡುಗಳ ಸಂಗ್ರಾಹಕ ಶ್ರೀ ಕ.ರಾ.ಕೃ. ರವರ ಚುಂಚನಗಿರಿ ಜಾನಪದ ಗೀತ ಸಂಗ್ರಹವೆಂಬ ಕೃತಿಯನ್ನು ಆಧರಿಸಿ ವಿವೇಚಿಸಿರುವರು.
ನಮ್ಮ ಶಿಷ್ಠ ದೇವತೆಗಳೆಲ್ಲರೂ ಬಹುತೇಕ ನಮಗೆ ಸಂಸ್ಕೃತದಿಂದಲೇ ಪರಿಚಯವಾದವರು. ಹರಿ, ರುದ್ರ, ವಿರಿಂಚಿಗಳು ಕೂಡ ಭೂಲೋಕದ ಸಾಂಗತ್ಯವನ್ನು ಹೊಂದಬೇಕಾಗಿ ಬಂದ ಅನೇಕ ಐತಿಹ್ಯಗಳು ಪುರಾಣಗಳಲ್ಲಿ ಲಭ್ಯವಿವೆ. ಪೌರಾಣಿಕದೇವತೆಗಳು ದೇವಲೋಕದಿಂದ ಧರೆಗಿಳಿದು ಗ್ರಾಮೀಣರಿಂದ ಪೂಜೆಗೊಂಡು ಸ್ಥಳೀಯ ಗುಡಿಗಳಲ್ಲಿ ಕುಳಿತರು. ಅವರೆಲ್ಲರಿಗೂ ಧರ್ಮಪತ್ನಿಯಿದ್ದರೂ, ಭೂಲೋಕದ ಸಂಸರ್ಗಕ್ಕೆ ಬಂದ ಕಾರಣ ಇಲ್ಲಿನ ಕನ್ಯೆಯರನ್ನು ವರಿಸಬೇಕಾದ ಸಂದರ್ಭಗಳು ಬಂದುದೂ ಸಹಜ. ಅಂಥ ವೈವಾಹಿಕ ಕಥಾನಕಗಳು ಜಾನಪದದಲ್ಲಿ ಹೇರಳವಾಗಿವೆ. ಈ ದೈವಿಕ ವಿವಾಹಗಳಲ್ಲೂ ಜಾತಿ, ಮತ, ಪಂಥಗಳ, ಬಡತನ-ಸಿರಿತನಗಳ ತಾಕಲಾಟವೂ ಕಂಡುಬರುತ್ತದೆ.
ಭೈರವನ ವೈವಾಹಿಕ ಕಥಾನಕದಲ್ಲೂ ಇದೇ ಛಾಯೆಯಿದೆ.
"ಜೋಗಿ ಸಿಂಗನಾಥ, ಬೆರಳಲ್ಲಿ ಗೋರಖನಾಥ |
ಮೇಗಳ ಗುಡಿಯಲ್ಲಿ ಹರಕೆಯ ಕೇಳೋರು" ||
ಎಂಬ ವಿರೂಪಗೊಂಡ ತ್ರಿಪದಿಯ ತುಣುಕಿನಲ್ಲಿ - ಜೋಗಿ ಎಂದರೆ ಸಂಸ್ಕೃತದ ಯೋಗಿ, ಆತ ಅಲೆಮಾರಿ, ಹಠಯೋಗಿ. ಅವನು ಉತ್ತರದ ಗೋರಖನಾಥ ಅಥವಾ ಭೈರವ. ಆತನಿಗೆ ಪತ್ನಿಯಿದ್ದಾಳೆ. ಆಕೆ ಪಾರ್ವತಿ. ಭೂಲೋಕಕ್ಕೆ ಭೈರವನು ಬಂದಾಗ ಅವನಲ್ಲಿ ಅನುರಕ್ತಳಾದವಳು ಮಾಳವ್ವ. ಆಕೆ ಕುರುಬಿತಿ. ಆಕೆಯನ್ನು ಭೈರವ ವರಿಸಿದ. ದೈವಭಕ್ತೆಯಾದ ಮಾಳವ್ವನು
"ಕನಸಿನಲಿ ಕಂಡೇನು ಮನವೀಗ ದೊಡ್ಡವ ತೊಳಸೀಯ ಮಾಡಿ ಬಳಿದಂತೆ |
ಚುಂಚನಗಿರಿ ಭೈರವನೆ ಬಾ ನನ್ನ ಸ್ವಪುನಕೆ" ||
ಎಂದು ಕೇಳಿಕೊಂಡಳು, ಅವಳು ಮಾತ್ರವಲ್ಲ, ಆಕೆಯ ತಂದೆ ಕೂಡ
"ಆಧಾರವಾಗೋ ಆದೀಯ ಭೈರವನೇ |
ಆಧಾರವಿಲ್ಲದ ಬಡವರ ಮಗಳೀಗೆ ಆಧಾರವಾಗೋ ಭೈರವನೇ" ||
ಎಂದು ಬೇಡುತ್ತಾನೆ.
ಚುಂಚನಗಿರಿಯ ಪ್ರದೇಶಕ್ಕೆ ನಾಥಪಂಥದವರ ನಂತರ ಬಂದಿರಬಹುದಾದ ವೀರಶೈವರ ಪ್ರಭಾವವು ಈ ಜಾನಪದಿಯ ಕವಿಯ ಮೇಲೆ ಉಂಟಾಗಿದೆಯೆನ್ನಲು ಈ ತ್ರಿಪದಿಯನ್ನು ನೋಡಿ :
ಅಪ್ಪ ಭೈರವಗೆ ತುಪ್ಪ ಬಾಳೆಯ ಹಣ್ಣು | ಇಪ್ಪತ್ತು ವರಹ ಶಿವದಾರ |
ಚಿನ್ನದಿ ಒಪ್ಪುವ ಗೆಜ್ಜೆ ಗುರುವಿಂಗೆ ||
ಹೀಗೆ ಶಿವದಾರ, ಗೆಜ್ಜೆಗಳಿಂದ ಅಲಂಕೃತನಾದ ಭೈರವನು ತನ್ನ ಪ್ರೇಯಸಿಗಾಗಿ ತೊಳಲಿದನು. ಈ ವಿರಹ ವೇದನೆಯಲ್ಲಿ ಆತ ಹೊಂಚುಹಾಕಿ, ಕೈಯಲ್ಲಿ ಕಂಚಿನ ಗುರಾಣಿಯಿದ್ದೂ ಹುಲಿಯನ್ನು ಹೊಡೆಯಲಾರದ ಅಸಮರ್ಥನಾಗುತ್ತಾನೆ.
ಹಂಚಿ ಹುಲ್ಲೆಲಿ ಹೊಂಚಾಡುವನಿವನ್ಯಾರೇ |
ಕಂಚೀನ ಗುರಾಣಿ ಕೈಯಲ್ಲಿ ಹಿಡಕೊಂಡು |
ಹೊಂಚಾಡಿ ಹುಲಿನ ಹೊಡಿಲಿಲ್ಲ ||
ಹುಲಿಯ ಹೊಡೆಯಲಾಗದ ಭೈರವ ಮುಂದೇನು ಮಾಡಿದ !
ಅಗಸೇ ಮರದಡಿಯಲ್ಲಿ ಮುತ್ತಿನ ಕಂಬಳಿ ಹಾಸಿ |
ಸೊಗಸಮಾಡವರೆ ನಮ್ಮ ಗುರು |
ಬೆಟ್ಟದ ಅಗಡೀಯ ನೆರಳೀಗೆ ||
ಭೈರವನನ್ನು ನೋಡುತ್ತ ಮಾಳವ್ವ ಉಯ್ಯಾಲೆಯಾಡಿದಳು. ಭೈರವ ಅವಳಿಗಾಗಿ ಕುರಿಗಾಹಿಯಾದನು. ಇದೆಲ್ಲದರಿಂದ ಭೈರವನ ಮೂಲಪತ್ನಿ ಪಾರ್ವತಿ ವ್ಯಗ್ರಳಾದಳು. ಇಬ್ಬರು ಹೆಂಡಿರನ್ನು ಕಟ್ಟಿಕೊಂಡ ಭೈರವನ ಬಾಳುವೆಯೇನೂ ಬಂಗಾರವಾಗಲಿಲ್ಲ. ಈರ್ವರನ್ನೂ ಸಮಾನವಾಗಿ ನೋಡಿಕೊಳ್ಳಲು, ಸಂತೋಷಪಡಿಸಲು ಹೆಣಗಿದ. ಇಷ್ಟಾಗಿಯೂ ಅದೊಂದು ಸಂದರ್ಭದಲ್ಲಿ ಪಾರ್ವತಿಯ ಕೈಯಡುಗೆಗಿಂತ ಮಾಳವ್ವನ ಕೈರುಚಿಗೆ ಮನಸೋತ. ಕುರುಬಿತಿಯಾದ ಅವಳ ಸೀರೆಯ ಜಡ್ಡುವಾಸನೆ ಶಿವನಿಗೆ ಸಿರಿಗಂಧವಾಯಿತು.
ನಮ್ಮ ದೇವಾನುದೇವತೆಗಳು ಹುಲುಮಾನವರಂತೆಯೇ ಕಷ್ಟ-ಸುಖಗಳನ್ನು ಅನುಭವಿಸಿದ ಬಗೆಯನ್ನು ನಮ್ಮ ಜಾನಪದ ಕಥೆಗಳು ವಿವರವಾಗಿ ವರ್ಣಿಸಿವೆ. ಶಿಷ್ಟರ ವರ್ಣನೆ ಒಂದು ಬಗೆಯದಾದರೆ, ಅಶಿಷ್ಟರ ವರ್ಣನೆ ಮತ್ತೊಂದು ಬಗೆಯದು. ಹಾಗೆ ನೋಡಿದರೆ ಅಶಿಷ್ಟರ ವರ್ಣನೆಯಲ್ಲಿ ನೈಜತೆಯಿದೆ, ಆತ್ಮೀಯತೆಯಿದೆ, ಹಾಗಾಗಿ ಅದು ಮನಸ್ಸಿಗೆ ಹತ್ತಿರವಾಗುತ್ತದೆ.
ನಮ್ಮ ದೇವಾನುದೇವತೆಗಳು ಹುಲುಮಾನವರಂತೆಯೇ ಕಷ್ಟ-ಸುಖಗಳನ್ನು ಅನುಭವಿಸಿದ ಬಗೆಯನ್ನು ನಮ್ಮ ಜಾನಪದ ಕಥೆಗಳು ವಿವರವಾಗಿ ವರ್ಣಿಸಿವೆ. ಶಿಷ್ಟರ ವರ್ಣನೆ ಒಂದು ಬಗೆಯದಾದರೆ, ಅಶಿಷ್ಟರ ವರ್ಣನೆ ಮತ್ತೊಂದು ಬಗೆಯದು. ಹಾಗೆ ನೋಡಿದರೆ ಅಶಿಷ್ಟರ ವರ್ಣನೆಯಲ್ಲಿ ನೈಜತೆಯಿದೆ, ಆತ್ಮೀಯತೆಯಿದೆ, ಹಾಗಾಗಿ ಅದು ಮನಸ್ಸಿಗೆ ಹತ್ತಿರವಾಗುತ್ತದೆ.
* * * * * * *
ಮಂಗಳವಾರ, ಆಗಸ್ಟ್ 2, 2011
ಶುಕ್ರವಾರ, ಜುಲೈ 1, 2011
ಬಳ್ಳಾರೇಶ್ವರ ದೇಗುಲದ ಕಾಲಭೈರವ
ಬಳ್ಳಾರೇಶ್ವರ ದೇಗುಲದ ಕಾಲಭೈರವ
ನೀವು ಚಿತ್ರದಲ್ಲಿ ಕಾಣುತ್ತಿರುವ ಶ್ರೀ ಕಾಲಭೈರವನ ಭವ್ಯಮೂರ್ತಿ ಇರುವುದು ಚಿಕ್ಕಮಗಳೂರು ಜಿಲ್ಲೆಯ ಕಡೂರು ಸಮೀಪವಿರುವ ಸಖರಾಯಪಟ್ಟಣದಲ್ಲಿ.
| ಹೊಟ್ಟೆಯ ಭಾಗದಲ್ಲಿ ಮುಕ್ಕಾಗಿರುವ ಗಣಪತಿ |
ಒಂದು ಕಾಲದಲ್ಲಿ ಹೊಯ್ಸಳ ಇತರ ದೇವಾಲಯಗಳಂತೆ ಇತರ ಭವ್ಯವಾಗಿದ್ದಿರಬಹುದಾದ ಈ ದೇಗುಲ ಇಂದು ವಿಚಿತ್ರ ರೂಪ ತಳೆದಿದೆ. ಸಾಧಾರಣವಾಗಿ ಎಲ್ಲ ಹೊಯ್ಸಳ ದೇಗುಲಗಳೂ ನಕ್ಷತ್ರಾಕಾರದ ಜಗುಲಿಯ ಮೇಲೆ ಕಟ್ಟಲ್ಪಟ್ಟಿರುತ್ತವೆ. ಈ ದೇವಾಲಯದಲ್ಲಿ ಇಂದು ಕೇವಲ ಪೂಜಾವಿಗ್ರಹಗಳು ಮಾತ್ರ ಉಳಿದಿವೆ. ಅವೂ ಮುಕ್ಕಾಗಿ ಹೋಗಿದ್ದರೂ ತಮ್ಮ ಭವ್ಯತೆ ಮತ್ತು ಕಲಾಕುಶಲತೆಗೆ ಸ್ಥಳೀಯರು ಮನಸೋತು ಸಂರಕ್ಷಿಸಿರುವುದರಿಂದ ಹಾಗೆ ಉಳಿದಿವೆ. ಸುಪ್ರಸಿದ್ಧ ಅಯ್ಯನಕೆರೆ ದಂಡೆಯಲ್ಲಿ ಇರುವ ಈ ದೇವಾಲಯದ ಭಗ್ನ ಭಾಗಗಳು, ಇಲ್ಲಿಂದ 5 ಕಿ.ಮೀ ದೂರದಲ್ಲಿರುವ ಮನೆಯ ಅಂಗಳಗಳಲ್ಲಿ, ಹಾದಿಗಳಲ್ಲಿ ಕಾಂಪೌಡ್ ಗಳಲ್ಲಿ ಸೇರಿಹೋಗಿವೆ. ಪ್ರಾಚ್ಯವಸ್ತು ಇಲಾಖೆಯ ದಿವ್ಯ ನಿರ್ಲಕ್ಷದಿಂದಾಗಿ ಈ ಸ್ಥಿತಿ ಒದಗಿದೆ. ದೇವಾಲಯದ ನೆಲಗಟ್ಟಿನಲ್ಲಿ ಇನ್ನೂ ಹಳೆಗಾಲದ ಕಲ್ಲುಗಳು ಹಾಗೇ ಉಳಿದಿವೆ. ಅದನ್ನೇ ಆಧರಿಸಿ, ಸಿಮೆಂಟಿನ ಕಟ್ಟಡವನ್ನು ಕಟ್ಟಲಾಗಿದೆ, ಗರ್ಭಗುಡಿಯಲ್ಲಿ ಶಿವಲಿಂಗ ಮತ್ತು ನಂದಿಯ ವಿಗ್ರಹಗಳಿವೆ. ನಂದಿಯ ವಿಗ್ರಹ ಮುಕ್ಕಾಗದೇ ಹಾಗೇ ತನ್ನ ಸೌಂದರ್ಯವನ್ನು ಉಳಿಸಿಕೊಂಡಿದೆ. ಅಕ್ಕಪಕ್ಕಗಳಲ್ಲಿ ಕಾರ್ತಿಕೇಯ ಮತ್ತು ಚಾಮುಂಡೇಶ್ವರಿಯ ವಿಗ್ರಹಗಳಿವೆ.
ಹೊರಭಾಗದಲ್ಲಿ ಗಣೇಶ ಮತ್ತು ಮಹಿಷಾಸುರಮರ್ದಿನಿಯ ಶಿಲ್ಪಗಳಿವೆ. ಅತ್ಯಂತ ಕಲಾತ್ಮಕವಾಗಿರುವ ದೇವಿಯ ವಿಗ್ರಹದ ಕೈಗಳನ್ನು ಮುರಿದು ವಿರೂಪಗೊಳಿಸಲಾಗಿದೆ. ಗಣಪತಿಯ ಹೊಟ್ಟೆಯನ್ನು ಬಗೆದಿರುವುದರಿಂದ ಅ ಭಾಗಕ್ಕೆ ಸಿಮೆಂಟ್ ತುಂಬಿಸಿ ಇಡಲಾಗಿದೆ.
ದೇವಾಲಯದ ಬಲಭಾಗದಲ್ಲಿ ವಿಷ್ಣು ಮತ್ತು ಕಾಲಭೈರವರ 8 ಅಡಿ ಎತ್ತರದ ಭವ್ಯ ಮೂರ್ತಿಗಳಿವೆ. ಇಲ್ಲಿನ ಕಾಲಭೈರವ ಶಿಲ್ಪದ ವಿಶೇಷತೆಯಂದೆರೆ, ಶಿಲ್ಪಶಾಸ್ತ್ರದಲ್ಲಿ ಈ ವಿಗ್ರಹದ ಬಗ್ಗೆ ಹೇಳಿರುವ ಎಲ್ಲ ಲಕ್ಷಣಗಳನ್ನು ಗಮನಿಸಿ ಕಡೆಯಲಾಗಿದೆ. ತಲೆಯ ಮೇಲೊಂದು ಸೂರು ಇಲ್ಲದೆ ಗಾಳಿ ಮಳೆಗಳಿಗೆ ಸಿಲುಕಿರುವ ಈ ವಿಗ್ರಹವನ್ನು ಭಿನ್ನವಾಗಿದೆ ಎಂಬ ಕಾರಣಕ್ಕೆ ಪೂಜಿಸಲಾಗುತ್ತಿಲ್ಲ. ಆದರೆ ಅದರ ಶಿಲ್ಪ ಸೌಂದರ್ಯವನ್ನು ಗಮನಿಸುವ ಯಾರಿಗೂ ಭಕ್ತಿ ಮೂಡದೇ ಇರಲು ಸಾಧ್ಯವಿಲ್ಲ. ಸಾಧಾರಣವಾಗಿ ಕಂಡುಬರುವ ಕಾಲಭೈರವನ ಶಿಲ್ಪಗಳಲ್ಲೆಲ್ಲಾ ಸೌಂದರ್ಯ ಮತ್ತು ಗಾತ್ರದಲ್ಲಿ ಗಮನ ಸೆಳೆಯುವ ಈ ಶಿಲ್ಪಕ್ಕೆ ಒದಗಿರುವ ದುರ್ಗತಿ ಕನಿಕರ ಹುಟ್ಟಿಸುವಂತಿದೆ.
ಹೊರಭಾಗದಲ್ಲಿ ಗಣೇಶ ಮತ್ತು ಮಹಿಷಾಸುರಮರ್ದಿನಿಯ ಶಿಲ್ಪಗಳಿವೆ. ಅತ್ಯಂತ ಕಲಾತ್ಮಕವಾಗಿರುವ ದೇವಿಯ ವಿಗ್ರಹದ ಕೈಗಳನ್ನು ಮುರಿದು ವಿರೂಪಗೊಳಿಸಲಾಗಿದೆ. ಗಣಪತಿಯ ಹೊಟ್ಟೆಯನ್ನು ಬಗೆದಿರುವುದರಿಂದ ಅ ಭಾಗಕ್ಕೆ ಸಿಮೆಂಟ್ ತುಂಬಿಸಿ ಇಡಲಾಗಿದೆ.
ದೇವಾಲಯದ ಬಲಭಾಗದಲ್ಲಿ ವಿಷ್ಣು ಮತ್ತು ಕಾಲಭೈರವರ 8 ಅಡಿ ಎತ್ತರದ ಭವ್ಯ ಮೂರ್ತಿಗಳಿವೆ. ಇಲ್ಲಿನ ಕಾಲಭೈರವ ಶಿಲ್ಪದ ವಿಶೇಷತೆಯಂದೆರೆ, ಶಿಲ್ಪಶಾಸ್ತ್ರದಲ್ಲಿ ಈ ವಿಗ್ರಹದ ಬಗ್ಗೆ ಹೇಳಿರುವ ಎಲ್ಲ ಲಕ್ಷಣಗಳನ್ನು ಗಮನಿಸಿ ಕಡೆಯಲಾಗಿದೆ. ತಲೆಯ ಮೇಲೊಂದು ಸೂರು ಇಲ್ಲದೆ ಗಾಳಿ ಮಳೆಗಳಿಗೆ ಸಿಲುಕಿರುವ ಈ ವಿಗ್ರಹವನ್ನು ಭಿನ್ನವಾಗಿದೆ ಎಂಬ ಕಾರಣಕ್ಕೆ ಪೂಜಿಸಲಾಗುತ್ತಿಲ್ಲ. ಆದರೆ ಅದರ ಶಿಲ್ಪ ಸೌಂದರ್ಯವನ್ನು ಗಮನಿಸುವ ಯಾರಿಗೂ ಭಕ್ತಿ ಮೂಡದೇ ಇರಲು ಸಾಧ್ಯವಿಲ್ಲ. ಸಾಧಾರಣವಾಗಿ ಕಂಡುಬರುವ ಕಾಲಭೈರವನ ಶಿಲ್ಪಗಳಲ್ಲೆಲ್ಲಾ ಸೌಂದರ್ಯ ಮತ್ತು ಗಾತ್ರದಲ್ಲಿ ಗಮನ ಸೆಳೆಯುವ ಈ ಶಿಲ್ಪಕ್ಕೆ ಒದಗಿರುವ ದುರ್ಗತಿ ಕನಿಕರ ಹುಟ್ಟಿಸುವಂತಿದೆ.
| ಮಹಿಷಾಸುರಮರ್ದಿನಿಯ ಸುಂದರ ಶಿಲ್ಪವೂ ಭಗ್ನಗೊಂಡಿದೆ |
| ಕಾಲಭೈರವನ ಆಳೆತ್ತರದ ಭವ್ಯ ಮೂರ್ತಿ |
| ನಂದಿಯ ವಿಗ್ರಹ ಚಿಕ್ಕದಾಗಿದ್ದರೂ ಅದರಲ್ಲಿರುವ ಕುಸುರಿ ಕೆಲಸ ಗಮನಾರ್ಹ |
ಸುಂದರ ಪ್ರಕೃತಿಯ ಮಡಿಲಲ್ಲಿ ಇರುವ ಈ ದೇಗುಲವನ್ನು ಪ್ರಾಚ್ಚವಸ್ತು ಇಲಾಖೆ, ಬಹಳಷ್ಟು ವರ್ಷಗಳ ಹಿಂದೆ ಆಸ್ಠೆವಹಿಸಿದ್ದರೆ, ಅಥವಾ ಈಗಲೂ ಈ ದೇಗುಲದ ಆವರಣದಲ್ಲಿ ಮತ್ತು ಊರಿನಲ್ಲಿ ಚದುರಿ ಬಿದ್ದಿರುವ ಶಿಲ್ಪಭಾಗಗಳನ್ನು ಪುನರ್ ಜೋಡಣೆ ಮಾಡಿದರೆ, ಅಲ್ಲಿ ಮತ್ತೊಮ್ಮ ಆ ಮಂದಿರದ ಭವ್ಯತೆ ಮರಳಬಹುದು. ಆ ಮಟ್ಟಿಗಿನ ಆಸ್ಠೆಯನ್ನು ಸ್ಠಳೀಯರು ತೋರಿದರೆ ಇದು ಅಗಲಾರದ ಕೆಲಸವೇನೂ ಅಲ್ಲ.
* * * * * *



ಶುಕ್ರವಾರ, ಜೂನ್ 3, 2011
ಪೂಜಾ ವಿಗ್ರಹ
ಈ ಚಿತ್ರದಲ್ಲಿ ಕಾಣುತ್ತಿರುವ ಶ್ರೀ ಕಾಲಭೈರವನ ವಿಗ್ರಹ ತೀರಾ ಪುರಾತನವಾದದು. ಇದನ್ನು ನನ್ನ ತಂದೆಯವರ ದೊಡ್ಡಪ್ಪನವರಾದ ಅಜ್ಜಂಪುರದ ಸ್ಠಳ ಪುರೋಹಿತರಾಗಿದ್ದ ಶ್ರೀ ಭೈರಾಭಟ್ಟರ ಕಾಲದಿಂದ ಎಂದರೆ ಸರಿಸುಮಾರು ೧೫೦ ವರ್ಷಗಳಿಂದ ಪೂಜಿಸಿಕೊಂಡು ಬರಲಾಗುತ್ತಿದೆ.
![]() |
| ಅಜ್ಜಂಪುರ ಭೈರಾಭಟ್ಟರು |
ಈ ವಿಗ್ರಹವು 2 ಅಂಗುಲ ಎತ್ತರವಿದ್ದು, ಶಿವನ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಈ ಮೂರ್ತಿಯ ಕೈಯಲ್ಲಿ ಖಡ್ಗವನ್ನು ಹೋಲುವ ಕಿರುಗತ್ತಿಯಿದೆ. ಎಡಗೈಯಲ್ಲಿ ಡಮರು ವಾದ್ಯವಿದೆ. ಬಲಗೈಯಲ್ಲಿ ತ್ರಿಶೂಲ ಹಿಡಿಯಲೆಂದು ಒಂದು ಚಿಕ್ಕ ರಂದ್ರವನ್ನು ಮಾಡಲಾಗಿದೆ. ಈ ತ್ರಿಶೂಲವು ಪ್ರತ್ಯೇಕ ಬಿಡಿಭಾಗವಾದ್ದರಿಂದ ಕಾಲಾಂತರದಲ್ಲಿ ಕೆಳೆದುಹೋಗಿ, ಈ ರಂಧ್ರವು ಮುಚ್ಚಿಹೋಗಿತ್ತು. ಮುಂದೊಮ್ಮ ಅದನ್ನು ಗಮನಿಸಿದ ನಾನು ತ್ರಿಶೂಲವೊಂದನ್ನು ತಯಾರಿಸಿ ಕಾಲಭೈರವನ ಕರದಲ್ಲಿಟ್ಟೆ. ಇದೀಗ ಈ ವಿಗ್ರಹ ತನ್ನ ಪೂರ್ಣರೂಪದಲ್ಲಿ ಕಾಣುತ್ತಿದೆ.
ಇದರೊಂದಿಗಿರುವ ಇನ್ನೊಂದು ಚಿತ್ರ ಕೂಡ ಕಾಲಭೈರವನದೇ.. ಅದರಲ್ಲಿ ಆತನು ತನ್ನ ವಾಹನವಾದ ನಾಯಿಯ ಮೇಲೆ ಕುಳಿತಿರುವಂತೆ ಚಿತ್ರಿಸಲಾಗಿದೆ. ಶತಮಾನಗಳ ಬಳಕೆಯಿಂದಾಗಿ ವಿಗ್ರಹದ ಮೇಲಿನ ವಿವರಗಳು ಸವೆದುಹೋಗಿವೆ.
ಮುಂದೆ, ಎಂದರೆ 1990ರ ದಶಕದ ಸುಮಾರಿನಲ್ಲಿ ನಮ್ಮ ಕುಟುಂಬದ ಅನೇಕ ಸದಸ್ಯರಿಗೆ ಕಾಲಭೈರವನ ಮೂರ್ತಿಯ ಬಗ್ಗೆ ಆಸಕ್ತಿ ಬೆಳೆದು, ಆತನ ಎಲ್ಲ ಲಕ್ಷಣಗಳುಳ್ಳ ಲೋಹದ ವಿಗ್ರಹಗಳನ್ನು ತಯಾರು ಮಾಡಿಸಿಕೊಂಡು ಅರ್ಚಿಸುತ್ತಿದ್ದಾರೆ. ಹೀಗೆಯೇ ಈ ಒಕ್ಕಲಿಗೆ ಸಂಬಂಧಿಸಿದ ಕುಟುಂಬಗಳಲ್ಲಿ ಇಂಥಹದೇ ಅಥವಾ ಇದಕ್ಕಿಂತ ವಿಶೇಷ ಸಂಗತಿಗಳು ಇರಬಹುಹುದು. ಅದೆಲ್ಲವನ್ನು ಒಂದೆಡೆ ಸಂಗಹಿಸಬೇಕೆಂದಾದರೆ, ವಿವರಗಳನ್ನು ಬರೆದು ನನಗೆ ತಿಳಿಸಿದಲ್ಲಿ ಲೇಖನ ರೂಪದಲ್ಲಿ ಪ್ರಕಟಿಸುತ್ತೇನೆ. ಇಲ್ಲವೇ ನೀವೇ ಹಾಗೆ ಮಾಡಬಹುದು.
* * * * * *
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)































