ಮಂಗಳವಾರ, ಫೆಬ್ರವರಿ 8, 2011

ಶ್ರೀ ಕಾಲಭೈರವ ದರ್ಶನ


ಯೋಗಾಯೋಗ ಎನ್ನುವ ಮಾತು ಒಂದಿದೆ. ಅನಿರೀಕ್ಷಿತವಾದದ್ದು ಸಂಭವಿಸಿ, ಉದ್ದೇಶಿತ ಕಾರ್ಯದಲ್ಲಿ ಪ್ರವೃತ್ತರನ್ನಾಗಿ ಮಾಡಲು ಪ್ರೇರಣೆ ನೀಡುವಂಥ ಸಂದರ್ಭಕ್ಕೆ ನಾವು ಯಾರೂ ಕಾರಣರಾಗಿರುವದಿಲ್ಲ. ಆದರೆ ಸಮಾನ ಮನಸ್ಕರು ಒಂದೆಡೆ ಸೇರಲು ಅನುಕೂಲವಾಗುವಂಥ ವ್ಯವಸ್ಥೆ ತಾನಾಗಿ ರೂಪುಗೊಳ್ಳುತ್ತದೆ. ಅದನ್ನೇ ಯೋಗಾಯೋಗ ಎನ್ನಬಹುದು. ಈ ಪ್ರಕಟಣೆಯ ಸಂದರ್ಭದಲ್ಲೂ ಹಾಗೇ ಆಗಿದೆ. 

2019ರ ಜೂನ್ ತಿಂಗಳಿನಲ್ಲಿ ಶ್ರೀ ರಮೇಶ್ ಜೋಗಿ ಎಂಬ ಸನ್ಮಿತ್ರರು ಫೇಸ್ ಬುಕ್ ನಲ್ಲಿ ನನ್ನನ್ನು ಸಂಪರ್ಕಿಸಿದರು. ಅವರು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾಲಭೈರವನ ದೇವಾಲಯದ ನಿರ್ಮಾಣದಲ್ಲಿ ತೊಡಗಿರುವುದಾಗಿ ತಿಳಿಸಿದರು. ಅವರು ಜೋಗಿ ಸಮುದಾಯ ಎಂದರೆ ಬಳೆಗಾರರ ಸಮಾಜಕ್ಕೆ ಸೇರಿದವರಾಗಿದ್ದು, ಅವರಿಗೂ ಕುಲದೇವತೆ ಕಾಲಭೈರವನೆಂದು, ಈ ದೇವತೆಯ ಬಗ್ಗೆ ಹೆಚ್ಚಿನ ವಿಷಯವನ್ನು ಸಮುದಾಯದ ಸದಸ್ಯರಿಗೆ ತಲುಪಿಸಲು ನಾನು ಬರೆದಿರುವ ಬ್ಲಾಗ್ ನ ಲೇಖನಗಳನ್ನು ಪ್ರಕಟಿಸಬೇಕೆಂದು ಮನವಿ ಮಾಡಿದರು. 

ಅದರಂತೆ ಅವರಿಗೆ ನನ್ನ ಪರಿಚಯ ಮತ್ತು ಬ್ಲಾಗ್ ನ ವಿವರಗಳನ್ನು ಕಳಿಸಿಕೊಟ್ಟೆ. ನಂತರದ ದಿನಗಳಲ್ಲಿ ಪ್ರತಿ ಸೋಮವಾರದಂದು ಒಂದು ಲೇಖನ ಪ್ರಕಟಮಾಡುವುದಾಗಿ ತಿಳಿಸಿ, ಅದರಂತೆ ದಿನಾಂಕ 29-07-2019ರಿಂದ ಲೇಖನ ಮಾಲೆಯನ್ನು ಶ್ರೀ ಕಾಲಭೈರವ ದರ್ಶನ ಎಂಬ ಶೀರ್ಷಿಕೆಯ ಅಡಿ ವಾಟ್ಸಾಪ್ ಗುಂಪಿನಲ್ಲಿ ಆರಂಭಿಸಲಾಯಿತು. ಪ್ರಕಾಶಕರ ಹಲವಾರು ಮನವಿಗಳ ನಂತರವೂ ಅಲ್ಲಿ ಕಾಲಭೈರವನ ವಿಷಯಕ್ಕಿಂತ ಬೇರೆ ಸಂಗತಿಗಳೇ ಮುಂದುವರೆಯುತ್ತಿದ್ದವು. ಜನರ ಪ್ರತಿಕ್ರಿಯೆಗಳೂ ತಿಳಿಯುವಂತಿರಲಿಲ್ಲ. ಹೀಗಾಗಿ ಶ್ರೀ ರಮೇಶ್ ಜೋಗಿಯವರಿಗೆ ಫೇಸ್ ಬುಕ್ ಪುಟ ಆರಂಭಿಸುವುದು ಅನಿವಾರ್ಯವಾಯಿತು. ಇಲ್ಲಿಯೂ ಸದಸ್ಯರನ್ನು ಒಗ್ಗೂಡಿಸಿಕೊಂಡು, ದೇವಾಲಯಕ್ಕೆ ಸಂಬಂಧಿಸಿದ ವಿಷಯಗಳನ್ನು ಮಾತ್ರವೇ ಪ್ರಕಟಿಸುವ ಅನಿವಾರ್ಯತೆಯಿದೆ. ಸದಸ್ಯರು ಸಹಕರಿಸುವರೆಂದು ನಂಬಿ ಪ್ರಾರಂಭಿಸಿದ್ದೇನೆ. ಇದು ಮುಗಿಯುವಾಗ ಒಂದು ವರ್ಷ ಸಲ್ಲುತ್ತದೆಯೆಂದು ತಿಳಿದಿರುವೆ. ನೈಜ ಆಸಕ್ತರಿಗಾದರೂ ಮಾಹಿತಿ ತಲುಪುತ್ತದೆ ಎನ್ನುವುದೇ ಉದ್ದೇಶ. 

ಇದನ್ನು ಈ ಹಿಂದೆ ಪ್ರಕಟವಾಗಿರುವ ಬ್ಲಾಗ್ ನಿಂದ ನಿರ್ವಹಿಸಲಾಗುತ್ತಿದೆ. ಚಿತ್ರ ಇಲ್ಲವೇ ಪಠ್ಯದ ಮೇಲೆ ಕ್ಲಿಕ್ ಮಾಡುವುದರ ಮೂಲಕ ಮೂಲ ಲೇಖನವನ್ನು ತಲುಪಬಹುದು. ಇದು ಸೌಕರ್ಯವಾಗಿದೆಯೇ ಎಂದು ತಿಳಿಸಲು ಓದುಗರನ್ನು ಕೋರುತ್ತೇನೆ. 


ಶಂಕರ ಅಜ್ಜಂಪುರ


ಶ್ರೀ ಕಾಲಭೈರವ ದರ್ಶನ

ಕಾಲಭೈರವನ ಧ್ಯಾನ ಶ್ಲೋಕ ಹೀಗಿದೆ :

ನಗ್ನ ರೂಪಂ ತ್ರಿನೇತ್ರಂ ಚ ಸರ್ಪಾಭರಣ ಭೂಷಿತಂ |
ರತ್ನಕುಂಡಲ  ಸಂಯುಕ್ತಂ ಶಿರೋಮಾಲ ವಿಭೂಷಿತಂ ||
ಖಡ್ಗಂ ಶೂಲಂ ಕಪಾಲಂ ಚ ಡಮರುಂ ಭೀಮ ದಂಷ್ಟ್ರಕಂ ||
ಬಿಭ್ರಾಣಂ ಶುನಕಾರೂಧಂ ಕ್ಷೇತ್ರಪಾಲಂ ಅಹಂ ಭಜೆ |

ಯಾವದೇ ದೇವತೆಯನ್ನು ಆರಾಧಿಸಬೇಕಿದ್ದರೂ, ಅದರ ರೂಪ-ಲಕ್ಷಣಗಳನ್ನು ಆಗಮಶಾಸ್ತ್ರ ಸಾಹಿತ್ಯದಲ್ಲಿ ವರ್ಣಿಸಲಾಗಿರುತ್ತದೆ. ಅದನ್ನು ಅನುಸರಿಸಿಯೇ ಶಿಲ್ಪ, ಚಿತ್ರಗಳ ನಿರ್ಮಾಣವೂ ನಡೆಯುತ್ತದೆ. ಹೀಗೆ ಮಾಡುವುದರಿಂದ ಶಿಲ್ಪಗಳಲ್ಲಿ ಏಕರೂಪತೆ ಸಾಧಿತವಾಗುತ್ತದೆ. ಇದನ್ನು ಓದಿ ಮನನ ಮಾಡಿಕೊಂಡು ಪ್ರಾರ್ಥನೆ ಮಾಡುವುದರಿಂದ ಶ್ರೀ ಕಾಲಬೈರವನ ಸ್ವರೂಪವನ್ನು ತಿಳಿದಂತೆ ಆಗುವುದರಿಂದ, ದಿನ ನಿತ್ಯದ ಪ್ರಾರ್ಥನೆಯಲ್ಲಿ ಇದನ್ನು ಸೇರಿಸಿಕೊಳ್ಳಬಹುದು.
ಈ ಶ್ಲೋಕದ ಅನುಸಾರವಾಗಿ ಕಡೆಯಲಾಗಿರುವ ಕಾಲ ಭೈರವನ  ಹೊಯ್ಸಳ ಮಾದರಿಯ  ಈ ಸುಂದರ ಶಿಲ್ಪವನ್ನು
ಮೇಡಂ ಕರಿನ್ ಲದ್ರೆಚ್ ರ ಸಂಗ್ರಹದಿಂದ ಆರಿಸಲಾಗಿದೆ. ಇವರ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ ಬರೆಯುತ್ತೇನೆ.