ನಮ್ಮ ಬಹುತೇಕ ದೇವರುಗಳು ನೆಲಸಿರುವುದು ಬೆಟ್ಟದ ತುದಿಯಲ್ಲಿ. ಅಂಥ
ಪರಿಕಲ್ಪನೆಯ ಹಿಂದೆ ವಿಶೇಷವಾದ ಒಂದು ಉದ್ದೇಶವಿದೆ. ದೇವರನ್ನು ಸಂದರ್ಶಿಸುವುದು ಅಷ್ಟು
ಸುಲಭಸಾಧ್ಯವಲ್ಲ, ಅದಕ್ಕೆ ಶ್ರಮ, ಆಸಕ್ತಿ ಮತ್ತು ಭಕ್ತಿಗಳು ಬೇಕು ಎನ್ನುವುದು ಒಂದು
ಉದ್ದೇಶವಾದರೆ, ಪ್ರಕೃತಿಯಲ್ಲೇ ಲೀನನಾಗಿರುವ ಆತನನ್ನು ಅಂಥಲ್ಲೇ ನೋಡಬೇಕು, ಇದರಿಂದ ಮನಸ್ಸಿಗೆ
ಮುದ, ಎತ್ತರದ ಬೆಟ್ಟವನ್ನು ಹತ್ತಿಬಂದು ಸಾಧಿಸಿದಾಗಿನ ಹೆಮ್ಮೆಗಳು ವ್ಯಕ್ತಿಯ
ಆತ್ಮವಿಶ್ವಾಸವನ್ನು ದೃಢಗೊಳಿಸುತ್ತವೆ. ಹೆಚ್ಚಿನಂಶದ ಕಾಲಭೈರವನ ಮಂದಿರಗಳೂ ಬೆಟ್ಟದ ಮೇಲೆಯೇ ಇರುತ್ತವೆ. ಹೀಗಾಗಿ "ಬೆಟ್ಟಭೈರವ"ನೆಂಬ
ಪದವೂ ರೂಢಿಯಲ್ಲಿದೆ.
ಹೀಗೆಯೇ ಕರ್ನಾಟಕದಲ್ಲಿ ಅತ್ಯಂತ ಎತ್ತರದಲ್ಲಿ ನೆಲೆಸಿರುವ ಭೈರವ
ಸ್ಥಾನ ಶಿರಸಿಯ ಸಮೀಪದಲ್ಲಿರುವ "ಯಾಣ" ದಲ್ಲಿದೆ. ಯಾಣವು ಚಾರಣಕ್ಕೆ ಪ್ರಸಿದ್ಧವಾದದ್ದು ತೀರ
ಇತ್ತೀಚೆಗೆನ್ನಬೇಕು. ಮಾನವನ ಕರ್ತೃತ್ವ ಶಕ್ತಿಗೆ ಸವಾಲೆಂಬ ರೂಪದಲ್ಲಿರುವ ಈ ಪ್ರದೇಶಕ್ಕೆ ಭೇಟಿ
ನೀಡುವ ಯಾರಿಗೂ, ಅದು ಪ್ರಕೃತಿಯ ರುದ್ರ ರಮಣೀಯತೆಯನ್ನು ತೋರುವುದರ ಜತೆಗೇ, ದೈವಭಕ್ತಿಯ
ಪರೀಕ್ಷೆಗೂ ಸೂಕ್ತ ಸ್ಥಳವೆಂಬ ಭಾವನೆ ಮೂಡುತ್ತದೆ. ಅಲ್ಲಿ ಭೈರವನ ನೆಲೆಯಿರುವುದು ಕೂಡ ಸಾಂಕೇತಿಕ
ದೃಷ್ಟಿಯಿಂದ ಮಹತ್ವಪೂರ್ಣವಾದುದು. ಏಕೆಂದರೆ, ಅಲ್ಲಿನ ನಿಸರ್ಗದ ರುದ್ರತೆ, ಕಾಠಿಣ್ಯಗಳ
ಸಂಕೇತವನ್ನು ಬಹುಶಃ ಭೈರವನ ರೂಪವಲ್ಲದೇ ಮತ್ತಾವ
ದೇವ ದೇವಿಯರೂ ಸಮರ್ಥವಾಗಿ ಪ್ರತಿನಿಧಿಸಲಾರರು. ಸುಮಾರು 350 ಅಡಿಗಳಷ್ಟು ಎತ್ತರದ ಕಪ್ಪು ಬಂಡೆಗಲ್ಲುಗಳ
ತುದಿಯಲ್ಲಿ ಸೀಳು ಗುಹೆಯಾಗಿ ಮಾರ್ಪಾಡಾಗಿದೆ. ಇದೇ ಭೈರವ ಶಿಖರ. ಈ ಗುಹೆಯಲ್ಲಿ ಒಡಮೂಡಿರುವ
ಲಿಂಗದ ಮೇಲೆ ನಿರಂತರವಾಗಿ ಜಲಧಾರೆ ಹರಿಯುತ್ತಿದೆ. ನೀರಿನ ಸ್ರೋತವನ್ನು ಕಲ್ಲುಬಂಡೆಗಳ
ಯಾವಭಾಗದಲ್ಲೂ ಗುರುತಿಸಲು ಸಾಧ್ಯವಾಗದು. ನಿಸರ್ಗದ ವೈಚಿತ್ರ್ಯಗಳಿಗೆ ಇನ್ನೊಂದು ಉತ್ತಮ
ಉದಾಹರಣೆಯಾಗಿ ಯಾಣದ ಕಲ್ಲು ಶಿಖರಗಳು ಆಗಸವನ್ನು ಚುಚ್ಚುವಂತೆ ಅನಾದಿಕಾಲದಿಂದ ನಿಂತಿವೆ.
ಯಾಣಕ್ಕೆ ಪೌರಾಣಿಕ ಮಹತ್ವವೂ ಇದೆ. ಇಲ್ಲಿ ಮೋಹಿನಿ ಭಸ್ಮಾಸುರರ ಕಥೆಯ
ವಿವರಣೆಯಿದೆ. ಭಸ್ಮಾಸುರ ಶಿವನಿಂದ ವರಪಡೆದು, ತಾನು ಯಾರ ತಲೆಯ ಮೇಲೆ ಕೈಯಿಡುತ್ತಾನೋ ಅವರಿಗೆ
ಸಾವು ನಿಶ್ಚಯವೆಂಬ ವರವನ್ನು ಭಸ್ಮಾಸುರ ಶಿವನಿಂದ ಪಡೆದನಷ್ಟೆ. ಇಲ್ಲಿ ಪ್ರಚಲಿತವಿರುವ ಕಥಾನಕದ
ಅನ್ವಯ, ವರ ನೀಡಿದವ ಶಿವ. ಭಸ್ಮಾಸುರನ ವರ ಪ್ರಯೋಗಕ್ಕೆ ಬಲಿಪಶುವಾದದ್ದು "ಭೈರವೇಶ್ವರ"ನೆಂಬ ಶಿವನ
ಇನ್ನೊಂದು ರೂಪ. ಆಗ ಮೋಹಿನಿಯ ರೂಪದಲ್ಲಿ ಬಂದು ಅವನನ್ನು ರಕ್ಷಿಸಿದ್ದು ಮಹಾವಿಷ್ಣು. ಕೊನೆಗೂ
ಭಸ್ಮಾಸುರ ಭಸ್ಮವಾದ. ಅದರ ಕುರುಹು ಆ ಪ್ರದೇಶದಲ್ಲಿ ಇನ್ನೂ ಇದೆಯೆನ್ನಲು ಸಾಕ್ಷಿಯಾಗಿ
ಸುತ್ತಮುತ್ತಲಿನ ವನಪ್ರದೇಶವೆಲ್ಲ ಕಪ್ಪುಬಣ್ಣದ ಬೂದಿಮಣ್ಣಿನಿಂದಲೇ ತುಂಬಿದೆ. ಈ ಎರಡು
ಪಾತ್ರಗಳಾದ ಭೈರವ ಮತ್ತು ಮೋಹಿನಿಯ ಸ್ಮಾರಕವಾಗಿ
ಈ ಪ್ರದೇಶದಲ್ಲಿನ ಎರಡು ಎತ್ತರವಾದ ಶಿಖರಗಳನ್ನು "ಭೈರವ ಶಿಖರ" ಮತ್ತು "ಮೋಹಿನಿ ಶಿಖರ"ಗಳೆಂದು
ಹೆಸರಿಸಲಾಗಿದೆ. ಒಂದು ಕಾಲಕ್ಕೆ ಹತ್ತುಸಾವಿರ ಜನಸಂಖ್ಯೆಯಿದ್ದ ಎಪ್ಪತ್ತು ಹಳ್ಳಿಗಳ ಯಾಣದಲ್ಲೀಗ
ಕೇವಲ ಕೆಲವು ನೂರುಗಳಷ್ಟು ಜನವಸತಿಯಿದೆ. ಅದರಲ್ಲೂ ಪೂಜಾರಿಗಳ ವಂಶಸ್ಧರು ಅಲ್ಲಿ ಸ್ಥಿರವಾಗಿ
ಉಳಿದುಕೊಂಡದ್ದನ್ನು ಗಮನಿಸಿದರೆ, ಭೈರವನ ಆರಾಧನೆ ಈ ಪ್ರದೇಶದಲ್ಲಿ ತುಂಬ ಹಿಂದಿನ ಕಾಲದಿಂದಲೂ
ನಡೆದದ್ದು ಗೋಚರಿಸುತ್ತದೆ.
ಪ್ರತಿವರ್ಷ ಶಿವರಾತ್ರಿಯಂದು ಅಲ್ಲಿ ವಿಶೇಷ ಉತ್ಸವ ಜರುಗುತ್ತದೆ.
ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ. ಶಿವನು ಆವಾಸಸ್ಥಳವಾದ ಇಲ್ಲಿ
ಪಾದರಕ್ಷೆಗಳನ್ನು ಧರಿಸಿ ನಡೆಯುವುದು ಶಿವನಿಗೆ ಅಪಚಾರ ಮಾಡಿದಂತೆ ಎಂಬ ಭಾವನೆಯಿರುವುದರಿಂದ
ಭಕ್ತಾದಿಗಳು ಬರಿಗಾಲಿನಲ್ಲೇ ಬಂದು ತಮ್ಮ ಸೇವೆ ಸಲ್ಲಿಸುತ್ತಾರೆ. ಶಿವರಾತ್ರಿಯ ದಿನ ಇಲ್ಲಿನ ಭೈರವನ ಅರ್ಚನೆ ಮಾಡಿ, ಸಮೀಪದಲ್ಲೇ
ಇರುವ ದಂಡಿತೀರ್ಥದಿಂದ ನೀರನ್ನು ತಂದು ಗೋಕರ್ಣದ ಮಹಾಬಲೇಶ್ವರನಿಗೆ ಅಭಿಷೇಕಮಾಡಿದರೆ ನಿಶೇಷ
ಪುಣ್ಯ ಲಭ್ಯವೆಂಬ ನಂಬಿಕೆಯಿದೆ.
"ರೊಕ್ಕ ಇದ್ದರೆ ಗೋಕರ್ಣ, ಸೊಕ್ಕು ಇದ್ದರೆ ಯಾಣ" - ಯಾಣದ ಕುರಿತು
ಅನಾದಿಕಾಲದಿಂದ ಇರುವ ಗಾದೆಯು ಅದರ ದುರ್ಗಮತೆಯನ್ನು ಕುರಿತು ಹೇಳುತ್ತದೆ. ಈಗೇನೋ ಪರಿಸ್ಥಿತಿ ಸುಧಾರಿಸಿರುವುದರಿಂದ ಯಾಣವನ್ನು
ತಲುಪಲು ಬಸ್ಸು ಕಾರುಗಳ ಸೌಲಭ್ಯವಿದೆ. ಆದರೆ ದುರ್ಗಮ ಶಿಲಾ ಶಿಖರಗಳನ್ನು ಕಾಲ್ನಡಿಗೆಯಲ್ಲೇ
ಹತ್ತಿ ಸಾಗಬೇಕಾಗಿರುವುದರಿಂದ, ಗಾದೆಯ ಮಾತು ಸುಳ್ಳಾಗಿಲ್ಲ ಮತ್ತು ಎಂದಿಗೂ ಸುಳ್ಳಾಗದು ಕೂಡ!.
ಚಿತ್ರಕೃಪೆ : ಇಂಟರ್ನೆಟ್