ಬುಧವಾರ, ಏಪ್ರಿಲ್ 1, 2015

ಜಡಿಗೇನಹಳ್ಳಿಯಲ್ಲೊಂದು ಕಾಲಭೈರವ ಕ್ಷೇತ್ರ

ಹಿಂದಿನ  ಸಂಚಿಕೆಯೊಂದರಲ್ಲಿ ತಮಿಳುನಾಡಿನ ಅಧಿಯಮನ್ ಕೋಟೆಯ ಕಾಲಭೈರವ ದೇಗುಲದ ಬಗ್ಗೆ ಬರೆದಿದ್ದು ನೆನಪಿರಬಹುದು. ಅಲ್ಲಿ ನಡೆಯುವ ಆಚರಣೆಯನ್ನೇ ಹೋಲುವ ಮತ್ತೊಂದು ಕ್ಷೇತ್ರ ಕರ್ನಾಟಕದಲ್ಲಿದೆ ಎಂದು ಇತ್ತೀಚೆಗೆ ಟಿ.ವಿ. ವಾಹಿನಿಯ ವರದಿಯೊಂದರಿಂದ ತಿಳಿಯಿತು. ಅದು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ಹೊಸಕೋಟೆ ತಾಲೂಕು, ಮಾಲೂರು ರಸ್ತೆಯ ಸಮೀಪದಲ್ಲಿರುವ ಗ್ರಾಮ ಜಡಿಗೇನಹಳ್ಳಿಯಲ್ಲಿದೆ. ಇದು ಜನರಿಗೆ ಬಹಳಕಾಲ ಅಪರಿಚಿತವಾಗಿಯೇ ಇತ್ತು. ಶಿಲ್ಪಕಲಾ ಕೆತ್ತನೆಗಳಿಲ್ಲದೆ,  ಅತ್ಯಂತ ಸರಳವಾದ   ಕಲ್ಲು ಮಂಟಪದಂತೆ ಕಾಣುವ ಈ ದೇಗುಲವನ್ನು ಅಲ್ಲಿ ಆಳುತ್ತಿದ್ದ ರಾಜರೋ, ಸಾಮಂತರೋ ತಮ್ಮ ದೈವಿಕ ನೆಲೆಯಾಗಿ ಸ್ಥಾಪಿಸಿದರೆಂದು ತಿಳಿಯಬಹುದು.

ಇಲ್ಲಿರುವ ಕಾಲಭೈರವನ ವಿಗ್ರಹದ ಬಲಭಾಗದಲ್ಲಿ ಇನ್ನೊಂದು ವಿಗ್ರಹವಿದ್ದು, ಅದೂ ಸಮಾನವಾಗಿ ಪೂಜೆಗೊಳ್ಳುತ್ತದೆ. ಆ ವಿಗ್ರಹವು ಮಾಳಮ್ಮ ದೇವಿಯದು ಎಂದು ಹೇಳುವರು. ಮಾಳಮ್ಮನೆಂಬ ಹೆಸರು ಭೈರವ ಸಂಬಂಧವಾದ ಜಾನಪದ ಕಥೆಗಳಲ್ಲಿ ಪ್ರಸ್ತಾಪಿತವಾಗಿದೆಯೆಂದು ಹಿಂದಿನ ಸಂಚಿಕೆಯಲ್ಲಿ ನಮೂದಿಸಲಾಗಿದೆ.  ಇಲ್ಲಿ ಪ್ರಚಲಿತವಿರುವ ಜಾನಪದ ಕಥೆಯಂತೆ ಒಂದಾನೊಂದು ದಿನ ಮಾಳಮ್ಮನು ಕಾಲಭೈರವನ ಗುಡಿಯನ್ನು ತನ್ನ ಮಗುವಿನೊಂದಿಗೆ ಪ್ರವೇಶಿಸಿದಳು. ಆದರೆ ಆಕೆ ಪುನಃ ಹಿಂತಿರುಗಿ ಬರಲೇ ಇಲ್ಲ. ವಿಚಲಿತರಾದ ಅವಳ ತಂದೆ, ಗುಡಿಯೊಳಗೆ ಬಂದು ನೋಡಿದಾಗ, ಮಗಳು ತನ್ನ ಮಗುವಿನ ಸಹಿತ ಶಿಲೆಯಾಗಿ ಕಾಲಭೈರವನ ಪಕ್ಕದಲ್ಲಿ ನಿಂತಿದ್ದಳು. ಆಗ ಕೇಳಿಬಂದ ಅಶರೀರವಾಣಿಯಂತೆ ತನ್ನನ್ನು ಹುಡುಕುವುದು ಅನವಶ್ಯಕವೆಂದೂ, ತಾನು ದೈವಸನ್ನಿಧಿಯಲ್ಲೇ ನೆಲೆ ನಿಂತಿರುವುದಾಗಿ ಐತಿಹ್ಯ. 

ಈ ದೇಗುಲ ಪ್ರಸಿದ್ಧಿಗೆ ಬರಲು ಕಾರಣರಾದವರು ಅಲ್ಲಿನ ಗ್ರಾಮಸ್ಥರೊಬ್ಬರು. ಅವರು ವೃತ್ತಿಯಿಂದ ಗಣಪತಿ ವಿಗ್ರಹಗಳ ತಯಾರಕರು. ಅವರಿಗೆ ದೈವಸಾಂಗತ್ಯ ಹತ್ತಿರದ ವಿಷಯವಾದ್ದರಿಂದ ತಮ್ಮ ಗ್ರಾಮದಲ್ಲಿರುವ ಈ ಮಂದಿರದ ಬಗ್ಗೆ ಆಸಕ್ತಿ ಮೂಡಿತು. ಅವರ ದೈವಭಕ್ತಿಯು ದೇವಕ್ಷೇತ್ರಗಳ ದರ್ಶನಕ್ಕೂ ಪ್ರೇರಣೆ ನೀಡಿದ್ದರಿಂದ ಹಲವಾರು ಮಂದಿರಗಳಿಗೆ ಹೋಗಲಾರಂಭಿಸಿದರಲ್ಲದೆ, ಅಲ್ಲಿನ ದೈವೀ ವಿಶೇಷಗಳ ಬಗ್ಗೆಯೂ ಆಸಕ್ತಿ ಬೆಳೆಸಿಕೊಂಡರು. ಇಂಥ ಪ್ರವಾಸಗಳಲ್ಲಿ 
ಒಮ್ಮೆ ಅವರು ತಮಿಳು ನಾಡಿನಲ್ಲಿರುವ ಅಧಿ ಯಮನ್ ಕೋಟೆಯ ಕಾಲಭೈರವ ಮಂದಿರವನ್ನೂ ಸಂದರ್ಶಿಸಿದರು.  ಕುಂಬಳ ಕಾಯಿ ತಿರುಳು ತೆಗೆದು, ಕೆಂಪು ದಾರದ ಬತ್ತಿಯಿಂದ ಅದರಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ ಕಾಲಭೈರವನ ಸೇವೆ ಮಾಡುತ್ತಿದ್ದ ಪರಿ ಅವರನ್ನು ಆಕರ್ಷಿಸಿತು. ಜ್ಯೋತಿಷದಲ್ಲೂ ಪ್ರವೇಶವಿದ್ದ ಅವರು ಅಲ್ಲಿ ಬಳಸುತ್ತಿದ್ದ ವಸ್ತುಗಳು ಜ್ಯೌತಿಷ ವಿಷಯದಲ್ಲಿ ಯಾವ ಸಂಬಂಧ ಹೊಂದಿವೆ ಎಂದು ವಿಶ್ಲೇಷಿಸಿದರು. ಕುಂಬಳಕಾಯಿ, ಎಳ್ಳಿನ ಎಣ್ಣೆ ಮತ್ತು ಕೆಂಪು ಬತ್ತಿಗಳು ಅಲ್ಲಿ ಪ್ರಧಾನವಾಗಿದ್ದವು. ಎಳ್ಳೆಣ್ಣೆಯು ಶನಿಯನ್ನೂ, ಕೆಂಪು ದಾರವು ಕುಜನ ಸೂಚಕವಾಗಿರುವುದರಿಂದ, ನವಗ್ರಹಗಳಿಗೂ ಅಧಿಪತಿಯಾಗಿರುವ ಕಾಲಭೈರವನ ಪ್ರಭಾವವು ಇವುಗಳ ಮೇಲಿರುವುದೇ ಈ ಪೂಜಾ ವ್ಯವಸ್ಥೆಗೆ ಕಾರಣವೆಂದು ತರ್ಕಿಸಿ, ಅದನ್ನು ತಮ್ಮ ಊರಿನ ದೇವಾಲಯದಲ್ಲಿಯೂ ಜಾರಿಗೆ ತಂದರು. ಇದನ್ನು ಪ್ರತಿ ತಿಂಗಳ ಕೃಷ್ಣಪಕ್ಷದ ಅಷ್ಟಮಿಯಂದು ಆಚರಿಸಲಾಗುವುದು. ಮುಂದೆ ಈ ಪೂಜಾವಿಧಿಗಳಿಂದ ಸೂಕ್ತ ಪ್ರತಿಫಲ ದೊರೆಯಿತೆಂದೂ, ಜನರಿಗೆ ಅನೇಕ ಅನುಕೂಲಗಳು ಉಂಟಾದವೆಂದೂ ಇಲ್ಲಿನ ಜನರ ನಂಬಿಕೆ.


ಜಾನಪದ ಕಥಾನಕಗಳಿಂದ, ಭೈರವನ ಆರಾಧನೆಯಲ್ಲಿ ಕಂಡುಬರುವ ವಿವಿಧ ಆಚರಣೆಗಳು, ನಂಬಿಕೆಗಳು ತಿಳಿಸುವುದೇನೆಂದರೆ, ಮಾನವರೊಡನೆ ಆತನ  ಒಡನಾಟಗಳು ಶಿಷ್ಟ ದೇವತೆಗಳಿಗಿಂತ ಹೆಚ್ಚಿನದು.  
ಚಿತ್ರ-ಮಾಹಿತಿ ಕೃಪೆ - ಅಂತರ್ಜಾಲ