ಬುಧವಾರ, ಡಿಸೆಂಬರ್ 14, 2011

ಪ್ರಾಚೀನ ಶಿಲ್ಪಗಳ ಅಧ್ಯಯನ ಕ್ರಮ : ಒಂದು ಉದಾಹರಣೆ


ಒರಿಸ್ಸಾದ ಪಾಟಣಗಢದ ಭೈರವದೇವಾಲಯ ನಿರ್ಮಾಣ ಮತ್ತು ಪ್ರತಿಮಾ ಶಾಸ್ತ್ರಗಳಿಗೆ ಸಂಬಂಧಿಸಿದಂತೆ ವಿಶ್ವದ ಬೇರಾವ ದೇಶಗಳಿಗೂ ಇಲ್ಲದ ಪುರಾತನ ಇತಿಹಾಸದ ಬೆಂಬಲ ಭಾರತಕ್ಕೆ ಇದೆ. ಇದೇ ಕಾರಣದಿಂದಾಗಿ ಈ ದಿನಗಳಲ್ಲೂ ಅವುಗಳ ಅಧ್ಯಯನಕ್ಕೆ ಮನಸ್ಸು ಮಾಡುವವರಿಗೆ, ಸಾಕುಬೇಕೆನ್ನುವಷ್ಟು ವಿವರಗಳನ್ನು ಅವು ನೀಡುತ್ತವೆ. ಶಿಲ್ಪಕಲಾ ಕೌಶಲ್ಯವನ್ನು ಹೊಂದಿರುವ ನಮ್ಮ ಅನೇಕ ಗುಡಿ-ಗುಂಡಾರಗಳು ಕಾಲನ ಆಘಾತಕ್ಕೆ ಸಿಕ್ಕು, ನಮ್ಮ ನಿರ್ಲಕ್ಷಕ್ಕೆ ಒಳಗಾಗಿ ಅವನತಿಯ ಅಂಚಿಗೆ ಬಂದು ನಿಂತಿವೆ. ನಾವೆಲ್ಲರೂ ದೇವಾಲಯಗಳಿಗೆ ಭೇಟಿ ನೀಡುತ್ತೇವೆ. ಪುರಾತನ ದೇವಾಲಯಗಳ ಸೌಂದರ್ಯವನ್ನು ಕಂಡು ನಿಬ್ಬೆರಗಾಗುತ್ತೇವೆಶಿಲ್ಪಿಯು ಅದನ್ನು ನಿರ್ಮಿಸುವ ಕಾಲಕ್ಕೆ ಎಂಥ ವಾತಾವರಣ ಇದ್ದಿರಬಹುದು ಎಂದು ಊಹಿಸಿಕೊಂಡು ರೋಮಾಂಚಿತರಾಗುತ್ತೇವೆ. ಅದನ್ನು ನಿರ್ಮಿಸಿದ ರಾಜನ ಶಕ್ತಿಸಾಮರ್ಥ್ಯವನ್ನು ಹೊಗಳುತ್ತೇವೆ.

ದೇವಾಲಯ ಮತ್ತು ಪ್ರತಿಮಾಶಾಸ್ತ್ರವನ್ನೇ ಓದಿರುವ ತಜ್ಞರ ದೃಷ್ಟಿಕೋಣ ಮತ್ತು ಅವರ ವಿವರಣೆಗಳು, ಸಾಮಾನ್ಯ ಮನುಷ್ಯ ಊಹಿಸಿಕೊಳ್ಳುವುದಕ್ಕಿಂತ ವಿಭಿನ್ನವಾಗಿರುತ್ತವೆ. ಇಂಥ ಅಧ್ಯಯನದ ಒಂದು ಮಾದರಿಯನ್ನು ಇಲ್ಲಿ ನೀಡಲಾಗಿದೆ. ಇದರಲ್ಲಿ ಭೈರವನಿಗೆ ಸಂಬಂಧಿಸಿದಂತೆ ಇರುವ ಐತಿಹಾಸಿಕ ವಿಶ್ಲೇಷಣೆಯನ್ನು ಗಮನಿಸಿದರೆ, ನಾವು ಪುರಾತನ ದೇವಾಲಯಗಳಿಗೆ ಭೇಟಿನೀಡುವಾಗ ಗಮನಿಸಬೇಕಾಗುವ ಅನೇಕ ಅಂಶಗಳನ್ನು ಮನವರಿಕೆ ಮಾಡಿಕೊಳ್ಳಬಹುದು. ಇಲ್ಲಿ ಐತಿಹಾಸಿಕ ಚರ್ಚೆಯಿದೆ, ಸಾಧ್ಯತೆಗಳನ್ನು ತರ್ಕಬದ್ಧವಾಗಿ ನಿರೂಪಿಸುವ ಪರಿಯಿದೆ, ಶಿಲ್ಪದ ವಿಸ್ತೃತ ವಿವರಣೆಯ ವಿಧಾನ, ದೇಗುಲದ ಆರಂಭಕ್ಕೆ ಇರಬಹುದಾದ ಕಾರಣಗಳು, ಸ್ಥಳ ಮತ್ತು ಅದು ಮುಂದೆ ತೆರೆದಿಟ್ಟ ಅವಕಾಶಗಳ ಬಗ್ಗೆ ತಜ್ಞರು ವಿವರಿಸಿರುವ ಕ್ರಮಗಳನ್ನು ಗಮನಿಸಬಹುದು.

ಈ ಲೇಖನದ ಕರ್ತೃ ಯದುಮಣಿ ಮಹಾಪಾತ್ರ. ಇವರು ಇತಿಹಾಸದ ಸಂಶೋಧಕರು. ಒರಿಸ್ಸಾ ರಾಜ್ಯದ  ಪಾಟಣಗಢದ ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಪಕರಾಗಿರುವ ಎಸ್.ಪಿ. ಕುಂತಿಯಾ ಅವರು ತಮ್ಮ ಸಂಶೋಧನೆಯ ಕಾಲದಲ್ಲಿ ಗಮನಿಸಿದ ಭೈರವನ ವಿಗ್ರಹದ ಬರೆದ ಲೇಖನದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ವಿಗ್ರಹ ತೀರ ದೊಡ್ಡದೇನಲ್ಲ. ಎರಡೂವರೆ ಅಡಿ ಎತ್ತರವಿರುವ ಈ ವಿಗ್ರಹ ಒರಿಸ್ಸಾ ರಾಜ್ಯದ ಬೋಲಂಗೀರ್ ಜಿಲ್ಲೆಯ ಸಮೀಪ ೩೮ ಕಿ.ಮೀ. ದೂರದ ಹೊಲವೊಂದರಲ್ಲಿ ದೊರಕಿತು. ಅದಕ್ಕೆ ಸಿಮೆಂಟು ಇಟ್ಟಿಗೆಗಳ ಮಂದಿರವನ್ನು ನಿರ್ಮಿಸಿ, ಬ್ರಾಹ್ಮಣರಲ್ಲದ ಒಬ್ಬ ಅರ್ಚಕನನ್ನು ಪೂಜೆಗೆಂದು ನೇಮಿಸಲಾಗಿದೆ. ಈ ದೇವಾಲಯ ಈಗಿರುವ ಸ್ಥಳದಲ್ಲಿ ಇರಲಿಲ್ಲವೆಂದು ಐತಿಹಾಸಿಕ ದಾಖಲೆಗಳು ತಿಳಿಸುತ್ತವೆ. ಕ್ರಿ.ಶ.  ೮ ರಿಂದ ೧೧ನೇ ಶತಮಾನಗಳ ನಡುವೆ ಈ ಪ್ರದೇಶದಲ್ಲಿದ್ದ ಮಾಯಾವತೀ ಮತ್ತು ಸ್ವರ್ಣರೇಖಾ ಎಂಬ ಕಿರುನದಿಗಳ ತೀರದಲ್ಲಿ ದೊರೆತ ಪುರಾತನ ವಸ್ತುಗಳ ಕುರುಹುಗಳನ್ನು ಆಧರಿಸಿ ಹೇಳುವುದಾದರೆ, ಅಲ್ಲೊಂದು ನಗರವಿತ್ತು.  ಈಗ ದೇಗುಲ ಸೇರಿರುವ ಮೂರ್ತಿಯು ಹೊಲದಲ್ಲಿ ದೊರಕಿದಾಗ ಅದನ್ನು ನಿರ್ಲಕ್ಷಿಸದೇ ಅದಕ್ಕೊಂದು ಮಂದಿರ ನಿರ್ಮಿಸಿದರು.

ಈ ವಿಗ್ರಹವನ್ನು ಮರಳುಗಲ್ಲಿನಿಂದ ಕೆತ್ತಲಾಗಿದ್ದು, ಇದು ಎಂಟು ಕೈಗಳನ್ನು ಹೊಂದಿದೆ. ಅದರ ಕಾಲಗಳು ಪ್ರೇತಾಸನದ ಮೇಲೆ ನರ್ತಿಸುವ ಭಂಗಿಯಲ್ಲಿದೆ. ಬಲಗೈನಲ್ಲಿ ಖಡ್ಗವಿದೆ. ಬಲಭಾಗದ ಉಳಿದ ಕೈಗಳಲ್ಲಿ ಮೇಲಿನಿಂದ ಕೆಳಗೆ ಚಿಕ್ಕ ಹಿಡಿಯ ತ್ರಿಶೂಲ, ಮುಸಲಾಯುಧ ಮತ್ತು ಕಿರುಗತ್ತಿಗಳು ಕಂಡುಬರುತ್ತವೆ. ಎಡಗೈನಲ್ಲಿ ಗುರಾಣಿ (ಖೇಟಕ) ಅಗ್ನಿ ಸಹಿತವಾದ ಧನಸ್ಸು, ಅಂಕುಶ ಹಾಗೂ ನಾಗಪಾಶಗಳಿವೆ.  ಇತರ ಗಮನಾರ್ಹ ವಿವರಗಳೆಂದರೆ : ಮಣಿಖಚಿತವಾದ ಮುಂಗೈ ಕಟ್ಟುಗಳು, ತೋಳಬಂದಿ ಮತ್ತು ಕಾಲಬಂದಿಗಳು. ಎದೆಯಲ್ಲಿ ಯಜ್ಞೋಪವೀತವನ್ನು ಸ್ಪಷ್ಟವಾಗಿ ಮೂಡಿಸಲಾಗಿದೆ. ಭೈರವ ವಿಗ್ರಹದ ದಪ್ಪ ಮೂಗು, ಮಾಂಸಲ ತುಟಿಗಳು, ಅದರ ಇಕ್ಕೆಲದಲ್ಲಿ ಕಾಣುವ ಕೋರೆಹಲ್ಲುಗಳು, ವಿಶಾಲವಾಗಿ ತೆರೆದು ಹೊರಗೆ ಉಬ್ಬಿದಂತೆ ಕಾಣುವ ಕಣ್ಣುಗಳಿಂದಾಗಿ, ಅದಕ್ಕೆ ಭಯಾನಕ ರೂಪ ಬಂದಿದೆ. ಸಾಧಾರಣವಾಗಿ ಭೈರವನು ನಗ್ನರೂಪಿ. ಇಲ್ಲಿನ ವಿಗ್ರಹದ ಸೊಂಟಕ್ಕೆ ಗಜಚರ್ಮದ ಉಡುಗೆಯಿದೆ. ಕಾಲುಗಳನ್ನು ಅಗಲಿಸಿ ನಿಂತಿರುವುದರಿಂದ, ಗಜಚರ್ಮದ ನೆರಿಗೆಗಳು ಕಾಲುಗಳ ಮಧ್ಯದಲ್ಲಿ ನೇತಾಡುತ್ತಿವೆ. ತಲೆಯ ಎಡ-ಬಲ ಭಾಗಗಳಿಂದ ಅಗ್ನಿಜ್ವಾಲೆಯು ಮೇಲೇರುತ್ತಿರುವಂತೆ ಚಿತ್ರಿಸಲಾಗಿದೆ. ವಿಗ್ರಹದ ಎರಡು ಪಾರ್ಶ್ವಗಳಲ್ಲಿ, ಕೆಳಗೆ ಬಲಭಾಗದಲ್ಲಿ ೫ ಮತ್ತು ಎಡಭಾಗದಲ್ಲಿ ೨, ಹೀಗೆ ಒಟ್ಟು ಏಳು ವಿಗ್ರಹಗಳನ್ನು ಕಂಡರಿಸಲಾಗಿದೆ. ಇವನ್ನು ಸಪ್ತಮಾತೃಕೆಯರು ಎಂದು ಗ್ರಹಿಸಬಹುದು. ಇವುಗಳ ತಲೆಯ ಮೇಲೆ ಕರಂಡ ಮುಕುಟಗಳಿದ್ದು, ಅವು ಎರಡು ಕೈಗಳನ್ನು ಮಾತ್ರ ಹೊಂದಿವೆ. ಆಭರಣಗಳು ಮತ್ತು ಒಟ್ಟು ಸಂರಚನೆಯು ಒರಟಾಗಿದ್ದು, ಅಪೂರ್ಣವಾಗಿರುವ ಶಿಲ್ಪದಂತೆ ಭಾಸವಾಗುತ್ತವೆ.  ಈ ಭೈರವನನ್ನು ಕಡೆದ ನಂತರ ಉಳಿದ ಶಿಲಾಭಾಗದಲ್ಲಿ ಏನಾದರೂ ಚಿತ್ರಗಳನ್ನು ರಚಿಸಬೇಕೆಂದು ಶಿಲ್ಪಿಯು ಭಾವಿಸಿರಬಹುದು. ಭೈರವನ ಮೂರ್ತಿಗೆ ನೀಡಿರುವಷ್ಟು ಗಮನ ಇವಕ್ಕೆ ಸಂದಿಲ್ಲವಾದ್ದರಿಂದ ಅವು ಅಪೂರ್ಣಶಿಲ್ಪಗಳಂತೆ ಕಾಣುತ್ತವೆ.

ಭೈರವನು ಕಾಪಾಲಿಕರ ದೇವರು.  ಆತನ ಉಗ್ರರೂಪದಿಂದಾಗಿ ಇತರೆಲ್ಲ ದೇವತೆಗಳಿಗೆ ಅಧಿದೇವತೆಯಾಗಿದ್ದನೆಂದು ಕಾಪಾಲಿಕರು ನಂಬುವರು. ಪ್ರತಿಮಾ ಶಾಸ್ತ್ರದ ಅನ್ವಯ ಭೈರವನನ್ನು ಶಿವನ ಅವತಾರಗಳ ಮಧ್ಯಕಾಲೀನ ಸ್ವರೂಪವೆಂದು ತಿಳಿಯಬಹುದು. ಇದನ್ನು ವಟುಕ ಭೈರವನ ರೂಪದಲ್ಲಿ ಹೆಚ್ಚು ಕಡೆಯಲಾಗಿದೆ. ಪ್ರಸ್ತುತ ಎಂಟು ಕೈಗಳಿರುವ ಪಾಟಣಗಢದ ಈ ವಿಗ್ರಹವು ಸಂಹಾರಮೂರ್ತಿಯೆಂಬ ವರ್ಗಕ್ಕೆ ಸೇರಿದ್ದು, ಇದು ತಾಮಸಿಕ ಗುಣಯುಕ್ತ ಪೂಜಾದಿಗಳಲ್ಲಿ ಬಳಕೆಯಾಗುತ್ತಿತ್ತು. ಈತನು ಬ್ರಹ್ಮಾಂಡದ ಲಯ ಮತ್ತು ಪುನರುತ್ಪತ್ತಿಗೆ ಕಾರಣವಾಗಬಲ್ಲ ತಾಂಡವಶಿವ ಶಿಲ್ಪಶೈಲಿಗೆ ಸೇರಿದವನು.ವಟುಕ ಭೈರವನನ್ನು ಪಿಂಗಳ ನಿಘಂಟು ಕ್ಷೇತ್ರಪಾಲನೆಂದು ಹೆಸರಿಸಿ, ಈತನು ಈಶಾನ್ಯದ ಅಧಿದೇವತೆಯೆಂದು ಕರೆಯಲಾಗಿದೆ. ಶಿವನ ಪೂರ್ಣರೂಪವೇ ಭೈರವನೆಂದು ಶಿವಪುರಾಣದಲ್ಲಿ ಉಲ್ಲೇಖಿತವಾಗಿದೆ.

ಒರಿಸ್ಸಾದ ಪಾಟಣಗಢ ಪ್ರದೇಶಕ್ಕೆ ಇದ್ದ ಪುರಾತನ ಹೆಸರು ದಕ್ಷಿಣ ಕೋಸಲ. ಈ ಭಾಗದಲ್ಲಿ ಪಾಶುಪತ ಶೈವಪಂಥವು ತುಂಬ ಜನಪ್ರಿಯವಾಗಿತ್ತು. ಈ ಪಂಥದ ಉಪಶಾಖೆಯಾದ ಕಾಪಾಲಿಕ ಶೈವಪಂಥವು ಅವರ ಪ್ರಭಾವದಿಂದಾಗಿ ಬೈರವ ಹಾಗೂ ಸಪ್ತಮಾತೃಕೆಯರ ದೇವಾಲಯಗಳನ್ನು ಪ್ರಚುರಪಡಿಸಲು ಕಾರಣವಾಯಿತು. ಈ ಮಾತಿಗೆ ಪೂರಕವಾಗಿ ಭೈರವ ವಿಗ್ರಹ ದೊರೆತ ಅನತಿ ದೂರದಲ್ಲಿರುವ ಇಲ್ಲಿನ ಸೋಮೇಶ್ವರ ಅಥವಾ ಕೋಸಲೇಶ್ವರ ದೇವಾಲಯದ ಸ್ತಂಭಗಳಲ್ಲಿ ಶಿವನ ಹಾಗೂ ಶೈವಾಚಾರ್ಯರ ಅನೇಕ ಶಿಲ್ಪಗಳನ್ನು ಕಾಣಬಹುದು.

ನಾವು ಪ್ರಸ್ತಾಪಿಸಿರುವ ವಿಗ್ರಹದ ಕಾಲವು ಸರಿಸುಮಾರು ೧೨ನೇ ಶತಮಾನದ ಆಸುಪಾಸಿಗೆ ಸೇರುತ್ತದೆ.ಇದು ಸೋಮೇಶ್ವರ ದೇವಾಲಯದ ನಿರ್ಮಾಣದ ನಂತರವೇ ಸ್ಥಾಪನೆಯಾಗಿರಬೇಕು. ಏಕೆಂದರೆ ಈ ಭೈರವನನ್ನು ಇಲ್ಲಿದ್ದ ನಗರದ ಈಶಾನ್ಯದಿಕ್ಕಿನಲ್ಲಿ ಈ ಕ್ಷೇತ್ರದ ರಕ್ಷಕನೆಂದು ಸ್ಥಾಪಿಸಿರಬಹುದು. ಮುಂದೆ ಬೌದ್ಧರ ಸಹಜಯಾನ ಹಾಗೂ ಪಿಂಡ ಬ್ರಹ್ಮಾಂಡ ಸಿದ್ಧಾಂತವನ್ನು ಮಂಡಿಸಿದ ನಾಥಪಂಥದ ಪ್ರಭಾವಕ್ಕೆ ಒಳಗಾಗಿ, ಈ ಭೈರವ ಮಂದಿರವು ತಾಂತ್ರಿಕ ಸಾಧಕರ ಕೇಂದ್ರವಾಯಿತು. ಕ್ರಿ.ಶ. ೧೬ನೇ ಶತಮಾನದ ವೇಳೆಗೆ, ಪಾಟಣದಂಡಪಂಥದ ಕೇಂದ್ರಸ್ಥಾನವಾದ ಪಾಟಣಗಢವು ತಂತ್ರಸಾಧಕರ ಮುಖ್ಯಕೇಂದ್ರವಾಗಿ ಬೆಳೆದು ಕುಮಾರಿ ಪಾಟಣವೆಂದು ಹೆಸರುವಾಸಿಯಾಯಿತು.
* * * * * * *

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ