ಭಾನುವಾರ, ಏಪ್ರಿಲ್ 1, 2012

ಭೈರವ : ಒಂದು ಐತಿಹಾಸಿಕ ಅಧ್ಯಯನ


ಅಧ್ಯಯನದ ಆಸಕ್ತಿಯು ಅಧ್ಯಯನ ಮಾಡುವವನನ್ನು ಎಲ್ಲೆಲ್ಲಿಗೆ ಕೊಂಡೊಯ್ಯುತ್ತದೆ ಎಂದು ನೆನೆದರೆ ಆಶ್ಚರ್ಯವಾಗುತ್ತದೆ. ಅದಕ್ಕೆ ಬೇಕಾಗಿರುವ ಸಾಹಿತ್ಯ, ಚಿತ್ರಗಳು, ಸಂದರ್ಭಗಳು ನಮಗರಿವಿಲ್ಲದಂತೆ ನಮ್ಮೆದುರು ಬರುತ್ತವೆ. ಅದನ್ನು ಆ ಸಮಯಕ್ಕೆ ಸರಿಯಾಗಿ ಗ್ರಹಿಸಿ, ಉಳಿಸಿಕೊಂಡರೆ ಉಪಯುಕ್ತವಾಗುತ್ತವೆ. ಇಂಥ ಅನುಭವಗಳು ನಿಮ್ಮದೂ ಆಗಿರಬಹುದು. 

ಈ ಮೊದಲು ಪ್ರಸ್ತಾಪಿಸಿದಂತೆ, ಭೈರವನ ಕುರಿತಾದ ನನ್ನ ಅಧ್ಯಯನಕ್ಕೆ ಆತನ ಬಗೆಗಿನ ಭಕ್ತಿ ಮಾತ್ರ ಕಾರಣವಾಗಲಿಲ್ಲ. ಶೈವ ಭಕ್ತಿ ಪರಂಪರೆ ಪುರಾತನವಾದುದು. ಅದರಲ್ಲಿ ಶಿವನ ಈ ರೂಪವು ನಂತರ ಬಂದು ಸೇರಿಕೊಂಡಿತು. ಹೀಗಾಗಿ ಇದಕ್ಕೆ ತಕ್ಕ ಐತಿಹಾಸಿಕ, ಪೌರಾಣಿಕ ಮಹತ್ವಗಳು ಇದೆಯೆಂದು ತರ್ಕಿಸಲು ಅವಕಾಶವಿದೆ. ಐತಿಹಾಸಿಕವಾಗಿಯೂ ಭೈರವನ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆಯೆನ್ನುವುದು, ನನ್ನ ಪಯಣದಲ್ಲಿ ತಿಳಿಯತೊಡಗಿತು. ಹೀಗಾಗಿ ಭೈರವನ ಬಗ್ಗೆ ನನ್ನ ಗಮನಕ್ಕೆ ಬಂದ ಲೇಖನಗಳು, ಚಿತ್ರಗಳು, ಮಾಹಿತಿಗಳು, ಶ್ಲೋಕಗಳು, ಅಷ್ಟಕಗಳು, ಸಹಸ್ರನಾಮಗಳು, ಆತನ ದೇವಾಲಯಗಳ ವಿವರಗಳು ಮುಂತಾದ ಸಾಹಿತ್ಯವನ್ನು ಸಂಗ್ರಹಿಸುತ್ತ ನಡೆಯುತ್ತಿರುವೆ. ಅದರಲ್ಲಿ ಇತಿಹಾಸಕಾರರು, ಸಂಶೋಧಕರು ಈ ದೇವನನ್ನು ಒಂದು ಹೊಸ ಪಂಥದ ಕೇಂದ್ರವನ್ನಾಗಿ ನಡೆಸಿದ ಅಧ್ಯಯನಗಳ ಓದು ಆಕರ್ಷಿಸುವಂತಿದೆ. ಭೈರವನ ಕುರಿತಾದ ಐತಿಹಾಸಿಕ ಮಗ್ಗುಲುಗಳನ್ನು ನೋಡುತ್ತ ಹೋದಾಗ ಇತ್ತೀಚೆಗೆ ಒರಿಸ್ಸಾದ ಇತಿಹಾಸಜ್ಞ ಡಾ. ಶಶಾಂಕ ಪಾಂಡೆಯವರ ಲೇಖನ ಮನಸೆಳೆಯಿತು. 

ಇತಿಹಾಸಜ್ಞರು ಶಿಲ್ಪಗಳನ್ನು, ದೇವಾಲಯಗಳನ್ನು ಅಧ್ಯಯನ ಮಾಡುವ, ಅರ್ಥಮಾಡಿಕೊಳ್ಳುವ, ತರ್ಕಿಸುವ ಕ್ರಮಗಳು ವಿಶಿಷ್ಟವಾಗಿರುತ್ತವೆ. ದೊರೆತ ಸಾಕ್ಷ್ಯಾಧಾರಗಳ ಜತೆಗೆ ತಮ್ಮ ತರ್ಕ, ಊಹೆಗಳನ್ನು ಹದವಾಗಿ ಬೆರೆಸಿ ನಿರ್ಣಯಕ್ಕೆ ಬರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಅದು ನಿಜವೇ ಆಗಿರುತ್ತದೆ. ಒಂದೊಮ್ಮೆ ವಿವಾದಗಳು ಉದ್ಭವಿಸಿದರೆ, ಚರ್ಚೆಗಳಾಗುತ್ತವೆ. ನಂತರ ತೀರ್ಮಾನಗಳಾಗುತ್ತವೆ. ಇದು ಸಾಧಾರಣವಾಗಿ ಇತಿಹಾಸಜ್ಞರು ಅನುಸರಿಸುವ ಕ್ರಮ. ಈ ಎಲ್ಲ ವಿಧಾನಗಳು ಡಾ. ಪಾಂಡಾರ ಲೇಖನದಲ್ಲಿ ಎದ್ದು ಕಾಣುತ್ತವೆ.

ನಮ್ಮ ಪ್ರವಾಸಕಾಲದಲ್ಲಿ ಅನೇಕ ಪುರಾತನ ಸ್ಮಾರಕಗಳನ್ನು, ದೇವಾಲಯಗಳನ್ನು ನಾವು ಸಂದರ್ಶಿಸುತ್ತೇವೆ. ಇತಿಹಾಸ ತಜ್ಞರ ಕಾರ್ಯವಿಧಾನದ ಪರಿಚಯವಿದ್ದು, ಅವರ ದೃಷ್ಟಿಕೋನದಿಂದ ಸ್ವಲ್ಪವಾದರೂ ಊಹಿಸುವ, ಕಲೆಹಾಕಿದ ಮಾಹಿತಿಗಳನ್ನು ವಿಶ್ಲೇಷಿಸುವ ಯತ್ನಮಾಡುವಂತಾದರೆ, ನಮ್ಮ ಪ್ರವಾಸಕ್ಕೆ ಹೊಸತೊಂದು ಆಯಾಮ ದೊರೆತಂತಾಗುತ್ತದೆ. ಇಂಥ ದೃಷ್ಟಿಯಿಂದ ಡಾ. ಪಾಂಡಾರ ಪ್ರಬಂಧವೊಂದರ ಸಂಕ್ಷಿಪ್ತ ಸಂಗ್ರಹಾನುವಾದವನ್ನು ನಿಮ್ಮ ಓದಿಗೆಂದು ಇಲ್ಲಿ ನೀಡಿದ್ದೇನೆ. 

ಒರಿಸ್ಸಾದ ಮಹಾನದಿ ಕಣಿವೆಯಲ್ಲಿ 
ಭೈರವನ ಆರಾಧನೆ

 ಸುವರ್ಣಪುರ ಭೈರವ 

ಕ್ರಿ.ಶ. ೪-೫ ನೇ ಶತಮಾನದಲ್ಲಿ ನಳರು ಒರಿಸ್ಸಾದ ನೈಋತ್ಯ ಭಾಗದಲ್ಲಿ ಪ್ರಬಲವಾಗಿದ್ದವರು. ಇವರ ಪೈಕಿ ಪಾಂಡುವಂಶೀಯನಾದ ಮಹಾಶಿವಗುಪ್ತ ಬಾಲಾರ್ಜುನನು ಪರಮ ಶಿವಭಕ್ತನಾಗಿದ್ದನು. ೫೮ ವರ್ಷಗಳ ದೀರ್ಘ ಆಳ್ವಿಕೆ ನಡೆಸಿದ ಈತನ ಸೇನಾಧಿಪತಿಯಾಗಿದ್ದ ದುರ್ಗರಕ್ಷಿತನು ಗುಡಶರ್ಕರಕವೆಂಬ ಗ್ರಾಮವನ್ನು ಶಿವಾಲಯಕ್ಕೆ ದತ್ತಿಯಾಗಿ ನೀಡಿದನು. ಇದಲ್ಲದೆ ಕೊಡಸೀಮಾ ಎಂಬ ಗ್ರಾಮವನ್ನು ಶಿವಭಕ್ತನಾಗಿದ್ದ ಸದಾಶಿವಾಚಾರ್ಯನಿಗೆ ನೀಡಿದ್ದನು. ೮ನೇ ಶತಮಾನದಲ್ಲಿ ಮಧ್ಯಭಾಗದಲ್ಲಿದ್ದ ಮಹಾ ಶಿವಭಕ್ತ ಬಾಲಾರ್ಜುನನ  ಕಾಲಕ್ಕೆ ಒರಿಸ್ಸಾದ ಮಹಾನದಿ ಕಣಿವೆಯಲ್ಲಿ ಭೈರವನ ಆರಾಧನೆ ಪ್ರಚಲಿತವಾಗಿತ್ತು. ಅವರ ಮುಂದಿನ ಸೋಮವಂಶೀಯ ಪೀಳಿಗೆಯವರು ಸುವರ್ಣಪುರದಿಂದ ೯ನೇ ಶತಮಾನದ ಮಧ್ಯಭಾಗದಲ್ಲಿ ಶ್ರೀಪುರದಲ್ಲಿ ನೆಲೆಸಿದರು. ಅಲ್ಲಿದ್ದ ರಣಭಂಜನನ್ನು ಓಡಿಸಿ, ಮಹಾಭವಗುಪ್ತ ಜನಮೇಜಯನೆಂಬುವನು ಕ್ರಿ.ಶ. ೮೫೦ರಲ್ಲಿ ನೆಲೆನಿಂತನು. ಇವನ ಕಾಲದಲ್ಲಿ ಮತ್ತಮಯೂರ ಎಂಬುವವನು ಶೈವಪಂಥದ ಗುರುವಾಗಿದ್ದ ಆಚಾರ್ಯ ಗಗನಶಿವನೆಂಬ ಮುನಿಯ ಗೌರವಾರ್ಥ ಇಂದಿನ ರಾಣಿಪುರದ ಜರಿಯಾಲ್‌ನಲ್ಲಿ ಶಿವಾಲಯವನ್ನು ಕಟ್ಟಿಸಿದನು. ಶತ್ರು ಭಂಜನದೇವ ಮತ್ತು ರಣಭಂಜದೇವ ಇವುರು ನೀಡಿರುವ ದತ್ತಿಯ ತಾಮ್ರಶಾಸನದಲ್ಲಿ ಭೈರವನ ಆರಾಧನೆಯ ಬಗ್ಗೆ ಹೀಗೆ ಬರೆಯಲಾಗಿದೆ.

              ಸಂಹಾರಕಾರ ಹೃತಭುಗ್ವಿಕರಾಳಘೋರ | 
              ಸಂಹ್ರಾಂತಕಿಂಕರ ಕೃತಾಂತ ನಿತಾಂತವಿನ್ನಂ ||
             ವಿನ್ನಾಂಧಕಾಸುರ ಮಹಾಗಹನತಾ ಪತ್ರಂ | 
             ತತ್ ಭೈರವಂ ಹರವಪುರ್ಬಹುತಃ ಪ್ರಪತ್ತು ||

ಇದರಿಂದ ಭಂಜನರಾಜರು ಭೈರವ ಪಂಥವನ್ನು ಮಹಾನದಿಯ ಮೇಲ್ಕಣಿವೆಯಲ್ಲಿ  ಕ್ರಿ.ಶ. ೮-೯ನೇ ಶತಮಾನದಿಂದ ಜನಪ್ರಿಯಗೊಳಿಸಿದರೆಂದು ತಿಳಿಯುತ್ತದೆ.

ಶಿಲಾಶಾಸನಗಳಿಂದ ತಿಳಿದುಬರುವಂತೆ ಮಹಾನದಿ ಕಣಿವೆಯಲ್ಲಿ ಕ್ರಿ.ಶ. ೧ನೇ ಶತಮಾನದಿಂದಲೂ ಭೈರವನ ಆರಾಧನೆಯು ನಡೆಯುತ್ತಿದ್ದ ಕುರುಹುಗಳಿವೆ. ೧೯೮೩ರಲ್ಲಿ ಬೆಳಕಿಗೆ ಬಂದ ಜುನಾಗಢದ ಬಂಕಾಪೈಕ್‌ಪಾದ ಎಂಬಲ್ಲಿ  ದೊರೆತ ಒಂದು ಬೈರವನ ವಿಗ್ರಹದ ಪದತಲದಲ್ಲಿ ೨ ಸಾಲುಗಳ ಶಾಸನವಿದೆ.  ಇದು ಪ್ರಾಕೃತ ಭಾಷೆಯಲ್ಲಿದ್ದು ಮುರಿದ ಭೈರವನ ಪೀಠದ ಕೆಳಗೆ "ರ" ಎಂಬ ಅಕ್ಷರವಿದೆ. ಇಂಥ "ರ" ಅಕ್ಷರವು ೪ ರಿಂದ ೮ ನೇ ಶತಮಾನದಲ್ಲಿ ಬಳಕೆಯಾಗುತ್ತಿತ್ತು. ಕಾಲಹಂದಿ ಜಿಲ್ಲೆಯ ಮೋಹನಗಿರಿ ಎಂಬ ಊರಿನಲ್ಲಿರುವ ಧವಳೇಶ್ವರ ಶಿವಮಂದಿರದಲ್ಲಿ "ವ್ಯೂಹ ಭೈರವ" ನ ವಿಗ್ರಹವು ದೊರೆತಿದ್ದು, ಇದು ಕೂಡ ೮ನೇ ಶತಮಾನಕ್ಕೆ ಸೇರಿದ್ದೆಂದು ಇತಿಹಾಸಜ್ಞ ಎಸ್. ಎನ್. ರಾಜಗುರು ಗುರುತಿಸಿದ್ದಾರೆ. ಇದೇ ದೇವಾಲಯದ ಗರ್ಭಗೃಹದ ಹೊರಬಾಗಿಲಿನಲ್ಲಿ  ನರ್ತಿಸುತ್ತಿರುವ ಭೈರವರ ದ್ವಾರಪಾಲಕ ವಿಗ್ರಹವಿದೆ. ಬಲ ಭಾಗದಲ್ಲಿ ದೊಡ್ಡ ದಂಡವನ್ನು ಹಿಡಿದಿರುವ ಶೈವ ಸನ್ಯಾಸಿಯು ಸಮಭಂಗಿಯಲ್ಲಿ ನಿಂತಿರುವ ವಿಗ್ರಹವಿದೆ. ಪಾಶುಪತ ಪಂಥದ ಗುರುವಾದ ಲಕುಲೀಶನು ತನ್ನ ಶಿಷ್ಯರೊಂದಿಗೆ ಇರುವ ತೋರಣ ಶಿಲ್ಪವಿದ್ದು, ಆ ಕಾಲದಲ್ಲಿ ಕಾಪಾಲಿಕರ ಪ್ರಾಬಲ್ಯವಿದ್ದುದನ್ನು ಸೂಚಿಸುತ್ತದೆ. ರಣಭಂಜನದೇವನ ತಾಮ್ರ ಶಾಸನದಲ್ಲಿ ಆತನು ಭೈರವನ ಕೃಪೆಗೆ ಪಾತ್ರನಾಗಿದ್ದಂತೆಯೇ, ಸ್ತಂಭೇಶ್ವರಿಯ ಕೃಪೆಗೂ (ಸ್ತಂಭೇಶ್ವರಿ ಲಬ್ಧ ವರ ಪ್ರಸಾದ) ಪಾತ್ರನಾಗಿದ್ದನೆಂದು ತಿಳಿಸಲಾಗಿದೆ. ಭೈರವನ ಆರಾಧನೆಯ ಜತೆಗೆ ಸ್ತಂಭೇಶ್ವರಿಯ ಆರಾಧನೆಯೂ ಆ ಕಾಲದಲ್ಲಿ ಪ್ರಚಲಿತವಿತ್ತೆನ್ನಲು ಪರ್ವತವರ್ಧಕ ವಂಶಜನಾದ ತುಷ್ಠಿಕರ ಮಹಾರಾಜನ ತಾಮ್ರಶಾಸನಗಳನ್ನು ಗ್ರಹಿಸಬಹುದು. 

ಸ್ವರ್ಣಾಕರ್ಷಣ ಭೈರವ
ಜುನಾಗಡ್‌ನಲ್ಲಿ ಮೇಲೆ ಹೇಳಿದ ವಿಗ್ರಹಗಳಲ್ಲದೆ, ಅದಕ್ಕಿಂತ ಚಿಕ್ಕದಾದ ಎರಡು ವಿಗ್ರಹಗಳು ಇಲ್ಲಿನ ಪಂಚಾಯತ್ ಕಛೇರಿ ಕಟ್ಟಡದ ಸಮೀಪದಲ್ಲಿ ದೊರೆತಿದೆ. ಇವುಗಳಲ್ಲಿ ಒಂದು ಒಂದೂಕಾಲು ಅಡಿ ಎತ್ತರವಾಗಿದ್ದು, ನಾಲ್ಕು ಕೈಗಳನ್ನು ಹೊಂದಿದೆ. ಮತ್ತೊಂದು ವಿಗ್ರಹವು ಎರಡೂವರೆ ಅಡಿ ಎತ್ತರವಿದ್ದು ಇದು ಅನೇಕ ಆಭರಣಗಳಿಂದ ಅಲಂಕೃತವಾಗಿದೆ. ಈ ವಿಗ್ರಹವನ್ನು "ಸ್ವರ್ಣಾಕರ್ಷಣ ಭೈರವ" ನೆಂದು ಕರೆಯುವರು. ಬಂಕಾಪೈನ್ ಪಾದ ಇಲ್ಲಿ ದೊರೆತಿರುವ ವಿಗ್ರಹದ ಎತ್ತರ ಆರು ಅಡಿ, ನಿಂತಿರುವುದು ಸಮಭಂಗಿಯಲ್ಲಿ. ಈತನು ಊರ್ಧ್ವಲಿಂಗ. ಶೂಲ, ಕಪಾಲಗಳು ಹಿಂದಿನ ಎರಡು ಕೈಗಳಲ್ಲಿದ್ದು, ಮುಂದಿನ ಎಡಗೈ ಕಟ್ಯಾವಲಂಬಿತ (ಸೊಂಟದ ಮೇಲೆ ಕೈಯಿಟ್ಟಿರುವಂತೆ) ಭಂಗಿಯಲ್ಲಿದೆ. ಬಲಗೈನಲ್ಲಿ ಕಮಂಡಲುವಿದೆ. ಇಡೀ ಶರೀರವನ್ನು ಸರ್ಪವು ಸುತ್ತುವರೆದಿದೆ. ಕಾಲಹಂದಿಯ ಬೆಲಖಿಂಡಿ ಗ್ರಾಮದಲ್ಲಿ ಇಷ್ಟೇ ಎತ್ತರದ ಇನ್ನೊಂದು ಭೈರವ ವಿಗ್ರಹವು ಬೆನ್ನು ಮೇಲಾಗಿ ಬಿದ್ದಿತ್ತು. ಇದು ೫-೬ ನೇ ಶತಮಾನದಲ್ಲಿ ಸಪ್ತಮಾತೃಕೆಯರೊಡನೆ ಪೂಜೆಗೊಳ್ಳುತ್ತಿತ್ತು. 

ಸಂಕುಶಗುಡದ ಭೈರವ 
ಅದೇ ರೀತಿ ಇಲ್ಲಿಗೆ ಸಮೀಪವಿರುವ ಸಂಕುಶಗುಡ ಎಂಬಲ್ಲಿ ಸಮಭಂಗಿಯಲ್ಲಿರುವ ಭೈರವನ ವಿಗ್ರಹ ದೊರೆಯಿತು. ಇದು ದೇವಾಲಯದ ಗರ್ಭಗೃಹದಲ್ಲಿ ಇದ್ದುದಕ್ಕೆ ಸಾಕ್ಷಿಯಾಗಿ ಈ ವಿಗ್ರಹದ ಎರಡು ಬದಿಗಳಲ್ಲಿ ಇಬ್ಬರು ಭಕ್ತರ ಚಿತ್ರಗಳಿವೆ. ಮೇಲ್ಭಾಗದಲ್ಲಿ ಕೈಗಳಲ್ಲಿ ಹಾರಹಿಡಿದು ಹಾರುತ್ತಿರುವ ವಿದ್ಯಾಧರ ಸ್ತ್ರೀ ಮತ್ತು ಪುರುಷರ ಚಿತ್ರಗಳಿವೆ. ಕೆಳಭಾಗದಲ್ಲಿ ಶಿವಗಣಗಳ ಜತೆಗೆ ಮಹಿಳೆಯರ ಚಿತ್ರಗಳಿದ್ದು, ಅವರಲ್ಲಿ ಒಬ್ಬಳು ಚಾಮರ ಬೀಸುತ್ತಿದ್ದರೆ, ಮತ್ತೊಬ್ಬಳು ಕುಳಿತು ಅಂಜಲಿ ಮುದ್ರೆಯಲ್ಲಿ ಪ್ರಾರ್ಥಿಸುತ್ತಿದ್ದಾಳೆ. ಪೀಠದ ತುದಿಯಲ್ಲಿ ಕುಳಿತಿರುವ ಭಂಗಿಯಲ್ಲಿರುವ ನಂದಿಯ ತಲೆಯು ತನ್ನ ಸ್ವಾಮಿಯನ್ನು ನೋಡುತ್ತಿದ್ದು, ಇದನ್ನು ಮತ್ಸ್ಯ ಪುರಾಣದಲ್ಲಿ "ದೇವ ವೀಕ್ಷಣಾ ತತ್ಪರಃ" ಎಂದು ವರ್ಣಿಸಲಾಗಿದೆ. ಬಲಭಾಗದಲ್ಲಿ ದಪ್ಪ ಹೊಟ್ಟೆಯ ಯಕ್ಷನ ಚಿತ್ರವಿದೆ. ಮೋಹನಗಿರಿ ಮತ್ತು ಸಂಕುಶಗುಡದ ಈ ವಿಗ್ರಹಗಳಲ್ಲಿ ಅನೇಕ ಸಾಮಾನ್ಯ ಅಂಶಗಳಿದ್ದು, ಇವು ೭-೮ನೇ ಶತಮಾನಕ್ಕೆ ಸೇರಿದವು ಎಂದು ನಿರ್ಣಯಿಸಬಹುದು. ಸಂಕುಶಗುಡದ ಸಮೀಪದಲ್ಲೇ ದೊರೆತಿರುವ ಇನ್ನೊಂದು ಭೈರವ ವಿಗ್ರಹದ ಅಕ್ಕ-ಪಕ್ಕಗಳಲ್ಲಿ ಮೂವರು ಮಹಿಳೆಯರು ಅಂಜಲಿ ಮುದ್ರೆಯಲ್ಲಿ ಕುಳಿತಿರುವರು. ಈ ವಿಗ್ರಹವನ್ನು "ಅಗ್ನಿಭೈರವ" ನೆಂದು ಹೆಸರಿಸಲಾಗಿದೆ.

ಉತ್ಕಟಿಕಾಸನ ಭೈರವ  
ಬಾಲಂಘೀರ್  ಜಿಲ್ಲೆಯ ತಿತಿಲಾಗಢದ ಸಮೀಪದಲ್ಲಿ ಗೂಡಾರ್ ಎಂಬ ಗ್ರಾಮವಿದೆ. ಇಲ್ಲಿರುವ ಚಿಕ್ಕ ಬೆಟ್ಟವನ್ನು "ಭೈನ್ರೋ ಪರ್ವತ"ವೆಂದು ಕರೆಯುವರು. ಇಲ್ಲಿರುವ ಬೃಹತ್ ಬಂಡೆಯ ಮೇಲೆ "ಏಕಪಾದ ಭೈರವ" ನನ್ನು ಚಿತ್ರಿಸಲಾಗಿದೆ.ಈ ಶಿಲ್ಪದ ಬಲಭಾಗದಲ್ಲಿರುವ ಪಟ್ಟಿಕೆಗಳಲ್ಲಿ ಕೆಳ ಭಾಗದಲ್ಲಿ ಕಾಳಿ ಅಥವಾ ಯೋಗೇಶ್ವರಿಯು ಓರ್ವ ರಾಕ್ಷಸನೊಡನೆ ಇರುವಂತೆ ಚಿತ್ರಿಸಲಾಗಿದ್ದು, ವೈಷ್ಣವಿ ಮತ್ತು ಮಾಹೇಶ್ವರಿಯರ ಎರಡು ಮಾತೃಕಾ ಚಿತ್ರಗಳಿವೆ. ಬಲಭಾಗದಲ್ಲಿ  ಇನ್ನೊಂದು ಬಂಡೆಯ ಮೇಲೆ ವಾರಾಹೀ, ಚಾಮುಂಡೀ ಮತ್ತು ಗಣೇಶ ವಿಗ್ರಹಗಳನ್ನು ಕೆತ್ತಲಾಗಿದೆ. ಏಕಪಾದ ಭೈರವನ ಈಶಾನ್ಯಕ್ಕೆ ಇರುವ ಬಂಡೆಯಲ್ಲಿ ಅಷ್ಟದಳ ಪದ್ಮ ಹಾಗೂ ಒಂದು ಜೋಡಿ ಪಾದಗಳನ್ನು ಕಡೆಯಲಾಗಿದೆ. ಬಂಡೆಗಳ ನಡುವೆ ಚೌಕಾಕಾರದ ಯಂತ್ರವಿದ್ದು, ಅದರಲ್ಲಿ ಎರಡು ಪಾದಗಳನ್ನು ಕೆತ್ತಲಾಗಿದೆ. ಅಂಧಕಾಸುರ ವಧೆ ಮತ್ತು ಮಾತೃಕಾ ವಿಗ್ರಹಗಳ ಚಿತ್ರಗಳಿವೆ. ಇನ್ನೊಂದು ಬಂಡೆಯ ಮೇಲೆ ನಾಲ್ಕು ಕೈಗಳ ಭೈರವನ ವಿಗ್ರಹವಿದ್ದು, ಇದು ಉತ್ಕುಟಿಕಾಸನದಲ್ಲಿ (ಎಂದರೆ ಅಯ್ಯಪ್ಪ ದೇವರ ವಿಗ್ರಹವಿರುವ ಭಂಗಿ) ಕುಳಿತಿದ್ದು, ತೊಡೆಗಳಿಗೆ ಯೋಗಪಟ್ಟಿಕೆಯಿದೆ. ಇದು ತೀರ ವಿರಳ ಶೈಲಿಯ ಭೈರವ ವಿಗ್ರಹವೆನ್ನಬಹುದು. ಆತನ ವಾಹನ ನಾಯಿಯು ಸಮೀಪದಲ್ಲಿ ಓಡುತ್ತಿರುವಂತೆ ಚಿತ್ರಿಸಲಾಗಿದೆ. ವೃತ್ತದೊಳಗೆ ಕೆತ್ತಲ್ಪಟ್ಟ ಪಾದಗಳ ಸಂಕೇತವೆಂದರೆ, ಅವು ಆ ಕಾಲದಲ್ಲಿ ಸಾಮಾನ್ಯವಾಗಿ ಪ್ರಚಲಿತವಿದ್ದ ಪ್ರಬಲ ತಾಂತ್ರಿಕ ಗುರುಗಳಾದ ಶೈವಾಚಾರ್ಯರ ಶ್ರೇಷ್ಠತೆಯನ್ನು ಪ್ರತಿನಿಧಿಸುತ್ತವೆಯೆಂದು ಡಾ. ಪಾಂಡಾ ಸರಿಯಾಗಿ ಗುರ್ತಿಸಿದ್ದಾರೆ. 

ನರ್ತನ ಭೈರವ 
ಗೂಡಾರ್ ಗ್ರಾಮದ ಈಶಾನ್ಯಕ್ಕೆ ಎಂಟು ಅಡಿ ಎತ್ತರ, ಮೂವತ್ತು ಅಡಿ ಉದ್ದದ ಒಂದು ಶಿಲಾಖಂಡವಿದೆ. ಅದರ ಮೇಲೆ ಸಪ್ತಮಾತೃಕಾ ಸಹಿತವಾದ ಭೈರವ ಊರ್ಧ್ವ ಲಿಂಗ ಶಿಲ್ಪವಿದೆ. ಇದೇ ಬಂಡೆಯ ಹಿಂಬದಿಯಲ್ಲಿ ನಾಲ್ಕು ಕೈಗಳುಳ್ಳ ನರ್ತನ ಭೈರವನ ವಿಗ್ರಹವಿದೆ. ಆತನು ಭೈರವನ ಎಲ್ಲ ಸಾಮಾನ್ಯ ಲಕ್ಷಣಗಳನ್ನು ಹೊಂದಿದ್ದು, ಕೈಗಳಲ್ಲಿ ಸರ್ಪಗಳಿವೆ. ಇದು ತಾಂತ್ರಿಕಾರಾಧನೆಯಲ್ಲಿ ಬಳಕೆಯಾಗುತ್ತಿದ್ದ ವಿಗ್ರಹ ಶೈಲಿ. ಅದೇ ರೀತಿ,ಗೂಡಾರ್‌ನ ಸಮೀಪದ ರಾಣಿಪುರ ಜರಿಯಾಲ್‌ನಲ್ಲಿ ಮೂರು ಮುಖಗಳುಳ್ಳ ಮತ್ತು ಎಂಟು ಕೈಗಳಿರುವ ಭೈರವ ವಿಗ್ರಹವಿದ್ದು, ಇದು ಆನಂದ ತಾಂಡವ ನರ್ತನಶೈಲಿಯಲ್ಲಿರುವ ಇನ್ನೊಂದು ಅಪರೂಪದ ವಿಗ್ರಹ. ಇದನ್ನು ತೆರೆದ ಮಂಟಪದಲ್ಲಿಟ್ಟು ಪೂಜಿಸಲಾಗುತ್ತಿತ್ತು. ಈ ದೇಗುಲವು ವರ್ತುಲಾಕಾರದಲ್ಲಿತ್ತು ಮತ್ತು ಅರವತ್ತನಾಲ್ಕು ಯೋಗಿನಿಯರ ವಿಗ್ರಹಗಳನ್ನು ಕಡೆಯಲಾಗಿತ್ತು. ಇದು ನಟರಾಜನ ಶೈಲಿಯಲ್ಲಿರುವಂತೆ ಹೊರನೋಟಕ್ಕೆ ಕಂಡರೂ, ಈ ಲೇಖಕನು ಅದನ್ನು ಒಪ್ಪುವುದಿಲ್ಲ ಮತ್ತು ಇದು ಅರವತ್ನಾಲ್ಕು ಯೋಗಿನೀಪೀಠದ ಕೇಂದ್ರದಲ್ಲಿದ್ದ ಊರ್ಧ್ವಲಿಂಗ ಭೈರವನದೆಂದು ಅಭಿಪ್ರಾಯಪಡುತ್ತಾನೆ. ಭೈರವನ ಎಡಪಾದವು ಮಲಗಿರುವ ನಂದಿಯ ಮೇಲೆ ಇಡುವಂತೆ ಇದ್ದು, ತಲೆಯೆತ್ತಿರುವ ನಂದಿಯ ಈ ಶೈಲಿಯನ್ನು ದೇವವೀಕ್ಷಣಾತತ್ಪರಃ ಎಂದು ವಿವರಿಸಲಾಗಿದೆ.  ಭೈರವನ ಕೈಗಳಲ್ಲಿರುವ ಸರ್ಪಗಳನ್ನು ಅಂಧಕಾಸುರನ ವಧಾ ಸಮಯದಲ್ಲಿ ನೆರವಾದ ಪ್ರಸಿದ್ಧ ನಾಗಗಳಾದ ತಕ್ಷಕ ಮತ್ತು ಧನಂಜಯರೆಂದು ಹೆಸರಿಸಲಾಗಿದೆ. ಆತನ ಕೈಗಳಲ್ಲಿರುವ ಇತರ ಆಯುಧಗಳೆಂದರೆ, ತ್ರಿಶೂಲ, ಡಮರು, ಬಲಗೈಯು ವರದಹಸ್ತ ಭಂಗಿಯಲ್ಲಿದೆ. ಎಡ ಮೇಲುಗೈಯಲ್ಲಿ ಗದೆಯಿದೆ. ಮೂರನೆಯ ಎಡಗೈನಲ್ಲಿ ಅಕ್ಷಮಾಲೆಯಿದೆ. ಆತನ ಕಣ್ಣುಗಳು ಮುಚ್ಚಿವೆ. ಇದು ಶಿವನು ಶಾಂತಮುದ್ರೆಯಲ್ಲಿರುವ ಸ್ವರೂಪ. ಯೋಗಿಣಿಯರನ್ನು ತೊಂದರೆಗೊಳಪಡಿಸಿದಾಗ ಆತ ಕ್ರುದ್ಧ. ಕಥಾಸರಿತ್ಸಾಗರದಲ್ಲಿನ ಒಂದು ಕಥೆಯಲ್ಲಿ ಚಂದ್ರವಂಶಿಯು ಆತನನ್ನು ಮಾತೃಚಕ್ರದ ಮಧ್ಯದಲ್ಲಿ ನೋಡಿದನೆಂಬ ಉಲ್ಲೇಖವಿದೆ. ಆಕೆಯ ಜತೆಯಲ್ಲಿ ನಾರಾಯಣಿಯೂ ಇದ್ದಳು. ಅವರೆಲ್ಲರೂ ಭೈರವನಿಗೆ ಉಡುಗೊರೆಗಳನ್ನು ನೀಡಲು ಕಾತುರರಾಗಿದ್ದರು. ನಾರಾಯಣಿ ಅಥವಾ ವೈಷ್ಣವಿಯು ಭೈರವನು ಬರಲು ತಡವೇಕಾಯಿತೆಂದು ವಿವರಿಸುತ್ತಿರುವಾಗಲೇ, ಮಾತೃಚಕ್ರಮಧ್ಯಸ್ಥನಾದ ಭೈರವನು ಅಲ್ಲಿಗೆ ಆಗಮಿಸಿದನು. ಆಗ ಭೈರವನು ಅಲ್ಲಿದ್ದ ಯೋಗಿನಿಯರೊಂದಿಗೆ ನರ್ತಿಸಿದನು (ತಾಂಡವೇನ ಕ್ಷಣಮ್ ನೃತ್ಯನಾಕ್ರೀಡಯದ್ದ್ಯೋಗಿನೀಸ್ಸಹ) ಎಂಬ ಉಲ್ಲೇಖವಿದೆ. ಅಗ್ನಿಪುರಾಣದಲ್ಲಿ ಭೈರವನನ್ನು ಮಾತೃನಾಥನೆಂದು ವಿವರಿಸಲಾಗಿದೆ. ತಾಂತ್ರಿಕ ಕೌಲವೆಂಬ ಗ್ರಂಥದ ಕುಲಾರ್ಣವ ಮತ್ತು ಮೇರು ತಂತ್ರಗ್ರಂಥಗಳಲ್ಲಿ ಭೈರವನು "ಯೋಗಿನೀಚಕ್ರಮಧ್ಯಸ್ಥಮ್" ಎಂದು ಹೇಳಲಾಗಿದೆ.

ಮಹಾಗಾವ್ ನ ಭೈರವ 
ನಾಲ್ಕು ಕೈಗಳ ನರ್ತನ ಭೈರವನ ವಿಗ್ರಹವು ವಿಶೇಷವೆಂದು ಹೇಳಲಾಗಿದೆಯಾದರೂ, ಭಾಲಂಗೀರ್ ಜಿಲ್ಲೆಯ ಮಹಾಗಾಂವ್‌ನಲ್ಲಿರುವ ಶಿವ ದೇವಾಲಯದಲ್ಲಿನ ಭೈರವನ ಇನ್ನೊಂದು ವಿಗ್ರ ತಲೆ  ಮತ್ತು ಉಳಿದೆಲ್ಲ ಅಂಗಾಂಗಗಳು, ಆಭರಣಗಳಲ್ಲಿ ಇತರ ವಿಗ್ರಹಗಳ ಸಾಮ್ಯತೆಯಿದೆಯಾದರೂ, ವಿಶೇಷವೆಂದರೆ ಆತನ ಜಟಾಮುಕುಟದ ಎಡಭಾಗದಲ್ಲಿ ಬಾಲಚಂದ್ರನನ್ನು ಚಿತ್ರಿಸಲಾಗಿದೆ.  ಭೈರವ ಮತ್ತು ಚಾಮುಂಡಿಯರು ಈರ್ವರೂ ಇರುವ ವಿಗ್ರಹಗಳು ಈ ಪ್ರದೇಶದಲ್ಲಿ ಸರ್ವಸಾಧಾರಣವೆನ್ನುವಂತೆ ಕಂಡುಬಂದಿದೆ. ಇವುಗಳನ್ನು ಕೆಂಪು ಮರಳುಗಲ್ಲುಗಳಲ್ಲಿ ಕೆತ್ತಲಾಗಿದೆ. ಇವುಗಳಲ್ಲಿ ಕೆಲವು ೮ ಅಡಿ ಎತ್ತರ ಮತ್ತು ೬ ಅಡಿ ಅಗಲದ ವಿಗ್ರಹಗಳು ದೊರಕಿವೆ. ಕಾಲಹಂದಿ ಜಿಲ್ಲೆಯ ಚೌರೀಗಢವೆಂಬ ಊರಿನಲ್ಲಿರುವ ನಾಲ್ಕು ಕೈಗಳನ್ನು ಹೊಂದಿರುವ ಭೈರವನ ವಿಗ್ರಹ ೧೮ ಅಡಿ ಎತ್ತರದ ಭವ್ಯಮೂರ್ತಿ. 

ಪಾಟಣಗಢದ ಭೈರವನ ವಿಗ್ರಹದ ಬಗ್ಗೆ ಈಗಾಗಲೇ ಒಂದು ವಿಸ್ತಾರವಾದ ಲೇಖನ ಪ್ರಕಟವಾಗಿದೆ. ಭಾಲಂಘೀರ್ ನ  ಪುನಿತಾಲ ಎಂಬ ಊರಿನಲ್ಲಿರುವ ಸ್ವಪ್ನೇಶ್ವರ ದೇವಾಲಯದಲ್ಲಿ ನಾಲ್ಕು ಕೈಗಳ ಭೈರವನ ವಿಗ್ರಹವಿದೆ. ಇದು ಭಂಜರ ಕಾಲಕ್ಕೆ ಸೇರಿದ್ದೆಂದು ತರ್ಕಿಸಲಾಗಿದೆ ಮತ್ತು ೯ನೇ ಶತಮಾನದ ಪ್ರಥಮಾರ್ಧ ಭಾಗದಲ್ಲಿ ಇದು ರಚಿತವಾಗಿರಬಹುದು ಎನ್ನಲಾಗಿದೆ. 

ಮಹಾನದಿ ಕಣಿವೆಯಲ್ಲಿ ದೊರೆತಿರುವ ಭೈರವನ ಬಿಡಿ ವಿಗ್ರಹಗಳ ಬಗ್ಗೆ ಚರ್ಚಿಸುವಾಗ, ಎಂಟು ಕೈಗಳನ್ನುಳ್ಳ ಇನ್ನೂ ಎರಡು ವಿಗ್ರಹಗಳನ್ನು ಪರಿಶೀಲಿಸುವುದು ಔಚಿತ್ಯಪೂರ್ಣವಾಗಿದೆ. ಇವಗಳಲ್ಲೊಂದು ಬಾಲಂಗೀರ್‌ನ ದೇವಗಾಂವ್‌ನಲ್ಲಿದೆ ಮತ್ತೊಂದು ಪಾಟಣಗಢದ ಕೋಟೆಯ ಸಮೀಪದಲ್ಲಿರುವ ಆಧುನಿಕ ದೇವಾಲಯದಲ್ಲಿ ಇರಿಸಲಾಗಿದೆ. ದೇವಗಾಂವ್‌ನ ವಿಗ್ರಹವು ನರ್ತನ ಭಂಗಿಯಲ್ಲಿದೆ. ಎಂಟು ಕೈಗಳಲ್ಲಿ ಕ್ರಮವಾಗಿ ಎಡಭಾಗದಲ್ಲಿ ಮೇಲಿನಿಂದ ಕೆಳಗೆ ಖಡ್ಗ, ಕಿರುಗತ್ತಿ, ಮತ್ತು ವಜ್ರಗಳನ್ನು ಹೊಂದಿದೆಯಾದರೆ ಕೆಳಗಿನ ಕೈಯನ್ನು ಒಡೆದು ಹಾಕಿರುವುದರಿಂದ ಏನಿದೆಯೆಂದು ತಿಳಿಯಲಾಗದು. ಅದೇ ರೀತಿ ಬಲಭಾಗದ ಕೈಗಳಲ್ಲಿ ಮೇಲಿನಿಂದ ಕೆಳಗೆ ಕ್ರಮವಾಗಿ ಶಂಖ, ಸರ್ಪ, ಕಪಾಲ ಮತ್ತು ಗದೆಗಳು ಇವೆ. ಇದು ಅಘೋರ ಶಿವನ ಸ್ವರೂಪವಾಗಿದ್ದು ರೌದ್ರಾಕಾರದಲ್ಲಿದೆ. ವಿಶೇಷವೆಂದರೆ ಇದರ ಇಕ್ಕೆಲಗಳಲ್ಲಿ ಏಳು ವನಿತೆಯರ ಚಿತ್ರಗಳಿದ್ದು, ಅವರು ಛತ್ರವನ್ನು ಹಿಡಿದು ಸಾಗುತ್ತಿರುವಂತೆ ಕೆತ್ತಲಾಗಿದೆ. ಬಾಲಂಗೀರ್ ಜಿಲ್ಲೆಯಲ್ಲಿ ಪಾಟಣಗಢದಿಂದ ೪೦ ಕಿ.ಮೀ. ದೂರದಲ್ಲಿರುವ ಹರಿಶಂಕರ ದೇವಾಲಯದಲ್ಲೂ ಭೈರವನ ವಿಗ್ರಹಗಳಿವೆ. ಇಲ್ಲಿಗೆ ಸಮೀಪದಲ್ಲಿರುವ ಕುಶಾಂಗ್‌ನಲ್ಲಿರುವ ಕೋಸಲೇಶ್ವರ ಶಿವ ಮಂದಿರ ಹಾಗೂ ಸೋನೇಪುರದ ಸಮೀಪದಲ್ಲಿರುವ ಪಶ್ಚಿಮ ಸೋಮನಾಥ ಗುಡಿಯಲ್ಲೂ ಭೈರವನ ವಿಗ್ರಹಗಳಿವೆ. ಇವು ೧೫-೧೬ನೇ ಶತಮಾನದಲ್ಲಿ ಆಳಿದ ಚೌಹಾನರ ಆರಾಧ್ಯ ದೈವಗಳೆಂದು ತಿಳಿಯಲಾಗಿದೆ. 
ದೇವಗಾವ್ (ಬಾನೆಯ್) ಭೈರವ 
ಸುಂದರಗಢ ಜಿಲ್ಲೆಯಿಂದ ಮೂರು ಕಿ.ಮೀ. ದೂರದಲ್ಲಿರುವ ಬಾನೇಯ್ ಪ್ರಾಂತದಲ್ಲಿ ಬಾಣೇಶ್ವರ ಶಿವಮಂದಿರವಿದೆ. ಇಲ್ಲಿಯೂ ಅರ್ಧ ಭಂಗಿಯಲ್ಲಿರುವ ಭೈರವನ ವಿಗ್ರಹವಿದೆ. ಬುದ್ಧನ ವಿಗ್ರಹಗಳಲ್ಲಿ ಕಂಡುಬರುವಂಥ ಶಿರೋಧಾರವಿದೆ.  ಎರಡು ಬದಿಗಳಲ್ಲಿ ಕಮಲದ ಚಿತ್ರಗಳಿವೆ. ಈ ಲಕ್ಷಣಗಳಿಂದ ಇದು ೧೨ ನೇ ಶತಮಾನಕ್ಕೆ ಸೇರಿದ ಸೋಮವಂಶೀಯರ ಕಾಲದ್ದು ಎಂದು ಹೇಳಬಹುದು. 

ಶೈವ ಪಂಥದ ಭೈರವ ಆರಾಧನೆಯು ಪಶ್ಚಿಮ ಒರಿಸ್ಸಾದ ಆದಿವಾಸಿ ಜನಾಂಗಗಳಲ್ಲಿ ೮ನೇ ಶತಮಾನದ ಭಂಜರ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಸ್ಥಿತಿಯನ್ನು ತಲುಪಿತ್ತು. ಈ ಪ್ರದೇಶಗಳಲ್ಲಿ ದೊರೆತಿರುವ ಬಹುತೇಕ ಭೈರವ ವಿಗ್ರಹಗಳು ಊರ್ಧ್ವಲಿಂಗವನ್ನು ಹೊಂದಿದವೇ ಆಗಿವೆ. ವಿಶೇಷವೆಂದರೆ ಮಹಾಗಾಂವ್‌ನ ದುಂಗ್ರಿಪಾಲಿಯಲ್ಲಿರುವ ನಟರಾಜನ ವಿಗ್ರಹ, ರಾಣೀಪಾಲ್‌ನಲ್ಲಿರುವ ೬೪ ಯೋಗಿನೀ ಸಹಿತ ನಟರಾಜನ ವಿಗ್ರಹಗಳು ಹಾಗೂ ಟೋಪೀಗಾಂವ್‌ ಮತ್ತು ಬೆಲಖಂಡಿಯಲ್ಲಿರುವ ಮಹೇಶ್ವರ ವಿಗ್ರಹಗಳು ಊರ್ಧ್ವಲಿಂಗವನ್ನು ಹೊಂದಿದವೇ ಆಗಿವೆ. ಈ ಬಗೆಯ ಊರ್ಧ್ವಲಿಂಗವುಳ್ಳ ವಿಗ್ರಹಗಳು ಅಸ್ಸಾಂ, ಬಂಗಾಳ ಮತ್ತು ಒರಿಸ್ಸಾಗಳಲ್ಲಿ ಕುಶಾನರ ಕಾಲದಿಂದಲೂ ಕಂಡುಬರುತ್ತವೆ. ಊರ್ಧ್ವಲಿಂಗವು ಶಾಶ್ವತ ಬ್ರಹ್ಮಚರ್ಯದ ಸಂಕೇತ. ಇದನ್ನೇ "ಊರ್ಧ್ವ ರೇತಸ್" ಎಂದು ಕರೆದಿದ್ದಾರೆ. ಶಿವನ ತಪಸ್ಸನ್ನು ಭಂಗಪಡಿಸಲು ಯತ್ನಿಸಿದ ಕಾಮನನ್ನು ಶಿವನು ದಹಿಸಿದ ಕಥೆ ಭಾರತಾದ್ಯಂತ ಪ್ರಚಲಿತ. ಮುಖ್ಯವಾಗಿ ಶಿವನು ಐಹಿಕ ಕಾಮನೆಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ ಕುರುಹು. 

ಕಾಮ ಮತ್ತು ಶಿವನ ಸಾಂಗತ್ಯವನ್ನು ವಿವರಿಸುವ ಇನ್ನೊಂದು ಸ್ವಾರಸ್ಯಕರ ಶಿಲ್ಪವು ನೌಪದ ಜಿಲ್ಲೆಯ ದುಂಗುರಿಪಲ್ಲಿ ಎಂಬ ಹಳ್ಳಿಯಲ್ಲಿ ದೊರೆತಿದೆ. ಇಲ್ಲಿರುವ ಎಂಟು ಕೈಗಳ ಭೈರವ ವಿಗ್ರಹದ ಬದಿಯಲ್ಲಿ ಒಂದು ಊರ್ಧ್ವಲಿಂಗಿಯಾದ ಪುರುಷನ ಮೇಲೆ ಓರ್ವ ಸ್ತ್ರೀ ಪ್ರೇಮಕ್ರೀಡೆ ನಡೆಸುತ್ತಿರುವ ಚಿತ್ರವಿದೆ. ಈಕೆಯನ್ನು ಸ್ಥಳೀಯರು "ಜಾರಿಣಿ" ಎಂದು ಕರೆಯುವರು. ಆದರೆ ಅದು ದಕ್ಷಿಣ ಕಾಳಿಕೆ ಎಂಬ ದೇವತೆಯಾಗಿರಬಹುದು. ಏಕೆಂದರೆ ಸಾಧಾರಣವಾಗಿ ಆಕೆಯನ್ನು ಹಲವೆಡೆ ಶಿವನ ಶವದ ಮೇಲೆ ಕುಳಿತು  ಸಂಭೋಗಿಸುತ್ತಿರುವಂತೆ ಚಿತ್ರಿಸಲಾಗಿರುತ್ತದೆ. ಈ ಬಗೆಯ ವಿಗ್ರಹವು ಕರ್ಪೂರಾದಿ ಸ್ತೋತ್ರದಲ್ಲಿ ಹೇಳಲಾಗಿರುವ ವಿವರಣೆಗಳೊಂದಿಗೆ ಹೊಂದಿಕೊಳ್ಳುತ್ತದೆ. ಈ ಸ್ತೋತ್ರದ ಪಾಠದಂತೆ, ಈಕೆಯು ನಿರ್ವಾಣವನ್ನು ನೀಡುವವಳು. ಅದರಲ್ಲಿ "ಪ್ರಜ್ವಲನಾಗಿ ಬೆಳಗುತ್ತಿರುವ ಕಾಮ ಸ್ವರೂಪಿಯಾದ ಕಾಲನನ್ನು ನಾಶಮಾಡುವ ಕಾಳಿಯಾದ ನಾನು ದಕ್ಷಿಣ ಕಾಳಿಕೆ" ಎಂಬ ವಿವರಣೆಯಿದೆ.

ಈ ಹಿಂದಿನ ವಿವರಣೆಗಳಲ್ಲಿ ನಾವು ಭೈರವನನ್ನು ೬೪ ಯೋಗಿನಿಯರೊಡನೆ, ತೆರೆದ ದೇವಾಲಯಗಳಲ್ಲಿ ಸ್ಥಾಪಿಸಲಾಗುತ್ತಿತ್ತು ಎಂದು ತಿಳಿದಿದ್ದೇವೆ. ಇದರ ಉದ್ದೇಶವೆಂದರೆ, ಈ ಪೀಠಗಳಲ್ಲೇ ತಾಂತ್ರಿಕ ಸಾಧಕರು ತಮ್ಮ ಯೋಗಿಕ-ಲೈಂಗಿಕ ಸಾಧನೆಗಳಲ್ಲಿ ತೊಡಗಿಕೊಳ್ಳುತ್ತಿದ್ದರೆಂದು ಗ್ರಹಿಸಬಹುದು. ೬೪ ಯೋಗಿನಿಯರ ಮಂದಿರ ಸ್ಥಾಪನೆಯೇ ತಾಂತ್ರಿಕ ಸಾಧನೆಯ ಉದ್ದೇಶ ಹೊಂದಿರುತ್ತದೆ ಮತ್ತು ಭೈರವನು ಯೋಗಿನಿಯರ ಕೇಂದ್ರಬಿಂದುವಾಗಿರುತ್ತಾನೆ. 

ಭೈರವರ ಬಗ್ಗೆ ವಿವರಣೆಗಳು "ವಿಷ್ಣು ಧರ್ಮೋತ್ತರ" ದಲ್ಲಿ ಇವೆ. ಇದರಲ್ಲಿ ಪ್ರಮುಖವಾಗಿ ವಟುಕ ಭೈರವ ಮತ್ತು ಸ್ವರ್ಣಾಕರ್ಷಣ ಭೈರವರನ್ನು ಮಾತ್ರ ಪ್ರಸ್ತಾಪಿಸಲಾಗಿದೆ. ಇದಲ್ಲದೆ ಜನಪ್ರಿಯವಾಗಿರುವ ಎಂಟು ಭೈರವ ರೂಪಗಳೆಂದರೆ : 1. ಅಸಿತಾಂಗ ಭೈರವ, ೨.ರುರು, ೩. ಚಂಡ, ೪, ಕ್ರೋಧ, ೫. ಉನ್ಮತ್ತ, ೬. ಕಪಾಲ, ೭. ಭೀಷಣ, ೮. ಸಂಹಾರ ಭೈರವರು, ಇವರಿಗೆ ಅಧಿದೇವತೆಗಳೆಂದು ಎಂಟು ರೂಪಗಳು ಮತ್ತು ಅವರಿಗೆ ಪ್ರತ್ಯಧಿದೇವತೆಗಳೆಂದು ಎಂಟು ರೂಪಗಳು, ಹೀಗೆ ಅರವತ್ತನಾಲ್ಕು ರೂಪಗಳು ಇದ್ದು, ಇವುಗಳ ವಿವರಗಳು ರುದ್ರಯಾಮಳ ಗ್ರಂಥದಲ್ಲಿ ದೊರೆಯುತ್ತವೆ.

ಅಜೈಕಪಾದ ಭೈರವ 
ಭೈರವನ ಮೂಲವು ಅಜೈಕಪಾದ ರೂಪದಿಂದಲೇ ಜನ್ಯ ಎಂದು ವಿದ್ವಾಂಸರ ವಿವರಣೆಯಿದೆ. ಅಜ+ಏಕ ಪಾದ, ಎಂದರೆ ಒಂಟಿಕಾಲಿನ ಭೈರವನೆಂದು ಅರ್ಥ. ಇದು ತಾಂತ್ರಿಕರ ದೈವ. ತಾಂತ್ರಿಕ ಸಾಹಿತ್ಯದಲ್ಲಿ ದೊರೆಯುವ ಅಜೈಕಪಾದನ ವಿವರಣೆಯನ್ನು ಅನುಸರಿಸಿ ಹೊರಟರೆ, ಅದು ವೇದಗಳಲ್ಲಿ ಉಲ್ಲೇಖಿತವಾಗಿರುವ ಅಗ್ನಿ, ಹವನ ವಿಧಿಗಳು, ಬ್ರಹ್ಮಾಂಡದ ಮಧ್ಯ ಸ್ತಂಭ ಮತ್ತು ಯೋಗಿನಿಯರೊಂದಿಗೆ ಹೊಂದಿರುವ ಸಂಬಂಧಗಳೊಂದಿಗೆ ತಾಳೆಯಾಗುತ್ತದೆ. ಆತನ ಆಯುಧಗಳೆಲ್ಲವೂ ಶೈವಸಂಬಂಧಿತವಾದವು. ಆತನು ಊರ್ಧ್ವಲಿಂಗ ಮತ್ತು ವ್ಯಾಘ್ರಚರ್ಮಾಂಬರಧರ. ಪುರಿಯಲ್ಲಿನ ಜಗನ್ನಾಥನ ಶಿಲ್ಪಶೈಲಿಯು ಏಕಪಾದ ಭೈರವನಿಂದಲೇ ಪ್ರಭಾವಿತವಾಗಿರಬಹುದೆಂದು ಸ್ಟೈಟೆನ್ಕ್ರಾನ್ ರ ಅಭಿಪ್ರಾಯ. ರಾಣೀಪುರ ಜರೀಯಾಲ್‌ನಲ್ಲಿ ವೀರಭದ್ರನು ಸಪ್ತಮಾತೃಕೆಯರ ಜತೆಗೆ ಇರುವುದರ ಬದಲಾಗಿ, ಏಕಪಾದ ಭೈರವನನ್ನು ಕಡೆದಿರುವುದು ವಿಶೇಷವೆಂದು ತಿಳಿಯಬಹುದು.

ಡಾ. ಪಾಂಡಾ  ಕೆಲವು ಶೈವಾಚಾರ್ಯರು ಭೈರವನ ವಿಗ್ರಹ ಪ್ರಭೇದಗಳನ್ನು ಗ್ರಹಿಸದೇ, ಕೆಲವೊಮ್ಮೆ ಹಾಗೆಯೇ ಒಪ್ಪಿಕೊಂಡಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದಿದ್ದಾರೆ. ಬೌದ್ಧ ತಾಂತ್ರಿಕ ಪಂಥಗಳ ಪ್ರಭಾವದಿಂದಾಗಿ, ಶೈವರೂ ಯೋಗಿನೀ ಸಹಿತ  ಭೈರವಾರಾಧನೆಯನ್ನು ರೂಢಿಗೊಳಿಸಲು ಪ್ರಯತ್ನಿಸಿರಬಹುದು ಎಂಬ ತರ್ಕವೂ ಇದೆ. ಒರಿಸ್ಸಾದ ಪಶ್ಚಿಮ ಭಾಗದಲ್ಲಿರುವ ಆದಿವಾಸಿ ವಲಯಗಳಲ್ಲಿ ಭೈರವನ ಅಘೋರ ರೂಪವನ್ನು ಆರಾಧಿಸುತ್ತಿದ್ದರು. ಅವರು ಅವನೊಂದಿಗೆ ಪಾಟಣಕುಮಾರಿಯರನ್ನು ಆರಾಧಿಸುತ್ತಿದ್ದರು. ಇದೇ ಮುಂದೆ ಸಾಥೇನ (ಸಪ್ತ ಸೋದರಿಯರು) ಎಂಬ ಆಚರಣೆಗೆ ನಾಂದಿಯಾಯಿತು. ಈ ಅಭಿಪ್ರಾಯವನ್ನು ಪುಷ್ಟೀಕರಿಸಲು ದೊರೆಯುವ ಇನ್ನೊಂದು ಮಾಹಿತಿಯೆಂದರೆ, ಸಂಬಾಲಾದ ಪ್ರಸಿದ್ಧ ದೊರೆ ಇಂದ್ರಭೂತಿಯ ಸೋದರಿಯಾದ ವಿಖ್ಯಾತ ತಾಂತ್ರಿಕ ಗುರು ಲಕ್ಷ್ಮೀಂಕರಳು ಭೈರವ ಪಂಥವನ್ನೂ ಜನಪ್ರಿಯಗೊಳಿಸಿದಳು. ಈಕೆಯು ೮ನೇ ಶತಮಾನದಲ್ಲಿದ್ದ ಸಹಜಯಾನ ಬೌದ್ಧ ತಂತ್ರದ ಪ್ರತಿಪಾದಕಳೂ ಆಗಿದ್ದಳು.

ಹಿಂದೆ ಹೇಳಿರುವಂತೆ ಭೈರವನೊಡನೆ ಚಾಮುಂಡಿಯನ್ನು ತಾಂತ್ರಿಕ ಸಾಧನೆಗಳ ಉದ್ದೇಶಕ್ಕೆಂದು ಬಳಸಲಾಗುತ್ತಿತ್ತು. ಸತಿಯ ಶರೀರ ಭಾಗಗಳೆಲ್ಲ ಬಿದ್ದ ಸ್ಥಳಗಳು ಮುಂದೆ ಶಕ್ತಿಪೀಠಗಳಾಗಿ, ಅವುಗಳ ರಕ್ಷಣೆಗೆಂದು ಭೈರವನನ್ನು ಸ್ಥಾಪಿಸಿದ  ಬಗ್ಗೆ ಪೌರಾಣಿಕ ಉಲ್ಲೇಖಗಳು ಇವೆ. ಹೀಗಾಗಿಯೇ ಭೈರವ ಮತ್ತು ಶಕ್ತಿದೇವತೆಗಳ ಸಾಂಗತ್ಯ ಬೆಳೆದು ಬಂದಿತೆಂದು ಪ್ರೊ. ಥಾಮಸ್ ಡೊನಾಲ್ಡ್ಸನ್ ರ ಅಭಿಪ್ರಾಯ.

ಜುನಾಗಡ ಭೈರವ 
ತನ್ನ ವಿಘ್ನೇಶ್ವರ ಪ್ರತಿಷ್ಠಾವಿಧಿಯಲ್ಲಿ  ಕ್ಷೇತ್ರಪಾಲನೇ ಭೈರವನು ಎಂದು ಅಘೋರ ಶಿವಾಚಾರ್ಯರು ಹೇಳಿರುವರು. ಆತನ ಗುಡಿಗಳು ಗ್ರಾಮದ ಅಥವಾ ಊರುಗಳ ಈಶಾನ್ಯದಲ್ಲಿ ಇರುತ್ತವೆ. ಪ್ರತಿಷ್ಠಾಪನೆಗೆಂದು ಕ್ಷೇತ್ರಪಾಲನ ರಾಜಸಿಕ, ಸಾತ್ವಿಕ ಮೂರ್ತಿಗಳನ್ನು ಮಾತ್ರ ಬಳಸಬೇಕು ಎಂದು ಅಂಶುಮಭೇದಾಗಮ, ಸುಪ್ರಭೇದಾಗಮ ಮತ್ತು ಕರಣಾಗಮ ಗ್ರಂಥಗಳಲ್ಲಿ ಹೇಳಲಾಗಿದೆ. ೧೧-೧೨ ನೇ ಶತಮಾನದಲ್ಲಿ ಬೇಕಿ ಎಂಬ ಗ್ರಾಮದಲ್ಲಿ ಕುಳಿತಿರುವ ಭಂಗಿಯ ಭೈರವನ ವಿಗ್ರಹಗಳಿವೆ. ಒರಿಸ್ಸಾದ ಕಾಲಹಂದಿ ಜಿಲ್ಲೆಯ ಲಾಂಜೀಗಢ, ಮದನಪುರ, ರಾಮಪುರ, ಮೋಹನಗಿರಿ, ಉರ್ಲಾದನಿ, ಸಂಕುಶಗಢ, ಡಿಗ್ಸಿರಾ, ಬೆಲಖಂಡಿ, ಜುನಾಗಢ, ಟೋಪೀಗಾಂವ್, ಮೇದಿನೀಪುರ ಮತ್ತು ಖಮ್ತಾನಾ ಮುಂತಾದ ಪ್ರದೇಶಗಳಲ್ಲಿ ಭೈರವನ ಆರಾಧನೆ ಇಂದಿಗೂ ಮುಂದುವರೆದಿದೆ. ಈ ಭಯಂಕರ ಸ್ವರೂಪದ ದೈವವನ್ನು ಸೋನೇಪುರ, ಸಂಭಾಲಪುರ, ಹರಿಶಂಕರ, ಲಾಂಜೀಗಢ, ಪುಯಿನ್ತಲಗಳಲ್ಲಿ ದೊಡ್ಡ ಮಂದಿರಗಳಲ್ಲಿ ಪೂಜೆಗೈಯಲಾಗುತ್ತಿದೆ. ಆದಿವಾಸಿ ಸಮುದಾಯದವರಲ್ಲಿ ದ್ವಾದಶ ಭೈರವರ (೧೨) ಆರಾಧನೆಯಿದೆ. ಅವಗಳೆಂದರೆ : ೧. ಬುದ, ೨. ಅಗ್ನಿ, ೩. ಬಲಿ, ೪. ಬೇತಾಳ, ೫. ಸುಹಾರ, ೬. ಸೂದನ, ೭. ಕಣ, ೮. ಬಾಣ, ೯. ರಣ, ೧೦. ಜಲ, ೧೧. ದಂಡ ಮತ್ತು ೧೨. ಹೂಂಕಾರ ಭೈರವ. ಈ ಆದಿವಾಸಿಗಳಲ್ಲಿ ೧೨ ಸಂಖ್ಯೆಗೆ ಮಹತ್ವವಿರುವುದರಿಂದ ಅವರ ದೇವತೆಗಳಲ್ಲೂ ಅದು ಪ್ರತಿಫಲಿಸಿದೆ. ಉದಾಹರಣೆಗೆ ಬಾರಾಭಾಯಿ ಲಾಂಥ್, ಬಾರಾಭಾಯಿ ಭೀಮ, ಬಾರಾ ಪಹಾಡ್, ಬಾರಾಭಾಯಿ ಮರಾಳ ಮತ್ತು ಬಾರಾಭಾಯಿ ಬೆಂತಕರ ಇತ್ಯಾದಿ.

ಕ್ರಿ. ಶ. ೧-೨ ನೇ ಶತಮಾನಗಳಿಂದ ಮಹಾನದೀ ಕಣಿವೆಯಲ್ಲಿ ಆದಿವಾಸಿಗಳಿಂದ ಪೂಜಿತನಾಗಿದ್ದ ಭೈರವನು, ಕಾಲಕ್ರಮೇಣ, ಹಿಂದೂ ದೇವತೆಗಳ ಮುಖ್ಯವಾಹಿನಿಯಲ್ಲಿ ಸ್ಥಾನ ಪಡೆಯುವ ಪ್ರಕ್ರಿಯೆಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು, ಆಚರಣೆಗಳನ್ನು ರೂಢಿಸಿದನೆಂದು ಹೇಳಬಹುದು.

ಚಿತ್ರ-ಲೇಖನ ಕೃಪೆ: ಡಾ. ಶಶಾಂಕ ಪಾಂಡಾ

* * * * * * *