ಶುಕ್ರವಾರ, ಜೂನ್ 3, 2011

ಪೂಜಾ ವಿಗ್ರಹ


    ಈ ಚಿತ್ರದಲ್ಲಿ ಕಾಣುತ್ತಿರುವ ಶ್ರೀ ಕಾಲಭೈರವನ ವಿಗ್ರಹ ತೀರಾ ಪುರಾತನವಾದದು.  ಇದನ್ನು ನನ್ನ ತಂದೆಯವರ ದೊಡ್ಡಪ್ಪನವರಾದ ಅಜ್ಜಂಪುರದ ಸ್ಠಳ ಪುರೋಹಿತರಾಗಿದ್ದ ಶ್ರೀ ಭೈರಾಭಟ್ಟರ ಕಾಲದಿಂದ ಎಂದರೆ ಸರಿಸುಮಾರು ೧೫೦ ವರ್ಷಗಳಿಂದ ಪೂಜಿಸಿಕೊಂಡು ಬರಲಾಗುತ್ತಿದೆ.
 
ಅಜ್ಜಂಪುರ ಭೈರಾಭಟ್ಟರು
    
 
 
 
 
 
 
 
 
 
 
 
 
 
 
 
 
 
 
 
 
ಈ ವಿಗ್ರವು 2 ಅಂಗುಲ ಎತ್ತರವಿದ್ದು, ಶಿವನ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಈ ಮೂರ್ತಿಯ ಕೈಯಲ್ಲಿ ಖಡ್ಗವನ್ನು ಹೋಲುವ ಕಿರುಗತ್ತಿಯಿದೆ. ಎಡಗೈಯಲ್ಲಿ ಡಮರು ವಾದ್ಯವಿದೆ. ಬಲಗೈಯಲ್ಲಿ ತ್ರಿಶೂಲ ಹಿಡಿಯಲೆಂದು ಒಂದು ಚಿಕ್ಕ ರಂದ್ರವನ್ನು ಮಾಡಲಾಗಿದೆ.   ಈ ತ್ರಿಶೂಲವು ಪ್ರತ್ಯೇಕ ಬಿಡಿಭಾಗವಾದ್ದರಿಂದ ಕಾಲಾಂತರದಲ್ಲಿ ಕೆಳೆದುಹೋಗಿ, ಈ ರಂಧ್ರವು ಮುಚ್ಚಿಹೋಗಿತ್ತು. ಮುಂದೊಮ್ಮ ಅದನ್ನು ಗಮನಿಸಿದ ನಾನು ತ್ರಿಶೂಲವೊಂದನ್ನು ತಯಾರಿಸಿ ಕಾಲಭೈರವನ ಕರದಲ್ಲಿಟ್ಟೆ.  ಇದೀಗ ಈ ವಿಗ್ರಹ ತನ್ನ ಪೂರ್ಣರೂಪದಲ್ಲಿ ಕಾಣುತ್ತಿದೆ. 
 
ಇದರೊಂದಿಗಿರುವ ಇನ್ನೊಂದು ಚಿತ್ರ ಕೂಡ ಕಾಲಭೈರವನದೇ..  ಅದರಲ್ಲಿ ಆತನು ತನ್ನ ವಾಹನವಾದ ನಾಯಿಯ ಮೇಲೆ ಕುಳಿತಿರುವಂತೆ ಚಿತ್ರಿಸಲಾಗಿದೆ.  ಶತಮಾನಗಳ ಬಳಕೆಯಿಂದಾಗಿ ವಿಗ್ರಹದ ಮೇಲಿನ ವಿವರಗಳು ಸವೆದುಹೋಗಿವೆ.
 


    ಮುಂದೆ, ಎಂದರೆ 1990ರ ದಶಕದ ಸುಮಾರಿನಲ್ಲಿ ನಮ್ಮ ಕುಟುಂಬದ ಅನೇಕ ಸದಸ್ಯರಿಗೆ ಕಾಲಭೈರವನ ಮೂರ್ತಿಯ ಬಗ್ಗೆ ಆಸಕ್ತಿ ಬೆಳೆದು, ಆತನ ಎಲ್ಲ ಲಕ್ಷಣಗಳುಳ್ಳ ಲೋಹದ ವಿಗ್ರಹಗಳನ್ನು ತಯಾರು ಮಾಡಿಸಿಕೊಂಡು ಅರ್ಚಿಸುತ್ತಿದ್ದಾರೆ.  ಹೀಗೆಯೇ ಈ ಒಕ್ಕಲಿಗೆ ಸಂಬಂಧಿಸಿದ ಕುಟುಂಬಗಳಲ್ಲಿ ಇಂಥಹದೇ ಅಥವಾ ಇದಕ್ಕಿಂತ ವಿಶೇಷ ಸಂಗತಿಗಳು ಇರಬಹುಹುದು. ಅದೆಲ್ಲವನ್ನು ಒಂದೆಡೆ ಸಂಗಹಿಸಬೇಕೆಂದಾದರೆ, ವಿವರಗಳನ್ನು ಬರೆದು ನನಗೆ ತಿಳಿಸಿದಲ್ಲಿ ಲೇಖನ ರೂಪದಲ್ಲಿ ಪ್ರಕಟಿಸುತ್ತೇನೆ. ಇಲ್ಲವೇ ನೀವೇ ಹಾಗೆ ಮಾಡಬಹುದು.

* * * * * *

ಗುರುವಾರ, ಮೇ 5, 2011

ಕುಕನೂರಿನ ಕಾಲಭೈರವ ವಿಗ್ರಹ

ಕುಕನೂರಿನ ಕಾಲಭೈರವ ವಿಗ್ರಹ

    ರಾಯಚೂರು ಜಿಲ್ಲೆಯ ಇಟಗಿ ಸಮೀಪದಲ್ಲಿ ಕುಕನೂರು ಎಂಬ ಗ್ರಾಮ.  ಇಲ್ಲಿ ಎರಡು  ಪುರಾತನ ಮಂದಿರಗಳಿವೆ.   ಒಂದು ಮಹಾಮಾಯಿ ಮಂದಿರ, ಇನ್ನೊಂದು ನವಲಿಂಗ ದೇವಾಲಯ. 


    

        ಮಹಾಮಾಯಿ ದೇವಿಯ ಗರ್ಭಗುಡಿಯ ಬಲಕ್ಕೆ ನೀವೀಗ ನೋಡುತ್ತಿರುವ ಕಾಲಭೈರವನ ವಿಶಿಷ್ಟ ಶಿಲ್ಪವಿದೆ.  ಕಾಲಭೈರವನು "ಶುನಕಾ ರೂಢಂ" ಎಂದು ಧ್ಯಾನ ಶ್ಲೋಕದಲ್ಲಿ ವಿವರಣೆ ಇದೆ.  ಆದರೆ ಬಹುತೇಕ ಶಿಲ್ಪಗಳಲ್ಲಿ ಕಾಲಭೈರವನ ಅಕ್ಕ ಪಕ್ಕಗಳಲ್ಲಿ ನಾಯಿಯು ಇರುವಂತೆ, ಇಲ್ಲವೇ ಕಪಾಲದಿಂದ ಸುರಿಯುತ್ತಿರುವ ರಕ್ತವನ್ನು ನಾಯಿಯು ನಕ್ಕಲು ಹವಣಿಸಿತ್ತಿರುವಂತೆ ಚಿತ್ರಿಸಲಾಗಿದೆ, ಕುಕನೂರಿನಲ್ಲಿನ ಈ ಶಿಲ್ಪ ವಿಶಿಷ್ಟ ಎಂದದ್ದು ಈ ಕಾರಣಕ್ಕೆ.  ಅಲ್ಲಿ ಆತನು ಶುನಕಾರೂಢನಾಗಿರುವ ಬದಲು, ಅಶ್ವಾರೂಢನಾಗಿರುವನು.  ಇದೇಕೆ ಹೀಗೆ ಎಂದು ಚಿಂತಿಸಿದರೆ ಉತ್ತರವೇನೂ ಹೊಳೆಯಲಿಲ್ಲ. 

    ಕಾಲಭೈರವನ ಬಗ್ಗೆ ಸಮಗ್ರ ಅಧ್ಯಯನ ಮಾಡಿರುವ, ಮಾಡುತ್ತಿರುವ ಫ್ರೆಂಚ್  ವಿದ್ವಾಂಸೆ, ಕೆರೈನ್  ಲ್ಯಾಡ್ರೆಕ್ ರನ್ನೆ  ಉತ್ತರಕ್ಕೆಂದು ಅಶ್ರಯಿಸಬೇಕಾಯಿತು.  ಆಕೆ ನೀಡಿದ ಉತ್ತರ ತಿಳಿದ ನಂತರ, ಶಿಲ್ಪಗಳನ್ನು  ಅವಲೋಕಿಸುವಲ್ಲಿ ಹಲವು ಮಗ್ಗಲುಗಳನ್ನು ಗಮನಿಸಬೇಕಾದುದು ಅತ್ಯಗತ್ಯವೆಂದು ಅರಿವಾಯಿತು.  ನನ್ನ ಪ್ರಶ್ನೆಗೆ ಲ್ಯಾಡ್ರೆಕ್ ರವರು ಹೀಗೆ ಉತ್ತರ ಬರೆದಿದ್ದರು. " ನೀವು ಕುಕನೂರಿನಲ್ಲಿ ಕಂಡ ವಿಗ್ರಹವು, ಅದನ್ನು ಕಡೆದ ಶಿಲ್ಪಿಯು ಸ್ಠಳೀಯ ಪ್ರಭಾವಕ್ಕೆ ಹೇಗೆ ಒಳಗಾಗಿರುವನೆಂದು ನಿರೂಪಿಸಲು ಅತ್ಯುತ್ತಮ ಉದಾಹರಣೆ, ಏಕೆಂದರೆ ಉತ್ತರ ಕರ್ನಾಟಕದ ಈ ಭಾಗಗಳಲ್ಲಿ ಮೈಲಾರಿ ಅಥವಾ ಮಲ್ಲಾರಿ ಎಂಬ ದೇವತೆಯ ಆರಾಧನೆ ನಡೆಯುತ್ತದೆ.  ಮಲ್ಲಾಸುರನೆಂಬ ದೈತ್ಯನನ್ನು ಅಶ್ವಾರೂಢನಾದ ಶಿವನು ಸಂಹರಿಸಿದ ಎಂಬ ಐತಿಹ್ಯವಿದೆ.  ಈ ಪ್ರದೇಶದಲ್ಲಿನ ಮೈಲಾರೇಶ್ವರನ ಎಲ್ಲಾ ಬಿಂಬಗಳು ಕುದುರೆಯ ಮೇಲೆ ತನ್ನ ಪತ್ನಿ ಮಾಲ್ಹಸಾಳೊಂದಿಗೆ ಕುಳಿತು ದೈತ್ಯ ಸಂಹಾರ ನಡೆಸುತ್ತಿರುವಂತೆ ಚಿತ್ರಿಸಲಾಗಿದೆ.  ಸಾಧಾರಣವಾಗಿ ಎಲ್ಲಾ ಶಿವ ದೇವಾಲಯಗಳ ಒಂದು ಭಾಗದಲ್ಲಿ ಕಾಲಭೈರವ, ಅಥವಾ ಚಂಡೇಶ್ವರನ ಶಿಲ್ಪಗಳು ಇರುತ್ತವೆ.  ಸ್ಠಳೀಯ ದೇವತೆಯ ಪ್ರಭಾವದಿಂದ ಪ್ರೇರಿತನಾದ ಶಿಲ್ಪಿಯು ಇಲ್ಲಿನ ಕಾಲಭೈರವನನ್ನು ಕುದುರೆಯ ಮೇಲೆ ಕೂಡಿಸಿರುವನು" ಎಂದು ಮಾರುತ್ತರ ನೀಡಿದರು. 

        ಶಿಲ್ಪ ಶಾಸ್ತ್ರಜ್ಞರು ತಾವು ವಾಸ ಮಾಡಿದ ಸ್ಠಳದ, ಇಲ್ಲವೇ ಆಶ್ರಯ ನೀಡಿದ ರಾಜ ಮಹಾರಾಜರ ಆಶ್ರಯಗಳ ಅನುಗುಣವಾಗಿ ಇಂಥ ಕೆಲವೊಂದು ಚಿಕ್ಕ ಪುಟ್ಟ ಬದಲಾವಣೆ ಮಾಡಿಕೊಂಡಿರುವರು.  ಅದನ್ನು ಸೂಕ್ಷ್ಮವಾಗಿ ಗಮನಿಸುತ್ತ ಹೊರಟರೆ ಸ್ವಾರಸ್ಯಕರ ಮಾಹಿತಿಗಳು ಹೊರಬೀಳುತ್ತವೆ.

ಶನಿವಾರ, ಏಪ್ರಿಲ್ 9, 2011

ಕಾಲಭೈರವನ ಚಿತ್ರದ ಜಾಡುಹಿಡಿದು........


ಕಾಲಭೈರವನ ಚಿತ್ರದ ಜಾಡುಹಿಡಿದು........ 
     ಹಿಂದಿನ ಸಂಚಿಕೆಗಳಲ್ಲಿ ಪ್ರಕಟಿಸಿದ ಉದ್ದೇಶಗಳ ಅನ್ವಯ, ಶ್ರೀಕಾಲಭೈರವ ದೇವತೆಯ ಚಿತ್ರಕ್ಕೆ ಸಂಬಂಧಿಸಿದಂತೆ, ಕೆಲವು ಆಸಕ್ತಿಕ ಸಂಗತಿಗಳನ್ನು ತಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತಿರುವೆ.
     ಇಲ್ಲಿ ಮೂರು ಚಿತ್ರಗಳಿವೆ.  ಮೂರು ಚಿತ್ರಗಳಲ್ಲಿ ಕಂಡುಬಂದ ವ್ಯತ್ಯಾಸಗಳನ್ನು ಶ್ರೀ ಕಾಲಭೈರವ ಮೂರ್ತಿಯ ಧ್ಯಾನ ಶ್ಲೋಕದ ಕ್ರಮದಲ್ಲಿ ಪರಿಷ್ಕರಿಸಲಾಗಿದೆ. 
    ಒಂದನೆಯ ಚಿತ್ರದಲ್ಲಿ ಕಾಲಭೈರವನಿಗೆ ಎಡು ಕೈಗಳು ಮಾತ್ರವೇ ಇದೆ.  ಒಂದು ಕೈಯಲ್ಲಿ ನವಿಲುಗರಿಯ ಪುಚ್ಛವಿದೆಯಾದರೆ, ಇನ್ನೊಂದರಲ್ಲಿ ಅಗ್ನಿಜ್ವಾಲೆಯಿರುವ ಪಾತ್ರೆಯಿದೆ.  ಈ ಎರಡೂ ಅಂಶಗಳೂ ಶ್ರೀಕಾಭೈರವನ ಧ್ಯಾನ ಶ್ಲೋಕಕ್ಕೆ ಹೊಂದಿಕೆಯಾಗುತ್ತಿಲ್ಲ.
ಚಿತ್ರ 1

ಚಿತ್ರ 2

ಚಿತ್ರ 3
      ಈ ಚಿತ್ರ ಅಸಮರ್ಪಕವಾಗಿದೆಯೆಂದು ಭಾವಿಸಿದ ನನಗೆ ಇದನ್ನು ಸರಿಪಡಿಸುವ ಉತ್ಸಾಹ 1983ರ ಸುಮಾರಿನಲ್ಲಿ ಬಂದಿತು.  ನಾನು ಎಲ್.ಆರ್.ಡಿ.ಇ. ಗೆ ಸೇರಿದ ದಿನಗಳವು.  ಆಗ ಅಲ್ಲಿ ತಂತ್ರಜ್ಞರಲ್ಲದೇ ಕಲಾವಿದರು ಮತ್ತು ಇತರ ವೃತ್ತಿಕುಶಲರೂ ಇದ್ದರು.  ಅಲ್ಲಿದ್ದ ಶ್ರೀ ವೇಂಕಟೇಶ್ ಎಂಬುವರು ಕಿವುಡ-ಮೂಕರು.  ಅದ್ಭುತ ಕಲಾವಿದರಾದ ಅವರು ಸಂಸ್ಠೆಯು ಪ್ರಕಟಿಸುವ ವೈಜ್ಞಾನಿಕ ಮಾಹಿತಿಗಳಿಗೆ ಪೂರಕ ಚಿತ್ರಗಳನ್ನು ರಚಿಸುತ್ತಿದ್ದರು.  ಆಗ ನಾನು ನನ್ನಲ್ಲಿದ್ದ ಚಿತ್ರವನ್ನು ನನಗೆ ತಿಳಿದಂತೆ ನಕಲುಮಾಡಿ, ದೀರ್ಘ ಪತ್ರವೊಂದನ್ನು ಬರೆದು ಸೂಕ್ತವಾಗಿ ಚಿತ್ರಿಸಿಕೊಡಬೇಕೆಂದು ಕೋರಿದೆ.  ಅವರು  ಚಿತ್ರವನ್ನು ಪೂರೈಸಿ ನನಗೆ ನೀಡಿದಾಗ, ಕಾಲಭೈರವನ ಹಿಂಬದಿಯಲ್ಲಿ ದಕ್ಷಿಣಭಾರತ ಶೈಲಿಯದೇಗುಲದ ಚಿತ್ರವನ್ನು ರಚಿಸಿದ್ದರು. ಅದು ನನಗೆ ಸರಿಕಾಣದೇ, ಉತ್ತರ ಭಾರತ ಶೈಲಿಯ ದೇವಾಲಯ ಬೇಕೆಂದೆ.  ಅವರು ಬೇಸರವಿಲ್ಲದೆ ತಿದ್ದಿಕೊಟ್ಟರು.  ಸರ್ವಾಂಗ ಸುಂದರವಾಗಿ ಮೂಡಿಬಂದ ಆ ಚಿತ್ರದ ಸೌಂದರ್ಯವನ್ನೇ ಗಮನಿಸಿದನೇ ವಿನಾ, ಅದರಲ್ಲೂ ಉಳಿದುಕೊಂಡಿದ್ದ ಕೊರತೆ ನನಗಾಗ ತಿಳಿದಿರಲಿಲ್ಲ.  ಏಕೆಂದರೆ ಆಗ ನಾನಿನ್ನೂ ಧ್ಯಾನ ಶ್ಲೋಕವನನ್ನು ಸರಿಯಾಗಿ ಅರ್ಥೈಸಿಕೊಂಡಿರಲಿಲ್ಲ, ಹೀಗಾಗಿ ತ್ರಿಶೂಲವಿರಬೇಕಾದ ಕೈನಲ್ಲಿ ಅಗ್ನಿಜ್ವಾಲೆಯ ಪಾತ್ರೆ ಹಾಗೆ ಉಳಿಯಿತು.  ಅದನ್ನು ನಾನೇ ಪರಿಷ್ಕರಿಸುವ ಸಂದರ್ಭ ಬಂದಿತು.   ನಾನು ಫೋಟೋಷಾಪ್ ತಂತ್ರಾಂಶವನ್ನು ಕಲಿತ ನಂತರ ಒಮ್ಮೆ ಕಾಲಭೈರವನ ಕೈಯಲ್ಲಿದ್ದ ಅಗ್ನಿಜ್ವಾಲೆಯ ಪಾತ್ರೆಯ ಬದಲಾಗಿ ತ್ರಿಶೂಲವನ್ನು ರಚಿಸಿದಾಗ ನನ್ನ ಸಂಗ್ರಹದ ಕಾಲಭೈರವನ ಚಿತ್ರ ಸರಿಯಾದ ರೂಪ ತಲೆದಂತೆ ಆಯಿತು !

ಬುಧವಾರ, ಮಾರ್ಚ್ 16, 2011

ಒಂದು ಮನವಿ

 

 ಒಂದು  ಮನವಿ


    ಆರಾಧಕರು ಶಿವನನ್ನು ಹಲವು ರೂಪಗಳಲ್ಲಿ ಆರಾಧಿಸುವ ಪದ್ಧತಿಯಿದೆಯಷ್ಟೆ.  ಅವುಗಳಲ್ಲಿ ಶ್ರೀ ಕಾಲಭೈರವನೆಂಬ ಶಿವರೂಪವು ಅನೇಕ ದೃಷ್ಠಿಗಳಿಂದ ಆಸಕ್ತಿದಾಯಕವಾಗಿದೆ. ಶಿವನ ಈ ಸ್ವರೂಪದ ಆರಾಧಕರು ಭಾರತದಾದ್ಯಂತ ಹರಡಿರುವರು. ಮುಖ್ಯವಾಗಿ ಕಾಶೀ ಕ್ಷೇತ್ರವು ಕಾಲಭೈರವನ ಮೂಲ ನೆಲೆಯೆಂಬ ಪೌರಾಣಿಕ ಐತಿಹ್ಯಗಳೂ ಇವೆ. ಉತ್ತರಭಾರತ ದಕ್ಷಿಣ ಭಾರತಗಳಲ್ಲಿ ಕಾಲಭೈರವನ ಪೂಜಾವಿಧಾನಗಳಲ್ಲಿ  ವೈವಿಧ್ಯ ತೋರಿಬಂದರೂ, ಈ ದೇವತೆಯ ಸ್ತುತಿಗೆಂದು ರಚಿತವಾಗಿರುವ ಸಾಹಿತ್ಯದಲ್ಲಿ ಏಕತೆಯು ಕಂಡುಬರುತ್ತದೆ.

    ಪ್ರಸ್ತುತ ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದಲ್ಲಿ ನೆಲೆಗೊಂಡಿರುವ ಶ್ರೀ ಕಾಲಭೈರವನ ಭಕ್ತರು ರಾಜ್ಯದ ವಿವಿದೆಡೆಗಳಲ್ಲಿ ವಾಸಿಸುತ್ತಿದ್ದು, ವಿವಿಧ ಪೂಜಾ ವಿಧಾನಗಳನ್ನು ಅನುಸರಿಸುತ್ತಿರುವರು.  ಸಾಧಾರಣವಾಗಿ  ಒಂದು ನಿರ್ದಿಷ್ಟ ದೇವತೆಯ ಆರಾಧನೆಯನ್ನು ಆ ದೇವತೆಯ ಒಕ್ಕಲು ಎಂದು ಕರೆಯುವುದು ರೂಢಿ.  ಹೀಗೆ ಕಾಲಭೈರವನ ಒಕ್ಕಲೆಂದು ಆತನನ್ನು ಪೂಜಿಸುತ್ತಿರುವವರಲ್ಲಿ, ಅನೇಕರಿಗೆ ತಮ್ಮ ಕುಲದೇವತೆಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಅರಿಯುವ ಆಸಕ್ತಿ ಇರಬಹುದು.  ಶ್ರೀ ಕಾಲಾಭೈರವನ ಬಗ್ಗೆ ಇರಬಹುದಾದ ಸಾಹಿತ್ಯ,  ಪೂಜಾ ವಿಧಾನಗಳು ಮುಂತಾಗಿ ಹಲವು ಆರಾಧನಾ ವಿಧಾನಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು, ಈ ದೇವತೆಯ ಆರಾಧನೆಯನ್ನು ಇನ್ನಷ್ಟು ಅರ್ಥಪೂರ್ಣವಾಗಿಸಬಹುದು.

    ಈ ಉದ್ದೇಶಕ್ಕೆಂದು ಎಲ್ಲರೂ ಒಂದೆಡೆ ಸೇರುವುದು ಆಗದ ಮಾತು.  ಆದರೆ ಅಂತರ್ಜಾಲದ ವೇದಿಕೆ ಇದಕ್ಕೆ ನೆರವಾಗಬಲ್ಲದು.   ಶೀ ಕಾಲಭೈರವ ಅರಾಧನೆ, ಪೂಜಾ ವಿಧಾನಗಳನ್ನು, ಜಾತ್ರೆ, ಉತ್ಸವ ಮುಂತಾದ್ದನ್ನು ಶ್ರದ್ಧೆಯಿಂದ ಮಾಡುತ್ತಿರುವವರಲ್ಲಿ ಮನೆಯ ಹಿರಿಯರ ಪಾಲು ಅಧಿಕ.  ಅವರು ತಾವು ಅನುಸರಿಸುತ್ತಿರುವ ಪೂಜ ಕೈಂಕರ್ಯಗಳು ಮುಂದುವರೆಯಬೇಕೆಂಬ ಹಂಬಲವುಳ್ಳವರು ಮುಂದಿನ ತಲೆಮಾರಿಗೆ ಕುಲದೇವತೆಯ ಕುರಿತಾದ ತಮ್ಮ ಅಭಿಮಾನವನ್ನು ವರ್ಗಾವಣೆ ಮಾಡಬೇಕೆಂದರೆ, ಮಕ್ಕಳೀಗ ತಮ್ಮ ಊರಿನಲ್ಲಿ, ಆಷ್ಟೇಕೆ ದೇಶದಲ್ಲೇ ಇರುವುದಿಲ್ಲ.  ಅವರೊಂದಿಗೆ ಸಂವಹನಕ್ಕೆಂದು ವಿದ್ಯುನ್ಮಾನ ಮಾಧ್ಯಮಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆಯೀಗ ಬರುತ್ತಿದೆ.   ಅದೇ ವೇಳೆಗೆ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಹಿರಿಯರಿಗೆ ಅವರದ್ದೇ ಆದ ತೊಂದರೆಗಳಿವೆ.  ಆದರೆ ಮಕ್ಕಳಿಗೆ ಆಂಥ ತೊಂದರೆಯಿಲ್ಲ.  ಇಂದು ಅಂತರ್ಜಾಲವೆನ್ನುವುದು ಅವರಿಗೆ  ಸರ್ವೆಸಾಮಾನ್ಯ ಸಂಗತಿಯಾಗಿದೆ.  ಕುಲದೇವತೆ ಶ್ರೀಕಾಲಭೈರವನ ಬಗ್ಗೆ ತಿಳಿಯಲು/ತಿಳಿಸಲು ಅಂತರ್ಜಾಲವನ್ನು ಬಳಸಬಹುದಾಗಿದೆ.

ಶ್ರೀಕಾಲಭೈರವನ ಯುವ ಆರಾಧಕರು ಮಾಡಬಹುದಾದ ಕಾರ್ಯವೆಂದರೆ :

೧)     ತಮ್ಮ ಸಂಪರ್ಕಕ್ಕೆ ಬರುವ  ಈ ಒಕ್ಕಲಿನ ಜನರ ಅಂತರ್ಜಾಲ ವಿಳಾಸವನ್ನು ಸಂಗ್ರಹಿಸುವುದು ಮತ್ತು ಇದನ್ನು ಪರಸ್ಪರ          ವಿನಿಮಯ ಮಾಡಿಕೊಳ್ಳುವುದು.
೨)     ತಮ್ಮ ಹಿರಿಯರು ಆರಾಧಿಸುತ್ತಿರುವ ಪೂಜಾ ವಿಧಾನಗಳು, ಚಿತ್ರಗಳನ್ನು ಸಂಗ್ರಹಿಸುವುದು.
೩)     ಪೂಜಾ ದೃಶ್ಯಗಳು, ಹಾಡುಗಳು ಮುಂತಾದ ಧಾರ್ಮಿಕ ಸಮಾರಂಭಗಳ ಚಿತ್ರಗಳನ್ನು ಯು-ಟ್ಯೂಬ್  ನಲ್ಲಿ ಅಪ್ ಲೋಡ್     ಮಾಡುವುದು.
೪)      ನಮ್ಮ ಅನೇಕ ದೇಗುಲಗಳಲ್ಲಿ ಕಾಣಸಿಗುವ, ತನ್ನ ವಿಶಿಷ್ಟರೂಪದಿಂದ ಗಮನಸೆಳೆಯುವ ಶ್ರೀಕಾಲಭೈರವ ವಿಗ್ರಹಗಳ     ಚಿತ್ರಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುವುದು.
೫)    ಶ್ರೀಕಾಲಭೈರವ ದೇವಕಾರ್ಯ, ಶ್ರೀ ಕಾಲಭೈರವ ಅಷ್ಟಮಿ ಮುಂತಾದ ಆಚರಣೆಯಲ್ಲಿ ಅನುಸರಿಸುವ ವಿಶಿಷ್ಟ     ಪೂಜಾಕ್ರಮಗಳಿದ್ದರೆ ಅವುಗಳ ವಿನಿಮಯ.

    ಇಂಥ ಉದ್ದೇಶಗಳಿಗಳಿಗೆ ಈ ಬ್ಲಾಗ್ ಮುಕ್ತವಾಗಿದೆ.  ಆಸಕ್ತರು ಶ್ರೀಕಾಲಭೈರವನಿಗೆ ಸಂಬಂಧಿಸಿದ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವ ಆಶಯದಿಂದ ರಚಿತವಾದ ಈ ಬ್ಲಾಗ್ ಗೆ ಕಾಲಭೈರವ ಒಕ್ಕಲಿನ ಮಂದಿ ಸಹಕಾರ ನೀಡಲೆಂದು ಮನವಿ.

    ಶ್ರೀಕಾಲಭೈರವನ ಕುರಿತಾಗಿ ನನ್ನ ಆಸಕ್ತಿಗಳನ್ನು ಕೆರಳಿಸಲು ಕಾರಣವಾದ ಹಲವು ಸಂಗತಿಗಳನ್ನು ಪ್ರತಿ ತಿಂಗಳಿನ ಸಂಚಿಕೆಗಳಲ್ಲಿ ಪ್ರಕಟಿಸುವೆ.

* * * * * * * * *