ಶುಕ್ರವಾರ, ಮಾರ್ಚ್ 1, 2013

ಡಣಾಯಕಪುರದ ಶ್ರೀ ಕ್ಷೇತ್ರಪಾಲ ಕಾಲಭೈರವ ಸ್ವಾಮಿ




ಡಣಾಯಕಪುರದ
ಶ್ರೀ ಕ್ಷೇತ್ರಪಾಲ ಕಾಲಭೈರವ ಸ್ವಾಮಿ




ಶಿರೋಮಾಲಾ ವಿಭೂಷಿತಂ 
ಇತ್ತೀಚೆಗೆ ಶಿವಮೊಗ್ಗಕ್ಕೆ ಹೋದಾಗ ಅಗರದ ಹಳ್ಳಿಯಲ್ಲಿರುವ ಮಿತ್ರರಾದ ಮುರಳಿ, ತಮ್ಮ ಗ್ರಾಮದ ಸಮೀಪ ಒಂದು ಕಾಲಭೈರವ ದೇವಾಲಯವಿದೆಯೆಂದು ತಿಳಿಸಿದ್ದರು. ಅದನ್ನು ಇತ್ತೀಚೆಗೆ ಸಂದರ್ಶಿಸಿದ ನಂತರ ಆ ಬಗ್ಗೆ ಇಲ್ಲಿ ಬರೆಯುತ್ತಿರುವೆ.

ಶಿವಮೊಗ್ಗ ಜಿಲ್ಲೆಯಲ್ಲಿರುವ ಹೊಳೆಹೊನ್ನೂರಿನಿಂದ ಸ್ವಲ್ಪ ಮುಂದೆ ಸಾಗಿದರೆ, ಡಣಾಯಕಪುರವೆಂಬ ಚಿಕ್ಕ ಗ್ರಾಮವಿದೆ. ಅಲ್ಲಿ ಊರಿನ ಅಂಚಿನಲ್ಲಿ ಒಂದು ಚಿಕ್ಕ ಗುಡ್ಡ. ಅದರ ಮೇಲೊಂದು ದೇಗುಲವಿದೆ. ಅಲ್ಲಿರುವುದು ಶ್ರೀ ಕ್ಷೇತ್ರಪಾಲ ಕಾಲಭೈರವ ಸ್ವಾಮಿಯ ದೇವಾಲಯ. ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಕಾಲಭೈರವ ಮಂದಿರದ ಬಗ್ಗೆ ಈ ಬ್ಲಾಗ್‌ನಲ್ಲಿ ಒಂದು ಲೇಖನವಿದೆ. ಅದರಲ್ಲಿ ಪ್ರಸ್ತಾಪಿಸಿದ್ದಂತೆ, ಹಳೆಗಾಲದ ಮಂದಿರಗಳು ನಶಿಸಿಹೋದಾಗ,  ಮಂದಿರದ, ಅಲ್ಲಿನ ವಿಗ್ರಹಗಳ ಬಗ್ಗೆ ಆಸ್ಥೆಯುಳ್ಳ ಸ್ಥಳೀಕರು ಹೊಂದಿರುವ ಭಕ್ತಿ ಗೌರವಗಳಿಂದಾಗಿ, ಅವನ್ನು ಈಗ ಲಭ್ಯವಿರುವ ವಸ್ತುಗಳಿಂದ ಕಾಪಾಡಲು ಮುಂದಾಗುತ್ತಾರೆ. ಎಂದರೆ ಕಾಂಕ್ರೀಟ್ ಕಟ್ಟಡದಲ್ಲಿ ಪುರಾತನ ಶಿಲ್ಪಗಳು ಆಶ್ರಯ ಪಡೆಯುತ್ತವೆ. ಕೆಲವೇ ಅದೃಷ್ಟವಂತ ಪುರಾತನ ದೇವಾಲಯಗಳು, ಪುರಾತತ್ವ ಇಲಾಖೆಯ ಕಾಳಜಿಯಿಂದಾಗಿ ಮರುಹುಟ್ಟು ಪಡೆಯುತ್ತವೆ. ತೀರ ಭಗ್ನಗೊಂಡಿರುವ ದೇವಾಲಯಗಳು ಕುಸಿದು ಬೀಳುತ್ತವೆ. ಹಾಗೆ ಆಧುನಿಕ ಕಟ್ಟಡದಲ್ಲಿ ಪುರಾತನ ಶಿಲ್ಪಗಳನ್ನು ನೋಡಿದಾಗ ಅದು ಅಸಮಂಜಸವೆಂದು ತೋರುತ್ತದೆ.

ಸುಂದರ ಹೊಯ್ಸಳ ವಿಗ್ರಹ 
ಆದರೆ ಇದೆಲ್ಲ ಅನಿವಾರ್ಯ. ಡಣಾಯಕ ಪುರದ ದೇವಾಲಯದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಸಖರಾಯಪಟ್ಟಣಕ್ಕೂ ಇಲ್ಲಿಗೂ ಒಂದು ವ್ಯತ್ಯಾಸವಿದೆ. ಎರಡು ಸ್ಥಳಗಳಲ್ಲಿ ಇಟ್ಟಿಗೆ ಮರಳಿನ ದೇವಾಲಯವಿದ್ದರೂ, ಡಣಾಯಕಪುರದ ಮಂದಿರದ ಗರ್ಭಗುಡಿಯಲ್ಲಿ ಹಳೆಗಾಲದ ವಿಗ್ರಹವಿದೆ. ಶಿಲ್ಪಕಲೆಯ ದೃಷ್ಟಿಯಿಂದ ಅದೇನೂ ಗಮನ ಸೆಳೆಯುವಂತಿಲ್ಲ. ಆದರೆ ಆವರಣದಲ್ಲಿರುವ ಕಾಲಭೈರವನ ಭಗ್ನಮೂರ್ತಿ ಮತ್ತು ದೇವಾಲಯದ ಇತರ ಬಿಡಿಭಾಗಗಳು ಅಲ್ಲೊಂದು ಹೊಯ್ಸಳರ ದೇವಾಲಯವಿತ್ತು ಎನ್ನುವುದನ್ನು ಸಮರ್ಥಿಸುತ್ತವೆ. ಚಿತ್ರದಲ್ಲಿ ಕಾಣುವ ಈ ಸುಂದರ ಮೂರ್ತಿಯು ತನ್ನ ಶಿರೋ ಅಲಂಕಾರ ಮತ್ತು ನಿಂತಿರುವ ತ್ರಿಭಂಗಿಗಳಿಂದ ಗಮನಸೆಳೆಯುತ್ತದೆ. ಆಭರಣಗಳು ಮತ್ತು ಮುಖಭಾವಗಳು ಅದ್ಭುತವಾಗಿವೆ. ಈ ಶಿಲ್ಪವಲ್ಲದೆ ಇತರ ಚಿಕ್ಕರಚನೆಗಳು ಈಗಿರುವ ದೇವಾಲಯವನ್ನು ನಿರ್ಮಿಸುವ ಕಾಲಕ್ಕೆ ದೊರೆಯಿತು ಎಂದು ಅಲ್ಲಿನ ಅರ್ಚಕರಾದ ಶ್ರೀ ವೆಂಕಟೇಶ ಭಟ್ಟರು ತಿಳಿಸಿದರು. ದೇವಾಲಯದ ಬಲಭಾಗಕ್ಕೆ ಒಂದು ಧ್ವಜಸ್ಥಂಭವಿದೆ. ಪೂರ್ವಕ್ಕೆ ಎದುರಾಗಿರುವಂತೆ ನಿರ್ಮಿತವಾದ ಒಂದು ದೇವಾಲಯ ಅಲ್ಲಿತ್ತು.  ಹೊಯ್ಸಳರ ಕಾಲದ ಆ ದೇವಾಲಯ ಭಗ್ನಗೊಂಡ ನಂತರ, ಸ್ಥಳೀಯ ಐತಿಹ್ಯದಂತೆ ಅಲ್ಲೊಂದು ನೂತನ ದೇವಾಲಯವನ್ನೂ, ಮತ್ತೊಂದು ಮೂರ್ತಿಯನ್ನೂ ಪ್ರತಿಷ್ಠಾಪಿಸಲಾಯಿತು. ಈ ದೇವಾಲಯವೀಗ ಜೀರ್ಣೋದ್ಧಾರಗೊಳ್ಳುತ್ತಿದೆ. ಸದ್ಯದಲ್ಲೇ ಅಷ್ಟ ಭೈರವವಿಗ್ರಹಗಳಿರುವ ಆಧುನಿಕ ದೇವಾಲಯ ಅಲ್ಲಿ ತಲೆಯೆತ್ತಲಿದೆ.
ಈಗಿರುವ ವಿಗ್ರಹ 
ಈ ದೇವಾಲಯವನ್ನು ಕುರಿತಂತೆ ಸ್ಥಳೀಯ ಭಕ್ತಮಂಡಲಿಯು ಒಂದು ಕಿರುಪುಸ್ತಕವನ್ನು ಹೊರ ತಂದಿದೆ. ಅದರಲ್ಲಿ ಐತಿಹಾಸಿಕ ಅಂಶಗಳ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲವಾದರೂಪೌರಾಣಿಕ ಮಹತ್ವವನ್ನು ಕುರಿತು ವಿಸ್ತಾರವಾಗಿ ಹೇಳಲಾಗಿದೆ. ಸಮೀಪದ ಶ್ರೀ ಕ್ಷೇತ್ರ ಕೂಡಲಿಯ ಪುರೋಹಿತರಾದ ಶ್ರೀ ಸೋಮಸುಂದರ ಭಟ್ಟರು ಸಂಪಾದಿಸಿದ ಸಂಸ್ಕೃತ ಕೃತಿಯನ್ನು ಆಧರಿಸಿದ ಈ ಮಾಹಿತಿಯನ್ನು ವಿದ್ವಾನ್ ಕೂಡಲಿ ಜಗನ್ನಾಥ ಶಾಸ್ತ್ರಿಗಳು ಕನ್ನಡ ದಲ್ಲಿ ಅನುವಾದಿಸಿದ್ದಾರೆ. ಸಾಧಾರಣವಾಗಿ ಕಾಲಭೈರವ ದೇವಾಲಯಗಳಲ್ಲಿ ಆ ದೇವರಿಗೆ ಸಂಬಂಧಿಸಿದ ಸ್ತೋತ್ರಗಳು, ಮಂತ್ರಗಳು ಪ್ರಚಲಿತವಿಲ್ಲವಾಗಿ, ಶಿವಾರಾಧನೆಯ ಸಾಹಿತ್ಯವನ್ನೇ ಅವಲಂಬಿಸಬೇಕಾಗಿದೆ. ಆದರೆ ಇಲ್ಲಿ ಹಾಗಾಗದೆ ಕಾಲಭೈರವ ಅಷ್ಟೋತ್ತರವು ಚಾಲ್ತಿಯಲ್ಲಿದೆ.

ಬೆಟ್ಟದ ಹಾದಿ 
ಪೌರಾಣಿಕ ವಿವರಗಳಂತೆ ಈ ಗುಡ್ಡಕ್ಕೆ ದ್ರೋಣ ಪರ್ವತವೆಂಬ ಹೆಸರಿತ್ತು. ತುಂಗಾ ಭದ್ರಾ ನದಿಗಳ ಸಂಗಮ ಕ್ಷೇತ್ರವಾದ ಕೂಡಲಿಯಲ್ಲಿ ಬ್ರಹ್ಮೇಶ್ವರ, ನರಸಿಂಹ, ರಾಮೇಶ್ವರ ದೇವತೆಗಳನ್ನು ಸಂದರ್ಶಿಸಿದ ನಂತರ ದ್ರೋಣ ಪರ್ವತದ ಕಾಲಭೈರವ ನನ್ನು ನೋಡಬೇಕು. ಇದಕ್ಕೆ ಸಂಬಂಧಿ ಸಿದಂತೆ ಒಂದು ಪೌರಾಣಿಕ ಕತೆಯನ್ನೂ ನೀಡಿದ್ದಾರೆ. ಇಲ್ಲಿ ಶಿವನ ಜತೆಗೆ ವಿಷ್ಣುವಿನ ಪಾತ್ರವೂ ಇರುವುದೊಂದು ವಿಶೇಷ. ದೇವ-ದಾನವ ಯುದ್ಧದ ಕಾಲದಲ್ಲಿ ದಾನವರೇ ಗೆದ್ದು ಹಿಂಸಾಚಾರದಲ್ಲಿ ತೊಡಗಿದಾಗ, ದೇವತೆಗಳು ವಿಷ್ಣುವಿನ ಮೊರೆ ಹೋದರು. ಮಂದರ ಪರ್ವತದ ಮಥನ ಸಮಯದಲ್ಲಿ ಉದ್ಭವಿಸಿದ ಅಮೃತಕಲಶವನ್ನು ಧನ್ವಂತರಿಯಿಂದ ಅಪಹರಿಸಿದಾಗ, ವಿಷ್ಣುವು ಸ್ತ್ರೀ ರೂಪ ತಳೆದು ಅವರನ್ನು ಆಕರ್ಷಿಸಿದನು.  ದಾನವರು ಮೈಮರೆತದ್ದರಿಂದ ಅಮೃತಕಲಶವು ದೇವತೆಗಳಿಗೆ ದೊರೆಯಿತು.  ದೇವತೆಗಳ ಅಮೃತಪಾನದ ನಂತರವೂ ಬರಿದಾಗದ ಆ ಕಲಶವನ್ನು ಈಗ ದ್ರೋಣಪರ್ವತವೆಂದು ಕರೆಯಲಾಗುವ ಈ ಪ್ರದೇಶದಲ್ಲಿ ಹುಗಿದಿಟ್ಟರು.  ಅದರ ಕಾವಲಿಗೆ ಓರ್ವನನ್ನು ನೇಮಿಸಬೇಕೆಂಬ ಕೋರಿಕೆ ಬಂದಾಗ ವಿಷ್ಣುವು ವಸಂತ ಸಹಿತ ಶ್ರೀ ಕಾಲಭೈರವನನ್ನು ಬೆಟ್ಟದ ತುದಿಯಲ್ಲಿ ಸ್ಥಾಪಿಸಿದನು. ಅಂದಿನಿಂದ ಈ ಕ್ಷೇತ್ರವು ಕಾಲಭೈರವನ ನೆಲೆಯಾಯಿತು ಎನ್ನುತ್ತದೆ ಈ ಕಥಾನಕ. ಇನ್ನೂ ವಿಶೇಷವೆಂದರೆ ಕಾಲಭೈರವಾಷ್ಟಮಿ, ಚತುರ್ದಶೀ ಮುಂತಾದ ಪರ್ವದಿನಗಳಂದು, ಸೂರ್ಯನು ಕರ್ಕಾಟಕ ರಾಶಿಯಲ್ಲಿದ್ದಾಗ ಇಲ್ಲಿನ .ಕಾಲಭೈರವ ನನ್ನು ಸಂದರ್ಶಿಸುವುದು ವಿಶೇಷ ಫಲನೀಡುತ್ತದೆಯೆಂಬುದು ಐತಿಹ್ಯ
ಬಲಿಪೀಠದ ಸಮೀಪ  ಕೆತ್ತನೆ
ದೇವಾಲಯದ ಎದುರಿಗಿರುವ ಬಲಿಪೀಠದ ಸಮೀಪ ಒಂದು ಕೆತ್ತನೆಯಿದೆ. ಅದರಲ್ಲಿನ ಮಾನವ ಶರೀರಗಳ ತಲೆಗಳು ಕಾಣುತ್ತಿಲ್ಲ. ಇದರ ಬಗ್ಗೆ ಸೂಕ್ತ ವಿವರಣೆಯೂ ದೊರೆಯಲಿಲ್ಲವಾಗಿ, ಓದುಗರಲ್ಲಿ ಯಾರಿಗಾದರೂ ಮಾಹಿತಿಯಿದ್ದರೆ ತಿಳಿಸಲು ಕೋರಿಕೆ. 

ಒಂದು ಭಗ್ನ ಶಿಲ್ಪ 
ಒಟ್ಟಿನಲ್ಲಿ ಇಲ್ಲಿರುವ ಹೊಯ್ಸಳ ವಿಗ್ರಹದ ಸೌಂದರ್ಯ ಮತ್ತು ಭವ್ಯತೆಯನ್ನು ನೋಡುವ ಯಾರಿಗೂ, ಉತ್ಖತನ ಕೈಗೊಂಡರೆ ಸುಂದರ ಪುರಾತನ ದೇವಾಲಯವೊಂದು ಕಾಣಸಿಗುತ್ತದೆಯೆಂಬ ವಿಶ್ವಾಸವಂತೂ ಬರುತ್ತದೆ. ವಿಗ್ರಹವೇ ಇಷ್ಟು ಸುಂದರ ವಾಗಿರುವಾಗ ಮಂದಿರವೂ ಅದ್ಭುತ ವಾಗಿರಬೇಕು ಎಂಬ ಕಲ್ಪನೆ ಗರಿಗೆದರುತ್ತದೆ. ಸ್ಥಳೀಯರ ಸಹಕಾರದೊಂದಿಗೆ, ಪುರಾತತ್ವ ಇಲಾಖೆ ಶ್ರಮವಹಿಸಿದರೆ ಆ ಕಾರ್ಯ ನಡೆದೀತು. ಹಾಗಾಗಲಿ ಎನ್ನುವುದಷ್ಟೇ ಜನರ ಆಶಯ.

* * * * * * *