ಕಾಲ ಕಾಲಂ...................
ಹಿಂದೆಲ್ಲ ಭೌತವಸ್ತುಗಳ ಪರಿಮಾಣಗಳನ್ನು ಹೇಳುವಾಗ ಮೂರು ಆಯಾಮಗಳನ್ನು ಮಾತ್ರ ಪರಿಗಣಿಸುತ್ತಿದ್ದರು. ಆಲ್ಬರ್ಟ್ ಐನ್ಸ್‌ಟೈನ್ ಅದಕ್ಕೆ ನಾಲ್ಕು ಆಯಾಮಗಳಿವೆ ಎಂದು ನಿರೂಪಿಸಿದರು. ಈ ನಾಲ್ಕನೇ ಆಯಾಮವೇ ಕಾಲ. ಈ ವಿಷಯದಲ್ಲಿ ಸಿದ್ಧರು ಇನ್ನೂ ಹೆಚ್ಚಿನ ಕೆಲಸಮಾಡಿದ್ದರು. ಅವರ ಅಧ್ಯಯನಗಳಲ್ಲಿ ಬೇರೆ ಬೇರೆ ಗ್ರಹಗಳಿಗೆ ಬೇರೆ ಬೇರೆ ಸಮಯದ ಅನ್ವಯವಿದೆಯೆಂದು ಅವರು ಅರಿತಿದ್ದರು. ಕಾಲದ ಚಲನೆಯು ಭೂಮಿಯ ಮೇಲೆ ನಿಧಾನ, ಆದರೆ ಇತರ ಗ್ರಹಗಳಲ್ಲಿ ಅದರ ವೇಗ ಹೆಚ್ಚು. ಕಾಲವು ಅಮೂರ್ತವಾಗಿರಬಹುದು. ಆದರೆ ಅದನ್ನು ಸೇರಿಸಿ ಲೆಕ್ಕಹಾಕುವುದರಿಂದ ವಸ್ತುವಿನ ಬಳಕೆ, ತಾಳಿಕೆಗಳ ಬಗ್ಗೆ ಅದರ ಅಸ್ತಿತ್ವವನ್ನು ನಿರ್ಧರಿಸಬಹುದು. ಆಧ್ಯಾತ್ಮದ ಅಧ್ಯಯನದಲ್ಲಿ ಭೌತಶಾಸ್ತ್ರದ ತತ್ವಗಳನ್ನೂ ಗ್ರಹಿಸಬೇಕಾಗುತ್ತದೆ. ಅಮೂರ್ತ ಅಸ್ತಿತ್ವಗಳಾದ ಗಾಳಿ, ವಾಸನೆಗಳಂಥವುಗಳ ಬಗ್ಗೆ ಅವು ಅಮೂರ್ತವೆನ್ನುವ ಕಾರಣಕ್ಕೆ ಅವುಗಳ ಅಸ್ತಿತ್ವವನ್ನು ಅಲ್ಲಗಳೆಯಲಾಗದು. ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಮೇಲಿಂದ ಮೇಲೆ ಪ್ರಸ್ತಾಪವಾಗುವ ಅಗ್ನಿ, ವಾಯು, ಜಲ, ಪೃಥಿವಿ ಮತ್ತು ತೇಜಸ್‌ಗಳನ್ನು ಸಂಕ್ಷಿಪ್ತವಾಗಿ ಪಂಚಭೂತಗಳೆಂದು ಹೆಸರಿಸುತ್ತೇವೆ. ಇವೆಲ್ಲಕ್ಕೂ ಅಭಿಮಾನಿ ದೇವತೆಗಳು, ಪ್ರತ್ಯಧಿದೇವತೆಗಳನ್ನೂ ಕಲ್ಪಿಸಲಾಗಿದೆ. ಇವೆಲ್ಲಕ್ಕೂ ಹೊರತಾದ ಕಾಲಕ್ಕೂ ಓರ್ವ ಅಭಿಮಾನಿ ದೇವತೆಯಿದ್ದಾನೆ. ಆತನೇ ಕಾಲಭೈರವ. ಇವೆಲ್ಲವನ್ನೂ ಸರಿತೂಗಿಸಿಕೊಂಡು ನಡೆಸುವಾತನೇ ಕಾಲಭೈರವನೆನ್ನುವುದು ಸಿದ್ಧರ ಮತ.
ಕಾಲಭೈರವನ ಭೌತಿಕ ಸ್ವರೂಪಗಳನ್ನು ಕುರಿತಂತೆ ಹಿಂದಿನ ಲೇಖನಗಳಲ್ಲಿ ಅನೇಕ ಶ್ಲೋಕಗಳು, ಸ್ತುತಿಗಳನ್ನು ನೀಡಲಾಗಿದೆ. ಈ ಲೇಖನದಲ್ಲಿ, ಕಾಲವೆಂಬ ಅಮೂರ್ತಕ್ಕೆ ರೂಪ ನೀಡಿ ಅದನ್ನು ಹೇಗೆ ಸಮರ್ಥವಾಗಿ, ಅರ್ಥಪೂರ್ಣವಾಗಿ ಬಳಸಲಾಗಿದೆ ಎಂಬ ಬಗ್ಗೆ ವಿವರಗಳಿವೆ. ಸಮಯ ಪರಿಪಾಲನೆಯ ಅಗತ್ಯ ಮತ್ತು ಮಹತ್ವಗಳನ್ನು ನಾವೆಲ್ಲರೂ ಚೆನ್ನಾಗಿ ತಿಳಿದಿದ್ದೇವೆ. ಸಮಯದ ಸದುಪಯೋಗ ಮತ್ತು ದುರುಪಯೋಗಗಳು ನಮ್ಮೆಲ್ಲರ ಅನುಭವದಲ್ಲಿದೆ. ಕಾಲಭೈರವನ ಜನನ ವೃತ್ತಾಂತದಲ್ಲಿ ತಿಳಿದುಬರುವಂತೆ, ಬ್ರಹ್ಮನ ಅಹಂಕಾರವನ್ನು ಅಡಗಿಸಲೆಂದು ಆತನ ಆವಿರ್ಭಾವವಾಯಿತಲ್ಲವೆ. ಇದೇ ಕಾಲಭೈರವನು ಮುಂದೆ ಬ್ರಹ್ಮಹತ್ಯಾ ದೋಷದ ನಿವೃತ್ತಿಗೆಂದು ಎಲ್ಲೆಡೆ ಅಲೆದಾಡಿ, ಕಾಶಿಯ ಕಪಾಲಮೋಚನ ಕ್ಷೇತ್ರದಲ್ಲಿ ಅದರಿಂದ ವಿಮುಕ್ತಿ ಪಡೆದನು. ಇಲ್ಲಿ ಗಮನಿಸಬಹುದಾದ ತಾತ್ವಿಕ ಅಂಶವೆಂದರೆ, ಒಳ್ಳೆಯ ಕಾಲ ಅಥವಾ ಕೆಟ್ಟ ಕಾಲಗಳ ಪ್ರಭಾವವು ಮಾನವರಂತೆಯೆ ದೇವರನ್ನೂ ಬಿಟ್ಟದ್ದಲ್ಲ. ವಿವೇಚನೆಯು ಒಂದೆಡೆ ಕೆಲಸಮಾಡಿದರೂ, ಆ ಸಮಯದಲ್ಲಿ ಹಾರಿಹೋಗುವ ವಿವೇಚನಾ ರಹಿತ ವರ್ತನೆಯ ಪ್ರಭಾವಗಳನ್ನು ಈ ಕತೆಯಲ್ಲಿ ಸಂಕೇತಿಕವಾಗಿ ನಿರೂಪಿಸಲಾಗಿದೆ.
ಕಾಲ ಕಾಲಂ ಅಂಬುಜಾಕ್ಷಂ ಎಂಬ ಪ್ರಯೋಗವು ಶ್ರೀ ಶಂಕರಾಚಾರ್ಯರ ಕಾಲಭೈರವಾಷ್ಟಕದಲ್ಲಿ ಇದೆ. ಆದರೆ ಇಲ್ಲಿನ ಕಾಲನು ಸಮಯವಲ್ಲ, ಬದಲಾಗಿ ಕಾಲ ಅಥವಾ ಮೃತ್ಯು. ಇನ್ನೊಂದು ರೀತಿಯಲ್ಲಿ ಇದಕ್ಕೊಂದು ವಿಶೇಷ ಅರ್ಥವೂ ಇದೆ. ಮೃತ್ಯು ಸಂಭವಿಸಿದ ನಂತರ ವ್ಯಕ್ತಿ/ಜೀವಿಯ ಬಾಹ್ಯ ಅಸ್ತಿತ್ವ ನಷ್ಟಗೊಳ್ಳುತ್ತದೆ. ಅದು ವರ್ತಮಾನ ಕಾಲದಲ್ಲಿ ಕಾಣಿಸದು. ಭೂತಕಾಲಕ್ಕೆ ಸರಿಯುತ್ತದೆ. ಸಮಯದ ವಿವಿಧ ಆಯಾಮಗಳನ್ನು ಕನ್ನಡದ ಪ್ರೇಮಕವಿ ಕೆ.ಎಸ್. ನರಸಿಂಹ ಸ್ವಾಮಿಯವರು ತಮ್ಮ ಗಡಿಯಾರದ ಅಂಗಡಿಯಲ್ಲಿ ಎಂಬ ಕವಿತೆಯಲ್ಲಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಅಲ್ಲಿನ ಒಳನೋಟವು ಕಾಲಭೈರವನೆಂಬ ಸಮಯದ ಅಧಿದೇವತೆಯನ್ನು ಕಾಣಿಸಲು ಸಹಾಯಕವಾಗಿದೆ.
ಭೈರವನ ಕುರಿತಾದ ಸಾಹಿತ್ಯವನ್ನು ಓದಿದವರಿಗೆ ಆತನ ಎಂಟು ರೂಪಗಳ ಪರಿಚಯವಿರುತ್ತದೆ. ಅವೆಂದರೆ, ೧. ಅಸಿತಾಂಗ ಭೈರವ, ೨. ರುರು ಭೈರವ, ೩. ಚಂಡ ಭೈರವ, ೪. ಕ್ರೋಧ ಭೈರವ, ಉನ್ಮತ್ತ ಭೈರವ, ೫. ಕಪಾಲ ಭೈರವ, ೬. ಭೀಷಣ ಭೈರವ ಮತ್ತು ೮. ಸಂಹಾರ ಭೈರವ. ಈ ಹೆಸರುಗಳನ್ನು ಓದುವಾಗ, ಮೇಲ್ನೋಟಕ್ಕೆ ಅವು ಭಯಾನಕತೆಯ ಇನ್ನೊಂದು ರೂಪದಂತೆ ಕಾಣುತ್ತದೆಯಾದರೂ, ಇವೆಲ್ಲವೂ ಯಾವನೇ ಮನುಷ್ಯ ತಳೆಯಬಹುದಾದ ರೂಪಗಳೇ ಸರಿ. ಅವನ ವರ್ತನೆಯೂ ಹಾಗಿದ್ದೀತು. ಆದರೆ ಅವುಗಳಲ್ಲಿ ತಾತ್ವಿಕ ಅಂಶಗಳಿವೆ. ಆ ದೃಷ್ಟಿಯಲ್ಲಿ ಕಾಣುವ ಅಂಶಗಳ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ನೀಡಲಾಗಿದೆ. ಮುಂದೆ ಪ್ರತಿಯೊಂದು ರೂಪಕ್ಕೆ ೮ ರೂಪಗಳಂತೆ ಒಟ್ಟು ೬೪ ರೂಪಗಳಿವೆ. ಈ ಅರವತ್ನಾಲ್ಕು ರೂಪಗಳನ್ನು ಆದಿಚುಂಚನಗಿರಿಯ ಶ್ರೀ ಕಾಲಭೈರವ ಮಂದಿರದಲ್ಲಿ ಸುಂದರವಾಗಿ, ಅವುಗಳ ಹೆಸರುಗಳ ಹೆಸರುಗಳ ಸಹಿತ ಶಿಲೆಯಲ್ಲಿ ನಿರ್ಮಿಸಲಾಗಿದೆ. ಅದರ ಕೆಲವು ಚಿತ್ರಗಳನ್ನು ಈ ಲೇಖನದಲ್ಲಿ ಬಳಸಿಕೊಳ್ಳಲಾಗಿದೆ.
೧. ಅಸಿತಾಂಗ ಭೈರವ - ಸೃಷ್ಟಿ ಸಾಮರ್ಥ್ಯವನ್ನು ನೀಡಬಲ್ಲವ
೨.ರುರು ಭೈರವ - ಗುರು ಸ್ವರೂಪನಾದವನು
೩. ಚಂಡಭೈರವ - ಸ್ಪರ್ಧೆಗಳು ಮತ್ತು ಪ್ರತಿಸ್ಪರ್ಧಿಗಳನ್ನು ಗೆಲ್ಲುವ ಸತ್ವವನ್ನು ನೀಡುವವನು
೪. ಕ್ರೋಧ ಭೈರವ - ಬೃಹತ್ ಕ್ರಮಗಳನ್ನು ಕೈಗೊಳ್ಳಲು ಪ್ರೇರೇಪಣೆ ನೀಡುವವನು
೫. ಉನ್ಮತ್ತ ಭೈರವ - ಋಣಾತ್ಮಕ ಅಹಂಕಾರ ಮತ್ತು ವಿನಾಶಕರ ಸ್ವಪ್ರಶಂಸೆಗಳನ್ನು ಹತ್ತಿಕ್ಕುವವನು
೬. ಕಪಾಲ ಭೈರವ - ಎಲ್ಲ ಅಪ್ರಯೋಜಕವಾದ ಕಾರ್ಯಗಳಿಗೆ ಅಂತ್ಯ ಹಾಡುವವನು
೭. ಭೀಷಣ ಭೈರವ - ದುಷ್ಟ ಶಕ್ತಿಗಳು ಮತ್ತು ಋಣಾತ್ಮಕ ಭಾವಗಳಿಂದ ಮುಕ್ತಿ ನೀಡುವವನು
8. ಸಂಹಾರ ಭೈರವ - ಪುರಾತನ ಕರ್ಮಭಾರಗಳ ಪರಿಹಾರಕ.
* * * * * * *