ಶನಿವಾರ, ಜನವರಿ 21, 2023

ಕಾಲಭೈರವನ ಚಿತ್ರದ ಜಾಡುಹಿಡಿದು........ 
     ಹಿಂದಿನ ಸಂಚಿಕೆಗಳಲ್ಲಿ ಪ್ರಕಟಿಸಿದ ಉದ್ದೇಶಗಳ ಅನ್ವಯ, ಶ್ರೀಕಾಲಭೈರವ ದೇವತೆಯ ಚಿತ್ರಕ್ಕೆ ಸಂಬಂಧಿಸಿದಂತೆ, ಕೆಲವು ಆಸಕ್ತಿಕ ಸಂಗತಿಗಳನ್ನು ತಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತಿರುವೆ.
     ಇಲ್ಲಿ ಮೂರು ಚಿತ್ರಗಳಿವೆ.  ಮೂರು ಚಿತ್ರಗಳಲ್ಲಿ ಕಂಡುಬಂದ ವ್ಯತ್ಯಾಸಗಳನ್ನು ಶ್ರೀ ಕಾಲಭೈರವ ಮೂರ್ತಿಯ ಧ್ಯಾನ ಶ್ಲೋಕದ ಕ್ರಮದಲ್ಲಿ ಪರಿಷ್ಕರಿಸಲಾಗಿದೆ. 
    ಒಂದನೆಯ ಚಿತ್ರದಲ್ಲಿ ಕಾಲಭೈರವನಿಗೆ ಎಡು ಕೈಗಳು ಮಾತ್ರವೇ ಇದೆ.  ಒಂದು ಕೈಯಲ್ಲಿ ನವಿಲುಗರಿಯ ಪುಚ್ಛವಿದೆಯಾದರೆ, ಇನ್ನೊಂದರಲ್ಲಿ ಅಗ್ನಿಜ್ವಾಲೆಯಿರುವ ಪಾತ್ರೆಯಿದೆ.  ಈ ಎರಡೂ ಅಂಶಗಳೂ ಶ್ರೀಕಾಭೈರವನ ಧ್ಯಾನ ಶ್ಲೋಕಕ್ಕೆ ಹೊಂದಿಕೆಯಾಗುತ್ತಿಲ್ಲ.
ಚಿತ್ರ 1

ಚಿತ್ರ 2

ಚಿತ್ರ 3
      ಈ ಚಿತ್ರ ಅಸಮರ್ಪಕವಾಗಿದೆಯೆಂದು ಭಾವಿಸಿದ ನನಗೆ ಇದನ್ನು ಸರಿಪಡಿಸುವ ಉತ್ಸಾಹ 1983ರ ಸುಮಾರಿನಲ್ಲಿ ಬಂದಿತು.  ನಾನು ಎಲ್.ಆರ್.ಡಿ.ಇ. ಗೆ ಸೇರಿದ ದಿನಗಳವು.  ಆಗ ಅಲ್ಲಿ ತಂತ್ರಜ್ಞರಲ್ಲದೇ ಕಲಾವಿದರು ಮತ್ತು ಇತರ ವೃತ್ತಿಕುಶಲರೂ ಇದ್ದರು.  ಅಲ್ಲಿದ್ದ ಶ್ರೀ ವೇಂಕಟೇಶ್ ಎಂಬುವರು ಕಿವುಡ-ಮೂಕರು.  ಅದ್ಭುತ ಕಲಾವಿದರಾದ ಅವರು ಸಂಸ್ಠೆಯು ಪ್ರಕಟಿಸುವ ವೈಜ್ಞಾನಿಕ ಮಾಹಿತಿಗಳಿಗೆ ಪೂರಕ ಚಿತ್ರಗಳನ್ನು ರಚಿಸುತ್ತಿದ್ದರು.  ಆಗ ನಾನು ನನ್ನಲ್ಲಿದ್ದ ಚಿತ್ರವನ್ನು ನನಗೆ ತಿಳಿದಂತೆ ನಕಲುಮಾಡಿ, ದೀರ್ಘ ಪತ್ರವೊಂದನ್ನು ಬರೆದು ಸೂಕ್ತವಾಗಿ ಚಿತ್ರಿಸಿಕೊಡಬೇಕೆಂದು ಕೋರಿದೆ.  ಅವರು  ಚಿತ್ರವನ್ನು ಪೂರೈಸಿ ನನಗೆ ನೀಡಿದಾಗ, ಕಾಲಭೈರವನ ಹಿಂಬದಿಯಲ್ಲಿ ದಕ್ಷಿಣಭಾರತ ಶೈಲಿಯದೇಗುಲದ ಚಿತ್ರವನ್ನು ರಚಿಸಿದ್ದರು. ಅದು ನನಗೆ ಸರಿಕಾಣದೇ, ಉತ್ತರ ಭಾರತ ಶೈಲಿಯ ದೇವಾಲಯ ಬೇಕೆಂದೆ.  ಅವರು ಬೇಸರವಿಲ್ಲದೆ ತಿದ್ದಿಕೊಟ್ಟರು.  ಸರ್ವಾಂಗ ಸುಂದರವಾಗಿ ಮೂಡಿಬಂದ ಆ ಚಿತ್ರದ ಸೌಂದರ್ಯವನ್ನೇ ಗಮನಿಸಿದನೇ ವಿನಾ, ಅದರಲ್ಲೂ ಉಳಿದುಕೊಂಡಿದ್ದ ಕೊರತೆ ನನಗಾಗ ತಿಳಿದಿರಲಿಲ್ಲ.  ಏಕೆಂದರೆ ಆಗ ನಾನಿನ್ನೂ ಧ್ಯಾನ ಶ್ಲೋಕವನನ್ನು ಸರಿಯಾಗಿ ಅರ್ಥೈಸಿಕೊಂಡಿರಲಿಲ್ಲ, ಹೀಗಾಗಿ ತ್ರಿಶೂಲವಿರಬೇಕಾದ ಕೈನಲ್ಲಿ ಅಗ್ನಿಜ್ವಾಲೆಯ ಪಾತ್ರೆ ಹಾಗೆ ಉಳಿಯಿತು.  ಅದನ್ನು ನಾನೇ ಪರಿಷ್ಕರಿಸುವ ಸಂದರ್ಭ ಬಂದಿತು.   ನಾನು ಫೋಟೋಷಾಪ್ ತಂತ್ರಾಂಶವನ್ನು ಕಲಿತ ನಂತರ ಒಮ್ಮೆ ಕಾಲಭೈರವನ ಕೈಯಲ್ಲಿದ್ದ ಅಗ್ನಿಜ್ವಾಲೆಯ ಪಾತ್ರೆಯ ಬದಲಾಗಿ ತ್ರಿಶೂಲವನ್ನು ರಚಿಸಿದಾಗ ನನ್ನ ಸಂಗ್ರಹದ ಕಾಲಭೈರವನ ಚಿತ್ರ ಸರಿಯಾದ ರೂಪ ತಲೆದಂತೆ ಆಯಿತು !

ಗುರುವಾರ, ಜುಲೈ 2, 2015

ಕಾಲಿಂಜರ್ ದುರ್ಗದ ಭೈರವ


ಆತ್ಮೀಯರೇ,

ಅಜ್ಜಂಪುರದ ನನ್ನ ಪೂರ್ವಜರು ನಂಬಿ ನಡೆದುಕೊಂಡು ಬಂದ ದೈವದ ಬಗ್ಗೆ ನನ್ನ ಆಸಕ್ತಿ ಮೂಡಿದ್ದು ಹೇಗೆಂಬುದನ್ನು ಆರಂಭಿಕ ಲೇಖನದಲ್ಲಿ ಹೇಳಿದ್ದೇನೆ. ಹೀಗೆ ಆರಂಭಗೊಂಡ ಲೇಖನಮಾಲೆಯನ್ನು ಇದೀಗ ದೂರದ ಅಮೆರಿಕೆಯಲ್ಲಿ ಕುಳಿತು ಅಂತ್ಯಗೊಳಿಸುತ್ತಿದ್ದೇನೆ. ಇದು ಈ ಸಂಗ್ರಹದಲ್ಲಿ ಭೈರವನನ್ನು ಕುರಿತಾದ ಐವತ್ತನೆಯ ಲೇಖನ. ಬಹುಶಃ ಇದರೊಂದಿಗೆ ಈ ಮಾಲಿಕೆಯನ್ನು ಮುಗಿಸಬಹುದೆಂದು ತೋರುತ್ತಿದೆ. ಹಾಗಿದ್ದೂ ವಿಶೇಷ ಮಾಹಿತಿಗಳು, ಉತ್ಸವದ ವಿವರಗಳನ್ನು ಓದುಗರು ಕಳಿಸುವುದಾದಲ್ಲಿ ಅದನ್ನು ಪ್ರಕಟಿಸುವ, ಅಲ್ಲದೆ ನನಗೆ ದೊರೆಯಬಹುದಾದ ಮಾಹಿತಿಗಳನ್ನು ಅವು ದೊರೆತಂತೆಲ್ಲ ಪ್ರಕಟಿಸುವ ಸಾಧ್ಯತೆಯಂತೂ ತೆರೆದಿರುತ್ತದೆ. ನಾಲ್ಕು ವರ್ಷಗಳಿಂದ ಮೂಡಿಬರುತ್ತಿರುವ ಈ ಮಾಲಿಕೆಗೆ ಓದುಗರು ತೋರಿದ ಆಸಕ್ತಿ ಮತ್ತು ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. 

ಭೈರವನು ನನ್ನ ಮನೆದೇವರೆಂಬ ಕಾರಣಕ್ಕೆ, ಆತನ ವಿಶೇಷತೆಗಳ ಬಗ್ಗೆ ತಿಳಿಯಲು ಮೂಡಿದ ಆಸಕ್ತಿಯೇ ಈ ಬ್ಲಾಗ್ ನ ರಚನೆಗೆ ಕಾರಣವಾಯಿತು.  ಆತನ ಬಗ್ಗೆ ಹೆಚ್ಚು ತಿಳುವಳಿಕೆ, ಸಾಹಿತ್ಯಗಳು ಲಭ್ಯವಿಲ್ಲದಿದ್ದಾಗ, ಅಂತರಜಾಲದಲ್ಲಿ ದೊರೆತ ಮಾಹಿತಿಗಳು ಅದರ ಕೊರತೆಯನ್ನು ನೀಗಿದವು. ಅಂತೆಯೇ ಭೈರವನ ಆರಾಧಕರಾದ ಅನೇಕ ವ್ಯಕ್ತಿಗಳು, ಸಂಘ-ಸಂಸ್ಥೆಗಳು ಲೇಖನ-ಚಿತ್ರ-ಮಾಹಿತಿಗಳ ತಮ್ಮ ಕೊಡುಗೆಯನ್ನು ನೀಡುವುದರ ಮೂಲಕ ಈ ಬ್ಲಾಗನ್ನು ಶ್ರೀಮಂತಗೊಳಿಸಿದ್ದಾರೆ. ಎಲ್ಲರಿಗೂ ಧನ್ಯವಾದಗಳು. 
---------------------------------------------------------------------------------

ಕಾಲಿಂಜರ ಕೋಟೆ

ಕಾಲಿಂಜರ ಕೋಟೆಯು ಉತ್ತರಪ್ರದೇಶದ ಬುಂದೇಲ್ ಖಂಡದಲ್ಲಿರುವ ಒಂದು ಪುರಾತನ ದುರ್ಗ. ಇದರ ಹೆಸರು ಮಹಾಭಾರತದಲ್ಲಿಯೂ ಪ್ರಸ್ತಾಪಗೊಂಡಿದೆ. ಕಾಲಿಂಜರ ಎಂದರೆ ಕಾಲ ನಾಶಕ ಎಂದು ಅರ್ಥ. ಪೌರಾಣಿಕ ಸಮುದ್ರ ಮಂಥನ ಕಾಲಕ್ಕೆ ಉತ್ಪನ್ನವಾದ ವಿಷವನ್ನು ಶಿವನು ಕುಡಿದು, ತನ್ನ ಗಂಟಲಿನಲ್ಲಿ ಧರಿಸಿದನು. ಹೀಗಾಗಿ ಕಾಲಿಂಜರ ಕೋಟೆಯಲ್ಲಿರುವ ಶಿವನನ್ನು ನೀಲಕಂಠ ಎಂದೇ ಕರೆಯುವರು. ಪರ್ವತ ಶ್ರೇಣಿಗಳಿರುವ ಈ ಪ್ರದೇಶವು ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವುದರ ಜತೆಗೇ,  ಧ್ಯಾನ, ತಪಸ್ಸುಗಳಿಗೂ ಪ್ರೇರಕವಾಗಿದೆ. 
ಭೈರವ ಸಾಧಕರು ಪೂಜಿಸಿದ ವಿಗ್ರಹಗಳು

ಭೈರವನ ಮತ್ತೊಂದು ಬೃಹತ್ ಗಾತ್ರದ ವಿಗ್ರಹ.
ಎಡ ಪಕ್ಕದಲ್ಲಿರುವ ವ್ಯಕ್ತಿಯನ್ನು ನೋಡಿದಾಗ
ಈ ವಿಗ್ರಹದ ಗಾತ್ರ ತಿಳಿಯುತ್ತದೆ.


ಈ ಕೋಟೆಯನ್ನು ಯಾರು ಯಾವ ಉದ್ದೇಶಕ್ಕೆ ರಚಿಸಿದರೆಂಬುದು ಇಂದಿಗೂ ನಿಗೂಢ. ಆದರೆ ಕ್ರಿ.ಪೂ. ೫೦೦ರಿಂದ ೧೫೦೦ರ ಅವಧಿಯಲ್ಲಿ ಗುಜ್ಜರ ಪ್ರತೀಹಾರರು ಇದನ್ನು ಬಳಸಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡರು. ಚಂದೇಲ ರಜಪೂತರಿಗೆ ಒಲಿದ ಈ ಕೋಟೆ ಮತ್ತಾರಿಗೂ ಶಾಶ್ವತ ನೆಲೆ ಕಲ್ಪಿಸಲು ಅವಕಾಶ ನೀಡಲಿಲ್ಲವೆನ್ನುವುದು ಆಶ್ಚರ್ಯವೇ ಸರಿ. ಏಕೆಂದರೆ ಅನೇಕ ಹಿಂದೂ, ಮುಸಲ್ಮಾನರು ಈ ಕೋಟೆಯನ್ನು ವಶಪಡಿಸಿಕೊಳ್ಳಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.

ಕೋಟೆಯ ಸುತ್ತಮುತ್ತಣ ಪ್ರದೇಶದಲ್ಲಿ ಭೈರವ ಪಂಥದ ಸಾಧಕರು ನೆಲೆಸಿದ್ದರೆನ್ನಲು ಹಾಗೂ ಅವರು ತಮ್ಮ ಸಾಧನೆಗೆ ಬಳಸುತ್ತಿದ್ದ ಪೂಜಾ ವಿಗ್ರಹಗಳ ದೊಡ್ಡ ಸಂಗ್ರಹವೇ ಇಲ್ಲಿದೆ. ಕಾಪಾಲಿಕರು, ಮಾಂತ್ರಿಕರು ಭೈರವ ಸಾಧನೆ ಮಾಡಿದ ಕುರುಹುಗಳು ಹೇರಳವಾಗಿವೆ. ಇಲ್ಲಿರುವ ೨೪ ಅಡಿ ಎತ್ತರದ ೧೭ ಅಡಿ ವಿಸ್ತಾರ ಬೃಹತ್ ಭವ್ಯ ಭೈರವನ ಉಬ್ಬುಶಿಲ್ಪ ತನ್ನ ಕಲಾ ಸೌಂದರ್ಯದ ಜತೆಗೆ ಅದರ ಗಾತ್ರದಿಂದಲೂ ಗಮನ ಸೆಳೆಯುತ್ತದೆ. ಊರ್ಧ್ವ ಲಿಂಗವುಳ್ಳ ಈ ಭೈರವನಿಗೆ ೧೮ ಕೈಗಳಿವೆ. ವಿವಿಧ ಆಯುಧಗಳು, ರುಂಡಮಾಲೆ ಹಾಗೂ ೪ ಅಡಿ ಎತ್ತರದ ಭೈರವಿಯೂ ಜತೆಗಿದ್ದಾಳೆ. ಈ ವಿಗ್ರಹದಿಂದ ನೈಋತ್ಯಕ್ಕೆ ಭೈರವ ಭಾವಿಯಿದೆ.  ಕ್ರಿ.ಶ. 1138ರಲ್ಲಿ ರಚಿಸಲಾಗಿರುವ ಒಂದು ಶಾಸನ ಲಭ್ಯವಿದ್ದು, ಇದರ ಸಮೀಪ ಕಾವಡಿಯಿಂದ ನೀರುತರುತ್ತಿರುವ ವ್ಯಕ್ತಿಯೋರ್ವನ ಚಿತ್ರವಿದೆ. ಇದರ ಮುಂದೆ ಇರುವ ಭವ್ಯ ಭೈರವ ವಿಗ್ರಹವನ್ನು ಮಂಡೂಕ ಭೈರವನೆಂದು ಸ್ಥಳೀಯರು ಕರೆಯುತ್ತಾರೆ.

ಐತಿಹಾಸಿಕತೆಯೊಂದಿಗೆ ಪ್ರಾಕೃತಿಕ ಸೌಂದರ್ಯವೂ ಮೇಳೈಸಿರುವ ಈ ಭೈರವನ ಸನ್ನಿಧಿ ತನ್ನ ಪುರಾತನತ್ವದ ಜತೆಗೆ ನಿಗೂಢತೆಯನ್ನು ಉಳಿಸಿಕೊಂಡಿದೆ.


ಚಿತ್ರಕೃಪೆ - ಅಂತರಜಾಲ

* * * * * * *


ಮಂಗಳವಾರ, ಜೂನ್ 2, 2015

ಸೀತಿ ಬೆಟ್ಟದ ಕಾಲಭೈರವ ಮಂದಿರ

ಸೀತಿ ಬೆಟ್ಟದ ವಿಹಂಗಮ ದೃಶ್ಯ
ಸೀತಿ ಬೆಟ್ಟದ ಕಾಲಭೈರವ ಮಂದಿರ
   ಭಾರತೀಯ ಪುರಾಣಗಳಲ್ಲಿ ಅನೇಕ ಮಿಥ್ಯೆಗಳಿವೆ. ಅದಕ್ಕೆ ಕೋಲಾರದ ಸೀತಿ ಬೆಟ್ಟ ಕೂಡ ಹೊರತಲ್ಲ. ಈ ದೇಗುಲವು ಬೆಟ್ಟದ ಮೇಲೆ ಇದ್ದು, ಅದಕ್ಕೊಂದು ಆಸಕ್ತಿದಾಯಕ ಕಥೆ ಕೂಡ ಸೇರಿಕೊಂಡಿದೆ. ಭಸ್ಮಾಸುರನ ತೀವ್ರ ತಪಸ್ಸಿನಿಂದ ಸಂತೃಪ್ತನಾದ ಶಿವ ಅವನಿಗೆ ತನ್ನ ಆಯ್ಕೆಯ ವರವೊಂದನ್ನು ಕೇಳಲು ಹೇಳಿದ. ಆನಂದ ತುಂದಿಲನಾದ ಭಸ್ಮಾಸುರ ತಾನು ಯಾರನ್ನೂ ಬೂದಿ ಮಾಡುವ ಶಕ್ತಿ ಕೊಡು ಎಂದು ಕೇಳಿದ. ಶಿವನೇನೋ ವರ ನೀಡಿದ. ತಕ್ಷಣವೇ ಅಲ್ಲಿಂದ ಓಡಿಹೋದ. ಏಕೆಂದರೆ ತಾನು ನೀಡಿದ ವರ ಪ್ರಯೋಗ ತನ್ನ ಮೇಲೇ ಆಗಬಹುದೆಂಬ ಶಂಕೆ ಅವನದು. ಭಸ್ಮಾಸುರನ ಸಂಹಾರಕ್ಕೆಂದು ವಿಷ್ಣು ಮೋಹಿನಿಯ ರೂಪ ತಳೆದು ಆತನನ್ನು ನಿಗ್ರಹಿಸುವ ಉಪಾಯ ಹೂಡಿದ. ಇಲ್ಲಿಯವರೆಗಿನ ಕಥೆ ನಮಗೆ ತಿಳಿದಿರುವುದೇ. ಆದರೆ ಸೀತಿ ಬೆಟ್ಟದ ಭೈರವನಿಗೆ ಸಂಬಂಧಿಸಿದಂತೆ ಮುಂದಿನ ಸ್ವಾರಸ್ಯ ಹೀಗಿದೆ.  
  ದುರದೃಷ್ಟವಶಾತ್ ಭಸ್ಮಾಸುರನಿಗೆ ನೆರವು ನೀಡಿದ ಒಬ್ಬ ರೈತ ಶಿವನ ಕೋಪಕ್ಕೆ ತುತ್ತಾದ. ಅವನಿಗೆ ದಾರಿದ್ರ್ಯ ಬರಲೆಂದು ಶಿವ ಶಪಿಸಿದ. ಆಗ ರೈತ ಶಿವನ ಮತ್ತೊಂದು ರೂಪವೇ ಆದ ಕಾಲಭೈರವನನ್ನು ಸ್ಮರಿಸಿ, ತನಗೆ ಬಂದೊದಗಿದ ಕಷ್ಟವನ್ನು ಪರಿಹರಿಸಬೇಕೆಂದು ಬೇಡಿದ. ಆಗ ಕಾಲಭೈರವನ ಮಾತಿನಂತೆ, ರೈತ ತನ್ನ ಹೆಬ್ಬೆರಳನ್ನು ಶಿವನಿಗೆ ಅರ್ಪಿಸಲು ತಿಳಿಸಿದ. ರೈತ ಅದನ್ನೂ ಅನುಸರಿಸಿದ. ಇಲ್ಲಿ ಮಹಾಭಾರತದ ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳನ್ನು ಕೇಳಿ ಪಡೆದ ಕಥೆ ನೆನಪಾದೀತು. ಇದು ಪಾರಂಪರಿಕವಾಗಿ ಮುಂದುವರೆದು, ಆ ರೈತನ ಪೀಳಿಗೆಯವರು ಮುಂದೆ ತಮ್ಮ ಹೆಬ್ಬೆರಳನ್ನು ಶಿವನಿಗೆ ಅರ್ಪಿಸುವುದನ್ನು ರೂಢಿಸಿಕೊಂಡರು. ಹೀಗಾಗಿ ಅವರ ವಂಶದವರಿಗೆ ಬೆರಳು ಕೊಡುವ ಒಕ್ಕಲಿಗರು ಎಂದೇ ಹೆಸರಾಯಿತು.

   ಸೀತಿ ಬೆಟ್ಟದ ಎದುರಿಗೆ ಇರುವ ಬೆಟ್ಟವನ್ನು ಭಸ್ಮಾಸುರನ ಬೆಟ್ಟವೆಂದೇ ಕರೆಯುವರು. ಅನೇಕರು ಹೇಳುವಂತೆ, ಈ ಬೆಟ್ಟದ ಮೇಲೆ ಬಿದ್ದ ಮಳೆಯ ನೀರು ನೆಲವನ್ನು ತಲುಪದೇ, ಅಲ್ಲಿರುವ ಬೂದಿಯಲ್ಲೇ ಇಂಗಿಹೋಗುತ್ತದಂತೆ.
ತೀರ ಸರಳ ರಚನೆಯ, ದ್ರಾವಿಡ ಶೈಲಿಯ ಈ ಮಂದಿರದಲ್ಲಿ ಎರಡು ಪ್ರವೇಶದ್ವಾರಗಳನ್ನು ಹೊಂದಿರುವ ಮುಖ ಮಂಟಪ, ಒಂಭತ್ತು ಕಂಭಗಳುಳ್ಳ ನವರಂಗ ಹಾಗೂ ಗರ್ಭಗುಡಿಗಳಿವೆ. ನವರಂಗದ ಮೇಲ್ಭಾಗದ ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರ ಸುಂದರ ಕೆತ್ತನೆಯಿದೆ. ಸುತ್ತುವರೆದ ಕಂಭಗಳನ್ನು ಲೇತ್ ತಂತ್ರಜ್ಞಾನ ಬಳಸಿ ಸುಂದರವಾಗಿ ಕಡೆಯಲಾಗಿದೆ.ದೇವಾಲಯದ ಎರಡನೇ ಭಾಗದಲ್ಲಿ ಚಿಕ್ಕ ಗುಡಿಗಳಿದ್ದು, ಅಲ್ಲಿ ಶ್ರೀಪತೀಶ್ವರ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.

   ಏಕೆಂದರೆ ಶಿವನು ಭಸ್ಮಾಸುರನಿಂದ ಅಡಗಿಕೊಳ್ಳಲು ಗುಹೆಯ ಮರೆಯನ್ನು ಆಶ್ರಯಿಸಿದನೆಂಬ ಕಲ್ಪನೆಯು ಸಾಕಾರವಾಗುವಂತೆ ಕಾಣುವ ಈ ಮಂದಿರವನ್ನು ಗುಹೆಯ ರೀತಿಯಲ್ಲಿ ಉದ್ದೇಶ ಪೂರ್ವಕವಾಗಿ ರೂಪಿಸಲಾಗಿದೆ.

ಸಮೀಪದಲ್ಲೇ ಕಂಡು ಬರುವ ಇತರ ಚಿಕ್ಕ ದೇಗುಲಗಳಲ್ಲಿ ಪಾರ್ವತಿ, ಗಣೇಶ, ಸುಬ್ರಹ್ಮಣ್ಯ ಮತ್ತು ಚಾಮುಂಡೇಶ್ವರಿಯ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಎಲ್ಲ ಕಾಲಭೈರವನ ದೇಗುಲಗಳಲ್ಲಿ ಕಂಡುಬರುವಂತೆ ಇಲ್ಲಿಯೂ ಚಂಡಿಕೇಶ್ವರನನ್ನು ವಿಗ್ರಹದ ಬದಲಾಗಿ ರೇಖಾಚಿತ್ರದ ಮಾದರಿಯಲ್ಲಿ ನಿರ್ಮಿಸಲಾಗಿದೆ.
ಪುರಾತನ ಬ್ರಾಹ್ಮೀ ಲಿಪಿಯಿಂದ ಪ್ರೇರಿತವಾದ ಗ್ರಂಥ ಭಾಷೆಯೆನ್ನುವ ಅಕ್ಷರಗಳಲ್ಲಿ ಬರೆದ ಅಪರೂಪದ ಶಾಸನವಿದೆಯಾದರೂ, ಇದನ್ನು ಇದುವರೆಗೆ ಯಾರೂ ಅಧ್ಯಯನ ಮಾಡುವ ಗೋಜಿಗೆ ಹೋಗಿಲ್ಲ. ಹಾಗೊಮ್ಮೆ ಯಾರಾದರೂ ಆಸಕ್ತಿಯಿಂದ ಮಾಡುವಂತಾದರೆ, ಈ ದೇಗುಲದ ಬಗೆಗೆ ಇನ್ನಷ್ಟು ಪ್ರಮುಖ ಮಾಹಿತಿಗಳು ದೊರೆಯಬಹುದು.
* * * * * * *

ಮಾಹಿತಿ ಕೃಪೆ : ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆ. 

ಶುಕ್ರವಾರ, ಮೇ 1, 2015

ಹನಬಾಳಿನ ಶ್ರೀ ಕಾಲಭೈರವ ಮಂದಿರ




ಹನಬಾಳು ಹಾಸನ ಜಿಲ್ಲೆಯ ಸಕಲೇಶಪುರದ ಬಳಿ ಇರುವ ಒಂದು ಪುಟ್ಟ ಗ್ರಾಮ. ಹಾಸನ ಜಿಲ್ಲೆಯಲ್ಲಿ ಹೊಯ್ಸಳ ನಿರ್ಮಿತ ಅನೇಕ ದೇವಾಲಯಗಳಿವೆ. ಈ ಕಾಲಭೈರವನ ಮಂದಿರವಿರುವುದು ಒಂದು ಬೆಟ್ಟದ ಮೇಲೆ. ಅಲ್ಲಿಗೆ ತಲುಪಿ ದೇಗುಲದ ಒಳಹೊಕ್ಕರೆ ವಾತಾನುಕೂಲ    ವ್ಯವಸ್ಥೆಯಿರುವ ಕಟ್ಟಡದಲ್ಲಿದ್ದಂತೆ ಭಾಸವಾಗುತ್ತದೆ. ಈ ದೇಗುಲದ ಸುತ್ತ ಬೆಟ್ಟಗಳೇ ವ್ಯಾಪಿಸಿವೆ. ದೇವಾಲಯದ ಸುತ್ತ ಪ್ರದಕ್ಷಿಣೆ ಬರಲು ಅನುಕೂಲವಾಗುವಂತೆ ಅಗಲವಾದ ಜಗುಲಿಯಿದೆ. ಸಂಪೂರ್ಣ ಶಿಲಾರಚನೆಯಾಗಿರುವ ಈ ಮಂದಿರದ ಗೋಪುರ ಮತ್ತು ಕಲಶಗಳು ಕೂಡ ಕಲ್ಲಿನವೇ. ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತೆ ರಚಿಸಲಾದ ಮಳೆನೀರು ದೋಣಿಯನ್ನು ಚಿತ್ರದಲ್ಲಿ ಕಾಣಬಹುದು. ಗೋಪುರದ ಮುಂದೆ ಚಾಚಿರುವ ಶುಕನಾಸಿ ಅಷ್ಟೇನೂ ಕಲಾತ್ಮಕವಾಗಿಲ್ಲದಿದ್ದರೂ, ಸ್ಥಳದಲ್ಲೇ ದೊರೆತ ಕಲ್ಲುಗಳಿಂದ ಹೆಚ್ಚಿನ ಅಲಂಕಾರಗಳಿಲ್ಲದೇ ನಿರ್ಮಿಸಲಾಗಿದೆ.

ಈಗ ಈ ದೇಗುಲದಲ್ಲಿ ಪೂಜೆ ನಡೆಯುತ್ತಿಲ್ಲವಾದರೂ, ಒಂದು ಕಾಲದಲ್ಲಿ ಪ್ರಸಿದ್ಧ ಮಂದಿರವಾಗಿದ್ದಿರಬಹುದು. ಮುಂದೆ ಕಾಣುವ ಮುಖಮಂಟಪವು ನಂತರದ ರಚನೆಯೆಂದು ತೋರುತ್ತದೆ. ಏಕೆಂದರೆ ಅಲ್ಲಿ ಕಿಟಕಿಯನ್ನು ಅಳವಡಿಸಲಾಗಿದೆ.

ಚಿತ್ರ -ಮಾಹಿತಿ : ಅಂತರ್ಜಾಲ 

ಬುಧವಾರ, ಏಪ್ರಿಲ್ 1, 2015

ಜಡಿಗೇನಹಳ್ಳಿಯಲ್ಲೊಂದು ಕಾಲಭೈರವ ಕ್ಷೇತ್ರ

ಹಿಂದಿನ  ಸಂಚಿಕೆಯೊಂದರಲ್ಲಿ ತಮಿಳುನಾಡಿನ ಅಧಿಯಮನ್ ಕೋಟೆಯ ಕಾಲಭೈರವ ದೇಗುಲದ ಬಗ್ಗೆ ಬರೆದಿದ್ದು ನೆನಪಿರಬಹುದು. ಅಲ್ಲಿ ನಡೆಯುವ ಆಚರಣೆಯನ್ನೇ ಹೋಲುವ ಮತ್ತೊಂದು ಕ್ಷೇತ್ರ ಕರ್ನಾಟಕದಲ್ಲಿದೆ ಎಂದು ಇತ್ತೀಚೆಗೆ ಟಿ.ವಿ. ವಾಹಿನಿಯ ವರದಿಯೊಂದರಿಂದ ತಿಳಿಯಿತು. ಅದು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ಹೊಸಕೋಟೆ ತಾಲೂಕು, ಮಾಲೂರು ರಸ್ತೆಯ ಸಮೀಪದಲ್ಲಿರುವ ಗ್ರಾಮ ಜಡಿಗೇನಹಳ್ಳಿಯಲ್ಲಿದೆ. ಇದು ಜನರಿಗೆ ಬಹಳಕಾಲ ಅಪರಿಚಿತವಾಗಿಯೇ ಇತ್ತು. ಶಿಲ್ಪಕಲಾ ಕೆತ್ತನೆಗಳಿಲ್ಲದೆ,  ಅತ್ಯಂತ ಸರಳವಾದ   ಕಲ್ಲು ಮಂಟಪದಂತೆ ಕಾಣುವ ಈ ದೇಗುಲವನ್ನು ಅಲ್ಲಿ ಆಳುತ್ತಿದ್ದ ರಾಜರೋ, ಸಾಮಂತರೋ ತಮ್ಮ ದೈವಿಕ ನೆಲೆಯಾಗಿ ಸ್ಥಾಪಿಸಿದರೆಂದು ತಿಳಿಯಬಹುದು.

ಇಲ್ಲಿರುವ ಕಾಲಭೈರವನ ವಿಗ್ರಹದ ಬಲಭಾಗದಲ್ಲಿ ಇನ್ನೊಂದು ವಿಗ್ರಹವಿದ್ದು, ಅದೂ ಸಮಾನವಾಗಿ ಪೂಜೆಗೊಳ್ಳುತ್ತದೆ. ಆ ವಿಗ್ರಹವು ಮಾಳಮ್ಮ ದೇವಿಯದು ಎಂದು ಹೇಳುವರು. ಮಾಳಮ್ಮನೆಂಬ ಹೆಸರು ಭೈರವ ಸಂಬಂಧವಾದ ಜಾನಪದ ಕಥೆಗಳಲ್ಲಿ ಪ್ರಸ್ತಾಪಿತವಾಗಿದೆಯೆಂದು ಹಿಂದಿನ ಸಂಚಿಕೆಯಲ್ಲಿ ನಮೂದಿಸಲಾಗಿದೆ.  ಇಲ್ಲಿ ಪ್ರಚಲಿತವಿರುವ ಜಾನಪದ ಕಥೆಯಂತೆ ಒಂದಾನೊಂದು ದಿನ ಮಾಳಮ್ಮನು ಕಾಲಭೈರವನ ಗುಡಿಯನ್ನು ತನ್ನ ಮಗುವಿನೊಂದಿಗೆ ಪ್ರವೇಶಿಸಿದಳು. ಆದರೆ ಆಕೆ ಪುನಃ ಹಿಂತಿರುಗಿ ಬರಲೇ ಇಲ್ಲ. ವಿಚಲಿತರಾದ ಅವಳ ತಂದೆ, ಗುಡಿಯೊಳಗೆ ಬಂದು ನೋಡಿದಾಗ, ಮಗಳು ತನ್ನ ಮಗುವಿನ ಸಹಿತ ಶಿಲೆಯಾಗಿ ಕಾಲಭೈರವನ ಪಕ್ಕದಲ್ಲಿ ನಿಂತಿದ್ದಳು. ಆಗ ಕೇಳಿಬಂದ ಅಶರೀರವಾಣಿಯಂತೆ ತನ್ನನ್ನು ಹುಡುಕುವುದು ಅನವಶ್ಯಕವೆಂದೂ, ತಾನು ದೈವಸನ್ನಿಧಿಯಲ್ಲೇ ನೆಲೆ ನಿಂತಿರುವುದಾಗಿ ಐತಿಹ್ಯ. 

ಈ ದೇಗುಲ ಪ್ರಸಿದ್ಧಿಗೆ ಬರಲು ಕಾರಣರಾದವರು ಅಲ್ಲಿನ ಗ್ರಾಮಸ್ಥರೊಬ್ಬರು. ಅವರು ವೃತ್ತಿಯಿಂದ ಗಣಪತಿ ವಿಗ್ರಹಗಳ ತಯಾರಕರು. ಅವರಿಗೆ ದೈವಸಾಂಗತ್ಯ ಹತ್ತಿರದ ವಿಷಯವಾದ್ದರಿಂದ ತಮ್ಮ ಗ್ರಾಮದಲ್ಲಿರುವ ಈ ಮಂದಿರದ ಬಗ್ಗೆ ಆಸಕ್ತಿ ಮೂಡಿತು. ಅವರ ದೈವಭಕ್ತಿಯು ದೇವಕ್ಷೇತ್ರಗಳ ದರ್ಶನಕ್ಕೂ ಪ್ರೇರಣೆ ನೀಡಿದ್ದರಿಂದ ಹಲವಾರು ಮಂದಿರಗಳಿಗೆ ಹೋಗಲಾರಂಭಿಸಿದರಲ್ಲದೆ, ಅಲ್ಲಿನ ದೈವೀ ವಿಶೇಷಗಳ ಬಗ್ಗೆಯೂ ಆಸಕ್ತಿ ಬೆಳೆಸಿಕೊಂಡರು. ಇಂಥ ಪ್ರವಾಸಗಳಲ್ಲಿ 
ಒಮ್ಮೆ ಅವರು ತಮಿಳು ನಾಡಿನಲ್ಲಿರುವ ಅಧಿ ಯಮನ್ ಕೋಟೆಯ ಕಾಲಭೈರವ ಮಂದಿರವನ್ನೂ ಸಂದರ್ಶಿಸಿದರು.  ಕುಂಬಳ ಕಾಯಿ ತಿರುಳು ತೆಗೆದು, ಕೆಂಪು ದಾರದ ಬತ್ತಿಯಿಂದ ಅದರಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ ಕಾಲಭೈರವನ ಸೇವೆ ಮಾಡುತ್ತಿದ್ದ ಪರಿ ಅವರನ್ನು ಆಕರ್ಷಿಸಿತು. ಜ್ಯೋತಿಷದಲ್ಲೂ ಪ್ರವೇಶವಿದ್ದ ಅವರು ಅಲ್ಲಿ ಬಳಸುತ್ತಿದ್ದ ವಸ್ತುಗಳು ಜ್ಯೌತಿಷ ವಿಷಯದಲ್ಲಿ ಯಾವ ಸಂಬಂಧ ಹೊಂದಿವೆ ಎಂದು ವಿಶ್ಲೇಷಿಸಿದರು. ಕುಂಬಳಕಾಯಿ, ಎಳ್ಳಿನ ಎಣ್ಣೆ ಮತ್ತು ಕೆಂಪು ಬತ್ತಿಗಳು ಅಲ್ಲಿ ಪ್ರಧಾನವಾಗಿದ್ದವು. ಎಳ್ಳೆಣ್ಣೆಯು ಶನಿಯನ್ನೂ, ಕೆಂಪು ದಾರವು ಕುಜನ ಸೂಚಕವಾಗಿರುವುದರಿಂದ, ನವಗ್ರಹಗಳಿಗೂ ಅಧಿಪತಿಯಾಗಿರುವ ಕಾಲಭೈರವನ ಪ್ರಭಾವವು ಇವುಗಳ ಮೇಲಿರುವುದೇ ಈ ಪೂಜಾ ವ್ಯವಸ್ಥೆಗೆ ಕಾರಣವೆಂದು ತರ್ಕಿಸಿ, ಅದನ್ನು ತಮ್ಮ ಊರಿನ ದೇವಾಲಯದಲ್ಲಿಯೂ ಜಾರಿಗೆ ತಂದರು. ಇದನ್ನು ಪ್ರತಿ ತಿಂಗಳ ಕೃಷ್ಣಪಕ್ಷದ ಅಷ್ಟಮಿಯಂದು ಆಚರಿಸಲಾಗುವುದು. ಮುಂದೆ ಈ ಪೂಜಾವಿಧಿಗಳಿಂದ ಸೂಕ್ತ ಪ್ರತಿಫಲ ದೊರೆಯಿತೆಂದೂ, ಜನರಿಗೆ ಅನೇಕ ಅನುಕೂಲಗಳು ಉಂಟಾದವೆಂದೂ ಇಲ್ಲಿನ ಜನರ ನಂಬಿಕೆ.


ಜಾನಪದ ಕಥಾನಕಗಳಿಂದ, ಭೈರವನ ಆರಾಧನೆಯಲ್ಲಿ ಕಂಡುಬರುವ ವಿವಿಧ ಆಚರಣೆಗಳು, ನಂಬಿಕೆಗಳು ತಿಳಿಸುವುದೇನೆಂದರೆ, ಮಾನವರೊಡನೆ ಆತನ  ಒಡನಾಟಗಳು ಶಿಷ್ಟ ದೇವತೆಗಳಿಗಿಂತ ಹೆಚ್ಚಿನದು.  
ಚಿತ್ರ-ಮಾಹಿತಿ ಕೃಪೆ - ಅಂತರ್ಜಾಲ 

ಮಂಗಳವಾರ, ಮಾರ್ಚ್ 3, 2015

“ಭೈರವ ನಾಣ್ಯ”ದ ಸುತ್ತಮುತ್ತ............... !

ಶೆಟ್ಟಿಕೆರೆ ಶ್ರೀ ಕಾಲಭೈರವ ಮಂದಿರದಲ್ಲಿ ನಡೆಯಲಿರುವ ಉತ್ಸವದ ಆಹ್ವಾನ ಪತ್ರಿಕೆ ಈಗಷ್ಟೇ ನನಗೆ ತಲುಪಿತು. ಇದರಲ್ಲಿ ಲಭ್ಯವಾದ ಈ ಮೇಲ್ ವಿಳಾಸಗಳಿಗೂ ಈ ಬ್ಲಾಗ್ ತಲುಪುವಂತಾಗುತ್ತಿರುವುದು ಸಂತೋಷದ ಸಂಗತಿ. ಆಸಕ್ತರು ಬ್ಲಾಗ್ ನಲ್ಲಿ ಪ್ರಕಟಿತವಾಗಿರುವ ಹಿಂದಿನ ಲೇಖನಗಳನ್ನು ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ವಿನಂತಿ. ಈ ವಿಷಯದ ಕುರಿತಾಗಿ ತಮ್ಮಲ್ಲಿ ಮಾಹಿತಿಗಳಿದ್ದಲ್ಲಿ ಬ್ಲಾಗ್ ನಲ್ಲಿ ಪ್ರಕಟಿಸುವ ಅವಕಾಶವಿದೆ. ನನ್ನ ಜಿ-ಮೇಲ್ ವಿಳಾಸಕ್ಕಾಗಲೀ, ದೂರವಾಣಿ ಸಂಖ್ಯೆ 99866 72483 ಯನ್ನಾಗಲೀ ಸಂಪರ್ಕಿಸಲು ಕೋರುತ್ತೇನೆ.
- ಶಂಕರ ಅಜ್ಜಂಪುರ
---------------------------------------------------------------------------------------------------------

ಇಟಗಿಯ ಮಹಾದೇವ ಮಂದಿರದ ಕಂಬವೊಂದರಲ್ಲಿ ಕಂಡುಬರುವ ಒಂದೂವರೆ ಅಡಿ ಎತ್ತರದ ಈ ಶಿಲ್ಪವು ಅತ್ಯಂತ
ರಮಣೀಯವಾಗಿದೆ. ಎಡಗಾಲನ್ನು ಒಡೆದುಹಾಕಲಾಗಿದೆ. ಇಂಥ ಅನೇಕ ರಚನೆಗಳು ಈ ದೇಗುಲದಲ್ಲಿವೆ.



ಇತ್ತೀಚೆಗೆ ಅಂತರ್ಜಾಲದಲ್ಲಿ ಅಲೆಯಲ್ಲಿ ತೇಲುತ್ತಿರುವಾಗ ಭೈರವನ ಹೆಸರಿರುವ ಬಂಗಾರದ ನಾಣ್ಯಗಳು ಚಾಲ್ತಿಯಲಿದ್ದವು ಎಂದು ತಿಳಿಯಿತು. ಅದರ ಎಳೆಗಳನ್ನು ಹಿಡಿದು ಹೊರಟಾಗ ಸಂಗ್ರಹವಾದ ವಿವರಗಳು ಇಲ್ಲಿವೆ.
ದಕ್ಷಿಣ ಭಾರತದಲ್ಲಿ ದೊರೆತ ನಾಣ್ಯದ ಬಗ್ಗೆ ಅದರ ಸಂಗ್ರಾಹಕರು ಹೀಗೆ ಹೇಳಿಕೊಂಡಿದ್ದಾರೆ :
 "ನನಗೆ 11 ರಿಂದ 13ನೇ ಶತಮಾನಕ್ಕೆ ಸೇರಿರಬಹುದಾದ ಒಂದು ಬಂಗಾರದ ನಾಣ್ಯ ದೊರೆಯಿತು. ಅದರ ಮೇಲೆ ತೆಲುಗು-ಕನ್ನಡ ಮಿಶ್ರಿತ ಲಿಪಿಯಲ್ಲಿ ಭೈರವ ಎಂದು ಬರೆಯಲಾಗಿದೆ. ಈ ನಾಣ್ಯವು ಭುಜಬಲರೆಂದು ಕರೆದುಕೊಳ್ಳುತ್ತಿದ್ದ ತೆಲುಗಿನ ಚೋಳರಾಜರಿಗೆ ಸೇರಿರಬಹುದೆಂದು ನನ್ನ ಅನುಮಾನ. ಅಲ್ಲದೆ ಇದರಲ್ಲಿರುವ ಭೈರವ ಎಂಬ ಪದಕ್ಕೆ ಶಿವನೆಂಬ ಅರ್ಥವಲ್ಲದೆ ಬೇರೇನಾದರೂ ಅರ್ಥಗಳಿದ್ದರೆ ಅದನ್ನು ತಿಳಿದವರು ನನಗೆ ವಿವರಿಸಲು ಕೋರುತ್ತೇನೆ" ಎಂದು ಬರೆದಿದ್ದರು.
ಈ ವಿಷಯದ ಬಗ್ಗೆ ಅಷ್ಟೇ ಆಸ್ಥೆಯುಳ್ಳ ಸಜ್ಜನರೊಬ್ಬರು ಬರೆದ ಉತ್ತರ ಹೀಗಿದೆ :
"ಭೈರವ ನೆಂಬ ಪದಕ್ಕೆ ಶಿವನೆಂಬ ಅರ್ಥವಲ್ಲದೆ ಬೇರೊಂದು ಅರ್ಥವೂ ಇದೆ. ಒಂದೂವರೆ ಲಕ್ಷವರ್ಷಗಳ ಹಿಂದೆಯೂ ಭಾರತದಲ್ಲಿ ಶೈವ ಪಂಥ ಪ್ರಚಲಿತವಿತ್ತು. ಭೈರವ ಪಂಥಕ್ಕೆ ತನ್ನದೇ ವಿಶಿಷ್ಠ ಸಂಪ್ರದಾಯ, ಸಿದ್ಧಾಂತ ಹಾಗೂ ಆಚರಣೆಗಳಿವೆ. ಅದರ ಉಪಾಸಕರನ್ನು ಭೈರವರೆಂದೇ ಸಂಬೋಧಿಸಲಾಗುತ್ತಿತ್ತು. ಅಂತೆಯೇ ಭೈರವೀ ಯೋಗಿನಿಯರೂ ಇದ್ದರು. ತಮಿಳುನಾಡಿನಲ್ಲಿ ಒಂದು ಕಾಲಕ್ಕೆ ಇವರ ಸಂಖ್ಯೆ ಗಣನೀಯವಾಗಿತ್ತು. ಕಾಳಾಮುಖರು, ಪಾಶುಪತರು, ಮಹಾವಿರಾಧಿಗಳ ಜತೆ ಇವರ ಸಂಪರ್ಕವಿತ್ತು.
ಪೆರಿಯಪುರಾಣವು ತಮಿಳಿನ ಪುರಾತನ ಗ್ರಂಥ. ಅದರಲ್ಲಿ "ಸಿರುತ್ತೊಂಡ ನಾಯನಾರ್ ಪುರಾಣ"ವೆಂಬ ಅಧ್ಯಾಯದಲ್ಲಿ ಶಿವನು ಭೈರವ ಪಂಥಕ್ಕೆ ಸೇರಿದವನೆನ್ನಲು ಉಲ್ಲೇಖಿಸಿರುವ ಪಾಠದ ಸಾಲುಗಳು ಹೀಗಿವೆ :
              ತುಡಿ ಸೇರ್ ಕರತ್ತು ಬಯಿರವರ್ |
              ಪೆರಿಯ ಬಯಿರವ ಕೋಲಪ್ಪೆರುಮಾನ್ ||
              ಪರಿವು ಕಂಡ ಬಯಿರವರುಮ್ |
              ಪೆರಿಯ ಬಯಿರವತ್ತೊಂಡರ್ ||
ಮಹಾನ್ ಸಾಧಕರಾಗಿದ್ದ ಭೈರವರು, ರಾಜಗುರುಗಳೂ ಆಗಿದ್ದರು. ಮಲಯ ದ್ವೀಪದಲ್ಲಿ ಇವರು ಅತ್ಯಂತ ಪ್ರಭಾವಶಾಲಿಗಳಾಗಿದ್ದರು. ಈ ಪ್ರಾಂತದಲ್ಲಿ ಶೈವಾರಾಧನೆ ಮತ್ತು ಶಕ್ತಿಪಂಥಗಳು ಉತ್ತುಂಗಕ್ಕೆ ತಲುಪಿದ್ದವು. ಇಂದಿನ ಮಲಯ ಮಾಂತ್ರಿಕರ ವಾಮಾಚಾರ ಪದ್ಧತಿ, ಅಚರಣೆಗಳಲ್ಲಿ ಭೈರವರ ಪ್ರಭಾವವನ್ನು ಗುರುತಿಸಬಹುದು.
ಭೈರವ ಪಂಥವನ್ನು ಅನುಸರಿಸುತ್ತಿದ್ದ ರಾಜರ ಹೆಸರಿನ ಮುಂದೆ ಭೈರವ ಎಂಬ ಪದ ಪ್ರತ್ಯಯವಿರುತ್ತಿತ್ತು. ಅವರು ತಮ್ಮ ನಾಣ್ಯಗಳಲ್ಲಿ ಖಟ್ವಾಂಗ – ಎಂದರೆ ತಲೆಬುರುಡೆಯ ಹಿಡಿಕೆಯಿರುವ ದಂಡವನ್ನು ಚಿತ್ರಿಸಿರುತ್ತಿದ್ದರು.
ಕೆಲವೊಂದು ಸ್ಥಳನಾಮಗಳಲ್ಲಿ ಭೈರವನ ಹೆಸರು ಸೇರಿಹೋಗಿ, ಈಗ ಅಪಭ್ರಂಶಗೊಂಡಿರುವ ಉದಾಹರಣೆಗಳಿವೆ. ಇಂದು ಈರೋಡ್ ಎಂದು ಪ್ರಸಿದ್ಧವಾಗಿರುವ ಸ್ಥಳನಾಮ ಇಂಥ ಪ್ರಭಾವದಿಂದಲೇ ಉಂಟಾಗಿದೆ. ಹಿಂದೆ ಅಲ್ಲಿ ಇರು ಒಟ್ಟೀಶ್ವರರ್ ಎಂಬ ಶಿವ ದೇವಾಲಯವಿತ್ತು. ಅದೇ ಅಪಭ್ರಂಶಗೊಂಡು ಇರೊಟ್ಟು, ಇರೊಡು, ಈರೋಡು ಎಂದಾಯಿತು.
ಇಂದಿಗೂ ಭೈರವರು ಇರುವಂತೆಯೇ ಭೈರವಿಯರೂ ಭಾರತದ ಹಲವು ಭಾಗಗಳಲ್ಲಿ ಇದ್ದಾರೆ. ಅವರೆಲ್ಲರ ಸಂಗಾತಿ ನಾಯಿ. ಭೈರವ ಗಾಯತ್ರಿಯಲ್ಲಿ "ಶ್ವಾನ ಧ್ವಜಾಯ ವಿದ್ಮಹೇ" ಎಂದು ವರ್ಣಿಸಲಾಗಿದೆ.
ನಾಣ್ಯಗಳ ವಿಷಯಕ್ಕೆ ಬಂದರೆ, ಅಂಥ ನಾಣ್ಯಗಳು ಆಂಧ್ರದ ಗೋದಾವರೀ, ನೆಲ್ಲೂರು ಜಿಲ್ಲೆಗಳಲ್ಲಿ ದೊರೆತ ಉದಾಹರಣೆಗಳಿವೆ. ಕನಿಷ್ಠ ಎರಡು ಜಾಗಗಳಲ್ಲಿಯಾದರೂ "ಶ್ರೀ" ಎಂದು ನಮೂದಿಸಿರುವುದು ಕಂಡುಬರುತ್ತದೆ.
ಡಾ. ಪರಮೇಶ್ವರೀ ಲಾಲ್ ಗುಪ್ತರು "ಕಾಯಿನ್ಸ್" ಎಂಬ ಗ್ರಂಥ ರಚಿಸಿದ್ದಾರೆ. ಅದರಲ್ಲಿ 192 ರಿಂದ 203 ಪುಟಗಳಲ್ಲಿ ಇವುಗಳ ವಿವರಣೆ ದೊರೆಯುತ್ತದೆ. ಅವುಗಳನ್ನು ತೆಲುಗು ಚಾಲುಕ್ಯರ ಅಡಿಯಲ್ಲಿ ಹೆಸರಿಸಲಾಗಿದೆ. ವೆಂಗಿ ಚಾಲುಕ್ಯರ ಅಥವಾ ತೆಲುಗು ಚಾಲುಕ್ಯರ ನಾಣ್ಯಗಳಲ್ಲಿ ವರಾಹದ ಚಿಹ್ನೆ ಕಂಡುಬರುವುದು ಸಾಮಾನ್ಯ. ಅದರೆ ತ್ರಿಕೋಣ ಚಿಹ್ನೆಯನ್ನು ದೇವಾಲಯದ ಗೋಪುರದ ಸಂಕೇತವೆಂದು ತುಂಬ ಮಂದಿ ತಿಳಿಯುತ್ತಾರೆ. ವಾಸ್ತವವೆಂದರೆ ಅದು ಬಾಣದ ಮೊನೆ ಎಂದು ಗ್ರಹಿಸುವುದೇ ಸೂಕ್ತ".

* * * * * * *
ಮಾಹಿತಿ ಕೃಪೆ - ಅಂತರ್ಜಾಲ 


ಗುರುವಾರ, ಜನವರಿ 1, 2015

ಈಶಾನಪಲ್ಲಿಯಲ್ಲೊಂದು ಬೃಹತ್ ಕಾಲಭೈರವ ಮಂದಿರ

    -o- ಎಲ್ಲರಿಗೂ ನೂತನ ವರ್ಷದ ಶುಭಾಶಯಗಳು -o-    


  ಆಂಧ್ರಪ್ರದೇಶದ ನಿಜಾಮಾಬಾದ್ ಜಿಲ್ಲೆಯ, ಸದಾಶಿವ ಮಂಡದಲ್ಲಿರುವ ಈಶಾನಪಲ್ಲಿಯ ಸಮೀಪ ರಾಮಾರೆಡ್ಡಿಯೆಂಬ ಕುಗ್ರಾಮವಿದೆ. ಅದರ ಹೆಸರೂ ಪ್ರಪಂಚಕ್ಕೆ ಇತ್ತೀಚಿನವರೆಗೂ  ತಿಳಿದಿರಲಿಲ್ಲ. ಕಾಲಭೈರವನಿಗೆ ಗುಡಿ ಕಟ್ಟಿ ಪೂಜಿಸುವ ಸಂಪ್ರದಾಯವೂ ಕಡಿಮೆ. ಈಶಾನ್ಯ ದಿಕ್ಕಿನ ರಕ್ಷಕನೆಂದು ಪ್ರಸಿದ್ಧವಾಗಿರುವ ಭೈರವನು ಇಲ್ಲಿ ಕಾಲಾಂತರದಿಂದ ಇದ್ದರೂ,  ಆತನಿಗೆ ಪೂಜೆ ಪುರಸ್ಕಾರಗಳು ಒಂದು ಕಾಲಕ್ಕೆ ಸಲ್ಲುತ್ತಿದ್ದಿರಬಹುದು. ಇದಕ್ಕೆ ಕುರುಹಾಗಿ ಇಂದಿಗೂ ಇಲ್ಲೊಂದು ಶಿವಮಂದಿರವಿದೆ. ಅಲ್ಲಿ ಗಣಪತಿ, ಶಿವಲಿಂಗ ಮತ್ತು ನಂದಿಗಳನ್ನು ಸ್ಥಾಪಿಸಲಾಗಿತ್ತು. ಈ ದೇವಾಲಯದ ರಕ್ಷಕನೆಂದು ಕಾಲಭೈರವನನ್ನು ಈಶಾನ್ಯದಿಕ್ಕಿನಲ್ಲಿ ಸ್ಥಾಪಿಸಲಾಗಿದ್ದು,  ಆತನಿಂದಾಗಿಯೇ ಈ ಗ್ರಾಮಕ್ಕೆ ಈಶಾನಪಲ್ಲಿಯೆಂಬ ಹೆಸರು ಬಂದಿತು.  ಈಗ ಶಿವಾಲಯ ಅನಾಥವಾಗಿದೆ. 
    ಮನುಷ್ಯ ದೈವಕೃಪೆಗೆ ಪಾತ್ರನಾಗಬೇಕೆಂದರೆ ಏನೆಲ್ಲ ವಿಧಿ ವಿಧಾನಗಳನ್ನು ಅನುಸರಿಸುತ್ತಾನೆ. ದೇವರಿಗೆ ಶಿಕ್ಷೆ ನೀಡಿಯಾದರೂ ತನ್ನ ಇಚ್ಛೆಯನ್ನು ಈಡೇರಿಸಿಕೊಳ್ಳಲು ಹಿಂಜರಿಯಲಾರ. ಬರಗಾಲ ಬಂದಾಗ, ಕರ್ನಾಟಕದ ಕೆಲಭಾಗಗಳಲ್ಲಿ ಮಾರಮ್ಮ, ಚೌಡಮ್ಮ ಮುಂತಾದ ದೇವತೆಗಳಿರುವ  ಗುಡಿಗಳಲ್ಲಿ ದೇವರಿಗೆ ಮೆಣಸಿನ ಖಾರವನ್ನು ಅರೆದು ಹಚ್ಚುವ ಪದ್ಧತಿಯಿದೆ. ಇದು ಭಕ್ತರು ಅನುಭವಿಸುತ್ತಿರುವ ಉರಿ-ಸಂಕಟಗಳ ಸಂಕೇತ. ತಮಗಾದುದು ದೇವರಿಗೂ ತಲುಪಿ, ಅದಕ್ಕೆ ಪರಿಹಾರ ನೀಡಲಿ ಎಂಬುದು ಜನಪದದ ಆಶಯ. ಈಶಾನಪಲ್ಲಿಯಲ್ಲಿ ಕೂಡ ಇದೇ ತೆರೆನ ಆಚರಣೆ ರೂಢಿಯಲ್ಲಿದೆ. ಅಲ್ಲಿ ಮೆಣಸಿನ ಖಾರಕ್ಕೆ ಬದಲಾಗಿ ಹಸುವಿನ ಸಗಣಿಯನ್ನು ಕಾಲಭೈರವನ ವಿಗ್ರಹಕ್ಕೆ ಮಳೆಯಿಲ್ಲದಂತಾದಾಗ ಹಚ್ಚುವ ರೂಢಿಯಿದೆ. ಸಗಣಿಯ ವಾಸನೆಯನ್ನು ತಡೆಯಲಾಗದೇ, ತನ್ನನ್ನು ಸ್ವಚ್ಛಗೊಳಿಸಿಕೊಳ್ಳಲು ಭೈರವನು ಮಳೆ ತರಿಸಿ ತನ್ನ ಮೈಶುದ್ಧಿ ಮಾಡಿಕೊಳ್ಳುತ್ತಾನೆಂದು ಅಲ್ಲಿನ ಜನರ ನಂಬಿಕೆ. ಅದರಂತೆ ನಡೆದುದು ಇದೆ ಎಂದೂ ಹೇಳುವರು.


 
    17 ಅಡಿ ಎತ್ತರದ ಈ ಬೃಹತ್ ಶಿಲಾಮೂರ್ತಿ ಸಂಪೂರ್ಣ ನಗ್ನವಾಗಿದ್ದು, ಶೂಲ, ಡಮರು, ಖಡ್ಗ ಮತ್ತು ಬ್ರಹ್ಮಕಪಾಲವನ್ನು ಹಿಡಿದಿರುವಂತೆ ಕಡೆಯಲಾಗಿದೆ. ಇದು ರಾಮಾರೆಡ್ಡಿ ಗ್ರಾಮದ ಸಮೀಪದ ರಾವಿಚೆಟ್ಟು ಎಂಬ ಗ್ರಾಮದಲ್ಲಿತ್ತು.  ಅದಕ್ಕೆ ಮೊದಲಿನಿಂದ ಗುಡಿ ಇರಲಿಲ್ಲ. ನಂತರ ಅದನ್ನು ಇಲ್ಲಿಗೆ ತಂದು ಶಿವಾಲಯದ ಎದುರಿಗೆ ದೊಡ್ಡ ದೇವಾಲಯವನ್ನು ನಿರ್ಮಿಸಿ ಅಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಜನರು ತಮ್ಮ ಹರಕೆ ತೀರಿಸಲು ಸಿಪ್ಪೆಯಿರುವ ತೆಂಗಿನ ಕಾಯಿಗಳನ್ನು ಬಣ್ಣ ಬಣ್ಣದ ಬಟ್ಟೆಗಳಲ್ಲಿ ಕಟ್ಟಿ, ಅವುಗಳನ್ನು ದೇವಾಲಯದ ಆವರಣದಲ್ಲಿ ತೂಗುಹಾಕುವ ಸಂಪ್ರದಾಯವಿದೆ. ಮೊದಲಿಗೆ ಅಷ್ಟೇನೂ ಪ್ರಸಿದ್ಧವಾಗಿರದ ಈ ಮಂದಿರಕ್ಕೆ ಆಂಧ್ರದ ಕರೀಮ್ ನಗರ, ಅದಿಲಾಬಾದ್, ಹೈದ್ರಾಬಾದ್ಗಳಿಂದ ಅಲ್ಲದೆ ಕರ್ನಾಟಕ, ಮಹಾರಾಷ್ಟ್ರಗಳಿಂದಲೂ ಭಕ್ತರು ಬರುತ್ತಾರೆ. 
* * * * * * *