ಶನಿವಾರ, ಏಪ್ರಿಲ್ 9, 2011

ಕಾಲಭೈರವನ ಚಿತ್ರದ ಜಾಡುಹಿಡಿದು........


ಕಾಲಭೈರವನ ಚಿತ್ರದ ಜಾಡುಹಿಡಿದು........ 
     ಹಿಂದಿನ ಸಂಚಿಕೆಗಳಲ್ಲಿ ಪ್ರಕಟಿಸಿದ ಉದ್ದೇಶಗಳ ಅನ್ವಯ, ಶ್ರೀಕಾಲಭೈರವ ದೇವತೆಯ ಚಿತ್ರಕ್ಕೆ ಸಂಬಂಧಿಸಿದಂತೆ, ಕೆಲವು ಆಸಕ್ತಿಕ ಸಂಗತಿಗಳನ್ನು ತಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತಿರುವೆ.
     ಇಲ್ಲಿ ಮೂರು ಚಿತ್ರಗಳಿವೆ.  ಮೂರು ಚಿತ್ರಗಳಲ್ಲಿ ಕಂಡುಬಂದ ವ್ಯತ್ಯಾಸಗಳನ್ನು ಶ್ರೀ ಕಾಲಭೈರವ ಮೂರ್ತಿಯ ಧ್ಯಾನ ಶ್ಲೋಕದ ಕ್ರಮದಲ್ಲಿ ಪರಿಷ್ಕರಿಸಲಾಗಿದೆ. 
    ಒಂದನೆಯ ಚಿತ್ರದಲ್ಲಿ ಕಾಲಭೈರವನಿಗೆ ಎಡು ಕೈಗಳು ಮಾತ್ರವೇ ಇದೆ.  ಒಂದು ಕೈಯಲ್ಲಿ ನವಿಲುಗರಿಯ ಪುಚ್ಛವಿದೆಯಾದರೆ, ಇನ್ನೊಂದರಲ್ಲಿ ಅಗ್ನಿಜ್ವಾಲೆಯಿರುವ ಪಾತ್ರೆಯಿದೆ.  ಈ ಎರಡೂ ಅಂಶಗಳೂ ಶ್ರೀಕಾಭೈರವನ ಧ್ಯಾನ ಶ್ಲೋಕಕ್ಕೆ ಹೊಂದಿಕೆಯಾಗುತ್ತಿಲ್ಲ.
ಚಿತ್ರ 1

ಚಿತ್ರ 2

ಚಿತ್ರ 3
      ಈ ಚಿತ್ರ ಅಸಮರ್ಪಕವಾಗಿದೆಯೆಂದು ಭಾವಿಸಿದ ನನಗೆ ಇದನ್ನು ಸರಿಪಡಿಸುವ ಉತ್ಸಾಹ 1983ರ ಸುಮಾರಿನಲ್ಲಿ ಬಂದಿತು.  ನಾನು ಎಲ್.ಆರ್.ಡಿ.ಇ. ಗೆ ಸೇರಿದ ದಿನಗಳವು.  ಆಗ ಅಲ್ಲಿ ತಂತ್ರಜ್ಞರಲ್ಲದೇ ಕಲಾವಿದರು ಮತ್ತು ಇತರ ವೃತ್ತಿಕುಶಲರೂ ಇದ್ದರು.  ಅಲ್ಲಿದ್ದ ಶ್ರೀ ವೇಂಕಟೇಶ್ ಎಂಬುವರು ಕಿವುಡ-ಮೂಕರು.  ಅದ್ಭುತ ಕಲಾವಿದರಾದ ಅವರು ಸಂಸ್ಠೆಯು ಪ್ರಕಟಿಸುವ ವೈಜ್ಞಾನಿಕ ಮಾಹಿತಿಗಳಿಗೆ ಪೂರಕ ಚಿತ್ರಗಳನ್ನು ರಚಿಸುತ್ತಿದ್ದರು.  ಆಗ ನಾನು ನನ್ನಲ್ಲಿದ್ದ ಚಿತ್ರವನ್ನು ನನಗೆ ತಿಳಿದಂತೆ ನಕಲುಮಾಡಿ, ದೀರ್ಘ ಪತ್ರವೊಂದನ್ನು ಬರೆದು ಸೂಕ್ತವಾಗಿ ಚಿತ್ರಿಸಿಕೊಡಬೇಕೆಂದು ಕೋರಿದೆ.  ಅವರು  ಚಿತ್ರವನ್ನು ಪೂರೈಸಿ ನನಗೆ ನೀಡಿದಾಗ, ಕಾಲಭೈರವನ ಹಿಂಬದಿಯಲ್ಲಿ ದಕ್ಷಿಣಭಾರತ ಶೈಲಿಯದೇಗುಲದ ಚಿತ್ರವನ್ನು ರಚಿಸಿದ್ದರು. ಅದು ನನಗೆ ಸರಿಕಾಣದೇ, ಉತ್ತರ ಭಾರತ ಶೈಲಿಯ ದೇವಾಲಯ ಬೇಕೆಂದೆ.  ಅವರು ಬೇಸರವಿಲ್ಲದೆ ತಿದ್ದಿಕೊಟ್ಟರು.  ಸರ್ವಾಂಗ ಸುಂದರವಾಗಿ ಮೂಡಿಬಂದ ಆ ಚಿತ್ರದ ಸೌಂದರ್ಯವನ್ನೇ ಗಮನಿಸಿದನೇ ವಿನಾ, ಅದರಲ್ಲೂ ಉಳಿದುಕೊಂಡಿದ್ದ ಕೊರತೆ ನನಗಾಗ ತಿಳಿದಿರಲಿಲ್ಲ.  ಏಕೆಂದರೆ ಆಗ ನಾನಿನ್ನೂ ಧ್ಯಾನ ಶ್ಲೋಕವನನ್ನು ಸರಿಯಾಗಿ ಅರ್ಥೈಸಿಕೊಂಡಿರಲಿಲ್ಲ, ಹೀಗಾಗಿ ತ್ರಿಶೂಲವಿರಬೇಕಾದ ಕೈನಲ್ಲಿ ಅಗ್ನಿಜ್ವಾಲೆಯ ಪಾತ್ರೆ ಹಾಗೆ ಉಳಿಯಿತು.  ಅದನ್ನು ನಾನೇ ಪರಿಷ್ಕರಿಸುವ ಸಂದರ್ಭ ಬಂದಿತು.   ನಾನು ಫೋಟೋಷಾಪ್ ತಂತ್ರಾಂಶವನ್ನು ಕಲಿತ ನಂತರ ಒಮ್ಮೆ ಕಾಲಭೈರವನ ಕೈಯಲ್ಲಿದ್ದ ಅಗ್ನಿಜ್ವಾಲೆಯ ಪಾತ್ರೆಯ ಬದಲಾಗಿ ತ್ರಿಶೂಲವನ್ನು ರಚಿಸಿದಾಗ ನನ್ನ ಸಂಗ್ರಹದ ಕಾಲಭೈರವನ ಚಿತ್ರ ಸರಿಯಾದ ರೂಪ ತಲೆದಂತೆ ಆಯಿತು !

1 ಕಾಮೆಂಟ್‌: